ಬೆಂಗಳೂರು; ವಸತಿ ನಿಲಯದ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಗುರುತರವಾದ ಆರೋಪಕ್ಕೆ ಗುರಿಯಾಗಿರುವ ಮುರುಘಾ ಮಠದ ಡಾ ಶಿವಮೂರ್ತಿ ಮುರುಘಾ ಶರಣರ ಪ್ರಕರಣದಲ್ಲಿ ಚಿತ್ರದುರ್ಗದ ವಿಶೇಷ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ನೀಡಿರುವ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಯೋಗ್ಯ ಪ್ರಕರಣವೆಂದು ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯು ಅಭಿಪ್ರಾಯ ಪಟ್ಟಿದೆ.
ಸರ್ಕಾರಿ ವ್ಯಾಜ್ಯಗಳ ಇಲಾಖೆಯ ಅಭಿಪ್ರಾಯವನ್ನು ಒಳಾಡಳಿತ ಇಲಾಖೆಯೂ ಸಹ ಅನುಮೋದಿಸಿದೆ. ಈ ಸಂಬಂಧ ಗೃಹ ಸಚಿವ ಡಾ ಜಿ ಪರಮೇಶ್ವರ್ ಮತತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಒಳಾಡಳಿತ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಚರ್ಚಿಸಿದ ನಂತರವೇ ಮೇಲ್ಮನವಿ ಸಲ್ಲಿಸಲು ತೀರ್ಮಾನ ಕೈಗೊಂಡಿದೆ ಎಂದು ತಿಳಿದು ಬಂದಿದೆ.
ಮೇಲ್ಮನವಿ ಸಲ್ಲಿಸಲು ಯೋಗ್ಯ ಪ್ರಕರಣವೆಂದು ಅನುಮೋದಿಸಿರುವುದಕ್ಕೆ ಸಂಬಂಧಿಸಿದಂತೆ ಒಳಾಡಳಿತ ಇಲಾಖೆಯು ಅನುಮೋದಿಸಿರುವ ಹಿನ್ನೆಲೆಯಲ್ಲಿ ಮುಂದಿನ ಕ್ರಮ ವಹಿಸಲು ಇಲಾಖೆಯು ಮುಂದಾಗಿದೆ.
ಇದಕ್ಕೆ ಸಂಬಂಧಿಸಿದಂತೆ ‘ದಿ ಫೈಲ್’ಗೆ ಟಿಪ್ಪಣಿ ಹಾಳೆಗಳು (ಕಡತ ಸಂಖ್ಯೆ; HD/1284/HCP1/2026-CP COMPUTER NUMBER 2054880) ಲಭ್ಯವಾಗಿವೆ.
ಮೇಲ್ಮನವಿ ಸಲ್ಲಿಸಲು ಯೋಗ್ಯ ಪ್ರಕರಣ- ಕಾರಣಗಳೇನು?
ಈ ಪ್ರಕರಣದಲ್ಲಿ ಸಣ್ಣಪುಟ್ಟ ಲೋಪದೋಷಗಳನ್ನು ಪರಿಗಣಿಸಿ ಆರೋಪಿಗಳನ್ನು ದೋಷಮುಕ್ತಗೊಳಿಸಿ ನೀಡಿರುವ ತೀರ್ಪು ಸಮಂಜಸವಲ್ಲ. ಈ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಅಗತ್ಯವಿದೆ ಎಂದು ಸರ್ಕಾರಿ ವ್ಯಾಜ್ಯಗಳ ಇಲಾಖೆ ಮತ್ತು ಅಭಿಯೋಗ ಇಲಾಖೆಯ ನಿರ್ದೇಶಕರು ಕಾರಣಗಳ ಪಟ್ಟಿಯನ್ನು ಒದಗಿಸಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.
ನೊಂದ ಬಾಲಕಿಯು ಲೈಂಗಿಕ ಅತ್ಯಾಚಾರ ನಡೆದ ಸಮಯಕ್ಕೆ ಅಪ್ರಾಪ್ತ ವಯಸ್ಕಳಾಗಿದ್ದಳು ಎಂಬುದು ಸ್ಪಷ್ಟವಾಗಿ ಕಂಡು ಬರುತ್ತದೆ. 1ರಿಂದ 3ನೇ ಆರೋಪಿಗಳಿಗೆ ಸೇರಿದ ಮಠದ ಅಧೀನದಲ್ಲಿ ಬರುವ ವಸತಿ ನಿಲಯದಲ್ಲಿ ನೊಂದ ಬಾಲಕಿ ವಾಸವಿದ್ದು ಆಕೆಯ ಸಂರಕ್ಷಣೆ ಆರೋಪಿಗಳಾಗಿದ್ದಾಗಿದೆ. ಆರೋಪಿಗಳೇ ನೊಂದ ಬಾಲಕಿಯ ಮೇಲೆ ಅತ್ಯಾಚಾರವಾಗಲು ಕಾರಣರಾಗಿದ್ದು ನ್ಯಾಯಾಲಯವು ಈ ಅಂಶವನ್ನು ಪರಿಗಣಿಸಿಲ್ಲ ಎಂದು ಕಾನೂನು ಅಧಿಕಾರಿಗಳು ಮತ್ತು ಅಭಿಯೋಗ ನಿರ್ದೇಶಕರು ಅಭಿಪ್ರಾಯಪಟ್ಟಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.
ನೊಂದ ಬಾಲಕಿಯ ಸಾಕ್ಷ್ಯವನ್ನು ಅಲ್ಲಗಳೆದಿರುವುದು ಸಮಂಜಸವಲ್ಲ
ನೊಂದ ಬಾಲಕಿಯು 1ನೇ ಆರೋಪಿಯು ಯಾವ ರೀತಿ ತನ್ನ ಮೇಲೆ ಲೈಂಗಿಕ ಅತ್ಯಾಚಾರ ಮಾಡಿರುವುದಾಗಿ ಸ್ಪಷ್ಟ ಮತ್ತು ಖಚಿತವಾಗಿ ಸಾಕ್ಷಿ ನುಡಿದಿದ್ದು ಆಕೆಯ ಸಾಕ್ಷ್ಯವನ್ನು ತಿರಸ್ಕರಿಸಿರುವುದು ಸಮಂಜಸವಲ್ಲ. ಅಲ್ಲದೇ ಪ್ರಾಥಮಿಕ ಸಾಕ್ಷಿ 14, 15 ಮತ್ತು ಆರೋಪಿಗಳ ನಡುವೆ ನಡೆಯುತ್ತಿರುವ ವ್ಯಾಜ್ಯಗಳಿಗೂ ನೊಂದ ಬಾಲಕಿಯ ಮೇಲೆ 1ನೇ ಆರೋಪಿ ಅತ್ಯಾಚಾರ ಮಾಡಿರುವುದಕ್ಕೆ ಯಾವುದೇ ಸಂಬಂಧವಿಲ್ಲ. ಆದರೂ ಈ ಪ್ರಕರಣಗಳ ಆಧಾರದ ಮೇಲೆ ಪ್ರಾಥಮಿಕ ಸಾಕ್ಷಿ 14 ಮತ್ತು 15ರವರ ಸಾಕ್ಷ್ಯವನ್ನು ಅಲ್ಲಗಳೆದಿರುವುದು ಸಮಂಜಸವಲ್ಲ ಎಂದು ಅಭಿಪ್ರಾಯಿಸಿರುವುದು ತಿಳಿದು ಬಂದಿದೆ.
ಪ್ರಕರಣದ ನೈಜತೆ ಅಲ್ಲಗಳೆದಿರುವುದು ಸರಿಯಲ್ಲ
ದೂರು ಸಲ್ಲಿಸಲು ಆಗಿರುವ ವಿಳಂಬಕ್ಕೆ ಆರೋಪಿಗಳು ಕೊಲೆ ಬೆದರಿಕೆ ಹಾಕಿರುವುದು ಮತ್ತು ನೊಂದ ಬಾಲಕಿಗೆ ತಿಳಿವಳಿಕೆ ಇಲ್ಲದಿರುವುದು ಕಾರಣವಾಗಿದೆ. ಇದನ್ನು ಪರಿಗಣಿಸದೇ ದೂರು ಸಲ್ಲಿಸಲು ವಿಳಂಬವಾಗಿದೆ ಎಂಬ ಕಾರಣಕ್ಕೆ ಪ್ರಕರಣದ ನೈಜತೆಯನ್ನು ಅಲ್ಲಗಳೆದಿರುವುದು ಸಮಂಜಸವಲ್ಲ ಎಂದು ಇಲಾಖೆಯ ಉಪ ನಿರ್ದೇಶಕರು ಅಭಿಪ್ರಾಯಪಟ್ಟಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.
ಸಂಶಯದಿಂದ ನೋಡಿರುವುದು ಸಮಂಜಸವಾಗಿಲ್ಲ
1ನೇ ಆರೋಪಿಯ ಖಾಸಗಿ ಕೊಠಡಿಗೆ ಹಿಂದಿನ ಬಾಗಿಲು ಇರುತ್ತದೆಯೇ ಅಥವಾ ಇಲ್ಲವೇ ಎಂಬುದು ಅಪ್ರಸ್ತುತವಾಗಿರುತ್ತದೆ. ಖಾಸಗಿ ಕೊಠಡಿಗೆ ಹಿಂದಿನ ಬಾಗಿಲು ಇರುವುದಿಲ್ಲ ಎಂಬ ಕಾರಣ ನೀಡಿರುವ ನ್ಯಾಯಾಲಯವು ಅಭಿಯೋಜನೆ ಪ್ರಕರಣವನ್ನು ಸಂಶಯದಿಂದ ನೋಡಿರುವುದು ಸಮಂಜಸವಾಗಿಲ್ಲ ಎಂದು ಅಭಿಪ್ರಾಯಿಸಿರುವುದು ತಿಳಿದು ಬಂದಿದೆ.
ಲೈಂಗಿಕ ಅತ್ಯಾಚಾರ ನಡೆದು ಹಲವು ತಿಂಗಳ ನಂತರ ವೈದ್ಯಕೀಯ ಪರೀಕ್ಷೆಗೆ ನೊಂದ ಬಾಲಕಿ ಒಳಪಟ್ಟಿರುವುದರಿಂದ ಸಹಜವಾಗಿ ಕುರುಹುಗಳು ಕಂಡು ಬರುವುದಿಲ್ಲ. ಆದರೆ ವೈದ್ಯರು ನೊಂದ ಬಾಲಕಿಯ ಮೇಲೆ ಲೈಂಗಿಕ ಅತ್ಯಾಚಾರ ನಡೆದಿರುವುದನ್ನು ಅಲ್ಲಗಳೆಯಲು ಸಾಧ್ಯವಿರುವುದಿಲ್ಲವೆಂದು ನೀಡಿರುವ ಅಭಿಪ್ರಾಯವನ್ನು ನ್ಯಾಯಾಲಯವು ಪರಿಗಣಿಸಿಲ್ಲ ಎಂದು ಅಭಿಪ್ರಾಯದಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಈ ಪ್ರಕರಣದಲ್ಲಿ ಎಲ್ಲಾ ಮಹತ್ವವಾದ ಸಾಕ್ಷಿಗಳಾದ ನೊಂದ ಬಾಲಕಿ, ಸಾಂದರ್ಭಿಕ ಸಾಕ್ಷಿದಾರರು, ಪಂಚ ಸಾಕ್ಷಿದಾರರು, ವೈದ್ಯಾಧಿಕಾರಿಗಳು ಮತ್ತು ತನಿಖಾಧಿಕಾರಿಗಳು ಮತ್ತು ಇತರೆ ಸಾಕ್ಷಿದಾರರು ಅಭಿಯೋಜನೆಯ ಪ್ರಕರಣವನ್ನು ಸಮರ್ಥಿಸಿ ಸಾಕ್ಷ್ಯ ನುಡಿದಿರುವುದು ಕಂಡು ಬಂದಿದೆ. ಆದರೆ ಸಣ್ಣಪುಟ್ಟ ವ್ಯತ್ಯಾಸಕರ ಸಾಕ್ಷ್ಯವನ್ನು ಗಮನಿಸಿ ನ್ಯಾಯಾಲಯವು ಆರೋಪಿಗಳನ್ನು ಬಿಡುಗಡೆ ಮಾಡಿರುವುದು ಸಮಂಜಸವಾಗಿಲ್ಲ ಎಂದು ಹೇಳಿದೆ.
‘ಈ ಯಾವುದೇ ಅಂಶಗಳನ್ನು ಪರಿಗಣಿಸದೇ ಸಣ್ಣಪುಟ್ಟ ಲೋಪದೋಷಗಳನ್ನು ಪರಿಗಣಿಸಿ ಆರೋಪಿಗಳನ್ನು ದೋಷಮುಕ್ತಗೊಳಿಸಿ ನೀಡಿರುವ ತೀರ್ಪು ಸಮಂಜಸವಾಗಿರುವುದಿಲ್ಲ. ಹೀಗಾಗಿ ಈ ಎಲ್ಲಾ ಕಾರಣಗಳಿಂದ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಅಗತ್ಯವಿದೆ. ಆದ್ದರಿಂದ ಉಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಇದು ಯೋಗ್ಯ ಪ್ರಕರಣವಾಗಿದೆ,’ ಎಂದು ಇಲಾಖೆಯ ಉಪ ಕಾರ್ಯದರ್ಶಿ ಅವರು ಅಭಿಪ್ರಾಯಪಟ್ಟಿರುವುದು ತಿಳಿದು ಬಂದಿದೆ.
ಈ ಪ್ರಕರಣದಲ್ಲಿ ಮುರುಘಾ ಶರಣರ ವಿರುದ್ಧ (ವಿಶೇಷ ಪ್ರಕರಣ 182/2022) ಭಾರತೀಯ ದಂಡ ಸಂಹಿತೆ ಕಲಂ 376 (2) (n) 376 (3), 323, 504, 506 ಮತ್ತು 5(1) ರೆ/ವಿ 17 ಪೋಕ್ಸೋ ಕಾಯ್ದೆ ಅಡಿ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿತ್ತು. ಈ ಎಲ್ಲಾ ಆರೋಪಗಳಿಂದ ಮುರುಘಾ ಶರಣರನ್ನು 2025ರ ನವೆಂಬರ್ 26ರಂದು ದೋಷಮುಕ್ತಗೊಳಿಸಿ ತೀರ್ಪು ನೀಡಿತ್ತು.
ಪ್ರಕರಣದ ಸಾರಾಂಶವೇನು?
ಮುರುಘಾ ರಾಜೇಂದ್ರ ಬೃಹನ್ಮಠದ ಪೀಠಾಧ್ಯಕ್ಷರಾಗಿರುವ 1ನೇ ಆರೋಪಿತನು ಮಠದ ಅಧೀನದಲ್ಲಿದ್ದ ಅಕ್ಕಮಹಾದೇವಿ ವಸತಿ ನಿಲಯದಲ್ಲಿ ಆಶ್ರಯ ಪಡೆದುಕೊಂಡಿದ್ದ ಆದಿ ಕರ್ನಾಟಕ ಜನಾಂಗಕ್ಕೆ ಸೇರಿದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ಅತ್ಯಾಚಾರವೆಸಗಿದ್ದರು.
ಲೈಂಗಿಕ ಅತ್ಯಾಚಾರ ನಡೆದಿದೆಯೇ?
ಅಪ್ರಾಪ್ತ ನೊಂದ ಬಾಲಕಿ (ಚಾಸಾ 3) 9 ತರಗತಿ ಓದುತ್ತಿದ್ದಾಗಿನಿಂದಲೂ ಆಕೆಯನ್ನು ಮುರುಘಾ ಮಠದಲ್ಲಿರುವ ರೂಮಿಗೆ ರಾತ್ರಿ ಸಮಯದಲ್ಲಿ 2ನೇ ಆರೋಪಿತಳ ಮುಖಾಂತರ ಕರೆಯಿಸಿಕೊಳ್ಳುತ್ತಿದ್ದರು. ಈ ಬಾಲಕಿ ಅಪ್ರಾಪ್ತೆ ಎಂದು ತಿಳಿದಿದ್ದರೂ ಸಹ 1ನೇ ಆರೋಪಿತನು ಆಕೆಯ ಇಚ್ಛೆಗೆ ವಿರುದ್ಧವಾಗಿ ಆಕೆ ಮೇಲೆ ಲೈಂಗಿಕ ಅತ್ಯಾಚಾರವೆಸಗಿ ಈ ವಿಚಾರವನ್ನು ಯಾರಿಗೂ ತಿಳಿಸಬಾರದು ಎಂದು ಬೆದರಿಕೆ ಹಾಕಿದ್ದರು ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಆರೋಪಪಟ್ಟಿಯಲ್ಲಿ ವಿವರಿಸಲಾಗಿತ್ತು.
ಅಕ್ಕಮಹಾದೇವಿ ವಸತಿ ನಿಲಯದ ವಾರ್ಡನ್ ಆಗಿದ್ದ 2ನೇ ಆರೋಪಿಯು ಈ ವಸತಿ ನಿಲಯದಲ್ಲಿ ಆಶ್ರಯ ಪಡೆದಿದ್ದ ನೊಂದ ಬಾಲಕಿ (ಚಾಸಾ 3) 9ನೇ ತರಗತಿ ಓದುತ್ತಿದ್ದಾಗಿನಿಂದಲೂ 2021ರಿಂದ 2022ರವರೆಗೆ ಅವಾಚ್ಯವಾಗಿ ಬೈದು ಸ್ಕೇಲ್‌ನಿಂದ ಹಲ್ಲೆ ಮಾಡಿದ್ದಳು. 3ನೇ ಆರೋಪಿತನು ಈ ಮಠದ ಅಧೀನದಲ್ಲಿಇರುವ ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಹಾಗೂ 1ನೇ ಆರೋಪಿತನ ಅಪ್ರಾಪ್ತನಾಗಿದ್ದ.
ವಸತಿ ನಿಲಯದಲ್ಲಿ ಆಶ್ರಯ ಪಡೆದಿದ್ದ ಇತರೆ ಹೆಣ್ಣು ಮಕ್ಕಳನ್ನು ಲೈಂಗಿಕ ಉದ್ದೇಶಕ್ಕಾಗಿ ಬಳಸಿಕೊಳ್ಳುವ ಉದ್ದೇಶದಿಂದ ಪುಸಲಾಯಿಸಿದ್ದ. 1ನೇ ಆರೋಪಿತನ ಖಾಸಗಿ ಕೊಠಡಿಗೆ ಕಳಿಸಿಕೊಟ್ಟಿರುವ ಬಗ್ಗೆ ತಿಳಿದಿದ್ದರೂ ಸಹ ಯಾರಿಗೂ ತಿಳಿಸದೇ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಅಪರಾಧವಾಗಲು ಸಹಕರಿಸಿದ್ದ ಎಂದು ದೋಷಾರೋಪಣೆ ಪಟ್ಟಿಯಲ್ಲಿ ವಿವರಿಸಲಾಗಿತ್ತು.
ನೊಂದ ಬಾಲಕಿಯ ಸಾಕ್ಷ್ಯವು ನಂಬಿಕೆಗೆ ಅರ್ಹವಾಗಿಲ್ಲವೇ?
ನೊಂದ ಬಾಲಕಿಯ ( ಪ್ರಾ ಸಾ -1 ) ಸಾಕ್ಷ್ಯ ನಂಬಲು ಅರ್ಹವಾಗಿರುವುದಿಲ್ಲ. ನೊಂದ ಬಾಲಕಿಯ ತಂದೆ (ಪ್ರಾ ಸಾ -4) ಮತ್ತು ನೊಂದ ಬಾಲಕಿಯ ಅಜ್ಜಿ (ಪ್ರಾ ಸಾ 5) ತಮ್ಮ ಸಾಕ್ಷ್ಯದಲ್ಲಿ ನೊಂದ ಬಾಲಕಿಯು ಆಗಾಗ್ಗೆ ಹಬ್ಬ ಮತ್ತು ರಜಾ ದಿನಗಳಲ್ಲಿ ಮನೆಗೆ ಬರುತ್ತಿದ್ದಳು ಎಂದು ಹೇಳಿದ್ದರು. ಈ ರೀತಿ ಬಂದ ಸಮಯದಲ್ಲಿ ನೊಂದ ಬಾಲಕಿಯು ಒತ್ತಾಯಪೂರ್ವಕ ಲೈಂಗಿಕ ಸಂಪರ್ಕ ಮಾಡಿರುವುದನ್ನು ಹೇಳಿರುವುದಿಲ್ಲ ಎಂದು ಸಾಕ್ಷಿ ನುಡಿದಿದ್ದರು. ಆದ್ದರಿಂದ ನೊಂದ ಬಾಲಕಿ (ಪ್ರಾ ಸಾ -1) ಯ ಸಾಕ್ಷ್ಯವು ನೈಸರ್ಗಿಕವಾಗಿಲ್ಲ. ಮತ್ತು ನಂಬಿಕೆಗೆ ಅರ್ಹವಾಗಿರುವುದಿಲ್ಲ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿತ್ತು.
ಅಲ್ಲದೇ ನೊಂದ ಬಾಲಕಿಯು ( ಪ್ರಾ ಸಾ 1) 1ನೇ ಆರೋಪಿಯು ಲೈಂಗಿಕ ಹಿಂಸೆ ನೀಡಿದ ಬಗ್ಗೆ ಮೊದಲು ಪ್ರಾ ಸಾ 14 ಮತ್ತು 15 ರವರಿಗೆ ತಿಳಿಸಿದ್ದಳು. ಆ ನಂತರ ಈ ವಿಚಾರವು ಪ್ರಾ ಸಾ 16 ಮತ್ತು 17 ರವರಿಗೆ ತಿಳಿದು ಬಂದಿತ್ತು. ಪ್ರಾಥಮಿಕ ಸಾಕ್ಷಿ 14, 15 ಮತ್ತು 1ನೇ ಆರೋಪಿಯ ನಡುವೆ ಹಲವಾರು ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳು ಚಾಲ್ತಿಯಲ್ಲಿವೆ. ಈ ಕಾರಣದಿಂದ ಪ್ರಾಥಮಿಕ ಸಾಕ್ಷಿ 14 ಮತ್ತು 15ರವರ ಸಾಕ್ಷ್ಯವು ನಂಬಿಕೆಗೆ ಅರ್ಹವಾಗಿಲ್ಲ ಎಂದು ನ್ಯಾಯಾಲಯು ಅಭಿಪ್ರಾಯಪಟ್ಟಿತ್ತು.
ಪ್ರಾಥಮಿಕ ಸಾಕ್ಷಿ 16 ಮತ್ತು 17 ರವರು ಒಡನಾಡಿ ಸಂಸ್ಥೆಯ ಅಧ್ಯಕ್ಷರು ಮತ್ತು ಕಾರ್ಯದರ್ಶಿಯಾಗಿದ್ದರು. ಅವರು ನೊಂದ ಬಾಲಕಿಯರ ಪೋಷಕರಿಗೆ ಮತ್ತು ಶಾಲೆಯ ಮುಖ್ಯಸ್ಥರಿಗೆ ವಿಚಾರಗಳನ್ನು ತಿಳಿಸದೇ ಇರುವುದು ಕಂಡು ಬರುತ್ತದೆ. ಮತ್ತು ಅವರು ಕೇಳಿಕೆಯ ಸಾಕ್ಷಿದಾರರಾಗಿದ್ದಾರೆ. ಅವರ ಸಾಕ್ಷ್ಯವನ್ನು ಪರಿಗಣಿಸಿ 1ನೇ ಆರೋಪಿ ನೊಂದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿರುತ್ತಾರೆಂದು ಅಭಿಪ್ರಾಯಕ್ಕೆ ಬರಲು ಸಾಧ್ಯವಿರುವುದಿಲ್ಲ ಎಂದು ನಿರ್ಧರಿಸಿರುತ್ತದೆ ಎಂದು ತನ್ನ ತೀರ್ಪಿನಲ್ಲಿ ಉಲ್ಲೇಖಿಸಿತ್ತು.
ಹಿಂಬಾಗಿಲು ಇಲ್ಲವೇ?
ಅಲ್ಲದೆ 1ನೇ ಆರೋಪಿ ವಾಸ ಇದ್ದ ಖಾಸಗಿ ಕೊಠಡಿಗೆ ಹಿಂಬಾಗಿಲಿದೆ. ಆ ಮೂಲಕ ನೊಂದ ಬಾಲಕಿಯರನ್ನು ಕರೆಸಿಕೊಳ್ಳುತ್ತಿದ್ದರು ಎಂಬ ಅಭಿಯೋಜನೆ ಪ್ರಕರಣವಾಗಿದೆ. ಆದರೆ ಸಹಾಯಕ ಅಭಿಯಂತರು ( ಪ್ರಾಥಮಿಕ ಸಾಕ್ಷಿ 26 ) ಸಾಕ್ಷ್ಯದಂತೆ ಮತ್ತು ಅವರು ನೀಡಿರುವ ನಕಾಶೆಯಂತೆ 1ನೇ ಆರೋಪಿಯ ಖಾಸಗಿ ಕೊಠಡಿಗೆ ಯಾವುದೇ ಹಿಂಬಾಗಿಲು ಇರುವುದು ಕಂಡು ಬರುತ್ತಿಲ್ಲ. ಮತ್ತು ಅದೇ ರೀತಿ ಸ್ಕೈ ವಾಕ್ ಸಹ ಈ ಮನೆಗೆ ಪ್ರವೇಶ ಮಾಡಲು ಇರುವುದಿಲ್ಲ. ಆದ್ದರಿಂದ ಈ ಪ್ರಕರಣವು ಸಂಶಯದಿಂದ ಕೂಡಿದೆ ಎಂದು ನ್ಯಾಯಾಲಯವು ಅಭಿಪ್ರಾಯಿಸಿತ್ತು.
ವೈದ್ಯಕೀಯ ಮತ್ತು ವೈಜ್ಞಾನಿಕ ಸಾಕ್ಷ್ಯವನ್ನು ಪರಿಶೀಲಿಸಿದಾಗ ನೊಂದ ಬಾಲಕಿಯ ಮೇಲೆ ಒತ್ತಾಯಪೂರ್ವಕ ಲೈಂಗಿಕ ಅತ್ಯಾಚಾರ ನಡೆದಿರುವುದಕ್ಕೆ ಕುರುಹುಗಳು ಇರುವುದಿಲ್ಲ. ಇತ್ತೀಚಿಗೆ ಲೈಂಗಿಕ ಅತ್ಯಾಚಾರ ನಡೆದಿರುವುದು ಕಂಡುಬಂದಿರುವುದಿಲ್ಲ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಆದ್ದರಿಂದ ವೈದ್ಯಕಖೀಯ ಸಾಕ್ಷ್ಯವು ಈ ಅಭಿಯೋಜನೆ ಪ್ರಕರಣಕ್ಕೆ ಸಹಕಾರಿಯಾಗಿಲ್ಲ.
‘ಒಟ್ಟಾರೆ 1ನೇ ಆರೋಪಿಯು ಲೈಂಗಿಕ ಅತ್ಯಾಚಾರ ಮಾಡಿರುವುದಕ್ಕೆ ನಿಖರ ಮತ್ತು ಖಚಿತ ಸಾಕ್ಷ್ಯವಿರುವುದಿಲ್ಲ. ಮತ್ತು ಅದೇ ರೀತಿ 2 ಮತ್ತು 3ನೇ ಆರೋಪಿಗಳು 1ನೇ ಆರೋಪಿಗೆ ಸಹಕಾರ ಮಾಡಿದ ಬಗ್ಗೆ ಸಾಕ್ಷ್ಯಾಧಾರಗಳಿರುವುದಿಲ್ಲ. ಈ ಎಲ್ಲಾ ಕಾರಣಗಳಿಂದ ಅಭಿಯೋಜನೆಯು ಸಂಶಯಕ್ಕೆ ಆಸ್ಪದವಿಲ್ಲದಂತೆ ಈ ಪ್ರಕರಣವನ್ನು ಸಾಬೀತುಪಡಿಸಲು ವಿಫಲವಾಗಿದೆ. ಹೀಗಾಗಿ ಆರೋಪಿಗಳನ್ನು ದೋಷಮುಕ್ತಗೊಳಿಸಲಾಗಿದೆ ಎಂದು ತನ್ನ ತೀರ್ಪಿನಲ್ಲಿ ಹೇಳಿತ್ತು.
ವಿಶೇಷ ಸರ್ಕಾರಿ ಅಭಿಯೋಜಕರ ಅಭಿಪ್ರಾಯವೇನು?
ಈ ಪ್ರಕರಣದಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರು ತಮ್ಮ ವಾದವನ್ನು ಮಂಡಿಸಿದ್ದರು. 1ನೇ ಆರೋಪಿಯ ಖಾಸಗಿ ಕೊಠಡಿಗೆ ಹಿಂದಿನ ಬಾಗಿಲು ಇರುವುದಿಲ್ಲ ಎಂದು ನಿರ್ಣಯಿಸಿದೆ. ಆದರೆ ಇದು ಸಮಂಜಸವಲ್ಲ. ಸ್ಥಳ ಪಂಚನಾಮೆಯಲ್ಲಿ ಹಿಂದಿನ ಬಾಗಿಲು ಇದೆ ಎಂದು ನಮೂದಾಗಿದೆ. ನೊಂದ ಬಾಲಕಿಯು ತನ್ನ ಪೋಷಕರಿಗೆ 1ನೇ ಆರೋಪಿ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಹೇಳದೇ ಇರುವುದಕ್ಕೆ ಆರೋಪಿಗಳು ನೊಂದ ಬಾಲಕಿ ಮತ್ತು ಅವರ ಪೋಷಕರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದೇ ಕಾರಣವಾಗಿದೆ. ಆದರೆ ನ್ಯಾಯಾಲಯವು ಈ ಅಂಶವನ್ನು ಪರಿಗಣಿಸಿಲ್ಲ ಎಂದು ವಿಶೇಷ ಸರ್ಕಾರಿ ಅಭಿಯೋಜಕರು ಅಭಿಪ್ರಾಯಿಸಿದ್ದರು.
ನ್ಯಾಯಾಲಯವು ವೈದ್ಯಕೀಯ ಸಾಕ್ಷ್ಯವನ್ನು ಸೂಕ್ತವಾಗಿ ಪರಾಮರ್ಶೆ ಮಾಡಿರುವುದಿಲ್ಲ. ಸಾಮಾನ್ಯವಾಗಿ ಲೈಂಗಿಕ ಅತ್ಯಾಚಾರ ನಡೆದು ಹಲವು ದಿನಗಳ ನಂತರ ಪರೀಕ್ಷೆ ಮಾಡಿದಾಗ ಅತ್ಯಾಚಾರ ಮಾಡಿದ ಕುರುಹುಗಳು ಕಂಡುಬರದೇ ಇರುವುದು ಸಹಜವಾಗಿದೆ. ನ್ಯಾಯಾಲಯವು ಇದನ್ನು ಪರಿಗಣಿಸಿಲ್ಲ. ನೊಂದ ಬಾಲಕಿಯು (ಪ್ರಾಥಮಿಕ ಸಾಕ್ಷಿ 1 ) 1ನೇ ಆರೋಪಿಯು ಯಾವ ರೀತಿ ಲೈಂಗಿಕ ಸಂಪರ್ಕ ಮಾಡಿರುತ್ತಾರೆಂಬ ಬಗ್ಗೆ ಸ್ಪಷ್ಟವಾಗಿ ಸಾಕ್ಷಿ ನುಡಿದಿದ್ದಾರೆ. 2 ಮತ್ತು 3ನೇ ಆರೋಪಿಗಳು 1ನೇ ಆರೋಪಿಗೆ ಸಹಾಯ ಮಾಡಿದ್ದ ಬಗ್ಗೆ ಖಚಿತ ಸಾಕ್ಷಿ ನುಡಿದಿದ್ದಾರೆ. ಆದರೂ ನ್ಯಾಯಾಲಯವು ಈ ಯಾವುದೇ ಅಂಶಗಳನ್ನು ಪರಿಗಣಿಸಿಲ್ಲ ಎಂದು ಅಭಿಪ್ರಾಯದಲ್ಲಿ ವಿವರಿಸಿದ್ದರು.
ಪೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದರೂ ಮುರುಘಾ ಶರಣರನ್ನು ಬಂಧಿಸಲು ಪೊಲೀಸರು ಮೀನಮೇಷ ಎಣಿಸಿದ್ದರು. ಕಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಪೊಲೀಸರು ಅವರನ್ನು ಬಂಧಿಸಿದ್ದರು. ಈ ಪ್ರಕರಣವನ್ನು ಮೊದಲು ಬಹಿರಂಗಗೊಳಿಸಿದ್ದ ‘ದಿ ಫೈಲ್’ ಸತತವಾಗಿ ಇದರ ಸುತ್ತ ವರದಿಗಳನ್ನು ಪ್ರಕಟಿಸಿತ್ತು.
ಮುರುಘಾ ಮಠದ ಶರಣರ ವಿರುದ್ಧ ಪೋಕ್ಸೋ ಅಡಿಯಲ್ಲಿ ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂಬ ಸುದ್ದಿಯನ್ನು ಎಲ್ಲಾ ಮುಖ್ಯವಾಹಿನಿಗಳಿಗಿಂತಲೂ ಮೊದಲೇ ‘ದಿ ಫೈಲ್’ 2022ರ ಆಗಸ್ಟ್ 26ರಂದು ರಾತ್ರಿ 11.56ಕ್ಕೆ ವರದಿ ಪ್ರಕಟಿಸಿತ್ತು.
ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಮುರುಘಾ ಶರಣರ ವಿರುದ್ಧ ಪೋಕ್ಸೋ ಪ್ರಕರಣ ದಾಖಲು
ಪೋಕ್ಸೋ ಅಡಿಯಲ್ಲಿ ಮೊಕದ್ದಮೆ ದಾಖಲಾದ ಸುದ್ದಿಯನ್ನು ‘ದಿ ಫೈಲ್’ ಹೊರಗೆಡವುತ್ತಿದ್ದಂತೆ ಪ್ರಕರಣದಿಂದ ಶ್ರೀಗಳನ್ನು ರಕ್ಷಿಸಲು ಇನ್ನಿತರೆ ಮಠಾಧೀಶರು ಮುರುಘಾ ಮಠದತ್ತ ದೌಡಾಯಿಸಿದರು. ಗೃಹ ಸಚಿವ ಆರಗ ಜ್ಞಾನೇಂದ್ರ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಬಹುತೇಕರು ಶ್ರೀಗಳ ಪರ ವಕಾಲತ್ತು ವಹಿಸಿದ್ದರು. ಆ ಸಂದರ್ಭದಲ್ಲಿ ನೈಜ ಹೋರಾಟಗಾರರ ವೇದಿಕೆಯು ಈ ಪ್ರಕರಣವನ್ನು ಹೊರರಾಜ್ಯಕ್ಕೆ ವರ್ಗಾಯಿಸಬೇಕು ಎಂದು ಆಗ್ರಹಿಸಿತ್ತು. ಈ ಕುರಿತು ಆಗಸ್ಟ್ 28ರಂದು ವರದಿ ಪ್ರಕಟಿಸಿತ್ತು.
ಶರಣರ ವಿರುದ್ಧದ ಪ್ರಕರಣ ಹೊರರಾಜ್ಯಕ್ಕೆ ವರ್ಗಾಯಿಸಲು ಮನವಿ; ಪೋಕ್ಸೋ ತನಿಖೆ ಮೇಲೆ ಪ್ರಭಾವ!
ಈ ಪ್ರಕರಣದ ಬೆನ್ನಲ್ಲೆ ಚಿತ್ರದುರ್ಗ ಜಿಲ್ಲೆಯಲ್ಲಿ ಪೋಕ್ಸೋ ಕಾಯ್ದೆಯಡಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಎಷ್ಟು ಪ್ರಕರಣಗಳು ದಾಖಲಾಗಿವೆ, ತನಿಖೆಯ ಸ್ಥಿತಿಗತಿ ಮತ್ತು ಎಷ್ಟು ಪ್ರಕರಣಗಳಲ್ಲಿ ಬಂಧನವಾಗಿವೆ ಎಂದು ಅಂಕಿ ಸಂಖ್ಯೆ ಸಮೇತ ವರದಿಯನ್ನು ಆಗಸ್ಟ್ 29ರಂದು ವರದಿ ಪ್ರಕಟಿಸಿತ್ತು.
ಚಿತ್ರದುರ್ಗದಲ್ಲಿ ಪೋಕ್ಸೋ ಕಾಯ್ದೆ ಅನುಷ್ಠಾನ; 3 ವರ್ಷದಲ್ಲಿ 123 ಪ್ರಕರಣ, 146 ಮಂದಿ ಬಂಧನ
ಮುರುಘಾ ಶರಣರ ವಿರುದ್ಧ ಕೇಳಿ ಬಂದಿದ್ದ ಗುರುತರವಾದ ಆರೋಪವನ್ನು ರಾಜಕಾರಣಿಗಳೇ ತಳ್ಳಿ ಹಾಕಿದ್ದರು. ಆರೋಪದಿಂದ ಶ್ರೀಗಳು ಮುಕ್ತಿ ಹೊಂದಲಿದ್ದಾರೆ ಎಂಬ ಮಾತುಗಳನ್ನಾಡುವ ಮೂಲಕ ಪ್ರಕರಣದ ತನಿಖೆಯ ಹಾದಿಯ ಸುಳಿವು ನೀಡಿದ್ದರು. ಆಗ ಬಿಜೆಪಿಯ ರಾಜ್ಯಸಭೆ ಸದಸ್ಯ ಲೆಹರ್‌ಸಿಂಗ್ ಅವರು ಪ್ರಕರಣದ ತನಿಖೆಯನ್ನು ಹೊರರಾಜ್ಯಕ್ಕೆ ವರ್ಗಾಯಿಸಬೇಕು ಎಂದು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದರು. ಈ ಸುದ್ದಿಯನ್ನು ‘ದಿ ಫೈಲ್’ 2022ರ ಆಗಸ್ಟ್ 29ರಂದೇ ಪ್ರಕಟಿಸಿತ್ತು.
ಪೋಕ್ಸೋ ಪ್ರಕರಣ ಹೊರರಾಜ್ಯಕ್ಕೆ ವರ್ಗಾಯಿಸಲು ಹೆಚ್ಚಿದ ಒತ್ತಡ; ರಾಜ್ಯಸಭಾ ಸದಸ್ಯ ಲೆಹರ್‌ಸಿಂಗ್ ಹೇಳಿಕೆ ಬಿಡುಗಡೆ
ಮೊದಲನೇ ಆರೋಪಿ ಮುರುಘಾ ಶರಣರ ವಿರುದ್ಧ ಪೋಕ್ಸೋ ಕಾಯ್ದೆಯಡಿಯಲ್ಲಿ ಮೊಕದ್ದಮೆ ದಾಖಲಾಗಿದ್ದರೂ ಸಂತ್ರಸ್ತ ಬಾಲಕಿಯರಿಂದ ಸಿಆರ್‌ಪಿಸಿ 164 ಅಡಿಯಲ್ಲಿ ಹೇಳಿಕೆ ದಾಖಲಿಸಿಕೊಂಡಿರಲಿಲ್ಲ. ಬದಲಿಗೆ ಚಿತ್ರದುರ್ಗ ಶಿಕ್ಷಕನೊಬ್ಬನ ಪ್ರಕರಣದ ಥಳಕು ಹಾಕಿ ಶರಣರಿಗೆ ನಿರೀಕ್ಷಣಾ ಜಾಮೀನು ಕೊಡಿಸುವ ಎಲ್ಲಾ ತಂತ್ರ ಹೂಡಿದ್ದರು. ಈ ಕುರಿತು ಆಗಸ್ಟ್ 30ರಂದು ವರದಿ ಪ್ರಕಟಿಸಿತ್ತು.
ಸೆಕ್ಷನ್ 164 ಹೇಳಿಕೆ ವಿಳಂಬ; ಪೊಲೀಸರ ತಂತ್ರಗಾರಿಕೆ ಹಿಂದಿದೆಯೇ ಚಿತ್ರದುರ್ಗ ಶಿಕ್ಷಕನ ಜಾಮೀನು ಪ್ರಕರಣ?
ಈ ಪ್ರಕರಣವು ರಾಜ್ಯಾದ್ಯಂತ ಹೆಚ್ಚು ಚರ್ಚೆಗೊಳಗಾಗಿದ್ದರೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆದಿಯಾಗಿ ಕಾಂಗ್ರೆಸ್‌ನ ಯಾವೊಬ್ಬ ಮುಖಂಡರೂ ತುಟಿ ಬಿಚ್ಚಿರಲಿಲ್ಲ. ಈ ಕುರಿತು 2022ರ ಆಗಸ್ಟ್ 30ರಂದು ವರದಿ ಪ್ರಕಟಿಸಿತ್ತು.
ಶರಣರ ವಿರುದ್ಧ ಪೋಕ್ಸೋ ಮೊಕದ್ದಮೆ; ತುಟಿ ಬಿಚ್ಚದ ಸಿದ್ದರಾಮಯ್ಯ,ಅಂತರ ಕಾಯ್ದುಕೊಂಡ ಕಾಂಗ್ರೆಸ್
ಮುರುಘಾ ಶರಣರ ವಿರುದ್ಧ ಇಂತಹದೊಂದು ಗುರುತರ ಆರೋಪ ಕೇಳಿ ಬಂದ ಕೂಡಲೇ ಶರಣರ ಪರ ಹೇಳಿಕೆ ನೀಡುವ ಮೂಲಕ ಮಾದಾರ ಚನ್ನಯ್ಯ ಗುರುಪೀಠವು ದಲಿತ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಕುರಿತು 2022ರ ಆಗಸ್ಟ್ 31ರಂದು ವರದಿ ಪ್ರಕಟಿಸಿತ್ತು.
ದಲಿತ ಸಮುದಾಯದ ಅಪ್ರಾಪ್ತ ಬಾಲಕಿ, ಸಂತ್ರಸ್ತೆ ಎಂಬುದನ್ನೇ ಮರೆತರೇ ಮಾದಾರಾ ಚನ್ನಯ್ಯ ಶ್ರೀ?
ಸಿಆರ್‌ಪಿಸಿ 164 ಅಡಿಯಲ್ಲಿ ಸಂತ್ರಸ್ತ ಬಾಲಕಿಯರ ಹೇಳಿಕೆ ಪಡೆಯಲು ವಿಳಂಬ ತಂತ್ರಗಾರಿಕೆ ಅನುಸರಿಸಿದ್ದ ಪೊಲೀಸರು ನ್ಯಾಯವನ್ನೇ ಅವಹೇಳನ ಮಾಡಿದ್ದರು ಎಂದು ಮಹಿಳಾ ವೇದಿಕೆಗಳು ಆಕ್ರೋಶ ವ್ಯಕ್ತಪಡಿಸಿ ಇಲಾಖೆಯ ನಿರ್ದೇಶಕರಿಗೆ ಜಂಟಿ ಮನವಿ ಸಲ್ಲಿಸಿದ್ದವು. ಈ ಕುರಿತು ಆಗಸ್ಟ್ 31ರಂದು ವರದಿ ಪ್ರಕಟಿಸಿತ್ತು. ಲ
ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ; ಮುರುಘಾ ಶರಣರ ಬಂಧಿಸದ ಪೊಲೀಸರಿಂದಲೇ ನ್ಯಾಯದ ಅವಹೇಳನ
ಶರಣರ ವಿರುದ್ಧ ಪೋಕ್ಸೋ ಮೊಕದ್ದಮೆ ದಾಖಲಾಗಿದ್ದರೂ ಕಾಂಗ್ರೆಸ್‌ನ ಯಾವೊಬ್ಬ ಮುಖಂಡರೂ ದನಿ ಎತ್ತಿಲ್ಲ ಎಂದು ‘ದಿ ಫೈಲ್’ ವರದಿ ಮಾಡುತ್ತಿದ್ದಂತೆಯೇ ಕಾಂಗ್ರೆಸ್‌ನ ಮುಖಂಡ ಮತ್ತು ಮಾಜಿ ಸಚಿವ ಡಾ ಎಚ್ ಸಿ ಮಹದೇವಪ್ಪ ಅವರು ಈ ಕುರಿತು ದನಿ ಎತ್ತಿದ್ದರು. ಅಲ್ಲದೆ ಟ್ವೀಟ್ ಕೂಡ ಮಾಡಿದ್ದರು. ಈ ಕುರಿತು ಆಗಸ್ಟ್ 31ರಂದು ವರದಿ ಪ್ರಕಟಿಸಿತ್ತು.
ಮುರುಘಾ ಶರಣರ ವಿರುದ್ಧ ಪೋಕ್ಸೋ ಪ್ರಕರಣ; ‘ದಿ ಫೈಲ್’ ವರದಿ ಬೆನ್ನಲ್ಲೇ ಮೌನ ಮುರಿದ ಎಚ್ ಸಿ ಮಹದೇವಪ್ಪ
ಮುರುಘಾ ಮಠದಲ್ಲಿರುವ ವಸತಿ ನಿಲಯವು ನೇರವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ವಹಣೆಯಲ್ಲಿತ್ತು. ಇದೇ ವಸತಿ ನಿಲಯದ ಮಕ್ಕಳು ಲೈಂಗಿಕ ದೌರ್ಜನಕ್ಕೆ ಒಳಗಾಗಿದ್ದರು. ಆದರೂ ಸಚಿವ ಹಾಲಪ್ಪ ಆಚಾರ್ ಮತ್ತು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರು ತುಟಿ ಬಿಚ್ಚಿರಲಿಲ್ಲ. ಈ ಕುರಿತು ಸೆ.1ರಂದು ವರದಿ ಪ್ರಕಟಿಸಿತ್ತು.
ಶರಣರಿಂದ ಲೈಂಗಿಕ ದೌರ್ಜನ್ಯ ಆರೋಪ; ಮೌನಕ್ಕೆ ಜಾರಿದ ಮಹಿಳಾ-ಮಕ್ಕಳ ಕಲ್ಯಾಣ, ಶಿಕ್ಷಣ ಸಚಿವರು
ಅಷ್ಟೇ ಅಲ್ಲ, ಚಿತ್ರದುರ್ಗ ಪೊಲೀಸರು ಅನುಸರಿಸುತ್ತಿರುವ ವಿಳಂಬದ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸ್ವಯಂ ಪ್ರೇರಿತ ಮೊಕದ್ದಮೆ ದಾಖಲಿಸಿಕೊಂಡಿತ್ತು.
ಲೈಂಗಿಕ ದೌರ್ಜನ್ಯ; ಪೊಲೀಸ್ ಇಲಾಖೆ ಮೀನಮೇಷ, ಎನ್‌ಸಿಪಿಆರ್‌ನಿಂದ ಸ್ವಯಂ ಪ್ರೇರಿತ ಪ್ರಕರಣ
ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ನೋಟೀಸ್ ಕೂಡ ನೀಡಿತ್ತು. ಈ ಕುರಿತು ಸೆ.1ರಂದು ದಿ ಫೈಲ್ ವರದಿ ಪ್ರಕಟಿಸಿತ್ತು.









