ಬೆಂಗಳೂರು; ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ವಿ ಗೋಪಾಲಗೌಡ ಅವರು ವಾಸವಿರುವ ಮನೆಯೂ ಸೇರಿದಂತೆ, ಇದಕ್ಕೆ ಹೊಂದಿಕೊಂಡಿರುವ ಹಲವಾರು ಮನೆಗಳು, ಬಿಬಿಎಂಪಿ ಕಚೇರಿ ಮತ್ತು ಸಾರ್ವಜನಿಕ ಉದ್ಯಾನ ಹಾಗೂ ಮಕ್ಕಳ ಆಟದ ಉದ್ಯಾನ ಸೇರಿದಂತೆ ಸುಮಾರು 1 ಎಕರೆ 19 ಗುಂಟೆ ಜಮೀನಿಗೆ ಭೂಮಾಪನ, ಕಂದಾಯ ನಕಲಿ ದಾಖಲೆಗಳನ್ನು ಸೃಷ್ಟಿಸಿ ಲಪಟಾಯಿಸಿರುವ ಬೃಹತ್ ಭೂ ಅಕ್ರಮ ಪ್ರಕರಣವು ನಡೆದಿರುವುದು ಇದೀಗ ಬಹಿರಂಗವಾಗಿದೆ.
ಬೆಂಗಳೂರಿನ ಸಹಕಾರ ನಗರದಲ್ಲಿ ನಡೆದಿರುವ ಈ ಭೂ ಅಕ್ರಮದ ಮೊತ್ತ ಅಂದಾಜು 300 ಕೋಟಿಗೂ ಹೆಚ್ಚು ಬೆಲೆಬಾಳಲಿದೆ. ಬೆಂಗಳೂರು ನಗರ ಜಿಲ್ಲೆಯ ಭೂಮಾಪನ ಹಾಗೂ ಕಂದಾಯ ಅಧಿಕಾರಿಗಳೂ ಸಹ ಭೂಮಾಫಿಯಾದೊಂದಿಗೆ ಶಾಮೀಲಾಗಿದ್ದಾರೆ ಎಂಬ ಗುರುತರವಾದ ಆರೋಪಗಳು ಕೇಳಿ ಬಂದಿವೆ.
ಬೆಂಗಳೂರು ನಗರದಲ್ಲಿ ಈಚೆಗೆ ಭೂ ಅಕ್ರಮಗಳು ನಡೆಯುತ್ತಿರುವ ಹೊತ್ತಿನಲ್ಲಿಯೇ 2025 ಮತ್ತು 2026ರ ಸಾಲಿನಲ್ಲಿ ನಡೆದಿರುವ ಈ ಭಾರೀ ಪ್ರಮಾಣದ ತಾಜಾ ಪ್ರಕರಣವು ಮುನ್ನೆಲೆಗೆ ಬಂದಿದೆ.
ಯಲಹಂಕ ತಾಲೂಕಿನ ಕೋತಿ ಹೊಸಹಳ್ಳಿಯಲ್ಲಿ 1987ರಲ್ಲಿಯೇ ಭೂ ಪರಿವರ್ತನೆಯಾಗಿದ್ದ ಹಳೇ ಸರ್ವೆ ನಂಬರ್ 13/1 ನ್ನು ಪೋಡಿ ಮಾಡಿ 13/3 ಎಂಬ ಹೊಸ ಸರ್ವೆ ನಂಬರ್‍ನ್ನು ಸೃಷ್ಟಿಸಲಾಗಿದೆ. ಹಳೇ ಸರ್ವೆ ನಂಬರ್ 13/1 ರಲ್ಲಿನ ಆಸ್ತಿಗೆ ಕಾನೂನುಬದ್ಧವಾಗಿ ಯಾವುದೇ ಹಕ್ಕುದಾರಿಕೆ ಮತ್ತು ಮಾಲೀಕತ್ವವನ್ನೇ ಹೊಂದಿಲ್ಲದ ಖಾಸಗಿ ವ್ಯಕ್ತಿ ಎನ್ ಬಲರಾಮ್ ಎಂಬುವರು ಕಂದಾಯ ನಕಲಿ ದಾಖಲೆಗಳನ್ನೇ ತಿದ್ದಿದ್ದಾರೆ ಎಂಬ ಆಪಾದನೆ ಕೇಳಿ ಬಂದಿದೆ.
ಈ ಸುಳ್ಳು ಕಂದಾಯ ದಾಖಲೆಗಳ ಆಧಾರದ ಮೇಲೆ ಖಾಸಗಿ ವ್ಯಕ್ತಿ ಎನ್ ಬಲರಾಮ್ ಎಂಬಾತ ಭೂ ಪರಿವರ್ತನೆಗೆ ಕೋರಿ ಅರ್ಜಿ ಸಲ್ಲಿಸಿದ್ದ. ಈ ಅರ್ಜಿ ಆಧರಿಸಿ ಕೇವಲ ಮೂರೇ ಮೂರು ದಿನದಲ್ಲಿ ಬೆಂಗಳೂರು ನಗರದ ಜಿಲ್ಲಾಧಿಕಾರಿಗಳು ಭೂಪರಿವರ್ತನೆಯ ಆದೇಶವನ್ನು ಹೊರಡಿಸಿದ್ದಾರೆ. ಆದರೆ ಈ ಆದೇಶವನ್ನು ಹೊರಡಿಸುವ ಮೊದಲು ಖಾಸಗಿ ವ್ಯಕ್ತಿ ಬಲರಾಮ್ ಎಂಬುವರು ಸಲ್ಲಿಸಿದ್ದ ದಾಖಲೆಗಳ ನೈಜತೆಯನ್ನು ಪರಿಶೀಲಿಸಿರಲಿಲ್ಲ ಮತ್ತು ಸ್ಥಳ ಪರಿಶೀಲನೆಯನ್ನೂ ನಡೆಸಿರುವುದಿಲ್ಲ ಎಂದು ಗೊತ್ತಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಸಮಗ್ರ ದಾಖಲೆಗಳು ‘ದಿ ಫೈಲ್’ ಗೆ ಲಭ್ಯವಾಗಿವೆ.
ಈ ಭೂ ಅಕ್ರಮದ ಬಗ್ಗೆ ಭೂ ದಾಖಲೆಗಳು ಭೂ ಮಾಪನ ಇಲಾಖೆ, ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳ ಗಮನದಲ್ಲಿಯೂ ಇದೆ. ಆದರೆ ಈ ಅಕ್ರಮದಲ್ಲಿ ಭಾಗಿಯಾಗಿರುವ ಭೂಮಾಪನ/ ಕಂದಾಯ ಇಲಾಖೆಯ ಯಾವೊಬ್ಬ ಅಧಿಕಾರಿ ಮತ್ತು ಇದರ ಸೂತ್ರಧಾರಿಗಳಾಗಿರುವ ಖಾಸಗಿ ವ್ಯಕ್ತಿಗಳ ವಿರುದ್ಧ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಸ್ಥಳೀಯ ನಿವಾಸಿಗಳು ಮತ್ತು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಎನ್. ಬಲರಾಮ್ ಮತ್ತು ಇತರರು, ಸರ್ವೆ ನಂಬರ್ 13/1ರಲ್ಲಿರುವ ಆಸ್ತಿ ಮೇಲೆ ಯಾವುದೇ ರೀತಿಯ ಭೂಹಕ್ಕನ್ನು ಹೊಂದಿಲ್ಲದಿದ್ದರೂ ಸಹ ಬೆಂಗಳೂರು ನಗರ ಜಿಲ್ಲೆಯ ಭೂಮಾಪನ ಅಧಿಕಾರಿಗಳು, ಸಹಾಯಕ ಉಪ ಆಯುಕ್ತರು , ಬೆಂಗಳೂರು ಉತ್ತರ ವಿಭಾಗ ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿಗಳನ್ನು ತಪ್ಪುದಾರಿಗೆಳೆದಿದ್ದಾರೆ. ಅಲ್ಲದೇ ಈ ಪ್ರಶ್ನಾರ್ಹ ಆಸ್ತಿಯ ಮೇಲಿನ ಮಾಲೀಕತ್ವದ ಹಕ್ಕನ್ನು ಸಹ ಅವರು ಹೊಂದಿರುವುದಿಲ್ಲ. ಆದರೂ ಸಹ ಎನ್ ಬಲರಾಮ್ ಮತ್ತಿತರರು ಸಲ್ಲಿಸಿದ್ದ ದಾಖಲೆಗಳ ನೈಜತೆ ಪರಿಶೀಲಿಸದೆ ಮತ್ತು ಆಸ್ತಿಯ ಸ್ಥಳವನ್ನೂ ಪರಿಶೀಲನೆ ನಡೆಸಿಲ್ಲ. ಎನ್ ಬಲರಾಮ್ ಸೃಷ್ಟಿಸಿ ನೀಡಿದ್ದಾರೆ ಎನ್ನಲಾಗಿರುವ ದಾಖಲೆಗಳ ನೈಜತೆಯನ್ನು ಪರಿಶೀಲಿಸದೆಯೇ ಯಾಂತ್ರಿಕವಾಗಿ ತಮ್ಮ ಅಧಿಕಾರವನ್ನು ಚಲಾಯಿಸಿದ್ದಾರೆ ಎಂಬ ಗುರುತರವಾದ ಆರೋಪಗಳು ಕೇಳಿ ಬಂದಿವೆ.
1987ರಲ್ಲೇ ಭೂ ಸ್ವಾಧೀನ
ಬೆಂಗಳೂರಿನ ಸಹಕಾರನಗರದಲ್ಲಿ ವಸತಿ ಬಡಾವಣೆ ರಚನೆಗಾಗಿ ಡಿಫೆನ್ಸ್ ನೌಕರರ ವಸತಿ ಸಹಕಾರ ಸಂಘವು ಸಂಬಂಧಪಟ್ಟ ಮಾಲೀಕರಿಂದ ಖರೀದಿಸಿ,ಸ್ವಾಧೀನಪಡಿಸಿಕೊಂಡ (ಸಹಕಾರನಗರ) ಕೋತಿಹೊಸಹಳ್ಳಿ ಭೂಮಿ ಸರ್ವೇ ನಂಬರ್ 13/1 ಮತ್ತು 13/2 ರಲ್ಲಿನ ಜಮೀನುಗಳನ್ನು 1987ರ ಮೊದಲೇ ಸ್ವಾಧೀನಪಡಿಸಿಕೊಂಡಿತ್ತು.
ಬೆಂಗಳೂರು ಉತ್ತರ ತಾಲ್ಲೂಕಿನ ಯಲಹಂಕ ಹೋಬಳಿಯ ಕೋತಿಹೊಸಹಳ್ಳಿಯ 13/1, 13/2 ನ್ನು ಮತ್ತು ಕೊಡಿಗೆಹಳ್ಳಿ ಗ್ರಾಮದ ಸರ್ವೆ ನಂಬರ್ 14 ರನ್ನು ಭೂ ಕಂದಾಯ ಕಾಯ್ದೆ 1964 ರ ಕಲಂ 95/2, 95/4 ಮತ್ತು 95/7 ರ ಅಡಿಯಲ್ಲಿ ಕ್ರಮವಾಗಿ ಭೂ ಪರಿವರ್ತನೆ ಆದೇಶವನ್ನು ಹೊರಡಿಸಲಾಗಿತ್ತು. ಈ ಭೂ ಪರಿವರ್ತನೆ ದಂಡವನ್ನು ಎಕರೆಗೆ ರೂ.21,780 ರು ನಂತೆ ವಿಧಿಸಲಾಗಿತ್ತು. ಈ ಭೂಮಿಯನ್ನು ವಸತಿ ರಹಿತ / ವಸತಿ ಉದ್ದೇಶಕ್ಕಾಗಿ ಕೆಲವು ನಿಯಮಗಳು ಮತ್ತು ಷರತ್ತುಗಳೊಂದಿಗೆ ಈ ಡಿಫೆನ್ಸ್ ನೌಕರರ ವಸತಿ ಸಹಕಾರ ಸಂಘದ ಪರವಾಗಿ ಭೂಪರಿವರ್ತಿಸಿ ಅಂದಿನ ಬೆಂಗಳೂರು ಜಿಲ್ಲಾಧಿಕಾರಿಗಳು ಆದೇಶವನ್ನು ಹೊರಡಿಸಿರುತ್ತಾರೆ.
ಈ ಸರ್ವೆ ನಂಬರ್ 13/1ರಲ್ಲಿ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ವಿ ಗೋಪಾಲಗೌಡ ಅವರ ಧರ್ಮಪತ್ನಿಯಯವರ ಮಾಲೀಕತ್ವದಲ್ಲಿ ಮನೆ ಸಂಖ್ಯೆ 223 ರಲ್ಲಿ ವಾಸದ ಮನೆಯನ್ನು ನಿರ್ಮಿಸಿ ವಾಸಿಸುತ್ತಿದ್ದಾರೆ ಎಂದು ಗೊತ್ತಾಗಿದೆ.
ಡಿಫೆನ್ಸ್ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಪದಾಧಿಕಾರಿಗಳು 1987ರಲ್ಲಿ ಮೇಲ್ಕಂಡ ಜಮೀನುಗಳ ಭೂಪರಿವರ್ತನೆಗಾಗಿ ಅರ್ಜಿಯನ್ನು ಸಲ್ಲಿಸಿದ್ದರು. ಈ ಅರ್ಜಿಯನ್ನು ಪರಿಶೀಲಿಸಿದ್ದ ಬೆಂಗಳೂರು ಜಿಲ್ಲೆಯ ಜಿಲ್ಲಾಧಿಕಾರಿಗಳು 1987ರ ಮಾರ್ಚ್ 9ರಂದು ಅಧಿಕೃತ ಜ್ಞಾಪನ ಪತ್ರ (B.Dis.ALN.SR (II) 15/86-87, ದಿನಾಂಕ 1) ಹೊರಡಿಸಿದ್ದರು. ಅಲ್ಲದೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಂದಿನ ಅಧ್ಯಕ್ಷರು 1984ರ ನವೆಂಬರ್ 24ರಂದು ಅಭಿಪ್ರಾಯವನ್ನೂ (BDA TPM 802/84/85, 2) ನೀಡಿದ್ದರು.


ಅಲ್ಲದೇ ಕಂದಾಯ ಇಲಾಖೆಯು ಸಹ ಸರ್ಕಾರಿ ಪತ್ರ (ಸಂಖ್ಯೆ RD 66 LCB 86 ದಿನಾಂಕ 13-06-1980 ) ವನ್ನೂ ಸಹ ಹೊರಡಿಸಿತ್ತು ಎಂದು ತಿಳಿದು ಬಂದಿದೆ.
ಮೇಲ್ಕಂಡ ಜಮೀನುಗಳನ್ನು ಖರೀದಿಸಲು ಲ್ಯಾಂಡ್ ಸೀಲಿಂಗ್ ಕಾಯ್ದೆ ಅನ್ವಯಿಸುತ್ತಿತ್ತು, ಏಕೆಂದರೆ ಆ ಸಮಯದಲ್ಲಿ ನಗರ ವ್ಯಾಪ್ತಿಯಲ್ಲಿ ಬರುವ ಭೂಮಿಗಳು ಕರ್ನಾಟಕ ಸರ್ಕಾರದ ನಗರಾಭಿವೃದ್ಧಿ ಭೂ-ಸೀಲಿಂಗ್ ಕಾಯ್ದೆಯಿಂದ ನಿಯಂತ್ರಿಸಲ್ಪಟ್ಟಿದ್ದವು. ಇದನ್ನು ನಗರಾಭಿವೃದ್ಧಿ ಇಲಾಖೆ ಮತ್ತು ಸೊಸೈಟಿಯ ಪಿ ಆರ್ ಪ್ರಸಾದ್ ರಾಜು ಲ್ಯಾಂಡ್ ಸೀಲಿಂಗ್ ಕಾಯ್ದೆ 1976ರ ಸೆಕ್ಷನ್ 20(1)(ಬಿ) ಅಡಿಯಲ್ಲಿ ಅಗತ್ಯವಿರುವ ಅನುಮತಿ ಕೋರಿದ್ದರು, ಸದ್ಯ ಆ ಕಾಯ್ದೆಯು ಈಗ ರದ್ದುಗೊಂಡಿದೆ.
ಬೆಂಗಳೂರಿನ ಉಪ ಆಯುಕ್ತರು ಮತ್ತು ನಗರ ಭೂ ಸೀಲಿಂಗ್ ಕಾಯ್ದೆಗೆ ಸಕ್ಷಮ ಪ್ರಾಧಿಕಾರದ ವಿಶೇಷ ಶಿಫಾರಸಿನ ಆಧಾರದ ಮೇಲೆ ಡಿಫೆನ್ಸ್ ನೌಕರರ ಗೃಹ ನಿರ್ಮಾಣ ಸಹಕಾರ ಸಂಘವು ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ (15-05-1987 ರ ದಿನಾಂಕದ ಪತ್ರ) ಪ್ರಕಾರ ವಸತಿ ಬಡಾವಣೆ ರಚನೆಯ ಉದ್ದೇಶಕ್ಕಾಗಿ ರಕ್ಷಣಾ ನೌಕರರ ವಸತಿ ಸಹಕಾರ ಸಂಘದ ಪರವಾಗಿ ಕಾನೂನುಬದ್ಧವಾಗಿ ಭೂಮಿಯನ್ನು ಖರೀದಿಸಲಾಗುತ್ತಿದೆ ಎಂದು ತಿಳಿಸಿತ್ತು.
ರದ್ದುಪಡಿಸಿದ ಕಾಯ್ದೆಯ ಮೇಲೆ ತಿಳಿಸಿದ್ದ ನಿಬಂಧನೆಗಳ ಅಡಿಯಲ್ಲಿ ತನ್ನ ಅಧಿಕಾರವನ್ನು ಚಲಾಯಿಸಿದ್ದ ಕರ್ನಾಟಕ ರಾಜ್ಯ ಸರ್ಕಾರವು ಭೂಮಿಯನ್ನು ವಸತಿ ಬಡಾವಣೆ ರಚನೆಯ ಉದ್ದೇಶಕ್ಕಾಗಿ ನಿಬಂಧನೆಯ ಅಡಿಯಲ್ಲಿ ಖರೀದಿಸಲು ಸೊಸೈಟಿಗೆ ಅನುಮತಿ ನೀಡಿತ್ತು. ಈ ಸಂಬಂಧ 1987ರ ಸೆ.16ರಂದು ಆದೇಶ ಹೊರಡಿಸಿತ್ತು.
ವಸತಿ ಬಡಾವಣೆಗೆ ಈ ಹಿಂದೆಯೇ ಅನುಮೋದನೆ
ಇದಾದ ನಂತರ ಈ ಡಿಫೆನ್ಸ್ ನೌಕರರ ಗೃಹ ನಿರ್ಮಾಣ ಸಹಕಾರ ಸಂಘವು, ಬಿಡಿಎ ಕಾಯ್ದೆ 1976 ಸೆಕ್ಷನ್ 32 ರ ಅಡಿಯಲ್ಲಿ ವಸತಿ ಬಡಾವಣೆ ಯೋಜನೆ ಮಂಜೂರಾತಿ ಮತ್ತು ನಿವೇಶನ ರಚಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿತ್ತು. ಬಿಡಿಎಯು ಈ ಅರ್ಜಿ ಮತ್ತು ಸಲ್ಲಿಸಿದ್ದ ದಾಖಲೆಗಳನ್ನು ಪರಿಗಣಿಸಿತ್ತಲ್ಲದೇ ವಸತಿ ಬಡಾವಣೆ ಯೋಜನೆಗೆ ಅನುಮತಿಸಿತ್ತು. 1987ರ ಡಿಸೆಂಬರ್ 28ರಂದು ನಡೆದ ಮಂಡಳಿಯಲ್ಲಿಯೂ ಈ ಬಗ್ಗೆ ನಿರ್ಣಯ ಕೈಗೊಂಡಿತ್ತು. ಇದಾದ ನಂತರ ಈ ವಿನ್ಯಾಸ ಯೋಜನೆಯು ಕೋತಿಹೊಸಹಳ್ಳಿಯ ಜಮೀನಿನ ಸರ್ವೇ ಸಂಖ್ಯೆ 13/1 ಮತ್ತು 13/2ಕ್ಕೆ ಮತ್ತು ಕೊಡಿಗೇಹಳ್ಳಿಯ ಸರ್ವೇ ನಂಬರ್ 14 ಕ್ಕೆ ಸಂಬಂಧಿಸಿತ್ತು.
ಡಿಫೆನ್ಸ್ ನೌಕರರ ಗೃಹ ನಿರ್ಮಾಣ ಸಹಕಾರ ಸಂಘವು ವಸತಿ ನಿವೇಶನಗಳನ್ನು ರೂಪಿಸುವ ಉದ್ದೇಶಕ್ಕಾಗಿ ಸಂಬಂಧ ಪಟ್ಟ ಭೂಮಾಲೀಕರಿಂದ ಖರೀದಿಸಿ ಸ್ವಾಧೀನಪಡಿಸಿಕೊಂಡಿತ್ತು. ಮತ್ತು ನಿವೇಶನಗಳನ್ನು ನಿರ್ಮಾಣ ಮಾಡಿ ಸಂಘದ ಸದಸ್ಯರಿಗೆ ಹಂಚಿಕೆ ಮಾಡಿತ್ತು. ಮತ್ತು ಹಂಚಿಕೆ ಮಾಡಿದ ಕೆಲವು ಸದಸ್ಯರು ತಮ್ಮ ಹಂಚಿಕೆಯಾದ ನಿವೇಶನಗಳನ್ನು ಮೂರನೇ ವ್ಯಕ್ತಿಗಳಿಗೆ ಮಾರಾಟ ಮಾಡಿದ್ದಾರೆ. ಅವರು ಮನೆಗಳು ಮತ್ತು ಇತರ ಕಟ್ಟಡಗಳನ್ನು ನಿರ್ಮಿಸುವ ಮೂಲಕ ಸ್ವಾಧೀನದಲ್ಲಿದ್ದಾರೆ ಮತ್ತು ಅನುಭವಿಸುತ್ತಿದ್ದಾರೆ.
ಬಲರಾಮ್ ಆಸ್ತಿಗೆ ಮಾಲೀಕರೇ ಅಲ್ಲ, 40 ವರ್ಷಗಳ ನಂತರ ಮರು ನಂಬರ್ ಕೊಟ್ಟಿದ್ದೇಕೆ?
ಈ ನಡುವೆ ಇದೇ ಆಸ್ತಿಗೆ ಸಂಬಂಧಿಸಿದಂತೆ ಖಾಸಗಿ ವ್ಯಕ್ತಿ ಎನ್ ಬಲರಾಮ್ ಎಂಬುವರು ಸುಮಾರು 40 ವರ್ಷಗಳ ನಂತರ ಸರ್ವೆ ಸಂಖ್ಯೆ 13/1 ರ ಫೋಡಿಯನ್ನು ಸರ್ವೆ ಸಂಖ್ಯೆ 13/3 ಎಂದು ಮರು ನಂಬರ್ ಮಾಡಲು ಭೂ ದಾಖಲೆಗಳ ಸಹಾಯಕ ನಿರ್ದೇಶಕರನ್ನು ಕೋರಿದ್ದರು. ಆದರೆ ಎನ್ ಬಲರಾಮ್ ಎಂಬುವರು ಈ ಆಸ್ತಿಗೆ ಮಾಲೀಕರೇ ಅಲ್ಲ. ಇವರು ಸೃಷ್ಟಿಸಿದ್ದಾರೆ ಎಂದು ಹೇಳಲಾಗಿರುವ ಭೂ ದಾಖಲೆಗಳ ನೈಜತೆಯನ್ನು ಯಲಹಂಕದಲ್ಲಿರುವ ಭೂ ದಾಖಲೆಗಳ ಸಹಾಯಕ ನಿರ್ದೇಶಕರೂ ಪರಿಶೀಲಿಸಿರಲಿಲ್ಲ. ಅಲ್ಲದೇ ಸರ್ವೆ ಸಂಖ್ಯೆ 13/1 ಹೊಂದಿರುವ ಭೂಮಿಯನ್ನು ಸರ್ವೆ ಸಂಖ್ಯೆ 13/3 ಗೆ ಮರುನಂಬರ್ ಮಾಡುವ ಅಥವಾ ಮರುನಂಬರ್ ಮಾಡುವ ಆದೇಶ ಹೊರಡಿಸಲು ಯಾವುದೇ ಅಧಿಕಾರವನ್ನೂ ಸಹಾ ಅವರು ಹೊಂದಿರುವುದಿಲ್ಲ.





ಏಕೆಂದರೇ ಡಿಫೆನ್ಸ್ ನೌಕರರ ಗೃಹ ನಿರ್ಮಾಣ ಸಹಕಾರ ಸಂಘವು 1984/85 ರಲ್ಲಿ ಸಂಬಂಧಪಟ್ಟ ಭೂ ಮಾಲೀಕರಿಂದ ಮೇಲ್ಕಂಡ ಆಸ್ತಿಯನ್ನು ಖರೀದಿಸಿತ್ತು. ನಂತರ, 1987 ರಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಬಿಡಿಎ ಕಾಯ್ದೆಯ ಸೆಕ್ಷನ್ 32 ರ ಅಡಿಯಲ್ಲಿ ಲೇಔಟ್ ಯೋಜನೆಯನ್ನು ಅನುಮೋದಿಸಿತ್ತು. ಮತ್ತು ಲೇಔಟ್ ಯೋಜನೆಯ ಮಂಜೂರಾತಿಯ ಆಧಾರದ ಮೇಲೆ ಸೊಸೈಟಿಯು ವಸತಿ ಬಡಾವಣೆಯನ್ನು ನಿರ್ಮಿಸಿ ನಿವೇಶನಗಳನ್ನು ನಿರ್ಮಾಣ ಮಾಡಿತ್ತು. ಇದೇ ಬಡಾವಣೆಯಲ್ಲಿ ಕೆಲವು ನಾಗರಿಕ ಸೌಲಭ್ಯ ತಾಣಗಳು ಮತ್ತು ಉದ್ಯಾನಗಳಿಗಾಗಿ ಜಾಗವನ್ನು ಮೀಸಲಿಟ್ಟಿತ್ತು.

ಮತ್ತೊಂದು ವಿಶೇಷವೆಂದರೇ ಈ ಅನುಮೋದಿತ ಲೇಔಟ್ ಯೋಜನೆಯಲ್ಲಿ ಮೂಲತಃ ನೆಲಮಂಗಲ ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ರಸ್ತೆ ಎಂದು ತೋರಿಸಲಾದ ಈ ಭೂಮಿಯನ್ನು ಬಿಡಿಎ ತದನಂತರ ಮಾರ್ಪಡಿಸಿತ್ತು. ಕೆಲವು ನಿವೇಶನಗಳನ್ನು ಮತ್ತು ನಾಗರಿಕ ಸೌಲಭ್ಯ ತಾಣಗಳನ್ನು ರೂಪಿಸಲು ಮತ್ತು ನಿರ್ಮಿಸಲು ಅವಕಾಶ ಮಾಡಿಕೊಟ್ಟಿತ್ತು. ಇದನ್ನು ಸಹಕಾರನಗರ ಕ್ಲಬ್‌ನ ಮನರಂಜನಾ ಉದ್ದೇಶಕ್ಕಾಗಿ ನಾಗರಿಕ ಸೌಲಭ್ಯಕ್ಕಾಗಿ ಮೀಸಲಾಗಿಟ್ಟ ಉದ್ಯಾನವನ್ನು ಕಾನೂನುಬಾಹಿರವಾಗಿ ಮಂಜೂರು ಮಾಡಿರುವುದನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿ (W.P. ಸಂಖ್ಯೆ 11325/2018) ಹಲವು ನಿವಾಸಿಗಳು ಮತ್ತು ಇತರರು ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.

ಇದರಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳುವ ತಾತ್ಕಾಲಿಕ ಆಜ್ಞೆ ಹೊರಡಿಸಿತ್ತು. ಅದು ಇನ್ನೂ ಜೀವಂತವಾಗಿದೆ. ಈ ರಿಟ್ ಅರ್ಜಿಯು ಇನ್ನೂ ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠದ ಮುಂದೆ ಪರಿಗಣನೆಗೆ ಬಾಕಿ ಇದೆ. ಈ ಅರ್ಜಿಯ ವಿಚಾರಣೆಯು 2026ರ ಏಪ್ರಿಲ್ 28ರಂದು ಬಂದಿತ್ತು. ಈ ಅರ್ಜಿಯ ವಿಚಾರಣೆಯನ್ನು 2026ರ ಆಗಸ್ಟ್ 17ಕ್ಕೆ ಮುಂದೂಡಿಕೆಯಾಗಿದೆ.

ಅಲ್ಲದೇ ಈ ತಾತ್ಕಾಲಿಕ ಆಜ್ಞೆ ಆಧರಿಸಿ ಸರ್ವೆ ಮಾಡಲು ನಗರಾಭಿವೃದ್ದಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ ಇ ವಿ ರಮಣರೆಡ್ಡಿ ಅವರು 2019ರ ನವೆಂಬರ್ 5ರಂದು ಭೂ ಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯ ಆಯುಕ್ತ ಮುನೀಶ್ ಮೌದ್ಗಿಲ್ ಅವರಿಗೆ ಸೂಚಿಸಿದ್ದರು.


ಭೂಮಾಪಕರು 2019ರ ನವೆಂಬರ್ 12ರಂದು ಸರ್ವೆ ವರದಿ ಸಲ್ಲಿಸಿದ್ದರು.
‘ರಾಜ್ಯಪತ್ರದ ಅಧಿಸೂಚನೆಯ ಕ್ರಮ ಸಂಖ್ಯೆ 92ರಲ್ಲಿ ನಮೂದಿಸಿದ್ದ ಸ್ವತ್ತು ಸಿಕ್ಯೂಎಎಲ್ ಬಡಾವಣೆ (ಸಹಕಾರ ನಗರ)ದಲ್ಲಿರುವ ಉದ್ಯಾನವೆಂದು ದಾಖಲಾಗಿರುತ್ತದೆ. ಆದರೆ ಸಿ ಎ ನಿವೇಶನ ಸಂಖ್ಯೆ 3ರ ಷೆಡ್ಯೂಲ್‌ನಲ್ಲಿ ಡಿಫೆನ್ಸ್ ಎಂಪ್ಲಾಯೀಸ್ ಬಡಾವಣೆ ಎಂದು ನಮೂದಾಗಿದೆ. ಈ ಸ್ವತ್ತು ಸ್ಥಳ ಪರಿಶೀಲನೆಯಂತೆ ಮತ್ತು ಬಿಡಿಎನಿಂದ ಅನುಮೋದಿತ ಡಿಫೆನ್ಸ್ ಬಡಾವಣೆಯಲ್ಲಿ ಬರುತ್ತಿದೆ,’ ಎಂದು ವರದಿ ನೀಡಿದ್ದರು.

ಅಲ್ಲದೇ ಈ ಪ್ರದೇಶವು 3334.00 ಚದರ ಮೀಟರ್ ಇದ್ದು ಹಾಲಿ ಜಮೀನಿನ ಸ್ಥಿತಿ ಮತ್ತು ಇದಕ್ಕೆ ಹೊಂದಿಕೊಂಡಿರುವಂತೆ ಚೆಕ್ ಬಂದಿಯನ್ನು ನೀಡಿದ್ದರು. ಈ ಸರ್ವೆ ವರದಿಯಲ್ಲಿಯೂ ಬಿಬಿಎಂಪಿ ಕಚೇರಿ, ಮಕ್ಕಳ ಆಟದ ಮೈದಾನ ಇದೆ ಎಂದು ನಮೂದಿಸಿದ್ದರು.

ವಾಸ್ತವವದಲ್ಲಿ ಈ ನಾಗರಿಕ ಸೌಲಭ್ಯ ನಿವೇಶನವನ್ನು ಆ ಬಡಾವಣೆಯ ನಿವಾಸಿಗಳಾದ ಸಾರ್ವಜನಿಕರ ಪರವಾಗಿ ಉದ್ಯಾನವೆಂದು ಘೋಷಿಸಿತ್ತು. ಹೀಗಾಗಿ ರಾಜ್ಯ ಸರ್ಕಾರದ ಕೋರಿಕೆಯ ಮೇರೆಗೆ ಈ ಕ್ಲಬ್ ಪರವಾಗಿ ಗುತ್ತಿಗೆ ಹಕ್ಕುಗಳನ್ನು ನೀಡುವ ಉದ್ದೇಶಕ್ಕಾಗಿ ನಾಗರಿಕ ಸೌಲಭ್ಯ ನಿವೇಶನದ ಹಂಚಿಕೆಗೆ ಲಭ್ಯವಿರಲಿಲ್ಲ. ಈ ಆಸ್ತಿಯನ್ನು ಬಿಡಿಎ ಹಂಚಿಕೆ ನಿಯಮಗಳ ನಿಯಮ 7 ರ ಅಡಿಯಲ್ಲಿ ಅಗತ್ಯವಿರುವಂತೆ ಬಿಡಿಎ ಅನುಮೋದನೆಯಿಲ್ಲದೆ, ಈ ಕ್ಲಬ್ ಪರವಾಗಿ ಮಾತ್ರ ಹಂಚಿಕೆಯ ಆಧಾರದ ಮೇಲೆ 2017ರ ಅಕ್ಟೋಬರ್ 17ರಂದು ನೀಡಿತ್ತು. ಅಲ್ಲದೇ 2017ರ ಡಿಸೆಂಬರ್ 28ರಂದು ನೋಂದಾಯಿತ ಗುತ್ತಿಗೆ ಪತ್ರವನ್ನೂ ಕಾರ್ಯಗತಗೊಳಿಸಿತ್ತು. ಈ ಹಂಚಿಕೆಯ ಆದೇಶವು ಸಹ ಹೈಕೋರ್ಟ್‌ನ ವಿಭಾಗೀಯ ಪೀಠದ ಮುಂದೆ ಪರಿಗಣನೆಗೆ ಬಾಕಿ ಇದೆ.
ವಾಸ್ತವವಾಗಿ, 1985 ರ ಕರ್ನಾಟಕ ಉದ್ಯಾನವನಗಳು ಮತ್ತು ಮುಕ್ತ ಸ್ಥಳಗಳ ಕಾಯ್ದೆಯ ಸೆಕ್ಷನ್ 3(2) ರ ನಿಬಂಧನೆಗಳ ಅಡಿಯಲ್ಲಿ ಆಸ್ತಿಯನ್ನು ಉದ್ಯಾನವೆಂದು ಘೋಷಿಸಲಾಗಿದೆ. ಮತ್ತು ಇದನ್ನು 2015ರ ನವೆಂಬರ್ 15ರಂದು (ನಅಇ 302 MSU 2012) ಅಂತಿಮ ಗೆಜೆಟ್ ಅಧಿಸೂಚನೆಯಲ್ಲಿಯೂ ಪ್ರಕಟಿಸಿತ್ತು. ಈ ದಿನಾಂಕಕ್ಕೂ ಮೊದಲು ಅಂದರೇ 2012ರ ನವೆಂಬರ್ 22ರಂದು ರಾಜ್ಯ ಸರ್ಕಾರವು ಪ್ರಾಥಮಿಕ ಅಧಿಸೂಚನೆಯನ್ನು ಪ್ರಕಟಿಸಿತ್ತು. ಹಿಂದಿನ ಬಿಬಿಎಂಪಿಯು ಸರ್ವೆ ಸಂಖ್ಯೆ 13/1 ಮತ್ತು 13/2 ರಲ್ಲಿ ಮುಕ್ತ ಸ್ಥಳವನ್ನು ಪ್ರಸ್ತಾಪಿಸುವ ಪ್ರಸ್ತಾವನೆಯ ಕುರಿತು ಆಕ್ಷೇಪಣೆಗಳನ್ನು ಆಹ್ವಾನಿಸಿತ್ತು.
ಅಂತಿಮವಾಗಿ 2015 ರಲ್ಲಿ ಅಂತಿಮ ಗೆಜೆಟ್ ಅಧಿಸೂಚನೆಯನ್ನು ಹೊರಡಿಸುವ ಮೂಲಕ ಇದನ್ನು ಸಾರ್ವಜನಿಕ ಉದ್ಯಾನವನವೆಂದು ಘೋಷಿಸಿತ್ತು. ಈ ಅಧಿಸೂಚನೆಯನ್ನು ಈ ಕ್ಲಬ್ ರಿಟ್ ಅರ್ಜಿ (ಸಂಖ್ಯೆ 51531/2019) ಮೂಲಕ ಪ್ರಶ್ನಿಸಿದೆ. ಇದನ್ನು 2018 ರ ಡಬ್ಲ್ಯೂ.ಪಿ ಸಂಖ್ಯೆ 11325 ರೊಂದಿಗೆ ಒಗ್ಗೂಡಿಸಿದೆ. ಈ ಎರಡೂ ರಿಟ್ ಅರ್ಜಿಗಳನ್ನು ಅರ್ಹತೆಯ ಮೇಲೆ ಆಲಿಸಿ ವಿಲೇವಾರಿ ಮಾಡಬೇಕಿದೆ.
ವಾಸ್ತವಿಕ ಸಂಗತಿಗಳು ಹೀಗಿದ್ದರೂ ಸಹ ಸರ್ವೆ ನಂಬರ್ 13/1, ಎನ್ ಬಲರಾಮ್ ಎಂಬುವರಿಗೆ ಸೇರಿರಲೇ ಇಲ್ಲ. ಆದರೂ ಕೋತಿಹೊಸಹಳ್ಳಿ ಗ್ರಾಮದ ಸರ್ವೆ ಸಂಖ್ಯೆ 13/3 ರ ಫೋಡಿ ಅಥವಾ ಸರ್ವೆ ಸಂಖ್ಯೆ 13/1 ರ ಮರುಸಂಖ್ಯೆ ಪಡೆಯಲು ಭೂ ದಾಖಲೆಗಳ ಸಹಾಯಕ ನಿರ್ದೇಶಕರನ್ನು ಅಕ್ರಮವಾಗಿ ಕೋರಿದ್ದರು.
ಬಲರಾಮ್ ಎಂಬಾತ ಮರು ಸರ್ವೆ ನಂಬರ್ ಪಡೆಯುವ ಮುನ್ನವೇ ಈ ಸ್ಥಳಗಳನ್ನು ನಾಗರಿಕ ಸೌಲಭ್ಯಗಳು ಮತ್ತು ಕೆಲವು ಪ್ರದೇಶಗಳನ್ನು ಮಕ್ಕಳ ಉದ್ಯಾನ, ಇತರ ಉದ್ಯಾನ ಮತ್ತು ಆಟದ ಮೈದಾನಗಳಾಗಿ ಘೋಷಿಸಿತ್ತು. ಅಲ್ಲದೇ ಡಿಫೆನ್ಸ್ ನೌಕರರ ಗೃಹ ನಿರ್ಮಾಣ ಸಹಕಾರ ಸಂಘವು ಅದನ್ನು ಬಿಡಿಎ ಪರವಾಗಿ ಬಿಟ್ಟುಕೊಟ್ಟಿದೆ. ನಂತರ ಬಿಡಿಎಯು ರಸ್ತೆಗಳ ಜೊತೆಗೆ ಅದನ್ನು ಹಿಂದಿನ ಬ್ಯಾಟರಾಯನಪುರ ಪಟ್ಟಣ ಪುರಸಭೆಗೆ ಬಿಡಿಎ ಕಾಯ್ದೆಯ ಸೆಕ್ಷನ್ 30 ರ ಅಡಿಯಲ್ಲಿ ಒದಗಿಸಿತ್ತು. ಪಟ್ಟಣ ಪುರಸಭೆಯನ್ನು ಅಂದಿನ ಬಿಬಿಎಂಪಿಗೆ ವಿಸ್ತೃತ ಪ್ರದೇಶವಾಗಿ ಸೇರಿಸಲಾಗಿದೆ. ಈಗ ಅದು ಗ್ರೇಟರ್ ಮೆಟ್ರೋಪಾಲಿಟನ್ ಬೆಂಗಳೂರು ಮಹಾನಗರ ಉತ್ತರ ವಿಭಾಗದಲ್ಲಿದೆ.
ನಿವಾಸಿಗಳ ವಂಚಿಸಲು ದಾಖಲೆಗಳ ಸೃಷ್ಟಿ – ಕಂದಾಯ ಭೂಮಿಯೂ ಅಸ್ತಿತ್ವದಲ್ಲಿಲ್ಲ
ಆದರೂ ಎನ್. ಬಲರಾಮ್ ಎಂಬ ಖಾಸಗಿ ವ್ಯಕ್ತಿಯು ಈ ಲೇಔಟ್ ನಿವಾಸಿಗಳನ್ನು ವಂಚಿಸುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಅಲ್ಲದೇ ಯಲಹಂಕದ ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಇದರ ನೈಜತೆಯನ್ನು ಪರಿಶೀಲಿಸದೆಯೇ ಸರ್ವೆ ಸಂಖ್ಯೆ 13/1 ರ ಫೋಡಿಯನ್ನು ಕೋರಿ ಮತ್ತು 1 ಎಕರೆ 19 ಗುಂಟೆಗಳ ವಿಸ್ತೀರ್ಣಕ್ಕೆ ಸರ್ವೆ ಸಂಖ್ಯೆ 13/3 ಎಂದು ಮರು ಸಂಖ್ಯೆ ನೀಡಿರುವುದು ಗೊತ್ತಾಗಿದೆ. ಬಲರಾಮ್ ಎಂಬುವರು ಸಲ್ಲಿಸಿರುವ ಅರ್ಜಿಗೆ ವಾಸ್ತವಿಕವಾಗಿ ಮತ್ತು ಕಾನೂನಿನ ಪ್ರಕಾರ ಸಮರ್ಥನೀಯವಾಗಿರಲಿಲ್ಲ. ಏಕೆಂದರೇ ಈ ಆಸ್ತಿಯು ಕಂದಾಯ ಭೂಮಿಯಾಗಿ ಅಸ್ತಿತ್ವದಲ್ಲಿಲ್ಲ ಮತ್ತು 1882 ರ ಆಸ್ತಿ ವರ್ಗಾವಣೆ ಕಾಯ್ದೆಯ ಸೆಕ್ಷನ್ 7 ರ ಪ್ರಕಾರ ಅವರು ಹೇಳಿರುವ ಆಸ್ತಿಯ ಮಾಲೀಕರೂ ಅಲ್ಲ.
ದಾಖಲೆಗಳ ನೈಜತೆ, ಸ್ಥಳ ಪರಿಶೀಲನೆ ನಡೆಸದ ಭೂ ದಾಖಲೆಗಳ ಸಹಾಯಕ ನಿರ್ದೇಶಕ
ಇದಾವುದನ್ನೂ ಪರಿಶೀಲಿಸದೆಯೇ ಯಲಹಂಕದಲ್ಲಿರುವ ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಸರ್ವೆ ಸಂಖ್ಯೆ 13/1 ಅನ್ನು ಸರ್ವೆ ಸಂಖ್ಯೆ 13/3 ಎಂದು ಮರು ನಂಬರ್ ನೀಡಿದ್ದಾರೆ. ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಸ್ಥಳ ಪರಿಶೀಲನೆ ನಡೆಸದೆ ಮತ್ತು ಸಂಬಂಧಿತ ದಾಖಲೆಗಳನ್ನು ಪರಿಶೀಲಿಸದೆ, ದುರುದ್ದೇಶಪೂರಿತ ಆದೇಶ ಹೊರಡಿಸಿರುವುದು ಕಂಡು ಬಂದಿದೆ. ಇದನ್ನಾಧರಿಸಿಯೇ ಬಲರಾಮ್ ಎಂಬುವರು ಭೂ ಪರಿವರ್ತನೆ ಮಾಡಿಸಿದ್ದಾರೆ. ಅಲ್ಲದೇ ಇದನ್ನು ಮಾರಾಟವನ್ನೂ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಸುಪ್ರೀಂ ಕೋರ್ಟ್‌ನ “ಪ್ರತಾಪ್ ಸಿಂಗ್ ವರ್ಸಸ್ ಸ್ಟೇಟ್ ಆಫ್ ಪಂಜಾಬ್”, AIR 1964 SC 72 ರಲ್ಲಿ ನೀಡಿರುವ ತೀರ್ಪಿನ ಪ್ರಕಾರ ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಅಧಿಕಾರ ಚಲಾಯಿಸಲು ಅವಕಾಶವಿಲ್ಲ. ಅಲ್ಲದೇ ಇದೊಂದು ಅಧಿಕಾರದ ಮೇಲಿನ ವಂಚನೆಯಾಗಿದೆ ಎಂದು ಸಂವಿಧಾನ ಪೀಠವು ಸ್ಪಷ್ಟವಾಗಿ ಹೇಳಿತ್ತು.
ಭೂ ಸೀಲಿಂಗ್ ಕಾಯ್ದೆಯ ಸೆಕ್ಷನ್ 20 (1) (ಎ) ಅಡಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆಯಿಂದ ಅಗತ್ಯ ಅನುಮತಿಯನ್ನು ಪಡೆದುಕೊಂಡ ನಂತರ ಮತ್ತು ಬಿಡಿಎಯಿಂದ ಲೇಔಟ್ ಯೋಜನೆಯನ್ನು ಪಡೆದಿತ್ತು. ಹೀಗಾಗಿ ಎನ್ ಬಲರಾಮ್ ಎಂಬುವರು ಈ ಆಸ್ತಿಗಳಿಗೆ ಮಾಲೀಕರೇ ಅಲ್ಲ. ಹೀಗೆ ಯಾವುದೇ ಹಕ್ಕನ್ನು ಹೊಂದಿರದ ಖಾಸಗಿ ವ್ಯಕ್ತಿಗೆ ಈ ಆಸ್ತಿಗೆ ಸಂಬಂಧಿಸಿದಂತೆ ಮಾರಾಟ ಪತ್ರವನ್ನು ಕಾರ್ಯಗತಗೊಳಿಸಲು ಸಾಧ್ಯವಿಲ್ಲ. ಅವೆಲ್ಲವೂ ಕಾನೂನಿನ ದೃಷ್ಟಿಯಲ್ಲಿ ಅಮಾನ್ಯವಾಗಿವೆ.
ಆದರೂ ಎನ್. ಬಲರಾಮ್ ಮತ್ತು ಇತರರು 2025ರ ಡಿಸೆಂಬರ್ 13ರಂದು ರೋಹಿತ್ ಬಾನ್, ಸಂದೀಪ್ ಕುಮಾರ್ ಮತ್ತು ಮಲ್ಲೇಶ್ ಎಂ ಅವರ ಹೆಸರಿನಲ್ಲಿ ಮಾರಾಟದ ಒಪ್ಪಂದವನ್ನು ಮಾಡಿರುವುದು ಗೊತ್ತಾಗಿದೆ.




ಮೇಲ್ಮನವಿ ಸ್ವೀಕರಿಸಿದ್ದೇಕೆ?
1987ರ ಮಾರ್ಚ್ 9ರಂದೇ ಬೆಂಗಳೂರಿನ ಅಂದಿನ ಉಪ ಆಯುಕ್ತರು ಈ ಆಸ್ತಿಯನ್ನು ವಸತಿ ಉದ್ದೇಶಕ್ಕಾಗಿ ಪರಿವರ್ತಿಸಿ ಆದೇಶ ಹೊರಡಿಸಿರುವ ಕಾರಣ ಈ ಆದೇಶವನ್ನು ಬದಲಿಸಲು ಹಾಲಿ ಬೆಂಗಳೂರು ಉತ್ತರ ವಿಭಾಗದ ಉಪ ಆಯುಕ್ತರಿಗೆ ಯಾವುದೇ ಅಧಿಕಾರವಿಲ್ಲ. ಅಲ್ಲದೇ ಬಲರಾಮ್ ಎಂಬುವರು ಸಲ್ಲಿಸಿದ್ದ ಮೇಲ್ಮನವಿಯನ್ನೂ ಸ್ವೀಕರಿಸಲೇಬಾರದಿತ್ತು. ಸರ್ವೆ ನಂಬರ್ 13/1ರಲ್ಲಿನ ಆಸ್ತಿಗೆ ಮೇಲೆ ಬಲರಾಮ್ ಎಂಬುವರಿಗೆ ಯಾವುದೇ ಹಕ್ಕಿರದಿದ್ದರೂ ಸಹ ಅವರು ಹಕ್ಕನ್ನು ಪ್ರತಿಪಾದಿಸಿದ್ದೇ ವಿವಾದಾತ್ಮಕವಾಗಿದೆ ಎಂದು ಹೇಳಲಾಗಿದೆ.
ಸಂಪೂರ್ಣ ಮಾಲೀಕರಾಗಿರುವ ಮಾರಾಟಗಾರರಿಂದ ಪಡೆದ ಮಾನ್ಯತೆ ಹೊಂದಿರುವ ಮಾರಾಟ ಪತ್ರದ ಆಧಾರದ ಮೇಲೆ ಮ್ಯುಟೇಶನ್ ಆದೇಶವನ್ನು ಸರಿಯಾಗಿ ಸಂಘದ ಪದಾಧಿಕಾರಿಗಳ ಹೆಸರಿನಲ್ಲಿ ಮ್ಯುಟೇಶನ್ ಮಾಡಲಾಗಿತ್ತು , ಅದನ್ನು ಪ್ರಶ್ನಿಸಿರುವುದು ಬಲರಾಮ್ ಮತ್ತು ಸಂಘದ ಪದಾಧಿಕಾರಿಗಳ ನಡುವೆ ಸಿವಿಲ್ ವಿವಾದವಾಗಿರುತ್ತದೆ. ಒಂದೊಮ್ಮೆ ಎನ್.ಬಲರಾಮ್ ಅವರು ಡಿಫೆನ್ಸ್ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಪರವಾಗಿ ಈ ಆಸ್ತಿಯನ್ನು ಮಾಲೀಕತ್ವ ಮತ್ತು ಸ್ವಾಧೀನಪಡಿಸಿಕೊಂಡಿದ್ದರಿಂದ ಅಸಮಾಧಾನಗೊಂಡಿದ್ದರೆ, ಅವರಿಗೆ ಲಭ್ಯವಿರುವ ಪರಿಹಾರವೆಂದರೆ ಅವಧಿಯ ಮಿತಿಯೊಳಗೆ ಸಿವಿಲ್ ಮೊಕದ್ದಮೆ ಹೂಡಬೇಕಿತ್ತು.
ಅಲ್ಲದೇ ಈ ವಸತಿ ಸಂಘದ ಪರವಾಗಿ ಈ ಮಾರಾಟ ವ್ಯವಹಾರವು 1984-85 ರ ವರ್ಷದ್ದಾಗಿದೆ. ಹೀಗಾಗಿ ಅವರು ಸಹ ಆಸ್ತಿಯ ಮೇಲೆ ತಮ್ಮ ಹಕ್ಕನ್ನು ಕಳೆದುಕೊಂಡಿದ್ದಾರೆ. ಮಾಲೀಕತ್ವದ ಹಕ್ಕುಗಳ ಬಗ್ಗೆ ವಿವಾದವಿದ್ದರೆ ಬೆಂಗಳೂರು ಉತ್ತರ ಉಪವಿಭಾಗದ ಎಸಿಯ ಅಧಿಕಾರ ಚಲಾಯಿಸುವುದಕ್ಕೆ ಕಾನೂನಿನಲ್ಲಿ ಯಾವುದೇ ಸಮರ್ಥನೆಗಳೂ ಇಲ್ಲ. ಅದೇ ರೀತಿ ಆಸ್ತಿಯ ನಾಗರಿಕ ಹಕ್ಕುಗಳನ್ನು ನಿರ್ಣಯಿಸಲು ಎಸಿಗೆ ಯಾವುದೇ ಅಧಿಕಾರವೂ ಇಲ್ಲ.
ಕೆಎಲ್ಆರ್ ಕಾಯ್ದೆ, 1964 ರ ನಿಬಂಧನೆಗಳ ಅಡಿಯಲ್ಲಿ ಅದನ್ನು ನಿರ್ಣಯಿಸುವುದು ಸಿವಿಲ್ ನ್ಯಾಯಾಲಯಗಳ ವಿಶೇಷ ನ್ಯಾಯವ್ಯಾಪ್ತಿಯಲ್ಲಿದೆ. ಈ ನಿಯಮಿತ ಮೇಲ್ಮನವಿಯಲ್ಲಿ ಸಹಾಯಕ ಆಯುಕ್ತರ ಅಂತಹ ಕಾನೂನುಬಾಹಿರ ಮತ್ತು ಆದೇಶವೂ ಸಹ ಅನೂರ್ಜಿತವಾಗಿದೆ. ಇದಲ್ಲದೆ ಕಂದಾಯ ಅಧಿಕಾರಿಗೆ ನಿಯಮಿತ ಮೇಲ್ಮನವಿಯನ್ನು ಪರಿಗಣಿಸಲು ಯಾವುದೇ ಅಧಿಕಾರವಿರಲಿಲ್ಲ.
ಮೂರೇ ದಿನದಲ್ಲಿ ಭೂ ಪರಿವರ್ತನೆ ಆದೇಶ ಹೊರಡಿಸಿದ್ದೇಕೆ?
ಇದಲ್ಲದೆ ಎನ್ ಬಲರಾಮ್ ಅವರು ಬೆಂಗಳೂರು ನಗರ ಜಿಲ್ಲೆಯ ಸದರಿ ಜಿಲ್ಲಾಧಿಕಾರಿಗೂ ಅರ್ಜಿ ಸಲ್ಲಿಸಿದ್ದರು. ಇವರೂ ಸಹ ಸಂಬಂಧಿತ ದಾಖಲೆಗಳ ನೈಜತೆಯನ್ನು ಪರಿಶೀಲಿಸದೆ ಮತ್ತು ಆಸ್ತಿಯ ಸ್ಥಳ ಪರಿಶೀಲನೆ ನಡೆಸಿಲ್ಲ.

ಎನ್. ಬಲರಾಮ್ ಅವರು ಮಾಡಿದ್ದ ಸತ್ಯಗಳ ತಪ್ಪು ನಿರೂಪಣೆಯನ್ನು ನಂಬಿ ತಮ್ಮ ಅಧಿಕಾರವನ್ನು ಯಾಂತ್ರಿಕವಾಗಿ ಚಲಾಯಿಸಿದ್ದಾರೆ. ಅಲ್ಲದೇ 2026ರ ಜನವರಿ 17ರಂದು ಅರ್ಜಿ ಸಲ್ಲಿಸಿದ ಮೂರೇ ದಿನಗಳಲ್ಲಿ ಭೂ ಪರಿವರ್ತನೆ ಆದೇಶವನ್ನು ಹೊರಡಿಸಿರುವುದು ಕಾನೂನು ಬಾಹಿರವಾಗಿದೆ.

ಈ ಪ್ರಕರಣದಲ್ಲಿ ಇಷ್ಟೆಲ್ಲಾ ವಂಚನೆಗಳು ನಡೆದಿದ್ದರೂ ಸಹಾ ಭೂ ಮಾಪನ ಮತ್ತು ಕಂದಾಯ ಇಲಾಖೆಯ ಆಯುಕ್ತರು ಸಂಬಂಧಿಸಿದ ಡಿ ಸಿ, ಎ ಸಿ ಮತ್ತು ಇತರೆ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ವಹಿಸಿಲ್ಲ. ಇವರ ನಡೆಯೂ ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಂತಾಗಿದೆ.
‘ಭಾರಿ ಮೊತ್ತದ ಭೂ ಹಗರಣ ಮಾಡಿರುವ ಬಲರಾಮ್ ಮತ್ತಿತರೇ ವ್ಯಕ್ತಿಗಳು ಮತ್ತು ಭಾಗಿಯಾಗಿರುವ ಅಧಿಕಾರಿಗಳ ಮೇಲೆ ಸಿಬಿಐ ತನಿಖೆ ನಡೆಸಿ ಕಠಿಣ ಶಿಕ್ಷೆ ವಿಧಿಸಲು ಸರ್ಕಾರವು ಕ್ರಮ ಜರುಗಿಸಬೇಕು,’ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಬಾಧಿತ ಮಾಲೀಕರೊಬ್ಬರು.




