ಬೆಂಗಳೂರು; ಧರ್ಮಸ್ಥಳದ ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಮರುತನಿಖೆಗೆ ಆದೇಶಿಸಿರುವ ಸುಪ್ರೀಂ ಕೋರ್ಟ್, ಈ ತನಿಖೆಯನ್ನು ಪೂರ್ಣಗೊಳಿಸಲು ಮೂರು ತಿಂಗಳ ಗಡುವು ವಿಧಿಸಿದೆ.
ಈ ಪ್ರಕರಣದ ತನಿಖೆ ನಡೆಸಿದ್ದ ಕೇಂದ್ರ ತನಿಖಾ ದಳ (ಸಿಬಿಐ) ಆರೋಪಿಗಳನ್ನು ಖುಲಾಸೆಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸೌಜನ್ಯಾ ತಾಯಿ ಕುಸುಮಾವತಿ ಗೌಡ ಅವರು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು.
ಪ್ರಕರಣವನ್ನು ಮರುತನಿಖೆ ನಡೆಸುವಂತೆ ಕೋರಿ ಸಲ್ಲಿಸಿದ್ದ ಅವರ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಬಳಿಕ ಕುಸುಮಾವತಿ ಗೌಡ ಅವರು ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ವೇಳೆ ಸಿಬಿಐ ತನಿಖೆಯ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.
ಜುಲೈನಲ್ಲಿ ನಡೆದ ವಿಚಾರಣೆಯಲ್ಲಿ ತನಿಖೆ ಕಳಪೆಯಾಗಿದ್ದು, ಸ್ವತಂತ್ರ ತನಿಖೆಯ ಬದಲಿಗೆ ಹಿಂದಿನ ತನಿಖೆಯನ್ನೇ ಆಧರಿಸಿ ವರದಿ ಸಿದ್ಧಪಡಿಸಲಾಗಿದೆ ಎಂದು ಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು.
ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಹಾಗೂ ಸಂಜೀವ್ ಸಚ್‌ದೇವ್ ಅವರಿದ್ದ ಪೀಠ, ‘ವಾಸ್ತವವಾಗಿ, ಸಿಬಿಐನ ತನಿಖಾಧಿಕಾರಿ ನ್ಯಾಯಾಧೀಶರಂತೆ ಕಾರ್ಯನಿರ್ವಹಿಸಿದ್ದಾರೆ. ಈ ಹಿಂದೆ ಸಂಗ್ರಹಿಸಲಾದ ಸಾಕ್ಷ್ಯಗಳನ್ನು ಪರಿಶೀಲಿಸಿ ಅವರು ವರದಿ ಸಲ್ಲಿಸಿದ್ದಾರೆ. ಯಾವುದೇ ಸ್ವತಂತ್ರ ತನಿಖೆ ನಡೆಸಿಲ್ಲ’ ಎಂದು ಹೇಳಿತ್ತು.
ಇಂತಹ ತನಿಖೆ ಸಿಬಿಐನ ಕಳಪೆ ಕಾರ್ಯವೈಖರಿಯನ್ನು ಪ್ರತಿಬಿಂಬಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದ ಪೀಠ, ತೀರ್ಪನ್ನು ಕಾಯ್ದಿರಿಸಿತ್ತು. ಇದೀಗ ಪ್ರಕರಣದ ಮರುತನಿಖೆಗೆ ಆದೇಶಿಸಿರುವ ಸುಪ್ರೀಂ ಕೋರ್ಟ್, ಮೂರು ತಿಂಗಳೊಳಗೆ ತನಿಖೆ ಪೂರ್ಣಗೊಳಿಸುವಂತೆ ಸೂಚಿಸಿದೆ.
ಪ್ರಮುಖ ನಿರ್ದೇಶನಗಳೇನು?
ಸೌಜನ್ಯ ಪ್ರಕರಣದಲ್ಲಿ ಪೂರ್ಣ ಪ್ರಮಾಣದ ಮರುತನಿಖೆಗಾಗಿ ನಿಷ್ಪಕ್ಷಪಾತ ತನಿಖಾಧಿಕಾರಿಗಳನ್ನೊಳಗೊಂಡ ನೂತನ ಎಸ್.ಐ.ಟಿ ರಚಿಸಬೇಕು. ಈ ಹಿಂದೆ ಪ್ರಕರಣದ ತನಿಖೆ ನಡೆಸಿದ್ದ ಯಾವುದೇ ಪೊಲೀಸ್ ಹಾಗೂ ಸಿಬಿಐ ಅಧಿಕಾರಿಗಳು ಪ್ರಸ್ತುತ ರಚನೆಯಾಗುವ ಎಸ್.ಐ.ಟಿ ತಂಡದಲ್ಲಿ ಭಾಗಿಯಾಗುವಂತಿಲ್ಲ. ಹೊಸದಾಗಿ ರಚನೆಯಾಗುವ ಎಸ್.ಐ.ಟಿ ತನಿಖೆಯನ್ನು ಆರಂಭಿಸಿ, ಮುಂದಿನ 3 ತಿಂಗಳ ಒಳಗಾಗಿ ಸಂಪೂರ್ಣ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು.
17 ವರ್ಷದ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ದುರಂತದ ಬಗ್ಗೆ 2012ರಿಂದ ಕುಟುಂಬಸ್ಥರು ಹಾಗೂ ರಾಜ್ಯದ ಸಾರ್ವಜನಿಕರು ನೈಜ ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂದು ನಿರಂತರ ಹೋರಾಟ ನಡೆಸಿಕೊಂಡು ಬಂದಿದ್ದಾರೆ. ವಿಚಾರಣಾ ನ್ಯಾಯಾಲಯವು ಈ ಹಿಂದೆ ಬಂಧಿತನಾಗಿದ್ದ ಆರೋಪಿಯನ್ನು ಖುಲಾಸೆಗೊಳಿಸಿದ ನಂತರ, ನೈಜ ಕೊಲೆಗಾರ ಯಾರು ಎಂಬ ಯಕ್ಷ ಪ್ರಶ್ನೆ ಇನ್ನೂ ಇದೆ.
ಈಗ ಸುಪ್ರೀಂ ಕೋರ್ಟ್ ನೀಡಿರುವ ಮರುತನಿಖೆಯ ಆದೇಶದಿಂದಾಗಿ ಸೌಜನ್ಯ ತಾಯಿ ಕುಸುಮಾವತಿ ಗೌಡ ಹಾಗೂ ಕುಟುಂಬಸ್ಥರಲ್ಲಿ ನ್ಯಾಯ ಸಿಗುವ ಹೊಸ ಭರವಸೆ ಮೂಡಿದ್ದು, ಕರಾವಳಿ ಭಾಗದಲ್ಲಿ ತೀರ್ಪಿಗೆ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು.
ಸೌಜನ್ಯ ಪ್ರಕರಣದಲ್ಲಿ ದಿ ಫೈಲ್, 10 ವರದಿಗಳನ್ನು ಪ್ರಕಟಿಸಿತ್ತು.
ಸೌಜನ್ಯ ಪ್ರಕರಣ ಮರು ತನಿಖೆಗೆ ಹೆಚ್ಚಿದ ಒತ್ತಡ; ಕಾನೂನು ಅಭಿಪ್ರಾಯ ಪಡೆಯಲು ಮುಂದಾದ ಗೃಹ ಇಲಾಖೆ
ಸೌಜನ್ಯ ಪ್ರಕರಣದಲ್ಲಿ ಮರು ತನಿಖೆಗೆ ಒತ್ತಡ ಹೆಚ್ಚಿತ್ತು. ಹೀಗಾಗಿ ಗೃಹ ಇಲಾಖೆಯು ಕಾನೂನು ಅಭಿಪ್ರಾಯ ಕೋರಿತ್ತು.
ಧರ್ಮಸ್ಥಳ ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆ; 18 ತಿಂಗಳಿನಿಂದಲೂ ತೆವಳಿದ ಕಡತ, ಹೊರಬೀಳದ ತೀರ್ಮಾನ
ಮರು ತನಿಖೆಗೆ ಸಂಬಂಧಿಸಿದಂತೆ ಸೃಜಿಸಿದ್ದ ಕಡತವು 18 ತಿಂಗಳಿನಿಂದಲೂ ತೆವಳುತ್ತಲೇ ಇತ್ತು.
ಸೌಜನ್ಯ ಕೊಲೆ ಮರು ತನಿಖೆ; ಸಿಐಡಿ ಡಿಜಿಪಿ ಸಲೀಂ ಅವರ ಅಭಿಪ್ರಾಯ ವರದಿ ಬಹಿರಂಗ
ಮರು ತನಿಖೆ ಕುರಿತು ಸಿಐಡಿ ಡಿಜಿಪಿ ಸಲೀಂ ಅವರು ಸರ್ಕಾರಕ್ಕೆ ಅಭಿಪ್ರಾಯ ನೀಡಿದ್ದರು.
ಸೌಜನ್ಯ ಹತ್ಯೆ ಮರು ತನಿಖೆ; ಅಡ್ವೋಕೇಟ್ ಜನರಲ್ ಕಚೇರಿಯಿಂದ ಬಾರದ ಕಾನೂನು ಅಭಿಪ್ರಾಯ!
ಮರು ತನಿಖೆ ನಡೆಸಬೇಕು ಎಂಬ ಕುರಿತು ಅಡ್ವೋಕೇಟ್ ಜನರಲ್ ಅವರ ಕಚೇರಿಯಿಂದ ಅಭಿಪ್ರಾಯವೇ ಸರ್ಕಾರಕ್ಕೆ ಬಂದಿರಲಿಲ್ಲ.
ಸೌಜನ್ಯ ಶವ ಪರೀಕ್ಷೆ; ಡಾ ರಶ್ಮಿ ವಿರುದ್ಧ ನಡೆಯದ ಇಲಾಖೆ ವಿಚಾರಣೆ, ಸೇವೆಗೆ ಅನಧಿಕೃತ ಗೈರಾಗಿದ್ದೇಕೆ?
ಸೌಜನ್ಯ ಶವ ಪರೀಕ್ಷೆ ಕುರಿತು ಡಾ ರಶ್ಮಿ ಅವರ ವಿರುದ್ಧ ಇಲಾಖೆ ವಿಚಾರಣೆ ನಡೆದಿರಲಿಲ್ಲ.
ಸೌಜನ್ಯ ಪ್ರಕರಣ; ಮರು ವಿಚಾರಣೆ ನಡೆಸಿದರೂ ಆರೋಪಗಳು ರುಜುವಾತಾಗುವುದು ಕಷ್ಟವೆಂದಿದ್ದ ಇಲಾಖೆ
ಸೌಜನ್ಯ ಪ್ರಕರಣದಲ್ಲಿ ಮರು ವಿಚಾರಣೆ ನಡೆಸಿದರೂ ಆರೋಪಗಳು ರುಜುವಾತು ಆಗುವುದು ಕಷ್ಟ ಎಂದು ಹಿಂದಿನ ಬಿಜೆಪಿ ಸರ್ಕಾರವೇ ಹೇಳಿತ್ತು.
ಸೌಜನ್ಯ ಕೊಲೆ; ಆದಂ ಉಸ್ಮಾನ್, ಡಾ ಎನ್ ರಶ್ಮಿ ವಿರುದ್ಧ ಕಠಿಣ ದಂಡನೆ, ಸಿಬಿಐ ಶಿಫಾರಸ್ಸು ಪತ್ರ ಮುಚ್ಚಿಟ್ಟಿದೆಯೇ?
ಸೌಜನ್ಯ ಪ್ರಕರಣದಲ್ಲಿ ಆದಂ ಉಸ್ಮಾನ್ ಮತ್ತು ಡಾ ಎನ್ ರಶ್ಮಿ ವಿರುದ್ಧ ಕಠಿಣ ದಂಡನೆ ವಿಧಿಸಬೇಕು ಎಂದು ಮಾಡಿದ್ದ ಸಿಬಿಐ ಪತ್ರವನ್ನು ಸರ್ಕಾರವು ಮುಚ್ಚಿಟ್ಟಿತ್ತು.
ಸೌಜನ್ಯ ಕೊಲೆ; ಕಡತ ಸಾರ್ವಜನಿಕಗೊಳಿಸಬಹುದೇ, ಸಿಬಿಐ ಅಭಿಪ್ರಾಯ ಕೋರಿದ ಸರ್ಕಾರ
ಸಿಬಿಐ ಬರೆದಿದ್ದ ಪತ್ರದ ಕುರಿತು ಸರ್ಕಾರವು ತೆರೆದಿದ್ದ ಕಡತವನ್ನು ಸಾರ್ವಜನಿಕವಾಗಿ ಮತ್ತು ಆರ್‍ಟಿಐ ಅಡಿ ಬಹಿರಂಗಗೊಳಿಸಬಹುದೇ ಎಂದು ಸರ್ಕಾರವು ಸಿಬಿಐ ಬಾಗಿಲು ತಟ್ಟಿತ್ತು.
ಸೌಜನ್ಯ ಕೊಲೆ; ಮರಣೋತ್ತರ ಪರೀಕ್ಷೆಯಲ್ಲಿ ವೈದ್ಯರ ಲೋಪ, ಸಿಬಿಐ ‘ಗೌಪ್ಯ’ ಪತ್ರ ಬಯಲು
ಸೌಜನ್ಯ ಮರಣೋತ್ತರ ಪರೀಕ್ಷೆಯಲ್ಲಿ ವೈದ್ಯರ ಲೋಪದಲ್ಲಿ ಸಿಬಿಐ ತನಿಖೆ ಅಂಶಗಳನ್ನೇ ಇಲಾಖೆ ವಿಚಾರಣೆಯು ತಳ್ಳಿ ಹಾಕಿತ್ತು.
ಸೌಜನ್ಯ ಮರಣೋತ್ತರ ಪರೀಕ್ಷೆಯಲ್ಲಿ ವೈದ್ಯರ ಲೋಪ; ಸಿಬಿಐ ತನಿಖೆ ಅಂಶಗಳನ್ನೇ ತಳ್ಳಿ ಹಾಕಿದ ಇಲಾಖೆ ವಿಚಾರಣೆ
ಧರ್ಮಸ್ಥಳದ 17 ವರ್ಷದ ಬಾಲಕಿ ಸೌಜನ್ಯಾಳ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು CBI ನಿರ್ವಹಿಸಿದ ‘ಕಳಪೆ’ ಮತ್ತು ‘ಸ್ವತಂತ್ರವಲ್ಲದ’ ರೀತಿಯನ್ನು ಸರ್ವೋಚ್ಚ ನ್ಯಾಯಾಲಯವು ಬುಧವಾರ ತೀವ್ರವಾಗಿ ತರಾಟೆಗೆತ್ತಿಕೊಂಡಿತ್ತು. ಇದೇ ವೇಳೆ, ಪ್ರಕರಣದ ಸಮಗ್ರ ಮರುತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (SIT) ರಚಿಸಲು ಕರ್ನಾಟಕ ಸರ್ಕಾರಕ್ಕೆ ಅನುಮತಿ ನೀಡುವ ಸುಳಿವನ್ನು 2026ರ ಜುಲೈನಲ್ಲೇ ನೀಡಿತ್ತು.
ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಸಂಜೀವ್ ಸಚದೇವ ಅವರ ಪೀಠವು, ಪ್ರಕರಣವನ್ನು CBIಗೆ ವಹಿಸಿದ್ದರೂ ಆರೋಪಿಯನ್ನು ಖುಲಾಸೆಗೊಳಿಸಿರುವ ಹಿನ್ನೆಲೆಯಲ್ಲಿ ಹೊಸದಾಗಿ ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಯ ಕುರಿತು ತನ್ನ ತೀರ್ಪನ್ನು ಕಾಯ್ದಿರಿಸಿತ್ತು.
ವಾಸ್ತವದಲ್ಲಿ ಸಿಬಿಐ ತನಿಖಾಧಿಕಾರಿ ಸ್ವತಃ ನ್ಯಾಯಾಧೀಶರಂತೆ ವರ್ತಿಸಿದ್ದಾರೆ. ಅವರು ಹಿಂದೆ ಸಂಗ್ರಹಿಸಲಾದ ಸಾಕ್ಷ್ಯಾಧಾರಗಳನ್ನು ನೋಡಿ ತಮ್ಮ ವರದಿಯನ್ನು ನೀಡಿದ್ದಾರೆಯೇ ಹೊರತು, ಯಾವುದೇ ಸ್ವತಂತ್ರ ತನಿಖೆಯನ್ನು ನಡೆಸಿಲ್ಲ’ ಎಂದು ಪ್ರಕರಣದ ವಿವರಗಳನ್ನು ಪರಿಶೀಲಿಸಿದ ನಂತರ ಪೀಠವು ಕುಟುಕಿತ್ತು.
ಘಟನಾ ಸ್ಥಳಕ್ಕೆ ಭೇಟಿ ನೀಡುವಲ್ಲಿ ಮತ್ತು ಸೌಜನ್ಯಾರ ತಾಯಿಯ ಹೇಳಿಕೆಯನ್ನು ದಾಖಲಿಸಿಕೊಳ್ಳುವಲ್ಲಿಯೂ CBIನ ವೈಫಲ್ಯದ ಬಗ್ಗೆ ನ್ಯಾಯಾಲಯವು ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ‘ಇದು ಸಿಬಿಐ ನ ಅತ್ಯಂತ ಕಳಪೆ ಕಾರ್ಯವೈಖರಿಯನ್ನು ಪ್ರತಿಬಿಂಬಿಸುತ್ತದೆ. ಬಾಲಕಿಯೊಬ್ಬಳ ಮೇಲೆ ಅತ್ಯಂತ ಕ್ರೂರವಾಗಿ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ’ ಎಂದು ಪೀಠವು ಬೆಟ್ಟು ಮಾಡಿತ್ತು.
ಅರ್ಜಿದಾರರ ಪರ ಹಿರಿಯ ವಕೀಲರಾದ ಶೋಭಾ ಗುಪ್ತಾ, ಆನಂದ್ ಸಂಜಯ್ ಎಂ. ನುಲಿ ಮತ್ತು ಶೇಖರ್ ಜಿ. ದೇವಸ ಅವರು, ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರ ನೇತೃತ್ವದ ಸ್ವತಂತ್ರ SIT ಮೂಲಕ ಹೊಸದಾಗಿ ತನಿಖೆ ನಡೆಸಬೇಕು ಎಂದು ಬಲವಾಗಿ ಒತ್ತಾಯಿಸಿದರು. ರಾಜ್ಯ ಪೊಲೀಸ್, ಸಿಐಡಿ ಮತ್ತು CBIನಿಂದ ಆಗಿರುವ ಗಂಭೀರ ಲೋಪಗಳನ್ನು ಅವರು ಎತ್ತಿ ತೋರಿಸಿದ್ದರು.
ಕರ್ನಾಟಕದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆವಿಷ್ಕಾರ್ ಸಿಂಘ್ವಿ ಅವರು, ಆರಂಭಿಕ ರಾಜ್ಯ ಪೊಲೀಸ್ ತನಿಖೆಯಿಂದ ಹಿಡಿದು ಸಿಐಡಿ ಮತ್ತು ಅಂತಿಮವಾಗಿ CBIವರೆಗೆ ನಡೆದ ತನಿಖೆಯ ಅನುಕ್ರಮಣಿಕೆಯನ್ನು ನ್ಯಾಯಾಲಯಕ್ಕೆ ವಿವರಿಸಿದ್ದರು. ಮರುತನಿಖೆಯನ್ನು ವಿರೋಧಿಸಿದ ಸಿಬಿಐ ಪರ ವಕೀಲರು, ತನಿಖಾ ಸಂಸ್ಥೆಯು 2013ರಲ್ಲಿ ಪ್ರಕರಣವನ್ನು ಕೈಗೆತ್ತಿಕೊಂಡು 2015ರಲ್ಲಿ ದೋಷಾರೋಪ ಪಟ್ಟಿಯನ್ನು ಸಲ್ಲಿಸಿತ್ತು ಹಾಗೂ ವಿಚಾರಣೆ ಪೂರ್ಣಗೊಂಡ ನಂತರ ಮತ್ತೆ ಹೊಸದಾಗಿ ತನಿಖೆ ನಡೆಸುವುದು ಅಪರಾಧ ದಂಡಸಂಹಿತೆಯ ನಿಯಮಗಳಿಗೆ ಧಕ್ಕೆ ತರುತ್ತದೆ ಎಂದು ವಾದಿಸಿದ್ದರು.
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಪೀಠವು, ‘12 ವರ್ಷಗಳ ನಂತರ ಯಾವುದೇ ಪುರಾವೆಗಳನ್ನು ಹುಡುಕಲು CBIಗೆ ಸಾಮರ್ಥ್ಯವಿಲ್ಲ ಎಂದು ನೀವು ಹೇಳುತ್ತಿದ್ದೀರಾ?’ ಎಂದು ಕಟುವಾಗಿ ಪ್ರಶ್ನಿಸಿತ್ತು.
ಪ್ರಕರಣದಲ್ಲಿ ಸಿಬಿಐ ಅನ್ನು ಇನ್ನು ಮುಂದೆ ನಂಬಲು ಸಾಧ್ಯವಿಲ್ಲ ಎಂದು ಸೂಚಿಸಿದ ಪೀಠವು, ‘ಸ್ಪಷ್ಟವಾಗಿ ಸಿಬಿಐ ಈ ಪ್ರಕರಣದಿಂದ ಹೊರಗುಳಿಯಲಿದೆ. ರಾಜ್ಯ ಸರ್ಕಾರವೇ ತನಿಖೆ ನಡೆಸುವುದು ಉತ್ತಮ’ ಎಂದು ಅಭಿಪ್ರಾಯಪಟ್ಟಿತು.ರಾಜ್ಯ ಸರ್ಕಾರವು ಸಾಕ್ಷಿಗಳಿಗೆ ರಕ್ಷಣೆ ಒದಗಿಸಿತ್ತು ಮತ್ತು ಅವರ ಪೈಕಿ ಹಲವು ಸಾಕ್ಷಿಗಳು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿರುವುದನ್ನೂ ನ್ಯಾಯಾಲಯವು ಗಮನಕ್ಕೆ ತೆಗೆದುಕೊಂಡಿತ್ತು. ಪೀಠವು ತನ್ನ ತೀರ್ಪನ್ನು ಕಾಯ್ದಿರಿಸಿದ್ದು, ಅಂತಿಮ ಆದೇಶ ಹೊರಡಿಸಿದ ನಂತರ ಪಾಲನಾ ವರದಿಯನ್ನು ಕೋರುವ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿತ್ತು.




