ಬೆಂಗಳೂರು; ರಾಜ್ಯದ ವಿವಿಧೆಡೆಗಳಲ್ಲಿರುವ ವಿವಿಧ ಶಾಲೆಗಳಲ್ಲಿ ವಿದ್ಯಾರ್ಥಿ ಶಿಕ್ಷಕರ ಅನುಪಾತದಲ್ಲಿ ವ್ಯಾಪಕ ವ್ಯತ್ಯಾಸವಿದೆ. ಸುಮಾರು 15,300 ಶಾಲೆಗಳಲ್ಲಿ 20ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದಾರೆ. ಕನ್ನಡ ಮಾಧ್ಯಮ ಶಾಲೆಗಳಿಗೆ ಹೋಲಿಸಿದರೆ ಉರ್ದು ಮತ್ತ ಮರಾಠಿ ಮಾಧ್ಯಮ ಶಾಲೆಗಳಲ್ಲಿ ವಿದ್ಯಾರ್ಥಿ-ಶಿಕ್ಷಕ ಅನುಪಾತ ಗಣನೀಯವಾಗಿ ಕಡಿಮೆಯಾಗಿದೆ ಎಂಬ ಸಂಗತಿಯು ಇದೀಗ ಬಹಿರಂಗವಾಗಿದೆ.
ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಎಸ್ ವಿ ರಂಗನಾಥ್ ಅವರ ಅಧ್ಯಕ್ಷತೆಯಲ್ಲಿ ನೇಮಿಸಿರುವ ಸಮಿತಿಗೆ ಈ ಮಾಹಿತಿಯನ್ನು ಒದಗಿಸಬೇಕು ಎಂದು ಆರ್ಥಿಕ ಇಲಾಖೆಯು, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಗೆ ನಿರ್ದೇಶನ ನೀಡಿದೆ.
ಸರ್ಕಾರಿ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಉರ್ದು ಮತ್ತು ಮರಾಠಿ ಜಿಪಿಟಿ ಶಿಕ್ಷಕರ ನೇಮಕಾತಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯು ಸಲ್ಲಿಸಿದ್ದ ಪ್ರಸ್ತಾವನೆ (ಕಡತ ಸಂಖ್ಯೆ EP-EST/9/2026 (2273740) ಪರಿಶೀಲಿಸಿರುವ ಆರ್ಥಿಕ ಇಲಾಖೆಯು 15,300 ಶಾಲೆಗಳಲ್ಲಿ 20ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದಾರೆ ಎಂಬ ಸಂಗತಿಯನ್ನು ಸಮಿತಿಯ ಗಮನಕ್ಕೆ ತರಬೇಕು ಎಂದು ಸೂಚಿಸಿದೆ.
ಈ ಸಂಬಂಧ ಆರ್ಥಿಕ ಇಲಾಖೆಯು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಗೆ ಅನಧಿಕೃತ ಟಿಪ್ಪಣಿ ಹೊರಡಿಸಿದೆ. ಈ ಟಿಪ್ಪಣಿಯಲ್ಲಿರುವ ಅಂಶಗಳ ಕುರಿತು ಇಲಾಖೆ ಅಧಿಕಾರಿಗಳು ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಆರ್ಥಿಕ ಇಲಾಖೆಯು ಹೊರಡಿಸಿರುವ ಅನಧಿಕೃತ ಟಿಪ್ಪಣಿ ಪ್ರತಿಯು ದಿ ಫೈಲ್ಗೆ ಲಭ್ಯವಾಗಿದೆ.
ಅನಧಿಕೃತ ಟಿಪ್ಪಣಿಯಲ್ಲೇನಿದೆ?
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ, ಶಾಲಾವಾರು ವಿದ್ಯಾರ್ಥಿ- ಶಿಕ್ಷಕರ ಅನುಪಾತ, ಮಂಜೂರಾದ ಹಾಗೂ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ಹುದ್ದೆಗಳು, ಶಿಕ್ಷಕರ ಕೊರತೆ/ಹೆಚ್ಚುವರಿ ಮತ್ತು ಶಾಲೆಗಳ ವಾಸ್ತವಿಕ ಅಗತ್ಯತೆಗಳನ್ನು ಸಮಗ್ರವಾಗಿ ಪರಿಶೀಲಿಸಿದೆ. ಅಲ್ಲದೇ ಶಿಕ್ಷಕರ ತರ್ಕಬದ್ಧ ಮರು ಹಂಚಿಕೆ ಹಾಗೂ ಶಿಕ್ಷಕರ ಹುದ್ದೆಗಳ ಸಮರ್ಪಕ ಮತ್ತು ಪರಿಣಾಮಕಾರಿ ಬಳಕೆಗೆ ಅಗತ್ಯವಾದ ಶಿಫಾರಸ್ಸು ಮಾಡಲು ನಿವೃತ್ತ ಮುಖ್ಯ ಕಾರ್ಯದರ್ಶಿ ಎಸ್ ವಿ ರಂಗನಾಥ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದೆ ಎಂದು ಆರ್ಥಿಕ ಇಲಾಖೆಯು ತನ್ನ ಅನಧಿಕೃತ ಟಿಪ್ಪಣಿಯಲ್ಲಿ ವಿವರಿಸಿದೆ.
ಕನ್ನಡ ಮಾಧ್ಯಮ ಶಾಲೆಗಳಿಗೆ ಹೋಲಿಸಿದರೆ ಉರ್ದು ಮತ್ತ ಮರಾಠಿ ಮಾಧ್ಯಮ ಶಾಲೆಗಳಲ್ಲಿ ವಿದ್ಯಾರ್ಥಿ-ಶಿಕ್ಷಕ ಅನುಪಾತ ಗಣನೀಯವಾಗಿ ಕಡಿಮೆಯಾಗಿದೆ. ಒಟ್ಟು 893 ಮರಾಠಿ ಮಾಧ್ಯಮ ಶಾಲೆಗಳಿವೆ. ಒಟ್ಟು 4,986 ಮಂಜೂರಾದ ಹುದ್ದೆಗಳ ಪೈಕಿ 3,489 ಮರಾಠಿ ಮಾಧ್ಯಮ ಶಿಕ್ಷಕರು ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಶಾಲೆಗಳಲ್ಲಿ ಒಟ್ಟು 54,875 ವಿದ್ಯಾರ್ಥಿಗಳು ದಾಖಲಾಗಿದ್ದು ವಿದ್ಯಾರ್ಥಿ-ಶಿಕ್ಷಕ ಅನುಪಾತವು 15.72 ಆಗಿದೆ.

ಅದೇ ರೀತಿ ಒಟ್ಟು 3,927 ಉರ್ದು ಮಾಧ್ಯಮ ಶಾಲೆಗಳಿವೆ. ಒಟ್ಟು 20,103 ಮಂಜೂರಾದ ಉರ್ದು ಮಾಧ್ಯಮ ಶಿಕ್ಷಕರ ಹುದ್ದೆಗಳ ಪೈಕಿ 1ರಿಂದ 8ನೇ ತರಗತಿವರೆಗೆ 10,731 ಶಿಕ್ಷಕರು ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಶಾಲೆಗಳಲ್ಲಿ ಒಟ್ಟು 2,12,325 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ವಿದ್ಯಾರ್ಥಿ-ಶಿಕ್ಷಕ ಅನುಪಾತವು 15.27 ಆಗಿದೆ ಎಂದು ಆರ್ಥಿಕ ಇಲಾಖೆಯು ಶಾಲಾ ಶಿಕ್ಷಣ ಸಾಕ್ಷರತೆ ಇಲಾಖೆಯ ಗಮನ ಸೆಳೆದಿರುವುದು ಅನಧಿಕೃತ ಟಿಪ್ಪಣಿಯಿಂದ ಗೊತ್ತಾಗಿದೆ.
ಈ ದತ್ತಾಂಶಗಳಿಗೆ ಹೋಲಿಸಿದರೇ ಕನ್ನಡ ಮಾಧ್ಯಮ ಶಾಲೆಗಳಲ್ಲಿನ ವಿದ್ಯಾರ್ಥಿ ಶಿಕ್ಷಕ ಅನುಪಾತವು 24 ಆಗಿದೆ. ಒಟ್ಟು 26,66,811 ವಿದ್ಯಾರ್ಥಿಗಳ ದಾಖಲಾತಿಗೆ 1,07,630 ಕನ್ನಡ ಮಾಧ್ಯಮ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಸರಾಸರಿ ಪ್ರತಿ 24 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕರಿದ್ದಾರೆ. ಇದಲ್ಲದೇ ಸರ್ಕಾರಿ ಶಾಲೆಗಳಾದ್ಯಂತ ಶಿಕ್ಷಕರ ತರ್ಕಬದ್ಧ ಮರು ಹಂಚಿಕೆ ವಿಷಯವನ್ನು ಸಮಗ್ರವಾಗಿ ಪರಿಶೀಲಿಸುವುದು ಸೂಕ್ತವಾಗಿದೆ ಎಂದು ಹೇಳಿದೆ.

‘ವಿವಿಧ ಶಾಲೆಗಳಲ್ಲಿನ ವಿದ್ಯಾರ್ಥಿ-ಶಿಕ್ಷಕ ಅನುಪಾತದಲ್ಲಿ ವ್ಯಾಪಕ ವ್ಯತ್ಯಾಸವಿದೆ. ಸುಮಾರು 15,300 ಶಾಲೆಗಳಲ್ಲಿ 20ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ ಹಿನ್ನೆಲೆಯಲ್ಲಿ ಈ ವಿಷಯವನ್ನು ಸಮಗ್ರ ದೃಷ್ಟಿಕೋನದಿಂದ ಪರಿಶೀಲಿಸುವ ಅಗತ್ಯವಿದೆ,’ ಎಂದು ಆರ್ಥಿಕ ಇಲಾಖೆಯು ಹೇಳಿದೆ.
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿ ಮತ್ತು ಶಿಕ್ಷಕರ ಅನುಪಾತ ಸಮಾನವಾಗಿಲ್ಲ. ಕೆಲ ಜಿಲ್ಲೆಗಳಲ್ಲಿ ಹೆಚ್ಚುವರಿ ಶಿಕ್ಷಕರಿರುವುದು ಕಂಡು ಬಂದಿರುವುದರಿಂದ ಶಿಕ್ಷಕರನ್ನು ಮರು ಹಂಚಿಕೆ ಮಾಡಲು ತುರ್ತು ಕ್ರಮ ವಹಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸರಕಾರ ಸೂಚನೆ ನೀಡಿದೆ.
ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಹೆಚ್ಚುವರಿ ಶಿಕ್ಷಕರಿರುವುದು ಕಂಡು ಬಂದಿದ್ದು, ಇಂತಹ ಶಿಕ್ಷಕರನ್ನು ಅವಶ್ಯಕತೆ ಇರುವ ಕಡೆ ಮರು ಹಂಚಿಕೆ ಮಾಡುವಂತೆಯೂ ನಿರ್ದೇಶನ ನೀಡಲಾಗಿದೆ. ಇನ್ನು, ಶಿಕ್ಷಕರ ಸಂಪನ್ಮೂಲವನ್ನು ಆರ್ಥಿಕವಾಗಿ ಹಾಗೂ ಹೆಚ್ಚು ಪರಿಣಾಮಕಾರಿಯಾಗಿ ಬಳಸಲು ಅಗತ್ಯ ಕ್ರಮ ಕೈಗೊಳ್ಳುವಂತೆ 2016ರಲ್ಲೇ ಆದೇಶಿಸಿತ್ತು.
ಅನುದಾನಿತ ಶಾಲೆಗಳಲ್ಲಿ ಇರುವ ಹೆಚ್ಚುವರಿ ಶಿಕ್ಷಕರನ್ನು ಕೊರತೆ ಇರುವಂತಹ ಸರಕಾರಿ ಶಾಲೆಗಳಿಗೆ ಒಒಡಿ ಆಧಾರದ ಮೇಲೆ ಹಂಚಿಕೆ ಮಾಡಬೇಕು. ಕೊರತೆ ಇರುವ ಶಾಲೆಗಳಿಗೆ ಹೆಚ್ಚುವರಿ ಇರುವ ಶಾಲೆಗಳಿಂದ ಶಿಕ್ಷಕರನ್ನು ಕೂಡಲೇ ಮರು ಹಂಚಿಕೆ ಮಾಡಲು ಕ್ರಮ ವಹಿಸುವಂತೆಯೂ ಆದೇಶ ಹೊರಡಿಸಿತ್ತು. ವಿದ್ಯಾರ್ಥಿ-ಶಿಕ್ಷಕರ ಅನುಪಾತ (PTR) ಕ್ಕೆ ಸಂಬಂಧಿಸಿದಂತೆ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕು ಕಾಯ್ದೆ (RTE) ಅನ್ವಯ, ಪ್ರತಿ ಶಾಲೆಯಲ್ಲೂ ವಿದ್ಯಾರ್ಥಿ ಹಾಗೂ ಶಿಕ್ಷಕರ ಅನುಪಾತ ಸರಿಯಾಗಿ ಇರುವಂತೆ ನೋಡಿಕೊಳ್ಳಲು ಸೂಚಿಸಿತ್ತು.
ಸಂಪನ್ಮೂಲಗಳ ಸದ್ಬಳಕೆ ಗೆ ಸಂಬಂಧಿಸಿದಂತೆ ಶಿಕ್ಷಕರ ಕೊರತೆಯಿಂದಾಗಿ ಗ್ರಾಮೀಣ ಭಾಗದ ಶಾಲೆಗಳಲ್ಲಿ ಮಕ್ಕಳಿಗೆ ಉಂಟಾಗುವ ಕಲಿಕಾ ಹಿನ್ನಡೆಯನ್ನು ತಡೆಯಬೇಕು. ಬಜೆಟ್ ನಿರ್ವಹಣೆಗೆ ಸಂಬಂಧಿಸಿದಂತೆ ಲಭ್ಯವಿರುವ ಶಿಕ್ಷಕ ವೃಂದವನ್ನು ಆರ್ಥಿಕವಾಗಿ ಹಾಗೂ ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು ದತ್ತಾಂಶ ಸಂಗ್ರಹಣೆ ಗೆ ಸಂಬಂಧಿಸಿದಂತೆ ಪ್ರತಿ ವರ್ಷ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಶಾಲೆಗಳಲ್ಲಿ ದಾಖಲಾದ ವಿದ್ಯಾರ್ಥಿಗಳ ನಿಖರ ಸಂಖ್ಯೆಯನ್ನು ಪರಿಶೀಲಿಸುತ್ತದೆ.
ಅದೇ ರೀತಿ ಹೆಚ್ಚುವರಿ ಶಿಕ್ಷಕರ ಗುರುತಿಸುವಿಕೆ ಗೆ ಸಂಬಂಧಿಸಿದಂತೆ ನಿಗದಿಗಿಂತ ಹೆಚ್ಚು ಶಿಕ್ಷಕರಿರುವ ಶಾಲೆಗಳಲ್ಲಿ ಜೇಷ್ಠತೆಯ (Seniority) ಆಧಾರದ ಮೇಲೆ ಹೆಚ್ಚುವರಿ ಶಿಕ್ಷಕರನ್ನು ಪಟ್ಟಿ ಮಾಡಲಾಗುತ್ತದೆ.
ರಾಜ್ಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಬೇಕು 10,000 ಕೋಟಿ ಹೆಚ್ಚುವರಿ ಅನುದಾನ; ಸಚಿವ ಸಂಪುಟಕ್ಕೆ ಪ್ರಸ್ತಾವ
ರಾಜ್ಯ ಶಿಕ್ಷಣ ನೀತಿ ಅನುಷ್ಠಾನಕ್ಕೆ 10,000 ಕೋಟಿ ರು ಅನುದಾನ ಒದಗಿಸಬೇಕು ಎಂದು ಸುಖ್ ದೇವ್ ಥೋರಟ್ ನೇತೃತ್ವದ ಆಯೋಗವು ರಾಜ್ಯ ಸರ್ಕಾರಕ್ಕೆ ವರದಿ ನೀಡಿತ್ತು.
ಅತಿಥಿ ಶಿಕ್ಷಕರ ನೇಮಕ ಪದ್ಧತಿಗೆ ರಾಜ್ಯ ಶಿಕ್ಷಣ ನೀತಿ ಆಯೋಗವು ತೀವ್ರವಾಗಿ ವಿರೋಧಿಸಿತ್ತು.
ಅನುದಾನ ರಹಿತ ಶಾಲೆಗಳ ವಿಸ್ತರಣೆಗೂ ಸಹ ಆಯೋಗವು ವಿರೋಧ ವ್ಯಕ್ತಪಡಿಸಿತ್ತು.
ಶಾಲಾ ಶಿಕ್ಷಣಕ್ಕಾಗಿ ಹಣಕಾಸು ಪೂರೈಕೆ ಕುರಿತು ವರದಿ ನೀಡಿದ್ದ ಆಯೋಗವು ಬಜೆಟ್ನಲ್ಲಿ ನೀಡುತ್ತಿರುವ ಅನುದಾನವು ಸಾಲದು ಎಂದು ಹೇಳಿತ್ತು.
ಶಿಕ್ಷಕರ ನೇಮಕಾತಿ ಮತ್ತು ವೃತ್ತಿ ಪರತೆ ಬಗ್ಗೆಯೂ ಆಯೋಗವು ತನ್ನ ವರದಿಯಲ್ಲಿ ವಿವರಿಸಿತ್ತು.
ಆರ್ಥಿಕ ಬಿಕ್ಕಟ್ಟು; ಶಿಕ್ಷಕರ ನೇಮಕಾತಿ, ವೃತ್ತಿಪರತೆ ಅಭಿವೃದ್ಧಿ ವೆಚ್ಚಕ್ಕೆ ತಡೆಹಿಡಿದಿತ್ತೇ ಸರ್ಕಾರ?
ಉನ್ನತ ಶಿಕ್ಷಣದಲ್ಲಿ ಕರ್ನಾಟಕವು ಇತರೆ ರಾಜ್ಯಗಳಿಗಿಂತಲೂ ಕೆಳಗೆ ಇಳಿಯುತ್ತಿದೆ ಎಂದು ಆಯೋಗವು ಎಚ್ಚರಿಸಿತ್ತು.




