ಬೆಂಗಳೂರು; ಘನತ್ಯಾಜ್ಯ ಸಂಗ್ರಹಣೆ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಾಗಾಣಿಕೆ ಮಾಡುವ ಟೆಂಡರ್ ಹಂತದಲ್ಲಿನ ದರ ವಿಶ್ಲೇಷಣೆಯಲ್ಲಿನ ಶೇ. 10ರಷ್ಟು ಸೇವಾ ಶುಲ್ಕವನ್ನು ಪರಿಗಣಿಸಿರಲಿಲ್ಲ. ಮೂಲ ಅಂದಾಜಿನಲ್ಲಿ ಶೇ. 10 ಸೇವಾ ಶುಲ್ಕಗಳನ್ನು (ಗುತ್ತಿಗೆದಾರರ ಲಾಭ) ಒಳಗೊಂಡಿರಲಿಲ್ಲ. ಹಣಕಾಸು ಬಿಡ್ಗಳನ್ನು ತೆರೆಯಲಾದ ನಂತರ ಮಾತ್ರ ಶೇ 14 ಟೆಂಡರ್ ಪ್ರೀಮಿಯಂಗೆ ಸಮರ್ಥನೆ ನೀಡುವ ಉದ್ದೇಶದಿಂದ ಈ ಶುಲ್ಕಗಳನ್ನು ಸೇರಿಸಲಾಗಿದೆ ಎಂದು ಆರ್ಥಿಕ ಇಲಾಖೆಯು ಅವಲೋಕಿಸಿರುವುದು ಇದೀಗ ಬಹಿರಂಗವಾಗಿದೆ.
ಇದೇ ಟೆಂಡರ್ ಪ್ರಕ್ರಿಯೆಗಳಲ್ಲಿನ ಹಲವು ಲೋಪಗಳ ಕುರಿತು ಈಗಾಗಲೇ ಹಿರಿಯ ಐಎಎಸ್ ಅಧಿಕಾರಿ ಅಂಜುಂ ಪರ್ವೇಜ್ ಅವರ ನೇತೃತ್ವದ ಸಮಿತಿಯು ಬಲವಾಗಿ ಆಕ್ಷೇಪಗಳನ್ನು ಎತ್ತಿತ್ತು. ಈ ಆಕ್ಷೇಪಗಳನ್ನು ಬಿಎಸ್ಡಬ್ಲ್ಯೂಎಂಎಲ್ ಒಪ್ಪಿರಲಿಲ್ಲ. ಅಲ್ಲದೇ ಆರ್ಥಿಕ ಇಲಾಖೆಯೂ ಸಹ ಮತ್ತಷ್ಟು ತಕರಾರುಗಳನ್ನು ಎತ್ತಿದೆ. ಆದರೆ ಈ ತಕರಾರುಗಳನ್ನೂ ಯಥಾ ಪ್ರಕಾರ ಬಿಎಸ್ಡಬ್ಲ್ಯುಎಂಎಲ್ ತಳ್ಳಿ ಹಾಕಿದೆ.
ಆರ್ಥಿಕ ಇಲಾಖೆಯ ಅವಲೋಕನಗಳ ಕುರಿತು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರು ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.
ಆರ್ಥಿಕ ಇಲಾಖೆಯು ಮಾಡಿರುವ ಅವಲೋಕನದ ಪ್ರತಿಯು ದಿ ಫೈಲ್ ಗೆ ಲಭ್ಯವಾಗಿದೆ.
ಅಂದಾಜು ಸಿದ್ಧಪಡಿಸುವ ಸಂದರ್ಭದಲ್ಲಿ, ದರ ವಿಶ್ಲೇಷಣೆಯಲ್ಲಿ ಶೇ 10% ಸೇವಾ ಶುಲ್ಕವನ್ನು ಪರಿಗಣಿಸಲಾಗಿರಲಿಲ್ಲ. ಟೆಂಡರ್ನಲ್ಲಿ ನೀಡಲಾದ ಹೆಚ್ಚುವರಿ ದರಕ್ಕೆ (Tender Premium) ಸಮರ್ಥನೆ ನೀಡುವ ಉದ್ದೇಶದಿಂದ, ಪರಿಷ್ಕೃತ ದರಗಳನ್ನು ಮೂಲ ಅಂದಾಜು ದರಗಳೊಂದಿಗೆ ಹೋಲಿಸಲಾಗಿದೆ. ಬಿಡ್ ಸಲ್ಲಿಸಿದ ನಂತರ ಶೇ. 10% ಸೇವಾ ಶುಲ್ಕ ವನ್ನು ಪರಿಚಯಿಸಿರುವುದು, ಶೇ. 14ರಷ್ಟು ಟೆಂಡರ್ ಪ್ರೀಮಿಯಂಗೆ ನಂತರದ ಹಂತದಲ್ಲಿ ಸಮರ್ಥನೆ ನೀಡಲು ಮಾಡಿರುವ ಕ್ರಮದಂತೆ ತೋರುತ್ತದೆ ಎಂದು ಆರ್ಥಿಕ ಇಲಾಖೆಯು ಅವಲೋಕಿಸಿರುವುದು ಗೊತ್ತಾಗಿದೆ.

‘ಆದ್ದರಿಂದ ಬಿಡ್ ನಂತರ ಅಂದಾಜುಗಳನ್ನು ಹೆಚ್ಚಿಸಿ ತೋರಿಸಲು ಮತ್ತು ಮಾರುಕಟ್ಟೆ ದರಗಳೊಂದಿಗೆ ಹೊಂದಾಣಿಕೆ ಮಾಡಲು ನೀಡಲಾಗುವ ಸಮರ್ಥನೆಗಳು ಸ್ವೀಕಾರಾರ್ಹವಲ್ಲ. ಬಿಡ್ಗಳನ್ನು ತೆರೆಯಲಾದ ನಂತರ ಹಣಕಾಸು ಅಂದಾಜುಗಳಿಗೆ ಮಾಡಲಾದ ಈ ಹೊಂದಾಣಿಕೆಯು ಪ್ರಕ್ರಿಯಾತ್ಮಕ ಅನುಸರಣೆಯನ್ನು ನೇರವಾಗಿ ಉಲ್ಲಂಘಿಸುತ್ತದೆ ಮತ್ತು ಆರಂಭಿಕ ವೆಚ್ಚದ ಸಮರ್ಥನೆಯನ್ನು ಅಮಾನ್ಯಗೊಳಿಸುತ್ತದೆ. ಟೆಂಡರ್ ಪ್ರಕ್ರಿಯೆಯ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳಲು ಹಣಕಾಸು ಮೌಲ್ಯಮಾಪನಗಳು ಟೆಂಡರ್ಗೂ ಮುನ್ನ ನಿಗದಿಪಡಿಸಲಾದ ಮಾನದಂಡಗಳನ್ನೇ ಕಟ್ಟುನಿಟ್ಟಾಗಿ ಆಧರಿಸಿರಬೇಕು,’ ಎಂದು ಹಣಕಾಸು ಇಲಾಖೆಯು ಅವಲೋಕಿಸಿರುವುದು ತಿಳಿದು ಬಂದಿದೆ.
ಆರ್ಥಿಕ ಇಲಾಖೆಯು ಮಾಡಿರುವ ಈ ಅವಲೋಕನವನ್ನು ಯಥಾ ಪ್ರಕಾರ ಬಿಎಸ್ಡಬ್ಲ್ಯುಎಂಎಲ್ ಒಪ್ಪಿಕೊಂಡಿಲ್ಲ.
ಮೂಲ ದರ ವಿಶ್ಲೇಷಣೆಯಲ್ಲಿ 10% ಸೇವಾ ಶುಲ್ಕಗಳನ್ನು ಪರಿಗಣಿಸದಿರುವುದು, ಬಿಡ್ಗಳನ್ನು ತೆರೆಯಲಾದ ನಂತರ ಅಂದಾಜುಗಳನ್ನು ನಂತರದ ಹಂತದಲ್ಲಿ (Post-facto) ಪರಿಷ್ಕರಿಸಲಾಗಿದೆ ಎಂಬ ಆರೋಪ ಮತ್ತು 14% ಟೆಂಡರ್ ಪ್ರೀಮಿಯಂಗೆ ನೀಡಲಾದ ಸಮರ್ಥನೆಗೆ ಸಂಬಂಧಿಸಿದ ಅವಲೋಕನಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿದೆ ಎಂದು ಹೇಳಿರುವ ಬಿಎಸ್ಡಬ್ಲ್ಯೂಎಂಎಲ್, ಆರ್ಥಿಕ ಇಲಾಖೆಯ ಅವಲೋಕನದ ಪ್ರತಿ ಅಂಶವಾರು ಅನುಸರಣೆ ವರದಿ ಸಲ್ಲಿಸಿದೆ.

ಮೂಲ ಅಂದಾಜಿನಲ್ಲಿ 10% ಸೇವಾ ಶುಲ್ಕಗಳನ್ನು (ಗುತ್ತಿಗೆದಾರರ ಲಾಭ) ಒಳಗೊಂಡಿರಲಿಲ್ಲ, ಹಣಕಾಸು ಬಿಡ್ಗಳನ್ನು ತೆರೆಯಲಾದ ನಂತರ ಮಾತ್ರ ಶೇ. 14ರಷ್ಟು ಟೆಂಡರ್ ಪ್ರೀಮಿಯಂಗೆ ಸಮರ್ಥನೆ ನೀಡುವ ಉದ್ದೇಶದಿಂದ ಈ ಶುಲ್ಕಗಳನ್ನು ಸೇರಿಸಲಾಯಿತು. ಮತ್ತು ಪರಿಷ್ಕೃತ ಹಣಕಾಸು ವಿಶ್ಲೇಷಣೆಯು ಅನುಮತಿಸಲಾಗದ Post-facto ಪ್ರಕ್ರಿಯೆಯಾಗಿದೆ. ಇದರಿಂದ ಮೂಲ ವೆಚ್ಚದ ಸಮರ್ಥನೆಯು ಅಮಾನ್ಯವಾಗುತ್ತದೆ ಎಂದು ಆರ್ಥಿಕ ಇಲಾಖೆಯು ಮಾಡಿರುವ ಅವಲೋಕನವನ್ನು ತಳ್ಳಿ ಹಾಕಿದೆ.
‘ಹಣಕಾಸು ವಿಶ್ಲೇಷಣೆಯನ್ನು ಅಂದಾಜನ್ನು ಪರಿಷ್ಕರಿಸುವ ಉದ್ದೇಶದಿಂದಾಗಲಿ ಅಥವಾ ಟೆಂಡರ್ ಪ್ರೀಮಿಯಂಗೆ ಹಿಂದಿನ ದಿನಾಂಕದಿಂದ ಮಾನ್ಯತೆ ನೀಡುವ ಉದ್ದೇಶದಿಂದಾಗಲಿ ಕೈಗೊಳ್ಳಲಾಗಿಲ್ಲ. ಬದಲಾಗಿ, ಮೂಲ ದರ ವಿಶ್ಲೇಷಣೆಯಲ್ಲಿ ಕೆಲವು ವೆಚ್ಚದ ಅಂಶಗಳನ್ನು ಅಜಾಗರೂಕತೆಯಿಂದ ಕಡಿಮೆ ಅಂದಾಜು ಮಾಡಲಾಗಿತ್ತು. ಅಲ್ಲದೇ ಸ್ಪರ್ಧಾತ್ಮಕ ಬಿಡ್ಡಿಂಗ್ ಮೂಲಕ ದೊರೆತ ಮಾರುಕಟ್ಟೆ ಆಧಾರಿತ ದರಗಳು ವಾಸ್ತವವಾಗಿ ವಾಣಿಜ್ಯಿಕವಾಗಿ ಸಮಂಜಸವಾಗಿದ್ದವು. ಇದನ್ನು ತೋರಿಸುವ ಉದ್ದೇಶದಿಂದ ಮಾತ್ರ ಈ ವಿಶ್ಲೇಷಣೆಯನ್ನು ಕೈಗೊಳ್ಳಲಾಯಿತು,’ ಎಂದು ಬಿಎಸ್ಡಬ್ಲ್ಯೂಎಂಎಲ್ ಪ್ರತಿಪಾದಿಸಿದೆ.
ಹಣಕಾಸು ಬಿಡ್ಗಳನ್ನು ಆಹ್ವಾನಿಸಿ, ಅನುಮೋದಿತ ಟೆಂಡರ್ ಷರತ್ತುಗಳು ಮತ್ತು ಬಿಡ್ಗಳನ್ನು ಆಹ್ವಾನಿಸುವ ಮೊದಲು ಸಿದ್ಧಪಡಿಸಲಾದ ಅಂದಾಜುಗಳ ಆಧಾರದ ಮೇಲೆ ಕಟ್ಟುನಿಟ್ಟಾಗಿ ಮೌಲ್ಯಮಾಪನ ಮಾಡಲಾಯಿತು. ಶೇ. 14% ಟೆಂಡರ್ ಪ್ರೀಮಿಯಂ ಅನ್ನು ಪೂರ್ವನಿರ್ಧರಿಸಲಾಗಿರಲಿಲ್ಲ. ಅಥವಾ ಬಿಡ್ಗಳನ್ನು ತೆರೆಯಲಾದ ನಂತರ ಆಡಳಿತಾತ್ಮಕವಾಗಿ ಪರಿಚಯಿಸಲಾಗಿರಲಿಲ್ಲ. ಬದಲಾಗಿ, ಅದು ಪಾರದರ್ಶಕ ಮತ್ತು ಸ್ಪರ್ಧಾತ್ಮಕ ಮುಕ್ತ ಟೆಂಡರ್ ಪ್ರಕ್ರಿಯೆಯ ಮೂಲಕ ರೂಪುಗೊಂಡಿದೆ ಎಂದು ಸಮಜಾಯಿಷಿ ನೀಡಿದೆ.

ವಿವಿಧ ಪ್ಯಾಕೇಜ್ಗಳಲ್ಲಿ ಒಟ್ಟು 147 ಬಿಡ್ಗಳ ಸ್ವೀಕೃತಿ, ವಿವರವಾದ ತಾಂತ್ರಿಕ ಮೌಲ್ಯಮಾಪನ, ಮೇಲ್ಮನವಿ ಪ್ರಕ್ರಿಯೆಯ ಸಂದರ್ಭದಲ್ಲಿ, ಸಲ್ಲಿಸಲಾದ ಪ್ರತಿನಿಧಿತ್ವಗಳ ಪರಿಗಣನೆ, ಸ್ಪರ್ಧಾತ್ಮಕ ಹಣಕಾಸು ಬಿಡ್ಡಿಂಗ್; ಮತ್ತು ಟೆಂಡರ್ ಷರತ್ತುಗಳಿಗೆ ಅನುಗುಣವಾಗಿ ನಡೆಸಲಾದ ಮಾತುಕತೆಗಳ ಕುರಿತು ವಿವರಣೆ ಒದಗಿಸಿದೆ.
‘ಅಂತಿಮವಾಗಿ, 21 ಪ್ಯಾಕೇಜ್ಗಳಲ್ಲಿ ಯಶಸ್ವಿಯಾದ ಬಿಡ್ಗಳು 4.5% ರಿಂದ 14% ವರೆಗೆ ಪ್ರೀಮಿಯಂಗಳನ್ನು ಪ್ರತಿಬಿಂಬಿಸಿವೆ. ಇದರಿಂದ ಉಲ್ಲೇಖಿಸಲಾದ ದರಗಳು ಖರೀದಿ ಸಂಸ್ಥೆಯಿಂದ ಕೃತಕವಾಗಿ ಅಂಗೀಕರಿಸಲಾದ ದರಗಳಲ್ಲ, ಬದಲಾಗಿ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಬಿಡ್ಡಿಂಗ್ ಮೂಲಕ ಕಂಡುಬಂದ ಬೆಲೆಗಳಾಗಿವೆ ಎಂಬುದು ಸ್ಪಷ್ಟವಾಗುತ್ತದೆ. ಈ ಪ್ರೀಮಿಯಂ ಯೋಜನೆಯ ವೆಚ್ಚವನ್ನು ಕೃತಕವಾಗಿ ಹೆಚ್ಚಿಸುವ ಉದ್ದೇಶದಿಂದ ಕೈಗೊಂಡ ಆಡಳಿತಾತ್ಮಕ ನಿರ್ಧಾರವಲ್ಲ; ಬದಲಾಗಿ ಇದು ಸ್ಪರ್ಧಾತ್ಮಕ ಮಾರುಕಟ್ಟೆ ಬೆಲೆಯ ಫಲಿತಾಂಶವಾಗಿದೆ,’ ಎಂದು ವಿವರಿಸಿದೆ.
ಮೂಲ ಅಂದಾಜನ್ನು ಸರಿಪಡಿಸಲಾದ ವೆಚ್ಚದ ಅಂಶಗಳೊಂದಿಗೆ ಹೋಲಿಸುವ ನಂತರದ ವಿಶ್ಲೇಷಣೆಯನ್ನು, ಮಾರುಕಟ್ಟೆಯಲ್ಲಿ ಕಂಡುಬಂದ ಬೆಲೆಗಳು ವಾಣಿಜ್ಯಿಕವಾಗಿ ಸಮರ್ಥನೀಯವಾಗಿವೆಯೇ ಎಂಬುದನ್ನು ಮಾತ್ರ ಮೌಲ್ಯಮಾಪನ ಮಾಡುವ ಉದ್ದೇಶದಿಂದ ಕೈಗೊಳ್ಳಲಾಗಿತ್ತು. ಸಮಗ್ರ ವಾಹನ ನಿರ್ವಹಣಾ ವೆಚ್ಚಗಳು, ಕಾರ್ಯಾಚರಣೆ ಮತ್ತು ನಿರ್ವಹಣಾ ವೆಚ್ಚಗಳು, ಗುತ್ತಿಗೆದಾರರ ಸೇವಾ ಶುಲ್ಕಗಳು / ಲಾಭ, ಓವರ್ಹೆಡ್ ವೆಚ್ಚಗಳು, ಮತ್ತು ಅನೈರ್ಮಲ್ಯ ಕೆಲಸದ ಪರಿಸ್ಥಿತಿಗಳಿಗೆ ಸಂಬಂಧಿಸಿದ ವೆಚ್ಚಗಳು ಮೂಲ ದರ ವಿಶ್ಲೇಷಣೆಯಲ್ಲಿ ಸಂಪೂರ್ಣವಾಗಿ ಪ್ರತಿಬಿಂಬಿತವಾಗಿರಲಿಲ್ಲ ಎಂದು ಸಮಜಾಯಿಷಿ ನೀಡಿದೆ.

‘ಆದ್ದರಿಂದ ಈ ಕಾರ್ಯವು ವಿವರಣಾತ್ಮಕ ಮತ್ತು ವಿಶ್ಲೇಷಣಾತ್ಮಕ ಸ್ವರೂಪದ್ದಾಗಿದ್ದು, ಬಿಡ್ಗಳನ್ನು ತೆರೆಯಲಾದ ನಂತರ ಅನುಮೋದಿತ ಅಂದಾಜನ್ನು ಯಾವುದೇ ರೀತಿಯಲ್ಲಿ ಬದಲಾಯಿಸಿಲ್ಲ, ಮಾರ್ಪಡಿಸಿಲ್ಲ ಅಥವಾ ಪರಿಷ್ಕರಿಸಿಲ್ಲ. ಹಾಗೆಯೇ, ಬಿಡ್ಡರ್ಗಳ ಅರ್ಹತೆ ಅಥವಾ ಹಣಕಾಸು ಮೌಲ್ಯಮಾಪನವನ್ನು ನಿರ್ಧರಿಸಲು ಇದನ್ನು ಆಧಾರವಾಗಿಯೂ ಬಳಸಲಾಗಿಲ್ಲ,’ ಎಂದು ಪ್ರತಿಪಾದಿಸಿದೆ.
ಬಿಟ್ಟುಹೋಗಿದ್ದ ವೆಚ್ಚದ ಅಂಶಗಳನ್ನು ಸರಿಪಡಿಸಿ, ಅನ್ವಯವಾಗುವ ಗುತ್ತಿಗೆದಾರರ ಸೇವಾ ಶುಲ್ಕಗಳನ್ನು ಸೇರಿಸಿದ ನಂತರದ ಪರಿಷ್ಕೃತ ದರ ವಿಶ್ಲೇಷಣೆಯು, ಯಶಸ್ವಿ ಬಿಡ್ಡರ್ಗಳು ಉಲ್ಲೇಖಿಸಿದ ದರಗಳು ಸರಿಪಡಿಸಲಾದ ವಿಶ್ಲೇಷಣಾತ್ಮಕ ದರಗಳಿಗಿಂತ ಕಡಿಮೆಯಾಗಿವೆ ಎಂಬುದನ್ನು ಸೂಚಿಸುತ್ತದೆ. ಈ ಹೋಲಿಕೆಯು ಅಂಗೀಕರಿಸಲಾದ ಬಿಡ್ ದರಗಳು ಸರಿಪಡಿಸಲಾದ ಅಂದಾಜು ದರಗಳಿಗಿಂತ ಸರಾಸರಿ ಕೆಳಗಿನ ಪ್ರಮಾಣದಲ್ಲಿ ಕಡಿಮೆಯಾಗಿದ್ದವು ಎಂಬುದನ್ನು ತೋರಿಸುತ್ತದೆ ಎಂದು ವಿವರಿಸಿದೆ.
3-ಚಕ್ರದ ಆಟೋ ಟಿಪ್ಪರ್ಗಳಿಗೆ – 0.76%,, 4-ಚಕ್ರದ 2 ಕ್ಯೂಬಿಕ್ ಮೀಟರ್ ವಾಹನಗಳಿಗೆ – 3.40%,, 4-ಚಕ್ರದ 5 ಕ್ಯೂಬಿಕ್, ಮೀಟರ್, ಓಪನ್ ವಾಹನಗಳಿಗೆ – 6.11%,, 4-ಚಕ್ರದ 5 ಕ್ಯೂಬಿಕ್ ಮೀಟರ್ ಕ್ಲೋಸ್ಡ್ ವಾಹನಗಳಿಗೆ – 9.12%, ಮತ್ತು
ಕಾಂಪ್ಯಾಕ್ಟರ್ ವಾಹನಗಳಿಗೆ – 5.08%. ಎಂದು ವಿವರಿಸಿದೆ. ಹೀಗಾಗಿ ಈ ವಿಶ್ಲೇಷಣೆಯು ಅಂಗೀಕರಿಸಲಾದ ಟೆಂಡರ್ ದರಗಳನ್ನು ಅಧಿಕವೆಂದು ಪರಿಗಣಿಸಲಾಗುವುದಿಲ್ಲ ಎಂಬುದನ್ನು ಸ್ಥಾಪಿಸುತ್ತದೆ. ಬದಲಾಗಿ, ವಾಸ್ತವ ಕಾರ್ಯಾಚರಣಾ ವೆಚ್ಚಗಳ ಸಮಗ್ರ ಮೌಲ್ಯಮಾಪನದೊಂದಿಗೆ ಹೋಲಿಸಿದಾಗ, ಅವು ಆರ್ಥಿಕವಾಗಿ ಸ್ಪರ್ಧಾತ್ಮಕವಾಗಿವೆ ಎಂದು ವಿವರಿಸಿದೆ.

ಪ್ರಸ್ತುತ ಟೆಂಡರ್, ಅಸ್ತಿತ್ವದಲ್ಲಿರುವ ಒಪ್ಪಂದಗಳಿಗೆ ಹೋಲಿಸಿದರೆ, ಕೆಲಸದ ಕಾರ್ಯವ್ಯಾಪ್ತಿಯನ್ನು ಗಣನೀಯವಾಗಿ ವಿಸ್ತರಿಸುತ್ತದೆ. ಹಲವಾರು ಹೆಚ್ಚುವರಿ ಜವಾಬ್ದಾರಿಗಳನ್ನು ಒಳಗೊಂಡಿದೆ: GPS ಸೌಲಭ್ಯ ಹೊಂದಿರುವ ವಾಹನಗಳ ಮೇಲ್ವಿಚಾರಣೆ, One City-One Platform ಡಿಜಿಟಲ್ ಏಕೀಕರಣ ಒಳಗೊಂಡಿದೆ. ಅಲ್ಲದೇ ಸುಧಾರಿತ ವಾಹನ ವಿನ್ಯಾಸಗಳ ನಿಯೋಜನೆ, ಹೆಚ್ಚುವರಿ ಮತ್ತು ವರ್ಧಿತ ತ್ಯಾಜ್ಯ ಸಂಗ್ರಹಣೆ ಹಾಗೂ ಸಾಗಣೆ ಸಾಮರ್ಥ್ಯ, ಕಡಿಮೆ ಪ್ರಮಾಣದ ನಿರ್ಮಾಣ ಮತ್ತು ಧ್ವಂಸ ತ್ಯಾಜ್ಯವನ್ನು ಸಂಗ್ರಹಿಸಲು ಪ್ರತ್ಯೇಕ ವಾಹನಗಳ ನಿಯೋಜನೆ, ಹೈಕೋರ್ಟ್ನ ನಿರ್ದೇಶನಗಳ ಅನುಸರಣೆ, ಬಲಪಡಿಸಿದ ಮೇಲ್ವಿಚಾರಣೆ ಮತ್ತು ವರದಿ ವ್ಯವಸ್ಥೆಗಳು, ಕಾರ್ಯಾಚರಣೆ ದಕ್ಷತೆ ಹಾಗೂ ಸೇವಾ ವಿತರಣೆಯಲ್ಲಿ ಗಮನಾರ್ಹ ಸುಧಾರಣೆಗಳನ್ನು ಸಹ ಒಳಗೊಂಡಿದೆ ಎಂದು ಹೇಳಿದೆ.
ಸೇವಾ ವಿತರಣೆಯ ಕಾರ್ಯಾಚರಣಾ ವೆಚ್ಚವನ್ನು ಅನಿವಾರ್ಯವಾಗಿ ಹೆಚ್ಚಿಸುತ್ತವೆ ಮತ್ತು ಪ್ರಸ್ತುತ ಟೆಂಡರ್ ಅನ್ನು ಅಸ್ತಿತ್ವದಲ್ಲಿರುವ ಒಪ್ಪಂದಾತ್ಮಕ ವ್ಯವಸ್ಥೆಗಳಿಂದ ವಿಭಿನ್ನವಾಗಿಸುತ್ತವೆ. ಅದರಂತೆ, ವಿಸ್ತರಿಸಲಾದ ಕಾರ್ಯವ್ಯಾಪ್ತಿಯನ್ನು ಪರಿಗಣಿಸದೆ ಅಸ್ತಿತ್ವದಲ್ಲಿರುವ ಒಪ್ಪಂದದ ದರಗಳು ಮತ್ತು ಅಂಗೀಕರಿಸಲಾದ ಟೆಂಡರ್ ದರಗಳ ನಡುವೆ ನೇರ ಹೋಲಿಕೆ ಮಾಡುವುದು ನಿಖರವಾದ ಹಣಕಾಸು ಮೌಲ್ಯಮಾಪನವನ್ನು ನೀಡುವುದಿಲ್ಲ ಎಂದು ವಿವರಿಸಿದೆ.
ಹೆಚ್ಚಿದ ಕಾರ್ಯವ್ಯಾಪ್ತಿ ಮತ್ತು ವರ್ಧಿತ ಸೇವಾ ಮಾನದಂಡಗಳ ಹೊರತಾಗಿಯೂ, ಅಂಗೀಕರಿಸಲಾದ ದರಗಳು ಆರ್ಥಿಕವಾಗಿ ಸಮಂಜಸವಾಗಿಯೇ ಉಳಿದಿವೆ ಎಂಬುದನ್ನು ತುಲನಾತ್ಮಕ ವಿಶ್ಲೇಷಣೆ ಮತ್ತಷ್ಟು ತೋರಿಸುತ್ತದೆ. ಪ್ರಸ್ತುತ, ಪ್ರತಿದಿನ ಸರಾಸರಿ 5,600 ಮೆಟ್ರಿಕ್ ಟನ್ಗಳಷ್ಟು ಪುರಸಭೆಯ ಘನ ತ್ಯಾಜ್ಯವನ್ನು ಸಂಗ್ರಹಿಸಿ ಸಾಗಿಸಲಾಗುತ್ತಿದೆ. ಇದಕ್ಕಾಗಿ ಸರಾಸರಿ ಮಾಸಿಕ ವೆಚ್ಚ ಸುಮಾರು ₹48.41 ಕೋಟಿ ಆಗಿದೆ ಎಂದು ಹೇಳಿದೆ.
ಪರಿಷ್ಕೃತ ಸೇವಾ ಮಾದರಿಯಡಿ, ಪ್ರತಿದಿನ ಸುಮಾರು 6,000 ಮೆಟ್ರಿಕ್ ಟನ್ಗಳಷ್ಟು ತ್ಯಾಜ್ಯವನ್ನು ನಿರ್ವಹಿಸಲು ಪ್ರಸ್ತಾಪಿಸಲಾಗಿದೆ. ಹೊಸದಾಗಿ ಪರಿಚಯಿಸಲಾದ ನಿರ್ಮಾಣ ಮತ್ತು ಧ್ವಂಸ ತ್ಯಾಜ್ಯ ಸಂಗ್ರಹಣೆಗೆ ಸಂಬಂಧಿಸಿದ ವೆಚ್ಚವನ್ನು ಹೊರತುಪಡಿಸಿದ ನಂತರ, ಹೊಸ ಒಪ್ಪಂದಗಳ ಅಡಿಯಲ್ಲಿ ಪರಿಣಾಮಕಾರಿ ಮಾಸಿಕ ವೆಚ್ಚವು ಸುಮಾರು ₹47.81 ಕೋಟಿ ಆಗಿರುತ್ತದೆ. ಇದು ಕಾರ್ಯಾಚರಣಾ ಫಲಿತಾಂಶಗಳಲ್ಲಿ ಗಮನಾರ್ಹ ಸುಧಾರಣೆಗಳಿದ್ದರೂ, ಅಸ್ತಿತ್ವದಲ್ಲಿರುವ ವೆಚ್ಚಕ್ಕಿಂತ ಸ್ವಲ್ಪ ಕಡಿಮೆಯಾಗಿದೆ. ಪರಿಷ್ಕೃತ ಖರೀದಿ ಪ್ರಕ್ರಿಯೆಯು ಅಸಮತೋಲನದ ಹಣಕಾಸಿನ ಹೊರೆಯನ್ನು ಉಂಟುಮಾಡಿಲ್ಲ. ಬದಲಿಗೆ ಸುಧಾರಿತ ಸೇವಾ ವಿತರಣೆಯನ್ನು ಒದಗಿಸುತ್ತದೆ ಎಂದು ವಿವರಿಸಿದೆ.

ಹಣಕಾಸು ಬಿಡ್ಗಳನ್ನು ತೆರೆಯಲಾದ ನಂತರ ಅಂಗೀಕರಿಸಲಾದ ದರಗಳಿಗೆ ಮಾನ್ಯತೆ ನೀಡುವ ಉದ್ದೇಶದಿಂದ ಅನುಮೋದಿತ ಅಂದಾಜಿನಲ್ಲಿ ಯಾವುದೇ ಪರಿಷ್ಕರಣೆ ಮಾಡಲಾಗಿಲ್ಲ. ನಂತರ ಸಿದ್ಧಪಡಿಸಲಾದ ವಿವರಣಾತ್ಮಕ ಲೆಕ್ಕಾಚಾರಗಳು ಕೇವಲ ಈ ವಿಷಯವನ್ನು ತೋರಿಸುತ್ತವೆ: ಗುತ್ತಿಗೆದಾರರ ಸೇವಾ ಶುಲ್ಕಗಳು, ಸಮಗ್ರ ನಿರ್ವಹಣಾ ವೆಚ್ಚಗಳು ಮತ್ತು ಅನ್ವಯವಾಗುವ ಓವರ್ಹೆಡ್ ವೆಚ್ಚಗಳು ಸೇರಿದಂತೆ ಎಲ್ಲಾ ನ್ಯಾಯಸಮ್ಮತ ವೆಚ್ಚದ ಅಂಶಗಳನ್ನು ವಿಶ್ಲೇಷಣಾತ್ಮಕ ಅಂದಾಜಿನಲ್ಲಿ ಸಂಪೂರ್ಣವಾಗಿ ಪ್ರತಿಬಿಂಬಿಸಲಾಗಿದ್ದರೆ, ಪರಿಷ್ಕೃತ ವಿಶ್ಲೇಷಣಾತ್ಮಕ ದರಗಳು ಮಾರುಕಟ್ಟೆಯಲ್ಲಿ ಕಂಡುಬಂದ ಬೆಲೆಗಳಿಗಿಂತ ಹೆಚ್ಚಾಗಿರುತ್ತವೆ ಎಂದು ಹೇಳಿದೆ.
ಆದ್ದರಿಂದ, ಈ ಲೆಕ್ಕಾಚಾರಗಳನ್ನು ಅಂದಾಜಿನ ನಂತರದ ಹಂತದ ಹೆಚ್ಚಳ ಎಂದು ಅಥವಾ ಅಂಗೀಕರಿಸಲಾದ ಪ್ರೀಮಿಯಂಗೆ ಹಿಂದಿನ ದಿನಾಂಕದಿಂದ ಸಮರ್ಥನೆ ನೀಡುವ ಪ್ರಯತ್ನ ಎಂದು ಪರಿಗಣಿಸಲಾಗುವುದಿಲ್ಲ. ಟೆಂಡರ್ನೊಂದಿಗೆ ಮುಂದುವರಿಯುವ ನಿರ್ಧಾರವು ಬಲವಾದ ಸಾರ್ವಜನಿಕ ಹಿತಾಸಕ್ತಿ ಸಂಬಂಧಿತ ಪರಿಗಣನೆಗಳಿಂದಲೂ ಮಾರ್ಗದರ್ಶಿಸಲ್ಪಟ್ಟಿದೆ. ನಗರದಾದ್ಯಂತ ಸಮಗ್ರ ಘನ ತ್ಯಾಜ್ಯ ನಿರ್ವಹಣೆ, ಸುಧಾರಿತ ತ್ಯಾಜ್ಯ ಸಂಗ್ರಹಣಾ ದಕ್ಷತೆ, ವೈಜ್ಞಾನಿಕ ರೀತಿಯ ಸಾಗಣೆ ಮತ್ತು ಮೇಲ್ವಿಚಾರಣೆ;, ತಂತ್ರಜ್ಞಾನ ಆಧಾರಿತ ಸೇವಾ ವಿತರಣೆ, ನ್ಯಾಯಾಂಗ ನಿರ್ದೇಶನಗಳ ಅನುಸರಣೆ, ಪರಿಸರ ಸಂರಕ್ಷಣೆ, ಮತ್ತು ಸಾರ್ವಜನಿಕ ಆರೋಗ್ಯ ಹಾಗೂ ನಗರ ಸ್ವಚ್ಛತೆಯ ಸುಧಾರಿತ ಮಾನದಂಡಗಳನನ್ನು ಒಳಗೊಂಡಿದೆ.
ಇದಲ್ಲದೆ, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಆಟೋ ಟಿಪ್ಪರ್ಗಳು ಬಹಳ ಹಳೆಯದಾಗಿವೆ. GPS ಮತ್ತು ಪ್ರತ್ಯೇಕ ವಿಭಾಗಗಳು (Compartments) ಇರುವುದಿಲ್ಲ. ಜಿಪಿಎಸ್ GPS ಇಲ್ಲದೆ ಅವುಗಳ ಚಲನವಲನವನ್ನು ಟ್ರ್ಯಾಕ್ ಮಾಡುವುದು ಮಾನವೀಯವಾಗಿ ಅಸಾಧ್ಯವಾದ ಕಾರ್ಯವಾಗಿದೆ. ನಗರದಲ್ಲಿ ಘನ ತ್ಯಾಜ್ಯ ನಿರ್ವಹಣಾ ನಿಯಮಗಳ ಜಾರಿಯ ಮೇಲೆ ಪರಿಣಾಮ ಬೀರಿದೆ. ಪರಿಷ್ಕೃತ ಸೇವಾ ಮಾದರಿಯ ಅನುಷ್ಠಾನವನ್ನು ವಿಳಂಬವಾಗುತ್ತಿದೆ. ಇದರಿಂದ ಅಗತ್ಯ ಪೌರ ಸೇವೆಗಳು ಮತ್ತು ಸಾರ್ವಜನಿಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿತ್ತು ಎಂದು ಸಮಜಾಯಿಷಿ ನೀಡಿದೆ.
ಅನುಮೋದಿತ ಅಂದಾಜುಗಳನ್ನು ಬಿಡ್ಗಳನ್ನು ಆಹ್ವಾನಿಸುವ ಮೊದಲು ಸಿದ್ಧಪಡಿಸಲಾಗಿತ್ತು ಮತ್ತು ಟೆಂಡರ್ ಪ್ರಕ್ರಿಯೆಯನ್ನು ಅನುಮೋದಿತ ಟೆಂಡರ್ ಷರತ್ತುಗಳ ಆಧಾರದ ಮೇಲೆ ಕಟ್ಟುನಿಟ್ಟಾಗಿ ನಡೆಸಲಾಗಿದೆ. ನಂತರ ಕೈಗೊಳ್ಳಲಾದ ಹಣಕಾಸು ವಿಶ್ಲೇಷಣೆಯು ಮಾರುಕಟ್ಟೆಯಲ್ಲಿ ಕಂಡುಬಂದ ಬೆಲೆಗಳ ವಾಣಿಜ್ಯಿಕ ಸಮಂಜಸತೆಯನ್ನು ಮೌಲ್ಯಮಾಪನ ಮಾಡುವ ಉದ್ದೇಶದಿಂದ ಮಾತ್ರ ನಡೆಸಲಾದ ವಿವರಣಾತ್ಮಕ ಪ್ರಕ್ರಿಯೆಯಾಗಿತ್ತು. ಇದು ಅನುಮೋದಿತ ಅಂದಾಜಿನ Post-facto (ನಂತರದ ಹಂತದ) ಪರಿಷ್ಕರಣೆಯಾಗಿರಲಿಲ್ಲ.
ಮೂಲ ದರ ವಿಶ್ಲೇಷಣೆಯಲ್ಲಿ ಕೆಲವು ವಿಶ್ಲೇಷಣಾತ್ಮಕ ವೆಚ್ಚದ ಅಂಶಗಳನ್ನು ಸೇರಿಸದಿರುವುದರಿಂದ ಟೆಂಡರ್ ಪ್ರಕ್ರಿಯೆಯು ಅಮಾನ್ಯವಾಗುವುದಿಲ್ಲ. ಏಕೆಂದರೆ ಅಂಗೀಕರಿಸಲಾದ ಬೆಲೆಗಳು 147 ಬಿಡ್ಗಳನ್ನು ಒಳಗೊಂಡ ಪಾರದರ್ಶಕ, ಸ್ಪರ್ಧಾತ್ಮಕ ಮತ್ತು ಮಾರುಕಟ್ಟೆ ಆಧಾರಿತ ಬಿಡ್ಡಿಂಗ್ ಪ್ರಕ್ರಿಯೆಯ ಮೂಲಕ ರೂಪುಗೊಂಡಿವೆ. ಸಮಗ್ರ ಕಾರ್ಯಾಚರಣೆ ಮತ್ತು ನಿರ್ವಹಣಾ ವೆಚ್ಚಗಳು, ಗುತ್ತಿಗೆದಾರರ ಸೇವಾ ಶುಲ್ಕಗಳು, ಓವರ್ಹೆಡ್ ವೆಚ್ಚಗಳು ಮತ್ತು ಇತರ ನ್ಯಾಯಸಮ್ಮತ ವೆಚ್ಚದ ಅಂಶಗಳನ್ನು ಪರಿಗಣಿಸಿದ ನಂತರವೂ, ಅಂಗೀಕರಿಸಲಾದ ಬಿಡ್ ದರಗಳು ಸರಿಪಡಿಸಲಾದ ವಿಶ್ಲೇಷಣಾತ್ಮಕ ದರಗಳಿಗಿಂತ ಕಡಿಮೆಯಾಗಿವೆ. ಇದರಿಂದ ಅಂಗೀಕರಿಸಲಾದ ದರಗಳು ವಾಣಿಜ್ಯಿಕವಾಗಿ ಸಮಂಜಸವಾಗಿವೆ ಎಂದು ಹೇಳಿದೆ.

ಪ್ರಸ್ತುತ ಟೆಂಡರ್ನಲ್ಲಿ ಗಣನೀಯವಾಗಿ ವರ್ಧಿತ ಕಾರ್ಯಾಚರಣಾ ಜವಾಬ್ದಾರಿಗಳು, ತಾಂತ್ರಿಕ ಸುಧಾರಣೆಗಳು ಮತ್ತು ವಿಸ್ತರಿತ ಸೇವಾ ಕಾರ್ಯವ್ಯಾಪ್ತಿ ಒಳಗೊಂಡಿರುವುದರಿಂದ, ಅದನ್ನು ಅಸ್ತಿತ್ವದಲ್ಲಿರುವ ಒಪ್ಪಂದಗಳೊಂದಿಗೆ ನೇರವಾಗಿ ಹೋಲಿಸುವುದು ಸೂಕ್ತವಲ್ಲ. ಅಂಗೀಕರಿಸಲಾದ ದರಗಳು ಸ್ಪರ್ಧಾತ್ಮಕ ಬಿಡ್ಡಿಂಗ್ ಮೂಲಕ ನಿರ್ಧರಿಸಲಾದ ಮಾರುಕಟ್ಟೆಯಲ್ಲಿ ಕಂಡುಬಂದ ಬೆಲೆಗಳನ್ನು ಪ್ರತಿನಿಧಿಸುತ್ತವೆ. ಅವು ಹಣಕಾಸಿನ ದೃಷ್ಟಿಯಿಂದ ವಿವೇಕಯುತವಾಗಿದ್ದು, ತಾಂತ್ರಿಕವಾಗಿ ಸಮರ್ಥಿಸಲ್ಪಟ್ಟಿವೆ ಮತ್ತು ವಿಶಾಲವಾದ ಸಾರ್ವಜನಿಕ ಹಿತಾಸಕ್ತಿಗೆ ಅನುಗುಣವಾಗಿವೆ ಎಂದು ಪ್ರತಿಪಾದಿಸಿದೆ.
ಶೇ.14 ರ ಟೆಂಡರ್ ಪ್ರೀಮಿಯಂಗೆ ಅಂಜುಂ ಪರ್ವೇಝ್ ಸಮಿತಿಯು ಆಕ್ಷೇಪ ವ್ಯಕ್ತಪಡಿಸಿತ್ತು. ಈ ಕುರಿತು ದಿ ಫೈಲ್ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.
ಕನ್ಸೋರ್ಟಿಯಂ ಸದಸ್ಯರ ಸಂಖ್ಯೆ ಹೆಚ್ಚಳ ಮಾಡಿರುವ ಕಾರಣ ವೈಯಕ್ತಿಕ ಹೊಣೆಗಾರಿಕೆ ದುರ್ಬಲವಾಗುತ್ತದೆ ಎಂದು ಅಂಜುಂ ಪರ್ವೇಝ್ ಸಮಿತಿಯು ಆತಂಕ ವ್ಯಕ್ತಪಡಿಸಿತ್ತು. ಈ ಕುರಿತು ದಿ ಫೈಲ್ ವರದಿ ಪ್ರಕಟಿಸಿತ್ತು.
ಟೆಂಡರ್ದಾರರು ನೀಡಿದ್ದ ಅಂಕಿ ಅಂಶಗಳನ್ನಾಧರಿಸಿ ಬಿಎಸ್ಡಬ್ಲ್ಯೂಎಂಎಲ್ ಮೌಲ್ಯಮಾಪನ ಮಾಡಿತ್ತು. ಈ ಕುರಿತು ದಿ ಫೈಲ್ ವರದಿ ಪ್ರಕಟಿಸಿತ್ತು.
ಕನ್ಸೋರ್ಟಿಯಂ ಷರತ್ತು, ಸದಸ್ಯರ ಷೇರು; ಅಂಜುಂ ಪರ್ವೇಜ್ ಸಮಿತಿಯ ಆಕ್ಷೇಪಣೆ ತಳ್ಳಿ ಹಾಕಿದ ಘನತ್ಯಾಜ್ಯ ನಿರ್ವಹಣೆ ಮಂಡಳಿ
ಕನ್ಸೋರ್ಟಿಯಂ ಷರತ್ತು ಮತ್ತು ಸದಸ್ಯರ ಸಂಖ್ಯೆ ಹೆಚ್ಚಳಕ್ಕೆ ಸಂಬಂಧಿಸಿದಂತೆಯೂ ಅಂಜುಂ ಪರ್ವೇಜ್ ನೇತೃತ್ವದ ಸಮಿತಿಯು ಆಕ್ಷೇಪ ವ್ಯಕ್ತಪಡಿಸಿತ್ತು. ಈ ಕುರಿತು ದಿ ಫೈಲ್ ದಾಖಲೆ ಸಮೇತ ವರದಿ ಪ್ರಕಟಿಸಿತ್ತು.
2,500 ಕೋಟಿ ರು ಮೂಲ ಬೆಲೆಯ ಮೇಲೆ 350 ಕೋಟಿ ಪ್ರೀಮಿಯಂ; ನಾಗರೀಕರ ಮೇಲೆ ಹೊರೆ ಸೃಷ್ಟಿಸಿತೇ ಬಿಎಸ್ಡಬ್ಲ್ಯೂಎಂಎಲ್?
ಲೀಡ್ ಮೆಂಬರ್ನದ್ದು ಶೂನ್ಯ ವಹಿವಾಟು; ಆದರೂ ಟೆಂಡರ್ ಪ್ಯಾಕೇಜ್ನ 7 ಮತ್ತು 9ರಲ್ಲಿ ಎಲ್ 1 ಆಗಿದ್ಹೇಗೆ?
ಈಕ್ವಿಟಿ ಪಾಲ್ಗೊಳ್ಳುವಿಕೆ ಪರಿಕಲ್ಪನೆಯೇ ಅಸ್ಪಷ್ಟವಾಗಿದೆ ಎಂದು ಆರ್ಥಿಕ ಇಲಾಖೆಯೂ ಹೇಳಿತ್ತು.




