ಶರಣರಿಂದ ಲೈಂಗಿಕ ದೌರ್ಜನ್ಯ ಆರೋಪ; ಮೌನಕ್ಕೆ ಜಾರಿದ ಮಹಿಳಾ-ಮಕ್ಕಳ ಕಲ್ಯಾಣ, ಶಿಕ್ಷಣ ಸಚಿವರು

ಬೆಂಗಳೂರು; ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನೇರ ಮೇಲ್ವಿಚಾರಣೆಯಲ್ಲಿರುವ ಚಿತ್ರದುರ್ಗದ ಮುರುಘಾ ಮಠದ ಪ್ರಾಂಗಣದಲ್ಲಿರುವ ವಸತಿ ನಿಲಯದ ಬಾಲಕಿಯರಿಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಗುರುತರ ಆರೋಪಕ್ಕೆ ಗುರಿಯಾಗಿರುವ ಮುರುಘಾ ಮಠದ ಡಾ ಶಿವಮೂರ್ತಿ ಶರಣರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಎಫ್‌ಐಆರ್‌ ದಾಖಲಾಗಿದ್ದರೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್‌ ಅವರು ಇದುವರೆಗೂ ಮೌನ ಮುರಿದಿಲ್ಲ.

 

ವಸತಿ ನಿಲಯದಲ್ಲಿ ತಂಗಿರುವ ಶಾಲಾ ಮಕ್ಕಳ ಮೇಲೆ ಮಠದ ಮುಖ್ಯಸ್ಥರೇ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಪ್ರಕರಣವು ಪೊಲೀಸ್‌ ಠಾಣೆ ಮೆಟ್ಟಿಲೇರಿದ ನಂತರ ಅದೇ ವಸತಿ ನಿಲಯದ ಹಲವು ಮಕ್ಕಳು ಈ ಘಟನೆಯಿಂದ ಆಘಾತಕ್ಕೊಳಗಾಗಿದ್ದಾರೆ. ಅದರಲ್ಲೂ ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಸ್ತುವಾರಿಯಲ್ಲಿರುವ ವಸತಿ ನಿಲಯದ ಮಹಿಳಾ ಮೇಲ್ವಿಚಾರಕರೇ ಸ್ವಾಮೀಜಿ ಬಳಿ ವಿದ್ಯಾರ್ಥಿನಿಯರನ್ನು ಕಳಿಸುತ್ತಿದ್ದರು ಎಂಬ ಸಂಗತಿಯು ಬಹಿರಂಗಗೊಂಡ ನಂತರವೂ ಸಚಿವ ಹಾಲಪ್ಪ ಆಚಾರ್‌ ಅವರು ಇದುವರೆಗೂ ಒಂದೇ ಒಂದು ಪ್ರತಿಕ್ರಿಯೆಯನ್ನೂ ವ್ಯಕ್ತಪಡಿಸಿಲ್ಲ.

 

ಮುರುಘಾ ಶರಣರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿರುವ ಇಬ್ಬರು ವಿದ್ಯಾರ್ಥಿನಿಯರು ತಂಗಿದ್ದ ಹಾಸ್ಟೆಲ್‌ನ ಎಲ್ಲ ವಿದ್ಯಾರ್ಥಿಗಳ ಹೇಳಿಕೆಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ದಾಖಲು ಮಾಡಿಕೊಂಡಿದ್ದಾರೆ. ಇಲಾಖೆ ನಿರ್ದೇಶಕರ ಸೂಚನೆ ಮೇರೆಗೆ ಹಾಸ್ಟೆಲ್‌ಗೆ ಭೇಟಿ ನೀಡಿದ ತಂಡ ಹಾಜರಾತಿ ಪುಸ್ತಕ, ಊಟ ಹಾಗೂ ವಸತಿ ಸೌಲಭ್ಯ ಪರಿಶೀಲಿಸಿದೆಯಲ್ಲದೆ ತರಗತಿ ಮುಗಿಸಿ ಬಂದ ಮಕ್ಕಳ ವಿಚಾರಣೆಯನ್ನೂ ನಡೆಸಿದೆ.

 

ಆರೋಪ  ಕೇಳಿಬರುತ್ತಿದ್ದಂತೆ ಆತಂಕಗೊಂಡಿರುವ ಕೆಲ ಮಕ್ಕಳ ಪಾಲಕರು ವಸತಿ ನಿಲಯದತ್ತ  ಧಾವಿಸಿ ಮಕ್ಕಳನ್ನು ಮನೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಇಷ್ಟೆಲ್ಲಾ ಬೆಳವಣಿಗೆ ನಡೆದಿದ್ದರೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ ಹಾಲಪ್ಪ ಆಚಾರ್‌ ಇದುವರೆಗೂ ಈ ಘಟನೆ ಸಂಬಂಧ  ತುಟಿಬಿಚ್ಚಿಲ್ಲ.

 

ಚಿತ್ರದುರ್ಗ, ದಾವಣಗೆರೆ ಹಾಗೂ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಿಂದ ಬಂದಿರುವ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜು ವ್ಯಾಸಂಗ ಮಾಡುತ್ತಿರುವ 100 ವಿದ್ಯಾರ್ಥಿನಿಯರು ವಸತಿ ನಿಲಯದಲ್ಲಿದ್ದಾರೆ. ಅಲ್ಲದೆ ಬಸವ ಕುಟೀರ ಹೆಸರಿನಲ್ಲಿರುವ ವಿದ್ಯಾರ್ಥಿನಿಲಯವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿಯಂತ್ರಣದಲ್ಲಿದೆ.

 

ಇನ್ನು, ಮಠಕ್ಕೆ ಹೊಂದಿಕೊಂಡಿರುವ ಶಾಲೆಯು ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿದೆ. ಘಟನೆ ಬಹಿರಂಗಗೊಳ್ಳುತ್ತಿದ್ದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ವಸತಿ ನಿಲಯಕ್ಕೆ ತೆರಳಿ ಮಾಹಿತಿ ಕಲೆ ಹಾಕಿದ್ದರೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಆ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದ ಶಾಲೆಗೆ ತೆರಳಿಲ್ಲ ಎಂದು ತಿಳಿದು ಬಂದಿದೆ. ಈ ಘಟನೆ ಸಂಬಂಧ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಬಿ ಸಿ ನಾಗೇಶ್‌ ಕೂಡ ಯಾವುದೇ ಪ್ರತಿಕ್ರಿಯೆಯನ್ನೂ ನೀಡಿಲ್ಲ.

 

ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಡಿ ಕೆ ಶಿವಕುಮಾರ್‌, ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್‌, ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಆದಿಯಾಗಿ ಯಾವೊಬ್ಬ ನಾಯಕರೂ ಇದುವರೆಗೂ ತುಟಿ ಬಿಚ್ಚಿಲ್ಲ.

the fil favicon

SUPPORT THE FILE

Latest News

Related Posts