Monday | June 22, 2026 |

ಅನುದಾನರಹಿತ ಶಾಲೆಗಳ ಅನಗತ್ಯ ವಿಸ್ತರಣೆ, ಅನುದಾನರಹಿತ ಶಿಕ್ಷಕರಿಗೆ ಉದ್ಯೋಗ ಭದ್ರತೆಯಿಲ್ಲ; ಶಾಲಾ ಶಿಕ್ಷಣ ಖಾಸಗೀಕರಣ ಅನಾವರಣ, ಸಾಂವಿಧಾನಿಕ ಬಾಧ್ಯತೆಯಿಂದ ತಪ್ಪಿಸಿಕೊಳ್ಳುತ್ತಿದೆಯೇ ಸರ್ಕಾರ?

ಬೆಂಗಳೂರು; ಅನುದಾನ ರಹಿತ ಖಾಸಗಿ ಶಾಲೆಗಳ ಅನಗತ್ಯ ವಿಸ್ತರಣೆಯಾಗುತ್ತಿರುವುದಕ್ಕೆ ರಾಜ್ಯ ಶಿಕ್ಷಣ ನೀತಿ ಆಯೋಗವು ಗಂಭೀರವಾಗಿ ಕಳವಳ ವ್ಯಕ್ತಪಡಿಸಿದೆ. ಅಲ್ಲದೇ ಈ ವಿಚಾರದಲ್ಲಿ  ರಾಜ್ಯವು ತನ್ನ ಸಾಂವಿಧಾನಿಕ ಬಾಧ್ಯತೆಯಿಂದ ತಪ್ಪಿಸಿಕೊಳ್ಳುತ್ತಿದೆ.  ಪ್ರಸ್ತುತ ಶಾಲಾ ವ್ಯವಸ್ಥೆಯಲ್ಲಿನ ಖಾಸಗೀಕರಣದ ಏರಿಕೆ ಪ್ರವೃತ್ತಿಯನ್ನು ಹಿಮ್ಮೆಟ್ಟಿಸಬೇಕು. ರಾಜ್ಯವು ಎಲ್ಲಾ ಮಕ್ಕಳಿಗೆ ಸಮಾನ ಗುಣಮಟ್ಟದ ಉಚಿತ ಮತ್ತು ಕಡ್ಡಾಯ ಶಾಲಾ ಶಿಕ್ಷಣವನ್ನು ಖಾತ್ರಿ ಪಡಿಸಬೇಕು ಎಂದು ಸಲಹೆ ನೀಡಿದೆ.

ಅದಷ್ಟೇ ಅಲ್ಲ ಅನುದಾನರಹಿತವಾಗಿರುವ ಹಲವು ಶಾಲೆಗಳಲ್ಲಿ ಶಿಕ್ಷಕರು ಯಾವುದೇ ಉದ್ಯೋಗ ಭದ್ರತೆ ಇಲ್ಲದೇ ಕಡಿಮೆ ಸಂಬಳಕ್ಕೆ ಕೆಲಸ ಮಾಡಬೇಕಾಗಿದೆ. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಅನುದಾನರಹಿತ ಶಾಲೆಗಳನ್ನು ಕ್ರಮೇಣ ಖಾಸಗಿ ಅನುದಾನಿತ ಸಂಸ್ಥೆಗಳಾಗಿ ಪರಿವರ್ತಿಸಬೇಕು ಎಂದು ಸಲಹೆ ನೀಡಿದೆ.

ಸುಖ್‌ದೇವ್ ಥೋರಟ್ ನೇತೃತ್ವದ ರಾಜ್ಯ ಶಿಕ್ಷಣ ನೀತಿ ಆಯೋಗವು ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ, ಸಾರ್ವತ್ರಿಕ ಶಿಕ್ಷಣದ ವಿವಿಧ ಆಯಾಮಗಳ ಕುರಿತು ಆಯೋಗವು ಚರ್ಚಿಸಿದೆ. ಈ ವರದಿಯನ್ನು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ  ಅವಧಿಯಲ್ಲಿ  ಸಲ್ಲಿಸಿತ್ತು. ಈ ವರದಿ ಆಧರಿಸಿ ಅಭಿಪ್ರಾಯ ಕೋರಿದ್ದ ಸಿದ್ದರಾಮಯ್ಯ ಅವರು ಸಚಿವರಿಗೆ ವರದಿಗಳನ್ನು ಕಳಿಸಿದ್ದರು.

ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ  ನೂತನ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವ ಈಗಾಗಲೇ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರಾದರೂ ಆಯೋಗವು ನೀಡಿರುವ  ಈ ವರದಿಯತ್ತ ಇನ್ನೂ ಕಣ್ಣಾಡಿಸಿಲ್ಲ ಎಂದು ತಿಳಿದು ಬಂದಿದೆ.

ಈ ವರದಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಸಾಂವಿಧಾನಿಕ ಬದ್ಧತೆಗೆ ನೇರವಾಗಿ ತಡೆ

ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರದಿಂದ ಬೆಂಬಲವನ್ನು ಪಡೆಯುವುದು, ಭೂಮಿ ಪಡೆಯುವುದು, ಪರೀಕ್ಷೆಗಳನ್ನು ನಡೆಸುವುದು ಮತ್ತು ಪ್ರಮಾಣಪತ್ರಗಳನ್ನು ಪಡೆಯುವುದು ಸೇರಿದಂತೆ ಈ ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರದಿಂದ ಬೆಂಬಲವನ್ನು ಪಡೆದರೂ ಸಹ ಇವು ಸ್ಪಷ್ಟವಾಗಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯಿಂದ ಹೊರಗುಳಿದಿವೆ.   ಖಾಸಗಿ ಶಾಲೆಗಳ ಈ  ಬದಲಾವಣೆಯ ಪರಿಣಾಮವು ಎಲ್ಲರಿಗೂ ಸಮಾನ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಸಾಂವಿಧಾನಿಕ ಬದ್ಧತೆಗೆ ನೇರವಾಗಿ ತಡೆಯೊಡ್ಡುತ್ತದೆ. ಖಾಸಗಿ ಶಿಕ್ಷಣ ಕ್ಷೇತ್ರದ ಈ ವೇಗದ ಬೆಳವಣಿಗೆ ಮತ್ತು ಇದರಿಂದ ಸೃಷ್ಟಿಯಾದ ಅಸಮಾನತೆಯು ವ್ಯವಸ್ಥೆಯನ್ನು ಕಣ್ಣಿಗೆ ರಾಚುತ್ತಿದ್ದು  ಸೂಕ್ತ ನೀತಿ ನಿರೂಪಣೆ ಮೂಲಕ ತುರ್ತು ಪ್ರತಿಕ್ರಿಯೆ ನೀಡುವ ಅಗತ್ಯವಿದೆ ಎಂದು ಆಯೋಗವು ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

 

ಸೈದ್ಧಾಂತಿಕ ಮಟ್ಟದಲ್ಲಿ ಶಾಲಾ ಶಿಕ್ಷಣದ ಸಾರ್ವಜನಿಕ ಹಿತದೃಷ್ಟಿಯ ಬಗ್ಗೆ ಸ್ಪಷ್ಟವಾದ ಒಮ್ಮತವಿದೆ. ಆದ್ದರಿಂದ ಶಾಲಾ ಶಿಕ್ಷಣದ ಹಕ್ಕನ್ನು ಮಾನ್ಯ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಸಂವಿಧಾನವು 6ರಿಂದ 14 ವರ್ಷ ವಯೋಮಾನದ ಮಕ್ಕಳಿಗೆ ಶಿಕ್ಷಣವನ್ನು ಉಚಿತ ಮತ್ತು ಕಡ್ಡಾಯಗೊಳಿಸಿದೆ. ಆದ್ದರಿಂದ ಖಾಸಗಿ ಅನುದಾನರ ರಹಿತ ಶಾಲಾ ಶಿಕ್ಷಣ ವಿಸ್ತರಣೆಯನ್ನು ಕ್ರಮೇಣ ನಿರುತ್ಸಾಹಗೊಳಿಸಬೇಕೆಂದು ಆಯೋಗವು ಶಿಫಾರಸ್ಸು ಮಾಡಿರುವುದು ವರದಿಯಿಂದ ತಿಳಿದು ಬಂದಿದೆ.

ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಅನುದಾನರಹಿತ ಶಾಲೆಗಳನ್ನು ಕ್ರಮೇಣ ಖಾಸಗಿ ಅನುದಾನಿತ ಸಂಸ್ಥೆಗಳಾಗಿ ಪರಿವರ್ತಿಸಬೇಕು. ಈ ಮಾದರಿಯೊಂದಿಗೆ ಸಾರ್ವಜನಿಕ ಒಳಿತಿಗಾಗಿ ಶಿಕ್ಷಣವನ್ನು ಉತ್ತೇಜಿಸುವ ಬಯಕೆ ಮತ್ತು ಧ್ಯೇಯವನ್ನು ಪಾಲಿಸುವವರು ಲೋಕೋಪಕಾರಿ ಕ್ರಮದಲ್ಲಿ ಹಾಗೆ ಮಾಡುವ ಅವಕಾಶವನ್ನು ಹೊಂದಿರುತ್ತಾರೆ. ಅದೇ ವೇಳೆಗೆ ಸರ್ಕಾರದ ಭಾಗವಹಿಸುವಿಕೆಯು ಶಾಲಾ ಶಿಕ್ಷಣಕ್ಕೆ ಸಮಾನತೆಯ ಸ್ವರೂಪವನ್ನು ತರುತ್ತದೆ. ಮತ್ತು ಅಲ್ಲಿ ಅರ್ಥಿಕವಾಗಿ ಸಾಮಾಜಿಕವಾಗಿ ಹಿಂದುಳಿದ ಎಲ್ಲ ಗುಂಪುಗಳೂ ಶಾಲಾ ಶಿಕ್ಷಣಕ್ಕೆ ಸಮಾನ ಅವಕಾಶ ಹೊಂದಿರುತ್ತವೆ ಎಂದು ಆಯೋಗವು ವಿಶ್ಲೇಷಿಸಿದೆ.

 

 

ಶಾಲಾ ವ್ಯವಸ್ಥೆಯಲ್ಲಿನ ಖಾಸಗೀಕರಣದ ಏರಿಕೆ ಪ್ರವೃತ್ತಿ ಹಿಮ್ಮೆಟ್ಟಿಸಲಿ

ಸಂವಿಧಾನದ ನಿರ್ದೇಶಕ ತತ್ವಗಳು ಮತ್ತು ಆರ್‍‌ಟಿಇ ಕಾಯ್ದೆ 2009ರ ನಿಬಂಧನೆಗಳು 14ನೇ ವಯಸ್ಸಿನವರೆಗೆ ಎಲ್ಲ ಮಕ್ಕಳಿಗೂ ಉಚಿತ ಮತ್ತು ಗುಣಮಟ್ಟದ ಶಾಲಾ ಶಿಕ್ಷಣವನ್ನು ಒದಗಿಸುವುದು ರಾಜ್ಯದ ಜವಾಬ್ದಾರಿಯಾಗಿದೆ ಎಂದು ಸ್ಪಷ್ಟವಾಗಿ ಆದೇಶಿಸಿದೆ. ಈ ಸಂದರ್ಭದಲ್ಲಿ ಅನುದಾನ ರಹಿತ ಖಾಸಗಿ ಶಾಲೆಗಳ ಅನಗತ್ಯ ವಿಸ್ತರಣೆಯು ಗಂಭೀರ ಕಳವಳಕಾರಿ ವಿಷಯವಾಗಿದೆ. ರಾಜ್ಯವು ತನ್ನ ಸಾಂವಿಧಾನಿಕ ಬಾಧ್ಯತೆಯಿಂದ ತಪ್ಪಿಸಿಕೊಳ್ಳುತ್ತಿದೆ. ಪ್ರಸ್ತುತ ಶಾಲಾ ವ್ಯವಸ್ಥೆಯಲ್ಲಿನ ಖಾಸಗೀಕರಣದ ಏರಿಕೆ ಪ್ರವೃತ್ತಿಯನ್ನು ಹಿಮ್ಮೆಟ್ಟಿಸಬೇಕು. ರಾಜ್ಯವು ಎಲ್ಲಾ ಮಕ್ಕಳಿಗೆ ಸಮಾನ ಗುಣಮಟ್ಟದ ಉಚಿತ ಮತ್ತು ಕಡ್ಡಾಯ ಶಾಲಾ ಶಿಕ್ಷಣವನ್ನು ಖಾತ್ರಿ ಪಡಿಸಬೇಕು ಎಂದು ಆಯೋಗವು ಸಲಹೆ ನೀಡಿದೆ.

 

 

ಮಾಧ್ಯಮಿಕ-ಉನ್ನತ ಮಾಧ್ಯಮಿಕ ಹಂತಗಳಲ್ಲಿ ಹೆಚ್ಚಿನ ಹೂಡಿಕೆ ಇರಲಿ

ರಾಜ್ಯದ ಹಲವಾರು ಭಾಗಗಳಲ್ಲಿ ವಿಶ್ವಾಸಾರ್ಹ ಪರ್ಯಾಯ ವ್ಯವಸ್ಥೆ ಇಲ್ಲ.  ವಿಶೇಷವಾಗಿ ಮಾಧ್ಯಮಿಕ ಮತ್ತು  ಉನ್ನತ ಮಾಧ್ಯಮಿಕ ಹಂತಗಳಲ್ಲಿ ಖಾಸಗಿ ಅನುದಾನ ರಹಿತ ಸಾಲೆಗಳ ಮೇಲಿನ ಅವಲಂಬನೆ ಹೆಚ್ಚುತ್ತಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯವು ಮಾಧ್ಯಮಿಕ ಮತ್ತು ಉನ್ನತ ಮಾಧ್ಯಮಿಕ ಹಂತಗಳಲ್ಲಿ ಹೆಚ್ಚಿನ ಹೂಡಿಕೆ ಮಾಡಬೇಕು. ಇದರ ಜತೆಗೆ ಅನುದಾನ ಸಹಾಯ ಕಾರ್ಯಕ್ರಮದ ಆಶ್ರಯದಲ್ಲಿ ವಿಶ್ವಾಸಾರ್ಹ ಮತ್ತು ನೈಜ ಲೋಕೋಪಕಾರಿ ಸಂಸ್ಥೆಗಳು ಶಾಲೆಗಳನ್ನು ತೆರೆಯುವಂತೆ ಪ್ರೋತ್ಸಾಹಿಸಬೇಕು.

ಖಾಸಗಿ ಶಾಲೆಗಳಲ್ಲಿ ದುರ್ಬಲರಿಗೆ ಉಚಿತವಾಗಿ ಸೀಟು ಸಿಗಲಿ

ಖಾಸಗಿ ಅನುದಾನರಹಿತ ಶಾಲೆಗಳು ಅಭಿವೃದ್ದಿ ಪ್ರಕ್ರಿಯೆಯ ಭಾಗವಾಗಿ ನಾಗರೀಕ ಸೌಲಭ್ಯಗಳಿಗಾಗಿ ಮೀಸಲಾದ ಭೂಮಿ, ನೀರು, ವಿದ್ಯುತ್ , ಶಿಕ್ಷಕರ ತರಬೇತಿ, ರಸ್ತೆಗಳು ಮತ್ತು ಮೂಲಸೌಕರ್ಯ ಇತ್ಯಾದಿಗಳನ್ನು ರಾಜ್ಯದಿಂದ ಪಡೆಯುತ್ತಿವೆ. ಇದು ಖಾಸಗಿ ಶಾಲೆಗಳು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಮಕ್ಕಳಿಗೆ ಮತ್ತು ಸೌಲಭ್ಯ ವಂಚಿತ ಮಕ್ಕಳಿಗೆ ಶೇಕಡವಾರು ಸೀಟುಗಳನ್ನು ಉಚಿತವಾಗಿ ಒದಗಿಸುವ ಬಾಧ್ಯತೆಯನ್ನು ಹೊಂದಿರುತ್ತದೆ. ಖಾಸಗಿ ಶಾಲೆಗಳು ಬಳಸುವ ಸೌಲಭ್ಯಗಳು ಮತ್ತು ರಿಯಾಯಿತಿಗಳನ್ನು ಮ್ಯಾಪ್ ಮಾಡಲು ಮತ್ತು ಖಾಸಗಿ ಅನುದಾನರಹಿತ ಶಾಲೆಗಳು ಅನುಭವಿಸುವ ಸೌಲಭ್ಯಗಳಿಗೆ ತಕ್ಕಂತೆ ಉಚಿತ ಶಿಕ್ಷಣವನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಯೋಜನೆಯನ್ನು ಸಿದ್ಧಪಡಿಸುವ ಸಲುವಾಗಿಸಮಿತಿಯೊಂದನ್ನು ಸ್ಥಾಪಿಸಬೇಕು ಎಂದು  ಆಯೋಗವು ಶಿಫಾರಸ್ಸು ಮಾಡಿದೆ.

 

 

ರಾಜ್ಯ ನಿಯಮಗಳು ಖಾಸಗಿ ಶಾಲೆಗಳು ಎಸ್‌ ಸಿ ಎಸ್‌ ಟಿ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸುವುದನ್ನು ಕಡ್ಡಾಯಗೊಳಿಸಿರುವುದನ್ನು ಗಮನಿಸಬಹುದು. ಈ ನಿಬಂಧನೆಯನ್ನು ಕೂಡ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಅಲ್ಪಸಂಖ್ಯಾತರ ಶಾಲೆಗಳು ಅಲ್ಪಸಂಖ್ಯಾತ ಸಮದುಆಯಗಳಿಂದ ಬಂದ ಆರ್ಥಿಕವಾಗಿ ದುರ್ಬಲವಾಗಿರುವ ವಿದ್ಯಾರ್ಥಿಗಳ ಪ್ರವೇಶಾತಿಯನ್ನು ಕಡ್ಡಾಯಗೊಳಿಸಬೇಕು ಎಂದು ಶಿಫಾರಸ್ಸು ಮಾಡಿದೆ.

ಖಾಸಗಿ ಶಾಲೆಗಳೇಕೆ ಅನಿವಾರ್ಯ?

ಶ್ರೀಮಂತ ಕುಟುಂಬಗಳಿಂದ ಬಂದ ಮಕ್ಕಳು ಮಾತ್ರ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪಡೆಯುವ ಅವಕಾಶವನ್ನು ಪಡೆಯುತ್ತಿದ್ದಾರೆ. ಖಾಗಿ ಶಾಲೆಗಳ ಶುಲ್ಕವನ್ನು ಭರಿಸಲಾಗದೇ ಕಡಿಮೆ ಆದಾಯದ ಕುಟುಂಬಗಳಿಂದ ಬಂದ ಮಕ್ಕಳು ಅವುಗಳಿಂದ ಹೊರಗುಳಿಯುತ್ತಿದ್ದಾರೆ. ಮನೆಗೆ ಹತ್ತಿರದಲ್ಲಿ ಮಾಧ್ಯಮಿಕ ಮತ್ತು ಉನ್ನತ ಮಾಧ್ಯಮಿಕ ಶಾಲೆಗಳು ಇಲ್ಲದಿರುವುದು ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳಿಸುವ ಅನಿವಾರ್ಯ ಪರಿಸ್ಥಿತಿಗೆ ದೂಡುತ್ತಿದೆ. ಪದವಿಪೂರ್ವ ಕಾಲೇಜುಗಳಿಗೆ ಸಂಬಂಧಿಸಿದಂತೆ ಪರಿಸ್ಥಿತಿ ಇನ್ನೂ ಗಂಭೀರವಾಗಿದೆ ಎಂದು ಆಯೋಗವು ಕಳವಳ ವ್ಯಕ್ತಪಡಿಸಿದೆ.

ವಿದ್ಯಾರ್ಥಿ ವೇತನಗಳ ಸಂಖ್ಯೆ- ಪ್ರಮಾಣ ಹೆಚ್ಚಿಸಲಿ

ಸಮಾಜ ಕಲ್ಯಾಣ, ಬುಡಕಟ್ಟು ಕಲ್ಯಾಣ, ಎಸ್‌ ಸಿ ಎಸ್‌ ಟಿ ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಇಲಾಖೆಗಳು ಎಸ್‌ ಸಿ ಎಸ್‌ ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ  ವೇತನವನ್ನು ಹೊಂದಿವೆ. ಅವು ಬಾಲಕ, ಬಾಲಕಿಯರಿರಾಗಿ ಹಾಸ್ಟೆಲ್‌ಗಳನ್ನು ನಡೆಸುತ್ತವೆ. ಆದರೂ ಈ ಯೋಜನೆಗಳಿಗೆ ಬಜೆಟ್‌ ಸೀಮಿತವಾಗಿದೆ. ಕೇವಲ ಕೆಲವು ಮಕ್ಕಳು ಈ ಪ್ರಯೋಜನಗಳನ್ನು ಪಡೆಯುವಂತಾಗಿದೆ. ಕಡಿಮೆ ಆದಾಯದ ಕುಟುಂಬಗಳಿಗೆ ಸೇರಿದ ಈ ವರ್ಗಗಳ ಮಕ್ಕಳು ಈ ಪ್ರಯೋಜನಗಳನ್ನು ಪಡೆಯುವಂತಾಗಿದೆ. ಕಡಿಮೆ ಆದಾಯದ ಕುಟುಂಬಗಳಿಗೆ ಸೇರಿದ ಈ ವರ್ಗಗಳ ಮಕ್ಕಳು ಉತ್ತಮ ಗುಣಮಟ್ಟದ ಶಾಲೆಗಲು ಮತ್ತು ಪಿಯು ಕಾಲೇಜುಗಳಿಗೆ ಪ್ರವೇಶಾತಿಯನ್ನು ಖಾತ್ರಿಪಡಿಸಲು ಇಲಾಖೆಗಳು ವಿದ್ಯಾರ್ಥಿ ವೇತನಗಳ ಸಂಖ್ಯೆ ಮತ್ತು ಪ್ರಮಾಣವನ್ನು ಹೆಚ್ಚಿಸಬೇಕು. ಹೆಚ್ಚಿನ ಹಾಸ್ಟೆಲ್‌ಗಳನ್ನು ಸ್ಥಾಪಿಸಬೇಕು ಮತ್ತು ಬಜೆಟ್‌ಗಳನ್ನು ಹೆಚ್ಚಿಸುವುದು ಸೂಕ್ತ ಎಂದು ಆಯೋಗವು ಶಿಫಾರಸ್ಸು ಮಾಡಿರುವುದು ತಿಳಿದು ಬಂದಿದೆ.

 

 

ಮಹಿಳಾ ಮಕ್ಕಳ ಇಲಾಖೆಯೂ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ಆರಂಭಿಸಲಿ

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯು ಸಹ ಬಡ ಕುಟುಂಬಗಳ ಅರ್ಹ ವಿದ್ಯಾರ್ಥಿನಿಯರಿಗೆ ವಿಶೇಷವಾಗಿ ಪ್ರೌಢಶಾಲೆ, ಪಿಯು ಮಟ್ಟದ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನವನ್ನು ಆರಂಭಿಸಬೇಕು. ಆರ್ಥಿಕವಾಗಿ ದುರ್ಬಲ ವರ್ಗಗಳ ವಿದ್ಯಾರ್ಥಿಗಳ (ಡೇ ಸ್ಕಾಲರ್) ವೆಚ್ಚ ನಿರ್ವಹಿಸು ಆರ್ಥಿಕ ಬೆಂಬಲ ಒದಗಿಸುವ ಅವಕಾಶವಿರಬೇಕು ಎಂದು ಸಲಹೆ ನೀಡಿದೆ.

ಶೇಕಡವಾರು ಪ್ರಮಾಣದಲ್ಲಿ ತೀವ್ರ ಕುಸಿತ  

ಮಾಧ್ಯಮಿಕ ಮತ್ತು ಹಿರಿಯ ಮಾಧ್ಯಮಿಕ ಹಂತಗಳಲ್ಲಿ ಪೋಷಕರು ಸರ್ಕಾರಿ ಶಾಲೆಗಳಿಗಿಂತ ಖಾಸಗಿ ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಲು ಪ್ರಮುಖ ಕಾರಣ- ಹತ್ತಿರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಶಾಲೆ ಇಲ್ಲದಿರುವುದು. ಇದು ಉನ್ನತ ಹಂತಗಳಲ್ಲಿ ಸರ್ಕಾರಿ ಶಾಲೆಗಳಿಗೆ ಹಾಜರಾಗುವ ಮಕ್ಕಳ ಶೇಕಡವಾರು ಪ್ರಮಾಣದಲ್ಲಿ ತೀವ್ರ ಕುಸಿತಕ್ಕೆ ಕಾರಣವಾಗಿದೆ ಎಂದು ಆಯೋಗವು  ಕಾರಣಗಳನ್ನು ಪಟ್ಟಿ ಮಾಡಿದೆ.

ನಗರ ಪ್ರದೇಶಗಳಲ್ಲಿ ವಿಶೇಷವಾಗಿ ಹೊಸ ವಸತಿ ಪ್ರದೇಶಗಳಲ್ಲಿ ಬಹುತೇಕ ಸರ್ಕಾರಿ ಶಾಲೆಗಳು ಗಣನೀಯ ದೂರದಲ್ಲಿರುತ್ತವೆ. ರಾಜ್ಯ ಸಾರ್ವಜನಿಕ ಶಾಲೆಗಳ ಸನ್ನಿವೇಶದಲ್ಲಿ  ಸರ್ಕಾರಿ ಶಾಲೆಗಳು ಮತ್ತು ಪಿಯು ಕಾಲೇಜುಗಳು ದೂರದಲ್ಲಿದ್ದರೇ ಖಾಸಗಿ ಶಾಲೆಗಳು ಒದಗಿಸುವಂತೆ ಸಾರಿಗೆ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಸರ್ಕಾರವು ಗಮನಹರಿಸಬೇಕು ಎಂದು ಆಯೋಗವು ಗಮನಸೆಳೆದಿದೆ.

 

 

ಹಿರಿಯ ಪ್ರಾಥಮಿಕ ಶಾಲೆಗಳ ಆವರಣದಲ್ಲಿ ಪ್ರೌಢಶಾಲೆಗಳಿರಲಿ

ಪ್ರತಿಯೊಂದು ಹೊಸ ಪ್ರೌಢಶಾಲೆ ವಿಭಾಗವು ಗುಣಮಟ್ಟದ ಮೂಲಸೌಕರ್ಯ ಮತ್ತು ಅರ್ಹ ಶಿಕ್ಷಕರನ್ನೊಳಗೊಂಡ ಪೂರ್ಣ ಪ್ರಮಾಣದ ಸೌಲಭ್ಯಗಳನ್ನು ಒದಗಿಸಬೇಕು. ಒಟ್ಟಾರೆಯಾಗಿ ಪೋಷಕ ಶಾಲೆಗಳೊಂದಿಗೆ ಉತ್ತಮವಾಗಿ ಜೋಡಿಸಲ್ಪಟ್ಟ ಶಾಲಾ ಸಂಕೀರ್ಣವನ್ನು ಹೊಂದಿರಬೇಕು. ಉನ್ನತ ಪ್ರಾಥಮಿಕ ಶಾಲೆಗಳಿಗೆ ಹೊಂದಿಕೊಂಡಂತೆ ಪ್ರೌಢಶಾಲೆಯ ಅಗತ್ಯವನ್ನು ಪೂರೈಸಲು ಸರ್ಕಾರವು ಸ್ವತಂತ್ರವಾಗಿ ಅಥವಾ ಅನುದಾನಿತ ಕಾರ್ಯಕ್ರಮದ ಅಡಿಯಲ್ಲಿ ಅಗತ್ಯವಿರುವಷ್ಟು ಸಂಖ್ಯೆಯ ಹೊಸ ಪ್ರೌಢಶಾಲೆಗಳನ್ನು ಅಸ್ತಿತ್ವದಲ್ಲಿರುವ ಹಿರಿಯ ಪ್ರಾಥಮಿಕ ಶಾಲೆಗಳ ಆವರಣದಲ್ಲಿ ತೆರೆಯಬೇಕು ಎಂದು ಆಯೋಗವು ಶಿಫಾರಸ್ಸು ಮಾಡಿದೆ.

1,000 ಸರ್ಕಾರಿ ಪಿಯು ಕಾಲೇಜು ತೆರೆಯಿರಿ

ಪ್ರೌಢಶಾಲೆಗಳ ವಿಭಾಗಗಳನ್ನು ತೆರೆಯುವುದರ ಜತೆಗೆ ಅದ್ಯತೆ ಮೇರೆಗೆ ಅದೇ ಸಂಕೀರ್ಣದಲ್ಲಿ  ಹೆಚ್ಚುವರಿಯಾಗಿ 1,000 ಸರ್ಕಾರಿ ಪಿಯು ಕಾಲೇಜುಗಳನ್ನು ತೆರೆಯಬೇಕು. ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಹದಿಹರೆಯದ ಹುಡುಗಿಯರ ಓದು ನಿಲ್ಲಿಸಿ ಮದುವೆ ಮಾಡುವ ಕಾರಣಗಳಲ್ಲಿ ಶಿಕ್ಷಣ ಪಡೆಯುವ ಮಾರ್ಗಗಳ ಕೊರತೆಯೂ ಮುಖ್ಯ ಕಾರಣಗಳಲ್ಲಿ ಒಂದಾಗಿದೆ. ಪ್ರೌಢಶಾಲೆಗಳಂತೆ ಇಲ್ಲಿಯೂ ಮೂಲ ಸೌಕರ್ಯಗಳ ಗುಣಮಟ್ಟ ಮತ್ತು ಶಿಕ್ಷಕರನ್ನು ಒದಗಿಸುವಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದು ಆಯೋಗವು ಸಲಹೆ ನೀಡಿದೆ.

ಬೋಧನಾ ಶುಲ್ಕ ಹೆಚ್ಚಳ ಕಡಿವಾಣಕ್ಕೆ ಶಾಸಕಾಂಗ ಚೌಕಟ್ಟು ರೂಪಿಸುವುದೇ?

ಖಾಸಗಿ ಶಾಲೆಗಳು ಯಾವುದೇ ನಿಯಂತ್ರಣವಲ್ಲದೇ ಶುಲ್ಕ ವಿಧಿಸುವ ಮತ್ತು ಮೇಲಿಂದ ಮೇಲೆ ಅದನ್ನು ಹೆಚ್ಚಿಸುವ ಬಗ್ಗೆ ಸಾರ್ವಜನಿಕರಿಂದ ನಿರಂತರ ಆಕ್ರೋಶ ವ್ಯಕ್ತವಾಗುತ್ತಿದೆ. ಪ್ರಸ್ತುತ ಕರ್ನಾಟಕದಲ್ಲಿ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿನ ಶುಲ್ಕ ರಚನೆಯನ್ನು ನಿಯಂತ್ರಿಸಲು ಯಾವುದೇ ಶಾಸಕಾಂಗ ಚೌಕಟ್ಟನ್ನು ರೂಪಿಸಿಲ್ಲ. ಶುಲ್ಕ ರಚನೆಯನ್ನು ನಿಗದಿಪಡಿಸುವ ನಿಟ್ಟಿನಲ್ಲಿ ಖಾಸಗಿ ಶಾಲೆಗಳಲ್ಲಿ ಚಾಲ್ತಿಯಲ್ಲಿರುವ ಪದ್ಧತಿ ಪರಿಶೀಲಿಸಲು, ರಾಜ್ಯ ಕಾಯ್ದೆಯಲ್ಲಿನ ನಿಬಂಧನೆಗಳೊಂದಿಗೆ ಇತರ ರಾಜ್ಯಗಳಲ್ಲಿ  ಅಳವಡಿಸಿಕೊಂಡಿರುವ ನೀತಿ ಮತ್ತು ಕ್ರಮ ಅಧ್ಯಯನ ಮಾಡಲು  ವಿವಿಧ ನ್ಯಾಯಾಲಯದ ಆದೇಶಗಳನ್ನು ವಿಶ್ಲೇಷಿಸಲು , ಖಾಸಗಿ ಶಾಲೆಗಳು ವಿಧಿಸುವ ಬೋಧನೆ ಮತ್ತು ಇತರೆ ಶುಲ್ಕಗಳ ವಿಷಯದಲ್ಲಿ  ಕಾನೂನು ಪರಿಶೀಲನೆಗೆ ಸಲ್ಲುವ ನಿಯಮಗಳು ಮತ್ತು ನಿಬಂಧನೆಗಳನ್ನು ರೂಪಿಸುವ ಸಲುವಾಗಿ ಸರ್ಕಾರವು ಕಾನೂನು ವೃತ್ತಿಪರರು, ಖಾಸಗಿ ಶಾಲೆಯ ಪ್ರತಿನಿಧಿ ಮತ್ತು ಪೋಷಕರ ಪ್ರತಿನಿಧಿಗಳನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿ ರಚಿಸಬೇಕು ಎಂದು ಆಯೋಗವು ಶಿಫಾರಸ್ಸು ಮಾಡಿದೆ.

ಶೇ.25ಕ್ಕಿಂತ ಹೆಚ್ಚಿನ ಆರ್ಥಿಕವಾಗಿ ದುರ್ಬಲ ವರ್ಗಗಳಿಂದ ಬಂದ ಕಡಿಮೆ ಆದಾಯದ ಗುಂಪಿನ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಅಥವಾ ಅವರ ಪ್ರವೇಶವನ್ನು ಸುಗಮಗೊಳಿಸಲು ರಾಜ್ಯ ಸರ್ಕಾರ ಮತ್ತು ಶಿಕ್ಷಣ ಸಂಸ್ಥೆಯು ಉಚಿತ ವಿದ್ಯಾರ್ಥಿ ವೇತನ ಮತ್ತು ವಿದ್ಯಾರ್ಥಿ ವೇತನದ ರೂಪದಲ್ಲಿ ಆರ್ಥಿಕ ಸಹಾಯವನ್ನು ಒದಗಿಸಬೇಕು.

ಖಾಸಗಿ ಶಾಲೆಗಳ ನಿಯಂತ್ರಣ ಮಾಡುವುದೇ?

ಪ್ರಸ್ತುತ ಚಾಲ್ತಿಯಲ್ಲಿರುವ ನಿಯಂತ್ರಕ ಆಡಳಿತಕ್ಕೆ ಅನೇಕ ಖಾಸಗಿ ಶಾಲೆಗಳು ನಡೆಸುತ್ತಿರುವ ಶಿಕ್ಷಣದ ವ್ಯಾಪಾರೀಕರಣ ಅಥವಾ ಪೋಷಕರ ಆರ್ಥಿಕ ಶೋಷಣೆಯನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ಅನೇಕ ಖಾಸಗಿ ಶಾಲೆಗಳು ಆರ್‍‌ಟಿಇ ಕಾಯ್ದೆ ಮತ್ತು ಕರ್ನಾಟಕ ಶಿಕ್ಷಣ ಕಾಯ್ದೆ ಅಡಿಯಲ್ಲಿ ಮೂಲ ಸೌಕರ್ಯ ಮತ್ತು ಸಿಬ್ಬಂದಿ ನೇಮಕಾತಿ ಮಾನದಂಡಗಳನ್ನೂ ಸಹ ಅನುಸರಿಸುತ್ತಿಲ್ಲ. ಜಿಲ್ಲಾ ಶಿಕ್ಷಣ ಅಧಿಕಾರಿಗಳು ಮತ್ತು ಅವರ ತಂಡಗಳು ಖಾಸಗಿ ಶಾಲೆಗಳಿಗೆ ಭೇಟಿ ನೀಡಲು ಹೊಸ ಶಾಲೆಗಳನ್ನು ತೆರೆಯಲು ಅಥವಾ ಅಸ್ತಿತ್ವದಲ್ಲಿರುವ ಶಾಲೆಗಳನ್ನು ಮೇಲ್ದರ್ಜೆಗೇರಿಸಲು ಬಂದಿರುವ ಹೊಸ ಪ್ರಸ್ತಾವನೆಗಳನ್ನ ಪರಿಶೀಲಿಸಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದೆ. ಇದು ಸರ್ಕಾರಿ ಶಾಲೆಗಳ ಕುರಿತು ಹೆಚ್ಚಿನ ನಿರ್ಲಕ್ಷ್ಯಕ್ಕೆ ಕಾರಣವಾಗಿದೆ ಎಂದು ಆಯೋಗವು ವಿಶ್ಲೇಷಿಸಿದೆ.

 ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾಮಟ್ಟದಲ್ಲಿ  ಪ್ರತ್ಯೇಕ ವಿಭಾಗ, ನಿರ್ದೇಶನಾಲಯವಿರಲಿ

ರಾಜ್ಯಮಟ್ಟದಲ್ಲಿ ಶಾಲಾ ಶಿಕ್ಷಣ ಇಲಾಖೆಯು ಕರ್ನಾಟಕ ಶಿಕ್ಷಣ ಕಾಯ್ದೆ ಮತ್ತು ಖಾಸಗಿ ಶಾಲೆಗಳಿಗೆ ಅನ್ವಯವಾಗುವ ಆರ್‍‌ಟಿಇ ಅಡಿಯಲ್ಲಿ ನಿಯಮಗಳ ನಿರೀಕ್ಷಣೆ ಮಾಡಲು ಮತ್ತು ಜಾರಿಗೊಳಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿ ಖಾಸಗಿ ಶಾಲೆಗಳ ಮೇಲ್ವಿಚಾರಣೆ ನಡೆಸಲು ಮತ್ತು ನಿಯಂತ್ರಿಸಲು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಶಾಲಾ ಶಿಕ್ಷಣ ಇಲಾಖೆಯಲ್ಲಿ ಪ್ರತ್ಯೇಕ ವಿಭಾಗ ಅಥವಾ ನಿರ್ದೇಶನಾಲಯವನ್ನು ಸ್ಥಾಪಿಸಬೇಕು ಎಂದು ನಿರ್ದೇಶಿಸಿದೆ. ಖಾಸಗಿ ಶಾಲೆಗಳ ವಿಭಾಗವು ಶಿಕ್ಷಣ ತಜ್ಞರು, ಹಣಕಾಸು ಅಧಿಕಾರಿಗಳು (ಬ್ಯಾಲೆನ್ಸ್‌ ಶೀಟ್‌ ಪರಿಶೀಲಿಸಲು) ಕಾನೂನು ಅಧಿಕಾರಿಗಳು ಮತ್ತು  ರಾಜ್ಯಮಟ್ಟದ ಎಂಐಎಸ್‌ ವ್ಯವಸ್ಥಾಪಕರು, ಪ್ರತಿ ಜಿಲ್ಲೆಯ ಮೇಲ್ವಿಚಾರಣೆ ಅಧಿಕಾರಿಗಳನ್ನು ಒಳಗೊಂಡ ವೃತ್ತಿಪರ ವೃಂದದಿಂದ ನಿರ್ವಹಿಸಲ್ಪಡಬೇಕು ಎಂದು ಆಯೋಗವು ಸೂಚಿಸಿದೆ.

ಅನುದಾನ ರಹಿತ ಶಾಲಾ ಶಿಕ್ಷಕರಿಗೆ ಭದ್ರತೆ

ಅದೇ ರೀತಿ ಅನುದಾನ ರಹಿತ ಮತ್ತು ಖಾಸಗಿ ಶಾಲೆಗಳಲ್ಲಿ ಕೆಲಸದ ಪರಿಸ್ಥಿತಿಗಳು ವ್ಯಾಪಕವಾಗಿ ಬದಲಾಗುತ್ತಲೇ ಇರುತ್ತವೆ. ಕಡಿಮೆ ಶುಲ್ಕ ವಿಧಿಸುವ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಇದು ದೊಡ್ಡಮಟ್ಟದಲ್ಲಿ ಕಂಡುಬಂದಿದೆ.

 

 

ಹಲವು ಶಾಲೆಗಳಲ್ಲಿ ಶಿಕ್ಷಕರು ಯಾವುದೇ ಉದ್ಯೋಗ ಭದ್ರತೆ ಇಲ್ಲದೇ ಕಡಿಮೆ ಸಂಬಳಕ್ಕೆ ಕೆಲಸ ಮಾಡಬೇಕಾಗಿದೆ. ಇದು ಯಾವುದೇ ಪರಿಹಾರ ನೀಡದೇ ಅವರ ಸೇವೆ ಬಳಸಿಕೊಳ್ಳುವುದಕ್ಕೆ ಸಮನಾಗಿದೆ. ಈ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕರ ಹಿತಾಸಕ್ತಿಗಳನ್ನು ರಕ್ಷಿಸಲು ಸೂಕ್ತ ನಿಯಮ ಪರಿಚಯಿಸಬೇಕು ಎಂದು ಆಯೋಗವು ಶಿಫಾರಸ್ಸು ಮಾಡಿದೆ.

Hot this week

ರಸ್ತೆ ಕಾಮಗಾರಿಯಲ್ಲಿ ಲೋಪ, ಗುತ್ತಿಗೆದಾರನಿಗೆ ಅಕ್ರಮ ಲಾಭ, ಪಾಲಿಕೆಗೆ ನಷ್ಟ; ತಪಾಸಣೆ ನಡೆದ ದಿನದಂದೇ ಎಇ ಅಮಾನತು

ಬೆಂಗಳೂರು; ಆರ್ಟಿಲಿಯಲ್ ಮತ್ತು ಸಬ್‌ ಆರ್ಟೀಲಿಯಲ್ ರಸ್ತೆಗಳಲ್ಲಿ   ಕೈಗೊಂಡಿರುವ ಆಸ್ಪಾಲ್ಟಿಂಗ್‌ನಲ್ಲಿ ಕಳಪೆ...

ಕೆಎಸ್‌ಒಯು ಬ್ಯಾಂಕ್‌ ಖಾತೆ ಸ್ಥಗಿತ; ಬ್ಯಾಂಕ್‌ ಕಾರ್ಯಾಚರಣೆ ನಿರ್ಬಂಧಿಸಲು ರಾಜ್ಯ ಸರ್ಕಾರಕ್ಕೆ ಯಾವ ಕಾನೂನುಬದ್ಧ ಅಧಿಕಾರವಿದೆ?

ಬೆಂಗಳೂರು; ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಬ್ಯಾಂಕ್‌ ಖಾತೆಗಳ ಸ್ಥಗಿತಗೊಳಿಸಿರುವುದಕ್ಕೆ ಸಂಬಂಧಿಸಿದಂತೆ...

ಡಿಸಿಎಂ ಕಚೇರಿಯಲ್ಲಿಯೇ ಧೂಳಿಡಿದಿದ್ದ ಕಡತಗಳು; ಸಚಿವ ಸಂಪುಟ ವಿಸರ್ಜನೆ ಬೆನ್ನಲ್ಲೇ 80 ಕಡತಗಳು ಇಲಾಖೆಗೆ ವಾಪಸ್‌

ಬೆಂಗಳೂರು; ಪ್ರತಿಪಕ್ಷ ನಾಯಕ ಆರ್ ಅಶೋಕ್ ಅವರು ಕೋರಿದ್ದ ಮಾಹಿತಿಯ ಕಡತ,...
Please Scan to make Your Contribution

Topics

ರಸ್ತೆ ಕಾಮಗಾರಿಯಲ್ಲಿ ಲೋಪ, ಗುತ್ತಿಗೆದಾರನಿಗೆ ಅಕ್ರಮ ಲಾಭ, ಪಾಲಿಕೆಗೆ ನಷ್ಟ; ತಪಾಸಣೆ ನಡೆದ ದಿನದಂದೇ ಎಇ ಅಮಾನತು

ಬೆಂಗಳೂರು; ಆರ್ಟಿಲಿಯಲ್ ಮತ್ತು ಸಬ್‌ ಆರ್ಟೀಲಿಯಲ್ ರಸ್ತೆಗಳಲ್ಲಿ   ಕೈಗೊಂಡಿರುವ ಆಸ್ಪಾಲ್ಟಿಂಗ್‌ನಲ್ಲಿ ಕಳಪೆ...

ಕೆಎಸ್‌ಒಯು ಬ್ಯಾಂಕ್‌ ಖಾತೆ ಸ್ಥಗಿತ; ಬ್ಯಾಂಕ್‌ ಕಾರ್ಯಾಚರಣೆ ನಿರ್ಬಂಧಿಸಲು ರಾಜ್ಯ ಸರ್ಕಾರಕ್ಕೆ ಯಾವ ಕಾನೂನುಬದ್ಧ ಅಧಿಕಾರವಿದೆ?

ಬೆಂಗಳೂರು; ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಬ್ಯಾಂಕ್‌ ಖಾತೆಗಳ ಸ್ಥಗಿತಗೊಳಿಸಿರುವುದಕ್ಕೆ ಸಂಬಂಧಿಸಿದಂತೆ...

ಈಶಾ ಫೌಂಡೇಷನ್, ಯೋಗ ಕೇಂದ್ರಕ್ಕೆ ಜಮೀನು ಭೂ ಪರಿವರ್ತನೆಯಲ್ಲಿ ನಿಯಮ ಉಲ್ಲಂಘನೆ ಆರೋಪ; ತಹಶೀಲ್ದಾರ್‍‌ಗಳಿಂದಲೇ ಅಕ್ರಮ ಲಾಭ, ಸರ್ಕಾರಕ್ಕೆ ವಂಚನೆಯಾಗಿದೆಯೇ?

ಬೆಂಗಳೂರು; ಚಿಕ್ಕಬಳ್ಳಾಪುರ ತಾಲೂಕಿನ ಆವಲಗುರ್ಕಿ ಗ್ರಾಮದಲ್ಲಿನ ವಿವಿಧ ಸರ್ವೇ ನಂಬರ್‍‌ಗಳಲ್ಲಿ ಒಟ್ಟಾರೆ...

Related Articles

Popular Categories

error: Content is protected !!