ಬೆಂಗಳೂರು; ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿ ಆಗಿದ್ದ ಮೊದಲನೇ ಆರ್ಥಿಕ ವರ್ಷದಲ್ಲಿ ಜಿಎಸ್‌ಡಿಪಿಯು 23,34,000 ಕೋಟಿ ರು ಇದ್ದರೂ ಸಹ ಉನ್ನತ ಶಿಕ್ಷಣಕ್ಕಾಗಿ ಕೇವಲ 5,646 ಕೋಟಿ ರುಪಾಯಿ ಮಾತ್ರ ಖರ್ಚಾಗಿತ್ತು. ಉನ್ನತ ಶಿಕ್ಷಣಕ್ಕಾಗಿ ನೀಡುತ್ತಿರುವ ಅನುದಾನವು ಗಮನಾರ್ಹವಾಗಿ ಕಡಿಮೆ ಆಗುತ್ತಿರುವ ಕಾರಣ, ಕರ್ನಾಟಕವು ಇತರೆ ರಾಜ್ಯಗಳಿಗೆ ಹೋಲಿಸಿದರೇ ಕೆಳಗಿನ ಸ್ಥಾನದಲ್ಲಿದೆ.
ವಿಶೇಷವಾಗಿ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಿಗೆ ಸರ್ಕಾರಿ ಅನುದಾನವೂ ಕಡಿಮೆಯಾಗುತ್ತಿದೆ. ರಾಜ್ಯದಲ್ಲಿ ಹೊಸದಾಗಿ ಸ್ಥಾಪನೆಯಾಗಿರುವ ವಿಶ್ವವಿದ್ಯಾಲಯಗಳೂ ಸಹ ಆರ್ಥಿಕವಾಗಿ ಶೋಚನೀಯವಾಗಿವೆ. ಕರ್ನಾಟಕ ರಾಜ್ಯವು ಉನ್ನತ ಶಿಕ್ಷಣಕ್ಕಾಗಿ ಜಿಎಸ್‌ಡಿಪಿಯ ಶೇ. 0.23ರಷ್ಟು ಮಾತ್ರ ಖರ್ಚು ಮಾಡುತ್ತಿದೆ. ಹಣದ ಕೊರತೆಯು ವಿಪರೀತವಾಗಿರುವ ಕಾರಣ ರಾಜ್ಯದ ಉನ್ನತ ಶಿಕ್ಷಣ ವ್ಯವಸ್ಥೆಯ ದೀರ್ಘ ಕಾಲೀನ ಆರೋಗ್ಯ ಮತ್ತು ಗುಣಮಟ್ಟದ ಬಗ್ಗೆ ಗಂಭೀರ ಆತಂಕವನ್ನು ಹುಟ್ಟು ಹಾಕಿದೆ ಎಂದು ರಾಜ್ಯ ಶಿಕ್ಷಣ ನೀತಿ ಆಯೋಗವು ಕಳವಳ ವ್ಯಕ್ತಪಡಿಸಿದೆ.
ಪ್ರೊ. ಸುಖ್‌ದೇವ್ ಥೋರಟ್ ನೇತೃತ್ವದ ಆಯೋಗವು ಉನ್ನತ ಶಿಕ್ಷಣಕ್ಕೆ ಹಣಕಾಸು ಪೂರೈಕೆ ಕುರಿತು ಮತ್ತು ಒಟ್ಟಾರೆ ಉನ್ನತ ಶಿಕ್ಷಣ ನೀತಿ ಯಲ್ಲಿ ಉದ್ಭವವಾಗಿರುವ ಆತಂಕದ ಸ್ಥಿತಿ ಕುರಿತು ವಿವರವಾಗಿ ಚರ್ಚಿಸಿದೆ. ಸುಖ್ ದೇವ್ ಥೋರಟ್ ನೇತೃತ್ವದ ಆಯೋಗವು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗಲೇ ತನ್ನ ವರದಿ ನೀಡಿದೆ.
ಕೇಂದ್ರ ಶಿಕ್ಷಣ ಸಚಿವಾಲಯವು ರಾಜ್ಯ ಕೇಂದ್ರಾಡಳಿತ ಪ್ರದೇಶಗಳ ಶಾಲೆಗಳ ಶೈಕ್ಷಣಿಕ ಗುಣಮಟ್ಟ ಕುರಿತ ಮತ್ತು ಕಾರ್ಯಕ್ಷಮತೆ ಶ್ರೇಯಾಂಕ ವರದಿಯೂ ಈಗ ಬಿಡುಗಡೆಯಾಗಿದೆ. 2025-26ನೇ ಸಾಲಿನಲ್ಲಿ ಕರ್ನಾಟಕವು ಹಿಂದಿನ ವರ್ಷಕ್ಕಿಂತ ತನ್ನ ಒಟ್ಟಾರೆ ಸ್ಥಾನವನ್ನು ಉತ್ತಮಪಡಿಸಿಕೊಂಡಿದೆ ಎಂದು ವರದಿ ಹೇಳಿದೆ. ಥೋರಟ್ ಅವರ ನೇತೃತ್ವದ ಆಯೋಗವು ಸಹ 2025-26ರಲ್ಲಿಯೇ ನೀಡಿರುವ ವರದಿಯಲ್ಲಿ ಉನ್ನತ ಶಿಕ್ಷಣದಲ್ಲಿ ಕರ್ನಾಟಕವು ಇತರೆ ರಾಜ್ಯಗಳಿಗಿಂತಲೂ ಕೆಳಗಿಳಿದಿದೆ ಎಂದು ವ್ಯಕ್ತಪಡಿಸಿರುವ ಕಳವಳಕಾರಿ ಸಂಗತಿಯೂ ಮುನ್ನೆಲೆಗೆ ಬಂದಿದೆ.
ಆದರೆ ಈ ವರದಿ ಕುರಿತು ಸಿದ್ದರಾಮಯ್ಯ ಅವರಾಗಲೀ, ನೂತನ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಾಗಲೀ ಗಂಭೀರವಾಗಿ ಪರಿಗಣಿಸಿಲ್ಲ ಹಾಗೂ ಚರ್ಚಿಸಿಯೂ ಇಲ್ಲ. ಮತ್ತು ವರದಿಯನ್ನು ವಿಧಾನಮಂಡಲದಲ್ಲಿಯೂ ಮಂಡಿಸಿಲ್ಲ. ಈ ವರದಿ ಕುರಿತು ಸಲಹೆ, ಶಿಫಾರಸ್ಸು ನೀಡಲು ಹಿಂದಿನ ಸಚಿವರುಗಳಿಗೆ ಕಳಿಸಿತ್ತು. ಆದರೆ ಯಾವೊಬ್ಬ ಸಚಿವರೂ ಆಯೋಗ ನೀಡಿರುವ ವರದಿ ಮೇಲೆ ತಮ್ಮ ಅಭಿಪ್ರಾಯ, ಶಿಫಾರಸ್ಸುಗಳನ್ನು ನೀಡಿಲ್ಲ ಎಂದು ಗೊತ್ತಾಗಿದೆ.
ಥೋರಟ್ ನೇತೃತ್ವದ ಆಯೋಗವು ನೀಡಿರುವ ವರದಿಯ ಎಲ್ಲಾ ಸಂಪುಟಗಳೂ ದಿ ಫೈಲ್ ಗೆ ಲಭ್ಯವಾಗಿವೆ.

ಶೇ.0.23ರಷ್ಟು ಮಾತ್ರ ಖರ್ಚು- ಮಾನದಂಡಗಳಿಗಿಂತಲೂ ಕಡಿಮೆ
ಕೊಠಾರಿ ಆಯೋಗವು ನಿಗದಿಪಡಿಸಿದ ಮಾನದಂಡಗಳ ಪ್ರಕಾರ ರಾಷ್ಟ್ರವು ಶಿಕ್ಷಣಕ್ಕಾಗಿ ಜಿಡಿಪಿಯ ಶೇ. 6ರಷ್ಟು ಖರ್ಚು ಮಾಡಬೇಕು. ಆದ್ದರಿಂದ ರಾಜ್ಯವು ಶಿಕ್ಷಣಕ್ಕಾಗಿ ಜಿಎಸ್‌ಡಿಪಿಯ ಶೇ. 6ರಷ್ಟನ್ನು ಮೀಸಲಿಡಬೇಕು. ಅದರಲ್ಲಿ ಶಾಲಾ ಶಿಕ್ಷಣಕ್ಕಾಗಿ ಶೇ. 4 ಮತ್ತು ಉನ್ನತ ಶಿಕ್ಷಣಕ್ಕಾಗಿ ಶೇ. 2ರಷ್ಟು ಖರ್ಚು ಮಾಡಬೇಕಾಗಿದೆ. ಕರ್ನಾಟಕ ರಾಜ್ಯವು ಉನ್ನತ ಶಿಕ್ಷಣಕ್ಕಾಗಿ ಜಿಎಸ್‌ಡಿಪಿಯ ಶೇ. 0.23ರಷ್ಟು ಮಾತ್ರ ಖರ್ಚು ಮಾಡುತ್ತಿದೆ. ಇದು ಕೊಠಾರಿ ಆಯೋಗವು ಉನ್ನತ ಶಿಕ್ಷಣಕ್ಕಾಗಿ ನಿಗದಿಪಡಿಸಿದ ಮಾನದಂಡಗಳಿಗಿಂತ ಕಡಿಮೆಯಾಗಿದೆ ಎಂದು ಆಯೋಗವು ತನ್ನ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಗಣನೀಯ ಅಸಮಾನತೆ
ಅದೇ ರೀತಿಯಲ್ಲಿ ಒಟ್ಟು ಶಿಕ್ಷಣ ಬಜೆಟ್‌ನಲ್ಲಿ ಉನ್ನತ ಶಿಕ್ಷಣಕ್ಕೆ ವ್ಯಯವಾಗುತ್ತಿರುವ ವೆಚ್ಚ ಪ್ರಸ್ತುತ ಶೇ. 14ರಷ್ಟಿದೆ. ಇದು ಸುಮಾರು ಶೇ. 30ರಷ್ಟಾದರೂ ಇರಬೇಕಿತ್ತು. ಒಟ್ಟು ಶಿಕ್ಷಣ ಬಜೆಟ್‌ನಲ್ಲಿ ಉನ್ನತ ಶಿಕ್ಷಣ ಬಜೆಟ್‌ನ ಪಾಲನ್ನು ಶೇ.14ರಿಂದ ಕನಿಷ್ಟ ಶೇ. 25ಕ್ಕೆ ಹೆಚ್ಚಿಸಬೇಕು. ಉನ್ನತ ಶಿಕ್ಷಣ ಬಜೆಟ್‌ನ್ನು ಅದರ ವ್ಯಾಪ್ತಿಯಲ್ಲಿ ಬರುವ ಇತರ ಉಪ ವಲಯಗಳಿಗೆ ಸಂಬಂಧಿಸಿದ ವಿಶ್ಲೇಷಿಸಿದಾಗ ಗಣನೀಯ ಅಸಮಾನತೆ ಕಂಡು ಬರುತ್ತದೆ. ಒಟ್ಟು ಉನ್ನತ ಶಿಕ್ಷಣದ ಬಜೆಟ್‌ನಲ್ಲಿ ಕಾಲೇಜು ಶಿಕ್ಷಣವು ಶೇ.56ರಷ್ಟು ಅತಿ ದೊಡ್ಡ ಪಾಲನ್ನು ಪಡೆಯುತ್ತಿದೆ. ತಾಂತ್ರಿಕ ಶಿಕ್ಷಣವು ಶೇ. 23 ಮತ್ತು ವಿಶ್ವವಿದ್ಯಾಲಯ ಶಿಕ್ಷಣವು ಕೇವಲ ಶೇ. 17ರಷ್ಟು ಪಾಲು ಪಡೆಯುತ್ತಿದೆ ಎಂದು ವಿವರಿಸಿದೆ.
‘ಗಮನಾರ್ಹ ಸಂಗತಿ ಎಂದರೇ ವಿಶ್ವವಿದ್ಯಾಲಯಗಳಿಗೆ ಹಂಚಿಕೆಯಾದ ನಿಧಿಯ ಶೇ. 98ರಷ್ಟು ಹಣವನ್ನು ವೇತನ ಪಾವತಿಗಾಗಿ ಖರ್ಚು ಮಾಡಿದರೇ ನಿರ್ಣಾಯಕ ಅಭಿವೃದ್ಧಿ ಕೆಲಸಗಳಿಗೆ ಕೇವಲ ಶೇ.1ರಿಂದ ಶೇ. 2ರಷ್ಟು ಮಾತ್ರ ಅನುದಾನ ಮಾತ್ರ ಉಳಿಯುತ್ತದೆ,’ ಎಂದು ಆಯೋಗವು ವಿಶ್ಲೇಷಿಸಿದೆ.

ವೇತನಕ್ಕೆ ಶೇ. 89, ಅಭಿವೃದ್ಧಿಗೆ ಶೇ. 11ರಷ್ಟು ಮೀಸಲು
2023-24ರ ಆರ್ಥಿಕ ವರ್ಷದಲ್ಲಿ ಕಾಲೇಜು ಶಿಕ್ಷಣವು ತನ್ನ ಅನುದಾನದ ಶೇ. 89ರಷ್ಟನ್ನು ವೇತನ ಅನುದಾನವನ್ನಾಗಿ ಪಡೆದಿದೆ. ಕೇವಲ ಶೇ. 11ರಷ್ಟನ್ನು ಮಾತ್ರ ಆಭಿವೃದ್ಧಿ ಕಾರ್ಯಗಳಿಗೆ ಮೀಸಲಿಟ್ಟಿದೆ. ತಾಂತ್ರಿಕ ಶಿಕ್ಷಣ ಮತ್ತು ವಿಶ್ವವಿದ್ಯಾಲಯಗಳಲ್ಲಿಯೂ ಇದೇ ಪ್ರವೃತ್ತಿ ಕಂಡುಬಂದಿದೆ. ಇದು ನಿಧಿಯ ಬಹುದೊಡ್ಡ ಭಾಗವು ಸುಸ್ಥಿರ ಮೂಲ ಸೌಕರ್ಯ ಅಥವಾ ಶೈಕ್ಷಣಿಕ ಪ್ರಗತಿಗಿಂತ ನಿರ್ವಹಣಾ ವೆಚ್ಚಗಳಿಗಾಗಿ ಹೆಚ್ಚು ವ್ಯಯವಾಗುತ್ತಿದೆ ಎಂಬುದನ್ನು ಸೂಚಿಸುತ್ತದೆ. ಈ ಬಗೆಯ ಹಂಚಿಕೆ, ಗುಣಮಟ್ಟ ಹೆಚ್ಚಳ ಮತ್ತು ಸಂಶೋಧನಾ ಸಾಮರ್ಥ್ಯವನ್ನು ದೀರ್ಘ ಕಾಲದವರೆಗೆ ಕಾಯ್ದುಕೊಂಡು ಹೋಗುವ ಬಗ್ಗೆ ಚಿಂತನೆಗೆ ಹಚ್ಚುತ್ತದೆ ಎಂದು ವಿಶ್ಲೇಷಿಸಿದೆ.
ರಾಜ್ಯ ಅನುದಾನ ಕೊರತೆ- ಕುಸಿತದ ಪರಿಣಾಮಗಳೇನು?
ಕರ್ನಾಟಕದ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ಸರ್ಕಾರಿ ಅನುದಾನಗಳು ಕಡಿಮೆಯಾಗುತ್ತಿದೆ. ಇದನ್ನು ಸರಿದೂಗಿಸಲು ಪ್ರಾಥಮಿಕವಾಗಿ ಸ್ವ-ಹಣಕಾಸು ಕೋರ್ಸ್‌ಗಳು ಮತ್ತು ಶುಲ್ಕಗಳ ಮೂಲಕ ಆಂತರಿಕ ಸಂಪನ್ಮೂಲ ಉತ್ಪಾದನೆಯನ್ನು ಹೆಚ್ಚಾಗಿ ಅವಲಂಬಿಸಿವೆ. ಈ ಪಲ್ಲಟವು ವಿವಿಧ ಸಂಸ್ಥೆಗಳಲ್ಲಿ ಸ್ಪಷ್ಟವಾಗಿ ಕಂಡು ಬುತ್ತಿದೆ. ಅವುಗಳ ನಿರ್ವಹಣೆ ಮತ್ತು ಗುಣಮಟ್ಟದ ಮೇಲೆ ಗಣನೀಯ ಪರಿಣಾಮ ಬೀರುತ್ತದೆ ಎಂದು ಅಯೋಗವು ಎಚ್ಚರಿಸಿದೆ.
ಉದಾರಹಣೆಗೆ ಮಂಗಳೂರು ವಿಶ್ವವಿದ್ಯಾಲಯದ ಆಂತರಿಕ ಸಂಪನ್ಮೂಲಗಳು ಕಳೆದ ಐದು ವರ್ಷಗಳಲ್ಲಿ ಅದರ ಒಟ್ಟು ಆದಾಯದ ಶೇ. 42 ರಿಂದ ಶೇ 54ರಷ್ಟಿದೆ. ಇಲ್ಲಿನ ಸ್ನಾತಕೋತ್ತರ ವಿಭಾಗದಲ್ಲಿ 80 ಅಧ್ಯಾಪಕರ ಹುದ್ದೆಗಳಿವೆ. ಇದು ಅವರ ವೇತನಗಳನ್ನು ಪೂರೈಸುವಷ್ಟರ ಮಾತ್ರ ಇದೆ. ಅದೇ ರೀತಿ ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯಕ್ಕೂ ಸಹ ರಾಜ್ಯ ಸರ್ಕಾರದ ಅನುದಾನ ಕಡಿಮೆಯಾಗಿದೆ. ಬೋಧಕ ವರ್ಗದ ನೇಮಕಾತಿಯಲ್ಲಿಯೂ ಕೊರತೆ ಎದುರಿಸುತ್ತಿದೆ. ಖಾಲಿ ಹುದ್ದೆಗಳ ಹೆಚ್ಚಳಕ್ಕೆ ಕಾರಣವಾಗಿದೆ. ಇದು ಬೋಧನಾ ಗುಣಮಟ್ಟದ ಮೆಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಆಂತರಿಕ ಸ್ವೀಕೃತಿಯು ಶೇ.50ರಷ್ಟಿದೆ. ಇದು 2023-24ರಲ್ಲಿ ಶೇ. 62.7ಕ್ಕೆ ತಲುಪಿದೆ ಎಂದು ವಿವರಿಸಿದೆ.

ಹೊಸ ವಿಶ್ವವಿದ್ಯಾಲಯಗಳಲ್ಲೂ ಇದೇ ಪ್ರವೃತ್ತಿ
ಹೊಸದಾಗಿ ಸ್ಥಾಪಿತವಾದ ವಿಶ್ವವಿದ್ಯಾಲಯಗಳಲ್ಲೂ ಈ ಪ್ರವೃತ್ತಿಯನ್ನು ಗಮನಿಸಬಹುದಾಗಿದೆ. 2023-24ರಲ್ಲಿ ಹಾಸನ ವಿಶ್ವವಿದ್ಯಾಲಯವು ಶುಲ್ಕಗಳು, ಸಂಯೋಜನೆ, ಪ್ರವೇಶಾತಿ ಮತ್ತು ಪರೀಕ್ಷಾ ಶುಲ್ಕಗಳಿಂದ ಆಂತರಿಕವಾಗಿ .460 ಕೋಟಿ ರು ಸಂಗ್ರಹಿಸಿದೆ. ಈ ಹಣವನ್ನು ತಾತ್ಕಾಲಿಕ ಬೋಧಕ ವರ್ಗದ ವೇತನ ಮತ್ತು ನಿರ್ವಹಣೆಗಾಗಿ ಬಳಸಿತ್ತು. ಕೊಡಗು ವಿಶ್ವವಿದ್ಯಾಲಯದ ಆಂತರಿಕ ಸ್ವೀಕೃತಿಯು 2.28 ಕೋಟಿ ಇದೆ. ರಾಜ್ಯ ಅನುದಾನವು ಕೇವಲ 38 ಲಕ್ಷ ರು ಆಗಿದೆ. ಇದು ಕೇವಲ ಉಪ ಕುಲಪತಿ ಮತ್ತು ರಿಜಿಸ್ಟ್ರಾರ್‍ಗಳಿಗೆ ವೇತನ ನೀಡಲು ಮಾತ್ರ ಸಾಕಾಗುತ್ತದೆ. ಉಳಿದ ವೆಚ್ಚಗಳಿಗೆ ಶುಲ್ಕಗಳ ಮೂಲಕ ಹಣಕಾಸು ಕ್ರೋಢೀಕರಣ ಮಾಡಬೇಕಿದೆ. 2023ರಲ್ಲಿ ಬಾಗಲಕೋಟೆ ವಿಶ್ವವಿದ್ಯಾಲಯವು ಯಾವುದೇ ಸರ್ಕಾರಿ ಅನುದಾನವನ್ನು ಪಡೆಯಲಿಲ್ಲ. ಇದು ಸಂಪೂರ್ಣವಾಗಿ ಶುಲ್ಕದ ಮೂಲಕ ಆಂತರಿಕ ಸಂಪನ್ಮೂಲಗಳನ್ನ ಕ್ರೋಢೀಕರಣವನ್ನು ಅವಲಂಬಿಸಿತ್ತು ಎಂದು ಹೇಳಿದೆ.
ಗಂಭೀರ ಸವಾಲುಗಳು ಇವೆಯೇ?
ಖಾಸಗಿ ಅನುದಾನಿತ ಕಾಲೇಜುಗಳು ಪೂರ್ಣ ವೆಚ್ಚವನ್ನು ಮರುಪಡೆಯಲು ಸ್ವ-ಹಣಕಾಸು ಕಾರ್ಯಕ್ರಮಗಳನ್ನು ವ್ಯಾಪಕವಾಗಿ ನಡೆಸುತ್ತಿವೆ. ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹ ಈ ಮಾದರಿಯನ್ನು ಅಳವಡಿಸಿಕೊಳ್ಳಲು ಪ್ರಾರಂಭಿಸಿವೆ. ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾಥಮಿಕ ಹಣಕಾಸು ಮೂಲವಾಗಿ ಶುಲ್ಕಗಳ ಮೇಲಿನ ಹೆಚ್ಚುತ್ತಿರುವ ಅವಲಂಬನೆಯು ಸಮತೆ ಮತ್ತು ಗುಣಮಟ್ಟ ಸಾಧಿಸಬೇಕೆನ್ನುವ ಗುರಿಗೆ ಗಂಭೀರ ಸವಾಲನ್ನು ಒಡ್ಡುತ್ತವೆ. ವಿಶ್ವವಿದ್ಯಾಲಯಗಳಲ್ಲಿ ಆರಂಭವಾಗುವ ಹೊಸ ವಿಭಾಗ/ಇಲಾಖೆಗಳಿಗೆ ಮೂಲ ಸೌಕರ್ಯಕ್ಕೆ ಮತ್ತು ಮಂಜೂರಾದ ಹುದ್ದೆಗಳಿಗೆ ಹೆಚ್ಚುವರಿ ಅನುದಾನವಿಲ್ಲವಾಗಿದೆ. ಹೀಗಾಗಿ ಸಾರ್ವಜನಿಕ ವಿಶ್ವವಿದ್ಯಾಲಯಗಳು ಜಾಗತಿಕ ಮತ್ತು ಉದ್ಯೋಗ ಮಾರುಕಟ್ಟೆಯ ಬೇಡಿಕೆಗಳಿಗೆ ಸ್ಪಂದಿಸುವ ಕಾರ್ಯಕ್ರಮಗಳನ್ನು ಆರಂಭಿಸಲು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿವೆ. ಆದರೆ ಖಾಸಗಿ ವಿಶ್ವವಿದ್ಯಾಲಯಗಳು ಈ ಅಂತರವನ್ನು ಬಂಡವಾಳ ಮಾಡಿಕೊಂಡು ಮಾರುಕಟ್ಟೆ ಅಗತ್ಯಗಳನ್ನು ಮನಗಂಡು ವಿದ್ಯಾರ್ಥಿಗಳನ್ನು ಸೆಳೆಯುತ್ತಿವೆ ಎಂದು ವಿಶ್ಲೇಷಿಸಿದೆ.

ಸೂಕ್ತ ಅನುದಾನ ಕೊಡುತ್ತಿಲ್ಲವೇಕೆ?
ರಾಜ್ಯವು ಸೂಕ್ತ ಅನುದಾನ ಕೊಡದಿರುವುದು ಮತ್ತು ಕಾಲೇಜುಗಳು, ವಿಶ್ವವಿದ್ಯಾಲಯಗಳು ಮತ್ತು ಇತರೆ ಸ್ವತಂತ್ರ ಸಂಸ್ಥೆಗಳ ಹುದ್ದೆಗಳ ಮೇಲೂ ಪರಿಣಾಮ ಬೀರುತ್ತವೆ. ನಿರಂತರ ಆರ್ಥಿಕ ಕೊರತೆಯಿಂಂದಾಗಿ ರಾಜ್ಯಾದ್ಯಂತ ಸಾರ್ವಜನಿಕ ವಿಶ್ವವಿದ್ಯಾಲಯಗಳು ಹಲವಾರ ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ಸಾಧ್ಯವಾಗುತ್ತಿಲ್ಲ. ಇದು ಅತಿಥಿ ಅಥವಾ ತಾತ್ಕಾಲಿಕ ಅಧ್ಯಾಪಕರ ಮೇಲಿನ ಹೆಚ್ಚಿನ ಅವಲಂಬನೆಗೆ ಕಾರಣವಾಗುತ್ತದೆ. ಈ ಸವಾಲು ವ್ಯಾಪಕವಾಗಿವೆ. ಕಾಲೇಜು, ತಾಂತ್ರಿಕ ಮತ್ತು ವಿಶ್ವವಿದ್ಯಾಲಯ ಶಿಕ್ಷಣದಲ್ಲಿ ಮಂಜೂರಾದ ಬೋಧನಾ ಹುದ್ದೆಗಳಲ್ಲಿ ಗಮನಾರ್ಹ ಪ್ರಮಾಣ ಖಾಲಿಯಾಗಿಯೇ ಇದೆ. ವಿಶ್ವವಿದ್ಯಾಲಯಗಳಲ್ಲಿ ಮಂಜೂರಾದ ಒಟ್ಟು ಹುದ್ದೆಗಳಲ್ಲಿ ಅರ್ಧಕ್ಕಿಂತ ಖಾಲಿ ಇದೆ. ಮುಖ್ಯವಾಗಿ ಸಿಬ್ಬಂದಿ ಕೊರತೆ ವ್ಯಾಪಕವಾಗಿದೆ ಎಂದು ಆಯೋಗವು ವಿವರಿಸಿದೆ.
ವಿಶೇಷವಾಗಿ ಹೊಸ ಮಾರುಕಟ್ಟೆ ಆಧರಿತ ಕೋರ್ಸ್‌ಗಳಿಗೆ ಕಾಯಂ ಅಧ್ಯಾಪಕರು ಮತ್ತು ತಜ್ಞ ಮಾರ್ಗದರ್ಶಕರು ಇಲ್ಲ. ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲಿನ ಶಿಕ್ಷಣ ಗುಣಮಟ್ಟದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಇದು ವಿದ್ಯಾರ್ಥಿಗಳ ಕಳಪೆ ಗುಣಮಟ್ಟದ ಫಲಿತಾಂಶಗಳಿಗೆ ಕಾರಣವಾಗುತ್ತದೆ.
ಹಣಕಾಸಿನ ಕೊರತೆ- ಗುಣಮಟ್ಟದ ಮೇಲೆ ಪರಿಣಾಮ
ಹಣಕಾಸಿನ ಕೊರತೆಯು ಶಿಕ್ಷಣದ ಗುಣಮಟ್ಟವನ್ನು ನೇರವಾಗಿ ಕುಗ್ಗಿಸುತ್ತದೆ. ಮುಖ್ಯವಾಗಿ ವಿಶ್ವವಿದ್ಯಾಲಯಗಳು ನಿರ್ಣಾಯಕ ಬೋಧಕ ಹುದ್ದೆಗಳನ್ನು ಭರ್ತಿ ಮಾಡುವುದನ್ನು ತಡೆಯುತ್ತದೆ. ಅತಿಥಿ ಅಥವಾ ತಾತ್ಕಾಲಿಕ ಶಿಕ್ಷಕರ ಮೇಲಿನ ಈ ಅವಲಂಬನೆಯಿಂದ ವಿದ್ಯಾರ್ಥಿಗಳ ಕಲಿಕೆಗೆ ಅಗತ್ಯವಾದ ನಿರಂತರವಾದ ಸಂವಹನ ಮತ್ತು ಮಾರ್ಗದರ್ಶನ ಸೂಕ್ತ ಪ್ರಮಾಣದಲ್ಲಿ ದೊರೆಯುವುದಿಲ್ಲ. ತರಗತಿ ಗಾತ್ರ ದೊಡ್ಡದಾದಂತೆ ವೈಯಕ್ತಿಕ ಗಮನ ಕಡಿಮೆಯಾಗುತ್ತದೆ. ಯುಜಿಸಿ ಸೂಚಿಸಿದ ಶಿಕ್ಷಕ-ವಿದ್ಯಾರ್ಥಿ ಅನುಪಾತಗಳಿಗೆ ಬದ್ಧವಾಗಿರುವುದು ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡಲು ತುಂಬಾ ಮುಖ್ಯವಾಗಿದೆ. ಇದನ್ನು ಸಾಧ್ಯವಾಗಿಸಬೇಕೆಂದರೇ ಸರ್ಕಾರವು ಶಿಕ್ಷಣ ಸಂಸ್ಥೆಗಳಿಗೆ ನೀಡುವ ಅನುದಾನ ಕಡಿತ ಮಾಡದೇ ಸಾಕಷ್ಟು ಪ್ರಮಾಣದಲ್ಲಿ ಮಂಜೂರಾದ ಹುದ್ದೆಗಳಿಗೆ ಖಾಯಂ ಬೋಧನಾ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬೇಕಾಗಿದೆ ಎಂದು ಸಲಹೆ ನೀಡಿದೆ.

ಅಲ್ಲದೇ ಹಣದ ಕೊರತೆಯು ಶಿಕ್ಷಕರ ಸಂಶೋಧನೆ ಮತ್ತು ಶೈಕ್ಷಣಿಕ ಬೆಳವಣಿಗೆ ಎರಡರ ಮೇಲೂ ಪರಿಣಾಮ ಬೀರುವ ಮೂಲಕ ಶಿಕ್ಷಣದ ಗುಣಮಟ್ಟವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಇದು ಪರಿಣಾಮಕಾರಿ ಬೋಧನೆಯ ಜತೆ ನೇರ ಸಂಬಂಧ ಹೊಂದಿದೆ. ಈ ಹಣಕಾಸಿನ ಮುಗ್ಗಟ್ಟು, ಸೀಮಿತ ಗ್ರಂಥಾಲಯ ಸಂಪನ್ಮೂಲಗಳಂತಹ ಅಸಮರ್ಪಕ ಮೂಲಸೌಕರ್ಯಗಳಿಗೆ ಕಾರಣವಾಗುತ್ತದೆ ಎಂದಿರುವ ಆಯೋಗವು ಕರ್ನಾಟಕ ಪಶು ವೈದ್ಯಕೀಯ,ಪ್ರಾಣಿ ಮತ್ತು ಮೀನುಗಾರಿಕೆ ವಿಶ್ವವಿದ್ಯಾಯ ಮತ್ತು ಅದರ ಸಂಯೋಜಿತ ಕಾಲೇಜುಗಳ ಉದಾಹರಣೆ ನೀಡಿದೆ.

‘ತರಗತಿ ಕೊಠಡಿಗಳು ಸಾಕಷ್ಟು ಅಧುನಿಕ ಪ್ರಯೋಗಾಲಯ ಮತ್ತು ಉಪಕರಣಗಳ ಸೌಲಭ್ಯ ಕೊರತೆ ಎದುರಿಸಿವೆ. ವಿದ್ಯಾರ್ಥಿ ನಿಲಯಗಳ ಕೊರತೆ ಇದೆ. ಮತ್ತು ಸರ್ಕಾರಿ ಅನುದಾನವು ಸಾಕಷ್ಟು ಪ್ರಮಾಣದಲ್ಲಿ ಬಿಡುಗಡೆಯಾಗಿಲ್ಲ. ಇದು ಸಂಶೋಧನೆ ಮತ್ತು ವಿಸ್ತರಣಾ ಸಾಮರ್ಥ್ಯಗಳ ಮೇಲೆ ಮತ್ತಷ್ಟು ಪರಿಣಾಮ ಬೀರುತ್ತದೆ,’ ಎಂದು ವಿವರಿಸಿದೆ.
ಜಿಎಸ್‌ಡಿಪಿಯು 23,34,000 ಕೋಟಿ- ಉನ್ನತ ಶಿಕ್ಷಣಕ್ಕೆ ಕೇವಲ 5,646 ಕೋಟಿ ವೆಚ್ಚ
2023-24ರಲ್ಲಿ ಕರ್ನಾಟಕದ ಜಿಎಸ್‌ಡಿಪಿಯು 23,34,000 ಕೋಟಿಗಳಷ್ಟಿತ್ತು. ಆದರೆ ಅದರಲ್ಲಿ ಉನ್ನತ ಶಿಕ್ಷಣಕ್ಕಾಗಿ ಮಾಡಿದ ವೆಚ್ಚ ಕೇವಲ 5,646 ಕೋಟಿಗಳಷ್ಟಿದೆ.ಇದು ಜಿಎಸ್‌ಡಿಪಿಯ ಕೇವಲ ಶೇ.0.23ಗೆ ಸಮನಾಗಿದೆ. ಈ ಗಮನಾರ್ಹ ಕಡಿಮೆ ಹಂಚಿಕೆಯಿಂದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕವು ಕೆಳಗಿರುವಂತಾಗಿದೆ. ಬೇಸರದ ಸಂಗತಿ ಎಂದರೇ ಜಿಎಸ್‌ಡಿಪಿಯ ಶೇಕಡವಾರು ಪ್ರಮಾಣದಲ್ಲಿ ಉನ್ನತ ಶಿಕ್ಷಣಕ್ಕಾಗಿ ಮಾಡಿದ ಬಜೆಟ್ ಹಂಚಿಕೆಯು ಸಹ ಕಳೆದ ದಶಕದಲ್ಲಿ ನಿರಂತರ ಕುಸಿತ ಕಂಡಿದೆ. ಇದು ರಾಜ್ಯದ ಉನ್ನತ ಶಿಕ್ಷಣ ವ್ಯವಸ್ಥೆಯ ದೀರ್ಘಕಾಲಿನ ಆರೋಗ್ಯ ಮತ್ತು ಗುಣಮಟ್ಟ ಬಗ್ಗೆ ಗಂಭೀರ ಆತಂಕ ಹುಟ್ಟು ಹಾಕಿದೆ ಎಂದು ಆಯೋಗವು ಕಳವಳ ವ್ಯಕ್ತಪಡಿಸಿದೆ.

ಸಮಾನ ಅವಕಾಶದ ಮೇಲೆ ಪರಿಣಾಮ
ಕಡಿಮೆಯಾಗುತ್ತಿರುವ ಅನುದಾನದಿಂದಾಗಿ ಸರ್ಕಾರಿ ವಲಯದಲ್ಲಿ ಸಂಸ್ಥೆಗಳು ಮತ್ತು ವಿದ್ಯಾರ್ಥಿಗಳ ಸಂಖ್ಯೆಯ ಕಡಿಮೆಯಾಗುತ್ತಿರುವುದು ಹಾಗೂ ಖಾಸಗಿ ಸಂಸ್ಥೆಗಳು ಮತ್ತು ಸಾರ್ವಜನಿಕ, ಖಾಸಗಿ ಅನುದಾನಿತ ಕಾಲೇಜುಗಳಲ್ಲಿನ ಸ್ವ ಹಣಕಾಸು ಕಾರ್ಯಕ್ರಮಗಳ ಮೂಲಕ ಖಾಸಗಿ ಉನ್ನತ ಶಿಕ್ಷಣ ವಲಯ ವಿಸ್ತರಣೆ ಆಗುತ್ತಿದೆ. ಅಲ್ಲದೇ ಹೆಚ್ಚಿನ ಶುಲ್ಕಗಳಿಂದಾಗಿ ಕಡಿಮೆ ಆದಾಯದ ಮತ್ತು ಎಸ್ ಸಿ ಮತ್ತು ಎಸ್ ಟಿ ಸಮುದಾಯಗಳ ವಿದ್ಯಾರ್ಥಿಗಳ ದಾಖಲಾತಿ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ಎಚ್ಚರಿಸಿದೆ.

ವಿದ್ಯಾರ್ಥಿ ವೇತನಕ್ಕೆ ಶೇ.1.7ರಷ್ಟು ಹಂಚಿಕೆ ಸಾಕೇ?
ಸರಿ ಸುಮಾರು ಶೇ. 72ರಷ್ಟು ವಿದ್ಯಾರ್ಥಿಗಳು ಈಗ ಈ ಶುಲ್ಕ ಅವಲಂಬಿತ ಕೋರ್ಸ್‌ಗಳಲ್ಲಿ ಕಲಿಯುತ್ತಿದ್ದಾರೆ. ಸಾರ್ವಜನಿಕ ಸಂಸ್ಥೆಯ ಬಜೆಟ್‌ನ ಒಂದು ಸಣ್ಣ ಭಾಗ ( ಶೇ.1.7) ಮಾತ್ರ ವಿದ್ಯಾರ್ಥಿ ವೇತನಗಳಿಗೆ ಹಂಚಿಕೆಯಾಗುತ್ತಿದೆ. ಸರ್ಕಾರದ ಆರ್ಥಿಕ ನೆರವು ಶೋಚನೀಯವಾಗಿ ಅಸಮರ್ಪಕವಾಗಿದೆ. ಶಿಕ್ಷಣಕ್ಕಾಗಿ ವ್ಯಯವಾಗುತ್ತಿರುವ ಮೊತ್ತ ಹೆಚ್ಚಾಗುತ್ತಿರುವುದು ಮುಖ್ಯವಾಗಿ ಕಡಿಮೆ ಆದಾಯ, ಎಸ್ ಸಿ ಎಸ್ ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತ ಗುಂಪುಗಳ ದಾಖಲಾತಿ ದರಗಳಲ್ಲಿ ಗಣನೀಯವಾಗಿ ಅಸಮಾನತೆ ಉಂಟು ಮಾಡಿದೆ.




