Wednesday | July 15, 2026 |

ಸಿಎಂ ಪತ್ನಿಗೆ ಬದಲಿ ನಿವೇಶನ ಪ್ರಕರಣ; ಮೂಲ ಜಮೀನಿನ ಸ್ಥಳದಲ್ಲಿದ್ದ ರಸ್ತೆಯನ್ನೇ ಮುಚ್ಚಿಟ್ಟರೇ ಜಿಲ್ಲಾಧಿಕಾರಿ?

ಬೆಂಗಳೂರು; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವಮೈದುನ ಬಿ ಎಂ ಮಲ್ಲಿಕಾರ್ಜುನ ಸ್ವಾಮಿ ಅವರ ಹೆಸರಿನಲ್ಲಿತ್ತು ಎಂದು ಹೇಳಲಾಗಿರುವ ಜಮೀನಿನ ಸ್ಥಳದಲ್ಲಿದ್ದ ರಸ್ತೆಗೆ  ಸಂಬಂಧಿಸಿದಂತೆ ಅಂದಿನ ಜಿಲ್ಲಾಧಿಕಾರಿಗಳು ಸುಳ್ಳು ದಾಖಲೆ ಸೃಷ್ಟಿಸಿದ್ದಾರೆ ಎಂಬ ಗುರುತರವಾದ ಆರೋಪ ಕೇಳಿ ಬಂದಿದೆ.

 

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್‍‌ ನೀಡಿದ್ದ ಮತ್ತು ಕ್ರಯಪತ್ರಗಳ ನೋಂದಣಿಗೆ ಸಂಬಂಧಿಸಿದಂತೆ ದಾಖಲೆಗಳು ಬಹಿರಂಗಗೊಂಡ ಬೆನ್ನಲ್ಲೇ ಇದೀಗ ಜಿಲ್ಲಾಧಿಕಾರಿಗಳು ನೀಡಿದ್ದ ಸ್ಥಳ ತನಿಖಾ ವರದಿಯೂ ಮುನ್ನೆಲೆಗೆ ಬಂದಿದೆ.

 

ಭೂ ಸ್ವಾಧೀನದಿಂದ ಕೈಬಿಟ್ಟಿರುವ ಮೂಲ ಜಮೀನಿಗೆ ಸಂಬಂಧಿಸಿದಂತೆ ಗಂಗರಾಜು ಮತ್ತು ಸ್ನೇಹಮಯಿಕೃಷ್ಣ ಎಂಬುವರು  ದಾಖಲೆಗಳನ್ನು ಬಹಿರಂಗಪಡಿಸಿದ ನಂತರವೂ ಜಿಲ್ಲಾಧಿಕಾರಿಯ ಸ್ಥಳ ತನಿಖಾ ವರದಿಯೂ ಮುನ್ನೆಲೆಗೆ ಬಂದಿದೆ. ಜಿಲ್ಲಾಧಿಕಾರಿ ನೀಡಿದ್ದ ಸ್ಥಳ ತನಿಖಾ ವರದಿ ಮತ್ತು ನಕಾಶೆಯೂ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಬಿ ಎಂ ಮಲ್ಲಿಕಾರ್ಜುನ ಸ್ವಾಮಿ ಅವರಿಗೆ ಸೇರಿತ್ತು ಎನ್ನಲಾಗಿರುವ ಜಮೀನಿನ ಸ್ಥಳದಲ್ಲಿ ರಸ್ತೆ ಇದ್ದರೂ ಸಹ ಅಂದಿನ ಜಿಲ್ಲಾಧಿಕಾರಿಗಳು ಅದು ಖಾಲಿ ಸ್ಥಳ ಎಂದು ವರದಿಯಲ್ಲಿ ಉಲ್ಲೇಖಿಸಿ ಸುಳ್ಳು ದಾಖಲೆ ಸೃಷ್ಟಿಸಿದ್ದಾರೆ. ಭೂ ಮಾಪಕರು ಕೂಡ ರಸ್ತೆ ಇರುವ ವಿಚಾರವನ್ನೇ ಮುಚ್ಚಿಟ್ಟು ಸುಳ್ಳು ನಕಾಶೆ ತಯಾರಿಸಿದ್ದಾರೆ ಎಂಬ ಆಪಾದನೆಯೂ ಕೇಳಿ ಬಂದಿದೆ.

 

ಈ ಕುರಿತೂ ಸ್ನೇಹಮಯಿ ಕೃಷ್ಣ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿವರವಾಗಿ ಬರೆದುಕೊಂಡಿದ್ದಾರೆ.

 

ಜಿಲ್ಲಾಧಿಕಾರಿ ಸ್ಥಳ ತನಿಖಾ ಟಿಪ್ಪಣಿಯಲ್ಲೇನಿದೆ?

 

ಮೈಸೂರು ತಾಲೂಕು ಕಸಬಾ ಹೋಬಳಿ ಕೆಸರೆ ಗ್ರಾಮದ ಸರ್ವೆ ನಂಬರ್‍‌ 464ರಲ್ಲಿ 3-16 ಗುಂಟೆ ಜಮೀನಿನಲ್ಲಿ ವಸತಿ ಉದ್ದೇಶಕ್ಕಾಗಿ ಭೂ ಪರಿವರ್ತನೆ ಕೋರಿ ಬಿ ಎಂ ಮಲ್ಲಿಕಾರ್ಜುನ ಸ್ವಾಮಿ ಅವರು ಸಲ್ಲಿಸಿರುವ ಅರ್ಜಿ ಕುರಿತು 2005ರ ಜೂನ್‌ 17ರಂದು ಸ್ಥಳ ತನಿಖೆ ನಡೆಸಿರುತ್ತೇನೆ. ತಾಲೂಕು ತಹಶೀಲ್ದಾರ್‍‌ ಹಾಗೂ ಇತರೆ ಸಿಬ್ಬಂದಿಯವರು ಹಾಜರಿದ್ದರು.

 

ಮೈಸೂರು ತಾಲೂಕು ತಹಶೀಲ್ದಾರ್‍‌ ಅವರ ಪತ್ರದ ಸಂಖ್ಯೆ (ಎಲ್‌ನೆff 134/04-05- 2005ರ) ಪ್ರಕಾರ ಪ್ರಸ್ತಾವಿತ ಜಮೀನು ಅರ್ಜಿದಾರರಿಗೆ ಕ್ರಯದ ಮೂಲಕ ಬಂದಿದ್ದು ಖಾತೆ ಆಗಿ ಸ್ವಾಧೀನಾನುಭವದಲ್ಲಿರುತ್ತಾರೆ. ಸ್ಥಳ ಪರಿಶೀಲನೆ ಸಮಯದಲ್ಲಿ ಕಂಡು ಬಂದಂತೆ ಪ್ರಸ್ತಾವಿತ ಜಮೀನಿನ ಮೇಲೆ ವಿದ್ಯುತ್‌ ವಾಹನ ತಂತಿ ಹಾದು ಹೋಗಿರುವುದಿಲ್ಲ. ಸದರಿ ಪ್ರದೇಶದಲ್ಲಿ ಮರ ಮಾಲ್ಕಿಗಳು ಇರುವುದಿಲ್ಲ. ಜಮೀನಿನಲ್ಲಿ ಅನಧಿಕೃತ ಕಟ್ಟಡಗಳು ಇರುವುದಿಲ್ಲ.

 

ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಪತ್ರ (ಸಂಖ್ಯೆ; ನಂ ಎಲ್‌ ಎ ಕ್ಯೂ(6)ಸಿಆರ್‍‌ 48/96-97 ದಿನಾಂಕ 03.09.1998) ದ ಪ್ರಕಾರ ಭೂ ಸ್ವಾಧೀನ ಕೈಬಿಡಲಾಗಿದೆ ಎಂದು ಹಿಂಬರಹ ನೀಡಿರುತ್ತಾರೆ. ಹಾಗೂ ಪತ್ರ (ನಂ ; ಮೈನಪ್ರಾ/ನಯೋ/ಭೂಬ/566/05-06-ದಿನಾಂಕ 29.04.2005)ದಂತೆ ವಸತಿ ಉದ್ದೇಶಕ್ಕೆ ಕಾಯ್ದಿರಿಸಲಾಗಿರುತ್ತದೆ. ಸ್ಥಳ ತನಿಖಾ ಸಮಯದಲ್ಲಿ ಕಂಡುಬಂದಂತೆ ಪ್ರಸ್ತಾವಿತ ಪ್ರದೇಶವು ಸಮತಟ್ಟಾಗಿದ್ದು ವಸತಿ ಉದ್ದೇಶಕ್ಕೆ ಯೋಗ್ಯವಾಗಿರುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಿರುವುದು ಕಂಡು ಬಂದಿದೆ.

 

 

‘ಸಿದ್ದರಾಮಯ್ಯನವರ ಪ್ರಭಾವಕ್ಕೆ ಒಳಗಾದ ಜಿಲ್ಲಾಧಿಕಾರಿಯಂತಹ ಹಿರಿಯ ಅಧಿಕಾರಿಗಳು ಸುಳ್ಳು ದಾಖಲೆ ಸೃಷ್ಟಿಸುತ್ತಾರೆ ಎಂಬುದನ್ನು ತಿಳಿಸುವ ದಾಖಲೆ ಇದು.  ಸ್ಥಳದಲ್ಲಿ ರಸ್ತೆ ಇದ್ದರೂ ಸಹ, ಅವರ ಸ್ಥಳ ಪರಿಶೀಲನಾ ವರದಿಯಲ್ಲಿ ಅದನ್ನು ಉಲ್ಲೇಖಿಸದೆ, ಖಾಲಿ ಸ್ಥಳ ಎಂಬಂತೆ ಸುಳ್ಳು ದಾಖಲೆ ಸೃಷ್ಟಿಸಿದ್ದಾರೆ.  ಭೂಮಾಪಕರು ಕೂಡ ರಸ್ತೆಯ ವಿಚಾರವನ್ನು ಮುಚ್ಚಿಟ್ಟು, ಸುಳ್ಳು ನಕಾಶೆಯನ್ನು ತಯಾರಿಸಿಕೊಟ್ಟಿದ್ದಾರೆ,’ ಎಂದು ಸ್ನೇಹಮಯಿ ಕೃಷ್ಣ ಎಂಬುವರು ಆರೋಪಿಸಿದ್ದಾರೆ.

 

ಸಿದ್ದರಾಮಯ್ಯನವರ ಭಾಮೈದ ಮಲ್ಲಿಕಾರ್ಜುನ ಸ್ವಾಮಿರವರಿಗೆ ಜಮೀನು ಮಾರಾಟ ಮಾಡಿರುವ ದೇವರಾಜು, ಭೂಸ್ವಾಧೀನ ದಿಂದ ಜಮೀನನ್ನು ಕೈಬಿಡಲು  ಮತ್ತು ರಾಜ್ಯಪತ್ರ ಹೊರಡಿಸಲು 25 ಸಾವಿರ ಖರ್ಚು ಮಾಡಲಾಗಿದೆ ಎಂದು ತಿಳಿಸಿದ್ದರು. ಅಲ್ಲದೇ  ಪುಟ್ಟಮ್ಮನವರ ಕುಟುಂಬದವರಿಂದ  25 ಸಾವಿರ ಪಡೆಯಲಾಗಿದೆ ಎಂದೂ ನ್ಯಾಯಾಲಯದ ಡಿಕ್ರಿಯಲ್ಲಿಯೂ ಉಲ್ಲೇಖಿಸಿದ್ದರು ಎಂದು ತಿಳಿದು ಬಂದಿದೆ.

ವಿಶೇಷವೆಂದರೇ  ಭೂ ಸ್ವಾಧಿನದಿಂದ ಜಮೀನನ್ನು ಕೈಬಿಡುವ ಸಂಬಂಧ  ರಾಜ್ಯಪತ್ರ ಹೊರಡಿಸಲು 1998 ರಲ್ಲೇ 25 ಸಾವಿರ ರೂಪಾಯಿ ಶುಲ್ಕವನ್ನು ಪಾವತಿ ಮಾಡಬೇಕಿತ್ತೆ ಎಂಬ ಪ್ರಶ್ನೆಯೂ ಕೇಳಿ ಬಂದಿದೆ.  ಅಲ್ಲದೇ  ಡಿಕ್ರಿಯ ಷೆಡ್ಯೂಲ್‌ನ  ಉತ್ತರ ಭಾಗದಲ್ಲಿ ಮೈಲಾರಯ್ಯನವರಿಗೆ ಸೇರಿದ 464ನೇ ಸಂಖ್ಯೆಯ ಜಮೀನು ಇದೆ ಎಂಬ ಉಲ್ಲೇಖಿಸಿರುವುದನ್ನು ಗಮನಿಸಿದರೇ  ಮೈಲಾರಯ್ಯನವರಿಗೆ ಸೇರಿದ ಜಮೀನನ್ನು ದೇವರಾಜು ಮಾರಾಟ ಮಾಡಿದ್ದಾರೆ ಎಂಬುದಕ್ಕೆಈ ದಾಖಲೆಯೂ ಸಹ ಹೆಚ್ಚಿನ ಪುಷ್ಠಿ ನೀಡಿದಂತಿದೆ.

 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಮೂಡಾ ಹಂಚಿಕೆ ಮಾಡಿರುವ ಬದಲಿ ನಿವೇಶನ ಹಂಚಿಕೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ದಾಖಲೆ, ಪುರಾವೆಗಳು ಮುನ್ನೆಲೆಗೆ ಬಂದಿವೆ.  ಭೂ ಸ್ವಾಧೀನದಿಂದ ಕೈಬಿಟ್ಟಿರುವ ಮೂಲ ಜಮೀನಿಗೆ ಸಂಬಂಧಿಸಿದಂತೆ  ಸ್ನೇಹಮಯಿಕೃಷ್ಣ ಎಂಬುವರು ಸಾಮಾಜಿಕ ಜಾಲತಾಣದಲ್ಲಿ ಮತ್ತಷ್ಟು ದಾಖಲೆಗಳನ್ನು  ಬಹಿರಂಗಪಡಿಸಿದ್ದರು.

 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿನ ವಿವರ  ಮತ್ತು ತಹಶೀಲ್ದಾರ್‍‌ ಅವರು ನೀಡಿರುವ ವರದಿಗಳಲ್ಲೇ ವ್ಯತ್ಯಾಸಗಳು ಕಂಡು ಬಂದಿವೆ. ಈ ಕುರಿತು ವರದಿ ಮತ್ತು ದಾಖಲೆಗಳನ್ನು ಹಂಚಿಕೊಂಡಿರುವ ದೂರುದಾರ ಸ್ನೇಹಮಯಿ ಕೃಷ್ಣ ಅವರು ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಭಾವ ಹೇಗೆ ಕೆಲಸ ಮಾಡಿದೆ ಎಂಬುದನ್ನೂ ಸಾಮಾಜಿಕ ಜಾಲತಾಣದಲ್ಲಿ ವಿವರಿಸಿದ್ದರು.

ಸಿಎಂ ಪತ್ನಿಗೆ ಬದಲಿ ನಿವೇಶನ; ತಹಶೀಲ್ದಾರ್‍‌ ವರದಿಯಲ್ಲಿ ಉಲ್ಲೇಖವಾಗದ ಉದ್ಯಾನ, ರಸ್ತೆ ವಿವರ

ಸರ್ಕಾರ ನೀಡಿದ್ದ   ಮಾಹಿತಿ ಪ್ರಕಾರ 1998ರ ಮೇ 18ರಂದು ಭೂ ಸ್ವಾಧೀನದಿಂದ ಕೈಬಿಡಲಾಗಿದೆ. ಅಧಿಸೂಚನೆಯಿಂದ ರದ್ದುಪಡಿಸುವ ಪೂರ್ವದಲ್ಲಿ ಉದ್ಯಾನ, ರಸ್ತೆ, ನಿವೇಶನಗಳನ್ನು ರಚನೆ ಮಾಡಲಾಗಿತ್ತು.

 

 

2005ರ ಮಾರ್ಚ್‌ 5ರಂದು ತಹಶೀಲ್ದಾರ್‍‌ ಸ್ಥಳ ಪರಿಶೀಲನೆ ನಡೆಸಿದ್ದರು. ಅವರು ನೀಡಿರುವ ವರದಿಯಲ್ಲಿ ರಸ್ತೆ, ಉದ್ಯಾನ, ನಿವೇಶನದ ಉಲ್ಲೇಖ ಇಲ್ಲ.

 

‘ವಾರ್ತಾ ಇಲಾಖೆಯ ಪ್ರಕಾರ ಜಮೀನಿನಲ್ಲಿ ಉದ್ಯಾನ, ರಸ್ತೆ, ನಿವೇಶನಗಳು ಇವೆ. ತಹಶೀಲ್ದಾರ್‍‌ ವರದಿಯಲ್ಲಿ ರಸ್ತೆ, ಉದ್ಯಾನ, ನಿವೇಶನಗಳು ಇಲ್ಲ. ರಸ್ತೆ, ಉದ್ಯಾನ, ನಿವೇಶನಗಳು ಕಳೆದು ಹೋಗಿರುವ ಬಗ್ಗೆ ತನಿಖೆ ಮಾಡಲು ಯಾರನ್ನು ನೇಮಿಸಬೇಕು ಎಂದು ನನ್ನ ವಿರುದ್ಧ ದೂರು ನೀಡಿರುವ ಕಾಂಗ್ರೆಸ್‌ ಮುಖಂಡರು ಉತ್ತರ ನೀಡಬೇಕಲ್ಲವೇ,’ ಎಂದೂ ಪ್ರಶ್ನಿಸಿದ್ದರು.

 

 

ಕರಾರು ಪತ್ರದ ಬಗ್ಗೆಯೂ ಅನುಮಾನ

 

ಇದೇ ಸಾಮಾಜಿಕ ಜಾಲತಾಣದಲ್ಲಿ ಸ್ನೇಹಮಯಿ ಕೃಷ್ಣ ಅವರು ಕರಾರು ಪತ್ರ ಸೇರಿದಂತೆ ಮತ್ತಷ್ಟು ಸಾಕ್ಷ್ಯಾಧಾರಗಳನ್ನು ಒದಗಿಸಿದ್ದಾರೆ. 2005ರ ಜುಲೈ 15 ರ ಜಿಲ್ಲಾಧಿಕಾರಿಗಳ ಆದೇಶದ ಮೊದಲ ಪುಟದ ಕೊನೆಯ ಪ್ಯಾರಾದಲ್ಲಿ ಕರಾರು ಪತ್ರವನ್ನು ಹಾಜರು ಪಡಿಸಿರುತ್ತಾರೆ ಎಂಬ ಉಲ್ಲೇಖವಿತ್ತು.

 

ಆದರೆ ಛಾಪಾ ಕಾಗದವನ್ನು 2005ರ ಜುಲೈ 22ರಂದು ಖರೀದಿ ಮಾಡಿದ್ದಾರೆ. ಅಲ್ಲದೇ ಇದಕ್ಕೆ ಮಲ್ಲಿಕಾರ್ಜುನ ಸ್ವಾಮಿ ಮತ್ತು ಸಾಕ್ಷಿದಾರರು ಸಹಿ ಮಾಡಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.

 

 

ಛಾಪಾ ಕಾಗದ ಖರೀದಿಸುವ ಮತ್ತು ಕರಾರು ಪತ್ರ ತಯಾರಿಸುವ ಏಳು ದಿನಗಳ ಮೊದಲೇ ಮಾಡಿರುವ ಆದೇಶದಲ್ಲಿ ಕರಾರು ಪತ್ರ ಹಾಜರುಪಡಿಸಿರುತ್ತಾರೆ ಎಂದು ಉಲ್ಲೇಖಿಸಲು ಹೇಗೆ ಸಾಧ್ಯ ಎಂದು ಸ್ನೇಹಮಯಿ ಕೃಷ್ಣ ಅವರು ಪ್ರಶ್ನಿಸಿದ್ದರು.

 

 

ಸಿದ್ದರಾಮಯ್ಯ ಅವರ ಭಾವಮೈದುನ ಮಲ್ಲಿಕಾರ್ಜುನ ಸ್ವಾಮಿ ಅವರಿಗೆ ಕ್ರಯಪತ್ರ ನೋಂದಣಿ ಮಾಡಿಕೊಟ್ಟಿರುವ ಜೆ ದೇವರಾಜು ಅವರಿಗೆ ಸಂಬಂಧಿಸಿದ ವಂಶವೃಕ್ಷವನ್ನೂ ಸಾಕ್ಷ್ಯದ ರೂಪದಲ್ಲಿ ಸಾಮಾಜಿ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

 

‘ಸಿದ್ದರಾಮಯ್ಯನವರ ಬಾಮೈದ ಮಲ್ಲಿಕಾರ್ಜುನ ಸ್ವಾಮಿರವರಿಗೆ ಕ್ರಯಪತ್ರ. ನೊಂದಣಿ ಮಾಡಿಕೊಟ್ಟಿರುವ ಜೆ.ದೇವರಾಜುರವರಿಗೆ ಸಂಬಂಧಿಸಿದ ವಂಶವೃಕ್ಷ ಗಮನಿಸಿ. ನಿಂಗ @ ಜವರ ಸತ್ತ ಇಪ್ಪತೈದು ವರ್ಷಗಳ ನಂತರ, ಅವರ ಹೆಂಡತಿ ನಿಧನರಾಗಿದ್ದಾರೆ ಎಂಬಂತೆ ನಮೂದಿಸಿರುವುದು ತಿಳಿದುಬರುತ್ತದೆ.

 

ನಿಂಗನ ಸಂಬಂಧಿಕರು ನಿಂಗನ ಫೋಟೊ ಎಂದು ನೀಡಿರುವ ಫೋಟೊ ಗಮನಿಸಿ. ಹೆಂಡತಿಯ ಶವದ ಪಕ್ಕ ನಿಂಗ @ ಜವರ ನಿಂತಿರುವುದು ಕಂಡು ಬರುತ್ತದೆ.

 

‘ಇಂತಹ ಅನುಮಾನಸ್ಪದ ವಿಚಾರಗಳು ತಿಳಿದು ಬಂದಾಗ, ಯಾವುದು ಸತ್ಯ, ಯಾವುದು ಸುಳ್ಳು ಎಂದು ತಿಳಿದುಕೊಳ್ಳಲು ತನಿಖೆ ನಡೆಸುವಂತೆ ದೂರು ನೀಡುವುದು,  ಈ ಬಗ್ಗೆ ಮಾಧ್ಯಮಗಳ ಮುಂದೆ ಒತ್ತಾಯ ಮಾಡುವುದು, ಯಾವ ನಿಯಮದ ಪ್ರಕಾರ ಅಪರಾಧ ಕೃತ್ಯ ಎಂಬುದನ್ನು ತಿಳಿದವರು, ತಿಳಿಸುವರೇ,’ ಎಂದು ಪ್ರಶ್ನಿಸಿದ್ದನ್ನು ಸ್ಮರಿಸಬಹುದು.

Hot this week

ಕಲ್ಲು ಸಕ್ಕರೆ, ಖರ್ಜೂರ ಪ್ರಸಾದ; ದುಪ್ಪಟ್ಟು ದರದಲ್ಲಿ ಮಾರಾಟ, ಭಕ್ತರಿಗೆ ಅನಗತ್ಯ ಆರ್ಥಿಕ ಹೊರೆ, ನ್ಯಾಯಾಲಯ ಆದೇಶವೂ ಉಲ್ಲಂಘನೆ

ಬೆಂಗಳೂರು; ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯ ಪ್ರಾಧಿಕಾರವು ನಿಗದಿತ ದರಕ್ಕಿಂತಲೂ ಹೆಚ್ಚುವರಿ ಅಂದರೇ...

ನ್ಯಾಕ್‌, ಎನ್‌ಐಆರ್‍‌ಎಫ್‌ ಮಾನದಂಡ; ಕರ್ನಾಟಕದ ಉನ್ನತ ಶಿಕ್ಷಣ ಗುಣಮಟ್ಟ ಆತಂಕದ ಪ್ರವೃತ್ತಿ, ಆಯೋಗ ಕಳವಳ

ಬೆಂಗಳೂರು; ನ್ಯಾಕ್‌ ಮತ್ತು ಎನ್‌ಐಆರ್‍‌ಎಫ್‌ ಪ್ರಕಾರ ಕರ್ನಾಟಕದ ಉನ್ನತ ಶಿಕ್ಷಣ ಗುಣಮಟ್ಟವು...

ಎಬಿ-ಎಆರ್‍‌ಕೆ ಯೋಜನೆಯಲ್ಲಿ ಅಕ್ರಮ; ಜಿಮ್ಸ್‌ ಸಿಬ್ಬಂದಿ, ಖಾಸಗಿ ಆಸ್ಪತ್ರೆ ಶಾಮೀಲು, ರಾಜೀನಾಮೆ ನೀಡಿದ್ದ ವೈದ್ಯರ ಹೆಸರಿನಲ್ಲೂ ನಕಲಿ ಓಆರ್‍‌ಎಸ್‌ ಸೃಜನೆ; ತನಿಖಾ ವರದಿ

ಬೆಂಗಳೂರು; ಆಯುಷ್ಮಾನ್‌ ಭಾರತ್ ಮತ್ತು  ಎಆರ್‍‌ಕೆ ಯೋಜನೆಯಡಿಯಲ್ಲಿ  ಕಲ್ಬುರ್ಗಿ ಜಿಲ್ಲಾ  ಆಸ್ಪತ್ರೆಯಿಂದ...
Please Scan to make Your Contribution

Topics

ಕಲ್ಲು ಸಕ್ಕರೆ, ಖರ್ಜೂರ ಪ್ರಸಾದ; ದುಪ್ಪಟ್ಟು ದರದಲ್ಲಿ ಮಾರಾಟ, ಭಕ್ತರಿಗೆ ಅನಗತ್ಯ ಆರ್ಥಿಕ ಹೊರೆ, ನ್ಯಾಯಾಲಯ ಆದೇಶವೂ ಉಲ್ಲಂಘನೆ

ಬೆಂಗಳೂರು; ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯ ಪ್ರಾಧಿಕಾರವು ನಿಗದಿತ ದರಕ್ಕಿಂತಲೂ ಹೆಚ್ಚುವರಿ ಅಂದರೇ...

ನ್ಯಾಕ್‌, ಎನ್‌ಐಆರ್‍‌ಎಫ್‌ ಮಾನದಂಡ; ಕರ್ನಾಟಕದ ಉನ್ನತ ಶಿಕ್ಷಣ ಗುಣಮಟ್ಟ ಆತಂಕದ ಪ್ರವೃತ್ತಿ, ಆಯೋಗ ಕಳವಳ

ಬೆಂಗಳೂರು; ನ್ಯಾಕ್‌ ಮತ್ತು ಎನ್‌ಐಆರ್‍‌ಎಫ್‌ ಪ್ರಕಾರ ಕರ್ನಾಟಕದ ಉನ್ನತ ಶಿಕ್ಷಣ ಗುಣಮಟ್ಟವು...

ಜಿಎಸ್‌ಡಿಪಿ 23,34,000 ಕೋಟಿ, ಉನ್ನತ ಶಿಕ್ಷಣಕ್ಕಾಗಿ ಕೇವಲ 5,646 ಕೋಟಿ ರು ಖರ್ಚು; ಇತರೆ ರಾಜ್ಯಗಳಿಗಿಂತ ಕೆಳಗಿಳಿದ ಕರ್ನಾಟಕ

ಬೆಂಗಳೂರು; ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿ ಆಗಿದ್ದ ಮೊದಲನೇ ಆರ್ಥಿಕ...

Related Articles

Popular Categories

error: Content is protected !!