ಬೆಂಗಳೂರು; ಕೈಗಾರಿಕೆ ಮತ್ತು ಕಾರ್ಪೋರೇಟ್ ಕಂಪನಿಗಳ ಸಿಎಎಸ್ ಆರ್ ನಿಧಿಗಳ ವೆಚ್ಚದ ಬಗ್ಗೆ ನಿಯಂತ್ರಿಸಲು ಇಲಾಖೆಯ ಅಧಿಕಾರಿಗಳಿಗೆ ಯಾವುದೇ ಶಾಸನಬದ್ಧ ಅಧಿಕಾರವೇ ಇಲ್ಲ.
ಹೀಗೆಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ ಅವರು ವಿಧಾನ ಪರಿಷತ್ತಿನಲ್ಲಿ ಉತ್ತರಿಸಿರುವುದು ಇದೀಗ ಬಹಿರಂಗವಾಗಿದೆ.
ರಾಜ್ಯದಲ್ಲಿ ಲಭ್ಯವಿರು 10 ಸಾವಿರಕೋಟಿ ಸಿಎಸ್‌ಆರ್ ನಿಧಿಉ ಪ್ರತಿಯೊಂದು ಪೈಸೆಯು ಗ್ರಾಮೀಣ ಭಾಗದ ಪ್ರಾಥಮಿಕ ಶಿಕ್ಷಣಕ್ಕೆ ವಿನಿಯೋಗವಾಗಬೇಕು ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಈಚೆಗಷ್ಟೇ ತಾಕೀತು ಮಾಡಿದ್ದರು. ಅಲ್ಲದೇ ಗ್ರಾಮೀಣ ಸರ್ಕಾರಿ ಶಾಲೆಗಳಿಗೆ ಮೂಲಸೌಲಭ್ಯ ಕಲ್ಪಿಸಲು ಸರ್ಕಾರವು ಸಿಎಸ್‌ಆರ್ ಹೊಸ ನೀತಿಯನ್ನು ಜಾರಿಗೊಳಿಸಿದೆ ಎಂದು ಖುದ್ದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಹೇಳಿಕೆ ನೀಡಿದ್ದರು. ಈ ಹೇಳಿಕೆ ಬೆನ್ನಲ್ಲೇ ಬೃಹತ್ ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ್ ಅವರು ವಿಧಾನ ಪರಿಷತ್ತಿನಲ್ಲಿ ನೀಡಿದ್ದ ಉತ್ತರವು ಮುನ್ನೆಲೆಗೆ ಬಂದಿದೆ.
ಕರ್ನಾಟಕದಲ್ಲಿ ಕಾರ್ಯಾಚರಿಸುತ್ತಿರುವ ಕೈಗಾರಿಕೆಗಳು ಮತ್ತು ಕಾರ್ಪೋರೇಟ್ ಕಂಪನಿಗಳು ತಮ್ಮ ಲಾಭಾಂಶದಲ್ಲಿ ಸಿಎಸ್‌ಆರ್ ನಿಧಿಯನ್ನು ರಾಜ್ಯದ ಮೂಲಭೂತ ಸೌಕರ್ಯಗಳಿಗೆ ಮಾತ್ರ ವಿನಿಯೋಗಿಸುವ ನಿಟ್ಟಿನಲ್ಲಿ ಕಾನೂನು ನಿಯಮಾವಳಿ ರಚಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು ಅವರು ನಿಯಮ 330ರ ಅಡಿಯಲ್ಲಿ ಸೂಚನೆ ಮಂಡಿಸಿದ್ದರು.

ಈ ಸೂಚನೆಗೆ ಉತ್ತರಿಸಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ ಅವರು ‘ಕಂಪನಿಗಳ ಸಿಎಸ್‌ಆರ್ ನಿಧಿಗಳ ವೆಚ್ಚದ ಬಗ್ಗೆ ನಿಯಂತ್ರಿಸಲು ಇಲಾಖೆಯ ಅಧಿಕಾರಿಗಳಿಗೆ ಯಾವುದೇ ಶಾಸನಬದ್ಧ ಅಧಿಕಾರ ಇರುವುದಿಲ್ಲ,’ ಎಂದು ಉತ್ತರಿಸಿದ್ದಾರೆ.

ಅಲ್ಲದೇ ಭಾರತ ಸರ್ಕಾರದ ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯವು ಸಿಎಸ್‌ಆರ್ ಜಾರಿಗೆ ಸಂಬಂಧಿಸಿದಂತೆ ನಿಯಂತ್ರಣಾತ್ಮಕ ಪಾತ್ರ ಹೊಂದಿದೆ. ಕಂಪನಿಗಳು ಸಿಎಸ್‌ಆರ್ ಪಾಲನೆ ಬಗ್ಗೆ ವರದಿಯನ್ನು ಎಂಸಿಎ 221 ಪೋರ್ಟಲ್‌ನಲ್ಲಿ ಸಲ್ಲಿಸಬೇಕು. ಇದನ್ನು ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯವು ಮೇಲ್ವಿಚಾರಣೆ ಮಾಡುತ್ತದೆ ಎಂದು ಉತ್ತರದಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಭಾರತದಲ್ಲಿ ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆಯನ್ನು ಕಂಪನಿಗಳ ಕಾಯ್ದೆ 2013ರ ಸೆಕ್ಷನ್ 135ನ್ನು ಎಂ ಬಿ ಪಾಟೀಲ್ ಅವರು ತಮ್ಮ ಉತ್ತರದಲ್ಲಿ ಉಲ್ಲೇಖಿಸಿದ್ದಾರೆ. 500 ಕೋಟಿ ಅಥವಾ ಹೆಚ್ಚಿನ ನಿವ್ವಳ ಮೌಲ್ಯ ಅಥವಾ 1,000 ಕೋಟಿ ಅಥವಾ ಹೆಚ್ಚಿನ ವಹಿವಾಟು ಅಥವಾ 5 ಕೋಟಿ ಅಥವಾ ಹೆಚ್ಚಿನ ನಿವ್ವಳ ಲಾಭ ಹೊಂದಿರುವ ಕಂಪನಿಗಳಿಗೆ ಈ ನಿಯಮ ಅನ್ವಯವಾಗುತ್ತದೆ. ಈ ಮಾನದಂಡಗಳಿಗೆ ಒಳಪಡುವ ಕಂಪನಿಗಳು ಸಿಎಸ್‌ಆರ್ ಸಮಿತಿಯನ್ನು ರಚಿಸಬೇಕು. ಮತ್ತು ಕಳೆದ ಮೂರು ಹಣಕಾಸು ವರ್ಷಗಳ ಸರಾಸರಿ ನಿವ್ವಳ ಲಾಭದ ಕನಿಷ್ಟ ಶೇ.2ನ್ನು ಶೆಡ್ಯೂಲ್ VII ರಲ್ಲಿ ಸೂಚಿಸಲಾದ ಸಿಎಸ್‌ಆರ್ ಚಟುವಟಿಕೆಗಳಿಗಾಗಿ ವೆಚ್ಚ ಮಾಡಬೇಕಾಗುತ್ತದೆ ಎಂದು ವಿವರಿಸಿದ್ದಾರೆ.
ಕರ್ನಾಟಕವು ಕೈಗಾರಿಕೆಗಳಿಂದ ಮತ್ತು ಕಾರ್ಪೋರೇಟ್ ಕಂಪನಿಗಳಿಂದ ಸಿಎಸ್‌ಆರ್ ನಿಧಿ ಪಡೆಯುವಲ್ಲಿ ದೇಶದಲ್ಲೇ ಮೂರನೇ ಸ್ಥಾನದಲ್ಲಿದೆ. ಆದರೆ ಕರ್ನಾಟಕದಲ್ಲಿ ಕೈಗಾರಿಕೆಗಳನ್ನು ನಡೆಸುವ ಕಂಪನಿಗಳು ಬಹುತೇಕ ಸಿಎಸ್‌ಆರ್ ನಿಧಿಯನ್ನು ರಾಜ್ಯದ ಮೂಲಸೌಕರ್ಯಕ್ಕೆ ವಿನಿಯೋಗಿಸುವ ಬದಲು ತಮ್ಮದೇ ಖಾಸಗಿ ಟ್ರಸ್ಟ್‌ಗಳಿಗೆ, ಸಂಸ್ಥೆಗಳಿಗೆ ಬಳಕೆ ಮಾಡಿಕೊಳ್ಳುತ್ತಿವೆ. ಅಲ್ಲದೇ ಹಲವಾರು ಸಂದರ್ಭಗಳಲ್ಲಿ ರಾಜ್ಯದಲ್ಲಿ ಲಾಭ ಪಡೆದು ತಮ್ಮ ಉದ್ಯಮದ ಸಿಎಸ್‌ಆರ್ ನಿಧಿಯನ್ನು ಬೇರೆ ರಾಜ್ಯಗಳಲ್ಲಿ ವಿನಿಯೋಗಿಸುತ್ತಿವೆ ಎಂದು ರಮೇಶ್ ಬಾಬು ಅವರು ನಿಯಮ 330 ರಡಿ ನೀಡಿದ್ದ ಸೂಚನೆಯಲ್ಲಿ ವಿವರಿಸಿದ್ದರು.
ಅಲ್ಲದೇ 2023-24ರಲ್ಲಿ ದೇಸದಲ್ಲಿ ಒಟ್ಟು 27,188 ಕೊಟಿ ರುಪಾಯಿಗಳಷ್ಟು ಸಿಎಸ್‌ಆರ್ ನಿಧಿ ಸಂಗ್ರಹವಾಗಿದೆ. ಅದರಲ್ಲಿ ಕರ್ನಾಟಕದಲ್ಲಿ 2,255 ಕೊಟಿ ರುಪಾಯಿಗಳನ್ನು ಮಾತ್ರ ರಾಜ್ಯದ ಮೂಲಭೂತ ಸೌಕರ್ಯಗಳಿಗೆ ವಿನಿಯೋಗಿಸಿದೆ. ಹಣಕಾಸು ವರ್ಷದಲ್ಲಿ ಸತತವಾಗಿ ಮೂರು ವರ್ಷಗಳ ನಿವ್ವಳ ಲಾಭ ಮಾಡಿದ ಕಂಪನಿಗಳು ತಮ್ಮ ಲಾಭಾಂಶದ ಶೇ.2ರಷ್ಟನ್ನು ಸಿಎಸ್‌ಆರ್ ಚಟುವಟಿಕೆಗಳಿಗೆ ನೀಡಬೇಕಾಗಿದೆ.
ಸಿಎಸ್‌ಆರ್ ನಿಧಿಯನ್ನು ಕೆಲವರು ಸಮರ್ಪಕವಾಗಿ ಬಳಸುತ್ತಿದ್ದಾರೆ. ಆದರೆ ಶೇ.50ರಷ್ಟು ಉದ್ಯಮಿಗಳು ಸಿಎಸ್‌ಆರ್ ನಿಧಿ ದುರುಪಯೋಗ ಮಾಡುತ್ತಿದ್ದಾರೆ. ಹೀಗಾಗಿ ಪ್ರತ್ಯೇಕ ಅಧಿಕಾರಿಗಳ ತಂಡ ನೇಮಿಸಿ ನಿಧಿಯನ್ನುಎಲ್ಲೆಲ್ಲಿ ಬಳಸಲಾಗುತ್ತಿದೆಎಂದು ಪರಿಶೀಲನೆ ಮಾಡಲಾಗುವುದು. ಗ್ರಾಮೀಣ ಭಾಗದ ಮಕ್ಕಳಿಗೆ ನಗರ ಪ್ರದೇಶದಂತೆ ಗುಣಮಟ್ಟದ ಶಿಕ್ಷಣ ಸಿಗಬೇಕು.ಹೀಗಾಗಿ ನಾವು ನೀತಿ ರೂಪಿಸುತ್ತಿದ್ದೇವೆ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಈಚೆಗಷ್ಟೇ ಹೇಳಿಕೆ ನೀಡಿದ್ದರು.
ಅದೇ ರೀತಿ ಎಲ್ಲರೂ ಸಿಎಸ್‌ಆರ್ ನಿಧಿಯನ್ನು ಪ್ರಾಥಮಿಕ ಶಿಕ್ಷಣಕ್ಕೆ ವಿನಿಯೋಗಿಸಬೇಕು. ಸಿಎಸ್‌ಆರ್ ನಿಧಿಯಲ್ಲಿ ಶಾಲೆಗಳನ್ನು ಗ್ರಾಮೀಣ ಭಾಗದಲ್ಲಿ ನಿರ್ಮಾಣ ಮಾಡಬೇಕು. ನಮ್ಮ ಸರ್ಕಾರ ರಾಜ್ಯದಲ್ಲಿ 2 ಸಾವಿರ ಜಾಗಗಳನ್ನು ಗುರುತಿಸಿದೆ. ,ಪ್ರತಿ ಕಾರ್ಪೊರೇಟ್ ಸಂಸ್ಥೆಯು ಈ ಜಾಗಗಳಲ್ಲಿ ಅತ್ಯುತ್ತಮ ಮೂಲ ಸೌಕರ್ಯವಿರುವ ಶಾಲೆಗಳನ್ನುನಿರ್ಮಾಣ ಮಾಡಬೇಕು ಎಂದು ತಾಕೀತು ಮಾಡಿದ್ದರು.
ಭಾರತದಲ್ಲಿ ಕಳೆದ 5 ಹಣಕಾಸು ವರ್ಷಗಳಲ್ಲಿ (FY 2020-21 ರಿಂದ FY 2024-25) ಒಟ್ಟು ₹ 1,60,000 ಕೋಟಿಗೂ ಹೆಚ್ಚು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ನಿಧಿಯನ್ನು ಕಂಪನಿಗಳು ವ್ಯಯಿಸಿವೆ. ಭಾರತ ಸರ್ಕಾರದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ (MCA) ಮತ್ತು ವಿವಿಧ ಸಿಎಸ್‌ಆರ್ ವರದಿಗಳ ಪ್ರಕಾರ, ಇತ್ತೀಚಿನ ವರ್ಷಗಳಲ್ಲಿ ಸಿಎಸ್‌ಆರ್ ನಿಧಿ ಸಂಗ್ರಹಣೆ ಮತ್ತು ಖರ್ಚು ದಾಖಲೆ ಮಟ್ಟದಲ್ಲಿ ಹೆಚ್ಚಾಗಿದೆ ಎಂದು ಗೊತ್ತಾಗಿದೆ.
2020-21 ರಲ್ಲಿ ₹26,210.95 ಕೋಟಿ, 2021-22ರಲ್ಲಿ ₹ 27,141.45 ಕೋಟಿ. 2022-23ರಲ್ಲಿ ₹30,932.08 ಕೋಟಿ, 2023-24ರಲ್ಲಿ ₹34,908.75 ಕೋಟಿ, 2024-25ರಲ್ಲಿ ₹40,794.00 ಕೋಟಿ (ದಾಖಲೆ ವೆಚ್ಚ) ಒಟ್ಟು ₹1,59,987 ಕೋಟಿ ರು ನಷ್ಟು ಸಂಗ್ರಹವಾಗಿತ್ತು.
ಭಾರತದಲ್ಲಿ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ (CSR) ಅಡಿಯಲ್ಲಿ ಸಂಗ್ರಹವಾಗಿರುವ ಮತ್ತು ಖರ್ಚು ಮಾಡಲಾದ ಒಟ್ಟು ನಿಧಿಯ ಮೊತ್ತವು ಇತ್ತೀಚಿನ ವರ್ಷಗಳಲ್ಲಿ ಸಾರ್ವಕಾಲಿಕ ದಾಖಲೆಯನ್ನು ಬರೆದಿದೆ. ಇತ್ತೀಚಿನ ವರದಿಗಳ ಪ್ರಕಾರ, 2024-25ರ ಹಣಕಾಸು ವರ್ಷದಲ್ಲಿ ಭಾರತದ ಒಟ್ಟು ಸಿಎಸ್‌ಆರ್ ವೆಚ್ಚವು ₹40,794 ಕೋಟಿ ರೂಪಾಯಿಗಳಿಗೆ ತಲುಪಿದೆ.
ಕಳೆದ ಒಂದು ದಶಕದಲ್ಲಿ (ಕಂಪನಿಗಳ ಕಾಯ್ದೆ 2013 ಜಾರಿಗೆ ಬಂದಾಗಿನಿಂದ) ಭಾರತೀಯ ಕಂಪನಿಗಳು ಒಟ್ಟಾರೆಯಾಗಿ ₹2.61 ಲಕ್ಷ ಕೋಟಿಗೂ ಹೆಚ್ಚು ಮೊತ್ತವನ್ನು ಸಿಎಸ್‌ಆರ್ ನಿಧಿಯ ಮೂಲಕ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಯೋಜನೆಗಳಿಗೆ ವಿನಿಯೋಗಿಸಿವೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಸಿಎಸ್‌ಆರ್ ನಿಧಿ ಬಳಕೆಯಲ್ಲಿ ಶೇ. 17 ರಷ್ಟು ಹೆಚ್ಚಳ ದಾಖಲಾಗಿರುವುದು ತಿಳಿದು ಬಂದಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (₹1,309 ಕೋಟಿ) ಅತಿ ಹೆಚ್ಚು ಸಿಎಸ್‌ಆರ್ ವೆಚ್ಚ ಮಾಡಿದ ಕಂಪನಿಯಾಗಿದೆ. ನಂತರದ ಸ್ಥಾನಗಳಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ (₹1,039 ಕೋಟಿ) ಮತ್ತು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಇವೆ. ಸಂಗ್ರಹವಾದ ನಿಧಿಯಲ್ಲಿ ಶೇ. 98 ರಷ್ಟು ಭಾಗವನ್ನು (₹39,851 ಕೋಟಿ) ಕಂಪನಿಗಳು ನೇರವಾಗಿ ಸಾಮಾಜಿಕ ಯೋಜನೆಗಳಿಗೆ ಬಳಸಿದ್ದು, ಕೇವಲ ಶೇ. 2 ರಷ್ಟು ಹಣವನ್ನು ಮಾತ್ರ ಸರ್ಕಾರಿ ನಿಧಿಗಳಿಗೆ ವರ್ಗಾಯಿಸಿವೆ ಎಂದು ಗೊತ್ತಾಗಿದೆ.
ಭಾರತದಲ್ಲೇ ಅತಿ ಹೆಚ್ಚು ಸಿಎಸ್‌ಆರ್ ನಿಧಿ ಪಡೆದ ರಾಜ್ಯವಾಗಿ ಮಹಾರಾಷ್ಟ್ರ (₹8,631 ಕೋಟಿ) ಮೊದಲ ಸ್ಥಾನದಲ್ಲಿದೆ. ಗುಜರಾತ್, ಕರ್ನಾಟಕ (ಸುಮಾರು ₹2,254 ಕೋಟಿಗೂ ಹೆಚ್ಚು), ದೆಹಲಿ ಮತ್ತು ತಮಿಳುನಾಡು ನಂತರದ ಸ್ಥಾನಗಳಲ್ಲಿವೆ. (ಕರ್ನಾಟಕದಲ್ಲಿ ಪ್ರಸ್ತುತ ಸುಮಾರು ₹10,000 ಕೋಟಿಯಷ್ಟು ಒಟ್ಟು ಸಿಎಸ್‌ಆರ್ ನಿಧಿ ಲಭ್ಯತೆಯಿದ್ದು, ಇದನ್ನು ಪ್ರಾಥಮಿಕ ಶಿಕ್ಷಣದ ಅಭಿವೃದ್ಧಿಗೆ ಬಳಸಲು ರಾಜ್ಯ ಸರ್ಕಾರ ಆದ್ಯತೆ ನೀಡುತ್ತಿದೆ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಆರೋಗ್ಯ ರಕ್ಷಣೆ ಮತ್ತು ನೈರ್ಮಲ್ಯೀಕರಣ ಯೋಜನೆಗಳಿಗೆ ಬಳಸಲಾಗುತ್ತಿದೆ. ಸಿಎಸ್‌ಆರ್ ನಿಧಿಯ ಹೆಚ್ಚಿನ ಪಾಲು ಮಹಾರಾಷ್ಟ್ರ, ಗುಜರಾತ್ ಮತ್ತು ಕರ್ನಾಟಕದಂತಹ ಕೈಗಾರಿಕಾ ಪ್ರಗತಿ ಹೊಂದಿದ ರಾಜ್ಯಗಳಿಗೆ ಲಭಿಸುತ್ತಿದೆ.




