Thursday | July 30, 2026 |

40 ಕೋಟಿ ನಷ್ಟ ಆರೋಪ; ಸಿದ್ದರಾಮಯ್ಯ, ಪಾರ್ವತಿ ಮತ್ತಿತರ ವಿರುದ್ಧದ ದೂರರ್ಜಿ 2 ವರ್ಷದಲ್ಲಿ 17 ಬಾರಿ ವಿಚಾರಣೆ, ಇನ್ನೂ ಪೂರ್ಣಗೊಳ್ಳದ ಅಂತಿಮ ಪರಿಶೀಲನೆ

ಬೆಂಗಳೂರು; ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪತ್ನಿ ಪಾರ್ವತಿ ಅವರು ಕ್ರಮವಾಗಿ ಮೊದಲ ಮತ್ತು ಎರಡನೇ ಆರೋಪಿಗಳಾಗಿರುವ ಬದಲಿ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದ ದೂರರ್ಜಿ ವಿಚಾರಣೆಯನ್ನು ಲೋಕಾಯುಕ್ತ ಸಂಸ್ಥೆಯು ಇಂದಿಗೂ  ಪೂರ್ಣಗೊಳಿಸಿಲ್ಲ.  ಈ ದೂರರ್ಜಿ ವಿಚಾರಣೆಯ ಕಳೆದ ಒಂದು ವರ್ಷದಿಂದಲೂ ಅಂತಿಮ ಪರಿಶೀಲನೆ ಹೆಸರಿನಲ್ಲಿ ಲೋಕಾಯುಕ್ತದಲ್ಲಿ  ವಿಚಾರಣೆ ದಿನಾಂಕವು ಮುಂದೂಡಿಕೆಯಾಗುತ್ತಲೇ ಬಂದಿದೆ.

ಈ ಪ್ರಕರಣದ ಕುರಿತಾದ ಅರ್ಜಿಯು ನ್ಯಾಯಾಲಯದಲ್ಲಿ ಇನ್ನೂ ಇತ್ಯರ್ಥವಾಗದೇ ಇದ್ದರೂ ಸಹ ಅವರ ಪುತ್ರ ಡಾ ಯತೀಂದ್ರ ಸಿದ್ದರಾಮಯ್ಯ ಅವರನ್ನು ನಗರಾಭಿವೃದ್ದಿ ಇಲಾಖೆಗೆ ಸಚಿವರನ್ನಾಗಿ ನೇಮಿಸಿರುವದು ಹಿತಾಸಕ್ತಿ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿತ್ತು. ಡಾ ಯತೀಂದ್ರ ಅವರನ್ನು ನಗರಾಭಿವೃದ್ಧಿ ಖಾತೆಯಿಂದ ಕೈ ಬಿಡಬೇಕು ಎಂದು ನೈಜ ಹೋರಾಟಗಾರರ ವೇದಿಕೆಯು ಮುಖ್ಯಮಂತ್ರಿಗೆ ಮನವಿ ಸಹ ನೀಡಿದೆ.

ಇದರ ಬೆನ್ನಲ್ಲೇ ಇದೇ ಪ್ರಕರಣದ ಕುರಿತಾದ ಅರ್ಜಿಯು 2 ವರ್ಷವಾದರೂ ಇತ್ಯರ್ಥಗೊಂಡಿಲ್ಲ ಮತ್ತು ಅಂತಿಮ ಪರಿಶೀಲನೆ ಹೆಸರಿನಲ್ಲಿ ಅರ್ಜಿ ವಿಚಾರಣೆಯು ಮುಂದೂಡಿಕೆಯಾಗುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತವರ ಪತ್ನಿ ಬಿ.ಎಂ.ಪಾರ್ವತಿ ಸೇರಿ ಆರು ಮಂದಿ ವಿರುದ್ಧ ಲೋಕಾಯುಕ್ತ ಸಂಸ್ಥೆಗೆ ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಅವರು 2024ರಲ್ಲೇ  ದೂರು ನೀಡಿದ್ದರು.  ಮುಡಾದಲ್ಲಿ ಅಧಿಕಾರ ದುರುಪಯೋಗ, ವಂಚನೆ ಮತ್ತು ಭ್ರಷ್ಟಾಚಾರ ನಡೆಸಲಾಗಿದೆ ಎಂದು ಆರೋಪಿಸಿ 383 ಪುಟಗಳ ದಾಖಲೆಗಳೊಂದಿಗೆ ದೂರು ನೀಡಿದ್ದರು.

ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ ಸೇರಿ ಪತ್ನಿಯ ಸಹೋದರ ಬಿ.ಎಂ.ಮಲ್ಲಿಕಾರ್ಜುನಸ್ವಾಮಿ, ಮುಡಾದ ಮಾಜಿ‌ ಅಧ್ಯಕ್ಷ ಬಸವನಗೌಡ, ಎಚ್.ವಿ.ರಾಜೀವ್‌, ಆಯುಕ್ತರಾಗಿದ್ದ ಡಿ.ಬಿ.ನಟೇಶ್ ಅವರನ್ನು ಪ್ರತಿವಾದಿಗಳನ್ನಾಗಿಸಿದ್ದಾರೆ.

 

ಈ ದೂರರ್ಜಿಯನ್ನು ಲೋಕಾಯುಕ್ತ ಸಂಸ್ಥೆಯು ನೋಂದಾಯಿಸಿಕೊಂಡಿತ್ತು. ಈ ಅರ್ಜಿಯ ವಿಚಾರಣೆಯನ್ನು ನಡೆಸಲು ಹೆಚ್ಚುವರಿ ವಿಚಾರಣಾಧಿಕಾರಿ (11) ಅವರಿಗೆ ವಹಿಸಿತ್ತು. 2024ರ ಜುಲೈನಿಂದ 2026ರ ಇದುವರೆಗೆ ಈ ಅರ್ಜಿಯು 17 ಬಾರಿ ವಿಚಾರಣಾಧಿಕಾರಿ ಮುಂದೆ ಬಂದಿತ್ತು. ಸದ್ಯ ಈ ಅರ್ಜಿ ವಿಚಾರಣೆಯನ್ನು 2026ರ ಸೆ.3ಕ್ಕೆ ಮುಂದೂಡಿದೆ.
2025ರ ಮೇ 17ರಿಂದ 2026ರ ಜುಲೈ 10ರವರೆಗೂ ಈ ಅರ್ಜಿಯು ಅಂತಿಮ ಪರಿಶೀಲನೆ ಹೆಸರಿನಲ್ಲೇ ಕಾಯ್ದಿರಿಸಿದೆ.

ಸಿದ್ದರಾಮಯ್ಯ ಅವರ ಸಂಪುಟದಲ್ಲಿ ತಮ್ಮ ಆಪ್ತ ಬೈರತಿ ಸುರೇಶ್‌ ಅವರು ನಗರಾಭಿವೃದ್ದಿ ಸಚಿವರನ್ನಾಗಿಸಿದ್ದರು. ಇದೇ ಹೊತ್ತಿನಲ್ಲೇ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ನಿಯಮಬಾಹಿರವಾಗಿ ಬದಲಿ ನಿವೇಶನ ಹಂಚಿಕೆ ಮಾಡಿರುವ ಪ್ರಕರಣವು ರಾಜಕೀಯ ವಲಯದಲ್ಲಿ ಭಾರೀ ಸದ್ದು ಮಾಡಿತ್ತು.

ಬೆಳಗಾವಿ ವಿಧಾನಸಭೆ ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲೇ ಬೈರತಿ ಸುರೇಶ್‌ ಅವರು ಈ ಪ್ರಕರಣಕ್ಕೆ ಸಂಬಂಧಿಸಿದ ಕಡತವನ್ನು ಹೆಲಿಕಾಪ್ಟರ್‍‌ನಲ್ಲಿ ತರಿಸಿಕೊಂಡಿದ್ದರು ಎಂಬ ಆರೋಪಗಳು ಕೇಳಿ ಬಂದಿದ್ದವು. ಅಲ್ಲದೇ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಬದಲಿ ನಿವೇಶನ ಹಂಚಿಕೆ ಮಾಡುವ ಸಂದರ್ಭದಲ್ಲಿ  ಪ್ರಾಧಿಕಾರ ನಡೆಸಿದ್ದ ಸಭೆಯಲ್ಲಿ ಡಾ ಯತೀಂದ್ರ ಸಿದ್ದರಾಮಯ್ಯ ಅವರೂ ಹಾಜರಿದ್ದರು. ಈ ಎಲ್ಲ ಬೆಳವಣಿಗೆಗಳನ್ನು ಅವಲೋಕಿಸಿದ್ದ   ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್‌ ಬೆಂಗಳೂರಿನಿಂದ ಮೈಸೂರುವರೆಗೆ ಪಾದಯಾತ್ರೆಯನ್ನೂ ಮಾಡಿದ್ದವು.

 

ಬದಲಿ ನಿವೇಶನ ಹಂಚಿಕೆ ಪ್ರಕರಣದಲ್ಲಿ ತಂದೆ, ತಾಯಿಯೇ ಆರೋಪಿ; ಕೋರ್ಟ್‌ನಲ್ಲಿ ಪ್ರಕರಣ ವಿಚಾರಣೆಯಲ್ಲಿರುವಾಗಲೇ ಯತೀಂದ್ರಗೆ ನಗರಾಭಿವೃದ್ಧಿ ಇಲಾಖೆ ಹೊಣೆ, ಹಿತಾಸಕ್ತಿ ಸಂಘರ್ಷವಲ್ಲವೇ?

 

ಅಲ್ಲದೇ ಸ್ನೇಹಮಯಿ ಕೃಷ್ಣ ಅವರೂ  ಹೈಕೋರ್ಟ್‌ ಮೆಟ್ಟಿಲೇರಿದ್ದರು. ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಮತ್ತು ಪಾರ್ವತಿ ಅವರನ್ನು ಮೊದಲ ಮತ್ತು ಎರಡನೇ ಪ್ರತಿವಾದಿಯನ್ನಾಗಿಸಿದ್ದರು. ನ್ಯಾಯಾಲಯದಲ್ಲಿ ಈ ಪ್ರಕರಣದ ಕುರಿತು ವಿಚಾರಣೆ ನಡೆಯುತ್ತಿದ್ದ ಹೊತ್ತಿನಲ್ಲಿ ಪಾರ್ವತಿ ಅವರು ಬದಲಿ ನಿವೇಶನಗಳನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ವಾಪಸ್‌ ಮಾಡಿದ್ದರು. ಈ ಮಧ್ಯೆ ಈ ಪ್ರಕರಣದ ಕುರಿತು ಲೋಕಾಯುಕ್ತ ಪೊಲೀಸ್‌ ವಿಭಾಗವು ತನಿಖೆ ಮಾಡಿತ್ತು. ಆದರೆ ಈ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸ್ ವಿಭಾಗವು ಬಿ ರಿಪೋರ್ಟ್‌ನ್ನು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಸಲ್ಲಿಸಿತ್ತು.

 

ಮಾಜಿ ಸಿಎಂ ಸಿದ್ದರಾಮಯ್ಯ, ಪಾರ್ವತಿ ವಿರುದ್ಧ ಭ್ರಷ್ಟಾಚಾರ, ಅಧಿಕಾರ ದುರುಪಯೋಗ ಆರೋಪ; 2 ವರ್ಷದಲ್ಲಿ 16 ಬಾರಿ ವಿಚಾರಣೆ, ಜುಲೈ 9ಕ್ಕೆ ವಿಚಾರಣೆಗೆ ದಿನಾಂಕ ನಿಗದಿ

 

ದೂರುದಾರ ಸ್ನೇಹಮಯಿ ಕೃಷ್ಣ ಅವರು ಜಾರಿ ನಿರ್ದೇಶನಾಲಯಕ್ಕೆ 2026ರ ಮಾರ್ಚ್‌ನಲ್ಲಿ ದೂರು ದಾಖಲಿಸಿದ್ದರು.

 

 

 

 

 

 

 

 

ಲೋಕಾಯುಕ್ತ ಎಸ್ಪಿ ಸಲ್ಲಿಸಿರುವ ‘ಬಿ’ ರಿಪೋರ್ಟ್‌ ಪಡೆದು ಪರಿಶೀಲಿಸಬೇಕು. ‘ಬಿ’ ರಿಪೋರ್ಟ್‌ ಅಂಗೀಕರಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶ ರದ್ದುಪಡಿಸಬೇಕು. ಅಲ್ಲದೆ, ಸ್ವತಂತ್ರ ತನಿಖಾ ಸಂಸ್ಥೆಗೆ ಪ್ರಕರಣದ ತನಿಖೆ ವರ್ಗಾಯಿಸಬೇಕು. ತನಿಖೆ ನಡೆಸಿ ಹೊಸದಾಗಿ ವರದಿ ಸಲ್ಲಿಸಲು ಸ್ವತಂತ್ರ ತನಿಖಾ ಸಂಸ್ಥೆಗೆ ನಿರ್ದೇಶಿಸಬೇಕು ಎಂದು ಕೋರಿದ್ದಾರೆ.  ಈ ಮೇಲ್ಮನವಿಯಲ್ಲಿ ಮೈಸೂರು ಜಿಲ್ಲಾ ಲೋಕಾಯುಕ್ತದ ಪೊಲೀಸ್‌ ಅಧೀಕ್ಷಕರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಬಿ.ಎಂ. ಪಾರ್ವತಿ, ಭಾವಮೈದ ಮಲ್ಲಿಕಾರ್ಜುನ ಸ್ವಾಮಿ, ವಿವಾದಿತ ಜಮೀನಿನ ಮೂಲ ಮಾಲೀಕ ಜೆ.ದೇವರಾಜು, ಮುಡಾ ಮಾಜಿ ಆಯುಕ್ತ ಜಿ.ಟಿ. ದಿನೇಶ್‌ಕುಮಾರ್‌ ಮತ್ತು ಜಾರಿ ನಿರ್ದೇಶನಾಲಯದ ಸಹಾಯಕ ನಿರ್ದೇಶಕರನ್ನು ಪ್ರತಿವಾದಿಗಳನ್ನಾಗಿಸಿದ್ದರು.

ಸ್ನೇಹಮಯಿ ಕೃಷ್ಣ ಅವರು ದೂರು ಸಲ್ಲಿಸುತ್ತಿದ್ದಂತೆ ಜಾರಿ ನಿರ್ದೇಶನಾಲಯವು ಸಹ  ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ  ಬಿ ರಿಪೋರ್ಟ್‌ನ್ನು ಈಗಾಗಲೇ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದೆ. ಈ ಅರ್ಜಿಯು ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹುದ್ದೆಯಲ್ಲಿದ್ದಾಗಲೇ ಮತ್ತು ಅವರ ಕುಟುಂಬ ಸದಸ್ಯರಿಗೆ 2026ರ ಮಾರ್ಚ್ 26ರಂದು ತುರ್ತು ನೋಟಿಸ್ ಜಾರಿ ಮಾಡಿತ್ತು. ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ‘ಬಿ’ ವರದಿಯನ್ನು ಪುರಸ್ಕರಿಸಿ ಸಿದ್ದರಾಮಯ್ಯ ಅವರಿಗೆ ಕ್ಲೀನ್ ಚೀಟ್ ನೀಡಿದ್ದ ವಿಶೇಷ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯವು ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಬಾಮೈದ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಜಮೀನು ಮಾಲೀಕರಿಗೆ ನೋಟಿಸ್ ನೀಡಿತ್ತು.

ಇದೇ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ಸಹ ಕೋರ್ಟ್ ಮೆಟ್ಟಿಲೇರಿದ್ದು ಪ್ರಕರಣವು ಈಗ ಹೊಸ ಕಾನೂನು ತಿರುವು ಪಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಲ್ಮನವಿ ಸಲ್ಲಿಸಿರುವ ಜಾರಿ ನಿರ್ದೇಶನಾಲಯದ ಪರ ವಕೀಲರು ಎತ್ತುವ ಪ್ರಶ್ನೆಗಳಿಗೆ ಪ್ರತಿವಾದಿಯಾಗಿರುವ ನಗರಾಭಿವೃದ್ಧಿ ಇಲಾಖೆಯೇ ಉತ್ತರ ಒದಗಿಸಬೇಕು. ಇಂತಹ ಹೊತ್ತಿನಲ್ಲಿ ಡಾ ಯತೀಂದ್ರ ಸಿದ್ದರಾಮಯ್ಯ ಅವರಿಗೆ ನಗರಾಭಿವೃದ್ಧಿ ಇಲಾಖೆ ನೀಡಿರುವುದು ಸಹಜವಾಗಿಯೇ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಂತಾಗಿದೆ.

ಈ ಪ್ರಕರಣದ ಸತ್ಯಾಸತ್ಯತೆ ತಿಳಿದುಕೊಳ್ಳಲು ಸರ್ಕಾರವು ನಿವೃತ್ತ ನ್ಯಾಯಮೂರ್ತಿ ಪಿ ಎನ್ ದೇಸಾಯಿ ಅವರ ನೇತೃತ್ವದಲ್ಲಿ ತನಿಖಾ ಆಯೋಗವನ್ನು ರಚಿಸಿತ್ತು. ವಿಶೇಷವೆಂದರೇ ನ್ಯಾಯಮೂರ್ತಿ ಪಿ.ಎನ್. ದೇಸಾಯಿ ನೇತೃತ್ವದ ಏಕಸದಸ್ಯ ಆಯೋಗವು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬಕ್ಕೆ ಕ್ಲೀನ್ ಚಿಟ್ ನೀಡಿತ್ತು. ಅವರ ವಿರುದ್ಧ ಮಾಡಲಾದ ಆರೋಪಗಳು ನಿರಾಧಾರ ಎಂದು ಆಯೋಗವು ತನ್ನ ವರದಿಯಲ್ಲಿ ಸ್ಪಷ್ಟಪಡಿಸಿದ್ದು, ಈ ವರದಿಯನ್ನು ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸಚಿವ ಸಂಪುಟವು ಅಂಗೀಕರಿಸಿತ್ತು.

ಆ ನಂತರ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ಪಿ ಎನ್ ದೇಸಾಯಿ ಅವರನ್ನೇ ನೇಮಿಸಿತ್ತು. ವಿಶೇಷವೆಂದರೇ ಪ್ರತಿಪಕ್ಷಗಳೂ ಸಹ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ಯಾರನ್ನೂ ಸೂಚಿಸಿರಲಿಲ್ಲ.

ಮತ್ತೊಂರು ವಿಶೇಷವೆಂದರೇ ಹಲವು ತಿಂಗಳುಗಳ ಕಾಲ ತನಿಖೆ ನಡೆಸಿದ್ದ ದೇಸಾಯಿ ನೇತೃತ್ವದ ಆಯೋಗವು ಮುಡಾದಲ್ಲಿ ಅನೇಕ ಅಕ್ರಮ, ಕಾನೂನು ಮತ್ತು ನಿಯಮಬಾಹಿರ ಚಟುವಟಿಕೆಗಳನ್ನು ಪತ್ತೆ ಹಚ್ಚಿತ್ತು. ಮತ್ತು ಇದರಲ್ಲಿ ಭಾಗಿ ಆಗಿದ್ದಾರೆ ಎನ್ನಲಾಗಿದ್ದ ಮುಡಾ ಆಯುಕ್ತ ಡಿ ಬಿ ನಟೇಶ್‌ ಮತ್ತು ಜಿ ಟಿ ದಿನೇಶ್‌ ಕುಮಾರ್ ಅವರನ್ನು ಆರೋಪಿಯನ್ನಾಗಿಸಿತ್ತು. ಪಿ ಎನ್ ದೇಸಾಯಿ ಅವರು ಸರ್ಕಾರಕ್ಕೆ ಸಲ್ಲಿಸಿದ್ದ ವರದಿ ಆಧರಿಸಿ ನಗರಾಭಿವೃದ್ಧಿ ಇಲಾಖೆಯೂ ಸಹ ಈ ಇಬ್ಬರೂ ಆರೋಪಿಗಳಿಗೆ ಕಾರಣ ಕೇಳಿ 2026ರ ಫೆಬ್ರುವರಿಯಲ್ಲಿ  ನೋಟೀಸ್ ಕೂಡ ಜಾರಿ ಮಾಡಿತ್ತು.

 

 

 

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿನ ನಿವೇಶನಗಳ ಹಂಚಿಕೆಯಲ್ಲಿ ನಡೆದಿದೆ ಎನ್ನಲಾಗಿರುವ ಹಲವು ಅಕ್ರಮ, ನಿಯಮ ಮತ್ತು ಕಾನೂನುಬಾಹಿರ ಚಟುವಟಿಕೆಗಳ ಕುರಿತು ಖುದ್ದು ಸರ್ಕಾರವೇ ಆರೋಪಿ ಅಧಿಕಾರಿಗಳಿಗೆ ನೋಟೀಸ್‌ ನೀಡಿದೆ. ಅದರಲ್ಲೂ ಬಹುಮುಖ್ಯವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಬದಲಿ ನಿವೇಶನ ಹಂಚಿಕೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.

ಡಾ ಯತೀಂದ್ರ ಸಿದ್ದರಾಮಯ್ಯ ಅವರನ್ನು ನಗರಾಭಿವೃದ್ಧಿ ಸಚಿವರನ್ನಾಗಿ ನೇಮಿಸಿರುವುದಕ್ಕೆ ದೂರುದಾರ ಸ್ನೇಹಮಯಿ ಕೃಷ್ಣ ಅವರೂ ಸಹ ಸಾರ್ವಜನಿಕವಾಗಿ ವಿರೋಧಿಸಿದ್ದಾರೆ.

‘ಸಂವಿಧಾನದ ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಂಡು ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ 14 ನಿವೇಶನಗಳನ್ನು ಅಕ್ರಮವಾಗಿ ಪಡೆದಿದ್ದ ಆರೋಪ ಹೊತ್ತವರ ಮಗನಾದ ಯತೀಂದ್ರರವರನ್ನೇ, ನಗರಾಭಿವೃದ್ಧಿ ಇಲಾಖೆಯ ಸಚಿವರನ್ನಾಗಿ ನೇಮಿಸುವ ಮೂಲಕ, ಪ್ರಜೆಗಳು ರಾಜಕಾರಣಿಗಳ ವಿರುದ್ಧ ಆರೋಪ ಮಾಡಿದರೆ, ಆರೋಪ ಹೊತ್ತ ರಾಜಕಾರಣಿಯನ್ನೇ ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗುವುದು ಎಂಬಂತೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅವಮಾನ ಮಾಡಿದ್ದಾರೆ ಎಂದರೆ ತಪ್ಪಾಗಲಾರದು. ಪ್ರಜೆಗಳು ಇಂತಹ ಕೆಟ್ಟ ಪ್ರವೃತ್ತಿಯನ್ನು ಪ್ರಜೆಗಳು ಈಗಲೂ ಪ್ರಶ್ನೆ ಮಾಡದಿದ್ದರೆ, ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತಷ್ಟು ಹಾಳಾಗುವುದರಲ್ಲಿ ಸಂಶಯವಿಲ್ಲ,’ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

 

ಸಿಎಂ ಪತ್ನಿಗೆ ಬದಲಿ ನಿವೇಶನ; ಕಾಂಗ್ರೆಸ್‌ ಸಂಸದ ಕುಮಾರ್‍‌ ನಾಯಕ್‌ ಕರ್ತವ್ಯಲೋಪ ಸಾಬೀತುಪಡಿಸಿದ ತನಿಖಾ ತಂಡ

 

ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಬದಲಿ ನಿವೇಶನ ಹಂಚಿಕೆ ಪ್ರಕ್ರಿಯೆಯಲ್ಲಿ ಅಂದು ಜಿಲ್ಲಾಧಿಕಾರಿಯಾಗಿದ್ದ ಕುಮಾರ್ ನಾಯಕ್ (ಲೋಕಸಭೆ ಸದಸ್ಯ) ಅವರ ಕರ್ತವ್ಯಲೋಪ ಎಸಗಿದ್ದನ್ನು ತನಿಖಾ ತಂಡವು ಸಾಬೀತುಪಡಿಸಿತ್ತು.

 

ಬದಲಿ ನಿವೇಶನ; ಅರ್ಜಿದಾರ, ಪುತ್ರ ಮೂಕಪ್ರೇಕ್ಷಕರಲ್ಲ, ಎ ಸಿ ಕೊಠಡಿಯಲ್ಲೇ ತಯಾರಾಗಿತ್ತೇ ತಪಾಸಣೆ ವರದಿ?

 

ಪಾರ್ವತಿ ಅವರಿಗೆ ಬದಲಿ ನಿವೇಶನ ಹಂಚಿಕೆ ಮಾಡುವ ಸಂಬಂಧ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ನಡೆಸಿದ್ದ ಸಭೆಯಲ್ಲಿ ಡಾ ಯತೀಂದ್ರ ಸಿದ್ದರಾಮಯ್ಯ ಅವರೂ ಸಹ ಹಾಜರಿದ್ದರು.

 

60;40 ರ ಬದಲಿಗೆ 50;50 ಅನುಪಾತದಲ್ಲಿ ಬದಲಿ ನಿವೇಶನ; ಸಿದ್ದರಾಮಯ್ಯರ ಮೊದಲ ಅವಧಿಯಲ್ಲೇ ಚಮತ್ಕಾರ!

 

ಪಾರ್ವತಿ ಅವರಿಗೆ ಬದಲಿ ನಿವೇಶನ ಹಂಚಿಕೆಯಲ್ಲಿ ಯಾವುದೇ ನಿಯಮಗಳು ಉಲ್ಲಂಘನೆಯಾಗಿಲ್ಲ ಎಂದು ಸ್ವತಃ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಿದ್ದರು. ಇದಾದ ನಂತರವೂ ಹಲವು ದಾಖಲೆಗಳು ಬಹಿರಂಗವಾಗಿದ್ದವು.

 

ಪಾರ್ವತಿ ಅವರಿಗೆ ಬದಲಿ ನಿವೇಶನ ಪ್ರಕರಣ; ಸುದೀರ್ಘ ಸ್ಪಷ್ಟನೆ ನಂತರವೂ ಮತ್ತಷ್ಟು ದಾಖಲೆಗಳು ಬಹಿರಂಗ

 

ಬದಲಿ ನಿವೇಶನ ಹಂಚಿಕೆ ಮಾಡುವ ಮುನ್ನ ಮೂಲ ಜಮೀನಿನ ಸ್ಥಳದಲ್ಲಿದ್ದ ರಸ್ತೆಯನ್ನು ಮುಚ್ಚಿಡಲಾಗಿತ್ತು ಎಂಬ ಆರೋಪಕ್ಕೆ ಹಿಂದಿನ  ಜಿಲ್ಲಾಧಿಕಾರಿಯು ಗುರಿಯಾಗಿದ್ದರು.

ಸಿಎಂ ಪತ್ನಿಗೆ ಬದಲಿ ನಿವೇಶನ ಪ್ರಕರಣ; ಮೂಲ ಜಮೀನಿನ ಸ್ಥಳದಲ್ಲಿದ್ದ ರಸ್ತೆಯನ್ನೇ ಮುಚ್ಚಿಟ್ಟರೇ ಜಿಲ್ಲಾಧಿಕಾರಿ?

 

ಹಾಗೆಯೇ ಬದಲಿ ನಿವೇಶನ ಹಂಚಿಕೆ ಮಾಡುವ ಮುನ್ನ ತಹಶೀಲ್ದಾರ್ ಕೂಡ ವರದಿ ಸಲ್ಲಿಸಿದ್ದರು. ಈ ವರದಿಯು ಸಹ ಹಲವು ಲೋಪಗಳಿಂದ ಕೂಡಿತ್ತು.

 

ಸಿಎಂ ಪತ್ನಿಗೆ ಬದಲಿ ನಿವೇಶನ; ತಹಶೀಲ್ದಾರ್‍‌ ವರದಿಯಲ್ಲಿ ಉಲ್ಲೇಖವಾಗದ ಉದ್ಯಾನ, ರಸ್ತೆ ವಿವರ

 

ಸಿದ್ದರಾಮಯ್ಯ ಅವರ ಪತ್ನಿ ಅವರ ಪತ್ನಿ ಪಾರ್ವತಿ ಅವರಿಗೆ ಬದಲಿ ನಿವೇಶನಗಳ ಹಂಚಿಕೆ ಪ್ರಕರಣದ ಕುರಿತು ‘ದಿ ಫೈಲ್‌’ ಸರಣಿ ವರದಿಗಳನ್ನು ಪ್ರಕಟಿಸಿದ್ದನ್ನು ಸ್ಮರಿಸಬಹುದು.

Hot this week

ನರೇಗಾ; ದೇಶದಲ್ಲಿ 13.21 ಕೋಟಿ, ರಾಜ್ಯದಲ್ಲಿ 66.38 ಲಕ್ಷ ಕಾರ್ಮಿಕರು ಪಟ್ಟಿಯಿಂದ ಡಿಲೀಟ್

ಬೆಂಗಳೂರು; ರಾಜ್ಯದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ...

ಕಲ್ಬುರ್ಗಿ ಸಂಸದ ರಾಧಾಕೃಷ್ಣ ದೊಡ್ಡಮನಿ ಲೋಕಸಭೆಗೆ ಗರಿಷ್ಠ ಗೈರು ದಾಖಲು; ಗೈರು ಹಾಜರಾತಿ ಸಮಿತಿಯ ಮೂರನೇ ವರದಿ ಸಲ್ಲಿಕೆ

ಬೆಂಗಳೂರು;  ರಾಜ್ಯಸಭೆಯಲ್ಲಿ ವಿಪಕ್ಷ ನಾಯಕರಾಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಳಿಯ...

ಪ್ರವಾಸೋದ್ಯಮ ಆದಾಯ; ಲಕ್ಷಾಂತರ ರುಪಾಯಿ ಜಿಎಸ್‌ಟಿ ಕಟಾಯಿಸದ ಭದ್ರಾ ಹುಲಿ ಸಂರಕ್ಷಣಾ ಪ್ರತಿಷ್ಠಾನ, ಸಾರ್ವಜನಿಕವಾಗಿ ನಿಧಿ ಬಹಿರಂಗವಾಗಿಲ್ಲವೇಕೆ?

ಬೆಂಗಳೂರು; ಭದ್ರಾ ಹುಲಿ ಸಂರಕ್ಷಣಾ ಪ್ರತಿಷ್ಠಾನ ನಿಧಿಗೆ 2018-19ನೇ ಸಾಲಿನಲ್ಲಿ ಪ್ರವಾಸೋದ್ಯಮದಿಂದ...

ತಮಿಳುನಾಡಿಗೆ ಕಾವೇರಿ; ನಿಗದಿಗಿಂತ ಅರ್ಧ ಟಿಎಂಸಿ ಹೆಚ್ಚು ನೀರು ಹರಿಸಿದ ಕರ್ನಾಟಕ , ಸಂಸತ್‌ನಲ್ಲಿ ಕೇಂದ್ರದ ಮಾಹಿತಿ

ಬೆಂಗಳೂರು;   ಕಾವೇರಿ ನದಿ ನೀರು ಹಂಚಿಕೆ ಮತ್ತು ಬಿಡುಗಡೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ...
Please Scan to make Your Contribution

Topics

ನರೇಗಾ; ದೇಶದಲ್ಲಿ 13.21 ಕೋಟಿ, ರಾಜ್ಯದಲ್ಲಿ 66.38 ಲಕ್ಷ ಕಾರ್ಮಿಕರು ಪಟ್ಟಿಯಿಂದ ಡಿಲೀಟ್

ಬೆಂಗಳೂರು; ರಾಜ್ಯದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ...

ಕಲ್ಬುರ್ಗಿ ಸಂಸದ ರಾಧಾಕೃಷ್ಣ ದೊಡ್ಡಮನಿ ಲೋಕಸಭೆಗೆ ಗರಿಷ್ಠ ಗೈರು ದಾಖಲು; ಗೈರು ಹಾಜರಾತಿ ಸಮಿತಿಯ ಮೂರನೇ ವರದಿ ಸಲ್ಲಿಕೆ

ಬೆಂಗಳೂರು;  ರಾಜ್ಯಸಭೆಯಲ್ಲಿ ವಿಪಕ್ಷ ನಾಯಕರಾಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಳಿಯ...

ತಮಿಳುನಾಡಿಗೆ ಕಾವೇರಿ; ನಿಗದಿಗಿಂತ ಅರ್ಧ ಟಿಎಂಸಿ ಹೆಚ್ಚು ನೀರು ಹರಿಸಿದ ಕರ್ನಾಟಕ , ಸಂಸತ್‌ನಲ್ಲಿ ಕೇಂದ್ರದ ಮಾಹಿತಿ

ಬೆಂಗಳೂರು;   ಕಾವೇರಿ ನದಿ ನೀರು ಹಂಚಿಕೆ ಮತ್ತು ಬಿಡುಗಡೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ...

ಎನ್‌ಇಪಿ ಅಭ್ಯರ್ಥಿಗಳಿಗೆ ಆಘಾತ, ಉರ್ದು, ಚಿತ್ರಕಲಾ ಶಿಕ್ಷಕರ ಹುದ್ದೆ ಕೈಬಿಟ್ಟಿತೇಕೆ?; ಕರಡು ನಿಯಮಗಳಿಗೆ ಆಕ್ಷೇಪಣೆಗಳ ಸುರಿಮಳೆ

ಬೆಂಗಳೂರು; ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಕರಡು ಅಧಿಸೂಚನೆ...

Related Articles

Popular Categories

error: Content is protected !!