Tuesday | October 13, 2026 |

21 ಪ್ಯಾಕೇಜ್‌ ಟೆಂಡರ್; ಶೇ. 5 ಪ್ರೀಮಿಯಂ ಮೀರಿದ್ದರೂ ಪರಿಶೀಲನೆ ಸಮಿತಿ ರಚಿಸಲು ಆಕ್ಷೇಪ ಎತ್ತಿದ್ದ ಡಿಕೆಶಿ

ಬೆಂಗಳೂರು;  ಜಿಬಿಎ ವ್ಯಾಪ್ತಿಯಲ್ಲಿ  ಉತ್ಪತ್ತಿಯಾಗುವ ಹಸಿ ತ್ಯಾಜ್ಯ, ಒಣ ತ್ಯಾಜ್ಯ, ನೈರ್ಮಲ್ಯ ತ್ಯಾಜ್ಯ, ರಸ್ತೆ ಗುಡಿಸುವಿಕೆ ತ್ಯಾಜ್ಯ ಸಂಗ್ರಹಣೆ, ಪ್ರಾಥಮಿಕ, ದ್ವಿತೀಯ ಹಂತದ ಸಾಗಾಣಿಕೆಗೆ ಸಂಬಂಧಿಸಿದಂತೆ ಈ ಹಿಂದೆ ಕರೆದಿದ್ದ ಟೆಂಡರ್‍‌ಗೆ ಆರ್ಥಿಕ ಇಲಾಖೆಯ ಅಭಿಪ್ರಾಯವನ್ನೇ ಪಡೆದಿರಲಿಲ್ಲ. ಅಷ್ಟೇ ಏಕೆ ಈ ಸಂಬಂದ ಸಚಿವ ಸಂಪುಟದ ಅನುಮೋದನೆಯನ್ನೂ ಪಡೆದಿರಲಿಲ್ಲ. 4,791.95 ಕೋಟಿ ರು ಮೊತ್ತವನ್ನು ಯಾವ ಆಧಾರದ ಮೇಲೆ ನಿರ್ಧರಿಸಲಾಗಿದೆ ಎಂಬ ಅಂಶವನ್ನೂ ಆರ್ಥಿಕ ಇಲಾಖೆಗೆ ತಿಳಿಸಿರಲಿಲ್ಲ ಎಂಬ ಸಂಗತಿಯು ಇದೀಗ ಬಹಿರಂಗವಾಗಿದೆ.

ಶೇ. 14ಕ್ಕಿಂತ ಹೆಚ್ಚಿನ ಟೆಂಡರ್ ಪ್ರೀಮಿಯಂ ಕುರಿತು ಎದ್ದಿದ್ದ  ಪ್ರಶ್ನೆಗಳ  ಕುರಿತು  ಸಮಿತಿಯನ್ನು ರಚಿಸಬಾರದು,  21 ಪ್ಯಾಕೇಜ್‌ಗಳಿಗೆ ಪರಿಷ್ಕೃತ ಅಂದಾಜು ಮೊತ್ತದ ಆಡಳಿತಾತ್ಮಕ ಅನುಮೋದನೆ ಮತ್ತು ಶೇ. 5ಕ್ಕಿಂತ ಹೆಚ್ಚಿನ ಟೆಂಡರ್ ಪ್ರೀಮಿಯಂ ಮಂಜೂರಾತಿ ನೀಡಬೇಕು ಎಂದು ಅಂದು ಉಪ ಮುಖ್ಯಮಂತ್ರಿಯಾಗಿದ್ದ ಡಿ ಕೆ ಶಿವಕುಮಾರ್ ಅವರೇ ಅಧಿಕಾರಿಗಳ ಸಭೆಯಲ್ಲಿ ಹೇಳಿರುವುದು ಸಹ ಬಯಲಾಗಿದೆ.

ಘನ ತ್ಯಾಜ್ಯ ಸಂಗ್ರಹಣೆ ಮತ್ತು ಸಾಗಾಣಿಕೆಗೆ ಸಂಬಂಧಿಸಿದಂತೆ 4,791.95 ಕೋಟಿ ರು ಮೊತ್ತದ ಟೆಂಡರ್‍‌ ಪ್ರಕ್ರಿಯೆಯಲ್ಲಿ ಹಲವು ಅಕ್ರಮ, ಭ್ರಷ್ಟಾಚಾರ ನಡೆದಿದೆ ಎಂದು ಗುರುತರವಾದ ಆರೋಪ ಕೇಳಿ ಬಂದಿದ್ದವು. ಈ ಆರೋಪಗಳನ್ನು ಪರಿಶೀಲಿಸಲು ಸರ್ಕಾರದ ಹಿರಿಯ ಐಎಎಸ್‌ ಅಧಿಕಾರಿ  ಅಂಜುಂ ಪರ್ವೇಜ್‌ ಅವರ ನೇತೃತ್ವದಲ್ಲಿ ರಚಿಸಿದ್ದ ಸಮಿತಿಯೂ ಸಹ ವರದಿಯನ್ನೂ ನೀಡಿದೆ. ಈ ವರದಿಯಲ್ಲಿನ ಅಂಶಗಳ ಕುರಿತು ಸರ್ಕಾರವು ಇನ್ನೂ ಪರಿಶೀಲನೆಯನ್ನು ನಡೆಸುತ್ತಿದೆ.

ಈ ಬೆಳವಣಿಗೆ ನಡುವೆಯೇ ಕಸ ಸಂಗ್ರಹಣೆ ಮತ್ತು ಸಾಗಾಣಿಕೆಗೆ ಸಂಬಂಧಿಸಿದಂತೆ ಈ ಹಿಂದಿನ ಟೆಂಡರ್‍‌ಗಳಿಗೆ ಆರ್ಥಿಕ ಇಲಾಖೆಯ ಅಭಿಪ್ರಾಯವನ್ನೇ ಪಡೆದಿರಲಿಲ್ಲ. ಮತ್ತು  ಹಿರಿಯ ಅಧಿಕಾರಿಗಳ ಸಮಿತಿ ರಚಿಸಬಾರದು ಎಂದು ಡಿ ಕೆ ಶಿವಕುಮಾರ್ ಅವರು ಉಪ ಮುಖ್ಯಮಂತ್ರಿಯಾಗಿದ್ದಾಗಲೇ ವ್ಯಕ್ತಪಡಿಸಿದ್ದ ಅಭಿಪ್ರಾಯವೂ  ಮುನ್ನೆಲೆಗೆ ಬಂದಿದೆ.

ಸಿ ತ್ಯಾಜ್ಯ, ಒಣ ತ್ಯಾಜ್ಯ, ನೈರ್ಮಲ್ಯ ತ್ಯಾಜ್ಯ, ರಸ್ತೆ ಗುಡಿಸುವಿಕೆ ತ್ಯಾಜ್ಯ ಸಂಗ್ರಹಣೆ, ಪ್ರಾಥಮಿಕ, ದ್ವಿತೀಯ ಹಂತದ ಸಾಗಾಣಿಕೆಗೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಗುತ್ತಿಗೆದಾರ ಬಾಲಸುಬ್ರಮಣಿಯಂ ಎಂಬುವರು ಆರ್ಥಿಕ ಇಲಾಖೆಯಿಂದ ಆರ್‍‌ಟಿಐ ಮೂಲಕ 776 ಪುಟಗಳ ಸಮಗ್ರ ಕಡತವನ್ನು ಪಡೆದುಕೊಂಡಿದ್ದಾರೆ.

 

 

ಈ ಸಮಗ್ರ ಕಡತವು ದಿ ಫೈಲ್‌ ಗೆ ಲಭ್ಯವಾಗಿದೆ.

ಬೆಂಗಳೂರು ನಗರದ ಹಿತದೃಷ್ಟಿಯಿಂದ ಬೃಹತ್‌ ಬೆಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಹಸಿ ತ್ಯಾಜ್ಯ, ಒಣ ತ್ಯಾಜ್ಯ, ನೈರ್ಮಲ್ಯ ತ್ಯಾಜ್ಯ, ರಸ್ತೆ ಗುಡಿಸುವಿಕೆ ತ್ಯಾಜ್ಯ ಸಂಗ್ರಹಣೆ, ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಾಗಾಣಿಕೆ ಸೇವೆಯನ್ನು ಸಮರ್ಪಕವಾಗಿ ನಿರ್ವಹಿಸಲು ಮರು ಟೆಂಡರ್ ಆಹ್ವಾನಿಸಲು ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಕೆಯಾಗಿತ್ತು. ಈ ಪ್ರಸ್ತಾವನೆಗೆ ಅಗತ್ಯವಿರುವ ಅನುದಾನವನ್ನು ಬಿಬಿಎಂಪಿಯು ತನ್ನ ಆಯವ್ಯಯದಲ್ಲಿ  ಹೊಂದಿಸಿಕೊಳ್ಳಲಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಯಾವುದೇ ಆರ್ಥಿಕ ಹೊರೆ ಇರುವುದಿಲ್ಲ ಎಂದು ಪ್ರಸ್ತಾವನೆಯಲ್ಲಿ ಹೇಳಿತ್ತು.

 

 

ಇದಕ್ಕೆ ಪ್ರತಿಕ್ರಿಯಿಸಿರುವ ಆರ್ಥಿಕ ಇಲಾಖೆಯು ‘ಈ ಹಿಂದೆ ಮೊದಲ ಬಾರಿಗೆ ಟೆಂಡರ್ ಕರೆಯಲಾದ ಸಂದರ್ಭದಲ್ಲಿ ಆರ್ಥಿಕ ಇಲಾಖೆಯ ಅಭಿಪ್ರಾಯವನ್ನಾಗಲಿ ಹಾಗೂ ಸಚಿವ ಸಂಪುಟದ ಅನುಮೋದನೆ ಪಡೆದಿರುವುದು ಕಂಡು ಬಂದಿರುವುದಿಲ್ಲ. ಪ್ರಸ್ತುತ ಉಚ್ಛ ನ್ಯಾಯಾಲಯದ ನಿರ್ದೇಶನ ಹಾಗೂ ಯೋಜನೆ ಮೊತ್ತ 4,791.95 ಕೋಟಿ ಬೃಹತ್ ಮೊತ್ತವಾಗಿರುವ ಕಾರಣ ಆರ್ಥಿಕ ಇಲಾಖೆ ಮತ್ತು ಸಚಿವ ಸಂಪುಟದ ಅನುಮೋದನೆಗೆ ಸಲ್ಲಿಸಿದೆ,’ ಆರ್ಥಿಕ ಇಲಾಖೆಯು ಟಿಪ್ಪಣಿಯಲ್ಲಿ ದಾಖಲಿಸಿರುವುದು ಗೊತ್ತಾಗಿದೆ.

ಮತ್ತೊಂದು ವಿಶೇಷ ಸಂಗತಿ ಎಂದರೇ ಆಡಳಿತ ಇಲಾಖೆಯಾದ ನಗರಾಭಿವೃದ್ಧಿ ಇಲಾಖೆಯ ಕಡತದಲ್ಲಿ ಇದಕ್ಕೆ ಸಂಬಂಧಿಸಿದಂತೆ ಯಾವುದೇ ಟಿಪ್ಪಣಿ ಹಾಳೆಗಳು ಲಭ್ಯವಿಲ್ಲ. ಹಾಗೂ ವಾ‍ರ್ಷಿಕ 588.54 ಕೋಟಿ ರುಪಾಯಿ ಮೊತ್ತದಂತೆ 07 ವರ್ಷಗಳಿಗೆ 4,791.95 ಕೋಟಿ ರು. ಮೊತ್ತವನ್ನು ಯಾವ ಆಧಾರದ ಮೇಲೆ ನಿರ್ಧರಿಸಲಾಗಿದೆ ಎಂಬ ಅಂಶವೂ ಸಹ ಆರ್ಥಿಕ ಇಲಾಖೆಗೂ ಲಭ್ಯವಿಲ್ಲವಾಗಿದೆ. ಹಾಗೆಯೇ ಕೇವಲ ಪ್ಯಾಕೇಜ್‌ವಾರು ಮೊತ್ತವನ್ನು ಮಾತ್ರ ಒದಗಿಸಿದೆ. ಮತ್ತು 21ನೇ  ಆಡಳಿತ ಮಂಡಳಿ ಸಭೆಗೆ ಮಂಡಿಸಲಾದ ಅಂಶಗಳಿಗೆ ಅನುಮೋದನೆ ಪಡೆದಿರುವ ಕುರಿತು ಯಾವುದೇ ಮಾಹಿತಿಯೂ ಆರ್ಥಿಕ ಇಲಾಖೆಗೆ ಲಭ್ಯವಿಲ್ಲ ಎಂದು ಆರ್ಥಿಕ ಇಲಾಖೆಯು 2025ರ ಮೇ 17ರಂದೇ ಟಿಪ್ಪಣಿಯಲ್ಲಿ ದಾಖಲಿಸಿತ್ತು.

 

 

ಅದೇ ರೀತಿ ದರ ಸಂಧಾನದ  ನಂತರ ಅಂತಿಮಗೊಳಿಸಲಾದ ಮೊತ್ತಗಳು ಆರಂಭಿಕ ಟೆಂಡರ್ ಮೊತ್ತಕ್ಕಿಂತ ಶೇ. 14ರಷ್ಟು ಹೆಚ್ಚಾಗಿವೆ ಎಂದು ಆಡಳಿತ ಇಲಾಖೆಯು ತಿಳಿಸಿದೆ. ಆದರೆ, ಹಣಕಾಸು ಇಲಾಖೆಯು ( 10-05-2022 ಮತ್ತು 30-07-2022_  ಹೊರಡಿಸಿದ್ದ ಸುತ್ತೋಲೆಗಳ ಪ್ರಕಾರ, ಟೆಂಡರ್ ಮೊತ್ತಕ್ಕಿಂತ ಶೇ. 5ಕ್ಕಿಂತ ಹೆಚ್ಚಿನ ಪ್ರೀಮಿಯಂ ಹೊಂದಿರುವ ಟೆಂಡರ್‌ಗಳನ್ನು ಸಾಮಾನ್ಯವಾಗಿ ಅಂಗೀಕರಿಸಬಾರದು. ಅಂತಹ ಟೆಂಡರ್‌ಗಳನ್ನು ಅಂಗೀಕರಿಸಬೇಕಾದರೆ, ಅದಕ್ಕೆ ಸಮರ್ಥನೀಯ ಕಾರಣಗಳನ್ನು ಲಿಖಿತವಾಗಿ ದಾಖಲಿಸಬೇಕು ಮತ್ತು ಉನ್ನತ ಪ್ರಾಧಿಕಾರದ ಅನುಮೋದನೆಯನ್ನು ಪಡೆಯಬೇಕು. ಆದರೆ, ಸುತ್ತೋಲೆಯಲ್ಲಿ ಉಲ್ಲೇಖಿಸಿರುವ ‘ಉನ್ನತ ಪ್ರಾಧಿಕಾರ’ದ ವ್ಯಾಖ್ಯಾನದ ಕುರಿತು ಸ್ಪಷ್ಟತೆ ಇಲ್ಲದ ಕಾರಣ, ಶೇ. 5ಕ್ಕಿಂತ ಹೆಚ್ಚಿನ ಟೆಂಡರ್ ಪ್ರೀಮಿಯಂ ಹೊಂದಿರುವ ಪ್ರಕರಣಗಳನ್ನು ಸಚಿವ ಸಂಪುಟದ ಅನುಮೋದನೆಗಾಗಿ ಮಂಡಿಸಲು ಉನ್ನತಾಧಿಕಾರ ಸಮಿತಿಯು ನಿರ್ಧರಿಸಿತು ಎಂದು ಟಿಪ್ಪಣಿಯಲ್ಲಿ ವಿವರಿಸಲಾಗಿದೆ.

 

 

ಅಲ್ಲದೇ ನಗರಾಭಿವೃದ್ಧಿ ಇಲಾಖೆಯು ಸಲ್ಲಿಸಿದ್ದ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿದ್ದ ಆರ್ಥಿಕ ಇಲಾಖೆಯು ಹಲವು ಮಾಹಿತಿಗಳನ್ನು ಒದಗಿಸಲು ಸೂಚಿಸಿತ್ತು.

ಬಹುತೇಕ ಎಲ್ಲಾ ಬಿಡ್‌ಗಳ ದರಗಳು ನಿಖರವಾಗಿ ಶೇ. 14ರಷ್ಟು ಹೆಚ್ಚಳದ ಮಿತಿಯಲ್ಲಿವೆ. ಇದು ಸ್ಪರ್ಧಾತ್ಮಕ ಮಾರುಕಟ್ಟೆಯ ಆಧಾರದ ಮೇಲೆ ಬೆಲೆಯನ್ನು ನಿರ್ಧರಿಸುವ ಬದಲು, ಪೂರ್ವನಿರ್ಧರಿತ ಗರಿಷ್ಠ ಮಿತಿಯನ್ನು ಆಧರಿಸಿ ದರವನ್ನು ನಿಗದಿಪಡಿಸಿರುವುದನ್ನು ಸೂಚಿಸುತ್ತದೆ. ಇದು ನೈಜ ಬೆಲೆ ಸ್ಪರ್ಧೆಯ ಕೊರತೆಯನ್ನು ತೋರಿಸುತ್ತದೆ. ಶೇ. 14ರಷ್ಟು ಹೆಚ್ಚುವರಿ ದರ ಏಕೆ ಅಗತ್ಯವಿದೆ ಎಂಬುದರ ಕುರಿತು ಆಡಳಿತ ಇಲಾಖೆಯು ಪ್ರತಿ ಅಂಶವಾರು ವಿವರವಾದ ಲೆಕ್ಕಾಚಾರವನ್ನು ಒದಗಿಸಬೇಕು. ಅಲ್ಲದೆ, ಪರಿಷ್ಕೃತ ದರಗಳೊಂದಿಗೆ ಯೋಜನೆಯನ್ನು (Call-3) ಮರುಟೆಂಡರ್ ಮಾಡುವ ಮೂಲಕ ಇನ್ನೂ ಉತ್ತಮ ದರವನ್ನು ಪಡೆಯಲು ಸಾಧ್ಯವಿದೆಯೇ ಎಂಬುದನ್ನು ಪರಿಶೀಲಿಸಲು ಮರುಟೆಂಡರ್ ಏಕೆ ಕರೆಯಲಿಲ್ಲ ಎಂಬುದನ್ನೂ ವಿವರಿಸಬೇಕು ಎಂದು ಸೂಚಿಸಿತ್ತು.

2025ರ ವೆಚ್ಚದ ಅಂದಾಜುಗಳು ಕೇವಲ ಒಂದು ವರ್ಷದೊಳಗೆ ಏಕೆ ಹಳೆಯದಾದವು ಎಂಬುದನ್ನು ವಿವರಿಸಲು ನಗರಾಭಿವೃದ್ಧಿ ಇಲಾಖೆಯು (UDD) ಯಾವುದೇ ದತ್ತಾಂಶವನ್ನು ಒದಗಿಸಿಲ್ಲ.  ಮೂಲ ವೆಚ್ಚಗಳಿಗೆ ಸಂಬಂಧಿಸಿದಂತೆ ಎರಡು ಪ್ರಮುಖ ಪ್ರಶ್ನೆಗಳನ್ನು ಎತ್ತಿತ್ತು.

2025ರ ದರಗಳ ವೇಳಾಪಟ್ಟಿಯನ್ನು (Schedule of Rates – SR) ಆರಂಭದಲ್ಲಿಯೇ ತಪ್ಪಾಗಿ ಲೆಕ್ಕಾಚಾರ ಮಾಡಲಾಗಿತ್ತೇ? ಸಾಮಾನ್ಯವಾಗಿ ಅನುಮತಿಸಲಾದ ಶೇ. 5ರ ಮಿತಿಯನ್ನು ಮೀರಿ ಶೇ. 14ಕ್ಕೆ ಹೆಚ್ಚಿಸುವುದನ್ನು ಸಮರ್ಥಿಸುವಷ್ಟು ಕಾರ್ಮಿಕರ ಅಥವಾ ಇಂಧನದ ವೆಚ್ಚಗಳು ನಿಜವಾಗಿಯೂ ಏರಿಕೆಯಾಗಿವೆಯೇ ಎಂದು ಪ್ರಶ್ನೆ ಎತ್ತಿತ್ತು.

ಅದೇ ರೀತಿ  ಶೇ. 14ರಷ್ಟು ಹೆಚ್ಚುವರಿ ದರವನ್ನು ಅಂಗೀಕರಿಸುವುದರಿಂದ ವೆಚ್ಚವನ್ನು ನಿಯಂತ್ರಣದಲ್ಲಿಡಲು ರೂಪಿಸಲಾದ ಹಣಕಾಸು ಇಲಾಖೆಯ (FD) ನಿಯಮಗಳನ್ನು ನಿರ್ಲಕ್ಷಿಸಿದಂತಾಗುತ್ತದೆ. ನಿಯಮಗಳು “ಸ್ಪಷ್ಟವಾಗಿಲ್ಲ” ಎಂಬ ಕಾರಣ ನೀಡಿ ಇದಕ್ಕೆ ಅನುಮತಿ ನೀಡಿದರೆ, ಇತರ ಇಲಾಖೆಗಳೂ ಬಜೆಟ್ ಮಿತಿಗಳನ್ನು ಉಲ್ಲಂಘಿಸಲು ಇದು ಅಪಾಯಕಾರಿ ನಿದರ್ಶನವಾಗುತ್ತದೆ ಎಂದು ಎಚ್ಚರಿಸಿತ್ತು.

 

 

ಶೇ. 14ರ ದರಕ್ಕೆ ಒಪ್ಪಿಗೆ ನೀಡುವ ಮೊದಲು, “ಉನ್ನತ ಪ್ರಾಧಿಕಾರ” ಎಂಬ ಪದದ ಅಧಿಕೃತ ವ್ಯಾಖ್ಯಾನವನ್ನು ಹಣಕಾಸು ಇಲಾಖೆಯಿಂದ ಪಡೆಯಲು ಏಕೆ ಕೋರಲಿಲ್ಲ ಎಂಬುದನ್ನು ಆಡಳಿತ ಇಲಾಖೆಯು ವಿವರಿಸಬೇಕು ಎಂದು ಸೂಚಿಸಿತ್ತು.

ದಾಸರಹಳ್ಳಿಯ ಪ್ಯಾಕೇಜ್‌ 22ಕ್ಕೆ ಸಂಬಂಧಿಸಿದಂತೆ  ಇದು ಕಡ್ಡಾಯವಾದ ಶೇ. 5ರ ಮಿತಿಗಿಂತ ಕಡಿಮೆ ಇರುವುದರಿಂದ ಈ ದರವನ್ನು ಆರ್ಥಿಕ ಇಲಾಖೆಯು ಪರಿಗಣಿಸಿತ್ತು.  ಉಳಿದ 20 ಪ್ಯಾಕೇಜ್‌ಗಳಿಗೆ ಸಂಬಂಧಿಸಿದಂತೆ, ಅನುಮತಿಸಬಹುದಾದ ಶೇ. 5ರ ಮಿತಿಗಿಂತ ಹೆಚ್ಚಿನ ದರದಲ್ಲಿ ಬಿಡ್ ಸಲ್ಲಿಸಿರುವುದಕ್ಕೆ ಸೂಕ್ತ ಕಾರಣಗಳನ್ನು ನಗರಾಭಿವೃದ್ಧಿ ಇಲಾಖೆಯು ನೀಡಿರಲಿಲ್ಲ.  ಇತ್ತೀಚಿನ ದಿನಗಳಲ್ಲಿ ಡೀಸೆಲ್ ಬೆಲೆಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲದ ಕಾರಣ, ಇಂಧನ ಬೆಲೆ ಏರಿಕೆ ಮುಂತಾದ ಕಾರಣಗಳನ್ನು ಮುಂದಿಟ್ಟು ನೀಡುವ ಸಮರ್ಥನೆಗಳು ಮಾನ್ಯವಾಗುವುದಿಲ್ಲ ಎಂದು ಆರ್ಥಿಕ ಇಲಾಖೆಯು ಅಭಿಪ್ರಾಯಿಸಿತ್ತು.

‘ಆದ್ದರಿಂದ ಈ ಬಿಡ್‌ಗಳು ಯಾವುದೇ ಸಮಂಜಸವಾದ ಸಮರ್ಥನೆ ಇಲ್ಲದೆ ಹೆಚ್ಚಿನ ದರದಲ್ಲಿ ಸಲ್ಲಿಕೆಯಾಗಿವೆ ಎಂಬುದು ಸ್ಪಷ್ಟವಾಗುತ್ತದೆ. ಹೀಗಾಗಿ, ಹಣಕಾಸು ಇಲಾಖೆಯ (FD) ಪರವಾಗಿ ಆಡಳಿತ ಇಲಾಖೆಗೆ (AD) ಟೆಂಡರ್ ಪ್ರೀಮಿಯಂ ಅನ್ನು ಶೇ. 5ಕ್ಕೆ ಮಿತಿಗೊಳಿಸುವಂತೆ ಸೂಚಿಸಬಹುದು. ಬಿಡ್‌ದಾರರು ಇದಕ್ಕೆ ಒಪ್ಪದಿದ್ದಲ್ಲಿ, ಸಂಬಂಧಿತ ಪ್ಯಾಕೇಜ್‌ಗಳಿಗೆ ಮರುಟೆಂಡರ್ ಕರೆಯಬಹುದು,’ ಎಂದು ಆರ್ಥಿಕ ಇಲಾಖೆಯ ಕಾರ್ಯದರ್ಶಿ ಎಸ್‌ ಎಸ್ ನಕುಲ್‌ ಅವರು ಅಭಿಪ್ರಾಯಿಸಿರುವುದು ಟಿಪ್ಪಣಿಯಿಂದ ಗೊತ್ತಾಗಿದೆ. ಇದೇ ಅಭಿಪ್ರಾಯವನ್ನು ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಿತೀಶ್‌ ಕುಮಾರ್ ಸಿಂಗ್‌ ಅವರು ಅನುಮೋದಿಸಿದ್ದರು.

ರಿತೀಶ್‌ ಕುಮಾರ್ ಸಿಂಗ್‌ ಟಿಪ್ಪಣಿಯಲ್ಲೇನಿದೆ?

20 ಪ್ಯಾಕೇಜ್‌ಗಳಿಗೆ ಸಂಬಂಧಿಸಿದಂತೆ, ಅನುಮತಿಸಬಹುದಾದ ಶೇ. 5ರ ಮಿತಿಗಿಂತ ಹೆಚ್ಚಿನ ದರದಲ್ಲಿ ಬಿಡ್ ಸಲ್ಲಿಸಿರುವುದಕ್ಕೆ ಸೂಕ್ತ ಕಾರಣಗಳನ್ನು ನೀಡಲಾಗಿಲ್ಲ.  ಬಿಡ್‌ಗಳಲ್ಲಿ ನಿಗದಿಪಡಿಸಲಾದ ಹೆಚ್ಚುವರಿ ದರಗಳು ಗಣನೀಯವಾಗಿ ಹೆಚ್ಚಾಗಿವೆ ಎಂಬುದನ್ನು ಗಮನಿಸಲಾಗಿದೆ. ಇದಲ್ಲದೆ, ಪ್ರಾಥಮಿಕ ಮತ್ತು ದ್ವಿತೀಯ ಹಂತದ ತ್ಯಾಜ್ಯ ಸಂಗ್ರಹಣೆಯ ಟೆಂಡರ್‌ಗೆ ಸಂಬಂಧಿಸಿದ ಕೆಲವು ಪ್ರಕರಣಗಳು ಮಾನ್ಯ ಉಚ್ಚ ನ್ಯಾಯಾಲಯದಲ್ಲಿವೆ. ಈ ಪ್ರಕರಣಗಳ ವಿವರಗಳು ಸಾರ್ವಜನಿಕ ವಲಯದಲ್ಲಿಯೂ ಲಭ್ಯವಿವೆ.   ಟೆಂಡರ್ ಪ್ರಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎತ್ತಿ ತೋರಿಸಿವೆ ಎಂದು ಟಿಪ್ಪಣಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

 

ಈ ವಿಷಯಗಳ ಕುರಿತು  ಮುಖ್ಯಮಂತ್ರಿ, ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ,   ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರ ಸಮ್ಮುಖದಲ್ಲಿ ಚರ್ಚಿಸಿದ್ದರು. ಟೆಂಡರ್‌ಗಳನ್ನು ಪರಿಶೀಲಿಸಲು ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ, ಬಾಹ್ಯ ತಜ್ಞರು ಹಾಗೂ ಇತರ ಅಧಿಕಾರಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಲು ನಿರ್ಧರಿಸಲಾಗಿತ್ತು.   ಇದಲ್ಲದೆ, ಘನತ್ಯಾಜ್ಯ ನಿರ್ವಹಣೆ (SWM) ಟೆಂಡರ್ ಪರಿಶೀಲನಾ ಸಮಿತಿಯ ರಚನೆಗೆ ಸಂಬಂಧಿಸಿದ ಕಡತದಲ್ಲಿ  ಉಪಮುಖ್ಯಮಂತ್ರಿಯವರು ಹಲವು  ಅಂಶಗಳನ್ನು ಪ್ರಸ್ತಾಪಿಸಿದ್ದರು ಎಂದು ವಿವರಿಸಿದ್ದಾರೆ.

2013ರಲ್ಲಿ ಮೂರು ವರ್ಷಗಳ ಅವಧಿಗೆ 91 ಪ್ಯಾಕೇಜ್‌ಗಳಿಗೆ ಟೆಂಡರ್ ಕರೆಯಲಾಗಿತ್ತು.  ಮತ್ತು ಮೂರು ವರ್ಷಗಳ ಅವಧಿಗೆ ಕಾಮಗಾರಿ ಆದೇಶಗಳನ್ನು ನೀಡಲಾಗಿತ್ತು. ಇದಾದ ನಂತರದ ಎಲ್ಲಾ ಪ್ರಯತ್ನಗಳು ವಿಫಲವಾದವು. 2019ರಲ್ಲಿ ಹೊಸದಾಗಿ ಟೆಂಡರ್ ಕರೆಯಲಾಗಿತ್ತು.  ಈ ಸಂದರ್ಭದಲ್ಲಿ 30 ವಾರ್ಡ್‌ಗಳಿಗೆ ನ್ಯಾಯಾಲಯದ ತಡೆಯಾಜ್ಞೆ ಇತ್ತು. 115 ವಾರ್ಡ್‌ಗಳಿಗೆ ಕಾಮಗಾರಿ ಆದೇಶಗಳನ್ನು ನೀಡಲಾಗಿತ್ತು.  ಉಳಿದ ವಾರ್ಡ್‌ಗಳ ಟೆಂಡರ್ ಪ್ರಕ್ರಿಯೆ ಅಂತಿಮಗೊಂಡಿರಲಿಲ್ಲ.  ಹಿಂದಿನ ಎಲ್ಲಾ ಟೆಂಡರ್‌ಗಳ ಕಾಮಗಾರಿ ಅವಧಿ ಮುಕ್ತಾಯಗೊಂಡಿದೆ.

ಆದರೂ, ಕೆಟಿಪಿಪಿ (KTPP) ನಿಯಮಗಳಿಗೆ ವಿರುದ್ಧವಾಗಿ ಪೂರೈಕೆ ಆದೇಶಗಳ ಆಧಾರದ ಮೇಲೆ ಪ್ರಾಥಮಿಕ ತ್ಯಾಜ್ಯ ಸಂಗ್ರಹಣೆ ಮತ್ತು ಸಾಗಣೆ ಕಾರ್ಯಗಳನ್ನು ನಡೆಸಲಾಗುತ್ತಿದೆ. 2022–23ರಿಂದ 2025–26ರವರೆಗಿನ ಅವಧಿಯಲ್ಲಿ, ಭೂಕುಸಿತ ತ್ಯಾಜ್ಯ ವಿಲೇವಾರಿ ಸ್ಥಳದ ಸುತ್ತಮುತ್ತಲಿನ ಗ್ರಾಮಗಳ ಅಭಿವೃದ್ಧಿಗಾಗಿ ₹1,490.50 ಕೋಟಿ ವೆಚ್ಚ ಮಾಡಲಾಗಿದೆ.

ಆದ್ದರಿಂದ, ಈ ಹಂತದಲ್ಲಿ ಯಾವುದೇ ಸಮಿತಿಯನ್ನು ರಚಿಸದೆ  21 ಪ್ಯಾಕೇಜ್‌ಗಳಿಗೆ ಪರಿಷ್ಕೃತ ಅಂದಾಜು ಮೊತ್ತದ ಆಡಳಿತಾತ್ಮಕ ಅನುಮೋದನೆ ಮತ್ತು ಶೇ. 5ಕ್ಕಿಂತ ಹೆಚ್ಚಿನ ಟೆಂಡರ್ ಪ್ರೀಮಿಯಂ ಮಂಜೂರಾತಿಯನ್ನು ಸೀಮಿತಗೊಳಿಸುವಂತೆ ಕೋರಲಾಗಿದೆ. ಈ ಅಂಶಗಳನ್ನು ನಿರ್ಧಾರಕ್ಕಾಗಿ ಸಚಿವ ಸಂಪುಟದ ಮುಂದೆ ಮಂಡಿಸುವಂತೆಯೂ ಉಪ ಮುಖ್ಯಮಂತ್ರಿಯೂ ಆಗಿದ್ದ   ಡಿ ಕೆ ಶಿವಕುಮಾರ್ ಅವರು  ಕೋರಿದ್ದರು ಎಂದು ರಿತೀಶ್‌ ಕುಮಾರ್ ಸಿಂಗ್ ಅವರು ಟಿಪ್ಪಣಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

 

 

ಬೆಂಗಳೂರಿನಲ್ಲಿ ಘನತ್ಯಾಜ್ಯ ನಿರ್ವಹಣೆಯು ಒಂದು ದೊಡ್ಡ ಸವಾಲಾಗಿದ್ದು, ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂಬುದನ್ನು ಒಪ್ಪಿಕೊಳ್ಳಲಾಗಿದೆ. ಆದರೆ, ಬಿಡ್‌ಗಳಲ್ಲಿ ನಿಗದಿಪಡಿಸಿರುವ ಹೆಚ್ಚುವರಿ ದರಗಳು ಗಣನೀಯವಾಗಿ ಹೆಚ್ಚಾಗಿದ್ದು, ಅವುಗಳನ್ನು ಸಮರ್ಥಿಸಲು ಸೂಕ್ತ ಕಾರಣಗಳನ್ನು ನೀಡಲಾಗಿಲ್ಲ ಎಂಬುದನ್ನೂ ಸಹ ಆರ್ಥಿಕ ಇಲಾಖೆಯು ಗಮನಿಸಿತ್ತು.   ಟೆಂಡರ್ ಪರಿಶೀಲಿಸಲು ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ, ಬಾಹ್ಯ ತಜ್ಞರು ಮತ್ತು ಇತರ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸುವುದು ಸೂಕ್ತ ಕ್ರಮವಾಗಿರುತ್ತದೆ ಎಂದು ನಿರ್ಧರಿಸಿತ್ತು.

‘ಹಣಕಾಸು ಇಲಾಖೆಯು ಈ ಹಿಂದೆ ಎತ್ತಿದ್ದ ಆಕ್ಷೇಪಣೆಗಳು ಇನ್ನೂ ಪ್ರಸ್ತುತವಾಗಿವೆ. ಆಡಳಿತ ಇಲಾಖೆಯು (AD) ಅವುಗಳಿಗೆ ಸೂಕ್ತ ಪರಿಹಾರ ಒದಗಿಸಬೇಕಾಗಿದೆ. 20 ಪ್ಯಾಕೇಜ್‌ಗಳಲ್ಲಿ ಹೆಚ್ಚಿನ ಟೆಂಡರ್ ಪ್ರೀಮಿಯಂ ವಿಧಿಸಿರುವುದಕ್ಕೆ ಯಾವುದೇ ಸಮರ್ಥನೀಯ ಕಾರಣಗಳಿಲ್ಲ. ಮುಂದಿನ ಏಳು ವರ್ಷಗಳ ಅವಧಿಯಲ್ಲಿ ಈ ಹೆಚ್ಚುವರಿ ವೆಚ್ಚವನ್ನು ಭರಿಸಬೇಕಾಗುತ್ತದೆ. ಇದರ ಪರಿಣಾಮವಾಗಿ, ಏಳು ವರ್ಷಗಳಲ್ಲಿ ₹2,500 ಕೋಟಿ ಮೂಲ ವೆಚ್ಚದ ಮೇಲೆ ಸುಮಾರು ₹350 ಕೋಟಿ ಹೆಚ್ಚುವರಿ ಪ್ರೀಮಿಯಂ ಪಾವತಿಸಬೇಕಾಗುತ್ತದೆ,’ ಎಂದೂ ರಿತೀಶ್‌ ಕುಮಾರ್ ಸಿಂಗ್‌ ಅವರು ಎಚ್ಚರಿಸಿದ್ದರು.

ಹಾಗೆಯೇ ‘ ಉಚ್ಚ ನ್ಯಾಯಾಲಯದಲ್ಲಿರುವ ಪ್ರಕರಣದ ಹಿನ್ನೆಲೆಯನ್ನೂ ವಿವರವಾಗಿ ಪರಿಶೀಲಿಸಬೇಕಾಗಿದೆ. ಇಷ್ಟೊಂದು ದೊಡ್ಡ ಟೆಂಡರ್ ಪ್ರೀಮಿಯಂನಿಂದ ಉಂಟಾಗುವ ಹಣಕಾಸಿನ ಪರಿಣಾಮಗಳನ್ನೂ ಎಚ್ಚರಿಕೆಯಿಂದ ಪರಿಶೀಲಿಸುವ ಅಗತ್ಯವಿದೆ, ಏಕೆಂದರೆ…ಇದರ ವೆಚ್ಚವನ್ನು ಬೆಂಗಳೂರಿನ ನಾಗರಿಕರೇ ಭರಿಸಬೇಕಾಗುತ್ತದೆ,’ ಎಂದು ಎಚ್ಚರಿಸಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

Hot this week

ಪ್ರಭಾವಿ ನಾಯಕನ ವಿರುದ್ಧ ಸ್ಟಿಂಗ್ ಕಾರ್ಯಾಚರಣೆ; ನ್ಯಾಯಾಂಗ ತನಿಖೆಗೆ ಹೈಕೋರ್ಟ್‌, ಬಾಲ ನ್ಯಾಯಮಂಡಳಿ ಮೆಟ್ಟಿಲೇರಿದ ನೈಜ ಹೋರಾಟಗಾರರ ವೇದಿಕೆ

ಬೆಂಗಳೂರು; ಯೂ ಟ್ಯೂಬ್‌ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ  ‘ಹನಿಟ್ರ್ಯಾಪ್’ ಪ್ರಕರಣದ...

ಸ್ಟಿಂಗ್ ಆಪರೇಷನ್‌; ಮಾಧ್ಯಮಗಳ ವಿರುದ್ಧ ತಡೆಯಾಜ್ಞೆಗೆ ಸಿದ್ದರಾಮಯ್ಯ ಎಂಬುವರಿಂದ ಅಸಲು ದಾವೆ ದಾಖಲು, ನಾಳೆಯೇ ಅರ್ಜಿ ವಿಚಾರಣೆ

ಬೆಂಗಳೂರು;  ರಾಜ್ಯ ರಾಜಕಾರಣದಲ್ಲಿ ಬಹು ಚರ್ಚೆಗೆ ಗ್ರಾಸವಾಗಿರುವ ಸ್ಟಿಂಗ್ ಆಪರೇಷನ್ ಬಗ್ಗೆ...

ಅಕ್ರಮ ಖಾತೆ, ಅನರ್ಹರಿಗೆ 79.28 ಕೋಟಿ ರು ಪರಿಹಾರ; ಕೆಎಎಸ್ ಅಧಿಕಾರಿ ವಿರುದ್ಧದ ಮೊದಲ ವಿಚಾರಣೆಯಲ್ಲೇ ಲೋಪ, ಮರು ವಿಚಾರಣೆಗೆ ಆದೇಶ

ಬೆಂಗಳೂರು; ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಇಮ್ಮಾವು ಗ್ರಾಮದಲ್ಲಿ 54 ಎಕರೆಗೆ...

ಅನುದಾನ ರಹಿತ ಅವಧಿಗೂ ವೇತನ, ಪಿಂಚಣಿ ಸೌಲಭ್ಯ; ಹೈಕೋರ್ಟ್ ಆದೇಶ ಪಾಲಿಸಿದರೇ 22,663.81 ಕೋಟಿ ವೆಚ್ಚ, ಬೊಕ್ಕಸಕ್ಕೆ ಹೊರೆ

ಬೆಂಗಳೂರು; ವೇತಾನುದಾನಕ್ಕೆ ಒಳಪಡಿಸುವ ಪೂರ್ವದಲ್ಲಿ ಸಲ್ಲಿಸಿರುವ ಸೇವೆಗಳನ್ನು ಪಿಂಚಣಿಗಳಿಗೆ ಪರಿಗಣಿಸಬೇಕು ಎಂದು...
Please Scan to make Your Contribution

Topics

ಪ್ರಭಾವಿ ನಾಯಕನ ವಿರುದ್ಧ ಸ್ಟಿಂಗ್ ಕಾರ್ಯಾಚರಣೆ; ನ್ಯಾಯಾಂಗ ತನಿಖೆಗೆ ಹೈಕೋರ್ಟ್‌, ಬಾಲ ನ್ಯಾಯಮಂಡಳಿ ಮೆಟ್ಟಿಲೇರಿದ ನೈಜ ಹೋರಾಟಗಾರರ ವೇದಿಕೆ

ಬೆಂಗಳೂರು; ಯೂ ಟ್ಯೂಬ್‌ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ  ‘ಹನಿಟ್ರ್ಯಾಪ್’ ಪ್ರಕರಣದ...

ಸ್ಟಿಂಗ್ ಆಪರೇಷನ್‌; ಮಾಧ್ಯಮಗಳ ವಿರುದ್ಧ ತಡೆಯಾಜ್ಞೆಗೆ ಸಿದ್ದರಾಮಯ್ಯ ಎಂಬುವರಿಂದ ಅಸಲು ದಾವೆ ದಾಖಲು, ನಾಳೆಯೇ ಅರ್ಜಿ ವಿಚಾರಣೆ

ಬೆಂಗಳೂರು;  ರಾಜ್ಯ ರಾಜಕಾರಣದಲ್ಲಿ ಬಹು ಚರ್ಚೆಗೆ ಗ್ರಾಸವಾಗಿರುವ ಸ್ಟಿಂಗ್ ಆಪರೇಷನ್ ಬಗ್ಗೆ...

ಅಕ್ರಮ ಖಾತೆ, ಅನರ್ಹರಿಗೆ 79.28 ಕೋಟಿ ರು ಪರಿಹಾರ; ಕೆಎಎಸ್ ಅಧಿಕಾರಿ ವಿರುದ್ಧದ ಮೊದಲ ವಿಚಾರಣೆಯಲ್ಲೇ ಲೋಪ, ಮರು ವಿಚಾರಣೆಗೆ ಆದೇಶ

ಬೆಂಗಳೂರು; ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಇಮ್ಮಾವು ಗ್ರಾಮದಲ್ಲಿ 54 ಎಕರೆಗೆ...

ಅನುದಾನ ರಹಿತ ಅವಧಿಗೂ ವೇತನ, ಪಿಂಚಣಿ ಸೌಲಭ್ಯ; ಹೈಕೋರ್ಟ್ ಆದೇಶ ಪಾಲಿಸಿದರೇ 22,663.81 ಕೋಟಿ ವೆಚ್ಚ, ಬೊಕ್ಕಸಕ್ಕೆ ಹೊರೆ

ಬೆಂಗಳೂರು; ವೇತಾನುದಾನಕ್ಕೆ ಒಳಪಡಿಸುವ ಪೂರ್ವದಲ್ಲಿ ಸಲ್ಲಿಸಿರುವ ಸೇವೆಗಳನ್ನು ಪಿಂಚಣಿಗಳಿಗೆ ಪರಿಗಣಿಸಬೇಕು ಎಂದು...

ಪಡಿತರ ಆಹಾರಧಾನ್ಯ ಎತ್ತುವಳಿ, ಸಕ್ಕರೆ ಸಹಾಯಧನ, ಕನಿಷ್ಟ ಬೆಂಬಲ ಬೆಲೆ; 1,171.73 ಕೋಟಿ ಬಾಕಿ ಉಳಿಸಿಕೊಂಡ ಸರ್ಕಾರ

ಬೆಂಗಳೂರು; ಕನಿಷ್ಠ ಬೆಂಬಲ ಬೆಲೆ  ಅಡಿಯಲ್ಲಿ ಖರೀದಿ ಕಾರ್ಯಾಚರಣೆ ನಡೆಸುತ್ತಿರುವ ಕರ್ನಾಟಕ...

Related Articles

Popular Categories

error: Content is protected !!