ಬೆಂಗಳೂರು; ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ನೇಮಕವಾಗಿದ್ದ ಆರೋಗ್ಯ ನಿರೀಕ್ಷಕರು, ಹಿರಿಯ ಆರೋಗ್ಯ ನಿರೀಕ್ಷಕರು, ಆರೋಗ್ಯ ನಿರೀಕ್ಷಣಾಧಿಕಾರಿಗಳು ಸೇರಿದಂತೆ ಒಟ್ಟಾರೆ 166 ಮಂದಿ ಅಧಿಕಾರಿ ನೌಕರರು ಒಂದೇ ಸ್ಥಳದಲ್ಲಿ ಮತ್ತು ನಿಯೋಜನೆ ಮೇಲೆ 5 ವರ್ಷಕ್ಕೂ ಹೆಚ್ಚು ವರ್ಷಗಳಿಂದ ನಿಯೋಜನೆಗೊಂಡಿರುವ ಇಲಾಖೆಯಲ್ಲಿಯೇ ಬೀಡು ಬಿಟ್ಟಿದ್ದಾರೆ.
ಹೀಗೆ 5 ವರ್ಷಗಳಿಗೂ ಹೆಚ್ಚು ವರ್ಷಗಳಿಂದಲೂ ಒಂದೇ ಸ್ಥಳದಲ್ಲಿ ಬೀಡು ಬಿಟ್ಟಿರುವ ಈ ಆರೋಗ್ಯ ನಿರೀಕ್ಷಕರು, ಆರೋಗ್ಯ ನಿರೀಕ್ಷಣಾಧಿಕಾರಿಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆ ಇಲಾಖೆಗೆ ಮರಳಿ ಬಂದಿಲ್ಲ. ನಿಯೋಜನಾ ಅವಧಿಯು ಮುಕ್ತಾಯಗೊಂಡು ಹಲವು ವರ್ಷಗಳಾದರೂ ಈ ಅಧಿಕಾರಿ ನೌಕರರನ್ನು ಇಲಾಖೆಗೆ ವಾಪಸ್ ಕರೆಸಿಕೊಳ್ಳುವಲ್ಲಿಯೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಗಳು ವಿಫಲರಾಗಿದ್ದಾರೆ. ಈ ಅಧಿಕಾರಿ ನೌಕರರನ್ನು ಮಾತೃ ಇಲಾಖೆಗೆ ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಿ ವರ್ಷಗಳು ಉರುಳಿದರೂ ಸರ್ಕಾರದ ಆದೇಶವು ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ.
ಹೀಗಾಗಿ ಪ್ರಸ್ತುತ ಆರೋಗ್ಯ ಇಲಾಖೆಯಲ್ಲಿ ಆರೋಗ್ಯ ನಿರೀಕ್ಷಕರ ತೀವ್ರ ಕೊರತೆ ಉಂಟಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನ, ರೋಗ ನಿಯಂತ್ರಣ, ಆರೋಗ್ಯ ತಪಾಸಣೆ ಹಾಗೂ ಸಾರ್ವಜನಿಕ ಆರೋಗ್ಯ ಸೇವೆಗಳ ನಿರ್ವಹಣೆಗೆ ಗಂಭೀರ ತೊಂದರೆಯಾಗುತ್ತಿದೆ. ಇದು ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆಯಾಗುವುದರ ಜೊತೆಗೆ ಇಲಾಖೆಯ ಆಡಳಿತಾತ್ಮಕ ಕಾರ್ಯಕ್ಷಮತೆಯ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂಬ ಆರೋಪವು ಕೇಳಿ ಬಂದಿದೆ.
ಇದಕ್ಕೆ ಸಂಬಂಧಿಸಿದಂತೆ ರಾಜಶೇಖರ ಎಂಬುವರು ಇಲಾಖೆಗೆ ಹಲವು ಬಾರಿ ದೂರು ಸಲ್ಲಿಸಿದ್ದರು. ಈ ದೂರನ್ನಾಧರಿಸಿ ಇಲಾಖೆಯು ಸಹ ಕಠಿಣ ಕ್ರಮ ಕೈಗೊಂಡಿಲ್ಲ. ಬದಲಿಗೆ ಇಲಾಖೆ ಆಯುಕ್ತರಿಗೆ ಪತ್ರ, ನೆನಪೋಲೆ ಬರೆದು ಕೈ ತೊಳೆದುಕೊಳ್ಳುತ್ತಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ಅವರು 2026ರ ಜುಲೈ 4ರಂದು ಇಲಾಖೆ ಆಯುಕ್ತ ಗುರುದತ್ತ ಹೆಗಡೆ ಅವರಿಗೆ ಪತ್ರವನ್ನು ಬರೆದಿದ್ದಾರೆ. ಈ ಪತ್ರವು ಸಹ ಇಲಾಖೆಯ ಆಯುಕ್ತರ ಕಚೇರಿಯಲ್ಲಿ ಧೂಳಿಡಿದು ಕೂತಿದೆ.
ನಿಯೋಜನೆ ಮೇಲೆ ತೆರಳಿರುವ ಈ ಆರೋಗ್ಯ ನಿರೀಕ್ಷಣಾಧಿಕಾರಿ, ಆರೋಗ್ಯ ಪರಿವೀಕ್ಷಕರು ಬಿಬಿಎಂಪಿ ಸೇರಿದಂತೆ ರಾಜ್ಯದ ನಗರ ಸಭೆ, ಪುರಸಭೆ, ಮಹಾನಗರಪಾಲಿಕೆಗಳ ವ್ಯಾಪ್ತಿಯಲ್ಲಿ ಬೀಡುಬಿಟ್ಟಿದ್ದಾರೆ. ನಿಯೋಜನೆಗೆಗೊಂಡಿರುವ ಅಧಿಕಾರಿ, ನೌಕರರ ಕುರಿತು ಸಚಿವ ಯು ಟಿ ಖಾದರ್ ಅವರು ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.
5 ವರ್ಷಕ್ಕೂ ಮೇಲ್ಪಟ್ಟು ನಿಯೋಜನೆ ಮೇಲೆ ಕಾರ್ಯನಿರ್ವಹಿಸುತ್ತಿರುವವರನ್ನು ಮಾತೃ ಇಲಾಖೆಗೆ ಮರಳಿಸಬೇಕು ಎಂದು 2025ರ ಮೇ 7ರಂದೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಅವರು ಇಲಾಖೆಯ ಆಯುಕ್ತರಿಗೆ ಸೂಚಿಸಿದ್ದರು. ಅಲ್ಲಧೇ ಈ ನೌಕರರ ನಿಯೋಜನೆಯನ್ನು ತಕ್ಷಣದಿಂದಲೇ ರದ್ದುಗೊಳಿಸಬೇಕು ಎಂದು ವರ್ಷದ ಹಿಂದೆಯೇ ನಿರ್ದೇಶನ ನೀಡಿದ್ದರು. ಆದರೂ ಇಲಾಖೆ ಆಯುಕ್ತರು ಕಟ್ಟುನಿಟ್ಟಿನ ಕ್ರಮ ವಹಿಸಿಲ್ಲ.
ಜುಲೈ 4ರಂದು ಬರೆದಿದ್ದ ಪತ್ರದಲ್ಲೇನಿದೆ?
ಕಳೆದ 5 ವರ್ಷಗಳಿಗೂ ಮೇಲ್ಪಟ್ಟು ಬೃಹತ್ ಬೆಂಗಳೂರು ಮಹಾನಗರಪಾಲಿಕೆ, ಪೌರಾಡಳಿತ, ಆಹಾರ ಸುರಕ್ಷತೆ, ಔಷಧ ಆಡಳಿತ ಇಲಾಖೆ, ಆಯುಷ್ ಇಲಾಖೆ, ಕೆಎಸ್‌ಎಂಎಸ್‌ಸಿಎಲ್ ಮತ್ತು ಇತರೆ ಇಲಾಖೆಗಳಲ್ಲಿ ನಿಯೋಜನೆ ಮೇಲೆ ಮುಂದುವರೆದಿದ್ದಾರೆ. ಇವರ ನಿಯೋಜನೆಯನ್ನು ತಕ್ಷಣವೇ ರದ್ದುಗೊಳಿಸಬೇಕು. ಅಲ್ಲದೇ ಇತರೆ ಇಲಾಖೆಗಳಲ್ಲಿ ನಿಯೋಜನೆ ಮೇಲೆ 5 ವರ್ಷಗಳ ಅವಧಿ ಮೀರಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ನೌಕರರ ನಿಯೋಜನೆಯನ್ನೂ ರದ್ದುಗೊಳಿಸಬೇಕು. ಅಲ್ಲದೇ ಇವರೆಲ್ಲರೂ ಇಲಾಖೆಯ ಕರ್ತವ್ಯಕ್ಕೆ ವರದಿ ಮಾಡಿಕೊಂಡ ಪಟ್ಟಿ ಒದಗಿಸಬೇಕು ಎಂದು ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಸೂಚಿಸಿದ್ದರು.

ಇದಕ್ಕೆ ಸಂಬಂಧಿಸಿದ ಕಡತವನ್ನು ಸಹ ಇಲಾಖೆಯ ಆಯುಕ್ತರಿಗೆ 2026ರ ಜನವರಿ 19ರಂದೇ ಕಳಿಸಿತ್ತು. ಈ ಕಡತ ತಲುಪಿ 6 ತಿಂಗಳಾದರೂ ಸಹ ಇಲಾಖೆಯ ಆಯುಕ್ತರು ಒಂದೇ ಒಂದು ಕ್ರಮ ವಹಿಸಿಲ್ಲ. ಹೀಗಾಗಿ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿಯು 2026ರ ಜುಲೈ 4ರಂದು ಮತ್ತೊಂದು ಪತ್ರ ಬರೆದಿದ್ದಾರೆ.
ಈ ಸಂಬಂಧ ರಾಜಶೇಖರ್ ಎಂಬುವರು ಸರ್ಕಾರಕ್ಕೆ ದೂರು ನೀಡಿದ್ದಾರೆ. ಸರ್ಕಾರದ ವಿಶೇಷ ಆದೇಶ, ಸೂಚನೆಯಿಲ್ಲದೇಯೇ ನಿಯಮಬಾಹಿರವಾಗಿ ನಿಯೋಜನೆಗೊಂಡು ಮುಂದುವರೆದಿದ್ದಾರೆ. ಇವರ ವಿರುದ್ಧ ಕರ್ನಾಟಕ ನಾಗರೀಕ ಸೇವಾ (ಸಿಸಿಎ) ನಿಯಮಾವಳಿಗಳಡಿಯಲ್ಲಿ ಶಿಸ್ತು ಕ್ರಮ ಜರುಗಿಸಬೇಕು ಎಂದು ಕೋರಿದ್ದರು. ಹೀಗಾಗಿ 7 ದಿನದ ಒಳಗಾಗಿ ಅವಧಿ ಮೀರಿ ನಿಯೋಜಿತಗೊಂಡು ಕಾರ್ಯನಿರ್ವಹಿಸುತ್ತಿರುವ ನೌಕರರ ಮೇಲೆ ಶಿಸ್ತು ಕ್ರಮ ಜರುಗಿಸಿ ವರದಿ ಸಲ್ಲಿಸಬೇಕು ಎಂದು ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿಯು ಸೂಚಿಸಿರುವುದು ಪತ್ರದಿಂದ ತಿಳಿದು ಬಂದಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP), ಪೌರಾಡಳಿತ ನಿರ್ದೇಶನಾಲಯ ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSA) ಇಲಾಖೆಗಳಿಗೆ ನಿಯೋಜನೆ (Deputation) ವ್ಯಾಪ್ತಿಯ ವಿವಿಧ ವಲಯಗಳಿಗೆ ಹಾಗೂ ಇತರ ಇಲಾಖೆಗಳಿಗೆ ನಿಯೋಜನೆ (OOD) ಮೇರೆಗೆ ಕಳಿಸಲಾಗಿತ್ತು. ಈ ಪಟ್ಟಿಯಲ್ಲಿ ಒಟ್ಟು 101 ಆರೋಗ್ಯ ನಿರೀಕ್ಷಕರು ಹಾಗೂ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಿದ್ದಾರೆ. ಇವರ ಗರಿಷ್ಠ ನಿಯೋಜನಾ ಅವಧಿಯು ಈಗಾಗಲೇ ಮುಕ್ತಾಯಗೊಂಡಿರುವುದು ಗೊತ್ತಾಗಿದೆ.
‘ಸರ್ಕಾರಿ ದಾಖಲೆಗಳು ಹಾಗೂ ಆದೇಶಗಳ ಆಧಾರದ ಮೇಲೆ, ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ (KCSR) ನಿಯಮ 50(3) ರಲ್ಲಿ ನಿಗದಿಪಡಿಸಿರುವ ಗರಿಷ್ಠ ನಿಯೋಜನಾ ಅವಧಿ ಪೂರ್ಣಗೊಂಡಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಇಲಾಖೆಯ ಯಾವುದೇ ಅಧಿಕೃತ ಮುಂದುವರಿಕೆ ಆದೇಶವಿಲ್ಲದೆ ಅದೇ ಸ್ಥಳದಲ್ಲಿ ಮುಂದುವರಿದಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯವು ದಿನಾಂಕ 18-10-2025 ರಂದು ಇವರನ್ನು ಮಾತೃ ಇಲಾಖೆಗೆ ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಿದ್ದರೂ, ಆ ಆದೇಶವು ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ,’ ಎಂದು ರಾಜಶೇಖರ್ ಅವರು ದೂರಿನಲ್ಲಿ ಸರ್ಕಾರದ ಗಮನಸೆಳೆದಿರುವುದು ತಿಳಿದು ಬಂದಿದೆ.
ಪ್ರಸ್ತುತ ಆರೋಗ್ಯ ಇಲಾಖೆಯಲ್ಲಿ ಆರೋಗ್ಯ ನಿರೀಕ್ಷಕರ ತೀವ್ರ ಕೊರತೆ ಉಂಟಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನವಾಗುತ್ತಿಲ್ಲ. ರೋಗ ನಿಯಂತ್ರಣ, ಆರೋಗ್ಯ ತಪಾಸಣೆ ಹಾಗೂ ಸಾರ್ವಜನಿಕ ಆರೋಗ್ಯ ಸೇವೆಗಳ ನಿರ್ವಹಣೆಗೆ ಗಂಭೀರ ತೊಂದರೆಯಾಗುತ್ತಿದೆ. ಇದು ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆಯಾಗುವುದರ ಜೊತೆಗೆ ಇಲಾಖೆಯ ಆಡಳಿತಾತ್ಮಕ ಕಾರ್ಯಕ್ಷಮತೆಯ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ದೂರಿನಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಓಓಡಿ ಮೇಲಿರುವ ಅಧಿಕಾರಿಗಳ ಪಟ್ಟಿ
ಬಿಬಿಎಂಪಿ ವ್ಯಾಪ್ತಿಯಲ್ಲಿನ ಆರ್ ಆರ್ ನಗರ, ಬಿಟಿಎಂ ಲೇಔಟ್, ಕೆ ಆರ್ ಪುರಂ, ದಾಸರಹಳ್ಳಿ, ಹೆಬ್ಬಾಳ, ಯಶವಂತಪುರ, ಮಹಾಲಕ್ಷ್ಮಿಪುರಂ, ವಿಜಯನಗರದಲ್ಲಿ ಚಂದ್ರಶೇಖರ್, ಎಲ್ ಶಿವಮೂರ್ತಿ, ಡಿ ಸುಬ್ರಮಣ್ಯ, ರವಿಕುಮಾರ್, ಡಿ ಎಸ್ ನಾಗರಾಜ್, ಎ ಶ್ರೀನಿವಾಸಲು, ಕೆ ವಿ ಶ್ರೀನಿಧಿ ದೀರ್ಘ ಅವಧಿಯಿಂದಲೂ ಕಾರ್ಯನಿರ್ವಹಿಸುತ್ತಿರುವುದು ತಿಳಿದು ಬಂದಿದೆ.

ಅದೇ ರೀತಿ ಬಿಬಿಎಂಪಿ ವ್ಯಾಪ್ತಿಯ ಮಹದೇವಪುರ, ಶಾಂತಿನಗರ, ಶಿವಾಜಿನಗರ, ಸರ್ವಜ್ಞ ನಗರ, ಬೊಮ್ಮನಹಳ್ಳಿ, ಜಯನಗರ, ಬಸವನಗುಡಿ, ಚಾಮರಾಜಪೇಟೆ, ಯಲಹಂಕ, ಮಲ್ಲೇಶ್ವರಂ, ಚಿಕ್ಕಪೇಟೆ, ರಾಜಾಜಿ ನಗರದಲ್ಲಿ ಮಂಜುನಾಥ್, ಆನಂದ್ ಎ ಜಿ, ಅನಂತಕುಮಾರ್ ಆರ್, ಸೋಮಶೇಖರ್, ರಾಜೇಶ್ ಎನ್, ಶ್ರೀನಿವಾಸ ಜಿ, ಮಹಾಲಿಂಗಯ್ಯ ಬಿ ಆರ್, ರಮೇಶ್ ಕುಮಾರ್ ಆರ್ ಎಸ್ ಮೂರ್ತಿ, ಅಂಬರೀಷ್ ಗೌಡ ಎ, ಕಿರಣ್ ಜಿ, ಅಮರ್‍ನಾಥ್ ಎಂ ಎನ್ ಕಾರ್ಯನಿರ್ವಹಿಸುತ್ತಿದ್ದಾರೆ.


ಬೆಂಗಳೂರು ನಗರ ಜಿಲ್ಲೆ, ದಕ್ಷಿಣ ಜಿಲ್ಲೆ, ದಾವಣಗೆರೆ, ಚಾಮರಾಜನಗರ, ಚಿಕ್ಕಮಗಳೂರು, ಗದಗ್, ಹುಬ್ಬಳ್ಳಿ ಧಾರವಾಡ, ಹಾವೇರಿ, ಹಾಸನ, ಮಂಡ್ಯ, ಮೈಸೂರು ಮಹಾನಗರಪಾಲಿಕೆ, ಶಿವಮೊಗ್ಗ, ತುಮಕೂರು, ವಿಜಯಪುರ, ಯಾದಗಿರಿ, ಬಾಗಲಕೋಟೆ, ಬೀಳಗಿ, ಹುನುಗಂದ ಅಥಣಿ, ಚಿಕ್ಕೋಡಿ, ಬೆಳಗಾವಿ ಮಹಾನಗರಪಾಲಿಕೆ, ಬೀದರ್, ಔರಾದ್, ಬಸವಕಲ್ಯಾಣ, ಹೊನ್ನಾಳಿ, ಚನ್ನಗಿರಿ, ರೋಣ, ನಗರುಂದ, ಹೊಳೆ ನರಸೀಪುರ, ಬ್ಯಾಡಗಿ, ಗಂಗಾವತಿ, ಕೊಪ್ಪಳ, ಯಲಬುರ್ಗಾ, ಕಲ್ಬುರ್ಗಿ ಮಹಾನಗರಪಾಲಿಕೆ, ಚಿತ್ತಾಪುರ, ಅಫಜಲ್ಪುರ, ಚಿಂಚೋಳಿ, ಜೇವರ್ಗಿ, ಸೇಡಂ, ಮಡಿಕೇರಿ, ಮಳವಳ್ಳಿ, ಪಾಂಡವಪುರ, ಕೆ ಆರ್ ಪೇಟೆ, ಎಸ್ ಆರ್ ಪಟ್ಟಣ, ಹುಣಸೂರು, ಪಿರಿಯಾಪಟ್ಟಣ, ನಂಜನಗೂಡು, ಕೆ ಅರ್ ನಗರ, ದೇವದುರ್ಗ, ಲಿಂಗಸೂಗೂರು, ಮಾನ್ವಿ, ಸಿಂಧಗಿ, ರಾಯಚೂರು, ಬಸವನ ಬಾಗೇವಾಡಿ, ಸುರಪುರ, ಶಹಾಪುರ, ಇಂಡಿ ತಾಲೂಕಿನಲ್ಲಿ ದೀರ್ಘ ಅವಧಿಯಿಂದಲೂ ಕಾರ್ಯನಿರ್ವಹಿಸುತ್ತಿರುವುದು ಗೊತ್ತಾಗಿದೆ.
ಭಾರತದ ಸಂವಿಧಾನದ ವಿಧಿ 14 ರ ಅನ್ವಯ ಸಮಾನತೆ ಹಾಗೂ ತಾರತಮ್ಯರಹಿತ ಆಡಳಿತವನ್ನು ಖಚಿತಪಡಿಸಬೇಕು. ಭಾರತದ ಸಂವಿಧಾನದ ವಿಧಿ 16 ರ ಅನ್ವಯ ಸರ್ಕಾರಿ ಸೇವೆಯಲ್ಲಿ ಸಮಾನ ಅವಕಾಶ ಮತ್ತು ನಿಯಮಬದ್ಧ ಆಡಳಿತವನ್ನು ಕಾಯ್ದುಕೊಳ್ಳಬೇಕು. ಭಾರತದ ಸಂವಿಧಾನದ ವಿಧಿ 21 ರ ಅನ್ವಯ ಸಾರ್ವಜನಿಕ ಆರೋಗ್ಯ ಸೇವೆಗಳ ನಿರಂತರ ಹಾಗೂ ಪರಿಣಾಮಕಾರಿ ಲಭ್ಯತೆಯನ್ನು ಖಚಿತಪಡಿಸಬೇಕು. ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ KCSR Rule 50(3) ಅನ್ವಯ ನಿಯೋಜನೆ (OOD) ಅವಧಿ ಮೀರಿರುವ ಅಧಿಕಾರಿಗಳನ್ನು ತಕ್ಷಣ ಮಾತೃ ಇಲಾಖೆಗೆ ಹಿಂದಿರುಗಿಸಬೇಕು ಎಂದು ಕೋರಿರುವುದು ತಿಳಿದು ಬಂದಿದೆ.
ಸರ್ಕಾರದ ಆದೇಶ (ಸಂಖ್ಯೆ ಆಕುಕ 34 MSN 2025, ದಿನಾಂಕ 07-05-2025 )ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಆಯುಕ್ತಾಲಯದ ಪತ್ರ (ಸಂಖ್ಯೆ ಕಿಟಸ(1)145/2019-20, ದಿನಾಂಕ 18-10-2025 ರಲ್ಲಿನ) ಮತ್ತು ನಿರ್ದೇಶನವನ್ನು ತಕ್ಷಣ ಅನುಷ್ಠಾನಗೊಳಿಸಬೇಕು. ಸರ್ಕಾರದ ಪತ್ರ (ಉಪ ಕಾರ್ಯದರ್ಶಿ-1 ರವರ ಪತ್ರ ಸಂಖ್ಯೆ ಆಕುಕ 177 ಹೆಚ್‌ಎಸ್‌ಎಂ 2026, ದಿನಾಂಕ 04-07-2026 ರಲ್ಲಿನ) ದಲ್ಲಿನ ನಿರ್ದೇಶನಗಳನ್ನು ವಿಳಂಬವಿಲ್ಲದೆ ಪಾಲಿಸಲು ನಿರ್ದೇಶನ ನೀಡಬೇಕು ಎಂದು ಕೋರಿರುವುದು ಗೊತ್ತಾಗಿದೆ.
ನಿಯಮಬಾಹಿರವಾಗಿ ನಿಯೋಜನೆಯಲ್ಲಿ ಮುಂದುವರಿದಿರುವ ಎಲ್ಲಾ 101 ಅಧಿಕಾರಿಗಳ ಓಓಡಿ ಯನ್ನು ತಕ್ಷಣದಿಂದಲೇ ರದ್ದುಗೊಳಿಸಬೇಕು. ಮೂರು (ದಿನಗಳೊಳಗೆ ಮಾತೃ ಇಲಾಖೆಗೆ ಕಡ್ಡಾಯವಾಗಿ ವರದಿ ಮಾಡಿಕೊಳ್ಳುವಂತೆ ಆದೇಶಿಸಬೇಕು. ಸರ್ಕಾರದ ಆದೇಶಗಳು ಹಾಗೂ ಇಲಾಖೆಯ ನಿರ್ದೇಶನಗಳನ್ನು ಪಾಲಿಸದ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕರ್ನಾಟಕ ನಾಗರಿಕ ಸೇವೆಗಳ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳ [KCS (CCA) Rules] ಅನ್ವಯ ಸೂಕ್ತ ಶಿಸ್ತು ಕ್ರಮ ಜರುಗಿಸಬೇಕು ಎಂದು ದೂರುದಾರ ಕೋರಿರುವುದು ಗೊತ್ತಾಗಿದೆ.
ಸಂಬಂಧಪಟ್ಟ ಬಿಬಿಎಂಪಿ ವಲಯ ಆಯುಕ್ತರು ಹಾಗೂ ಇತರ ಇಲಾಖೆ ಮುಖ್ಯಸ್ಥರಿಗೆ ನಿಯಮಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳನ್ನು ತಕ್ಷಣ ಕರ್ತವ್ಯದಿಂದ ಬಿಡುಗಡೆ (Relieve) ಮಾಡಿ ಮಾತೃ ಇಲಾಖೆಗೆ ಕಳುಹಿಸುವಂತೆ ನಿರ್ದೇಶನ ನೀಡಬೇಕು. ಸರ್ಕಾರದ ಆದೇಶಗಳನ್ನು ಉಲ್ಲಂಘಿಸಲು ಕಾರಣವಾದ ಆಡಳಿತಾತ್ಮಕ ಲೋಪ ಅಥವಾ ಹೊಣೆಗಾರಿಕೆ ಇದ್ದಲ್ಲಿ ಇಲಾಖಾ ಮಟ್ಟದಲ್ಲಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಹಾಗೂ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿರುವುದು ತಿಳಿದು ಬಂದಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಪೌರಾಡಳಿತ ಇಲಾಖೆಯ ಅಧೀನದ ವಿವಿಧ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳಿಗೆ ನಿಯೋಜನೆ (Deputation) ವ್ಯಾಪ್ತಿಯ ವಿವಿಧ ವಲಯಗಳಿಗೆ ಹಾಗೂ ಇತರ ಇಲಾಖೆಗಳಿಗೆ ನಿಯೋಜನೆ (OOD) ಮೇರೆಗೆ ಕಳುಹಿಸಲಾದ ಒಟ್ಟು 11 ಆರೋಗ್ಯ ನಿರೀಕ್ಷಕರು ಹಾಗೂ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳ ನಿಯೋಜನಾ ಅವಧಿಯು ಈಗಾಗಲೇ ಮುಕ್ತಾಯಗೊಂಡಿರುವುದು ಗೊತ್ತಾಗಿದೆ.
11 ಮಂದಿ ಆರೋಗ್ಯ ನಿರೀಕ್ಷಕರ ಪಟ್ಟಿ
ಮುರುಳೀಧರ್, ಕೆ ಮುರುಳಿ, ದೀಪಾ ಎಲ್, ಎಂ ನಾಗರಾಜು, ರಾಜಪ್ಪ ಡಿ ಪಿ, ಅಜೇಯ ಭಂಡಾರಕರ, ಪ್ರಸಾದ್ ಎಸ್ ಎಂ, ರಾಹಯುಲ್ ನಾಗರಾಜ್ ಸಿ, ಎಸ್ ಕೆ ವೆಂಕಟೇಶ್, ಲೋಹಿತ್ ಕೆ ಎಂ, ಎ ಜೆ ಪ್ರಸನ್ನಕುಮಾರ್ ಅವರು ಕ್ರಮವಾಗಿ ಚಿಕ್ಕಬಳ್ಳಾಪುರ ನಗರಸಭೆ, ರಾಬರ್ಟ್ ಸನ್ ಪೇಟೆ, ಕೋಲಾರ, ಚಿತ್ರದುರ್ಗ, ಚನ್ನಪಟ್ಟಣ, ಜಾಲಿ, ಹಾಸನ, ಚಿಕ್ಕಮಗಳೂರು, ಬೇಲೂರು ಅರಸೀಕೆರೆ ನಗರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯ ವಿವಿಧ ವಲಯಗಳಿಗೆ ಹಾಗೂ ಇತರ ಇಲಾಖೆಗಳಿಗೆ ನಿಯೋಜನೆ (OOD) ಮೇರೆಗೆ ಒಟ್ಟು 54 ಆರೋಗ್ಯ ನಿರೀಕ್ಷಕರು ಹಾಗೂ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳನ್ನು ಕಳಿಸಲಾಗಿತ್ತು. ಈ ನಿಯೋಜನಾ ಅವಧಿಯು ಈಗಾಗಲೇ ಮುಕ್ತಾಯಗೊಂಡಿದೆ.

54 ಮಂದಿ ಆರೋಗ್ಯ ನಿರೀಕ್ಷಕರ ಪಟ್ಟಿ
ಬಿಬಿಎಂಪಿ ವ್ಯಾಪ್ತಿಯಲ್ಲಿನ 5 ವಲಯಗಳಲ್ಲಿ 2007, 2016, 2019ರಿಂದಲೂ ಒಟ್ಟಾರೆ 54 ಮಂದಿ ಆರೋಗ್ಯ ನಿರೀಕ್ಷಕರು ಮತ್ತು ಹಿರಿಯ ಆರೋಗ್ಯ ನಿರೀಕ್ಷಕರ ಹುದ್ದೆಯಲ್ಲಿ ನಿಯೋಜನೆ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ.

ವಿಜಯ್, ರಮೇಶ್, ಮುತ್ತೇಗೌಡ, ರಘುನಂದನ್, ಚಂದ್ರಶೇಖರ್ ಎಸ್ ಆರ್, ನಾಗರಾಜಯ್ಯ, ವಿನಯ್ ಡಿ, ಲಕ್ಷ್ಮಿನಾರಾಯಣ ಜಿ ಎಂ, ಸತ್ಯಮೂರ್ತಿ ಎಂ ಎಚ್, ಛಾಯಾಪತಿ ಎಂ, ಉಮೇಶ್, ಪ್ರವೀಣ್ ಎನ್ ಎಂ, ಪುರುಷೋತ್ತಮ್, ಶಂಕರ್ ಬಿ ಸಿಂಗ್, ಸುರೇಶ್ ಕೆ ಎನ್, ಮಹೇಶ್, ಮಂಜುನಾಥ್ ಹೆಚ್, ಅನಿಲ್ ಕುಮಾರ್ ಕೆ ಎಲ್, ಸೋಮಶೇಖರ್ ಕೆ , ಕಲ್ಯಾಣ ಮೋಹನ್ ಜಿ, ಪ್ರಕಾಶ್, ಶಶಿಕುಮಾರ್, ರಮೇಶ್ ಎಲ್, ಬಿ ಎಂ ಜಯಕುಮಾರ್, ಶಿವರುದ್ರಯ್ಯ, ಅನಿಲ್ ಎಸ್ ಪ್ರಭು,

ದೇವರಾಜ್, ಟಿ ಜಿ ರಾಜು, ಎನ್ ಶ್ರೀನಿವಾಸಪ್ಪ, ಜಿ ವೆಂಕಟೇಶ್, ಹೆಚ್ ವೆಂಕಟೇಶಯ್ಯ, ವೈ ಬಿ ಪುಟ್ಟರಾಮು, ಡಿ ಎಲ್ ನಾರಾಯಣ, ಶ್ರೀ ಪಾರ್ಥ, ಹುನುಮಂತರಾಯ ಬಿ ಎನ್, ಕೆಂಪಯ್ಯ ಕೆ ಸಿ, ಡಿ ಎಂ ರಮೇಶ್, ಈರಣ್ಣ,

ವಿ ಪ್ರೇಮ್ ಕುಮಾರ್, ನಾಗೇಶ್, ಗೋವಿಂದರಾಜು, ಉಮೇಶ್ ಸಿ, ಶ್ರೀಜೇಶ್, ಸುಮನ್, ನರೇಶ್, ಶಾರದಾ ಬಾಯಿ, ಛಾಯಪತಿ, ಸೋಮಶೇಖರ್ ಕೆ, ಮುತ್ತೇಗೌಡ, ಪ್ರಕಾಶ್ ಮತ್ತು ರಾಜಣ್ಣ ಅವರು ಸೇರಿದಂತೆ ಒಟ್ಟಾರೆ 54 ಮಂದಿ ಸುದೀರ್ಘ ಅವಧಿಯಿಂದಲೂ ಒಂದೇ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿರುವುದು ಗೊತ್ತಾಗಿದೆ.
ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಒಟ್ಟಾರೆ 17,482 ಮಂದಿ ಅಧಿಕಾರಿ, ನೌಕರರು ಒಂದೇ ಸ್ಥಳದಲ್ಲಿ 5 ವರ್ಷ ಮೇಲ್ಪಟ್ಟು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಬಗ್ಗೆ ದಿ ಫೈಲ್ 2026ರ ಜೂನ್ 1ರಂದು ದಾಖಲೆ ಸಮೇತ ವರದಿ ಪ್ರಕಟಿಸಿತ್ತು.




