ಬೆಂಗಳೂರು; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವಮೈದುನ ಬಿ ಎಂ ಮಲ್ಲಿಕಾರ್ಜುನ ಸ್ವಾಮಿ ಅವರ ಹೆಸರಿನಲ್ಲಿತ್ತು ಎಂದು ಹೇಳಲಾಗಿರುವ ಜಮೀನಿಗೆ ಭೇಟಿ ನೀಡದೇ ಸ್ಥಳ ತನಿಖಾ ವರದಿ ಮತ್ತು ನಕ್ಷೆಯನ್ನು ತಯಾರಿಸಿ ಅನ್ಯಕ್ರಾಂತ ಆದೇಶ ಹೊರಡಿಸುವುದರಲ್ಲಿ ರಾಯಚೂರಿನ ಇಂದಿನ ಕಾಂಗ್ರೆಸ್ ಸಂಸದ ಹಾಗೂ ಅಂದಿನ ಮೈಸೂರು ಜಿಲ್ಲಾಧಿಕಾರಿ ಜಿ ಕುಮಾರ್ ನಾಯಕ್ ಅವರು ಕರ್ತವ್ಯಲೋಪ ಎಸಗಿರುವುದನ್ನು ಲೋಕಾಯುಕ್ತ ತನಿಖಾಧಿಕಾರಿಗಳು ಸಾಬೀತುಪಡಿಸಿದ್ದಾರೆ.
ಬಿ ಎಂ ಮಲ್ಲಿಕಾರ್ಜುನ ಸ್ವಾಮಿ ಅವರ ಹೆಸರಿನಲ್ಲಿತ್ತು ಎಂದು ಹೇಳಲಾಗಿರುವ ಜಮೀನಿನ ಸ್ಥಳದಲ್ಲಿದ್ದ ರಸ್ತೆಗೆ ಸಂಬಂಧಿಸಿದಂತೆ ಅಂದಿನ ಜಿಲ್ಲಾಧಿಕಾರಿಗಳು ಸುಳ್ಳು ದಾಖಲೆ ಸೃಷ್ಟಿಸಿದ್ದಾರೆ ಎಂಬ ಗುರುತರವಾದ ಆರೋಪ ಕೇಳಿ ಬಂದಿತ್ತು. ಇದಕ್ಕೆ ಸಂಬಂಧಿಸಿದಂತೆ ದಾಖಲೆಗಳೂ ಬಹಿರಂಗಗೊಂಡಿದ್ದವು.
ಇದೀಗ ಲೋಕಾಯುಕ್ತ ಪೊಲೀಸ್ ತನಿಖಾಧಿಕಾರಿಗಳೂ ಸಹ ಇದೇ ಆರೋಪವನ್ನು ತನಿಖೆ ವೇಳೆಯಲ್ಲಿ ಸಾಬೀತುಪಡಿಸಿದ್ದಾರೆ. ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರಿಗೆ ಲೋಕಾಯುಕ್ತ ಪೊಲೀಸರು ಕ್ಲೀನ್ ಚಿಟ್ ನೀಡಿರುವ ಬೆನ್ನಲ್ಲೇ ರಾಯಚೂರಿನ ಸಂಸದ ಹಾಗೂ ಮೈಸೂರಿನ ಅಂದಿನ ಜಿಲ್ಲಾಧಿಕಾರಿ ಜಿ ಕುಮಾರ್ ನಾಯಕ್, ತಹಶೀಲ್ದಾರ್, ಭೂಮಾಪಕರ ಕರ್ತವ್ಯಲೋಪ ಸಾಬೀತಾಗಿರುವುದು ಮುನ್ನೆಲೆಗೆ ಬಂದಿದೆ.
ದೂರುದಾರ ಸ್ನೇಹಮಯಿ ಕೃಷ್ಣ ಅವರು ಈ ದಾಖಲೆಗಳನ್ನು ವರ್ಷದ ಹಿಂದೆಯೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದನ್ನಾಧರಿಸಿ ‘ದಿ ಫೈಲ್’ ಕೂಡ 2024ರ ಜುಲೈ 24ರಂದೇ ವರದಿಯನ್ನೂ ಪ್ರಕಟಿಸಿತ್ತು.
ಸಿಎಂ ಪತ್ನಿಗೆ ಬದಲಿ ನಿವೇಶನ ಪ್ರಕರಣ; ಮೂಲ ಜಮೀನಿನ ಸ್ಥಳದಲ್ಲಿದ್ದ ರಸ್ತೆಯನ್ನೇ ಮುಚ್ಚಿಟ್ಟರೇ ಜಿಲ್ಲಾಧಿಕಾರಿ?
ಮೈಸೂರಿನ ಅಂದಿನ ಜಿಲ್ಲಾಧಿಕಾರಿ ಜಿ ಕುಮಾರ್ ನಾಯಕ್, ತಹಶೀಲ್ದಾರ್ ಮಾಳಿಗೆ ಶಂಕರ್ ಸೇರಿದಂತೆ ಇನ್ನಿಬ್ಬರು ಅಧಿಕಾರಿಗಳು ಕರ್ತವ್ಯಲೋಪ ಎಸಗಿದ್ದಾರೆ ಎಂದು ತನಿಖಾ ವರದಿಯಲ್ಲಿ ಹೇಳಲಾಗಿದೆ. ಅದೇ ರೀತಿ ರೆವಿನ್ಯೂ ಇನ್ಸ್‌ಪೆಕ್ಟರ್ ಸಿದ್ದಾಪ್ಪಾಜಿ, ಭೂಮಾಪಕ ಶಂಕರಪ್ಪ ಅವರೂ ಕರ್ತವ್ಯಲೋಪ ಎಸಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.
ಈ ಪ್ರಕರಣದಲ್ಲಿ ಆರೋಪಿ-3 ಅವರ ಅರ್ಜಿ ಮೇರೆಗೆ ಮೈಸೂರು ತಾಲೂಕು ಕೆಸರೆ ಗ್ರಾಮದ ಸರ್ವೆ ನಂಬರ್ 464ರ 3.16 ಎಕರೆ ಜಮೀನಿನಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ದೇವನೂರು 3ನೇ ಹಂತದ ಬಡಾವಣೆಗಾಗಿ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದರು. ಸದರಿ ಜಮೀನಿಗೆ ಭೇಟಿ ನೀಡದೇ ಸ್ಥಳ ತನಿಖಾ ವರದಿ ಹಾಗೂ ನಕ್ಷೆಯನ್ನು ತಯಾರಿಸಿ ಅನ್ಯಕ್ರಾಂತ ಆದೇಶಹೊರಡಿಸುವಲ್ಲಿ ಈ ಕೆಳಕಂಡ ಅಧಿಕಾರಿಗಳು ಕರ್ತವ್ಯ ಲೋಪ ಎಸಗಿರುವುದು ತನಿಖೆಯಿಂದ ಕಂಡು ಬಂದಿರುತ್ತದೆ.
‘ಲೋಕಾಯುಕ್ತ ತನಿಖಾಧಿಕಾರಿಗಳೆಂಬ ಮಹಾನುಭಾವರ ಅಮೋಘ ತನಿಖೆಯ ಒಂದು ಸಣ್ಣ ಪರಿಚಯ ಮಾಡಿಕೊಡುತ್ತಿದ್ದೇನೆ ! ಜಮೀನಿಗೆ ಭೇಟಿ ನೀಡದೆ ಸ್ಥಳ ತನಿಖಾ ವರದಿ ಹಾಗೂ ನಕ್ಷೆಯನ್ನು ತಯಾರಿಸಿ ಅನ್ಯಕ್ರಾಂತ ಆದೇಶ ಹೊರಡಿಸಿದ್ದಾರೆ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ ! ಈ ಅಂಶ “ಪ್ರಭಾವ” ಕ್ಕೆ ಒಳಗಾಗಿರುವುದು, ಸುಳ್ಳು ದಾಖಲೆಗಳನ್ನು ಸೃಷ್ಟಿಸಿರುವುದು, ವಂಚನೆಗೆ ಸಹಕರಿಸಿರು ವುದು…ಇತ್ಯಾದಿ ಅಪರಾಧ ಕೃತ್ಯಗಳನ್ನು ಮಾಡಿದ್ದಾರೆ ಎಂಬುದನ್ನು ಖಚಿತ ಪಡಿಸುವುದಿಲ್ಲವೆ ? ಸ್ವತಃ ವಕೀಲರಾದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಬೇಕು !,’ ಎಂದು ಸ್ನೇಹಮಯಿ ಕೃಷ್ಣ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಬಿ ಎಂ ಮಲ್ಲಿಕಾರ್ಜುನ ಸ್ವಾಮಿ ಅವರಿಗೆ ಸೇರಿತ್ತು ಎನ್ನಲಾಗಿರುವ ಜಮೀನಿನ ಸ್ಥಳದಲ್ಲಿ ರಸ್ತೆ ಇದ್ದರೂ ಸಹ ಅಂದಿನ ಜಿಲ್ಲಾಧಿಕಾರಿಗಳು ಅದು ಖಾಲಿ ಸ್ಥಳ ಎಂದು ವರದಿಯಲ್ಲಿ ಉಲ್ಲೇಖಿಸಿ ಸುಳ್ಳು ದಾಖಲೆ ಸೃಷ್ಟಿಸಿದ್ದಾರೆ. ಭೂ ಮಾಪಕರು ಕೂಡ ರಸ್ತೆ ಇರುವ ವಿಚಾರವನ್ನೇ ಮುಚ್ಚಿಟ್ಟು ಸುಳ್ಳು ನಕಾಶೆ ತಯಾರಿಸಿದ್ದಾರೆ ಎಂಬ ಆಪಾದನೆ ಕೇಳಿ ಬಂದಿತ್ತು.
ಜಿಲ್ಲಾಧಿಕಾರಿ ಸ್ಥಳ ತನಿಖಾ ಟಿಪ್ಪಣಿಯಲ್ಲೇನಿತ್ತು?
ಮೈಸೂರು ತಾಲೂಕು ಕಸಬಾ ಹೋಬಳಿ ಕೆಸರೆ ಗ್ರಾಮದ ಸರ್ವೆ ನಂಬರ್ 464ರಲ್ಲಿ 3-16 ಗುಂಟೆ ಜಮೀನಿನಲ್ಲಿ ವಸತಿ ಉದ್ದೇಶಕ್ಕಾಗಿ ಭೂ ಪರಿವರ್ತನೆ ಕೋರಿ ಬಿ ಎಂ ಮಲ್ಲಿಕಾರ್ಜುನ ಸ್ವಾಮಿ ಅವರು ಸಲ್ಲಿಸಿರುವ ಅರ್ಜಿ ಕುರಿತು 2005ರ ಜೂನ್ 17ರಂದು ಸ್ಥಳ ತನಿಖೆ ನಡೆಸಿರುತ್ತೇನೆ. ತಾಲೂಕು ತಹಶೀಲ್ದಾರ್ ಹಾಗೂ ಇತರೆ ಸಿಬ್ಬಂದಿಯವರು ಹಾಜರಿದ್ದರು.
ಮೈಸೂರು ತಾಲೂಕು ತಹಶೀಲ್ದಾರ್ ಅವರ ಪತ್ರದ ಸಂಖ್ಯೆ (ಎಲ್‌ನೆff 134/04-05- 2005ರ) ಪ್ರಕಾರ ಪ್ರಸ್ತಾವಿತ ಜಮೀನು ಅರ್ಜಿದಾರರಿಗೆ ಕ್ರಯದ ಮೂಲಕ ಬಂದಿದ್ದು ಖಾತೆ ಆಗಿ ಸ್ವಾಧೀನಾನುಭವದಲ್ಲಿರುತ್ತಾರೆ. ಸ್ಥಳ ಪರಿಶೀಲನೆ ಸಮಯದಲ್ಲಿ ಕಂಡು ಬಂದಂತೆ ಪ್ರಸ್ತಾವಿತ ಜಮೀನಿನ ಮೇಲೆ ವಿದ್ಯುತ್ ವಾಹನ ತಂತಿ ಹಾದು ಹೋಗಿರುವುದಿಲ್ಲ. ಸದರಿ ಪ್ರದೇಶದಲ್ಲಿ ಮರ ಮಾಲ್ಕಿಗಳು ಇರುವುದಿಲ್ಲ. ಜಮೀನಿನಲ್ಲಿ ಅನಧಿಕೃತ ಕಟ್ಟಡಗಳು ಇರುವುದಿಲ್ಲ.
ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಪತ್ರ (ಸಂಖ್ಯೆ; ನಂ ಎಲ್ ಎ ಕ್ಯೂ(6)ಸಿಆರ್ 48/96-97 ದಿನಾಂಕ 03.09.1998) ದ ಪ್ರಕಾರ ಭೂ ಸ್ವಾಧೀನ ಕೈಬಿಡಲಾಗಿದೆ ಎಂದು ಹಿಂಬರಹ ನೀಡಿರುತ್ತಾರೆ. ಹಾಗೂ ಪತ್ರ (ನಂ ; ಮೈನಪ್ರಾ/ನಯೋ/ಭೂಬ/566/05-06-ದಿನಾಂಕ 29.04.2005)ದಂತೆ ವಸತಿ ಉದ್ದೇಶಕ್ಕೆ ಕಾಯ್ದಿರಿಸಲಾಗಿರುತ್ತದೆ. ಸ್ಥಳ ತನಿಖಾ ಸಮಯದಲ್ಲಿ ಕಂಡುಬಂದಂತೆ ಪ್ರಸ್ತಾವಿತ ಪ್ರದೇಶವು ಸಮತಟ್ಟಾಗಿದ್ದು ವಸತಿ ಉದ್ದೇಶಕ್ಕೆ ಯೋಗ್ಯವಾಗಿರುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಿತ್ತು.
‘ಸಿದ್ದರಾಮಯ್ಯನವರ ಪ್ರಭಾವಕ್ಕೆ ಒಳಗಾದ ಜಿಲ್ಲಾಧಿಕಾರಿಯಂತಹ ಹಿರಿಯ ಅಧಿಕಾರಿಗಳು ಸುಳ್ಳು ದಾಖಲೆ ಸೃಷ್ಟಿಸುತ್ತಾರೆ ಎಂಬುದನ್ನು ತಿಳಿಸುವ ದಾಖಲೆ ಇದು. ಸ್ಥಳದಲ್ಲಿ ರಸ್ತೆ ಇದ್ದರೂ ಸಹ, ಅವರ ಸ್ಥಳ ಪರಿಶೀಲನಾ ವರದಿಯಲ್ಲಿ ಅದನ್ನು ಉಲ್ಲೇಖಿಸದೆ, ಖಾಲಿ ಸ್ಥಳ ಎಂಬಂತೆ ಸುಳ್ಳು ದಾಖಲೆ ಸೃಷ್ಟಿಸಿದ್ದಾರೆ. ಭೂಮಾಪಕರು ಕೂಡ ರಸ್ತೆಯ ವಿಚಾರವನ್ನು ಮುಚ್ಚಿಟ್ಟು, ಸುಳ್ಳು ನಕಾಶೆಯನ್ನು ತಯಾರಿಸಿಕೊಟ್ಟಿದ್ದಾರೆ,’ ಎಂದು ಸ್ನೇಹಮಯಿ ಕೃಷ್ಣ ಎಂಬುವರು ಆರೋಪಿಸಿದ್ದರು.
ಸಿಎಂ ಪತ್ನಿಗೆ ಬದಲಿ ನಿವೇಶನ; ತಹಶೀಲ್ದಾರ್ ವರದಿಯಲ್ಲಿ ಉಲ್ಲೇಖವಾಗದ ಉದ್ಯಾನ, ರಸ್ತೆ ವಿವರ
ಸಿದ್ದರಾಮಯ್ಯನವರ ಭಾಮೈದ ಮಲ್ಲಿಕಾರ್ಜುನ ಸ್ವಾಮಿರವರಿಗೆ ಜಮೀನು ಮಾರಾಟ ಮಾಡಿರುವ ದೇವರಾಜು, ಭೂಸ್ವಾಧೀನ ದಿಂದ ಜಮೀನನ್ನು ಕೈಬಿಡಲು ಮತ್ತು ರಾಜ್ಯಪತ್ರ ಹೊರಡಿಸಲು 25 ಸಾವಿರ ಖರ್ಚು ಮಾಡಲಾಗಿದೆ ಎಂದು ತಿಳಿಸಿದ್ದರು. ಅಲ್ಲದೇ ಪುಟ್ಟಮ್ಮನವರ ಕುಟುಂಬದವರಿಂದ 25 ಸಾವಿರ ಪಡೆಯಲಾಗಿದೆ ಎಂದೂ ನ್ಯಾಯಾಲಯದ ಡಿಕ್ರಿಯಲ್ಲಿಯೂ ಉಲ್ಲೇಖಿಸಿದ್ದರು.
ವಿಶೇಷವೆಂದರೇ ಭೂ ಸ್ವಾಧಿನದಿಂದ ಜಮೀನನ್ನು ಕೈಬಿಡುವ ಸಂಬಂಧ ರಾಜ್ಯಪತ್ರ ಹೊರಡಿಸಲು 1998 ರಲ್ಲೇ 25 ಸಾವಿರ ರೂಪಾಯಿ ಶುಲ್ಕವನ್ನು ಪಾವತಿ ಮಾಡಬೇಕಿತ್ತೆ ಎಂಬ ಪ್ರಶ್ನೆಯೂ ಕೇಳಿ ಬಂದಿದೆ. ಅಲ್ಲದೇ ಡಿಕ್ರಿಯ ಷೆಡ್ಯೂಲ್‌ನ ಉತ್ತರ ಭಾಗದಲ್ಲಿ ಮೈಲಾರಯ್ಯನವರಿಗೆ ಸೇರಿದ 464ನೇ ಸಂಖ್ಯೆಯ ಜಮೀನು ಇದೆ ಎಂಬ ಉಲ್ಲೇಖಿಸಿರುವುದನ್ನು ಗಮನಿಸಿದರೇ ಮೈಲಾರಯ್ಯನವರಿಗೆ ಸೇರಿದ ಜಮೀನನ್ನು ದೇವರಾಜು ಮಾರಾಟ ಮಾಡಿದ್ದಾರೆ ಎಂಬುದಕ್ಕೆಈ ದಾಖಲೆಯೂ ಸಹ ಹೆಚ್ಚಿನ ಪುಷ್ಠಿ ನೀಡಿದಂತಿತ್ತು.
ಸರ್ಕಾರ ನೀಡಿದ್ದ ಮಾಹಿತಿ ಪ್ರಕಾರ 1998ರ ಮೇ 18ರಂದು ಭೂ ಸ್ವಾಧೀನದಿಂದ ಕೈಬಿಡಲಾಗಿದೆ. ಅಧಿಸೂಚನೆಯಿಂದ ರದ್ದುಪಡಿಸುವ ಪೂರ್ವದಲ್ಲಿ ಉದ್ಯಾನ, ರಸ್ತೆ, ನಿವೇಶನಗಳನ್ನು ರಚನೆ ಮಾಡಲಾಗಿತ್ತು.
2005ರ ಮಾರ್ಚ್ 5ರಂದು ತಹಶೀಲ್ದಾರ್ ಸ್ಥಳ ಪರಿಶೀಲನೆ ನಡೆಸಿದ್ದರು. ಅವರು ನೀಡಿರುವ ವರದಿಯಲ್ಲಿ ರಸ್ತೆ, ಉದ್ಯಾನ, ನಿವೇಶನದ ಉಲ್ಲೇಖ ಇರಲಿಲ್ಲ.
ಕರಾರು ಪತ್ರದ ಬಗ್ಗೆಯೂ ಅನುಮಾನ
ಇದೇ ಸಾಮಾಜಿಕ ಜಾಲತಾಣದಲ್ಲಿ ಸ್ನೇಹಮಯಿ ಕೃಷ್ಣ ಅವರು ಕರಾರು ಪತ್ರ ಸೇರಿದಂತೆ ಮತ್ತಷ್ಟು ಸಾಕ್ಷ್ಯಾಧಾರಗಳನ್ನು ಒದಗಿಸಿದ್ದಾರೆ. 2005ರ ಜುಲೈ 15 ರ ಜಿಲ್ಲಾಧಿಕಾರಿಗಳ ಆದೇಶದ ಮೊದಲ ಪುಟದ ಕೊನೆಯ ಪ್ಯಾರಾದಲ್ಲಿ ಕರಾರು ಪತ್ರವನ್ನು ಹಾಜರು ಪಡಿಸಿರುತ್ತಾರೆ ಎಂಬ ಉಲ್ಲೇಖವಿತ್ತು.
ಆದರೆ ಛಾಪಾ ಕಾಗದವನ್ನು 2005ರ ಜುಲೈ 22ರಂದು ಖರೀದಿ ಮಾಡಿದ್ದಾರೆ. ಅಲ್ಲದೇ ಇದಕ್ಕೆ ಮಲ್ಲಿಕಾರ್ಜುನ ಸ್ವಾಮಿ ಮತ್ತು ಸಾಕ್ಷಿದಾರರು ಸಹಿ ಮಾಡಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.
ಛಾಪಾ ಕಾಗದ ಖರೀದಿಸುವ ಮತ್ತು ಕರಾರು ಪತ್ರ ತಯಾರಿಸುವ ಏಳು ದಿನಗಳ ಮೊದಲೇ ಮಾಡಿರುವ ಆದೇಶದಲ್ಲಿ ಕರಾರು ಪತ್ರ ಹಾಜರುಪಡಿಸಿರುತ್ತಾರೆ ಎಂದು ಉಲ್ಲೇಖಿಸಲು ಹೇಗೆ ಸಾಧ್ಯ ಎಂದು ಸ್ನೇಹಮಯಿ ಕೃಷ್ಣ ಅವರು ಪ್ರಶ್ನಿಸಿದ್ದರು.
‘ಸಿದ್ದರಾಮಯ್ಯನವರ ಬಾಮೈದ ಮಲ್ಲಿಕಾರ್ಜುನ ಸ್ವಾಮಿರವರಿಗೆ ಕ್ರಯಪತ್ರ. ನೊಂದಣಿ ಮಾಡಿಕೊಟ್ಟಿರುವ ಜೆ.ದೇವರಾಜುರವರಿಗೆ ಸಂಬಂಧಿಸಿದ ವಂಶವೃಕ್ಷ ಗಮನಿಸಿ. ನಿಂಗ @ ಜವರ ಸತ್ತ ಇಪ್ಪತೈದು ವರ್ಷಗಳ ನಂತರ, ಅವರ ಹೆಂಡತಿ ನಿಧನರಾಗಿದ್ದಾರೆ ಎಂಬಂತೆ ನಮೂದಿಸಿರುವುದು ತಿಳಿದುಬರುತ್ತದೆ.
ನಿಂಗನ ಸಂಬಂಧಿಕರು ನಿಂಗನ ಫೋಟೊ ಎಂದು ನೀಡಿರುವ ಫೋಟೊ ಗಮನಿಸಿ. ಹೆಂಡತಿಯ ಶವದ ಪಕ್ಕ ನಿಂಗ @ ಜವರ ನಿಂತಿರುವುದು ಕಂಡು ಬರುತ್ತದೆ.
‘ಇಂತಹ ಅನುಮಾನಸ್ಪದ ವಿಚಾರಗಳು ತಿಳಿದು ಬಂದಾಗ, ಯಾವುದು ಸತ್ಯ, ಯಾವುದು ಸುಳ್ಳು ಎಂದು ತಿಳಿದುಕೊಳ್ಳಲು ತನಿಖೆ ನಡೆಸುವಂತೆ ದೂರು ನೀಡುವುದು, ಈ ಬಗ್ಗೆ ಮಾಧ್ಯಮಗಳ ಮುಂದೆ ಒತ್ತಾಯ ಮಾಡುವುದು, ಯಾವ ನಿಯಮದ ಪ್ರಕಾರ ಅಪರಾಧ ಕೃತ್ಯ ಎಂಬುದನ್ನು ತಿಳಿದವರು, ತಿಳಿಸುವರೇ,’ ಎಂದು ಪ್ರಶ್ನಿಸಿದ್ದನ್ನು ಸ್ಮರಿಸಬಹುದು.