Thursday | April 2, 2026 |

ಕೆಎಎಸ್ 2011ರ ನೇಮಕಾತಿ ಅಕ್ರಮದ ತನಿಖಾ ವರದಿಗೆ ಕೊನೆ ಮೊಳೆ; ವಿಚಾರಣೆಯಿಲ್ಲದೇ ಪ್ರಕರಣ ಹಿಂಪಡೆಯುವ ಪ್ರಕ್ರಿಯೆಗೆ ಚಾಲನೆ

ಬೆಂಗಳೂರು; 2011ನೇ ಸಾಲಿನ ಗೆಜೆಟೆಡ್‌ ಪ್ರೊಬೆಷನರ್ಸ್ ಆಯ್ಕೆ ಪ್ರಕ್ರಿಯೆಯಲ್ಲಿ ಅವ್ಯವಹಾರಗಳಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಕರ್ನಾಟಕ ಲೋಕಸೇವಾ ಆಯೋಗದ ಅಂದಿನ ಅಧ್ಯಕ್ಷ ಗೋನಾಳ್‌ ಭೀಮಪ್ಪ ಒಳಗೊಂಡು 9 ಮಂದಿ ಮಾಜಿ ಸದಸ್ಯರ ವಿರುದ್ಧದ ಪ್ರಕರಣವನ್ನು ನ್ಯಾಯಾಲಯದಿಂದ ಹಿಂಪಡೆಯುವ ಪ್ರಕ್ರಿಯೆಗಳು ಆರಂಭವಾಗಿವೆ.

ಆಯೋಗದ ಹಿಂದಿನ ಅಧ್ಯಕ್ಷ ಹಾಗೂ 9 ಮಂದಿ ಸದಸ್ಯರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಸಿಐಡಿ ಪ್ರಸ್ತಾವನೆಯನ್ನು ಹಿಂದಿನ ಬಿಜೆಪಿ ಸರ್ಕಾರ ಮತ್ತು ಹಾಲಿ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿನ ಸಚಿವ ಸಂಪುಟವು ಈಗಾಗಲೇ ತಿರಸ್ಕರಿಸಿದೆ. ಇದರ ಮುಂದುವರೆದ ಭಾಗವಾಗಿ ನ್ಯಾಯಾಲಯದಲ್ಲಿ ದಾಖಲಾಗಿರುವ ದಾಖಲಾಗಿರುವ ಅಪರಾಧ (ಸಂಖ್ಯೆ 28/2013) ಪ್ರಕರಣವನ್ನು ಹಿಂಪಡೆಯುವ ಪ್ರಕ್ರಿಯೆಗಳಿಗೆ ಬಿರುಸಿನ ಚಾಲನೆ ಸಿಕ್ಕಿದೆ.

ಈ ಪ್ರಕರಣ ಕುರಿತು  508 ಪುಟಗಳ ಸಮಗ್ರ ಕಡತವನ್ನು ‘ದಿ ಫೈಲ್‌’  ಆರ್‍‌ಟಿಐ ಅಡಿಯಲ್ಲಿ ಪಡೆದುಕೊಂಡಿದೆ.

ಕರ್ನಾಟಕ ಲೋಕಸೇವಾ ಆಯೋಗವು ಕಳೆದ ವರ್ಷ ನಡೆಸಿದ್ದ ಗೆಜೆಟೆಡ್ ಪ್ರೊಬೇಷನರ್ಸ್‌ ಹುದ್ದೆಗಳ ನೇಮಕಾತಿಯ ಮುಖ್ಯ ಪರೀಕ್ಷೆಯಲ್ಲಿಯೂ ಅಕ್ರಮ ನಡೆದಿದೆ ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ. ಈ ಪ್ರಕರಣ ಸಂಬಂಧ ಪರಿಶೀಲನೆ ನಡೆಸಲು ಸದನ ಸಮಿತಿಯನ್ನೂ ರಚಿಸಲಾಗಿದೆ. ಈ ಬೆಳವಣಿಗೆ ಬೆನ್ನಲ್ಲೇ 2011ನೇ ಸಾಲಿನ ಗೆಜೆಟೆಡ್‌ ಪ್ರೊಬೆಷನರ್ಸ್ ಆಯ್ಕೆ ಪ್ರಕ್ರಿಯೆಯಲ್ಲಿನ ಅಕ್ರಮ ಅವ್ಯವಹಾರಗಳ ಕುರಿತಾದ ಪ್ರಕರಣವನ್ನೇ ನ್ಯಾಯಾಲಯದಿಂದ ಹಿಂಪಡೆಯಲು ಮುಂದಾಗಿರುವುದು ಮುನ್ನೆಲೆಗೆ ಬಂದಿದೆ.

ವಿಶೇಷವೆಂದರೇ ಸಿಐಡಿ ತನಿಖಾ ಸಂಸ್ಥೆಯು ಈ ಪ್ರಕರಣದ ಕುರಿತು ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿಲ್ಲ. ಹೊಸ ಅಂತಿಮ ವರದಿ ಸಲ್ಲಿಸದ ಕಾರಣ ಅಭಿಯೋಜನೆಯಿಂದ ಹಿಂಪಡೆಯುವ ಕುರಿತು ಪ್ರಾಸಿಕ್ಯೂಷನ್ ಇಲಾಖೆಯೂ ಸಹ ಯಾವುದೇ ಅಭಿಪ್ರಾಯ ನೀಡಲು ಅವಕಾಶವಿಲ್ಲವೆಂದು ಹೇಳಿತ್ತು. ಅಂತಿಮ ವರದಿಗೂ ಕಾಯದೇ ಈ ಪ್ರಕರಣವನ್ನು ನ್ಯಾಯಾಲಯದಿಂದ ಹಿಂಪಡೆಯಲು ಮುಂದಾಗಿದೆ.

ಅಲ್ಲದೇ ರಾಜ್ಯ ಸರ್ಕಾರವು ಸಿಐಡಿ ಪ್ರಸ್ತಾವನೆಯನ್ನು ಈಗಾಗಲೇ ತಿರಸ್ಕರಿಸಿರುವ ಕಾರಣ ಈ ಪ್ರಸ್ತಾವನೆಯನ್ನು ರಾಷ್ಟ್ರಪತಿಗಳ ಅನುಮೋದನೆಗೆ ಕಳಿಸಲು ರಾಜ್ಯಪಾಲರೂ ಸಹ ಅನುಮೋದಿಸಿಲ್ಲ. ಇದನ್ನೇ ಮುಂದಿರಿಸಿಕೊಂಡಿರುವ ಸಿದ್ದರಾಮಯ್ಯ ಅವರು ತಮ್ಮ ಎರಡನೇ ಅವಧಿಯಲ್ಲಿ ಆಯೋಗದ ಅಂದಿನ ಅಧ್ಯಕ್ಷರು ಮತ್ತು 9 ಮಂದಿ ಮಾಜಿ ಸದಸ್ಯರನ್ನು ಸಿಐಡಿ ವಿಚಾರಣೆಗೊಳಪಡಿಸುವ ಪ್ರಸ್ತಾವವನ್ನೇ ತಿರಸ್ಕರಿಸಿದ್ದಾರೆ. ಸಿದ್ದರಾಮಯ್ಯ ಅವರ ಈ ನಡೆಯು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಂತಾಗಿದೆ.

 

 

2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ನೇಮಕಾತಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಡಾ ಮೈತ್ರಿ ಎಂಬುವರು 2013ರ ಮೇ 28ರಂದು ಅಂದಿನ ರಾಜ್ಯದ ಅಡ್ವೋಕೇಟ್ ಜನರಲ್ ಪ್ರೊ ರವಿವರ್ಮ ಕುಮಾರ್ ಅವರಿಗೆ ದೂರು ನೀಡಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ತಮ್ಮ ಮೊದಲ ಅವಧಿಯಲ್ಲಿ ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ನೀಡಲಾಗಿತ್ತು.

ಈ ಪ್ರಕರಣದ ಕುರಿತು ತನಿಖೆ ನಡೆಸಿದ್ದ ಸಿಐಡಿಯು, ಗೋನಾಳ್ ಭೀಮಪ್ಪ ಸೇರಿದಂತೆ ಆಯೋಗದ ಇನ್ನಿತರ ಸದಸ್ಯರ ವಿರುದ್ಧದ ಆರೋಪಗಳನ್ನು ತನಿಖೆ ಮೂಲಕ ಸಾಬೀತುಪಡಿಸಿತ್ತು. ಅಲ್ಲದೇ ಇವರೆಲ್ಲರನ್ನು ಅಭಿಯೋಜನೆಗೊಳಪಡಿಸಲು ರಾಷ್ಟ್ರಪತಿ ಅವರ ಅನುಮೋದನೆ ಪಡೆದು ಸಲ್ಲಿಸಬೇಕು ಎಂದು ಸಿಐಡಿಯು 2019ರ ಮೇ 28ರಂದೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು.

ಅದರಂತೆ ಕೇಂದ್ರ ಸರ್ಕಾರದ ಡಿಓಪಿಟಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಪ್ರಸ್ತಾವನೆಗೆ ರಾಜ್ಯಪಾಲರ ಅನುಮೋದನೆ ನಂತರ ಪ್ರಸ್ತಾವನೆಯನ್ನು ಸಲ್ಲಿಸಬೇಕು ಎಂದು ಭಾರತ ಸರ್ಕಾರವು 2021ರ ಜುಲೈ 28ರಂದು ರಾಜ್ಯ ಸರ್ಕಾರಕ್ಕೆ ಕಡತವನ್ನು ಹಿಂದಿರುಗಿಸಿತ್ತು. ಈ ಪ್ರಸ್ತಾವನೆಗೆ ರಾಜ್ಯಪಾಲರು ಸಹ ಅನುಮೋದಿಸಿಲ್ಲ.

2013ರಲ್ಲಿ ತನಿಖೆಗೆ ಆದೇಶ- 2025ರಲ್ಲಿ ಆದೇಶವೇ ರದ್ದು

2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್‌ಗಳ ಆಯ್ಕೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಕುರಿತು ಸಿಐಡಿಯಿಂದ ತನಿಖೆ ನಡೆಸಲು 2013ರ ಜೂನ್‌ 27ರಂದು ಆದೇಶ ಹೊರಡಿಸಿತ್ತು.

 

 

ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 1988ರ ಅನ್ವಯ ಪ್ರಕರಣದಲ್ಲಿ ಆರೋಪಿತರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ನಂತರ ಈ ಪ್ರಕರಣವನ್ನು 2013ರ ಜೂನ್‌ 27ರಂದು ಸಿಐಡಿಗೆ ವಹಿಸಿ ಆದೇಶ ಹೊರಡಿಸಿತ್ತು.

 

 

ಆದೇಶ ಹೊರಡಿಸಿ 12 ವರ್ಷಗಳ ನಂತರ ಈ ಆದೇಶವನ್ನು ರದ್ದುಗೊಳಿಸಲಾಗಿದೆ. ಈ ಪ್ರಕರಣದಲ್ಲಿ ಆರೋಪಿತ ಅಯೋಗದ ಅಂದಿನ ಅಧ್ಯಕ್ಷ ಗೋನಾಳ್ ಭೀಮಪ್ಪ ಮತ್ತು 9 ಮಂದಿ ಸದಸ್ಯರನ್ನು ವಿಚಾರಣೆಗೊಳಪಡಿಸಲು ಸಿಐಡಿ ಸಲ್ಲಿಸಿದ್ದ ಕೋರಿಕೆಯನ್ನು ತಿರಸ್ಕರಿಸಲು 2025ರ ಮೇ 22ರಂದು ನಡೆದ ಸಚಿವ ಸಂಪುಟವು ತೀರ್ಮಾನಿಸಿತ್ತು. ಈ ತೀರ್ಮಾನವನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಸಿಐಡಿ ಅಪರ ಪೊಲೀಸ್‌ ಮಹಾನಿರ್ದೇಶಕರಿಗೆ 2025ರ ಜೂನ್‌ 10ರಂದು ಮಾಹಿತಿ ಒದಗಿಸಿದ್ದರು. ಇದರ ಬೆನ್ನಲ್ಲೇ ಈ ಪ್ರಕರಣವನ್ನು ಸಿಐಡಿ ವಹಿಸಿ ಹೊರಡಿಸಿದ್ದ ಆದೇಶವನ್ನು ಒಳಾಡಳಿತ ಇಲಾಖೆಯು 2025ರ ಆಗಸ್ಟ್‌ 1ರಂದೇ ಹಿಂಡೆದು ಆದೇಶಿಸಿತ್ತು.

 

 

 

 

ಈ ಪ್ರಕರಣದ ಕುರಿತು ತನಿಖೆ ನಡೆಸುವ ಸಂಬಂಧ ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿ ರಾಜ್ಯದ ಅಡ್ವೋಕೇಟ್ ಜನರಲ್ ಆಗಿದ್ದ ಪ್ರೊ ರವಿವರ್ಮ ಕುಮಾರ್ ಅವರು ಈ ಪ್ರಕರಣವನ್ನು ಸಿಬಿಐ ವಹಿಸುವ ಮೂಲಕ ತನಿಖೆ ನಡೆಸಬೇಕು ಎಂದು ಅಭಿಪ್ರಾಯ ನೀಡಿದ್ದರು. ಆದರೆ ಅಂದು ಸಿದ್ದರಾಮಯ್ಯ ಅವರು ಈ ಪ್ರಕರಣವನ್ನು ಸಿಬಿಐಗೆ ವಹಿಸಿರಲಿಲ್ಲ. ಬದಲಿಗೆ ಸಿಐಡಿಗೆ ವಹಿಸಿ ಕೈ ತೊಳೆದುಕೊಂಡಿತ್ತು ಎಂಬುದು ಕಡತದಲ್ಲಿನ ದಾಖಲೆಯಿಂದ ತಿಳಿದು ಬಂದಿದೆ.

ರಾಜ್ಯದ ಹಿಂದಿನ ಅಡ್ವೋಕೇಟ್ ಜನರಲ್ ಅಭಿಪ್ರಾಯವೇನಿತ್ತು?

ಈ ಪ್ರಕರಣದ ಬಗ್ಗೆ ಡಾ ಮೈತ್ರಿ ಮತ್ತು ಗಂಗಾಧರಯ್ಯ ಎಂಬುವರು ನೇರವಾಗಿ ಅಂದು ಅಡ್ವೊಕೇಟ್ ಜನರಲ್ ಆಗಿದ್ದ ಪ್ರೊ ರವಿವರ್ಮ ಕುಮಾರ್ ಅವರಿಗೆ 2013ರ ಮೇ 24 ಮತ್ತು ಮೇ 27ರಂದು ಮನವಿ ಸಲ್ಲಿಸಿದ್ದರು.

 

 

ಈ ಮನವಿ ಮತ್ತು ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದ್ದ ರವಿವರ್ಮ ಕುಮಾರ್ ಅವರು ಸರ್ಕಾರಕ್ಕೆ ಕಾನೂನು ಅಭಿಪ್ರಾಯವನ್ನು ನೀಡಿದ್ದರು.

 

 

ಸಂದರ್ಶನಕ್ಕೆ ಕರೆ ನೀಡುವುದು ಅಥವಾ ಲೋಕ ಸೇವಾ ಆಯೋಗದ ಆಯ್ಕೆ ಪ್ರಕ್ರಿಯೆ ಯಾವುದೂ ಅಭ್ಯರ್ಥಿಗೆ ನೇಮಕಾತಿಯ ಹಕ್ಕನ್ನು ನೀಡುವುದಿಲ್ಲ. ಸರ್ಕಾರವು, ಆಯೋಗ ಸಲ್ಲಿಸಿದ ಪಟ್ಟಿಯನ್ನು ತಿರಸ್ಕರಿಸಲು ಅಥವಾ ಅಂಗೀಕರಿಸದಿರಲು ಅಧಿಕಾರ ಹೊಂದಿದೆ. ಆದರೆ ಈ ರೀತಿಯ ತಿರಸ್ಕಾರವು, ಪಟ್ಟಿಯನ್ನು ಪಡೆದ ಬಳಿಕ ಸಮಂಜಸವಾದ ಅವಧಿಯೊಳಗೆ ಮತ್ತು ಕಾರಣಗಳನ್ನು ದಾಖಲಿಸಿ ಮಾಡಬೇಕು. ಸರ್ಕಾರವು ಪಟ್ಟಿಯ ಒಂದು ಭಾಗವನ್ನು ಮಾತ್ರ ಅಂಗೀಕರಿಸಿ ಉಳಿದುದನ್ನು ತಿರಸ್ಕರಿಸಲು ಸಾಧ್ಯವಿಲ್ಲ ಎಂದು ತಮ್ಮ ಅಭಿಪ್ರಾಯದಲ್ಲಿ ವಿವರಿಸಿದ್ದರು.

 

 

ಆಯ್ಕೆ ಪ್ರಕ್ರಿಯೆಯಲ್ಲಿ ಮೂಲಭೂತ ವಿಧಾನಾತ್ಮಕ ನಿಯಮಗಳ ಉಲ್ಲಂಘನೆ, ಅಥವಾ ಭ್ರಷ್ಟಾಚಾರ, ಪಕ್ಷಪಾತ ಅಥವಾ ಕುಟುಂಬಪ್ರೀತಿ ಇರುವುದರಿಂದ ಆಯ್ಕೆ ಪ್ರಕ್ರಿಯೆ ಹಾನಿಗೊಳಗಾಗಿದೆ ಎಂದು ತೃಪ್ತಿಯಾದರೆ ಸರ್ಕಾರವು ಸಂಪೂರ್ಣ ಆಯ್ಕೆ ಪಟ್ಟಿಯನ್ನು ತಿರಸ್ಕರಿಸಬಹುದು ಎಂದು ಸಲಹೆ ನೀಡಿದ್ದರು.

 

 

ವ್ಯಾಪಕ ಭ್ರಷ್ಟಾಚಾರದ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ, ಸರ್ಕಾರವು ಈ ಆರೋಪಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕಾಗುತ್ತದೆ. ಈ ಎಲ್ಲಾ ಆರೋಪಗಳ ಸತ್ಯಾಸತ್ಯತೆ ಪರಿಶೀಲಿಸಲು ತನಿಖೆ ನಡೆಸಬೇಕು. ಇವು ಕೇವಲ ಆರೋಪಗಳಷ್ಟೇ ಹೊರತು ಯಾವುದೇ ಲೋಪ ಅಥವಾ ಆಯೋಗದ ದೃಢಸಾಕ್ಷ್ಯವಲ್ಲ ಎಂಬುದನ್ನು ನೆನಪಿನಲ್ಲಿ ಇಡಬೇಕು. ಮತ್ತು ಈ ಆರೋಪಗಳನ್ನೇ ಏಕೈಕ ಆಧಾರವಾಗಿ ತೆಗೆದುಕೊಂಡು ಸರ್ಕಾರವು ಅಭಿಪ್ರಾಯ ರೂಪಿಸುವುದು ಅನುಮತಿಸಲ್ಪಡುವುದಿಲ್ಲ.

ಆದರೆ, ಈಗ ಸರ್ಕಾರದ ಮುಂದೆ ಲಭ್ಯವಿರುವ ವಸ್ತುನಿಷ್ಠ ಮಾಹಿತಿಯಿಂದ ನೋಡಿದರೆ, ಪಟ್ಟಿಯನ್ನು ತಡೆಹಿಡಿದು ಈ ಆರೋಪಗಳ ಬಗ್ಗೆ ಸಮಗ್ರ ತನಿಖೆ/ಪರಿಶೀಲನೆ ನಡೆಸಲು ಹಾಗೂ ಆಯ್ಕೆ ಪ್ರಕ್ರಿಯೆ ಸಂಪೂರ್ಣವಾಗಿ ರದ್ದುಪಡಿಸಬೇಕಾದಷ್ಟರ ಮಟ್ಟಿಗೆ ಕಳಂಕಿತವಾಗಿದೆಯೇ ಎಂದು ಪರಿಶೀಲಿಸಲು ಮೇಲ್ನೋಟಕ್ಕೆ ಈ ಪ್ರಕರಣವು ಅರ್ಹವಾಗಿದೆ. ಕೆಲ ಅಭ್ಯರ್ಥಿಗಳ ದುರುಳ ಕೃತ್ಯಗಳಿಂದ ಸತ್ಯನಿಷ್ಠ ಮತ್ತು ಅರ್ಹ ಅಭ್ಯರ್ಥಿಗಳು ಹಾನಿಗೊಳಗಾಗಬಾರದು ಎಂಬುದನ್ನು ಖಚಿತಪಡಿಸಬೇಕು ಎಂದು ಅಭಿಪ್ರಾಯಿಸಿದ್ದರು.

ಕಳಂಕಿತ ಪ್ರಕರಣಗಳನ್ನು ಕಳಂಕಿತವಲ್ಲದ ಪ್ರಕರಣಗಳಿಂದ ಬೇರ್ಪಡಿಸುವುದು ಅಸಾಧ್ಯ ಅಥವಾ ಅತೀ ಕಷ್ಟಕರವೆಂದು ಸರ್ಕಾರಕ್ಕೆ ಕಂಡುಬಂದರೆ, ಸಂಪೂರ್ಣ ಆಯ್ಕೆ ಪಟ್ಟಿಯನ್ನು ರದ್ದುಪಡಿಸಬಹುದು. ಆಯ್ಕೆ ಪಟ್ಟಿಯನ್ನು ಪರಿಶೀಲಿಸುವ ಸಂದರ್ಭದಲ್ಲಿ ಕಳಂಕಿತ ಅಭ್ಯರ್ಥಿಗಳನ್ನು ಕಳಂಕಿತವಲ್ಲದ ಅಭ್ಯರ್ಥಿಗಳಿಂದ ಬೇರ್ಪಡಿಸಲು ಎಲ್ಲಾ ಪ್ರಯತ್ನಗಳನ್ನೂ ಮಾಡಬೇಕು ಎಂದು ಸಲಹೆ ನೀಡಿದ್ದರು.

ಸಿಬಿಐಗೇಕೆ ಪ್ರಕರಣ ನೀಡಲಿಲ್ಲ?

ಈ ಹಿನ್ನೆಲೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ತಡೆಹಿಡಿಯಬೇಕು. ಲಿಖಿತ ಪರೀಕ್ಷೆಗಳು ಮತ್ತು ಮೌಖೀಕ ಸಂದರ್ಶನ ನಡೆಸುವ ವಿಧಾನವನ್ನು ಒಳಗೊಂಡಂತೆ, ಸಂಪೂರ್ಣ ಆಯ್ಕೆ ಪ್ರಕ್ರಿಯೆಯ ವಿರುದ್ಧ ಮಾಡಲಾದ ಆರೋಪಗಳ ಕುರಿತು ಸಮಗ್ರ ತನಿಖೆ/ಪರಿಶೀಲನೆ ನಡೆಸುವಂತೆ ನಿರ್ದೇಶಿಸಬೇಕು. ಅದು ವಿಶ್ವಾಸಾರ್ಹ ತನಿಖಾ ಸಂಸ್ಥೆಯಾದ ಕೇಂದ್ರ ತನಿಖಾ ದಳ ಮೂಲಕ ತನಿಖೆ ನಡೆಸಬೇಕು ಎಂದು ಅಭಿಪ್ರಾಯ ನೀಡಿದ್ದರು.

 

 

ಈ ಮೇಲ್ಕಂಡ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಇಂತಹ ತನಿಖೆಯ ಫಲಿತಾಂಶದ ಆಧಾರದ ಮೇಲೆ ಪಟ್ಟಿಯನ್ನು ಅಂಗೀಕರಿಸುವುದು ಅಥವಾ ಅಂಗೀಕರಿಸದಿರುವುದನ್ನು ನಿರ್ಧರಿಸಬೇಕು. ಡಾ. ಮೈತ್ರಿ ಅವರು ವಿವರಗಳನ್ನು ಇಷ್ಟವಿಲ್ಲದೇ ವಿವರಗಳನ್ನು ನೀಡಿದ್ದಾರೆ. ಸರ್ಕಾರವು ಅವರಿಗೆ ಸಂಪೂರ್ಣ ರಕ್ಷಣೆಯನ್ನು ಒದಗಿಸುತ್ತದೆ ಎಂದು ನಾನು ಭರವಸೆ ನೀಡಿದ ನಂತರ ಅವರು ಎಲ್ಲಾ ವಿವರಗಳನ್ನು ಹೊರಹಾಕಿ, ತಮ್ಮ ಲಿಖಿತ ಪ್ರತಿನಿಧಿಯನ್ನು ಸಲ್ಲಿಸಲು ಸಮ್ಮತಿಸಿದರು ಎಂದು ಅಭಿಪ್ರಾಯದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

ಡಾ. ಮೈತ್ರಿ ಅವರು ತಮ್ಮ ವಿರುದ್ಧ ಆರೋಪ ಮಾಡಿರುವ ವ್ಯಕ್ತಿಗಳಿಂದ ತಮ್ಮ ಜೀವ ಮತ್ತು ಸ್ವಾತಂತ್ರ್ಯಕ್ಕೆ ಅಪಾಯವಿದೆ ಎಂದು ಭಯಪಡುತ್ತಿದ್ದಾರೆ. ಆದ್ದರಿಂದ, ಸರ್ಕಾರವು ತಕ್ಷಣವೇ ಡಾ. ಮೈತ್ರಿ ಅವರಿಗೆ ಸಂಪೂರ್ಣ ಪೊಲೀಸ್ ರಕ್ಷಣೆಯನ್ನು ನೀಡಬೇಕು ಎಂದು ರಾಜ್ಯ ಅಡ್ವೋಕೇಟ್ ಜನರಲ್ ಆಗಿದ್ದ ಪ್ರೊ ರವಿವರ್ಮ ಕುಮಾರ್ ಅವರು ಸರ್ಕಾರಕ್ಕೆ 2013ರ ಜೂನ್‌ 4ರಂದು ಶಿಫಾರಸ್ಸು ಮಾಡಿದ್ದರು.

ಆದರೆ ಸಿದ್ದರಾಮಯ್ಯ ಅವರು ತಮ್ಮ ಮೊದಲ ಅವಧಿಯಲ್ಲಿ ಪ್ರೊ ರವಿವರ್ಮ ಕುಮಾರ್ ಅವರು ಮಾಡಿದ್ದ ಶಿಫಾರಸ್ಸಿನಂತೆ ಪ್ರಕರಣವನ್ನು ಸಿಬಿಐಗೆ ನೀಡಿರಲಿಲ್ಲ. ಬದಲಿಗೆ ಸಿಐಡಿಗೆ ವಹಿಸಿದ್ದರು.

ಸಿಐಡಿ ತನಿಖೆಯ ಸಾರಾಂಶವೇನು?

ಇಡೀ ಪ್ರಕರಣವನ್ನು ಅಮೂಲಾಗ್ರವಾಗಿ ತನಿಖೆ ನಡೆಸಿದ್ದ ಸಿಐಡಿಯು ತನ್ನ ಮಧ್ಯಂತರ ವರದಿಯನ್ನು 2013ರ ಸೆ.10ರಂದು ಸರ್ಕಾರಕ್ಕೆ ನೀಡಿತ್ತು.

 

 

ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿ ದುರುದ್ದೇಶ

ವಿವಿಧ ಆರೋಪಗಳ ಬಗ್ಗೆ ನಡೆಸಿದ ಸಮಗ್ರ ತನಿಖೆ ಹಾಗೂ ತನಿಖಾ ತಂಡದ ಗಮನಕ್ಕೆ ಬಂದ ಇತರ ಅನೇಕ ಅಕ್ರಮಗಳನ್ನು ಪರಿಗಣಿಸಿದಾಗ, ಮುಖ್ಯ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆ ಮತ್ತು ವ್ಯಕ್ತಿತ್ವ ಪರೀಕ್ಷೆಗಳು ಹಾನಿಗೊಳಗಾಗಿವೆ ಎಂದು ನಿರ್ಣಯಿಸಲು ಸಾಧ್ಯವಾಗಿದೆ ಎಂದು ಸಿಐಡಿ ತನಿಖಾ ವರದಿಯಲ್ಲಿ ವಿವರಿಸಲಾಗಿದೆ.

 

 

ಮುಖ್ಯ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿ, ವಿಶ್ವವಿದ್ಯಾಲಯಗಳು/ಅಧಿಕಾರಿಗಳು ಒದಗಿಸಿದ ಪಟ್ಟಿಯಿಂದ ಹೊರತಾಗಿ ಪರೀಕ್ಷಕರ ಆಯ್ಕೆ ಮಾಡಿರುವುದು, ಮೌಲ್ಯಮಾಪನ ಪ್ರಕ್ರಿಯೆಯನ್ನು ತುರ್ತಾಗಿ ನಡೆಸಿರುವುದು, ನಿರ್ದಿಷ್ಟ ವಿಷಯದ ಮೌಲ್ಯಮಾಪಕರು ಲಭ್ಯವಿದ್ದರೂ ಅವರನ್ನು ಕರೆಯದೆ ಇರುವುದು, ಅಂಕಪಟ್ಟಿಗಳಲ್ಲಿ ದಾಖಲಾತಿಗಳನ್ನು ಮರು ಬರೆದಿರುವುದು, ಟ್ಯಾಬ್ಯುಲೇಷನ್/ಮರು-ಒಟ್ಟು ಮಾಡುವ ಸಂದರ್ಭದಲ್ಲಿ ನಡೆದ ಅಕ್ರಮಗಳು, ಮೌಲ್ಯಮಾಪಕರು ಮತ್ತು ಅಭ್ಯರ್ಥಿಗಳ ನಡುವೆ ಅನುಮಾನಾಸ್ಪದ ಸಂಪರ್ಕಗಳು ಇತ್ಯಾದಿ ವ್ಯತ್ಯಾಸಗಳು ಮತ್ತು ದುರುದ್ದೇಶಗಳು ಕಂಡುಬಂದಿವೆ ಎಂದು ಸಿಐಡಿ ತನಿಖಾ ವರದಿಯಲ್ಲಿ ವಿವರಿಸಿದೆ.

 

 

ಈ ಮೇಲಿನ ವಿಷಯಗಳ ಜೊತೆಗೆ, ಕೆಪಿಎಸ್ಸಿ ನಡೆಸಿದ ಮೌಲ್ಯಮಾಪನ ಮತ್ತು ತನಿಖೆಯ ವೇಳೆ ಪರಿಣಿತರಿಂದ ಮಾಡಲಾದ ಮಾದರಿ ಪರೀಕ್ಷಾ ಮೌಲ್ಯಮಾಪನದಲ್ಲಿ ಕಂಡುಬಂದ ಅಂಕಗಳಲ್ಲಿ ವ್ಯತ್ಯಾಸಗಳು ಕಂಡು ಬಂದಿವೆ. ಸಂಪೂರ್ಣ ಪ್ರಕ್ರಿಯೆಯನ್ನು ಕೆಲ ಅನರ್ಹ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ನಡೆಸಲಾಗಿದೆ ಎಂಬುದನ್ನು ಸೂಚಿಸುತ್ತವೆ. ಇದರಿಂದ ಅರ್ಹ ಮತ್ತು ಮೇರು ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಸಿಐಡಿ ತನಿಖಾ ವರದಿಯಲ್ಲಿ ಹೇಳಲಾಗಿದೆ.

 

 

‘ಆದ್ದರಿಂದ, ಮುಖ್ಯ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆ ಅನ್ಯಾಯಕರ ಹಾಗೂ ಅಸಮರ್ಪಕ ರೀತಿಯಲ್ಲಿ ನಡೆದಿದೆ. ಸಂಪೂರ್ಣ ಪ್ರಕ್ರಿಯೆ ಹಾನಿಗೊಳಗಾಗಿದೆ ಎಂದು ಕಂಡುಬರುತ್ತದೆ. ಹೀಗಾಗಿ, ಅಗತ್ಯ ಮಾರ್ಗಸೂಚಿಗಳು ಮತ್ತು ಭದ್ರತಾ ಕ್ರಮಗಳನ್ನು ಜಾರಿಗೆ ತರಬೇಕು. ಮುಖ್ಯ ಪರೀಕ್ಷೆಯ ಮೌಲ್ಯಮಾಪನ ಪ್ರಕ್ರಿಯೆಯನ್ನು ಮತ್ತೊಮ್ಮೆ ನಡೆಸಬೇಕು ಎಂದು ಅಭಿಪ್ರಾಯಿಸಲಾಗಿದೆ,’ ಎಂದು ಸಿಐಡಿ ತನಿಖಾ ವರದಿಯಲ್ಲಿ ವಿವರಿಸಲಾಗಿದೆ.

ವ್ಯವಸ್ಥಿತ ದುರುಪಯೋಗ

ವ್ಯಕ್ತಿತ್ವ ಪರೀಕ್ಷೆಗಳು ಅತ್ಯಂತ ನಿರ್ಲಕ್ಷ್ಯದಿಂದ ನಡೆಸಲ್ಪಟ್ಟಿವೆ; ಅವು ಕೇವಲ ಒಂದು ರೂಪಕ ಮಾತ್ರ ಎಂಬಂತೆ ವರ್ತಿಸಲಾಗಿದೆ. ಮತ್ತು ನೀಡಬೇಕಾದ ಅಂಕಗಳು ಈಗಾಗಲೇ ಪೂರ್ವ ನಿರ್ಧಾರಿತವಾಗಿದ್ದವು. ಸಂಪೂರ್ಣ ವ್ಯಕ್ತಿತ್ವ ಪರೀಕ್ಷಾ ಪ್ರಕ್ರಿಯೆ ಅಧ್ಯಕ್ಷರು ಮತ್ತು ಸದಸ್ಯರ ವ್ಯವಸ್ಥಿತ ದುರುಪಯೋಗದಿಂದ ಸಂಪೂರ್ಣ ಹಾನಿಗೊಳಗಾಗಿದೆ ಎಂದು ಸಿಐಡಿ ತನಿಖಾ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

 

 

1083 ಅಭ್ಯರ್ಥಿಗಳಿಗೆ ಒಂದೇ ಅಂಕ

ಸದಸ್ಯರು ಸಂದರ್ಶನಗಳನ್ನು ಕೇವಲ ವಿಧಿವಿಧಾನವಾಗಿ ನಡೆಸಿ, ನಂತರ ಚರ್ಚೆಯ ಮೇಲೆ ಪೂರ್ವನಿಗದಿತ ಅಂಕಗಳನ್ನು ನೀಡಿದ್ದಾರೆ. ಇಬ್ಬರು ಅಭ್ಯರ್ಥಿಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ 1083 ಅಭ್ಯರ್ಥಿಗಳಿಗೆ ಒಂದೇ ಅಂಕಗಳನ್ನು ನೀಡಲಾಗಿದೆ. ಕೆಲ ಸದಸ್ಯರು ಸಂದರ್ಶನದ ವೇಳೆ ಹಾಜರಿರದಿದ್ದರೂ ಕೂಡ ಅಭ್ಯರ್ಥಿಗಳಿಗೆ ಅಂಕಗಳನ್ನು ನೀಡಿದ್ದಾರೆ. ಆದ್ದರಿಂದ, ವ್ಯಕ್ತಿತ್ವ ಪರೀಕ್ಷೆಯ ಪ್ರಕ್ರಿಯೆಯಲ್ಲಿ ನಡೆದ ಅಕ್ರಮಗಳು, ಸಂಪೂರ್ಣವಾಗಿ ಅಂಗೀಕಾರಾರ್ಹವಲ್ಲದ ಹಾಗೂ ಅಸಾಧ್ಯವಾಗುವಂತೆ ಮಾಡಿವೆ. ಹೀಗಾಗಿ, ಪ್ರಸ್ತುತ ಪ್ರಕರಣದಲ್ಲಿ ಭಾಗಿಯಾಗದ ಇತರ ವ್ಯಕ್ತಿಗಳಿಂದ ಈ ಪ್ರಕ್ರಿಯೆಯನ್ನು ಮರುನಡೆಸಬೇಕು ಎಂದು ಸಿಐಡಿ ತನಿಖಾ ವರದಿಯಲ್ಲಿ ಶಿಫಾರಸ್ಸು ಮಾಡಿರುವುದು ತಿಳಿದು ಬಂದಿದೆ.

ಗಂಭೀರ ದೋಷಗಳು

‘ಈ ಮೇಲಿನ ವಿಷಯಗಳ ಹೊರತಾಗಿ, ಕೆಪಿಎಸ್ಸಿ ಅನುಸರಿಸಿದ ಸಾಮಾನ್ಯ ವಿಧಾನಗಳು ಪ್ರತಿ ಹಂತದಲ್ಲೂ ಗಂಭೀರ ದೋಷಗಳಿಂದ ಬಳಲುತ್ತಿವೆ. ಅವುಗಳನ್ನು ದುರುದ್ದೇಶಪೂರಿತ ವ್ಯಕ್ತಿಗಳು ದುರುಪಯೋಗಪಡಿಸಿಕೊಳ್ಳಬಹುದು. ಆದ್ದರಿಂದ, ಪ್ರಸ್ತುತ ಅನುಸರಿಸುತ್ತಿರುವ ವಿಧಾನಗಳನ್ನು ಮರುಪರಿಶೀಲಿಸಿ ಅಗತ್ಯ ಬದಲಾವಣೆಗಳನ್ನು ಮಾಡಬೇಕಾಗಿದೆ,’ ಎಂದು ಅಭಿಪ್ರಾಯಿಸಿರುವುದು ಗೊತ್ತಾಗಿದೆ.

ಕೆಪಿಎಸ್ಸಿ ಅನುಸರಿಸುತ್ತಿರುವ ಕೈಪಿಡಿಯು 30 ವರ್ಷಗಳ ಹಿಂದಿನದು. ಕರ್ನಾಟಕ ಗಜೆಟೆಡ್ ಪ್ರೊಬೇಷನರ್ಸ್ (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿ) ನಿಯಮಗಳು, 1997 ರಲ್ಲಿ ಒಳಗೊಂಡಿರುವ ಪರೀಕ್ಷಾ ಪ್ರಕ್ರಿಯೆಯ ವಿವರಗಳನ್ನು ಪರಿಷ್ಕರಿಸಿಬೇಕು. ಮತ್ತು ಅನುಸರಿಸಬೇಕಾದ ವಿಧಾನಗಳ ವಿವರಗಳನ್ನು ಸಮಗ್ರವಾಗಿ ಪರಿಷ್ಕರಿಸಬೇಕಾಗಿದೆ ಎಂದು ಸಲಹೆ ನೀಡಿದೆ.

 

 

ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (Standard Operating Procedure) ರೂಪಿಸಲು ಕೆಳಗಿನ ಅಂಶಗಳನ್ನು ಸೇರಿಸಬಹುದು: ಒಟ್ಟುಗೂಡಿದ ಜವಾಬ್ದಾರಿಯ ಜೊತೆಗೆ ಅಧ್ಯಕ್ಷರು/ಸದಸ್ಯರು/ಕಾರ್ಯದರ್ಶಿ/ಸಂಬಂಧಿತ ಅಧಿಕಾರಿಗಳ ಮೇಲೆ ವೈಯಕ್ತಿಕ ಜವಾಬ್ದಾರಿಯನ್ನು ನಿಗದಿಪಡಿಸಬೇಕು. ಪರೀಕ್ಷಾ ಪ್ರಕ್ರಿಯೆಯ ಯಾವ ಭಾಗದಲ್ಲಿ ಯಾವ ಅಧಿಕಾರಿಗಳು ಅಥವಾ ಅಧಿಕಾರಿಗಳ ಗುಂಪು ಭಾಗವಹಿಸಬೇಕು ಎಂಬುದನ್ನು ಸ್ಪಷ್ಟವಾಗಿ ನಿರ್ಧರಿಸಬೇಕು. ಆಯೋಗದ ಮೂಲಕ ಅಥವಾ ಆಯೋಗದ ಪರವಾಗಿ ಕೈಗೊಳ್ಳುವ ಪ್ರಮುಖ ನಿರ್ಧಾರಗಳಿಗಾಗಿ ಅನುಸರಿಸಬೇಕಾದ ವಿಧಾನವನ್ನು ಸ್ಪಷ್ಟವಾಗಿ ನಿರ್ದಿಷ್ಟಪಡಿಸಬೇಕು ಎಂದು ಶಿಫಾರಸ್ಸು ಮಾಡಿದೆ.

ಮುಖ್ಯ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕಾಗಿ ಅನುಸರಿಸಬೇಕಾದ ಸಂಪೂರ್ಣ ಪ್ರಕ್ರಿಯೆ, ಮೌಲ್ಯಮಾಪಕರ ಆಯ್ಕೆ ಮತ್ತು ಅವರ ಅರ್ಹತೆಗಳ ವಿವರಗಳನ್ನು ಸ್ಪಷ್ಟವಾಗಿ ನಿರ್ಧರಿಸಬೇಕು. ಟ್ಯಾಬ್ಯುಲೇಷನ್ ಮತ್ತು ಮರು-ಒಟ್ಟು (re-totaling) ಪ್ರಕ್ರಿಯೆಗಳಿಗಾಗಿ ಅನುಸರಿಸಬೇಕಾದ ಸಂಪೂರ್ಣ ವಿಧಾನವನ್ನು ಸ್ಪಷ್ಟವಾಗಿ ನಿರ್ಧರಿಸಬೇಕು.

ಅಭ್ಯರ್ಥಿಗಳ ಅರ್ಹತೆಯನ್ನು ನಿರ್ಧರಿಸಲು ವಿವಿಧ ಪ್ರಮಾಣಪತ್ರಗಳ ಪರಿಶೀಲನೆ ಪ್ರಕ್ರಿಯೆಯನ್ನು ಸ್ಪಷ್ಟವಾಗಿ ನಿರ್ದಿಷ್ಟಪಡಿಸಬೇಕು. ವ್ಯಕ್ತಿತ್ವ ಪರೀಕ್ಷೆಯ ನಡೆಸುವ ವಿಧಾನ ಮತ್ತು ಸಂದರ್ಶನ ಮಂಡಳಿಯ ಸದಸ್ಯರು ಅಂಕಗಳನ್ನು ದಾಖಲಿಸುವ ಪ್ರಕ್ರಿಯೆಯನ್ನು ಸ್ಪಷ್ಟವಾಗಿ ನಿರ್ಧರಿಸಬೇಕು ಎಂದು ಸಲಹೆ ನೀಡಿದೆ.

ಪಾರದರ್ಶಕತೆ ಖಚಿತಪಡಿಸಲು, ಮುಖ್ಯ ಮೌಲ್ಯಮಾಪನ ಸಭಾಂಗಣ ಮತ್ತು ಸಂದರ್ಶನ ಸಭಾಂಗಣಗಳನ್ನು ಒಳಗೊಂಡಂತೆ ಸಂಪೂರ್ಣ ಕೆಪಿಎಸ್ಸಿ ಆವರಣದಲ್ಲಿ (ಆಡಿಯೋ ಇಲ್ಲದೆ) ಸಿಸಿಟಿವಿ ವ್ಯಾಪ್ತಿಯನ್ನು ಹೊಂದಿರಬೇಕು. ಈ ಸಿಸಿಟಿವಿ ಕ್ಯಾಮೆರಾಗಳು ನೇಮಕಾತಿ ಪ್ರಕ್ರಿಯೆಯ ಪ್ರತಿಯೊಂದು ಪ್ರಮುಖ ಹಂತವನ್ನು ದಾಖಲಿಸಬೇಕು. ಎಲ್ಲಾ ಸಿಸಿಟಿವಿ ದೃಶ್ಯಗಳ ಬ್ಯಾಕಪ್ ಪ್ರತಿದಿನ ತೆಗೆದು ಸುರಕ್ಷಿತವಾಗಿ ಸಂಗ್ರಹಿಸುವುದು ಕಾರ್ಯದರ್ಶಿ ಅಥವಾ ಸರ್ಕಾರ ನಿಗದಿಪಡಿಸಿದ ಸಂಬಂಧಿತ ಅಧಿಕಾರಿಯ ವೈಯಕ್ತಿಕ ಜವಾಬ್ದಾರಿಯಾಗಿರಬೇಕು ಎಂದು ಸಿಐಡಿ ತನಿಖಾ ವರದಿಯಲ್ಲಿ ಹೇಳಿದೆ.

ಮುಖ್ಯ ಪರೀಕ್ಷೆ ಮತ್ತು ಸಂದರ್ಶನಗಳಿಗೆ ಅಭ್ಯರ್ಥಿಗಳ ಹಾಜರಾತಿಯನ್ನು ಕೈಯಾರೆ ದಾಖಲಿಸುವುದನ್ನು ಬಯೋಮೆಟ್ರಿಕ್ ಹಾಜರಾತಿಯೊಂದಿಗೆ ಪೂರಕಗೊಳಿಸಬೇಕು. ಡಿವಿಆರ್/ಸರ್ವರ್ ಕೊಠಡಿ ಮುಂತಾದ ಸಂವೇದನಾಶೀಲ ಪ್ರದೇಶಗಳಿಗೆ ದ್ವಿ-ಪದರ ಬಯೋಮೆಟ್ರಿಕ್ ಪ್ರವೇಶ ನಿಯಂತ್ರಣ ವ್ಯವಸ್ಥೆಯನ್ನು ಅಳವಡಿಸಬೇಕು ಎಂದು ಶಿಫಾರಸ್ಸು ಮಾಡಿದೆ.

ಮತ್ತೊಂದು ವಿಶೇಷವೆಂದರೇ ಆಯೋಗದ ಹಿಂದಿನ ಅಧ್ಯಕ್ಷ ಗೋನಾಳ್ ಭೀಮಪ್ಪ ಮತ್ತು ಕೆಲವು ಏಜೆಂಟ್‌ಗಳೊಂದಿಗೆ ನಡೆದಿದೆ ಎನ್ನಲಾದ ಹಣದ ವಹಿವಾಟಿನ ಕುರಿತೂ ಸಿಐಡಿ ತನಿಖಾ ತಂಡವು ತನ್ನ ವರದಿಯಲ್ಲಿ ಉಲ್ಲೇಖಿಸಿತ್ತು. ಅದರಲ್ಲಿ ಮುಖ್ಯ ಏಜೆಂಟ್‌ ಅಮರನಾಥ್‌ ಎಂಬಾತ ಹಲವು ವರ್ಷಗಳಿಂದಲೂ ಗೋನಾಳ್‌ ಭೀಮಪ್ಪ ಅವರೊಂದಿಗೆ ವಹಿವಾಟು ನಡೆಸಿರುವುದನ್ನು ತನಿಖಾ ತಂಡವು ಪತ್ತೆ ಹಚ್ಚಿತ್ತು. ಗೋನಾಳ್‌ ಭೀಮಪ್ಪ ಅವರಿಂದ ನೇರವಾಗಿ ಮುಖ್ಯ ಏಜೆಂಟ್ ಅಮರನಾಥ್ ಅವರ ಪತ್ನಿ ಪದ್ಮಪ್ರಿಯ ಅವರಿಗೆ 5 ಲಕ್ಷ ರು ಚೆಕ್ (ಚೆಕ್ ನಂ; 434328) ಮೂಲಕ ಸಂದಾಯವಾಗಿತ್ತು ಎಂದು ವರದಿಯಲ್ಲಿ ವಿವರಿಸಿದೆ.

 

 

ಸಿಐಡಿ ಸಲ್ಲಿಸಿದ್ದ ತನಿಖಾ ವರದಿಯನ್ನು ಪರಿಶೀಲಿಸಿದ್ದ ಹಿಂದಿನ ಬಿಜೆಪಿ ಸರ್ಕಾರವು, ಆರೋಪಿತರನ್ನು ವಿಚಾರಣೆಗೊಳಪಡಿಸುವ ಅವಶ್ಯಕತೆ ಇಲ್ಲ ಎಂದು 2021ರ ಮೇ 27ರಂದು ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿಯೇ ತೀರ್ಮಾನಿಸಿತ್ತು.  ಅಲ್ಲದೇ ಸಿಐಡಿ ತನಿಖಾ ವರದಿಯನ್ನು ತಳ್ಳಿ ಹಾಕಿತ್ತು. ಮತ್ತು ಆರೋಪಿತರನ್ನು ವಿಚಾರಣೆಗೊಳಪಡಿಸಲು ರಾಷ್ಟ್ರಪತಿಗಳಿಗೆ ಕಳಿಸಲು ತೀರ್ಮಾನಿಸಿತ್ತು.

ಹಿಂದಿನ ಬಿಜೆಪಿ ಸರ್ಕಾರದ ಸಚಿವ ಸಂಪುಟದ ತೀರ್ಮಾನದಲ್ಲೇನಿತ್ತು?

2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್‍ಸ್‌ ಗಳ ಆಯ್ಕೆಕ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳಲ್ಲಿ ಭಾಗಿ ಆಗಿದ್ದಾರೆ ಎನ್ನಲಾದ ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರು, ಸದಸ್ಯರುಗಳನ್ನು ಅಭಿಯೋಜನೆಗೆ ಒಳಪಡಿಸುವ ಪ್ರಸ್ತಾವನೆ ಕುರಿತು ಸಚಿವ ಸಂಪುಟವು ಸುದೀರ್ಘವಾಗಿ ಚರ್ಚಿಸಿದೆ.

 

 

ದಂಡ ಪ್ರಕ್ರಿಯೆ ಸಂಹಿತೆಯ (ಸಿಆರ್‍‌ಪಿಸಿ) ಪ್ರಕರಣ 197 ಅನ್ವಯ ಭಾರತೀಯ ದಂಡ ಸಂಹಿತೆ (ಐಪಿಸಿ) ಅಡಿಯಲ್ಲಿ ಅಪರಾಧಗಳಿಗೆ ಲೋಕಸೇವಾ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರುಗಳನ್ನು ಸಕ್ಷಮ ಪ್ರಾಧಿಕಾರದ ಮಂಜೂರಾತಿ ಪಡೆದೇ ಅಭಿಯೋಜನೆಗೆ ಒಳಪಡಿಸಬೇಕು. ಹಾಗೂ ಭ್ರಷ್ಟಾಚಾರ ತಡೆಗಟ್ಟುವಿಕೆ ಅಧಿನಿಯಮದಡಿಯಲ್ಲಿನ ಅಪರಾಧಗಳಿಗೆ ತನಿಖಾ ಸಂಸ್ಥೆಯು ಈ ಅಧಿನಿಯಮದ ಪ್ರಕರಣ 19ರ ಅಡಿ ಅಭಿಯೋಜನಾ ಮಂಜೂರಾಅತಿ ಕೋರಿ ರಾಷ್ಟ್ರಪತಿಗಳನ್ನು ಕೋರಬೇಕು ಎಂದು ಅಡ್ವೋಕೇಟ್ ಜನರಲ್ ಅವರು ಅಭಿಪ್ರಾಯ ನೀಡಿರುವುದನ್ನು ಗಮನಿಸಿರುವುದು ಸಚಿವ ಸಂಪುಟದ ನಿರ್ಣಯದ ಹಾಳೆಯಿಂದ ತಿಳಿದು ಬಂದಿದೆ.

 

 

ತನಿಖಾ ಅಂಶಗಳೇ ಆಧಾರ ರಹಿತ

ಸಿಐಡಿಯು ಈ ಪ್ರಕರಣದ ಬಗ್ಗೆ ಅಮೂಲಾಗ್ರವಾಗಿ ತನಿಖೆ ನಡೆಸಿ, ಅಪರಾಧ ಕೃತ್ಯಗಳಿಗೆ ಸಾಕ್ಷ್ಯಗಳನ್ನು ಒದಗಿಸಿತ್ತು. ಆದರೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿನ ಸಚಿವ ಸಂಪುಟವು ಸಿಐಡಿ ತನಿಖಾ ಅಂಶಗಳೇ ಆಧಾರ ರಹಿತ ಎಂದು ಹೇಳಿತ್ತು. ‘ಅಪರಾಧ ತನಿಖಾ ಸಂಸ್ಥೆಯು (ಸಿಐಡಿ) ತನಿಖೆಯ ಸಂದರ್ಭದಲ್ಲಿ ಕಂಡುಕೊಂಡಿರುವ ಅಂಶಗಳು ಅಧಾರರಹಿತವಾಗಿವೆ. ಅವುಗಳಿಗೆ ಕಾನೂನಿನ ತಳಹದಿಯೇ ಇಲ್ಲದಂತೆ ಕಾಣಬರುತ್ತದೆ,’ ಎಂದು ಸಚಿವ ಸಂಪುಟ ನಿರ್ಣಯದ ಹಾಳೆಯಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.

 

ಗೋನಾಳ್ ಭೀಮಪ್ಪ ಅವರು ನಿವೃತ್ತಿಯಾಗುವ ಪೂರ್ವದಲ್ಲಿ ಆಯ್ಕೆ ಪ್ರಕ್ರಿಯೆಯನ್ನು ಪೂರೈಸಲು ತರಾತುರಿಯಲ್ಲಿ ಅಭ್ಯರ್ಥಿಗಳನ್ನು ಸಂದರ್ಶನ ನಡೆಸಿರುವುದಾಗಿದೆ ಎಂಬ ಆರೋಪಗಳಿಗೆ ಯಾವುದೇ ಆಧಾರ ಇರುವುದಿಲ್ಲ. ಗೋನಾಳ್‌ ಭೀಮಪ್ಪ (ಆರೋಪಿ 1) ಅವರು 2013ರ ಮೇ 10ರಂದು ಅಧ್ಯಕ್ಷ ಹುದ್ದೆಯಿಂದ ನಿವೃತ್ತರಾಗಿದ್ದಾರೆ. ಬಹುತೇಕ ಸಂದರ್ಶನ ಪ್ರಕ್ರಿಯೆಯು ಅವರ ನಿವೃತ್ತಿ ನಂತರ ನಡೆದಿರುವುದಾಗಿದೆ ಎಂದು ಸಚಿವ ಸಂಪುಟವು ಷರಾ ಬರೆದಿದೆ.

 

 

ಅದೇ ರೀತಿ ಗ್ರಾಮೀಣಾಭಿವೃದ್ಧಿ ಮತ್ತು ಸಹಕಾರ ಮತ್ತು ಮಾನವ ಶಾಸ್ತ್ರ ಈ ಎರಡೂ ಹೆಚ್ಚುವರಿ ವಿಷಯಗಳ ಕುರಿತು ಇರುವ ಆರೋಪಗಳು ಸಹ ತಪ್ಪಾಗಿರುತ್ತವೆ. ಗ್ರಾಮೀಣಾಭಿವೃದ್ಧಿ ಮತ್ತು ಸಹಕಾರ ವಿಷಯದಲ್ಲಿನ ಪಠ್ಯಕ್ರಮವು ಅರ್ಥಶಾಸ್ತ್ರ ವಿಷಯದ ಪಠ್ಯಕ್ರಮದಂತೆಯೇ ಇರುತ್ತದೆ. ಹಾಗೂ ಮಾನವ ಶಾಸ್ತ್ರ ವಿಷಯದ ಪಠ್ಯಕ್ರಮವು ಸಮಾಜ ಶಾಸ್ತ್ರ ವಿಷಯದ ಪಠ್ಯಕ್ರಮದಂತೆಯೇ ಇರುತ್ತದೆ ಎಂದು ಸರ್ಕಾರಕ್ಕೆ ತಿಳಿದಿದ್ದ ವಿಷಯವೇ ಆಗಿದೆ. ಆಧ್ದರಿಂದ ಈ ಎರಡೂ ವಿಷಯಗಳನ್ನು ಐಚ್ಛಿಕ ವಿಷಯಗಳನ್ನಾಗಿ ಸೇರಿಸಲು ಯಾವುದೇ ಕಾನೂನು ತೊಡಕು ಇದ್ದಿರಲಿಲ್ಲ ಎಂದು ಹೇಳಿತ್ತು.

ಹೀಗಾಗಿ ‘ಗ್ರಾಮೀಣಾಭಿವೃದ್ಧಿ ಮತ್ತು ಸಹಕಾರ ವಿಷಯಕ್ಕೆ ಸಂಬಂಧಿಸಿದಂತೆ ಅರ್ಥಶಾಸ್ತ್ರದ ಉಪನ್ಯಾಸಕರನ್ನು ಮೌಲ್ಯಮಾಪಕರನ್ನಾಗಿ ನೇಮಿಸಿರುವುದರಲ್ಲಿ ಯಾವುದೇ ತಪ್ಪಿರುವುದಿಲ್ಲ. ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರುಗಳು ಗ್ರಾಮೀಣಾಭಿವೃದ್ಧಿ ಮತ್ತು ಸಹಕಾರ ವಿಷಯದಲ್ಲಿ ಉಪನ್ಯಾಸ ನೀಡುತ್ತಿರುವುದು ಸಾಮಾನ್ಯವಾಗಿ ತಿಳಿದಿರುವ ವಿಷಯವಾಗಿದೆ ಎಂದು ಸಚಿವ ಸಂಪುಟವು ನಿಲುವು ತಳೆದಿತ್ತು.

 

 

ಸಿಐಡಿ ಸಂಸ್ಥೆಯು ಕನ್ನಡ ಮಾಧ್ಯಮದ ಪ್ರಾಧ್ಯಾಪಕರು ಇಂಗ್ಲೀಷ್ ಮಾಧ್ಯಮದ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿರುವುದು ಆಕ್ಷೇಪಾರ್ಹವೆಂದು ವರದಿಯಲ್ಲಿ ಹೇಳಿದೆ. ಲಿಖಿತ ಪರೀಕ್ಷೆಯು ಪದವಿಮಟ್ಟದ ಪರೀಕ್ಷೆಯಾಗಿದೆ. ಆ ಹಂತದಲ್ಲಿ ಕನ್ನಡ ಮಾಧ್ಯಮದ ಪ್ರಾಧ್ಯಾಪಕರು ಹಾಗೂ ಇಂಗ್ಲೀಷ್‌ ಮಾಧ್ಯಮದ ಪ್ರಾಧ್ಯಾಪಕರು ಎಂಬುದಾಗಿ ಇರಲಿಲ್ಲ.

 

 

ತನಿಖೆ ತೀರ್ಮಾನಗಳೇ ಅತಾರ್ಕಿಕ

ವಿಶ್ವವಿದ್ಯಾಲಯಗಳ ಹಾಗೂ ಕಾಲೇಜು ಶಿಕ್ಷಣ ಇಲಾಖೆಯ ನೇಮಕಾತಿ ವಿಷಯಗಳನ್ನು ಅವಲೋಕಿಸಿದಾಗ ಕನ್ನಡ ಮಾಧ್ಯಮದ ಅಥವಾ ಇಂಗ್ಲೀಷ್‌ ಮಾಧ್ಯಮದ ಪ್ರಾಧ್ಯಾಪಕರು ಅಥವಾ ವೃಂದಗಳು ಅಥವಾ ಹುದ್ದೆಗಳು ಎಂಬ ವರ್ಗೀಕರಣ ಇರುವುದಿಲ್ಲ. ಅದೇ ವೃಂದದ ಪ್ರಾಧ್ಯಾಪಕರು ಎರಡೂ ಭಾಷೆಗಳ ವಿಷಯಗಳನ್ನು ಬೋಧನೆ ಮಾಡುತ್ತಾರೆ. ಸಿಐಡಿ ಸಂಸ್ಥೆಯು ತನ್ನ ತನಿಖೆ ಸಂದರ್ಭದಲ್ಲಿ ಮಾಡಿರುವ ತೀರ್ಮಾನಗಳು ಅತಾರ್ಕಿಕ ಮತ್ತು ತಿರುಳಿಲ್ಲದ ನಿರ್ಧಾರಗಳಾಗಿವೆ ಎಂದು ಸಚಿವ ಸಂಪುಟವು ಹೇಳಿದೆ.

 

 

ಸಿಐಡಿ ಸಂಸ್ಥೆಯವರು ತಮ್ಮ ತನಿಖಾ ಸಂದರ್ಭಗಳಲ್ಲಿ ತೆಗೆದುಕೊಂಡಿರುವ ತೀರ್ಮಾನಗಳು ಹಾಗೂ ನಿರ್ಧಾರಗಳನ್ನು ಭಾರತೀಯ ದಂಡ ಸಂಹಿತೆಯಡಿ ಅಪರಾಧಗಳೆಂದು ಪರಿಗಣಿಸಲು ಮೇಲ್ನೋಟಕ್ಕೆ ಯಾವುದೇ ಪುರಾವೆಗಳಲ್ಲಿ ಕಂಡುಬಂದಿರುವುದಿಲ್ಲ. ನಿಸ್ಸಂದೇಹವಾದ ಪುರಾವೆ ಅಥವಾ ಸಾಕ್ಷಿಗಳೇ ಅಭಿಯೋಜನೆಗೊಳಪಡಿಸಲು ಬೇಕಾದ ಮುಖ್ಯವಾದ ಅಂಶವಾಗಿವೆ. ಸಿಐಡಿ ಸಂಸ್ಥೆಯು ಶಾಸನಾತ್ಮಕವಾಗಿ ಜಾರಿಯಲ್ಲಿರುವ ಕಾನೂನಿಗೆ ವಿರುದ್ಧವಾದ ಕ್ರಮಗಳನ್ನು ಗುರುತಿಸಲು ಸಾಧ್ಯವಾಗುವ ಸಮಪರ್ಕವಾದ ಮತ್ತು ಅಗತ್ಯವಾದ ಸಾಕ್ಷಿಗಳನ್ನು ಸಂಗ್ರಹಿಸುವುದು ಅತೀ ಅಗತ್ಯವಾಗಿರುತ್ತದೆ ಎಂದು ಕರ್ನಾಟಕ ಆಡಳಿತ ನ್ಯಾಯ ಮಂಡಳಿಯ ಅವಲೋಕನವನ್ನು ಮುಂದಿರಿಸಿತ್ತು.

 

ಕೆಎಟಿ ಅವಲೋಕನದಲ್ಲೇನಿದೆ?

ಸಿಐಡಿ ವರದಿಯ ಕಂಡುಹಿಡಿಕೆಗಳು ಕೇವಲ ಸಮರ್ಥಿಸಲಾಗದವುಗಳೇ ಅಲ್ಲ, ನೇಮಕಾತಿ ಪ್ರಕ್ರಿಯೆಗಳಿಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಅಸ್ತಿತ್ವದಲ್ಲೇ ಇಲ್ಲದ ಮೋಸವನ್ನು ತೋರಿಸಲು ಉದ್ದೇಶಿತವಾಗಿರುವಂತೆ ಕಾಣುತ್ತದೆ. ಈ ವಿಷಯದಲ್ಲಿ ಪಾಲುದಾರರಿಗೆ ಪೂರ್ವ ಅಥವಾ ನಂತರದ ತೀರ್ಮಾನ ವಿಚಾರಣೆಯನ್ನು ನಿರಾಕರಿಸಲು ಯಾವುದೇ ಅಧಿಕಾರವೂ ಇಲ್ಲ. ಕೆಪಿಎಸ್‌ಸಿ ಒಂದು ಸ್ವತಂತ್ರ ಸಂವಿಧಾನಾತ್ಮಕ ಸಂಸ್ಥೆಯಾಗಿದೆ. ರಾಜ್ಯ ಸರ್ಕಾರವು ಸಿಐಡಿಯ ಅನಧಿಕೃತ ಮಧ್ಯಂತರ ವರದಿಯನ್ನು ಆಧರಿಸಿ ಕ್ರಮ ಕೈಗೊಳ್ಳಬಾರದು ಎಂದು ಹೇಳಿತ್ತು. ಈ ಅವಲೋಕವನ್ನು ಸಚಿವ ಸಂಪುಟ ನಿರ್ಣಯದಲ್ಲಿಯೂ ಪುನರುಚ್ಛರಿಸಿದೆ. ಅಲ್ಲದೇ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯ ಈ ಅವಲೋಕವನ್ನು ಈ ಸಂದರ್ಭದಲ್ಲಿ ತಿಳಿಸುವುದು ಅಸಾಂದರ್ಭಿಕವೇನಾಗುವುದಿಲ್ಲ ಎಂದು ಬಣ್ಣಿಸಿದೆ.

 

 

ಕೆಎಟಿ ಅವಲೋಕನವನ್ನೇ ಮುಂದಿರಿಸಿದ್ದ ಸಚಿವ ಸಂಪುಟವು ಇನ್ನಷ್ಟು ವಿಸ್ತರಿಸಿತ್ತು. ಸಿಐಡಿ ಸಂಸ್ಥೆಯ ಅಂತಿಮ ವರದಿಯಲ್ಲಿ ಕಂಡು ಬರುವುದೇನಂದರೇ ಆಪಾದನೆಗಳಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಹೊಂದಿದ್ದವರ ಉದ್ದೇಶವು ಲೋಕಸೇವಾ ಆಯೊಗದ ಸದಸ್ಯರೊಂದಿಗೆ ಹಾಗೂ ಅಭ್ಯರ್ಥಿಗಳೊಂದಿಗೆ ಸಂಪರ್ಕವಿಟ್ಟುಕೊಂಡು ಅಕ್ರಮವಾಗಿ ಹಣ ಪಡೆಯುವುದಾಗಿತ್ತು. 2011ನೇ ಸಾಲಿನ ನೇಮಕಾತಿ ಪ್ರಕ್ರಿಯೆಯು ಕರ್ನಾಟಕ ಆಡಳಿತ ನ್ಯಾಯ ಮಂಡಳಿಯು ಸಂದರ್ಶನಕ್ಕೆ ತಡೆ ನೀಡಿದ್ದರಿಂದ ಹಾಗೂ ಸಾರ್ವತ್ರಿಕ ಚುನಾವಣೆಗಳು ಮತ್ತಿತರರ ಕಾರಣಗಳಿಂದಾಗಿ ವಿಳಂಬವಾಗಿತ್ತು ಎಂದು ಹೇಳಿದೆ.

ಮೊಬೈಲ್ ಮೂಲಕ ಸಂವಹನೆ ಪಿತೂರಿಯಲ್ಲ- ನೇಮಕ ನಿಯಮಗಳ ಉಲ್ಲಂಘನೆಯೂ ಅಲ್ಲ

ಇಂತಹ ಸಂದರ್ಭಗಳಲ್ಲಿ ಅಭ್ಯರ್ಥಿಗಳು, ಅಭ್ಯರ್ಥಿಗಳ ಪೋಷಕರು ಹಾಗೂ ಗಣ್ಯರು ಲೋಕಸೇವಾ ಆಯೋಗದ ಸದಸ್ಯರುಗಳಿಗೆ ದೂರವಾಣಿ ಮಾಡಿ ವಿಚಾರಿಸುವುದು ಹಾಗೂ ಅಂತಹ ಕರೆಗಳಿಗೆ ಲೋಕಸೇವಾ ಆಯೋಗದವರು ಪ್ರತಿಕ್ರಿಯಿಸುವುದು ಸರ್ವೇ ಸಾಮಾನ್ಯವಾಗಿದೆ. ಅಭ್ಯರ್ಥಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡುವುದು ಸದಸ್ಯರುಗಳ ಜವಾಬ್ದಾರಿಯಾಗಿದೆ. ಮೊಬೈಲ್ ದೂರವಾಣಿಗಳ ಮೂಲಕ ನಡೆಸಲಾಗಿರುವ ಇಂತಹ ಸಂವಹನೆಗಳನ್ನು ಸದಸ್ಯರು ಮತ್ತು ಅಭ್ಯರ್ಥಿಗಳ ನಡುವೆ ನಡೆದಿರುವ ವ್ಯವಹಾರವೆಂದು ಅಥವಾ ವ್ಯವಸ್ಥಿತ ಪಿತೂರಿಯೆಂದು ಹೇಳಲು ಬರುವುದಿಲ್ಲ. ಸಿಐಡಿ ಸಂಸ್ಥೆಯು ಆರೋಪಿಸಿರುವಂತೆ ಲೋಕಸೇವಾ ಆಯೋಗದವರಿಂದ ನೇಮಕಾತಿ ನಿಯಮಗಳ ಉಲ್ಲಂಘನೆ ಆಗಿರುವುದು ಕಂಡು ಬಂದಿರುವುದಿಲ್ಲ ಎಂದು ಸಚಿವ ಸಂಪುಟವು ತೀರ್ಮಾನಿಸಿತ್ತು.

ಪಿತೂರಿಗೆ ಸಾಕ್ಷ್ಯಾಧಾರವೆಲ್ಲಿದೆ?

ಪಿತೂರಿ ನಡೆದಿದೆ ಎಂದು ಪರಿಭಾವಿಸಬೇಕಾದಲ್ಲಿ ಅಭಿಯೋಜನಾ ಪ್ರಾಧಿಕಾರವು ಪಿತೂರಿ ನಡೆದಿರುವ ಬಗ್ಗೆ ಖಚಿತ ಸಾಂದರ್ಭಿಕ ಸಾಕ್ಷ್ಯಾಧಾರಗಳನ್ನು ಒದಗಿಸುವುದು ಅಗತ್ಯವಾಗಿದೆ. ಜಾಣ್ಮೆ, ದಕ್ಷತೆ ಅಥವಾ ಕೌಶಲ್ಯದಿಂದ ಪಿತೂರಿ ನಡೆದಿದೆ ಎಂಬ ಬಗ್ಗೆ ಮೇಲ್ನೋಟಕ್ಕೆ ಯಾವುದೇ ಸಾಕ್ಷ್ಯಾಧಾರಗಳು ಇಲ್ಲದಿದ್ದಲ್ಲಿ ಭಾರತೀಯ ದಂಡಸಂಹಿತೆಯ ಪ್ರಕರಣ 120 (ಬಿ) ಅಡಿ ಅಪರಾಧವೆಂದು ಸಮರ್ಥಿಸಿಕೊಳ್ಳುವುದು ಕಷ್ಟಸಾಧ್ಯವಾಗುತ್ತದೆ ಎಂದು ಸಚಿವ ಸಂಪುಟವು ತನ್ನ ನಿರ್ಣಯದಲ್ಲಿ ಅಭಿಪ್ರಾಯಿಸಿತ್ತು.

‘ಒಂದು ರಹಸ್ಯ ಸ್ಥಳದಲ್ಲಿ ಸದಸ್ಯರುಗಳು ಸಭೆ ಸೇರಿ ಪಿತೂರಿಯ ಕುರಿತು ಚರ್ಚಿಸುವುದು, ಒಳಸಂಚಿಗೆ ಅನುಕೂಲವಾಗುವಂತೆ ಸದಸ್ಯರುಗಳ ನಡುವೆ ಕೆಲಸವನ್ನು ಹಂಚಿಕೊಳ್ಳುವುದು ಇವುಗಳನ್ನು ಅಪರಾಧಿಕ ಒಳಸಂಚು ಅಥವಾ ಪಿತೂರಿ ಎಂದು ಭಾವಿಸಬಹುದಾಗಿದೆ. ಆದರೆ ಪಿತೂರಿ ನಡೆದಿದೆ ಎಂಬುದಕ್ಕೆ ಸಂಬಂಧಿಸಿದಂತೆ ಯಾರ್‍ಯಾರು ಸಭೆ ಸೇರಿದ್ದಾರೆ ಮತ್ತು ಅವರು ಯಾವ ಯೋಜನೆ ರೂಪಿಸಿದ್ದಾರೆ ಹಾಗೂ ಯಾವ ರೀತಿ ಅಪರಾಧಿಕ ಕೃತ್ಯಗಳನ್ನು ಎಸಗಿದ್ದಾರೆ ಎನ್ನುವುದಕ್ಕೆ ಯಾವುದೇ ಸಾಕ್ಷ್ಯಾಧಾರಗಳು ಕಂಡುಬರುತ್ತಿಲ್ಲ,’ ಎಂದು ನಿರ್ಣಯದಲ್ಲಿ ವಿವರಿಸಿತ್ತು.

ವರದಿಯಲ್ಲಿ ಉಲ್ಲೇಖಿಸಿರುವ ಅಂಶಗಳು ಭಾರತೀಯ ದಂಡ ಸಂಹಿತೆಯ ಪ್ರಕರಣ 120 ಅಡಿ ಅಪರಾಧವೆಂದು ಪರಿಗಣಿಸಲು ಆರೋಪಿತರ ಸಾಮಾನ್ಯ ಉದ್ದೇಶವಾಗಿತ್ತೆಂದು ಕಂಡು ಬರುತ್ತಿಲ್ಲ. ಇದನ್ನು ಪುರನಚ್ಛರಿಸಬೇಕಾದಲ್ಲಿ ಪೂರ್ವ ಉದ್ದೇಶವು ಪೂರ್ವ ಯೋಜನೆಯ ಪೂರ್ವಭಾವಿಯಾಗಿರುತ್ತದೆ. ಭಾರತೀಯ ದಂಡ ಸಂಹಿತೆಯ ಪ್ರಕರಣ 120 (ಬಿ) ಅಡಿ ಅಪರಾಧವೆಂದು ಪರಿಗಣಿಸಲು ಅಪರಾಧ ತನಿಖಾ ಸಂಸ್ಥೆಯು ದಾಖಲೆಗಳಲ್ಲಿ ಯಾವುದೇ ಪ್ರಮುಖ ಅಂಶಗಳನ್ನು ತಿಳಿಸಿರುವುದು ಕಂಡುಬರುತ್ತಿಲ್ಲ. ಅಲ್ಲದೇ ಭಾರತೀಯ ದಂಡಸಂಹಿತೆ ಪ್ರಕರಣ 120(ಬಿ) ಅಡಿ ಇದನ್ನು ಅಪರಾಧವೆಂದು ಪರಿಗಣಿಸಿದಲ್ಲಿ ಅದು ಕಲ್ಪನೆಯ ಚಿತ್ರಣವಾಗುತ್ತದೆ ಎಂದು ಬಣ್ಣಿಸಿತ್ತು.

ಅಲ್ಲದೇ ಅಪರಾಧ ತನಿಖಾ ಸಂಸ್ಥೆಯು ಪರಿಶೀಲಿಸಿರುವ ಸಾಕ್ಷಿಗಳ ಹೇಳಿಕೆಗಳನ್ನು ಅವಲೋಕಿಸಿದಾಗ ಭಾರತೀಯ ದಂಡ ಸಂಹಿತೆಯ ಪ್ರಕರಣಖ 120(ಬಿ), 166 ಮತ್ತು 167ರಡಿ ಅಪರಾಧವೆಂದು ಸಾಕ್ಷಿಗಳ ಯಾವುದೇ ಹೇಳಿಕೆಯನ್ನು ಪರಿಗಣಿಸಲು ಕಂಡುಬರುತ್ತಿಲ್ಲ ಎಂದು ಹೇಳಿತ್ತು.

ನಿಯಮಾನುಸಾರ ರಚಿಸಲಾದ ಸಂದರ್ಶನ ಸಮಿತಿ ಹಾಗೂ ಅಭ್ಯರ್ಥಿಗಳಿಗೆ ಒಮ್ಮತದಿಂದ ನೀಡಿರುವ ಅಂಕಗಳು ಪಿತೂರಿಯಿಂದ ಕೂಡಿದ ಕೃತ್ಯವಾಗಿದೆ ಎಂದು ಕಲ್ಪಿಸಲು ಅಸಾಧ್ಯವಾಗಿದೆ ಎಂದು ಸಚಿವ ಸಂಪುಟದ ನಿರ್ಣಯದಲ್ಲಿ ಹೇಳಿತ್ತು. ಆಡಳಿತಾತ್ಮಕವಾಗಿ ಆಯ್ಕೆ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡುವ ಆಯೋಗದ ಕಾರ್ಯದರ್ಶಿಯವರನ್ನು ಈಗಾಗಲೇ ಸರ್ಕಾರವು ದೋಷಮುಕ್ತಗೊಳಿಸಿದೆ.

ಆಯೋಗದ ಅಧ್ಯಕ್ಷ, ಸದಸ್ಯರ ವಿರುದ್ಧ ಸಂದೇಹ, ಗುಮಾನಿಯೇಕೆ?

ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುವ ಜವಾಬ್ದಾರಿಗಳನ್ನು ಕಾರ್ಯದರ್ಶಿಗಳು ನಿರ್ವಹಿಸಿ ಪರೀಕ್ಷಾ ಪತ್ರಿಕೆಗಳ ಮೌಲ್ಯಮಾಪನದ ಜವಾಬ್ದಾರಿಗಳನ್ನು ಕಾರ್ಯದರ್ಶಿಗಳು ನಿರ್ವಹಿಸಿರುತ್ತಾರೆ. ಇದರಿಂದಾಗಿ ಆಗಿನ ಲೋಕಸೇವಾ ಆಯೋಗದ ಅಧ್ಯಕ್ಷರು ಹಾಗೂ ಆರೋಪಿತ ಸದಸ್ಯರುಗಳ ವಿರುದ್ಧ ಸಂದೇಹ ಅಥವಾ ಗುಮಾನಿ ಮಾಡುವುದು ಪ್ರಸ್ತುತ ಸಮಂಜಸವಲ್ಲವೆನಿಸುತ್ತದೆ.

ಸಂಗ್ರಹಿಸಿರುವ ಸಾಕ್ಷ್ಯಾಧಾರಗಳೇ ಮೌಲ್ಯರಹಿತ

ಅಪರಾಧ ತನಿಖಾ ಸಂಸ್ಥೆಯವರು ಕ್ರಿಮಿನಲ್ ಪಿತೂರಿ ನಡೆದಿರುವ ಬಗ್ಗೆ ಆಗಿನ ಅಧ್ಯಕ್ಷರು ಮತ್ತು ಸದಸ್ಯರ ವಿರುದ್ಧ ಸಂಗ್ರಹಿಸಿರುವ ಸಾಕ್ಷ್ಯಾಧಾರಗಳು ಮೌಲ್ಯರಹಿತ ಹಾಗೂ ಗಣನೀಯವಾದ ಪರಿಗಣನಾರ್ಹ ಸಾಕ್ಷ್ಯಾಧಾರಗಳಾಗಿ ಕಂಡುಬರುತ್ತಿಲ್ಲ ಎಂದು ಸಚಿವ ಸಂಪುಟವು ನಿರ್ಧರಿಸಿತ್ತು.

ಲಭ್ಯವಿರುವ ದಾಖಲೆಗಳನ್ನು ಅವಲೋಕಿಸಿದಾಗ ಭಾರತೀಯ ದಂಡ ಸಂಹಿತೆಯ ಪ್ರಕರಣ 167ರ ಅಡಿ ಅಪರಾಧವೆಂದು ಪರಿಗಣಿಸಲು ಮೇಲ್ನೋಟಕ್ಕೆ ಯಾವುದೇ ಅಂಶಗಳು ಕಂಡುಬರುತ್ತಿಲ್ಲ. ಆರೋಪಿತರ ಮೇಲೆ ಮಾಡಿರುವ ಆರೋಪಗಳು ಸ್ಪಷ್ಟವಾಗಿ ಆಧಾರರಹಿತ ಆರೋಪಗಳು ಎಂದು ಕಂಡು ಬರುತ್ತವೆ. ಯಾವುದೇ ಗ್ರಹಿಸಬಲ್ಲ ಕೃತ್ಯಗಳು ಇಲ್ಲದೇ ಅಥವಾ ಪಿತೂರಿ ನಡೆದಿರುವ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳು ಇಲ್ಲದಿರುವುದು ಕಂಡುಬರುತ್ತಿರುವುದರಿಂದ ಭಾರತೀಯ ದಂಡ ಸಂಹಿತೆಯ ಪ್ರಕರಣ 166, 167ರ ಅಡಿ ಅಪರಾಧವೆಂದು ಪರಿಗಣಿಸಲು ಸಾಧ್ಯವಾಗಿರುವುದಿಲ್ಲ ಎಂದು ಸಚಿವ ಸಂಪುಟವು ಆಯೋಗದ ಹಿಂದಿನ ಅಧ್ಯಕ್ಷರು, ಸದಸ್ಯರನ್ನು ಸಮರ್ಥಿಸಿಕೊಂಡಿತ್ತು.

‘ಈ ಎಲ್ಲಾ ಮೇಲ್ಕಂಡ ಅಂಶಗಳ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಅಂದಿನ ಅಧ್ಯಕ್ಷ ಗೋನಾಳ್‌ ಭೀಮಪ್ಪ, ಡಾ ಮಂಗಳಾ ಶ್ರೀಧರ್, ಡಾ ಬಿ ಎಸ್ ಕೃಷ್ಣಪ್ರಸಾದ್, ಎಸ್‌ ಆರ್ ರಂಗಮೂರ್ತಿ, ಡಾ ಎನ್ ಮಹಾದೇವ್, ಡಾ ಹೆಚ್‌ ವಿ ಪಾರ್ಶ್ವನಾಥ್‌, ಎಸ್ ದಯಾಶಂಕರ್, ಡಾ ಹೆಚ್‌ ಡಿ ಪಾಟೀಲ್, ಎನ್ ರಾಮಕೃಷ್ಣ, ಬಿ ಟಿ ಕನಿರಾಮ್ ಅವರ ವಿರುದ್ಧ ದಂಡ ಪ್ರಕ್ರಿಯೆ ಸಂಹಿತೆ 197ರ ಅಡಿ ಅಭಿಯೋಜನೆಗೊಳಿಸಲು ಮಂಜೂರಾತಿ ನೀಡದಿರಲು ಸಚಿವ ಸಂಪುಟವು ತೀರ್ಮಾನಿಸಿತು,’ ಎಂದು ವಿವರಿಸಿತ್ತು.

 

 

ಹಾಗೆಯೇ ಈ ಪ್ರಕರಣವನ್ನು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 1988ರ ಕಲಂ 19ರ ಅಡಿ ಕರ್ನಾಟಕ ಲೋಕಸೇವಾ ಆಯೋಗದ ಅಂದಿನ ಅಧ್ಯಕ್ಷರು ಮತ್ತು ಸದಸ್ಯರುಗಳನ್ನು ಅಭಿಯೋಜನೆಗೊಳಪಡಿಸಲು ಮಂಜೂರಾತಿಯನ್ನು ಪಡೆಯಲು ತನಿಖಾ ಸಂಸ್ಥೆಯು ಸಲ್ಲಿಸಿರುವ ಕೋರಿಕೆಯನ್ನು ಭಾರತ ಸಂವಿಧಾನದ ಅನುಚ್ಛೇಧ 317 (1( ಪ್ರಕಾರ ಅಗತ್ಯ ಕ್ರಮಕ್ಕಾಗಿ ರಾಷ್ಟ್ರಪತಿಗಳಿಗೆ ಕಳಿಸಲು ಸಚಿವ ಸಂಪುಟವು ತೀರ್ಮಾನಿಸಿದೆ ಎಂದು ವಿವರಿಸಿದೆ. ಈ ನಿರ್ಣಯಕ್ಕೆ ಅಂದಿನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಸಹಿ ಹಾಕಿರುವುದು ಗೊತ್ತಾಗಿದೆ.

2021ರ ಮೇ 25ರಂದು ತೆಗೆದುಕೊಂಡಿದ್ದ ಈ ನಿರ್ಣಯವನ್ನು 2021ರ ಜೂನ್‌ 18ರಂದು ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿಯೂ ಸ್ಥಿರೀಕರಿಸಿದೆ. 2021ರ ಜೂನ್‌ 18ರಂದು ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ‘ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 1988ರ ಕಲಕಂ 19 ರಡಿ ಕರ್ನಾಟಕ ಲೋಕಸೇವಾ ಆಯೋಗದ ಅಂದಿನ ಅಧ್ಯಕ್ಷರು ಮತ್ತು ಸದಸ್ಯರುಗಳನ್ನು ಅಭಿಯೋಜನೆಗೊಳಿಸಲು ರಾಷ್ಟ್ರಪತಿಯವರ ಮಂಜೂರಾತಿಯನ್ನು ಪಡೆಯಲು ತನಿಖಾ ಸಂಸ್ಥೆಯೇ ಸೂಕ್ತ ಕ್ರಮ ತೆಗೆದುಕೊಳ್ಳಬಹುದು,’ ಎಂದು ಸಚಿವ ಸಂಪುಟವು ಸೂಚಿಸಿತ್ತು.

 

 

ಸಚಿವ ಸಂಪುಟವು ಈ ತೀರ್ಮಾನ ತೆಗೆದುಕೊಳ್ಳುವ ಒಂದು ವರ್ಷದ ಮುಂಚೆಯೇ ಸಿಐಡಿ ಪೊಲೀಸ್‌ ಮಹಾನಿರ್ದೇಶಕರಾದ ಬಿ ದಯಾನಂದ್ ಅವರು 2020ರ ಮಾರ್ಚ್‌ 12ರಂದೇ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ರಾಷ್ಟ್ರಪತಿಯವರಿಗೆ ನೇರವಾಗಿ ಸಿಐಡಿಯೇ ಅಭಿಯೋಜನಾ ಮಂಜೂರಾತಿ ಕೋರಿ ಪ್ರಸ್ತಾವ ಸಲ್ಲಿಸಬೇಕು ಎಂದು ಸರ್ಕಾರದ ಪತ್ರಕ್ಕೆ  ದಯಾನಂದ್ ಅವರು ಸ್ಪಷ್ಟೀಕರಣ  ನೀಡಿದ್ದರು.

 

 

‘ಈ ಪ್ರಕರಣದಲ್ಲಿನ ಆರೋಪಿತರುಗಳ ಅಭಿಯೋಜನಾ ಮಂಜೂರಾತಿಯ ಪ್ರಸ್ತಾವನೆಯನ್ನು ರಾಷ್ಟ್ರಪತಿಯವರಿಗೆ ನೇರವಾಗಿ ಸಿಐಡಿಯಿಂದ ಸಲ್ಲಿಸುವುದು ಶಿಷ್ಟಾಚಾರವಲ್ಲ. ಇದರಿಂದ ಸರ್ಕಾರದ ವತಿಯಿಂದಲೇ ಸಮುಚಿತ ಮಾರ್ಗದಲ್ಲಿ ಸಕ್ಷಮ ಪ್ರಾಧಿಕಾರವಾಗಿರುವ ರಾಷ್ಟ್ರಪತಿಯವರಿಗೆ ಅಭಿಯೋಜನಾ ಮಂಜೂರಾತಿ ಪ್ರಸ್ತಾವ ಸಲ್ಲಿಸಬೇಕು,’ ಎಂದು ಪತ್ರದಲ್ಲಿ ಕೋರಿದ್ದರು.

 

 

ಸಿಐಡಿ ಪೊಲೀಸ್‌ ಮಹಾನಿರ್ದೇಶಕರು ಸ್ಪಷ್ಟವಾಗಿ ತಮ್ಮ ಅಭಿಪ್ರಾಯ ನೀಡಿದ್ದರೂ ಸಹ ಅದನ್ನು ಯಡಿಯೂರಪ್ಪ ಅವರ ನೇತೃತ್ವದಲ್ಲಿ 2021ರಲ್ಲಿ ನಡೆದಿದ್ದ ಸಚಿವ ಸಂಪುಟವು ಬದಿಗೊತ್ತಿತ್ತು.

ಈ ಪ್ರಕರಣದಲ್ಲಿ ಆರೋಪಿತ ಆಯೋಗದ ಹಿಂದಿನ ಅಧ್ಯಕ್ಷ ಹಾಗೂ 9 ಮಂದಿ ಸದಸ್ಯರನ್ನು ವಿಚಾರಣೆಗೊಳಪಡಿಸುವ ಪ್ರಸ್ತಾವವನ್ನು ತಿರಸ್ಕರಿಸಲು ರಾಜ್ಯದ ಈಗಿನ ಅಡ್ವೋಕೇಟ್ ಜನರಲ್ ಅವರ ಅಭಿಪ್ರಾಯ ಪಡೆದಿರುವ ಬಗ್ಗೆ ಆರ್‍‌ಟಿಐ ಅಡಿ ಒದಗಿಸಿರುವ ಕಡತದಲ್ಲಿ ಯಾವುದೇ ದಾಖಲೆಗಳು ಕಂಡು ಬಂದಿಲ್ಲ.

ಪ್ರಾಸಿಕ್ಯೂಷನ್ ಪ್ರಸ್ತಾವವನ್ನು ತಿರಸ್ಕರಿಸುವ ಸಂಬಂಧ ರಾಜ್ಯಪಾಲರು 2023ರಲ್ಲೇ ಅಭಿಪ್ರಾಯ ನೀಡಿದ್ದರು.

ರಾಜ್ಯಪಾಲರ ಅಭಿಪ್ರಾಯವೇನು?

ಹಿರಿಯ ಕಾನೂನು ಸಲಹೆಗಾರರ ಅಭಿಪ್ರಾಯ ಹಾಗೂ ರಾಜ್ಯ ಸರ್ಕಾರ ಒದಗಿಸಿದ ದಾಖಲೆಗಳು ಮತ್ತು ಕಡತವನ್ನು ಪರಿಶೀಲಿಸಿದ್ದ ರಾಜ್ಯಪಾಲರು ಹಲವು ಅವಲೋಕನಗಳನ್ನು ಮಾಡಿದ್ದರು.

ತನಿಖಾ ಸಂಸ್ಥೆಯು 2013ರ ಸೆ. 10ರಂಧು ಸವಿಸ್ತಾರ ತನಿಖಾ ವರದಿಯನ್ನು ಸಲ್ಲಿಸಿದೆ. ಪೊಲೀಸ್ ಮಹಾನಿರ್ದೇಶಕರು, ವಿಶೇಷ ಘಟಕ, ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಅಭಿಯೋಜನೆಗೆ ಅನುಮತಿ ಪಡೆಯುವ ಸಂಬಂಧ 2019ರ ಮೇ 28ರಂದು ಪತ್ರದ ಮೂಲಕ ಪ್ರಸ್ತಾವನೆ ಸಲ್ಲಿಸಿದ್ದಾರೆ. 2021ರ ಮೇ 25ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ, ದಂಡ ಪ್ರಕ್ರಿಯಾ ಸಂಹಿತೆ (CrPC) ಯ ಕಲಂ 197 ಅಡಿಯಲ್ಲಿ ಅಭಿಯೋಗಕ್ಕೆ ಅನುಮತಿ ನೀಡಬಾರದು ಎಂದು ತೀರ್ಮಾನಿಸಲಾಗಿದೆ.

 

 

ಏಕೆಂದರೆ ಆರೋಪಿಗಳನ್ನು ದೋಷಿ ಎಂದು ಸಾಬೀತುಪಡಿಸಲು ಸಾಕ್ಷ್ಯಗಳ ಕೊರತೆ ಇದೆ. ಜೊತೆಗೆ ತನಿಖಾ ಸಂಸ್ಥೆಯ ಮನವಿಯನ್ನು ಭಾರತದ ರಾಷ್ಟ್ರಪತಿಗಳಿಗೆ ಸಂವಿಧಾನದ ಕಲಂ 317(1) ಅಡಿಯಲ್ಲಿ ಕಳುಹಿಸಲು ತೀರ್ಮಾನಿಸಲಾಗಿದೆ ಎಂದು ತಮ್ಮ ಅಭಿಪ್ರಾಯದಲ್ಲಿ ಉಲ್ಲೇಖಿಸಿದ್ದರು.

 

 

ಸಚಿವ ಸಂಪುಟದ ತೀರ್ಮಾನದ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು ಸಿಬ್ಬಂದಿ, ಸಾರ್ವಜನಿಕ ದೂರುಗಳು ಮತ್ತು ಪಿಂಚಣಿ ಸಚಿವಾಲಯ (ಭಾರತ ಸರ್ಕಾರ)ಕ್ಕೆ 2021ರ ಜೂನ್ 15ರಂದು ಪತ್ರ (ಸಂಖ್ಯೆ DPAR 91 SELOSE 2014(ಪಿ) ಮೂಲಕ ಪ್ರಸ್ತಾವನೆ ಸಲ್ಲಿಸಿದೆ. 2021ರ ಜೂನ್ 18ರಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ, ಭ್ರಷ್ಟಾಚಾರ ತಡೆ ಕಾಯ್ದೆಯ ಅಡಿಯಲ್ಲಿ ಅಭಿಯೋಗಕ್ಕೆ ಅನುಮತಿ ಪಡೆಯಲು ತನಿಖಾ ಸಂಸ್ಥೆಯು ಸೂಕ್ತ ಕ್ರಮ ಕೈಗೊಳ್ಳಬಹುದು ಎಂದು ತೀರ್ಮಾನಿಸಲಾಗಿದೆ.

ಸಿಐಡಿಯ ಆರ್ಥಿಕ ಅಪರಾಧ ವಿಭಾಗದ ಪೊಲೀಸ್ ಅಧೀಕ್ಷಕರು, 2021ರ ಜುಲೈ 9ರಂದು ಪತ್ರದ ಮೂಲಕ, ಆರೋಪಿಗಳ ವಿರುದ್ಧ ಅಭಿಯೋಗಕ್ಕೆ ಅನುಮತಿ ಪಡೆಯಲು ಪ್ರಸ್ತಾವನೆಯನ್ನು ಸಿಐಡಿ ಪೊಲೀಸ್ ಮಹಾನಿರ್ದೇಶಕರ ಮೂಲಕ ಭಾರತದ ರಾಷ್ಟ್ರಪತಿಗಳಿಗೆ ಕಳುಹಿಸಲು ಸಲ್ಲಿಸಿದ್ದಾರೆ. ಗೃಹ ವ್ಯವಹಾರಗಳ ಸಚಿವಾಲಯವು 2021ರ ಜೂನ್ 15ರಂದು ರಾಜ್ಯ ಸರ್ಕಾರ ಸಲ್ಲಿಸಿದ ಪ್ರಸ್ತಾವನೆಯನ್ನು ಈ ಟಿಪ್ಪಣಿಯೊಂದಿಗೆ ಹಿಂದಿರುಗಿಸಿತ್ತು.

‘ಈ ಪ್ರಸ್ತಾವನೆಗೆ ಕರ್ನಾಟಕ ರಾಜ್ಯದ ಮಾನ್ಯ ರಾಜ್ಯಪಾಲರ ಅನುಮೋದನೆ/ಶಿಫಾರಸು ಇಲ್ಲ. ಆದ್ದರಿಂದ, ಕರ್ನಾಟಕದ ಮಾನ್ಯ ರಾಜ್ಯಪಾಲರ ಅನುಮೋದನೆಯೊಂದಿಗೆ ಪ್ರಸ್ತಾವನೆಯನ್ನು ಮರುಸಲ್ಲಿಸಲು ವಿನಂತಿಸಲಾಗುತ್ತದೆ, ರಾಜ್ಯ ಸರ್ಕಾರವು ಪ್ರಸ್ತಾವನೆಗೆ ಅನುಮೋದನೆ ಸಲ್ಲಿಸಿದೆ.’

ಕಾನೂನು ಅಭಿಪ್ರಾಯ ಮತ್ತು ದಾಖಲೆಗಳ ಆಧಾರದ ಮೇಲೆ, ವಿಷಯಗಳನ್ನು ಗಮನಿಸಿದ್ದರು.

 

 

“ಮೇಲಿನ ಘಟನೆಗಳಿಗೂ ಮುನ್ನವೇ, ದಂಡ ಪ್ರಕ್ರಿಯಾ ಸಂಹಿತೆಯ (CrPC) ಕಲಂ 197 ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಾಜ್ಯ ಸರ್ಕಾರವು ಭಾರತೀಯ ದಂಡ ಸಂಹಿತೆಯಡಿ (IPC) ನಡೆದ ಅಪರಾಧಗಳಿಗೆ ಸಂಬಂಧಿಸಿದಂತೆ ಅಭಿಯೋಗ ಅನುಮೋದನೆಯ ವಿಚಾರವನ್ನು ಪರಿಗಣಿಸಿತ್ತು. ಕಡತದಲ್ಲಿ ಸಚಿವ ಸಂಪುಟದ ತೀರ್ಮಾನವೂ ದಾಖಲಾಗಿದೆ.

2021ರ ಮೇ 27ರಂದು ನಡೆದ ಸಚಿವ ಸಂಪುಟ ಸಭೆಯ ಕ್ರಮಗಳಲ್ಲಿ, ತನಿಖಾ ಸಂಸ್ಥೆ ಸಲ್ಲಿಸಿದ ವರದಿಯನ್ನು ಉಲ್ಲೇಖಿಸಿ, ಅನುಮೋದನೆ ನೀಡುವ ಬಗ್ಗೆ ವಿವರವಾಗಿ ಪರಿಗಣಿಸಲಾಗಿದೆ. ಸಚಿವ ಸಂಪುಟದ ತೀರ್ಮಾನಕ್ಕಾಗಿ ಪರಿಗಣಿಸಿದ್ದ ಅಂಶಗಳನ್ನೂ ರಾಜ್ಯಪಾಲರು ಅವಲೋಕಿಸಿದ್ದರಲ್ಕದೇ ಪರಿಗಣಿಸಿದ್ದರು.

ಇದೇ ವಿಷಯದ ಬಗ್ಗೆ ಆಡಳಿತಾತ್ಮಕ ನ್ಯಾಯಮಂಡಳಿಯ ತೀರ್ಮಾನವನ್ನು ಸಚಿವ ಸಂಪುಟವು ಅವಲಂಬಿಸಿದೆ. ತನಿಖಾ ಸಂಸ್ಥೆಯ ವಂಚನೆ ಆರೋಪಗಳು ಸ್ಥಿರವಾಗಿಲ್ಲ ಎಂದು ಆಡಳಿತಾತ್ಮಕ ನ್ಯಾಯಮಂಡಳಿಯು ಘೋಷಿಸಿದೆ. ಆದ್ದರಿಂದ, ವಂಚನೆ ಸಾಬೀತಾಗಿಲ್ಲ. ಕೆಲ ಅಭ್ಯರ್ಥಿಗಳು ಸಾರ್ವಜನಿಕ ಸೇವಾ ಆಯೋಗದ ಸದಸ್ಯರಿಗೆ ಫೋನ್ ಕರೆಗಳನ್ನು ಮಾಡಿದರೆಂಬ ಆರೋಪವು ವಂಚನೆ ಆರೋಪಕ್ಕೆ ಆಧಾರವಾಗುವುದಿಲ್ಲ, ಏಕೆಂದರೆ ಅಭ್ಯರ್ಥಿಗಳು ತಮ್ಮ ಆಯ್ಕೆ ಸ್ಥಿತಿಯನ್ನು ತಿಳಿಯಲು ಕರೆ ಮಾಡುವುದು ಸಾಮಾನ್ಯವಾಗಿದೆ.

 

 

ಭಾರತೀಯ ದಂಡ ಸಂಹಿತೆಯ ಕಲಂ 120B (ಅಪರಾಧ ಸಂಚು) ಅಡಿಯಲ್ಲಿ ಯಾವುದೇ ಅಪರಾಧ ನಡೆದಿದೆ ಎಂಬುದನ್ನು ತೋರಿಸುವ ಸಾಕ್ಷ್ಯಗಳಿಲ್ಲ. ಒಕ್ಕೂಟ ಅಥವಾ ಪೂರ್ವ ಒಪ್ಪಂದವನ್ನು ತೋರಿಸುವ ಯಾವುದೇ ದಾಖಲೆಗಳಿಲ್ಲ.” ಕಲಂ 166, 167 ಅಥವಾ 120B ಅಡಿಯಲ್ಲಿ ಅಪರಾಧ ನಡೆದಿದೆ ಎಂದು ತೋರಿಸಲು ಯಾವುದೇ ಸಾಕ್ಷಿದಾರರ ಹೇಳಿಕೆಗಳು ದಾಖಲಾಗಿಲ್ಲ. ಸಂಪೂರ್ಣ ಆಯ್ಕೆ ಪ್ರಕ್ರಿಯೆಯನ್ನು ಆಯೋಗದ ಕಾರ್ಯಾಲಯದ ಮೇಲ್ವಿಚಾರಣೆಯಲ್ಲಿ ನಡೆಸಲಾಗಿದೆ. ಆದ್ದರಿಂದ, ಆರೋಪಿಸಲಾದ ಅಕ್ರಮಗಳಿಗೆ ಅಧ್ಯಕ್ಷರು ಅಥವಾ ಸದಸ್ಯರನ್ನು ಸಂಪೂರ್ಣವಾಗಿ ಹೊಣೆಗಾರರನ್ನಾಗಿ ಮಾಡುವುದು ಸರಿಯಲ್ಲ. ಈ ಮೇಲ್ಕಂಡ ಕಾರಣಗಳನ್ನು ರಾಜ್ಯ ಸಚಿವ ಸಂಪುಟವು ಅಭಿಯೋಗ ಅನುಮೋದನೆ ನೀಡುವ ಮನವಿಯನ್ನು ತಿರಸ್ಕರಿಸಲು ದಾಖಲಿಸಿದೆ.

ಅನುಮೋದನೆಗೆ ಸಂಬಂಧಿಸಿದ ಕಾನೂನು ಪ್ರಕಾರ, ಭಾರತದ ಸಂವಿಧಾನದ ಕಲಂ 73 ಅಡಿಯಲ್ಲಿ ಈ ವಿಷಯದಲ್ಲಿ ತೀರ್ಮಾನ ಕೈಗೊಳ್ಳುವ ಅಧಿಕಾರ ಮಾನ್ಯ ಭಾರತದ ರಾಷ್ಟ್ರಪತಿಗಿದೆ. ಆದ್ದರಿಂದ, ಕಟ್ಟುನಿಟ್ಟಾಗಿ ನೋಡಿದರೆ, ರಾಜ್ಯಪಾಲರ ಅನುಮೋದನೆ/ಶಿಫಾರಸು ಅಗತ್ಯವಿಲ್ಲ. ಏಕೆಂದರೆ ರಾಜ್ಯ ಸಚಿವ ಸಂಪುಟವು ಅಭಿಯೋಜನೆಗಾಗಿ ಅನುಮೋದನೆಗಾಗಿ ಸಲ್ಲಿಸಿದ ಪ್ರಸ್ತಾವನೆಯನ್ನು ಈಗಾಗಲೇ ತಿರಸ್ಕರಿಸಿದೆ. ರಾಜ್ಯ ಸಚಿವ ಸಂಪುಟದ ಈ ತೀರ್ಮಾನವನ್ನು ಭಾರತದ ರಾಷ್ಟ್ರಪತಿಗಳ ಗಮನಕ್ಕೆ ತರಬೇಕು ಎಂಬುದು ಅನಿವಾರ್ಯವಾಗಿದೆ.

‘ಈ ಮೇಲಿನ ಕಾರಣಗಳನ್ನು ಪರಿಗಣಿಸಿ, ರಾಜ್ಯ ಸಚಿವ ಸಂಪುಟವು ಅಭಿಯೋಜನೆ ಅನುಮೋದನೆಗಾಗಿ ಸಲ್ಲಿಸಿದ ಪ್ರಸ್ತಾವನೆಯನ್ನು ಈಗಾಗಲೇ ತಿರಸ್ಕರಿಸಿರುವುದರಿಂದ ಅದನ್ನು ಅನುಮೋದಿಸಲು ಯಾವುದೇ ಅರ್ಹತೆ ಇಲ್ಲವೆಂದು ನಾನು ಅಭಿಪ್ರಾಯಿಸುತ್ತೇನೆ. ಆದ್ದರಿಂದ, ರಾಜ್ಯ ಸರ್ಕಾರದ ತಿರಸ್ಕಾರದ ವಿರುದ್ಧವಾಗಿ ಅಭಿಯೋಗ ಅನುಮೋದನೆ ನೀಡಲು ನಾನು ಒಪ್ಪುವುದಿಲ್ಲ. ಈ ವಿಷಯದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವ ಅಧಿಕಾರ ಭಾರತದ ರಾಷ್ಟ್ರಪತಿಗಳದ್ದಾಗಿದೆ, ಮೇಲ್ಕಂಡ ಕಾರಣಗಳನ್ನು ಪರಿಗಣಿಸಿ ಅವರು ತೀರ್ಮಾನ ಕೈಗೊಳ್ಳಬಹುದು,’ ಎಂದು ರಾಜ್ಯಪಾಲರು ತಮ್ಮ ಅಭಿಪ್ರಾಯದಲ್ಲಿ ವಿವರಿಸಿದ್ದರು.

ರಾಜ್ಯಪಾಲರ ಈ ಅಭಿಪ್ರಾಯ ಮತ್ತು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿನ ಸಚಿವ ಸಂಪುಟವು ಕೈಗೊಂಡಿದ್ದ ಸುದೀರ್ಘವಾದ ನಿರ್ಣಯಗಳನ್ನು ಈಗಿನ ಕಾಂಗ್ರೆಸ್‌ ಸರ್ಕಾರವೂ ಅವಲೋಕಿಸಿತ್ತು. ಈ ಸಂಬಂಧ 2025ರ ಮೇ 20ರಂದು ಸಚಿವ ಸಂಪುಟದಲ್ಲಿ ಚರ್ಚಿಸಿತ್ತು.

ಕಾಂಗ್ರೆಸ್‌ ಅವಧಿಯ ಸಚಿವ ಸಂಪುಟದ ನಿರ್ಣಯದಲ್ಲೇನಿದೆ?

2011ನೇ ಕರ್ನಾಟಕ ಸಿವಿಲ್ ಸೇವೆಗಳ ವಿಧೇಯಕ 2022ನ್ನು 2022ರ ಮಾಚ್‌ 14ರಂದು ಜಾರಿಗೆ ತರಲಾಗಿದೆ. 2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್‌ ನೇಮಕಾತಿ ಸಂಬಂಧ ಕರ್ನಾಟಕ ಲೋಕಸೇವಾ ಆಯೋಗವು ಪ್ರಕಟಿಸಿದ್ದ ಅಂತಿಮ ಪಟ್ಟಿಯಲ್ಲಿದ್ದ ಅಭ್ಯರ್ಥಿಗಳಿಗೆ ಹಾಗೂ ಈ ಪ್ರಕರಣದ ದೂರುದಾರರಾದ ಡಾ ಮೈತ್ರಿ ಹೆಚ್‌ಪಿಎಸ್‌ ಅವರಿಗೂ ಸೇರಿದಂತೆ ನೇಮಕಾತಿ ಆದೇಶವನ್ನು ಈಗಾಗಲೇ ನೀಡಲಾಗಿದೆ.

 

 

ಸಿಐಡಿ ಪ್ರಸ್ತಾವನೆಯೇ ಮುಕ್ತಾಯ

ಅಲ್ಲದೇ ಆಯೋಗದ ಹಿಂದಿನ ಅಧ್ಯಕ್ಷರು ಮತ್ತು ಸದಸ್ಯರುಗಳನ್ನು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 1988ರ ಕಲಂ 19ರ ಅಡಿ ಅಭಿಯೋಜನೆಗೊಳಪಡಿಸಲು ಪ್ರಸ್ತಾವನೆಯನ್ನು ರಾಷ್ಟ್ರಪತಿಯವರಿಗೆ ಕಳಿಸಲು ರಾಜ್ಯಪಾಲರು ಸಹ ಸಹಮತಿಸಿಲ್ಲ. ಈ ಹಿನ್ನೆಲೆಯಲ್ಲಿ ಆಯೋಗದ ಹಿಂದಿನ ಅಧ್ಯಕ್ಷರು ಮತ್ತು 9 ಮಂದಿ ಮಾಜಿ ಸದಸ್ಯರುಗಳನ್ನು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 1988ರ ಕಲಂ 19ರ ಅಡಿ ಅಭಿಯೋಜನೆಗೊಳಪಡಿಸಲು ಮಂಜೂರಾತಿ ಕೋರಿ ತನಿಖಾ ಸಂಸ್ಥೆಯು ಸಲ್ಲಿಸಿದ್ದ ಕೋರಿಕೆಯನ್ನು ತಿರಸ್ಕರಿಸಿ ಈ ಪ್ರಸ್ತಾವನೆಯನ್ನು ಮುಕ್ತಾಯಗೊಳಿಸಲು ಸಚಿವ ಸಂಪುಟವು ತೀರ್ಮಾನಿಸಿರುವುದು ಗೊತ್ತಾಗಿದೆ.

 

 

 

 

ಹೊಸ ಅಂತಿಮ ವರದಿ ಸಲ್ಲಿಸಿಲ್ಲವೇಕೆ?

ಸಚಿವ ಸಂಪುಟದ ನಿರ್ಣಯದ ಪ್ರಕಾರ ಈ ಪ್ರಕರಣವನ್ನು ನ್ಯಾಯಾಲಯದ ವಿಚಾರಣೆಯಿಂದ ಹಿಂಪಡೆಯುವ ಸಂಬಂಧ ವರದಿ ಮತ್ತು ಸ್ಪಷ್ಟ ಅಭಿಪ್ರಾಯ ನೀಡಲು ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯ ನಿರ್ದೇಶಕರಿಗೆ ಸೂಚಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಸರ್ಕಾರಿ ಅಭಿಯೋಜಕರಿಂದಲೂ ಇಲಾಖೆಯು ಪಡೆದಿತ್ತು.

 

 

ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ (28/2013) ಪ್ರಕರಣದಲ್ಲಿ 8 ಮಂದಿ ಆರೋಪಿತರ ಮೇಲೆ ಎಫ್‌ಐಆರ್ ತಯಾರಿಸಿ 23ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಲ್ಲಿಸಲಾಗಿತ್ತು. ಈ ಪ್ರಕರಣದಲ್ಲಿ 2014ರ ಮೇ 12ರಂದು ಅಂತಿಮ ವರದಿಯನ್ನು ಸಲ್ಲಿಸಿದೆ. ನಂತರ ಈ ಪ್ರಕರಣವು ಬೆಂಗಳೂರಿನಲ್ಲಿರುವ 76ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ವರ್ಗಾವಣೆಯಾಗಿತ್ತು.

 

 

ಕರ್ನಾಟಕ ಉಚ್ಚ ನ್ಯಾಯಾಲಯವು (CrL.P. ಸಂಖ್ಯೆ 7386/2026) ರಲ್ಲಿ ನೀಡಿದ ನಿರ್ದೇಶನಗಳನ್ನು ಪರಿಗಣಿಸಿ, ಸಂಪೂರ್ಣ ಆರೋಪಪಟ್ಟಿ (Charge Sheet) ದಾಖಲೆಗಳನ್ನು ತನಿಖಾ ಸಂಸ್ಥೆಗೆ ಹಿಂತಿರುಗಿಸಲಾಗುತ್ತದೆ. ಆದಾಗ್ಯೂ, ರಾಜ್ಯಕ್ಕೆ ಕಾನೂನಿನ ಪ್ರಕಾರ ಮುಂದುವರಿಯಲು ಸ್ವಾತಂತ್ರ್ಯವನ್ನು ಕಾಯ್ದಿರಿಸಲಾಗಿದೆ. ಸಾರ್ವಜನಿಕ ನೌಕರರು ಮತ್ತು ಹಳೆಯ ಸಾರ್ವಜನಿಕ ನೌಕರರಿಗೆ ಸಂಬಂಧಿಸಿದಂತೆ ಅಗತ್ಯ ಅನುಮತಿಯನ್ನು ಪಡೆದ ನಂತರ, ಇತರೆ ಆರೋಪಿತರೊಂದಿಗೆ ಹೊಸದಾಗಿ ಆರೋಪಪಟ್ಟಿಯನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ. ಎಂದು ನ್ಯಾಯಾಲಯವು ಆದೇಶ ಮಾಡಿತ್ತು.

 

 

ಅಲ್ಲದೇ 2017ರ ಜೂನ್‌ 19ರಂದು ಸಿಐಡಿ ಡಿವೈಎಸ್ಪಿ ಸೈಮನ್ ಅವರು ಪೂರ್ಣ ಕಡತವನ್ನು ತಮ್ಮ ವಶಕ್ಕೆ ಪಡೆದಿದ್ದರು. ನಂತರ ತನಿಖಾ ಸಂಸ್ಥೆಯು ಇದುವರೆಗೆ ನ್ಯಾಯಾಲಯಕ್ಕೆ ಯಾವುದೇ ಅಂತಿಮ ವರದಿಯನ್ನು ಸಲ್ಲಿಸಿಲ್ಲ. 76ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದದಲ್ಲಿ ತನಿಖಾ ಸಂಸ್ಥೆಯು ಹೊಸ ಅಂತಿಮ ವರದಿಯನ್ನು ಸಲ್ಲಿಸದೇ ಇರುವುದರಿಂದ ಈ ಪ್ರಕರಣವನ್ನು ಅಭಿಯೋಜನೆಯಿಂದ ಹಿಂಪಡೆಯುವ ಕುರಿತು ಅಭಿಪ್ರಾಯ ನೀಡಲು ಅವಕಾಶವಿರುವುದಿಲ್ಲ ಎಂದು ಸರ್ಕಾರಿ ಅಭಿಯೋಜಕರು ಇಲಾಖೆಗೆ ವರದಿ ನೀಡಿದ್ದರು.

 

ಇದೇ ವರದಿಯನ್ನುಇಲಾಖೆಯ ಉಪ ನಿರ್ದೇಶಕರಾದ ಅಂಜನಾ ಚವ್ಹಾಣ್‌ ಅವರು 2026ರ ಜೂನ್‌ 21ರಂದು ಒಳಾಡಳಿತ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಸಲ್ಲಿಸಿದ್ದರು.

ಆರೋಪಿತರ ಎಫ್‌ಐಆರ್‍‌ ರದ್ದುಗೊಳಿಸುವುದು ಅಗತ್ಯವೇಕೆ?

ಈ ಎಲ್ಲಾ ಅಭಿಪ್ರಾಯಗಳನ್ನು ಆಧರಿಸಿ ಒಳಾಡಳಿತ ಇಲಾಖೆಯಲ್ಲಿ ಅಧಿಕಾರಿಗಳ ಮಟ್ಟದಲ್ಲಿ ಸಮಾಲೋಚನೆ ನಡೆದಿವೆ. 2011ನೇ ಸಾಲಿನ ಕೆಪಿಎಸ್‌ಸಿ ನೇಮಕಾತಿ ಪ್ರಕ್ರಿಯೆಯನ್ನು ಕಾಯ್ದೆ ಮೂಲಕ ಜಾರಿಗೊಳಿಸಿದೆ.

 

 

ಈಗಾಗಲೇ ಅಭ್ಯರ್ಥಿಗಳಿಗೆ ನೇಮಕಾತಿಯನ್ನು ನೀಡಲಾಗಿದೆ. ಅಭ್ಯರ್ಥಿಗಳು ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರುಗಳ ಹಿತದೃಷ್ಟಿಯಿಂದ ಈಗಾಗಲೇ ದಾಖಲಾಗಿರುವ ಎಫ್‌ಐಆರ್‍‌ನನ್ನು ರದ್ದುಪಡಿಸುವುದು ಅಗತ್ಯವಾಗಿದೆ ಎಂದು ಇಲಾಖೆಯ ಟಿಪ್ಪಣಿ ಹಾಳೆಯಲ್ಲಿ ವಿವರಿಸಿದೆ.

Hot this week

ಗಂಗಾ ಕಲ್ಯಾಣ ಯೋಜನೆ ವಿದ್ಯುದ್ದೀಕರಣ; ವಾಸ್ತವಿಕ ವೆಚ್ಚದಲ್ಲಿ ಏರಿಕೆ, ಎಸ್ಕಾಂಗಳಿಗೆ ಆರ್ಥಿಕ ಸಂಕಷ್ಟ

ಬೆಂಗಳೂರು; ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿಗಳ ವಿದ್ಯುದ್ದೀಕರಣ ವಿದ್ಯುತ್ ಸರಬರಾಜು...

ಅಂಬೇಡ್ಕರ್, ಜಗಜೀವನ್ ರಾಂ ಪ್ರಶಸ್ತಿಗೆ ಲಾಬಿ!; ಸರಜೂ ಕಾಟ್ಕರ್ ಸೇರಿ ಹಲವರಿಂದ ಅರ್ಜಿ ಸಲ್ಲಿಕೆ

ಬೆಂಗಳೂರು; ಸಮಾಜ ಕಲ್ಯಾಣ ಇಲಾಖೆಯು ಪ್ರತೀ ಏಪ್ರಿಲ್ ತಿಂಗಳಲ್ಲಿ ನೀಡುವ ಡಾ...

ಗ್ಯಾರಂಟಿಗಳಿಂದ ಹೆಚ್ಚಿದ ಹಣಕಾಸಿನ ಒತ್ತಡ, ಶಾಸಕಾಂಗದ ಅನುಮೋದನೆಯಿಲ್ಲದೇ 10,035 ಕೋಟಿ ವೆಚ್ಚಕ್ಕೆ ಆದೇಶ

ಬೆಂಗಳೂರು; ರಾಜ್ಯ ಶಾಸಕಾಂಗದ ಅನುಮೋದನೆಗೆ ಮುಂಚಿತವಾಗಿಯೇ 10,035.13 ಕೋಟಿ ರು ವೆಚ್ಚಕ್ಕೆ...

ಬಿಜೆಪಿ ವಿರುದ್ಧ ಮಾನನಷ್ಟ ಮೊಕದ್ದಮೆ; ವರ್ಷವಾದರೂ ಇಲಾಖೆಗಳಿಂದ ಬಾರದ ಮಾಹಿತಿ, ಅಧಿಸೂಚನೆಗೂ ಕಿಮ್ಮತ್ತಿಲ್ಲ, ನೆನಪೋಲೆಯ ಕಾಲಹರಣ

ಬೆಂಗಳೂರು; ರಾಜ್ಯ ಸರ್ಕಾರದ ವಿರುದ್ಧ ತಪ್ಪು ಮಾಹಿತಿ, ತಿರುಚುವಿಕೆ ಹಾಗೂ ಸುಳ್ಳು...

ಗೋವಾ ತಮ್ನಾರ್; ಭೂಮಿಯ ಗಡಿ ಗುರುತು, ಮರಗಳ ಗಣತಿ ಅಪೂರ್ಣ, ಆದರೂ ನಿರ್ವಹಣಾ ಯೋಜನೆ ಸಲ್ಲಿಕೆ

ಬೆಂಗಳೂರು; ಪಶ್ಚಿಮ ಘಟ್ಟದ ಕಾಳಿ ಹುಲಿ ಸಂರಕ್ಷಿತಾರಣ್ಯ ಸೇರಿ ಬರೋಬ್ಬರಿ 174...

Topics

ಗಂಗಾ ಕಲ್ಯಾಣ ಯೋಜನೆ ವಿದ್ಯುದ್ದೀಕರಣ; ವಾಸ್ತವಿಕ ವೆಚ್ಚದಲ್ಲಿ ಏರಿಕೆ, ಎಸ್ಕಾಂಗಳಿಗೆ ಆರ್ಥಿಕ ಸಂಕಷ್ಟ

ಬೆಂಗಳೂರು; ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿಗಳ ವಿದ್ಯುದ್ದೀಕರಣ ವಿದ್ಯುತ್ ಸರಬರಾಜು...

ಅಂಬೇಡ್ಕರ್, ಜಗಜೀವನ್ ರಾಂ ಪ್ರಶಸ್ತಿಗೆ ಲಾಬಿ!; ಸರಜೂ ಕಾಟ್ಕರ್ ಸೇರಿ ಹಲವರಿಂದ ಅರ್ಜಿ ಸಲ್ಲಿಕೆ

ಬೆಂಗಳೂರು; ಸಮಾಜ ಕಲ್ಯಾಣ ಇಲಾಖೆಯು ಪ್ರತೀ ಏಪ್ರಿಲ್ ತಿಂಗಳಲ್ಲಿ ನೀಡುವ ಡಾ...

ಗ್ಯಾರಂಟಿಗಳಿಂದ ಹೆಚ್ಚಿದ ಹಣಕಾಸಿನ ಒತ್ತಡ, ಶಾಸಕಾಂಗದ ಅನುಮೋದನೆಯಿಲ್ಲದೇ 10,035 ಕೋಟಿ ವೆಚ್ಚಕ್ಕೆ ಆದೇಶ

ಬೆಂಗಳೂರು; ರಾಜ್ಯ ಶಾಸಕಾಂಗದ ಅನುಮೋದನೆಗೆ ಮುಂಚಿತವಾಗಿಯೇ 10,035.13 ಕೋಟಿ ರು ವೆಚ್ಚಕ್ಕೆ...

ಗೋವಾ ತಮ್ನಾರ್; ಭೂಮಿಯ ಗಡಿ ಗುರುತು, ಮರಗಳ ಗಣತಿ ಅಪೂರ್ಣ, ಆದರೂ ನಿರ್ವಹಣಾ ಯೋಜನೆ ಸಲ್ಲಿಕೆ

ಬೆಂಗಳೂರು; ಪಶ್ಚಿಮ ಘಟ್ಟದ ಕಾಳಿ ಹುಲಿ ಸಂರಕ್ಷಿತಾರಣ್ಯ ಸೇರಿ ಬರೋಬ್ಬರಿ 174...

1,094.81 ಕೋಟಿಯಷ್ಟು ಭೂ ಕಂದಾಯ ಬಾಕಿ; ವಸೂಲಾತಿಗೆ ರೇರಾ ಮೀನಮೇಷ

ಬೆಂಗಳೂರು; ರೇರಾ ಕಾಯ್ದೆ ಮತ್ತು ನಿಯಮಗಳನ್ನು ಉಲ್ಲಂಘಿಸುವ ಪ್ರಕರಣಗಳು ವರ್ಷದಿಂದ ವರ್ಷಕ್ಕೆ...

ಮನೆಗಳ ಹಂಚಿಕೆಯಲ್ಲಿ ಭ್ರಷ್ಟಾಚಾರ, ಹಣಕ್ಕೆ ಬೇಡಿಕೆ; ಪಾಟೀಲರ ಆರೋಪ, ಲೋಕಾ ತನಿಖೆಯಿಂದ ಸಾಬೀತು

ಬೆಂಗಳೂರು; ರಾಜೀವ್‌ ಗಾಂಧಿ ವಸತಿ ನಿಗಮದ ವ್ಯಾಪ್ತಿಯಲ್ಲಿ ಹಣ ಕೊಟ್ಟರಷ್ಟೇ ಮನೆಗಳನ್ನು ...

ಕದಂಬೋತ್ಸವ ಸೇರಿ ಸಾಂಸ್ಕೃತಿಕ ಉತ್ಸವಗಳಿಗೆ ಅನುದಾನ; 12.50 ಕೋಟಿ ರು ಬಾಕಿ ಉಳಿಸಿಕೊಂಡ ಸರ್ಕಾರ

  ಬೆಂಗಳೂರು; ಮೈಸೂರು ದಸರಾ ಸೇರಿದಂತೆ ಇನ್ನಿತರೆ ಜಿಲ್ಲಾಮಟ್ಟದ ವಿವಿಧ ಉತ್ಸವಗಳಿಗೆ 2024-25ಮತ್ತು...

Related Articles

Popular Categories

error: Content is protected !!