ಬೆಂಗಳೂರು; ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಪೈಕಿ ಮೃತಪಟ್ಟ ಮಹಿಳೆಯರ ಖಾತೆಗೂ ಜಮೆ ಆಗಿದೆ ಎನ್ನಲಾಗಿದ್ದ ಒಟ್ಟು 117 ಕೋಟಿ ರು ಪೈಕಿ ಒಟ್ಟಾರೆ 39.70 ಕೋಟಿ ವಾಪಸ್ ಬಂದಿದ್ದರೂ ಸಹ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್ ಎಂ ರೇವಣ್ಣ ಅವರು 30 ಕೋಟಿ ಮಾತ್ರ ವಾಪಸ್ ಬಂದಿದೆ ಎಂದು ನೀಡಿರುವ ಹೇಳಿಕೆಯು ಚರ್ಚೆಗೆ ಗ್ರಾಸವಾಗಿದೆ.
ಗೃಹಲಕ್ಷ್ಮಿ ಯೋಜನೆಯೊಂದರಲ್ಲೇ 5,000 ಕೋಟಿ ರು ಅವ್ಯವಹಾರವಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿರುವ ನಡುವೆಯೇ ವಾಪಸ್ ಬಂದಿರುವ ಮೊತ್ತಕ್ಕೆ ಸಂಬಂಧಿಸಿದಂತೆ ರೇವಣ್ಣ ಅವರು ನೀಡಿರುವ ಹೇಳಿಕೆಯಲ್ಲಿನ ಅಂಕಿ ಅಂಶಗಳಿಗೂ ಸರ್ಕಾರಿ ಲೆಕ್ಕ ಶೀರ್ಷಿಕೆಯಲ್ಲಿನ ಅಂಕಿ ಅಂಶಗಳ ಮಧ್ಯೆ ವ್ಯತ್ಯಾಸ ಕಂಡು ಬಂದಿದೆ.
ಇದಕ್ಕೆ ಸಂಬಂಧಿಸಿದಂತೆ ದಿ ಫೈಲ್ ಗೆ ಸರ್ಕಾರಿ ಅಂಕಿ ಅಂಶ ಮತ್ತು ಜಿಲ್ಲಾವಾರು ಎಷ್ಟೆಷ್ಟು ಹಣ ವಾಪಸ್ ಬಂದಿದೆ ಎಂಬ ಮಾಹಿತಿಯೂ ಸಹ ಲಭ್ಯವಾಗಿದೆ.
ಸರ್ಕಾರದ ಲೆಕ್ಕ ಶೀರ್ಷಿಕೆ ಪ್ರಕಾರ 2026ರ ಆಗಸ್ಟ್ 8ರ ಅಂತ್ಯಕ್ಕೆ ಒಟ್ಟಾರೆ 39,70,64,699 ರು ವಾಪಸ್ ಬಂದಿದೆ. ಲೆಕ್ಕ ಶೀರ್ಷಿಕೆ 2235-02-911-0-140364ರ ಪ್ರಕಾಋ 34,61,29,245 ರು ಬಂದಿದ್ದರೇ ಹಳೆಯ ಲೆಕ್ಕ ಖಾತೆಯಲ್ಲಿ 5,09,35,454 ರು ಇತ್ತು. ಒಟ್ಟಾರೆ 39,70,64,699 ರು ವಾಪಸ್ ಬಂದಿದೆ.
ಆದರೆ 30 ಕೋಟಿ ಮಾತ್ರ ವಾಪಸ್ ಬಂದಿದೆ ಎಂದು ಎಚ್ ಎಂ ರೇವಣ್ಣ ಅವರು ಮಂಗಳೂರಿನಲ್ಲಿ ಹೇಳಿಕೆ ನೀಡಿದ್ದರು.

ಸರ್ಕಾರದ ಲೆಕ್ಕ ಶೀರ್ಷಿಕೆಗಳಲ್ಲಿ ಜಮೆಯಾಗಿರುವ ಮೊತ್ತ ಮತ್ತು ರೇವಣ್ಣ ಅವರು ನೀಡಿದ್ದ ಅಂಕಿ ಅಂಶದ ಮಧ್ಯೆ 9 ಕೋಟಿಯಷ್ಟು ವ್ಯತ್ಯಾಸವಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಜಿಲ್ಲಾವಾರು ವಾಪಸ್ ಬಂದಿರುವ ಮೊತ್ತದ ವಿವರ
ಬಳ್ಳಾರಿ ಜಿಲ್ಲೆಯಲ್ಲಿ 23,57,185.00 ರು., ಬೆಂಗಳೂರು ದಕ್ಷಿಣದಿಂದ 7,10,000 ರು., ಬೆಂಗಳೂರು ನಗರ ಜಿಲ್ಲೆಯಿಂದ 9,22,000.00 ರು., ಬೆಳಗಾವಿ ಜಿಲ್ಲೆಯಿಂದ 40,94,000 ರು ವಾಪಸ್ ಬಂದಿದೆ. ಬೀದರ್ನಿಂದ 11,07,000 ರು., ಚಿಕ್ಕಬಳ್ಳಾಪುರದಿಂದ 5,21,000 ರು., ಚಿಕ್ಕಮಗಳೂರು ಜಿಲ್ಲೆಯಲ್ಲಿ 6,78,000 ರು., ಚಿತ್ರದುರ್ಗದಿಂದ 3,46,700 ರು., ಧಾರವಾಡ ಜಿಲ್ಲೆಯಿಂದ 64,90,000 ರು ವಾಪಸ್ ಬಂದಿರುವುದು ತಿಳಿದು ಬಂದಿದೆ.
ಗದಗ್ ಜಿಲ್ಲೆಯಿಂದ 2,38,000 ರು., ಕಲ್ಬುರ್ಗಿ ಜಿಲ್ಲೆಯಿಂದ 6,35,000 ರು., ಹಾಸನ ಜಿಲ್ಲೆಯಿಂದ 21,55,378 ರು., ಹಾವೇರಿಯಿಂದ 34,977 ರು., ಕೋಲಾರ ಜಿಲ್ಲೆಯಿಂದ 1,70,000 ರು., ಮಂಗಳೂರಿನಿಂದ 60,83,200 ರು., ಮೈಸೂರಿನಿಂದ 39,73,351 ರು., ರಾಯಚೂರು ಜಿಲ್ಲೆಯಿಂದ 3,82,952 ರು., ಶಿವಮೊಗ್ಗ ಜಿಲ್ಲೆಯಿಂದ 3,15,952 ರು., ತುಮಕೂರು ಜಿಲ್ಲೆಯಿಂದ 17,25,910 ರು., ಉಡುಪಿಯಿಂದ 4,10, 000 ರು., ಉತ್ತರ ಕನ್ನಡದಿಂದ 18,04,484 ರು., ಯಾದಗಿರಿ ಜಿಲ್ಲೆಯಿಂದ 14,000 ರು ವಾಪಸ್ ಬಂದಿರುವುದು ಗೊತ್ತಾಗಿದೆ.

ಗೊತ್ತಿಲ್ಲದ ಜಿಲ್ಲೆಗಳಿಂದ 31,09,60,945.00 ರು ವಾಪಸ್ ಬಂದಿದೆ. 2235-02-911-0-140364 ಲೆಕ್ಕ ಶೀರ್ಷಿಕೆ ಪ್ರಕಾರ ಒಟ್ಟಾರೆ 34,61,29,245 ರು ವಾಪಸ್ ಬಂದಿದೆ. ಹಳೆಯ ಲೆಕ್ಕ ಶೀರ್ಷಿಕೆ ಪ್ರಕಾರ 5,09,35,454 ರು ಸೇರಿ ಒಟ್ಟಾರೆ ಸರ್ಕಾರದ ಲೆಕ್ಕ ಶೀರ್ಷಿಕೆಗೆ 39,70,64,699 ರು ವಾಪಸ್ ಬಂದಿರುವುದು ತಿಳಿದು ಬಂದಿದೆ.
ಅಫಜಲಪೂರ, ಅಳಂದ, ಚಿಂಚೋಳಿ, ಚಿತ್ತಾಪುರ, ಜೇವರ್ಗಿ, ಕಲ್ಬುರ್ಗಿ, ಕಾಳಗಿ, ಕಮಲಾಪೂರ, ಸೇಡಂ, ಶಹಾಬಾದ, ಯಡ್ರಾಮಿಯಲ್ಲಿ ಈ ಯೋಜನೆಯಡಿ ಒಟ್ಟಾರೆ ನೋಂದಾಯಿಸಿಕೊಂಡಿದ್ದ ಫಲಾನುಭವಿಗಳ ಪೈಕಿ 9,156 ಮಂದಿ ಮೃತಪಟ್ಟಿದ್ದರು. ಮರಣ ಹೊಂದಿದ ನಂತರವೂ ಈ ತಾಲೂಕುಗಳಲ್ಲಿ 3,820 ಮಂದಿ ಹೆಸರಿನ ಖಾತೆಗೆ ಹಣ ಪಾತಿಯಾಗಿತ್ತು. ಒಟ್ಟು 21,362 ಕಂತುಗಳಲ್ಲಿ ಒಟ್ಟಾರೆ 4.27 ಕೋಟಿಯಷ್ಟು ಹಣ ಪಾವತಿಯಾಗಿರುವುದು ಗೊತ್ತಾಗಿದೆ.

1,869 ಖಾತೆಗಳಿಂದ 2.14 ಕೋಟಿಯಷ್ಟು ಹಣವನ್ನು ವಾಪಸ್ ಪಡೆಯಲಾಗಿದೆ. ಈ ಪೈಕಿ 1,769 ಖಾತೆಗಳಿಂದ 2.45 ಕೋಟಿ ರು. ಕೆ 2 ಮೂಲಕ ಸರ್ಕಾರದ ಖಜಾನೆಗೆ ಜಮೆಯಾಗಿದೆ.1,948 ಖಾತೆಗಳಲ್ಲಿರುವ ಇನ್ನು 2.12 ಕೋಟಿಯಷ್ಟು ಜಮೆ ಮಾಡಲು ಬಾಕಿ ಇದೆ. 850 ಖಾತೆಗಳನ್ನು ಮುಕ್ತಾಯಗೊಳಿಸಿದೆ. ಇದರಲ್ಲಿ 81,50,000 ರು ಇತ್ತು. 694 ಖಾತೆಗಳಲ್ಲಿ ಶೂನ್ಯ ಬಾಕಿ ಇದೆ. 404 ಖಾತೆಗಳಿಂದ ಇನ್ನೂ 46.74 ಲಕ್ಷ ರು ವಾಪಸ್ ಪಡೆಯಬೇಕಿರುವುದು ತಿಳಿದು ಬಂದಿದೆ.

ಕರ್ನಾಟಕ ಗ್ರಾಮೀಣ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಜನರಲ್ ಪೋಸ್ಟ್ ಆಫೀಸ್, ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್, ಕೆನರಾ, ಯೂನಿಯನ್, ಇಂಡಸ್, ಬ್ಯಾಂಕ್ ಆಫ್ ಬರೋಡ, ಕಲ್ಬುರ್ಗಿ ಯಾದಗಿರಿ ಡಿಸಿಸಿ, ಬ್ಯಾಂಕ್ ಆಫ್ ಮಹಾರಾಷ್ಟ್ರ, ಪಂಜಾಬ್ ನ್ಯಾಷನಲ್, ಏರ್ಟೆಲ್ ಪೇಮೆಂಟ್ಸ್ ಬ್ಯಾಂಕ್, ಇಂಡಿಯನ್, ಎಚ್ಡಿಎಫ್ಸಿ, ಫಿನೋ ಪೇಮೆಂಟ್ಸ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಆಕ್ಸಿಸ್, ಕೋಟಕ್ ಮಹೀಂದ್ರಾ, ಬೀದರ್ ಡಿಸಿಸಿ, ಯುಕೋ, ಸುಕೋ, ದಿ ಕ್ಯಾಥೋಲಿಕ್ ಸಿರಿಯಾನ್ ಬ್ಯಾಂಕ್ಗಳಲ್ಲಿ ಫಲಾನುಭವಿಗಳು ಖಾತೆ ಹೊಂದಿರುವುದು ಗೊತ್ತಾಗಿದೆ.

ಕಲ್ಬುರ್ಗಿ ಜಿಲ್ಲೆಯೊಂದರಲ್ಲೇ 2023ರ ಆಗಸ್ಟ್ನಿಂದ 2026ರ ಮೇ ತಿಂಗಳ ಅಂತ್ಯಕ್ಕೆ ಒಟ್ಟಾರೆ 3,186.06 ಕೋಟಿಯಷ್ಟು ಹಣ ಪಾವತಿಯಾಗಿರುವುದು ತಿಳಿದು ಬಂದಿದೆ.
ಒಂದೇ ತಿಂಗಳಲ್ಲಿ ಒಂದೇ ಫಲಾನುಭವಿಗೆ ಒಂದಕ್ಕಿಂತ ಹೆಚ್ಚು ಖಾತೆಗೆ ಹಣ ಜಮೆಯಾಗಿಲ್ಲ ಎಂದು ಸರ್ಕಾರವು ಸಿಎಜಿಗೆ ಸ್ಪಷ್ಟೀಕರಣ ನೀಡಿತ್ತು.
ಗೃಹ ಲಕ್ಷ್ಮಿ ಯೋಜನೆಗೆ ಆರ್ಹರಾಗಿದ್ದ ಒಟ್ಟು ಫಲಾನುಭವಿಗಳಲ್ಲಿ ಮೃತ ಫಲಾನುಭವಿಗಳಿಗೆ ಹಣ ಪಾವತಿಯಾಗುತ್ತಿದೆ ಎಂಬ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆಯು ನೀಡಿರುವ ಅಂಕಿ ಅಂಶಗಳಿಗೂ ರಾಜ್ಯಮಟ್ಟದ ಬ್ಯಾಂಕ್ಗಳ ಸಮಿತಿ (ಎಸ್ಎಲ್ಬಿಸಿ) ತುಸು ವ್ಯತ್ಯಾಸ ಕಂಡುಬಂದಿತ್ತು.
ಮೃತ ಫಲಾನುಭವಿಗಳಿಗೂ ಹಣ ಪಾವತಿಯಾಗಿರುವುದನ್ನು ಪತ್ತೆ ಹಚ್ಚಿದ್ದ ಸಿಎಜಿಯನ್ನೂ ಮಹಿಳಾ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಆಡಿದ್ದ ಮಾತುಗಳು ಚರ್ಚೆಗೆ ಗ್ರಾಸವಾಗಿತ್ತು. ಈ ಕುರಿತು ದಿ ಫೈಲ್ ವರದಿ ಪ್ರಕಟಿಸಿತ್ತು.




