ಬೆಂಗಳೂರು; ಗೃಹ ಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ 2025ರ ಫೆಬ್ರುವರಿ ಮತ್ತು ಮಾರ್ಚ್ ತಿಂಗಳಲ್ಲಿ ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡದೇ ಇರಲು ಆರ್ಥಿಕ ನಿರ್ಬಂಧವೇ ಕಾರಣ. ಹೀಗಾಗಿ ಅನುದಾನವನ್ನು ಬಿಡುಗಡೆ ಮಾಡಿಲ್ಲ ಎಂದು ರಾಜ್ಯ ಸರ್ಕಾರವೇ ಹೆಚ್ಚುವರಿ ಸರ್ಕಾರಿ ವಕೀಲರ ಮೂಲಕ ಹೈಕೋರ್ಟ್‌ಗೆ ಆಕ್ಷೇಪಣೆ ಹೇಳಿಕೆ ಸಲ್ಲಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ಅಷ್ಟೇ ಅಲ್ಲ, ನೈಜ ಆರ್ಥಿಕ ನಿರ್ಬಂಧಗಳ ಕಾರಣದಿಂದಾಗಿ ರಾಜ್ಯ ಸರ್ಕಾರಕ್ಕೆ ಆರ್ಥಿಕ ನೆರವನ್ನು ವಿತರಿಸಲು ಸಾಧ್ಯವಾಗದ ಸಂದರ್ಭದಲ್ಲಿ, ನ್ಯಾಯಸಮ್ಮತ ನಿರೀಕ್ಷೆಯ (Legitimate Expectation) ಆಧಾರದ ಮೇಲೆ ಅಂತಹ ಆರ್ಥಿಕ ನೆರವನ್ನು ಪಡೆಯುವ ಹಕ್ಕನ್ನು ಅರ್ಜಿದಾರರು ಪ್ರತಿಪಾದಿಸಲು ಸಾಧ್ಯವಿಲ್ಲ ಎಂದು ಆಕ್ಷೇಪಣೆ ಹೇಳಿಕೆಯಲ್ಲಿ ಹೇಳಿರುವುದು ಸಹ ಗಂಭೀರ ಚರ್ಚೆಗೊಳಗಾಗಿದೆ.
2024-25ನೇ ಸಾಲಿನಲ್ಲಿ ಇದೇ ಯೋಜನೆಗೆ ಸಂಬಂಧಿಸಿದಂತೆ 2,660.26 ಕೋಟಿ ರು ಅನುದಾನ ಬಿಡುಗಡೆ ಮಾಡಲು ಸಹಮತಿಸಿದ್ದ ಆರ್ಥಿಕ ಇಲಾಖೆಯ ಬಳಿ ಕಡತವೇ ಇಲ್ಲ ಎಂದು ದಿ ಫೈಲ್ ಗೆ ಆರ್‍ಟಿಐ ನಲ್ಲಿ ಇಲಾಖೆಯು ಉತ್ತರ ನೀಡಿದ್ದರ ಬೆನ್ನಲ್ಲೇ ಇದೀಗ ಸರ್ಕಾರವೇ ಹೈಕೋರ್ಟ್‌ನಲ್ಲಿ ಆರ್ಥಿಕ ನಿರ್ಬಂಧಗಳ ಕಾರಣದಿಂದಾಗಿ ಯೋಜನೆಗೆ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಹೇಳಿರುವುದು ಮುನ್ನೆಲೆಗೆ ಬಂದಿದೆ.
ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಬಾಕಿ ಇರುವ ಹಣದ ಮೊತ್ತವನ್ನು ಬಿಡುಗಡೆ ಮಾಡುವಂತೆ ಪ್ರತಿವಾದಿ ರಾಜ್ಯ ಸರ್ಕಾರ ಮತ್ತು ಸಂಬಂಧಿಸಿದ ಸಕ್ಷಮ ಪ್ರಾಧಿಕಾರಗಳಿಗೆ ನಿರ್ದೇಶನ ನೀಡಬೇಕು ಎಂದು ಗಂಗಾ ಎಂಬುವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್ ಮುಂದೆ ರಾಜ್ಯದ ಹೆಚ್ಚುವರಿ ಸರ್ಕಾರಿ ವಕೀಲರು ಅವರು ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಆರ್ಥಿಕ ನಿರ್ಬಂಧ ಪದ ಬಳಕೆ ಮಾಡುವ ಮೂಲಕ ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿಯನ್ನು ತೆರೆದಿಟ್ಟಿರುವುದು ಪ್ರತಿಪಕ್ಷಗಳಿಗೆ ಮತ್ತೊಂದು ಪ್ರಬಲ ಅಸ್ತ್ರವೊಂದನ್ನು ನೀಡಿದಂತಾಗಿದೆ.
ಸರ್ಕಾರದ ಆಕ್ಷೇಪಣೆ ಹೇಳಿಕೆಯಲ್ಲೇನಿದೆ?
ಕರ್ನಾಟಕ ಉಚ್ಚ ನ್ಯಾಯಾಲಯದ ಕಲಾಪಗಳ ನಿಯಮಾವಳಿಗಳ ನಿಯಮ 21ರ ಅಡಿಯಲ್ಲಿ, ಮೇಲ್ಕಂಡ ಪ್ರಕರಣದ ಪ್ರತಿವಾದಿಗಳಾದ ನಾವು, ಮೇಲಿನ ರಿಟ್ ಅರ್ಜಿಗೆ ಸಂಬಂಧಿಸಿದಂತೆ ಈ ಕೆಳಗಿನಂತೆ ಆಕ್ಷೇಪಣೆಗಳ ಹೇಳಿಕೆಯನ್ನು ರಾಜ್ಯ ಸರ್ಕಾರದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಅವರು ಸಲ್ಲಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಬಾಕಿ ಇರುವ ಹಣದ ಮೊತ್ತವನ್ನು ಬಿಡುಗಡೆ ಮಾಡುವಂತೆ ಪ್ರತಿವಾದಿಗಳಿಗೆ ನಿರ್ದೇಶನ ನೀಡಬೇಕೆಂದು ಅರ್ಜಿದಾರರು ಕೋರಿದ್ದಾರೆ ಎಂದು ಸಲ್ಲಿಸಲಾಗಿದೆ. ಅಲ್ಲದೆ, ಇತರ ಪರಿಹಾರಗಳನ್ನೂ ಕೋರಿದ್ದಾರೆ. ಈ ಅರ್ಜಿಯು ಕಾನೂನಿನ ದೃಷ್ಟಿಯಿಂದಾಗಲಿ ಅಥವಾ ವಾಸ್ತವಾಂಶಗಳ ಆಧಾರದ ಮೇಲೆಯಾಗಲಿ ವಿಚಾರಣೆಗೆ ಯೋಗ್ಯವಾಗಿರುವುದಿಲ್ಲ. ಆದ್ದರಿಂದ, ಸದರಿ ಅರ್ಜಿಯನ್ನು ಪ್ರಾಥಮಿಕ ಹಂತದಲ್ಲಿಯೇ ವಜಾಗೊಳಿಸಲು ಅರ್ಹವಾಗಿದೆ ಎಂದು ಹೇಳಿಕೆಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ರಾಜ್ಯ ಸರ್ಕಾರವು 2023ರ ಮೇ 20ರಂದು ಆದೇಶದ ಮೂಲಕ ಕುಟುಂಬದ ಮಹಿಳಾ ಮುಖ್ಯಸ್ಥೆಗೆ ಆರ್ಥಿಕ ನೆರವು ಒದಗಿಸಲು ಆಡಳಿತಾತ್ಮಕ ಅನುಮೋದನೆ ನೀಡಿದೆ. ಪ್ರತಿ ತಿಂಗಳು ರೂ.2,000/- ಮೊತ್ತವನ್ನು ನೀಡಲು ಮಂಜೂರಾತಿ ನೀಡಿದೆ ಎಂದು ಸಲ್ಲಿಸಲಾಗಿದೆ. ಅದರಂತೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು 2023ರ ಜೂನ್ 6ರಂದು ಈ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು ಸರ್ಕಾರಿ ಆದೇಶವನ್ನು ಹೊರಡಿಸಲಾಗಿದೆ. ಇದಾದ ನಂತರ 2023ರ ಜುಲೈ 17ರಂದು ಸರ್ಕಾರಿ ಆದೇಶದ ಮೂಲಕ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ ಎಂದು ಆಕ್ಷೇಪಣೆ ಹೇಳಿಕೆಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

ಅದರಂತೆ, ಗೃಹಲಕ್ಷ್ಮಿ ಯೋಜನೆಗೆ ಅರ್ಜಿದಾರರ ನೋಂದಣಿ ಪ್ರಕ್ರಿಯೆಯು ನಿರಂತರವಾಗಿ ನಡೆಯುತ್ತಿದೆ. ಈ ಯೋಜನೆಯಡಿ ನೋಂದಾಯಿತರಾಗಿರುವ ಫಲಾನುಭವಿಗಳ ಮಾಹಿತಿಯನ್ನು ಪ್ರತಿ ತಿಂಗಳು ಎಲೆಕ್ಟ್ರಾನಿಕ್ ಡೆಲಿವರಿ ಆಫ್ ಸಿಟಿಜನ್ ಸರ್ವಿಸ್ (Electronic Delivery of Citizen Service) ಮೂಲಕ ಪಡೆಯಲಾಗುತ್ತದೆ. ನಂತರ ನೀಡಬೇಕಾದ ಅನುದಾನದ ಮೊತ್ತವನ್ನು ಅಂದಾಜಿಸಿ, ಹಣಕಾಸು ಇಲಾಖೆಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗುತ್ತದೆ. ಹಣಕಾಸು ಇಲಾಖೆಯು ಅನುದಾನವನ್ನು ಬಿಡುಗಡೆ ಮಾಡಿದ ನಂತರ, ನೇರ ಫಲಾನುಭವಿ ವರ್ಗಾವಣೆ (Direct Beneficiary Transfer – DBT) ಮೂಲಕ ಫಲಾನುಭವಿಗಳಿಗೆ ಹಣ ಪಾವತಿಸಲಾಗುತ್ತದೆ.
‘ಫೆಬ್ರವರಿ ಮತ್ತು ಮಾರ್ಚ್ 2025ರ ತಿಂಗಳುಗಳಿಗೆ ಸಂಬಂಧಿಸಿದಂತೆ ಹಣಕಾಸು ಇಲಾಖೆಗೆ ಅನುದಾನ ಬಿಡುಗಡೆ ಮಾಡುವ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು ಎಂದು ಸಲ್ಲಿಸಲಾಗಿದೆ. ಆದರೆ, ಆರ್ಥಿಕ ನಿರ್ಬಂಧಗಳ ಕಾರಣದಿಂದಾಗಿ ಹಣಕಾಸು ಇಲಾಖೆಯು ಅನುದಾನವನ್ನು ಬಿಡುಗಡೆ ಮಾಡಲಿಲ್ಲ. ಹೀಗಾಗಿ, ಈ ಎರಡು ತಿಂಗಳುಗಳಿಗೆ ಸಂಬಂಧಿಸಿದ ಆರ್ಥಿಕ ನೆರವನ್ನು ಪಾವತಿಸಲಾಗಿಲ್ಲ,’ ಎಂದು ಆಕ್ಷೇಪಣೆ ಹೇಳಿಕೆಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಅರ್ಜಿದಾರರೇ ಸದರಿ ಜನಪರ ಯೋಜನೆಯ ಫಲಾನುಭವಿಗಳಾಗಿದ್ದಾರೆ ಎಂದು ಸಲ್ಲಿಸಲಾಗಿದೆ. ಈ ಅರ್ಜಿಯು ಸಾರ್ವಜನಿಕ ಹಿತಾಸಕ್ತಿಯ ಸ್ವರೂಪವನ್ನು ಹೊಂದಿದೆ. ಅರ್ಜಿದಾರರು ಈ ಯೋಜನೆಯಡಿ ನೋಂದಾಯಿಸಿಕೊಂಡಿರುವ ಇತರ ಎಲ್ಲ ಫಲಾನುಭವಿಗಳ ಪರವಾಗಿ ಹೋರಾಡಲು ಪ್ರಯತ್ನಿಸುತ್ತಿದ್ದಾರೆ. ಅಂತಹ ಫಲಾನುಭವಿಗಳ ಸಂಖ್ಯೆ ಅಂದಾಜು 1.24 ಕೋಟಿಗಳಷ್ಟಿದೆ. ಇಂತಹ ಅರ್ಜಿಯನ್ನು ಪ್ರತಿನಿಧಿಕ ಸಾಮರ್ಥ್ಯದಲ್ಲಿ (Representative Capacity) ಸಲ್ಲಿಸಲಾಗಿದ್ದು, ಅದು ವಿಚಾರಣೆಗೆ ಯೋಗ್ಯವಾಗಿರುವುದಿಲ್ಲ ಎಂದು ಹೇಳಿರುವುದು ತಿಳಿದು ಬಂದಿದೆ.
ಇಬ್ಬರೂ ಅರ್ಜಿದಾರರಿಗೆ ಆರ್ಥಿಕ ನೆರವು ದೊರೆತಿರುವುದನ್ನು ಸಾಬೀತುಪಡಿಸುವ ಸಲುವಾಗಿ, ಅವರಿಬ್ಬರ ಗೃಹಲಕ್ಷ್ಮಿ ಪಾವತಿ ಸ್ಥಿತಿಗೆ ಸಂಬಂಧಿಸಿದ ಅರ್ಜಿ ಟ್ರ್ಯಾಕರ್‌ನ ವಿವರಗಳನ್ನು ಇಲ್ಲಿ ಸಲ್ಲಿಸಲಾಗಿದ್ದು, ಅವುಗಳನ್ನು ಅನುಬಂಧ-R1 ಮತ್ತು R2 (ANNEXURE-R1 AND R2) ಎಂದು ಗುರುತಿಸಲಾಗಿದೆ. ಕುಟುಂಬದ ಮಹಿಳಾ ಮುಖ್ಯಸ್ಥೆಯನ್ನು ಸಬಲೀಕರಣಗೊಳಿಸುವ ಉದ್ದೇಶವನ್ನು ಹೊಂದಿರುವ ಜನಪರ ಯೋಜನೆಯೊಂದನ್ನು ಜಾರಿಗೊಳಿಸಲಾಗಿದೆ. ಕುಟುಂಬದ ಸಬಲೀಕರಣದ ಜೊತೆಗೆ ಮಹಿಳೆಯರ ಸಬಲೀಕರಣವನ್ನೂ ಖಚಿತಪಡಿಸುವ ಉದ್ದೇಶವನ್ನು ಈ ಯೋಜನೆಯು ಹೊಂದಿದೆ. ಈ ಯೋಜನೆಯ ಅನುಷ್ಠಾನವು ಬಹುಮಟ್ಟಿಗೆ ಆಡಳಿತಾತ್ಮಕ ಅನಿವಾರ್ಯತೆಗಳ ಮೇಲೆ ಅವಲಂಬಿತವಾಗಿರುತ್ತದೆ.

‘ಆದ್ದರಿಂದ, ಫಲಾನುಭವಿಗಳು ಇದನ್ನು ತಮ್ಮ ಕಾನೂನುಬದ್ಧ ಹಕ್ಕು ಎಂದು ಪ್ರತಿಪಾದಿಸಲು ಅಥವಾ ನ್ಯಾಯಾಂಗದ ಮಧ್ಯಪ್ರವೇಶದ ಮೂಲಕ ಸದರಿ ಯೋಜನೆಯನ್ನು ಜಾರಿಗೊಳಿಸುವಂತೆ ಒತ್ತಾಯಿಸಲು ಸಾಧ್ಯವಿಲ್ಲ,’ ಎಂದು ವಿವರಿಸಿರುವುದು ಗೊತ್ತಾಗಿದೆ.
ಆರ್ಥಿಕ ನೆರವು ಒದಗಿಸುವ ಜನಪರ ಯೋಜನೆಯ ಅಸ್ತಿತ್ವವು ಮಾತ್ರವೇ ಅರ್ಜಿದಾರರಿಗೆ ಅಂತಹ ಆರ್ಥಿಕ ನೆರವನ್ನು ಪಡೆಯುವ ಯಾವುದೇ ಬದಲಾಯಿಸಲಾಗದ ಕಾನೂನುಬದ್ಧ ಹಕ್ಕನ್ನು (Indefeasible Right) ನೀಡುವುದಿಲ್ಲ ಎಂದು ಸಲ್ಲಿಸಲಾಗಿದೆ. ವಿಶೇಷವಾಗಿ, ನೈಜ ಆರ್ಥಿಕ ನಿರ್ಬಂಧಗಳ ಕಾರಣದಿಂದಾಗಿ ರಾಜ್ಯ ಸರ್ಕಾರಕ್ಕೆ ಆರ್ಥಿಕ ನೆರವನ್ನು ವಿತರಿಸಲು ಸಾಧ್ಯವಾಗದ ಸಂದರ್ಭದಲ್ಲಿ, ನ್ಯಾಯಸಮ್ಮತ ನಿರೀಕ್ಷೆಯ (Legitimate Expectation) ಆಧಾರದ ಮೇಲೆ ಅಂತಹ ಆರ್ಥಿಕ ನೆರವನ್ನು ಪಡೆಯುವ ಹಕ್ಕನ್ನು ಅರ್ಜಿದಾರರು ಪ್ರತಿಪಾದಿಸಲು ಸಾಧ್ಯವಿಲ್ಲ.
ಜನಪರ ಯೋಜನೆಯಡಿ ಆರ್ಥಿಕ ನೆರವನ್ನು ಪಡೆಯುವುದನ್ನು ಅರ್ಜಿದಾರರು ತಮ್ಮ ಕಾನೂನುಬದ್ಧ ಹಕ್ಕು ಎಂದು ಪ್ರತಿಪಾದಿಸಲು ಸಾಧ್ಯವಿಲ್ಲ. ಅಂತೆಯೇ, ಕೇವಲ ನ್ಯಾಯಸಮ್ಮತ ನಿರೀಕ್ಷೆಯ ಸಿದ್ಧಾಂತದ (Doctrine of Legitimate Expectation) ಆಧಾರದ ಮೇಲೆಯೇ ಇಂತಹ ಹಕ್ಕನ್ನು ಸ್ಥಾಪಿಸಲು ಸಾಧ್ಯವಿಲ್ಲ. ಈ ಆಧಾರದ ಮೇಲೆ ಮಾತ್ರ ಅಂತಹ ಹಕ್ಕನ್ನು ಜಾರಿಗೊಳಿಸಲು ಸಾಧ್ಯವಿಲ್ಲ. ಆದ್ದರಿಂದ, ಈ ರಿಟ್ ಅರ್ಜಿಯನ್ನು ವಜಾಗೊಳಿಸಲು ಅರ್ಹವಾಗಿದೆ ಎಂದು ಮನವರಿಕೆ ಮಾಡಿಕೊಡಲು ಯತ್ನಿಸಿರುವುದು ಗೊತ್ತಾಗಿದೆ.

‘ಇಲ್ಲಿ ನಿರ್ದಿಷ್ಟವಾಗಿ ನಿರಾಕರಿಸದಿರುವ ಇತರ ಎಲ್ಲ ಆರೋಪಗಳು ಮತ್ತು ಹೇಳಿಕೆಗಳನ್ನು ಸುಳ್ಳು ಹಾಗೂ ಆಧಾರರಹಿತವೆಂದು ಈ ಮೂಲಕ ನಿರಾಕರಿಸಲಾಗಿದೆ. ಆದ್ದರಿಂದ ನ್ಯಾಯ ಮತ್ತು ಸಮಾನತೆಯ ಹಿತದೃಷ್ಟಿಯಿಂದ, ಮೇಲ್ಕಂಡ ರಿಟ್ ಅರ್ಜಿಯನ್ನು ವಜಾಗೊಳಿಸುವಂತೆ ಈ ಮಾನ್ಯ ನ್ಯಾಯಾಲಯವು ದಯಪಾಲಿಸಬೇಕು,’ ಎಂದು ಕೋರಿರುವುದು ತಿಳಿದು ಬಂದಿದೆ.
ಗೃಹಲಕ್ಷ್ಮಿ ಯೋಜನೆಗೆ ಅನುದಾನ ಬಿಡುಗಡೆ ಮಾಡಲು ಸಹಮತಿಸಿದ್ದ ಆರ್ಥಿಕ ಇಲಾಖೆಯ ಬಳಿ ಕಡತವೇ ಇಲ್ಲ ಎಂದು ಆರ್‍ಟಿಐನಲ್ಲಿ ಆರ್ಥಿಕ ಇಲಾಖೆಯೇ ಉತ್ತರಿಸಿದ್ದನ್ನು ಸ್ಮರಿಸಬಹುದು.




