Tuesday | July 21, 2026 |

ವಿಧಾನಸಭೆ, ವಿಧಾನ ಪರಿಷತ್‌ ಸದಸ್ಯರ ಪ್ರಶ್ನೆಗಳಿಗೆ 3 ವರ್ಷವಾದರೂ ಬಾರದ ಉತ್ತರ; ಸದನದ ಘನತೆಗೆ ಪದೇ ಪದೇ ಧಕ್ಕೆ, ಜಡ್ಡುಗಟ್ಟಿದ ಅಧಿಕಾರಿವರ್ಗ, ಸಿಎಸ್‌ ಪತ್ರಕ್ಕೂ ಕಿಮ್ಮತ್ತಿಲ್ಲವೇ?

ಬೆಂಗಳೂರು; ಕರ್ನಾಟಕ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಶಾಸಕರು ಕೇಳುವ ಪ್ರಶ್ನೆಗಳಿಗೆ ಅಧಿಕಾರಿಗಳು ಮತ್ತು ಸಚಿವರು ಉತ್ತರಿಸದಿರುವ ಬಗ್ಗೆ ಗಂಭೀರ ಚರ್ಚೆ ನಡೆದಿದ್ದರೂ ಸಹ ಅಧಿಕಾರಿಗಳು  ಇದುವರೆಗೂ  ಸುಧಾರಿಸಿಲ್ಲ. ಬದಲಿಗೆ ವಿಧಾನಸಭೆ ಮತ್ತು ವಿಧಾನ ಪರಿಷತ್‌ ಸದಸ್ಯರು ಕೇಳಿರುವ ಪ್ರಶ್ನೆಗಳಿಗೆ ಉತ್ತರವನ್ನು ನೀಡಿಲ್ಲ. ಸಕಾಲದಲ್ಲಿ ಉತ್ತರ ನೀಡದ ಅಧಿಕಾರಿ ವರ್ಗವು ಈಗಲೂ ಜಡ್ಡುಗಟ್ಟಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಅಧಿಕಾರಿವರ್ಗದ ಬಗ್ಗೆ ಹಿಂದಿನ ಸ್ಪೀಕರ್ ಯು ಟಿ ಖಾದರ್ ಅವರು ಅಧಿವೇಶನ ನಡೆಯುತ್ತಿರುವಾಗಲೇ ಮಧ್ಯದಲ್ಲೇ  ಎದ್ದು ಹೋಗಿದ್ದರು. ಅಲ್ಲದೇ ಅಧಿವೇಶನದಲ್ಲಿ ತೀವ್ರ ಅಸಮಾಧಾನವನ್ನೂ ವ್ಯಕ್ತಪಡಿಸಿದ್ದರು. ಇಷ್ಟು ಬೆಳವಣಿಗೆಗಳು ನಡೆದಿದ್ದರೂ ಸಹ ಅಧಿಕಾರಿವರ್ಗವು 16ನೇ ವಿಧಾನಸಭೆಯ 1ನೇ ಅಧಿವೇಶನದಿಂದ 9ನೇ ಮುಂದುವರೆದ ಉಪ ಅಧಿವೇಶನದವರೆಗಿನ ಒಟ್ಟು 686 ಪ್ರಶ್ನೆಗಳಿಗೆ 3 ವರ್ಷಗಳಾದರೂ ಉತ್ತರ ಒದಗಿಸಿಲ್ಲ.

ಈ ಬಗ್ಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್‌ ಅವರು 2026ರ ಜುಲೈ 15ರಂದು ಸರ್ಕಾರದ ಎಲ್ಲಾ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಮತ್ತು ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.

ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

ಇದೇ ಆಗಸ್ಟ್‌ನಲ್ಲಿ ಬೆಂಗಳೂರಿನಲ್ಲಿ ಮುಂಗಾರು ಅಧಿವೇಶನ ನಡೆಯುವ ಸಾಧ್ಯತೆಗಳಿವೆ. ಇದರ ಬೆನ್ನಲ್ಲೇ ವಿಧಾನಸಭೆ ಮತ್ತು ವಿಧಾನ ಪರಿಷತ್‌ ಸದಸ್ಯರ ಪ್ರಶ್ನೆಗಳಿಗೆ ಉತ್ತರ ಬಾರದಿರುವ ಕುರಿತು ಮುಖ್ಯ ಕಾರ್ಯದರ್ಶಿ ಬರೆದಿರುವ ಪತ್ರವು ಮುನ್ನೆಲೆಗೆ ಬಂದಿದೆ.

ರೈತರ ಜಮೀನುಗಳಲ್ಲಿ ನಿರ್ಮಿಸಿಕೊಂಡ ಮನೆಗಳಿಗೆ ಇ ಖಾತೆ ನೀಡುವುದು, ರೈತರಿಗೆ ಹಕ್ಕು ಪತ್ರ ನೀಡುವುದು, ಸರ್ಕಾರಿ ಜಾಗಗಳ ಒತ್ತುವರಿ, ಕರ್ನಾಟಕ ಗಡಿ ಒತ್ತುವರಿ ತೆರವು, ಬೆಳೆ ವಿಮೆ ಸೌಲಭ್ಯ, ಸಾಗುವಳಿ ಚೀಟಿ ಸಮಸ್ಯೆ ಸೇರಿದಂತೆ ಹಲವು ವಿಷಯಗಳ ಕುರಿತು ವಿಧಾನ ಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ಸದಸ್ಯರು ಕೇಳಿದ್ದರು.

16ನೇ ವಿಧಾನಸಭೆ 1ನೇ ಅಧಿವೇಶನದಿಂದ 9ನೇ ಮುಂದುವರೆದ ಅಧಿವೇಶನದವರೆಗೆ ಒಟ್ಟು 18 ಪ್ರಶ್ನೆಗಳಿಗೆ ಇಲಾಖೆಗಳು ಉತ್ತರ ಒದಗಿಸಿಲ್ಲ. ಹಲವು ಪ್ರಶ್ನೆಗಳನ್ನು ವಿವಿಧ ಇಲಾಖೆಗಳು ಆಂತರಿಕವಾಗಿ ಮತ್ತೊಂದು ಇಲಾಖೆಗಳಿಗೆ ವರ್ಗಾವಣೆ ಮಾಡಿ ಕೈತೊಳೆದುಕೊಂಡಿರುವುದು ಗೊತ್ತಾಗಿದೆ. ಆರ್‍‌ಡಿಪಿಆರ್, ನಗರಾಭಿವೃದ್ಧಿ, ಅರಣ್ಯ, ತೋಟಗಾರಿಕೆ, ಆರ್ಥಿಕ ಇಲಾಖೆ ಹೀಗೆ ವಿವಿಧ ಇಲಾಖೆಗಳು ಪರಸ್ಪರ ವರ್ಗಾವಣೆ ಮಾಡಿವೆಯೇ ವಿನಃ ನಿಗದಿತ ಅವಧಿಯೊಳಗೆ ಉತ್ತರಗಳನ್ನು ಒದಗಿಸಿಲ್ಲ.

 

 

2026ರ ಜುಲೈ 14ರ ಅಂತ್ಯಕ್ಕೆ ನಗರಾಭಿವೃದ್ಧಿ ಇಲಾಖೆಯೊಂದೇ 51 ಪ್ರಶ್ನೆಗಳಿಗೆ ಉತ್ತರವನ್ನು ನೀಡಿಲ್ಲ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ 09, ಇ ಆಡಳಿತ 05, ಒಳಾಡಳಿತ ಇಲಾಖೆ 2, ಜಲಸಂಪನ್ಮೂಲ ಇಲಾಖೆ (ಭಾರೀ ಮತ್ತು ಮಧ್ಯಮ) 06, ಕಾನೂನು 01, ಪ್ರವಾಸೋದ್ಯಮ 11, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ 07, ಕೃಷಿ ಇಲಾಖೆ 01, ಸಹಕಾರ ಇಲಾಖೆ ಮತ್ತು ಕೃಷಿ ಮಾರುಕಟ್ಟೆ 18, ಆರ್ಥಿಕ ಇಲಾಖೆ 47, ನಗರಾಭಿವೃದ್ಧಿ ಪೌರಾಡಳಿತ 09, ವಸತಿ ಇಲಾಖೆ 05, ಕಂದಾಯ ಇಲಾಖೆಯು 05 ಪ್ರಶ್ನೆಗಳಿಗೆ ಉತ್ತರವನ್ನು ಒದಗಿಸಿಲ್ಲ.

 

 

ಅದೇ ರೀತಿ ಲೋಕೋಪಯೋಗಿ ಇಲಾಖೆಯು 05, ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯು 02, ಪಶುಸಂಗೋಪನೆ ಮತ್ತು ಮೀನುಗಾರಿಕೆ 01, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ 02, ಮಹಿಳೆಯರ, ಮಕ್ಕಳ ಅಭಿವೃದ್ದಿ, ವಿಕಲಚೇತರನ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ 04, ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆ 13, ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ 02, ಕನ್ನಡ ಸಂಸ್ಕೃತಿ ಇಲಾಖೆ 02, ಯೋಜನೆ ಕಾರ್ಯಕ್ರಮ, ಸಂಯೋಜನೆ, ಸಾಂಖ್ಯಿಕ ಇಲಾಖೆ 02, ಮೂಲಸೌಲಭ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ 04, ಇಂಧನ ಇಲಾಖೆ 02 ಪ್ರಶ್ನೆಗಳಿಗೆ ಉತ್ತರ ಒದಗಿಸಿಲ್ಲ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ 05, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ 03, ಶಿಕ್ಷಣ ಇಲಾಖೆ (ಉನ್ನತ ಶಿಕ್ಷಣ) 04, ಶಾಲಾ ಶಿಕ್ಷಣ ಸಾಕ್ಷರತೆ ಇಲಾಖೆ 27, ಸಾರ್ವಜನಿಕ ಉದ್ದಿಮೆಗಳ ಇಲಾಖೆ 02, ತೋಟಗಾರಿಕೆ ರೇಷ್ಮೆ ಇಲಾಖೆ 03, ವೈದ್ಯಕೀಯ ಶಿಕ್ಷಣ 03, ವಾಣಿಜ್ಯ ಕೈಗಾರಿಕೆ 03, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ 01, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ 01 ಪ್ರಶ್ನೆಗಳಿಗೆ ಉತ್ತರವನ್ನು ನೀಡಿಲ್ಲ.

 

 

ನಿರ್ದಿಷ್ಟವಾಗಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಹಲವು ಸದಸ್ಯರು ಪ್ರಶ್ನೆಗಳನ್ನು ಕೇಳಿದ್ದರು. ಸಕಲೇಶಪುರ ಶಾಸಕ ಸಿಮೆಂಟ್‌ ಮಂಜು ಅವರು (ಪ್ರಶ್ನೆ ಸಂಖ್ಯೆ 1173) ಬೆಂಕಿ ಅನಾಹುತಕ್ಕೆ ಒಳಗಾದವರಿಗೆ ಪರಿಹಾರ ಕುರಿತು 2ನೇ ಅಧಿವೇಶನದಲ್ಲಿ ಪ್ರಶ್ನೆ ಕೇಳಿದ್ದರು. ಈ ಅರ್ಜಿಯನ್ನು ಸಾಮಾಜಿಕ ಭದ್ರತೆ ಪಿಂಚಣಿ ಶಾಖೆಯಿಮದ ಗೃಹ ಇಲಾಖೆಗೆ ವರ್ಗಾವಣೆ ಮಾಡಿದೆ. ಭಾಗೀರಥಿ ಮುರುಳ್ಯ ಅವರು ಗ್ರಾಮೀಣ ಭಾಗದ ವಿಪತ್ತು ನಿರ್ವಹಣೆಗೆ ಸಂಬಂಧಿಸಿದಂತೆ (ಪ್ರಶ್ನೆ ಸಂಖ್ಯೆ 845) 4ನೇ ಅಧಿವೇಶನದಲ್ಲಿ ಪ್ರಶ್ನೆ ಕೇಳಿದ್ದರು. ಈ ಪ್ರಶ್ನೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಿಂದ ಕಂದಾಯ ಇಲಾಖೆಗೆ 2024ರ ಜುಲೈ 24ರಲ್ಲೇ ವರ್ಗಾಯಿಸಲಾಗಿದೆ.

 

 

ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ್ ಅವರು (ಪ್ರಶ್ನೆ ಸಂಖ್ಯೆ 137) ಇ ಸ್ವತ್ತು ಪ್ರಾರಂಭಿಸುವುದಕ್ಕೆ ಸಂಬಂಧಿಸಿದಂತೆ 5ನೇ ಅಧಿವೇಶನದಲ್ಲಿ ಪ್ರಶ್ನೆ ಕೇಳಿದ್ದರು. ಈ ಪ್ರಶ್ನೆಯನ್ನು ಇಲಾಖೆಯು 2024ರ ಡಿಸೆಂಬರ್‍‌ 9ರಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ವರ್ಗಾಯಿಸಿದೆ. ಪ್ರಕಾಶ್‌ ಕೋಳಿವಾಡ್‌ ಅವರು (ಪ್ರಶ್ನೆ ಸಂಖ್ಯೆ 2410) ಅನುದಾನ ಹಂಚಿಕೆಗೆ ಸಂಬಂಧಿಸಿದಂತೆ 5ನೇ ಅಧಿವೇಶನದಲ್ಲಿ ಕೇಳಿದ್ದ ಪ್ರಶ್ನೆಗೆ 2024ರ ಡಿಸೆಂಬರ್‍‌ 18ರಂದು ಗ್ರಾಮೀಣಾಭಿವೃದ್ದಿ ಪಂಚಾಯತ್‌ರಾಜ್ ಇಲಾಖೆಯಿಂದ ಕಂದಾಯ ಇಲಾಖೆಗೆ ವರ್ಗಾಯಿಸಲಾಗಿದೆ.

ಪ್ರಕಾಶ್‌ ಕೋಳಿವಾಡ್‌ ಅವರು (ಪ್ರಶ್ನೆ ಸಂಖ್ಯೆ 416) ಅನುದಾನ ಹಂಚಿಕೆ ಕುರಿತು 6ನೇ ಅಧಿವೇಶನದಲ್ಲಿ ಪ್ರಶ್ನೆ ಕೇಳಿದ್ದರು. ಈ ಪ್ರಶ್ನೆಯನ್ನು 2025ರ ಮಾರ್ಚ್‌ 5ರಂದು ಗ್ರಾಮೀಣಾಭಿವೃದ್ಧಿ ಪಂಚಾಯತ್‌ ರಾಜ್‌ ಇಲಾಖೆಯಿಂದ ಕಂದಾಯ ಇಲಾಖೆಗೆ ವರ್ಗಾವಣೆಯಾಗಿದೆ. ಉಮಾನಾಥ್ ಕೋಟ್ಯಾನ್ (ಮೂಡಬಿದ್ರೆ) ಬೆಳೆ ವಿಮೆ ಸೌಲಭ್ಯದ ಬಗ್ಗೆ (ಪ್ರಶ್ನೆ ಸಂಖ್ಯೆ 329) 7ನೇ ಅಧಿವೇಶನದಲ್ಲಿ ಪ್ರಶ್ನೆ ಕೇಳಿದ್ದರು. ಈ ಪ್ರಶ್ನೆಯನ್ನು ವಿಪತ್ತು ನಿರ್ವಹಣೆ ಶಾಖೆಗೆ 2025ರ ಆಗಸ್ಟ್‌ 11ರಂದೇ ವರ್ಗಾವಣೆಯಾಗಿದೆ. ಹಾಗೆಯೇ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರು (ಪ್ರಶ್ನೆ ಸಂಖ್ಯೆ 2447) ಅಧಿಕಭಾರ ಶುಲ್ಕದ ಕುರಿತು 9ನೇ ಮುಂದುವರೆದ ಉಪವೇಶನದಲ್ಲಿ ಪ್ರಶ್ನೆ ಕೇಳಿದ್ದರು. ಈ ಪ್ರಶ್ನೆಯನ್ನು 2026ರ ಮಾರ್ಚ್ 17ರಂದು ನೋಂದಣಿ ಮುದ್ರಾಂಕ ಇಲಾಖೆಗೆ ವರ್ಗಾವಣೆ ಆಗಿರುವುದು ಗೊತ್ತಾಗಿದೆ.

 

 

ರಾಜರಾಜೇಶ್ವರಿ ವಿಧಾನಸಭೆ ಕ್ಷೇತ್ರದ ಮುನಿರತ್ನ ಅವರು (ಪ್ರಶ್ನೆ ಸಂಖ್ಯೆ 1396) ಟ್ರಸ್ಟ್ ಜಮೀನು ಬಿಡಿಎಯಿಂದ ಭೂ ಪರಿವರ್ತನೆ ಆಗಿರುವ ಕುರಿತು 6ನೇ ಅಧಿವೇಶನದಲ್ಲಿ ಕೇಳಿದ್ದರು.   ಈ ಅರ್ಜಿಯನ್ನು ನಗರಾಭಿವೃದ್ಧಿ ಇಲಾಖೆಯು 2025ರ ಮಾರ್ಚ್‌ 18ರಂದು ಕಂದಾಯ ಇಲಾಖೆಯ ಭೂ ಮಂಜೂರಾತಿ -01 ಶಾಖೆಗೆ ವರ್ಗಾವಣೆ ಮಾಡಿದೆ. ಚನ್ನಗಿರಿ ಶಾಸಕ ಬಸವರಾಜು ಶಿವಗಂಗಾ ಅವರು (ಪ್ರಶ್ನೆ ಸಂಖ್ಯೆ 1184) ಸಾಗುವಳಿ ಚೀಟಿ, ಪಹಣಿ ಹಾಗೂ ಮ್ಯುಟೇಷನ್‌ ದಾಖಲಾತಿಗಳಿಗೆ ಸಂಬಂಧಿಸಿದಂತೆ 8ನೇ ಅಧಿವೇಶನದಲ್ಲಿ ಪ್ರಶ್ನೆ ಕೇಳಿದ್ದರು. ಈ ಪ್ರಶ್ನೆಯನ್ನೂ ಸಹ 2025ರ ಡಿಸೆಂಬರ್‍‌ 18ರಂದು ಭೂ ಮಂಜೂರಾತಿ ಶಾಖೆಗೆ ವರ್ಗಾವಣೆ ಮಾಡಿದೆ.

 

 

ಮಲ್ಲೇಶ್ವರಂ ಶಾಸಕ ಅಶ್ವಥ್‌ ನಾರಾಯಣ್ ಅವರು (ಪ್ರಶ್ನೆ ಸಂಖ್ಯೆ 3453) ಕೆಎಐಡಿಬಿ ಸಂಸ್ಥೆಗೆ ಸಂಬಂಧಿಸಿದಂತೆ 9ನೇ ಮುಂದುವರೆದ ಉಪ ವೇಶನದಲ್ಲಿ ಕೇಳಿದ್ದರು. ಈ ಅರ್ಜಿಯನ್ನು 2026ರ ಮಾರ್ಚ್‌ 26ರಂದು ಭೂ ಸ್ವಾಧೀನ ವಿಭಾಗಕ್ಕೆ ವರ್ಗಾಯಿಸಿದ್ದಾರೆ. ಶಾರದಾ ಪೂರ್ಯನಾಯಕ್ ಅವರು (ಪ್ರಶ್ನೆ ಸಂಖ್ಯೆ 1434) ಭೂಮಿಯನ್ನು ಇಂಡೀಕರಣ ಮಾಡುತ್ತಿರುವ ಕುರಿತು ಕೇಳಿದ್ದ ಪ್ರಶ್ನೆಗೆ 2026ರ ಮಾರ್ಚ್‌ 12ರಂದು ಭೂಮಿ ಯುಪಿಒಆರ್ ಶಾಖೆಗೆ ವರ್ಗಾಯಿಸಿದೆ. ಗುರುಪಾದಗೌಡ ಸಂಗನಗೌಡ ಪಾಟೀಲ್ ಅವರು (ಪ್ರಶ್ನೆ ಸಂಖ್ಯೆ 1852) ಹಕ್ಕು ಪತ್ರಕ್ಕೆ ಸಂಬಂಧಿಸಿದಂತೆ 9ನೇ ಮುಂದುವರೆದ ಉಪವೇಶನದಲ್ಲಿ ಕೇಳಿದ್ದ ಪ್ರಶ್ನೆಯನ್ನು 2026ರ ಮಾರ್ಚ್‌ 16ರಂದು ಭೂ ಮಂಜೂರಾತಿ ಶಾಖೆಗೆ ವರ್ಗಾವಣೆ ಮಾಡಿದೆ.

ಹಾಗೆಯೇ ಕಂದಾಯ ಇಲಾಖೆಯಿಂದ ಇತರ ಇಲಾಖೆಗೆ ಹಲವು ಪ್ರಶ್ನೆಗಳು ವರ್ಗಾವಣೆಯಾಗಿವೆ. ಶಾಂತರಾಮ್ ಬುಡ್ನ ಸಿದ್ದಿ ಅವರು (ಪ್ರಶ್ನೆ ಸಂಖ್ಯೆ- 1141) ಉತ್ತರ ಕನ್ನಡ ಜಿಲ್ಲೆಯ ರೈತರ ಹಕ್ಉ ಸಂರಕ್ಷಣಾ ಸಮಿತಿಯ ಬೇಡಿಕೆಗಳ ಕುರಿತು 154ನೇ ಅಧಿವೇಶನದಲ್ಲಿ ಪ್ರಶ್ನೆ ಕೇಳಿದ್ದರು.

ಈ ಪ್ರಶ್ನೆಯನ್ನು ಕಂದಾಯ ಇಲಾಖೆಯು ಅರಣ್ಯ ಜೀವಿ ಶಾಸ್ತ್ರ ಮತ್ತು ಪರಿಸರ ಇಲಾಖೆಗೆ 2024ರ ಡಿಸೆಂಬರ್‍‌ 18ರಂದು ವರ್ಗಾವಣೆ ಮಾಡಿದೆ. ಅದೇ ರೀತಿ ಕೆ ಅಬ್ದುಲ್ ಜಬ್ಬಾರ್ ಅವರು (ಪ್ರಶ್ನೆ ಸಂಖ್ಯೆ- 192) ರಾಜ್ಯದಲ್ಲಿ ಇ-ಆಸ್ತಿ ನೋಂದಣಿ ಪ್ರಕ್ರಿಯೆ ಕುರಿತು 155ನೇ ಅಧಿವೇಶನದಲ್ಲಿ ಪ್ರಶ್ನೆ ಕೇಳಿದ್ದರು. ಈ ಪ್ರಶ್ನೆಯನ್ನು ಕಂದಾಯ ಇಲಾಖೆಯು 2025ರ ಮಾರ್ಚ್ 5ರಂದು ನಗರಾಭಿವೃದ್ಧಿ, ನಗರ ಯೋಜನೆ ಸಚಿವರಿಗೆ ವರ್ಗಾವಣೆ ಮಾಡಿದೆ.

 

 

ಸಿ ಟಿ ರವಿ ಅವರು 155ನೇ ಅಧಿವೇಶನದಲ್ಲಿ (ಪ್ರಶ್ನೆ ಸಂಖ್ಯೆ 677) ರಾಜ್ಯಾದ್ಯಂತ ಇ-ಖಾತೆ ಕಡ್ಡಾಯಗೊಳಿಸಿದ ಕಾರಣ ತೊಂದರೆ ಆಗಿರುವ ಕುರಿತು ಕೇಳಿದ್ದ ಪ್ರಶ್ನೆಯನ್ನು 2025ರ ಮಾರ್ಚ್‌ 12ರಂದು ನಗರಾಭಿವೃದ್ದಿ ನಗರ ಯೋಜನೆ ಸಚಿವರ ಕಚೇರಿಗೆ ವರ್ಗಾವಣೆ ಮಾಡಿದೆ. ಹಾಲಿ ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ ಅವರು ವಿಧಾನ ಪರಿಷತ್‌ ಸದಸ್ಯರಾಗಿದ್ದ ಅವಧಿಯಲ್ಲಿ 156ನೇ ಅಧಿವೇಶನದಲ್ಲಿ (ಪ್ರಶ್ನೆ ಸಂಖ್ಯೆ- 453) ಟೆಂಡರ್‍‌ನಲ್ಲಿ ಭಾಗವಹಿಸಲು ಪ್ರತ್ಯೇಕ ಜಾತಿ ಪ್ರಮಾಣ ಪತ್ರ ನೀಡುವ ಕುರಿತು ಪ್ರಶ್ನೆ ಕೇಳಿದ್ದರು. ಈ ಪ್ರಶ್ನೆಯನ್ನು ಕಂದಾಯ ಇಲಾಖೆಯು 2025ರ ಆಗಸ್ಟ್ 13ರಂದು ಹಿಂದುಳಿದ ವರ್ಗಗಳ ಕಲ್ಯಾಣ ಕನ್ನಡ ಸಂಸ್ಕೃತಿ ಸಚಿವರಿಗೆ ವರ್ಗಾಯಿಸಿತ್ತು.

ಮಂಜುನಾಥ್‌ ಭಂಡಾರಿ ಅವರು 156ನೇ ಅಧಿವೇಶನದಲ್ಲಿ (ಪ್ರಶ್ನೆ ಸಂಖ್ಯೆ 1047) ಕರ್ನಾಟಕ ರಾಜ್ಯದಲ್ಲಿ ಜಿಲ್ಲಾ ಮಟ್ಟದ ಸಮಿತಿಗಳ ಕುರಿತು ಪ್ರಶ್ನೆ ಕೇಳಿದ್ದರು. ಈ ಪ್ರಶ್ನೆಯನ್ನು 2025ರ ಆಗಸ್ಟ್‌ 20ರಂಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ವರ್ಗಾಯಿಸಿದೆ. ಸಿ ಎನ್ ಮಂಜೇಗೌಡ ಅವರು 156ನೇ ಅಧಿವೇಶನದಲ್ಲಿ (ಪ್ರಶ್ನೆ ಸಂಖ್ಯೆ 988) ಸ್ಥಳೀಯ ಸಂಸ್ಥೆಗಳ ಆನ್ಲೈನ್ ಸೇವೆಗೆ ಸರ್ವರ್ ತೊಡಕಿನ ಕುರಿತು ಕೇಳಿದ್ದ ಪ್ರಶ್ನೆಯನ್ನು 2025ರ ಆಗಸ್ಟ್‌ 20ರಂದು ನಗರಾಭಿವೃದ್ಧಿ ನಗರ ಯೋಜನೆ ಸಚಿವರಿಗೆ ವರ್ಗಾಯಿಸಿದೆ. ಕೆ ಶಿವಕುಮಾರ್ ಅವರು 157ನೇ ಅಧಿವೇಶನದಲ್ಲಿ (ಪ್ರಶ್ನೆ ಸಂಖ್ಯೆ 1195) ಆದಿವಾಸಿಗಳ ಕುಟುಂಬಗಳ ಸಂಖ್ಯೆ ಮತ್ತು ನೀಡಿರುವ ಹಕ್ಕುಪತ್ರಗಳ ಬಗ್ಗೆ ಪ್ರಶ್ನೆ ಕೇಳಿದ್ದರು. ಈ ಪ್ರಶ್ನೆಯನ್ನು 2025ರ ಡಿಸೆಂಬರ್‍‌ 17ರಂದು ಹಿಂದುಳಿದ ವರ್ಗ, ಎಸ್‌ಸಿ ಎಸ್‌ ಟಿ ಕಲ್ಯಾಣ ಸಚಿವರಿಗೆ ವರ್ಗಾಯಿಸಿದೆ.

ಕಿಶೋರ್‍‌ ಕುಮಾರ್ ಪುತ್ತೂರು ಅವರು 158ನೇ ಮುಂದುವರೆದ ಅಧಿವೇಶನದಲ್ಲಿ (ಪ್ರಶ್ನೆ ಸಂಖ್ಯೆ 2038) ಕೃಷಿ ಸಂಬಂಧಿತ ಕಟ್ಟಡಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸುವ ಬಗ್ಗೆ ಕೇಳಿದ್ದ ಪ್ರಶ್ನೆಯನ್ನು 2025ರ ಮಾರ್ಚ್‌ 25ರಂದು ಇಂಧನ ಇಲಾಖೆಗೆ ವರ್ಗಾಯಿಸಿದೆ. ಬಲ್ಕೀಸ್‌ ಬಾನು ಅವರು 158ನೇ ಅಧಿವೇಶನದಲ್ಲಿ (ಪ್ರಶ್ನೆ ಸಂಖ್ಯೆ 2215) ಅರಣ್ಯ ವ್ಯಾಪ್ತಿಯಲ್ಲ ಮನೆ ನಿರ್ಮಾಣ ಮಾಡಿರುವ ಕುರಿತು ಕೇಳಿದ್ದ ಪ್ರಶ್ನೆಯನ್ನು 2025ರ ಮಾರ್ಚ್‌ 25ರಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಸಚಿವರ ಕಚೇರಿಗೆ ವರ್ಗಾಯಿಸಿದೆ.

ಕರ್ನಾಟಕ ವಿಧಾನ ಪರಿಷತ್‌ ಸದಸ್ಯರು 152ನೇ ಅಧಿವೇಶನದಿಂದ 158ನೇ ಅಧಿವೇಶನದವರೆಗೆ ಹಲವು ಪ್ರಶ್ನೆಗಳನ್ನು ಕೇಳಿದ್ದರು. ಈ ಪ್ರಶ್ನೆಗಳಿಗೂ 9 ಇಲಾಖೆಗಳು ಉತ್ತರವನ್ನೇ ನೀಡಿಲ್ಲ.

ಯು ಬಿ ವೆಂಕಟೇಶ್‌ (ಪ್ರಶ್ನೆ ಸಂಖ್ಯೆ 135) ಅವರು ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‍‌) ನಿಧಿಯಡಿ ಮೂರು ವರ್ಷದಲ್ಲಿ ಸ್ವೀಕರಿಸಿರುವ ಮೊತ್ತದ ಕುರಿತು 152ನೇ ಅಧಿವೇಶನದಲ್ಲಿ ಪ್ರಶ್ನೆ ಕೇಳಿದ್ದರು. ಈ ಪ್ರಶ್ನೆಯನ್ನು ವಿಪತ್ತುನಿರ್ವಹಣೆ ವಿಭಾಗಕ್ಕೆ 2024ರ ಫೆ.14ರಂದು ವರ್ಗಾಯಿಸಲಾಗಿದೆ. ಡಾ ತಳವಾರ್ ಸಾಬಣ್ಣ ಅವರು 153ನೇ ಅಧಿವೇಶನದಲ್ಲಿ (ಪ್ರಶ್ನೆ ಸಂಖ್ಯೆ 963) ವಿಜಯಪುರ ಜಿಲ್ಲೆಯಲ್ಲಿ ಖೊಟ್ಟಿ ದಾಖಲೆ ಸೃಷ್ಟಿಸಿ ರೈತರ ಜನಸಾಮಾನ್ಯರ ಮತ್ತು ಸರ್ಕಾರಿ ಜಮೀನು ಕಬಳಿಕೆ ಆಗುತ್ತಿರುವ ಕುರಿತು ಪ್ರಶ್ನೆ ಕೇಳಿದ್ದರು. ಈ ಪ್ರಶ್ನೆಯು 2024ರ ಜುಲೈ 24ರಂದು ನೋಂದಣಿ ಮುದ್ರಾಂಕ ಇಲಾಖೆಗೆ ವರ್ಗಾವಣೆ ಆಗಿದೆ.

 

ಬಿ ಜಿ ಪಾಟೀಲ್ ಅವರು 153ನೇ ಅಧಿವೇಶನದಲ್ಲಿ (ಪ್ರಶ್ನೆ ಸಂಖ್ಯೆ 900) ಕಲ್ಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳಿಂದ ಮಹಾನಗರಗಳಿಗೆ ವಲಸೆ ಹೋದ ಕೂಲಿ ಕಾರ್ಮಿಕರ ಬಗ್ಗೆ ಕೇಳಿದ್ದ ಪ್ರಶ್ನೆಯನ್ನು 2024ರ ಜುಲೈ 24ರಂದು ವಿಪತ್ತು ನಿರ್ವಹಣೆ ವಿಭಾಗಕ್ಕೆ ವರ್ಗಾಯಿಸಿದೆ. ಮಂಜುನಾಥ್‌ ಭಂಡಾರಿ ಅವರು 155ನೇ ಅಧಿವೇಶನದಲ್ಲಿ (ಪ್ರಶ್ನೆ ಸಂಖ್ಯೆ 1365) ಕಂದಾಯ ಇಲಾಖೆಯ ನಿಯಮಗಳಲ್ಲಿ ತಿದ್ದುಪಡಿಗಳ ಕುರಿತು ಕೇಳಿದ್ದ ಪ್ರಶ್ನೆಯನ್ನು 2025ರ ಮಾರ್ಚ್‌ 19ರಂದು ನೋಂದಣಿ ಮುದ್ರಾಂಕ ಇಲಾಖೆಗೆ ವರ್ಗಾವಣೆಯಾಗಿದೆ.

ನಿರಾಣಿ ಹನುಮಂತಪ್ಪ ರುದ್ರಪ್ಪ ಅವರು 157ನೇ ಅಧಿವೇಶನದಲ್ಲಿ (ಪ್ರಶ್ನೆ ಸಂಖ್ಯೆ 463) ನೆರೆಪೀಡಿತ ಉತ್ತರ ಕರ್ನಾಟಕ ರೈತರಿಗೆ ಪರಿಹಾರ ವಿತರಿಸುವ ಕುರಿತು ಪ್ರಶ್ನೆ ಕೇಳಿದ್ದರು. ಈ ಪ್ರಶ್ನೆಯನ್ನು 2025ರ ಡಿಸೆಂಬರ್‍‌ 10ರಂದು ವಿಪತ್ತು ನಿರ್ವಹಣೆ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಟಿ ಎನ್ ಜವರಾಯಿಗೌಡ ಅವರು 157ನೇ ಅಧಿವೇಶನದಲ್ಲಿ (ಪ್ರಶ್ನೆ ಸಂಖ್ಯೆ 1168) ಬೆಂಗಳೂರು ನಗರ ಜಿಲ್ಲೆಯಲ್ಲಿ ಜಮೀನು ಕಬಳಿಸಿರುವ ಕುರಿತು ಪ್ರಶ್ನೆ ಕೇಳಿದ್ದರು. ಈ ಪ್ರಶ್ನೆಯನ್ನು 2025ರ ಡಿಸೆಂಬರ್‍‌ 17ರಂದು ಭೂ ಮಂಜೂರಾತಿ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.

ತಿಪ್ಪಣ್ಣಪ್ಪ ಕಮಕನೂರ ಅವರು 157ನೇ ಅಧಿವೇಶನದಲ್ಲಿ (ಪ್ರಶ್ನೆ ಸಂಖ್ಯೆ 1230) ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿದ್ದ ಮಳೆಗೆ ಸಂಭವಿಸಿದ ಹಾನಿ ಕುರಿತು ಕೇಳಿದ್ದ ಪ್ರಶ್ನೆಯನ್ನು 2025ರ ಡಿಸೆಂಬರ್‍‌ 17ರಂದು ವಿಪತ್ತು ನಿರ್ವಹಣೆ ವಿಭಾಗಕ್ಕೆ ವರ್ಗಾವಣೆ ಮಾಡಿದೆ. ಟಿ ಎ ಶರವಣ ಅವರು 158ನೇ ಅಧಿವೇಶನದಲ್ಲಿ ( ಪ್ರಶ್ನೆ ಸಂಖ್ಯೆ 1573) ಬೆಂಗಳೂರು ದಕ್ಷಿಣ ತಾಲೂಕಿನಲ್ಲಿ ಸ್ಥಿರಾಸ್ತಿಗಳ ಬೆಲೆ ಕಡಿಮೆ ಮಾಡಿರುವ ಬಗ್ಗೆ ಪ್ರಶ್ನೆ ಕೇಳಿದ್ದರು. ಈ ಪ್ರಶ್ನೆಯನ್ನು 2026ರ ಮಾರ್ಚ್‌ 18ರಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ವರ್ಗಾವಣೆ ಮಾಡಿದೆ. ಅದೇ ರೀತಿ ಟಿ ಎ ಶರವಣ ಅವರು (ಪ್ರಶ್ನೆ ಸಂಖ್ಯೆ 2127) ವಿಪತ್ತು ನಿರ್ವಹಣೆ ನಿಧಿಯ ಖರ್ಚಿನ ಕುರಿತು ಪ್ರಶ್ನೆ ಕೇಳಿದ್ದರು. ಈ ಪ್ರಶ್ನೆಯನ್ನೂ ಸಹ 2026ರ ಮಾರ್ಚ್‌ 25ರಂದು ನೋಂಂದಣಿ ಮತ್ತು ಮುದ್ರಾಂಕ ಇಲಾಖೆಗೆ ವರ್ಗಾವಣೆ ಮಾಡಿರುವುದು ಗೊತ್ತಾಗಿದೆ.

ಪ್ರಶ್ನೆಗಳಿಗೆ ಉತ್ತರ ಸಿಗದ ಸಮಸ್ಯೆ

ಅಧಿವೇಶನದಲ್ಲಿ ಶಾಸಕರು ಮತ್ತು ವಿಧಾನ ಪರಿಷತ್ತಿನ ಸದಸ್ಯರು ಸರ್ಕಾರದ ಗಮನ ಸೆಳೆಯಲು ಮತ್ತು ಇಲಾಖಾ ವಿವರಗಳನ್ನು ಕೋರಿ ಅನೇಕ ಚುಕ್ಕೆ ಗುರುತಿನ ಹಾಗೂ ಗುರುತಿಲ್ಲದ ಪ್ರಶ್ನೆಗಳನ್ನು ಕೇಳುತ್ತಾರೆ. ಆದರೆ ನಿಗದಿತ ಸಮಯದೊಳಗೆ ಬಹುತೇಕ ಪ್ರಶ್ನೆಗಳಿಗೆ ಇಲಾಖೆಗಳಿಂದ ಉತ್ತರಗಳು ಬರುವುದಿಲ್ಲ ಎಂದು ಸದಸ್ಯರು ಹಿಂದಿನ ಅಧಿವೇಶನಗಳಲ್ಲಿ ಹಲವಾರು ಬಾರಿ ಪ್ರಸ್ತಾಪಿಸಿದ್ದರು.
ಸರಿಯಾಗಿ ಉತ್ತರ ನೀಡದ ಅಧಿಕಾರಿಗಳು ಮತ್ತು ಸಚಿವರ ವಿರುದ್ಧ ಸ್ಪೀಕರ್ ಯು.ಟಿ. ಖಾದರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.

ಪ್ರಶ್ನೆಗಳಿಗೆ ಉತ್ತರ ಬಾರದ ಕಾರಣಕ್ಕೆ ಸದನವನ್ನು ಅನಿರ್ದಿಷ್ಟಾವಧಿಗೆ ಮೊಟಕುಗೊಳಿಸಿದ್ದರು. ಸದನದ ಘನತೆಗೆ ಧಕ್ಕೆಯಾಗುತ್ತದೆ ಎಂದು ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಸಚಿವರು ಮತ್ತು ಉನ್ನತ ಅಧಿಕಾರಿಗಳಿಗೆ ಎಚ್ಚರಿಕೆ ಪತ್ರಗಳನ್ನು ಬರೆದಿದ್ದರು.

ಕರ್ತವ್ಯ ಲೋಪವೆಸಗಿ ಶಾಸಕರ ಪ್ರಶ್ನೆಗಳಿಗೆ ಸಕಾಲದಲ್ಲಿ ಮಾಹಿತಿ ನೀಡದ ಐಎಎಸ್ (IAS) ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಭವಿಷ್ಯದಲ್ಲಿ ಇಂತಹ ತಡವನ್ನು ಸಹಿಸುವುದಿಲ್ಲ ಮತ್ತು ಉತ್ತರಗಳನ್ನು ಕಡ್ಡಾಯವಾಗಿ ಒದಗಿಸಬೇಕೆಂದು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದನ್ನು ಸ್ಮರಿಸಬಹುದು.

Hot this week

ಶೌಚಗುಂಡಿಗಳಲ್ಲಿ ಸ್ವಚ್ಛತೆ; 5 ವರ್ಷದಲ್ಲಿ ದೇಶದಾದ್ಯಂತ 332 ಮಂದಿ ಸಾವು, ಕರ್ನಾಟಕದೊಂದಿಗೆ ತಾಳೆಯಾಗದ ಮರಣದ ಅಂಕಿಅಂಶ

ಬೆಂಗಳೂರು; ರಾಜ್ಯದಲ್ಲಿ ಶೌಚ ಗುಂಡಿಗಳು ಮತ್ತು ಒಳಚರಂಡಿಗಳಲ್ಲಿ  ಅಪಾಯಕಾರಿ ಪರಿಸ್ಥಿತಿಯಲ್ಲಿ 2024ನೇ...

ವಸತಿ ಬಡಾವಣೆ ನಿರ್ಮಾಣ, ಅಭಿವೃದ್ಧಿ ಕಾಮಗಾರಿ, ಬಡ್ಡಿ ಪಾವತಿ; ಲೆಕ್ಕಪತ್ರವನ್ನೇ ನಿರ್ವಹಿಸಿಲ್ಲ, ದಾಖಲೆಗಳನ್ನೂ ಒದಗಿಸಿಲ್ಲ, ಮುಡಾ ದುರಾಡಳಿತ

ಮಂಗಳೂರು: ಕುಂಜತ್‌ ಬೈಲ್ ಸೇರಿದಂತೆ ಹಲವೆಡೆ ವಸತಿ ಬಡಾವಣೆಗಳನ್ನು ರಚಿಸುವ ಉದ್ದೇಶದಿಂದ...

ಚಿಕ್ಕಮಗಳೂರು ವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿ; ಡಿಪಿಆರ್, ಟೆಂಡರ್ ಪ್ರಕ್ರಿಯೆಯಲ್ಲಿ ಲೋಪ ದೋಷ, 130 ಕೋಟಿ ರು ಹೆಚ್ಚುವರಿ

ಬೆಂಗಳೂರು; ಚಿಕ್ಕಮಗಳೂರು ವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿಗೆ ನಡೆಸಲು ಕರೆದಿದ್ದ...

ಆದಾಯಕ್ಕಿಂತ ಹೆಚ್ಚಿನ ಅಕ್ರಮ ಸಂಪತ್ತು ಗಳಿಕೆ ; ಡಾ ಬೂವನಹಳ್ಳಿ ನಾಗರಾಜ್ ವಿರುದ್ಧದ ಪ್ರಕರಣದಲ್ಲಿ ಬಿ ರಿಪೋರ್ಟ್‌ ಅಂಗೀಕರಿಸಿದ ನ್ಯಾಯಾಲಯ

ಬೆಂಗಳೂರು; ತುಮಕೂರು ಜಿಲ್ಲಾ ಪಂಚಾಯ್ತಿಯಲ್ಲಿ ಕುಂದುಕೊರತೆ ನಿವಾರಣೆ ಪ್ರಾಧಿಕಾರಿಯಾಗಿದ್ದ ಡಾ ಬೂವನಹಳ್ಳಿ...
Please Scan to make Your Contribution

Topics

ಶೌಚಗುಂಡಿಗಳಲ್ಲಿ ಸ್ವಚ್ಛತೆ; 5 ವರ್ಷದಲ್ಲಿ ದೇಶದಾದ್ಯಂತ 332 ಮಂದಿ ಸಾವು, ಕರ್ನಾಟಕದೊಂದಿಗೆ ತಾಳೆಯಾಗದ ಮರಣದ ಅಂಕಿಅಂಶ

ಬೆಂಗಳೂರು; ರಾಜ್ಯದಲ್ಲಿ ಶೌಚ ಗುಂಡಿಗಳು ಮತ್ತು ಒಳಚರಂಡಿಗಳಲ್ಲಿ  ಅಪಾಯಕಾರಿ ಪರಿಸ್ಥಿತಿಯಲ್ಲಿ 2024ನೇ...

ಚಿಕ್ಕಮಗಳೂರು ವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿ; ಡಿಪಿಆರ್, ಟೆಂಡರ್ ಪ್ರಕ್ರಿಯೆಯಲ್ಲಿ ಲೋಪ ದೋಷ, 130 ಕೋಟಿ ರು ಹೆಚ್ಚುವರಿ

ಬೆಂಗಳೂರು; ಚಿಕ್ಕಮಗಳೂರು ವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿಗೆ ನಡೆಸಲು ಕರೆದಿದ್ದ...

ಆದಾಯಕ್ಕಿಂತ ಹೆಚ್ಚಿನ ಅಕ್ರಮ ಸಂಪತ್ತು ಗಳಿಕೆ ; ಡಾ ಬೂವನಹಳ್ಳಿ ನಾಗರಾಜ್ ವಿರುದ್ಧದ ಪ್ರಕರಣದಲ್ಲಿ ಬಿ ರಿಪೋರ್ಟ್‌ ಅಂಗೀಕರಿಸಿದ ನ್ಯಾಯಾಲಯ

ಬೆಂಗಳೂರು; ತುಮಕೂರು ಜಿಲ್ಲಾ ಪಂಚಾಯ್ತಿಯಲ್ಲಿ ಕುಂದುಕೊರತೆ ನಿವಾರಣೆ ಪ್ರಾಧಿಕಾರಿಯಾಗಿದ್ದ ಡಾ ಬೂವನಹಳ್ಳಿ...

ಏಕಬಳಕೆ ಪ್ಲಾಸ್ಟಿಕ್‌ ಬಳಕೆಗಿಲ್ಲ ಕಡಿವಾಣ, ನಿಷೇಧದ ಕಾನೂನು ಕಾಗದದ ಮೇಲಷ್ಟೇ ಜಾರಿ; ಪಾಲಿಕೆ ಬಳಿ ಮಾಹಿತಿಯೇ ಇಲ್ಲ

ಮೈಸೂರು: ಏಕಬಳಕೆ ಪ್ಲಾಸ್ಟಿಕ್‌ನ ಉತ್ಪಾದನೆ, ಸಂಗ್ರಹಣೆ, ವಿತರಣೆ ಮತ್ತು ಬಳಕೆಯನ್ನು ಸಂಪೂರ್ಣವಾಗಿ...

Related Articles

Popular Categories

error: Content is protected !!