Tuesday | November 3, 2026 |

2011ರ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿ; ಸುಪ್ರೀಂ ತೀರ್ಪಿನ ಬೆನ್ನಲ್ಲೇ ಮುನ್ನೆಲೆಗೆ ಬಂದ ಎಚ್‌ಡಿಡಿ, ಎಚ್‌ಡಿಕೆ ಟಿಪ್ಪಣಿ

ಬೆಂಗಳೂರು; ಗೆಜೆಟೆಡ್ ಪ್ರೊಬೇಷನರ್ಸ್‌ 2011ನೇ ಸಾಲಿನ ನೇಮಕಾತಿಯಲ್ಲಿ ಗಂಭೀರ ಸ್ವರೂಪದ ಅಕ್ರಮಗಳು ನಡೆದಿವೆ ಎಂದು ಸಿಐಡಿ ತನಿಖಾ ವರದಿಯಲ್ಲಿ ಹೇಳಿದ್ದರೂ ಸಹ ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡ  ಮತ್ತು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಅವರೂ ನೇಮಕಾತಿ ಆದೇಶ ಹೊರಡಿಸಬೇಕು ಎಂದು ಟಿಪ್ಪಣಿ ಹಾಕಿದ್ದರು.

2011ನೇ ಸಾಲಿನ ನೇಮಕಾತಿಯಲ್ಲಿ ಅರ್ಹ ಅಭ್ಯರ್ಥಿಗಳ ಕನಸು ನುಚ್ಚು ನೂರಾಗಿದೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಪೀಠವು ಈಚೆಗಷ್ಟೇ ಹೊರಡಿಸಿದ್ದ ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿತ್ತು. ಅಲ್ಲದೇ 2021-22ರಲ್ಲಿ ಮುಖ್ಯಮಂತ್ರಿಯಾಗಿದ್ದ  ಬಸವರಾಜ ಬೊಮ್ಮಾಯಿ ಅವರು ಜಾರಿಗೊಳಿಸಿದ್ದ ವಿಶೇಷ ಮಸೂದೆಯನ್ನು ಸುಪ್ರೀಂ ಕೋರ್ಟ್‌ ರದ್ದುಗೊಳಿಸಿತ್ತು. ಈ ಬೆಳವಣಿಗೆ ನಡುವೆಯೇ ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡ ಮತ್ತು ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಅವರೂ ಇದೇ ಸಾಲಿನಲ್ಲಿ ಆಯ್ಕೆಯಾಗಿದ್ದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಬೇಕು ಎಂದು ಹೊರಡಿಸಿದ್ದ ಟಿಪ್ಪಣಿಯು ಮುನ್ನೆಲೆಗೆ ಬಂದಿದೆ.

ಎಚ್‌ ಡಿ ದೇವೇಗೌಡ ಮತ್ತು ಎಚ್‌ ಡಿ ಕುಮಾರಸ್ವಾಮಿ ಅವರು ಹೊರಡಿಸಿದ್ದ ಟಿಪ್ಪಣಿ ಪ್ರತಿಗಳು ದಿ ಫೈಲ್‌ ಗೆ ಲಭ್ಯವಾಗಿದೆ.

2011ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರ್ಸ್‌ ಹುದ್ದೆಗಳಿಗೆ 362 ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಆದರೆ ಈ ನೇಮಕಾತಿಯಲ್ಲಿ ಹಲವು ಗಂಭೀರ ಸ್ವರೂಪದ ಅಕ್ರಮಗಳು ನಡೆದಿದ್ದವು ಎಂದು ಸಿಐಡಿ ತನಿಖಾ ವರದಿಯಲ್ಲಿ ಹೇಳಲಾಗಿತ್ತು. ಹೀಗಾಗಿ 2011ನೇ ಸಾಲಿನ ನೇಮಕಾತಿಗೆ ಸಂಬಂಧಿಸಿದಂತೆ ಯಾವುದೇ ಆದೇಶ ಹೊರಡಿಸಿರಲಿಲ್ಲ. ಇದರಿಂದ ಬಾಧಿತರಾಗಿದ್ದ 362 ಅಭ್ಯರ್ಥಿಗಳು ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರ ಕಚೇರಿಯ ಕದವನ್ನು ತಟ್ಟಿದ್ದರು. ಈ ಸಂಬಂಧ ಪ್ರತ್ಯೇಕವಾಗಿ ಮನವಿಯನ್ನು ಸಲ್ಲಿಸಿದ್ದರು.

 

 

 

 

‘ಸಂಪುಟ ಸಮಿತಿಯ ವರದಿಯನ್ನು ಆಧರಿಸಿ 2021ರ ಮೇ 27ರಂದು ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ಕೆಪಿಎಸ್‌ಸಿಯ ಅಂದಿನ ಅಧ್ಯಕ್ಷರು ಮತ್ತು ಸದಸ್ಯರನ್ನು ಅಭಿಯೋಜನೆಗೊಳಿಸಲು ಸಚಿವ ಸಂಪುಟವು ಮಂಜೂರಾತಿ ನೀಡಿರಲಿಲ್ಲ. ಅಲ್ಲದೇ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅನ್ವಯ ಸಚಿವ ಸಂಪುಟ ಸೂಚನೆ ಮೇರೆಗೆ ಕೆಪಿಎಸ್‌ಸಿ ಅಂದಿನ ಅಧ್ಯಕ್ಷರು ಮತ್ತು ಸದಸ್ಯರ ಮೇಲಿನ ವಿಚಾರಣೆಗೆ ಅಭಿಯೋಜನೆ ಮಂಜೂರಾತಿ ಕೋರಿ ಸಿಐಡಿಯು ಡಿಒಪಿಟಿಗೆ ಕಳಿಸಿತ್ತು. ಆ ಕಡತವೂ ಸಹ ಹಿಂದಕ್ಕೆ ಬಂದಿದೆ. ಇಷ್ಟೆಲ್ಲಾ ಆದರೂ ನಮ್ಮ ನೇಮಕಾತಿ ವಿಷಯದಲ್ಲಿ ಸರ್ಕಾರ ಇದುವರೆಗೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಈ ಎಲ್ಲಾ ಅಂಶಗಳನ್ನು ಪರಿಶೀಲಿಸಿ ಸದನದಲ್ಲಿ ಪ್ರಸ್ತಾಪಿಸುವ ಮೂಲಕ ನ್ಯಾಯಪರರಾದ ತಾವು ನಮಗೆ ನ್ಯಾಯ ಕೊಡಿಸಬೇಕು,’ ಎಂದು ಅಭ್ಯರ್ಥಿಗಳು ಮನವಿ ಮಾಡಿದ್ದರು.

ಈ ಮನವಿ ಆಧರಿಸಿ ಎಚ್‌ ಡಿ ಕುಮಾರಸ್ವಾಮಿ ಅವರು 2020ರ ಜನವರಿ 7ರಂದು  ಟಿಪ್ಪಣಿ ಹಾಕಿದ್ದರು.

ಎಚ್‌ ಡಿ ಕೆ ಟಿಪ್ಪಣಿಯಲ್ಲೇನಿದೆ?

2011ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳಿಗೆ ಆಯ್ಕೆಯಾದ 362 ಅಭ್ಯರ್ಥಿಗಳ ನೇಮಕಾತಿಯು ಕಳೆದ 6-7 ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಪ್ರತಿಭಾನ್ವಿತ ಅಭ್ಯರ್ಥಿಗಳ ಜೀವನ ಕತ್ತಲೆಯಲ್ಲಿದೆ. ಈ ಅಭ್ಯರ್ಥಿಗಳು ಯಾವುದೇ ತಪ್ಪು ಮಾಡದಿದ್ದರೂ ಹುದ್ದೆ ಪಡೆಯುವಲ್ಲಿ ವಿಫಲರಾಗಿದ್ದಾರೆ. ಈ ಬಗ್ಗೆ ನ್ಯಾಯ ಒದಗಿಸಬೇಕು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸಚಿವ ಸಂಪುಟದಲ್ಲಿ ಚರ್ಚಿಸಿ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳಿಗೆ ಆಯ್ಕೆಯಾದ 362 ಅಭ್ಯರ್ಥಿಗಳಿಗೆ ಮಾನವೀಯತೆ ದೃಷ್ಟಿಯಿಂದ ನೇಮಕಾತಿ ಆದೇಶ ನೀಡಿ ಅಮಾಯಕ ನೊಂದ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂದು ಎಚ್ ಡಿ ಕುಮಾರಸ್ವಾಮಿ ಅವರು ಟಿಪ್ಪಣಿಯಲ್ಲಿ ಆಶಿಸಿದ್ದರು.

 

 

ಅದೇ ರೀತಿ ಅಭ್ಯರ್ಥಿಗಳು 2021ರ ಡಿಸೆಂಬರ್‍‌ 7ರಂದು ಮಾಜಿ ಪ್ರಧಾನಿ ದೇವೇಗೌಡ ಅವರಿಗೆ ಮನವಿ ಸಲ್ಲಿಸಿದ್ದರು.  ಈ ಮನವಿಯನ್ನು ಪರಿಶೀಲಿಸಿದ್ದ ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡ ಅವರು ಅಂದು ಮುಖ್ಯಮಂತ್ರಿ ಆಗಿದ್ದ ಬಸವರಾಜ ಬೊಮ್ಮಾಯಿ ಅವರಿಗೆ ಟಿಪ್ಪಣಿ ಹಾಕಿದ್ದರು.

ದೇವೇಗೌಡರ ಟಿಪ್ಪಣಿಯಲ್ಲೇನಿತ್ತು?

2011ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರ್ಸ್‌ ಹುದ್ದೆಗಳಿಗೆ ನಡೆದ ಪರೀಕ್ಷೆಯಲ್ಲಿ 362 ಜನ ಅಭ್ಯರ್ಥಿಗಳು ಆಯ್ಕೆಯಾಗಿದ್ದರೂ ಕೂಡ ಈ ಹಿಂದಿನ ಸರ್ಕಾರ ತೆಗೆದುಕೊಂಡ ತಪ್ಪು ನಿರ್ಧಾರಗಳಿಂದ ಮತ್ತು ನ್ಯಾಯಾಲಯಕ್ಕೆ ನೀಡಿದ ತಪ್ಪು ಮಾಹಿತಿಗಳಿಂದಾಗಿ ಯಾವ ತಪ್ಪುಗಳನ್ನೂ ಮಾಡದ ಆಯ್ಕೆಗೊಂಡ 362 ಜನ ಅಭ್ಯರ್ಥಿಗಳು ಅವಕಾಶ ವಂಚಿತರಾಗಿ ಅನ್ಯಾಯಕ್ಕೆ ಒಳಗಾಗಿದ್ದಾರೆ ಎಂದು ಟಿಪ್ಪಣಿಯಲ್ಲಿ ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡ ಅವರು ವಿವರಿಸಿರುವುದು ಗೊತ್ತಾಗಿದೆ.

 

 

ಕಳೆದ ಏಳೆಂಟು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಈ ಪ್ರಕರಣದಿಂದ ಅನೇಕ ಪ್ರತಿಭಾನ್ವಿತ ಅಭ್ಯರ್ಥಿಗಳ ಜೀವನ ಕತ್ತಲೆಯಲ್ಲಿದೆ. ಈ ಬಗ್ಗೆ ನ್ಯಾಯ ದೊರಕಿಸಿಕೊಡಬೇಕು ಎಂದು 2011ನೇ ಸಾಲಿನ ಅಭ್ಯರ್ಥಿಗಳು ಮನವಿ ಸಲ್ಲಿಸಿದ್ದಾರೆ. ಈ ಮನವಿಯಲ್ಲಿ ಈ ಹಿಂದಿನ ಸರ್ಕಾರ ತೆಗೆದುಕೊಂಡ ನಿರ್ಧಾರಗಳು, ನ್ಯಾಯಾಂಗ ನಿಂದನೆ ಆಗದಿರುವ ಬಗ್ಗೆ ಕಾರಣಗಳು ಮತ್ತು ಈಗಿನ ಸರ್ಕಾರ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಪೂರಕವಾದ ಅಂಶಗಳನ್ನು ಸಾಕಷ್ಟು ಸವಿಸ್ತಾರವಾಗಿ ವಿವರಿಸಿದ್ದಾರೆ. ಈ ಮನವಿಯನ್ನು ಅಮೂಲಾಗ್ರವಾಗಿ ಪರಿಶೀಲಿಸಿ 362 ಗೆಜೆಟೆಡ್‌ ಪ್ರೊಬೇಷನರ್ಸ್‌ ಹುದ್ದೆಗಳಿಗೆ ಆಯ್ಕೆಯಾದ ನೊಂದ ಅಭ್ಯರ್ಥಿಗಳಿಗೆ ಆದೇಶ ನೀಡುವ ಮೂಲಕ ನ್ಯಾಯ ಕೊಡಿಸಬೇಕು ಎಂದು ಟಿಪ್ಪಣಿಯಲ್ಲಿ ದೇವೇಗೌಡರು ಆಶಿಸಿದ್ದರು.

ಇದೇ ಟಿಪ್ಪಣಿಯ ಮೇಲೆ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಷರಾ ಬರೆದಿದ್ದರು.

 

 

ದೇವೇಗೌಡರ ಟಿಪ್ಪಣಿ ಆಧರಿಸಿ ಕ್ರಮ ಕೈಗೊಳ್ಳಲು ಕೂಡಲೇ ಕ್ರಮ ವಹಿಸುವುದು ತಮ್ತು ಕಡತ ಮಂಡಿಸಿ ಎಂದು ಅಂದಿನ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ಅವರಿಗೆ ಸೂಚಿಸಿದ್ದರು.

ಈ ಕುರಿತು ಬಸವರಾಜ ಬೊಮ್ಮಾಯಿ ಅವರಿಗೆ ಅಂದು ಪ್ರಧಾನ ಕಾರ್ಯದರ್ಶಿ ಆಗಿದ್ದ ಮಂಜುನಾಥ ಪ್ರಸಾದ್‌ ಅವರು ಸಹ ಕಡತ ಮಂಡಿಸಿ ಎಂದು ಟಿಪ್ಪಣಿ ಹೊರಡಿಸಿದ್ದರು.

Hot this week

ಸಾರ್ವಜನಿಕರ ಕುಂದುಕೊರತೆ; ನಿಗದಿತ ಅವಧಿಯೊಳಗೆ ಇತ್ಯರ್ಥವಾಗದ 10,313 ದೂರರ್ಜಿ, ಪ್ರಜಾಸೇವೆ ಅಭಿಯಾನಕ್ಕೂ ಕಿಮ್ಮತ್ತಿಲ್ಲ, ಸಿಎಂ ಇಲಾಖೆಯಲ್ಲೇ ಗಂಭೀರ ನಿರ್ಲಕ್ಷ್ಯ

ಬೆಂಗಳೂರು; ಸರ್ಕಾರಿ ಇಲಾಖೆಗಳ ಮೂಲಕ ಅನುಷ್ಠಾನಗೊಳಿಸಿರುವ ವಿವಿಧ ಸೇವೆಗಳಲ್ಲಿನ ನ್ಯೂನತೆ  ಮತ್ತು...

2011ರ ಕೆಎಎಸ್ ಅಧಿಕಾರಿಗಳ ನೇಮಕಕ್ಕೆ ವಿಶೇಷ ಕಾಯ್ದೆ; ಮಠದಲ್ಲಿ ನಡೆದಿತ್ತು 6 ಗಂಟೆ ಚರ್ಚೆ, ಚರ್ಚೆಗೆ ಗ್ರಾಸವಾದ ತರಳಬಾಳು ಶ್ರೀ ಭಾಷಣ

ಬೆಂಗಳೂರು;  ಕರ್ನಾಟಕ ಲೋಕಸೇವಾ ಆಯೋಗವು ನಡೆಸಿದ್ದ 2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ...
Please Scan to make Your Contribution

Topics

2011ರ ಕೆಎಎಸ್ ಅಧಿಕಾರಿಗಳ ನೇಮಕಕ್ಕೆ ವಿಶೇಷ ಕಾಯ್ದೆ; ಮಠದಲ್ಲಿ ನಡೆದಿತ್ತು 6 ಗಂಟೆ ಚರ್ಚೆ, ಚರ್ಚೆಗೆ ಗ್ರಾಸವಾದ ತರಳಬಾಳು ಶ್ರೀ ಭಾಷಣ

ಬೆಂಗಳೂರು;  ಕರ್ನಾಟಕ ಲೋಕಸೇವಾ ಆಯೋಗವು ನಡೆಸಿದ್ದ 2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ...

ಕೇಂದ್ರ ಪುರಸ್ಕೃತ ಯೋಜನೆ; ಲಭ್ಯ ಅನುದಾನಕ್ಕೆ ಶೇ. 56.2ರಷ್ಟು ವೆಚ್ಚ, ಕೇಂದ್ರದಿಂದ 18 ಇಲಾಖೆಗಳಿಗೆ ಶೇ.50ಕ್ಕಿಂತಲೂ ಕಡಿಮೆ ಅನುದಾನ ಬಿಡುಗಡೆ

ಬೆಂಗಳೂರು; ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು 18 ಇಲಾಖೆಗಳಿಗೆ...

Related Articles

Popular Categories

error: Content is protected !!