ಬೆಂಗಳೂರು; ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ಕಚೇರಿಗೆ 62.20 ಲಕ್ಷ ರು ಮೊತ್ತದ ಕಾರನ್ನು ಒದಗಿಸಿರುವ ಡಿ ದೇವರಾಜ ಅರಸು ಅಭಿವೃದ್ಧಿ ನಿಗಮವು ಈ ಮೊತ್ತವನ್ನು ಸಾಲ ವಸೂಲಾತಿ ಮೊತ್ತದಿಂದ ಭರಿಸಿದೆ. ಅದೇ ರೀತಿ ಸಚಿವರಿಗೆ ಮಾಧ್ಯಮ ಸಮಾಲೋಚಕರಾಗಿರುವ ಎನ್ ಲಕ್ಷ್ಮಣ್ ಎಂಬುವರಿಗೆ ಮಾಸಿಕ 1.00 ಲಲಕ್ಷ ರು ನಿಗದಿಗೊಳಿಸಿರುವುದು ಇದೀಗ ಬಹಿರಂಗವಾಗಿದೆ.
ಡಿ ದೇವರಾಜ ಅರಸು ಹಿಂದುಳಿದ ಅಭಿವೃದ್ದಿ ನಿಗಮವು ಅನುಷ್ಟಾನಗೊಳಿಸುತ್ತಿರುವ ವಿವಿಧ ಸೌಲಭ್ಯಗಳನ್ನು ಆಯಾ ವರ್ಷವೇ ಪೂರ್ಣ ಪ್ರಮಾಣದಲ್ಲಿ ಒದಗಿಸಲು ಅನುದಾನಕ್ಕಾಗಿ ಏದುಸಿರು ಬಿಡುತ್ತಿದೆ. ಈ ಮಧ್ಯೆ ಸಚಿವರ ಕಚೇರಿ ಹೆಸರಿನಲ್ಲಿ 62.20 ಲಕ್ಷ ರು ಮೌಲ್ಯದ ಕಾರನ್ನು ಒದಗಿಸುತ್ತಿರುವುದು ಮತ್ತು ಮಾಧ್ಯಮ ಸಮಾಲೋಚಕರಿಗೆ ಮಾಸಿಕ 1.00 ಲಕ್ಷ ರು ನೀಡಲು ನಿಗಮವು ತೀರ್ಮಾನಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ನಿಗಮವು 2026ರ ಸೆ.23ರಂದು ಈ ಕುರಿತು ಸಭೆ ನಡೆಸಿತ್ತು.

ಈ ಸಭೆಯಲ್ಲಿ ಚರ್ಚೆಗೆ ಇರಿಸಿದ್ದ ವಿಷಯಗಳ ಪೈಕಿ ಸಚಿವರ ಕಚೇರಿಗೆ ಕಾರು ಒದಗಿಸುವುದು ಮತ್ತು ಮಾಧ್ಯಮ ಸಮಾಲೋಚಕರಿಗೆ ಗೌರವ ಧನ ನಿಗದಿಪಡಿಸುವ ವಿಷಯವೂ ಕಾರ್ಯಸೂಚಿಯಲ್ಲಿತ್ತು. ಸಭೆಯಲ್ಲಿ ಈ ಎರಡೂ ವಿಷಯಗಳ ಕುರಿತು ಚರ್ಚೆಯಾದ ನಂತರ ನಿಗಮದ ಆಡಳಿತ ಮಂಡಳಿಯು ಈ ಬಗ್ಗೆ ಸರ್ವಾನುಮತದಿಂದ ತೀರ್ಮಾನಿಸಿದೆ.
2026ರ ಸೆ.23ರಂದು ನಡೆಸಿದ್ದ ಸಭೆ ನಡವಳಿ ಪ್ರತಿಯು ದಿ ಫೈಲ್ ಗೆ ಲಭ್ಯವಾಗಿದೆ.
ಸಚಿವರ ಕಚೇರಿಯ ಉಪಯೋಗಕ್ಕೆ ವಾಹನ ಖರೀದಿಸುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು 2025ರ ನವೆಂಬರ್ 27ರಂದೇ ತೀರ್ಮಾನಿಸಿತ್ತು. ಈ ಸಂಬಂಧ 2026ರಲ್ಲಿ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಸಚಿವರ ಕಚೇರಿಯ ಉಪಯೋಗಕ್ಕೆ ಟೊಯೋಟಾ ಫಾರ್ಚುನರ್ ಖರೀದಿಸಲು ಒಟ್ಟು ಮೂರು ದರಗಳನ್ನೊಳಗೊಂಡಿರುವ ಪ್ರಸ್ತಾವ ಸಲ್ಲಿಸಿತ್ತು. ಈ ಮೂರು ದರಗಳ ಪೈಕಿ ಟೊಯೋಟಾ ಸಲ್ಲಿಸಿದ್ದ ಪ್ರಸ್ತಾವವನ್ನು ಸಭೆಯು ಒಪ್ಪಿದೆ. ಈ ವೆಚ್ಚವನ್ನು ನಿಗಮದ ಸಾಲ ವಸೂಲಾತಿ ಮೊತ್ತ (ಆಡಳಿತಾತ್ಮಕ ವೆಚ್ಚ)ದಿಂದ ಭರಿಸುವ ಬಗ್ಗೆ ಸರ್ಕಾರಕ್ಕೆ ಮತ್ತೊಂದು ಪ್ರಸ್ತಾವನೆ ಸಲ್ಲಿಸಲು ಸಭೆಯು ಸರ್ವಾನುಮತದಿಂದ ತೀರ್ಮಾನಿಸಿರುವುದು ನಡವಳಿಯಿಂದ ಗೊತ್ತಾಗಿದೆ.

ಅದೇ ರೀತಿ ಸಚಿವರ ಮಾಧ್ಯಮ ಸಮಾಲೋಚಕರನ್ನಾಗಿ ಲಕ್ಷ್ಮಣ ಎನ್ ಇವರನ್ನು ನೇಮಿಸಲು ಸಹ ಇದೇ ಸಭೆಯು ಅನುಮತಿ ನೀಡಿದೆ. ಸಚಿವರ ಆಪ್ತ ಶಾಖೆಯಲ್ಲಿ ಮಾಧ್ಯಮ ಸಲಹೆಗಾರರನ್ನಾಗಿ ನೇಮಿಸಲು ಮಾಸಿಕ 1.00 ಲಕ್ಷ ರು ಗೌರವ ಧನ ನಿಗದಿಪಡಿಸಲು ಸರ್ವಾನುಮತದಿಂದ ತೀರ್ಮಾನ ಕೈಗೊಂಡಿರುವುದು ತಿಳಿದು ಬಂದಿದೆ.
2023-24ನೇ ಸಾಲಿನಲ್ಲಿ ಬಳಕೆಯಾಗದೇ ಉಳಿದ ಅನುದಾನದ ಮೇಲೆ ಗಳಿಸಿರುವ ಬಡ್ಡಿ ಮೊತ್ತವನ್ನು ಸರ್ಕಾರಕ್ಕೆ ವರ್ಗಾಯಿಸಲು ಬಾಕಿ ಇರಿಸಿಕೊಂಡಿದೆ. ಈ ರೀತಿ ಬಾಕಿ ಇರಿಸಿಕೊಂಡಿರುವ 10.37 ಕೋಟಿ ರು ರು.ಗಳನ್ನು ಸರ್ಕಾರಿ ವಿವೇಚನಾ ಕೋಟಾದಡಿ ಶೇ. 50ರಷ್ಟು ಮತ್ತು ಅಧ್ಯಕ್ಷರ ವಿವೇಚನಾ ಕೋಟಾದಡಿ ಶೆ. 50ರ್ಟನ್ನು ಬಳಸಿಕೊಳ್ಳಲು ಅನುಮತಿ ನೀಡುವ ಕುರಿತು ಸಭೆಯಲ್ಲಿ ಚರ್ಚೆಯಾಗಿದೆ. ಈ ಸಂಬಂಧ ಸರ್ಕಾರಕ್ಕೆ ಸೂಕ್ತ ಪ್ರಸ್ತಾವನೆ ಸಲ್ಲಿಸಬೇಕು ಎಂದು ಸಭೆಯು ತೀರ್ಮಾನಿಸಿರುವುದು ಗೊತ್ತಾಗಿದೆ.

ಇದೇ ನಿಗಮಕ್ಕೆ 2025-26ರಲ್ಲಿ ಹಂಚಿಕೆಯಾಗಿದ್ದ ಅನುದಾನವು ಪೂರ್ಣ ಪ್ರಮಾಣದಲ್ಲಿ ಬಳಕೆಯಾಗಿಲ್ಲ. ನಿಗಮದ ವಿವಿಧ ಯೋಜನೆಗಳಲ್ಲಿ ಬಳಕೆಯಾಗದೇ ಉಳಿಕೆಯಾಗಿರುವ ಮತ್ತು ಆಯ್ಕೆ ಸಮಿತಿಯಲ್ಲಿ ಆಯ್ಕೆಯಾಗದೇ ಅನುದಾನ ಉಳಿದಿರುವ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿದೆ. 2026-27ನೇ ಸಾಲಿನಲ್ಲಿ ರೂಪಿಸಿರುವ ಕ್ರಿಯಾ ಯೋಜನೆಯಲ್ಲಿ ಅಧ್ಯಕ್ಷರ ವಿವೇಚನಾ ಕೋಟಾಕ್ಕೆ ಮೀಸಲಿರಿಸಿರುವ ಹಣವು ತುಂಬಾ ಕನಿಷ್ಟವಾಗಿದೆ.
ಅಲ್ಲದೇ ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸುತ್ತಿದ್ದಾರೆ. ಹೀಗಾಗಿ ಅರ್ಹ ಫಲಾನುಭವಿಗಳಿಗೆ ವಿವಿಧ ಯೋಜನೆಗಳಲ್ಲಿ ಸೌಲಭ್ಯ ಕಲ್ಪಿಸಲು ಅನುವು ಮಾಡಿಕೊಡಬೇಕು. 2025-26ನೇ ಸಾಲಿನಲ್ಲಿ ಉಳಿಕೆಯಾದ ಅನುದಾನವನ್ನು ನಿರ್ದೇಶಕ ಮಂಡಳಿಯ ವಿವೇಚನಾ ಕೋಟಾದಡಿ ಬಳಸಿಕೊಂಡು ತ್ವರಿತಗತಿಯಲ್ಲಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಲು ನಿಯಮಾನುಸಾರ ಕ್ರಮ ವಹಿಸಬೇಕು ಎಂದು ಅಧ್ಯಕ್ಷರು ಸಭೆಗೆ ಸೂಚಿಸಿರುವುದು ತಿಳಿದು ಬಂದಿದೆ.
‘ಈ ಸಂಬಂಧ 2025-26ನೇ ಸಾಲಿನಲ್ಲಿ ಸಾಲ-ಸೌಲಭ್ಯ ಒದಗಿಸಲು ಆಯ್ಕೆಯಾಗಿರುವ ಫಲಾನುಭವಿಗಳೀಗೆ ಅನುಮೋದನೆಗೊಂಡಿರುವ ಕ್ರಿಯಾ ಯೋಜನೆಯ ಎದುರಿಗೆ ಬಿಡುಗಡೆ ಮಾಡಿರುವ ಅನುದಾನ ಕೊರತೆಯಾಗಿರುತ್ತದೆ. ಈ ಬಗ್ಗೆ ಬಾಕಿ ಅನುದಾನ ಬಿಡುಗಡೆಗಾಗಿ ಬ್ಯಾಂಕ್ ಖಾತೆಯಲ್ಲಿ ಲಭ್ಯವಿರುವ ಬಾಕಿ ಮೊತ್ತವನ್ನು ಒಳಗೊಂಡ ಸೂಕ್ತ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಬೇಕು,’ ಎಂದು ಸಭೆಯು ಸೂಚಿಸಿರುವುದು ಗೊತ್ತಾಗಿದೆ.

ಅಲ್ಲದೇ 2025-26ನೇ ಸಾಲಿನಲ್ಲಿ ಆಡಳಿತಾತ್ಮಕ ಮಂಜೂರಾತಿ ದೊರೆತಿರುವ ಯೋಜನೆಗಳಿಗೆ ಡಿಬಿಟಿ ಮೂಲಕ ಹಣ ಬಿಡುಗಡೆಗೆ ಬಾಕಿ ಇದೆ. ಆದರೆ ಅರಿವು ಶೈಕ್ಷಣಿಕ ಸಾಲ ನವೀಕರಣ ಯೋಜನೆಯಡಿ 18.70 ಕೋಟಿ ರು ಗುರಿ ನಿಗದಿಪಡಿಸಿತ್ತು. ಈವರೆಗೆ 15.44 ಕೋಟಿ ರು ಖರ್ಚಾಗಿದೆ. 3.25 ಕೋಟಿ ರು ಬಾಕಿ ಇದೆ. ಈ ಅನುದಾನವೂ ಸಂಪೂರ್ಣವಾಗಿ ಖರ್ಚಾಗುವ ಸಾಧ್ಯತೆ ಇಲ್ಲ. ಹೀಗಾಗಿ 3.00 ಕೋಟಿ ರು ಗಳ ಅನುದಾನವನ್ನು ನಿರ್ದೇಶಕ ಮಂಡಳಿಯ ವಿವೇಚನಾ ಕೋಟಾದಡಿ ಬಳಸಿಕೊಳ್ಳಲು ಸರ್ವಾನುಮತದಿಂದ ತೀರ್ಮಾಣ ಕೈಗೊಂಡಿರುವುದು ತಿಳಿದು ಬಂದಿದೆ.
ಹಾಗೆಯೇ ನಿಗಮದಲ್ಲಿ ಕಳೆದ ನಾಲ್ಕು ವರ್ಷಗಳಿಂದಲೂ ಜಿಲ್ಲಾ ಕಚೇರಿಗಳಲ್ಲಿ ಪ್ರಥಮದರ್ಜೆ ಸಹಾಯಕರು ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೇ ಆಡಳಿತಾತ್ಮಕ ಹಿತದೃಷ್ಟಿಯಿಂದ ಮತ್ತು ರಿಕವರಿಯಲ್ಲಿ ಪ್ರಗತಿ ಸಾಧಿಸಿಲ್ಲ. ಹೀಗಾಗಿ ಅವರನ್ನು ವರ್ಗಾವಣೆ ಮಾಡಬೇಕು ಎಂದು ಅಧ್ಯಕ್ಷರು ಸಭೆಗೆ ಕೋರಿದ್ದರು. ಈ ಸಂಬಂಧ ಸೂಕ್ತ ಕ್ರಮ ವಹಿಸಬೇಕು ಎಂದು ಸಭೆಯು ಸೂಚಿಸಿರುವುದು ಗೊತ್ತಾಗಿದೆ.
ಗಂಗಾಕಲ್ಯಾಣ ಯೋಜನೆಯಡಿ ಕಳೆದ ಸಾಲುಗಳಲ್ಲಿ ಕೊಳವೆ ಬಾವಿಗಳನ್ನು ಕೊರೆಯಲು ಬಾಕಿ ಇವೆ. ಟೆಂಡರ್ ಮೂಲಕ ಆಯ್ಕೆಯಾಗಿ ನಿಗಮದ ಕಾರ್ಯಾದೇಶದಂಗತೆ ನಿಗದಿಪಡಿಸಿದ ಗುರಿಯಂತೆ ಶೇ. 90ರಷ್ಟನ್ನು ಕೊಳವೆ ಬಾವಿಗಳನ್ನು ಕೊರೆದು ಪೂರ್ಣಗೊಳಿಸಿರುವ ಡ್ರಿಲ್ಲಿಂಗ್ ಏಜೆನ್ಸಿಗಳಿಗೆ 2026-27ನೇ ಸಾಲಿನಲ್ಲಿ ಮಂಜೂರಾಗಿರುವ ಕೊಳವೆ ಬಾವಿಗಳನ್ನು ಕೊರೆಯಲು ಅವಕಾಶ ನೀಡಬೇಕು. ಇದು ಸಾಧ್ಯವಾದಲ್ಲಿ ಮಾತ್ರ 2025-26ನೇ ಸಾಲಿನಲ್ಲಿ ನಿಗದಿಪಡಿಸಿದ ದರದಂತೆ ಕೊಳವೆ ಬಾವಿಗಳನ್ನು ಕೊರೆಯಲು ಸಿದ್ಧ ಎಂದು ಡ್ರಿಲ್ಲಿಂಗ್ ಏಜೆನ್ಸಿಗಳು ಹೇಳಿರುವ ಕುರಿತು ಸಭೆಯಲ್ಲಿ ಚರ್ಚೆಯಾಗಿದೆ.

2025-26ನೇ ಸಾಲಿನಲ್ಲಿ ನಿಗದಿಪಡಿಸಿದ ದರದಂತೆಯೇ 2026-27ನೇ ಸಾಲಿನಲ್ಲೂ ಕೊಳವೆ ಬಾವಿ ಕೊರೆಯುವ ಬಗ್ಗೆ ಕಾರ್ಯಾದೇಶ ನೀಡುವ ಸಂಬಂಧ ಆರ್ಥಿಕ ಇಲಾಖೆ ಮತ್ತು ಸಚಿವ ಸಂಪುಟದ ಅನುಮೋದನೆಗೆ ಮಂಡಿಸಲು ಸಭೆಯು ತೀರ್ಮಾನಿಸಿರುವುದು ತಿಳಿದು ಬಂದಿದೆ.




