ಪೋಕ್ಸೋ ಪ್ರಕರಣ ಹೊರರಾಜ್ಯಕ್ಕೆ ವರ್ಗಾಯಿಸಲು ಹೆಚ್ಚಿದ ಒತ್ತಡ; ರಾಜ್ಯಸಭಾ ಸದಸ್ಯ ಲೆಹರ್‌ಸಿಂಗ್‌ ಹೇಳಿಕೆ ಬಿಡುಗಡೆ

ಬೆಂಗಳೂರು; ಚಿತ್ರದುರ್ಗದ ಅತ್ಯಂತ ಪ್ರಭಾವಿ ಮುರುಘಾ ಮಠದ ಮಠಾಧೀಶರಾದ ಡಾ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಪೋಕ್ಸೋ ಕಾಯ್ದೆಯಡಿ ದಾಖಲಾಗಿರುವ ಪ್ರಕರಣದ ತನಿಖೆಯನ್ನು ಹೊರರಾಜ್ಯಕ್ಕೆ ವರ್ಗಾಯಿಸಬೇಕು ಎಂಬ ಕೂಗು ಇದೀಗ ಬಿಜೆಪಿ ವಲಯದಿಂದಲೇ ಎದ್ದಿದೆ.

 

ಬಿಜೆಪಿ ಪಕ್ಷದ ಕೇಂದ್ರದ ವರಿಷ್ಠರೊಂದಿಗೆ ನಿಕಟ ಸಂಪರ್ಕ ಹೊಂದಿರುವ ಕರ್ನಾಟಕದ ರಾಜ್ಯಸಭಾ ಸದಸ್ಯ ಲೆಹರ್‌ಸಿಂಗ್ ಅವರು ಮುರುಘಾ ಶರಣರ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣದ ತನಿಖೆಯನ್ನು ಕರ್ನಾಟಕದ ಹೊರಗೆ ವರ್ಗಾಯಿಸಬೇಕು ಎಂಬ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

 

ಮುರುಘಾ ಶರಣರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸ್ವಾಮೀಜಿ ಬೆನ್ನಿಗೆ ನಿಂತಿದ್ದರು. ಸ್ವಾಮೀಜಿ ಅವರು ಆರೋಪದಿಂದ ಮುಕ್ತರಾಗಲಿದ್ದಾರೆ ಎಂದು ಯಡಿಯೂರಪ್ಪ ಅವರು ನೀಡಿದ್ದ ಹೇಳಿಕೆ ಮತ್ತು ಮಠದೊಳಗಿನಿಂದಲೇ ಷಡ್ಯಂತ್ರ ನಡೆದಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ನೀಡಿದ್ದ ಹೇಳಿಕೆಯು ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಲಿದೆ ಎಂಬ ಸುಳಿವು ದೊರೆಯುತ್ತಿದ್ದಂತೆ ರಾಜ್ಯಸಭಾ ಸದಸ್ಯ ಲೆಹರ್‌ಸಿಂಗ್‌ ಅವರು ಇಡೀ ಪ್ರಕರಣದ ತನಿಖೆಯನ್ನು ಹೊರರಾಜ್ಯಕ್ಕೆ ವರ್ಗಾಯಿಸಬೇಕು ಎಂದು ವ್ಯಕ್ತಪಡಿಸಿರುವ ಇಂಗಿತವು ಮಹತ್ವ ಪಡೆದುಕೊಂಡಿದೆ. ಅಲ್ಲದೇ ರಾಜ್ಯದೊಳಗೇ ತನಿಖೆ ನಡೆದರೆ ಅದು ನಿಷ್ಪಕ್ಷಪಾತವಾಗಿರುವುದಿಲ್ಲ ಎಂಬ ಸಂದೇಶವನ್ನೂ ಸಾರಿದಂತಾಗಿದೆ. ಈ ಸಂಬಂಧ ಅವರು ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.

 

ಬಿಡುಗಡೆ ಮಾಡಿದ ಹೇಳಿಕೆಯಲ್ಲೇನಿದೆ?

 

ಚಿತ್ರದುರ್ಗದ ಅತ್ಯಂತ ಪ್ರಭಾವಿ ಮುರುಘಾ ಮಠದ ಮಠಾಧೀಶರ ವಿರುದ್ಧ ಪೋಕ್ಸೋ  ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿದೆ. ಅಪ್ರಾಪ್ತ ಬಾಲಕಿಯರು ಲೈಂಗಿಕ ಕಿರುಕುಳದ ಗಂಭೀರ ಆರೋಪ ಮಾಡಿದ್ದಾರೆ. ಇದು ಅತ್ಯಂತ ಆಘಾತಕಾರಿ ಮತ್ತು ದುಃಖದ ಬೆಳವಣಿಗೆಯಾಗಿದೆ. ಪ್ರತಿ ಬಾರಿಯೂ ಇಂತಹದ್ದೊಂದು ಪ್ರಕರಣ ಸಂಭವಿಸಿದಾಗ ಅದು ನಮ್ಮ ಸುತ್ತಮುತ್ತಲಿನ ಮತ್ತು ನಮ್ಮ ಜನರಲ್ಲಿ ನಮ್ಮ ವಿಶ್ವಾಶವನ್ನೇ ಅಲುಗಾಡಿಸುತ್ತದೆ. ಇಂತಹ ಆರೋಪಗಳ ಕುರಿತಾದ ಪ್ರಕರಣವನ್ನು ಸಂಪೂರ್ಣವಾಗಿ ಮತ್ತು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು.

 

ಈ ಪ್ರಕರಣದ ತನಿಖೆಯಲ್ಲಿ ಕರ್ನಾಟಕ ಸರ್ಕಾರ ಮತ್ತು ಎಲ್ಲಾ ರಾಜಕೀಯ ಪಕ್ಷಗಳ ಒತ್ತಡ ಮತ್ತು ಹಸ್ತಕ್ಷೇಪ ಇಲ್ಲದಂತೆ ನೋಡಿಕೊಳ್ಳಬೇಕು. ಹೆಣ್ಣುಮಕ್ಕಳಿಗೆ ನ್ಯಾಯ ದೊರಕುವಂತಾಗಬೇಕು. ಈ ಪ್ರಕರಣವನ್ನು ಕರ್ನಾಟಕದ ಹೊರಗೆ ವರ್ಗಾಯಿಸಿದರೆ ನ್ಯಾಯದ ಹಿತಾಸಕ್ತಿ ಕಾಪಾಡಿದಂತಾಗುತ್ತದೆ ಎನ್ನುವುದಾದರೆ ಮತ್ತು ಇದು ಎಲ್ಲಾ ಅನುಮಾನಗಳನ್ನು ಕೊನೆಗಾಣಿಸುತ್ತದೆ ಎನ್ನುವುದಾದರೆ ಹಾಗೆಯೇ ಮಾಡಬೇಕು. ಹೀಗಾಗಿ ಈ ಪ್ರಕರಣವನ್ನು ಕರ್ನಾಟಕದ ಹೊರಗೆ ವರ್ಗಾಯಿಸಬೇಕು ಎಂದು ಹೇಳಿಕೆಯಲ್ಲಿ ಪ್ರಸ್ತಾಪಿಸಿದ್ದಾರೆ.

 

ರಾಜ್ಯಸಭಾ ಸದಸ್ಯ ಲೆಹರ್‌ಸಿಂಗ್‌ ಬಿಡುಗಡೆ ಮಾಡಿರುವ ಹೇಳಿಕೆ ಪ್ರತಿ

 

ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶರಣರ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣದ ತನಿಖೆಯನ್ನು ಹೊರರಾಜ್ಯಕ್ಕೆ ವರ್ಗಾಯಿಸಬೇಕು ಎಂದು ಸಾಮಾಜಿಕ ಹೋರಾಟಗಾರರು ಮುಖ್ಯಮಂತ್ರಿ, ಗೃಹ ಸಚಿವ ಮತ್ತು ಪೊಲೀಸ್‌ ಮಹಾನಿರ್ದೇಶಕರಿಗೆ ಮನವಿ ಸಲ್ಲಿಸಿದ್ದರು.

 

ಚಿತ್ರದುರ್ಗದ ಮುರುಘರಾಜೇಂದ್ರ ಮಠವು ಕರ್ನಾಟಕ ರಾಜ್ಯದಲ್ಲಿ ಅತ್ಯಂತ ಪ್ರಭಾವಿ ಮಠವಾಗಿದೆ. ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳ ನಾಯಕರುಗಳು, ಪೊಲೀಸ್‌ ಅಧಿಕಾರಿಗಳು, ಸಾಮಾಜಿಕ ಕಾರ್ಯಕರ್ತರು, ವಿಜ್ಞಾನಿಗಳು, ಪತ್ರಕರ್ತರು, ಚಿತ್ರರಂಗ, ಸಾಂಸ್ಕೃತಿಕ ರಂಗ ಹೀಗೆ ವಿವಿಧ ರಂಗಗಳಲ್ಲಿನ ಗಣ್ಯಾತಿ ಗಣ್ಯರು ಈ ಮಠದೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ಮೇಲೆ ಈ ಎಲ್ಲರೂ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಇಡೀ ಪ್ರಕರಣದ ತನಿಖೆಯನ್ನು ಹೊರರಾಜ್ಯಕ್ಕೆ ವರ್ಗಾಯಿಸಬೇಕು ಎಂದು ನೈಜ ಹೋರಾಟಗಾರರ ವೇದಿಕೆ, ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ, ಭಾರತೀಯ ನಾಗರಿಕ ಸಮಿತಿಯು ಮನವಿಯಲ್ಲಿ ಒತ್ತಾಯಿಸಿತ್ತು.

 

‘ಈ ಮಠದ ಮುಖ್ಯಸ್ಥರಾದ ಡಾ ಶಿವಮೂರ್ತಿ ಶರಣರ ಮೇಲೆ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯದ ಗಂಭೀರ ಪ್ರಕರಣವಾಗಿರುವ ಕಾರಣ ಪೋಕ್ಸೋ ಕಾಯ್ದೆಯಡಿ ಮೊಕದ್ದಮೆ ದಾಖಲಾಗಿದೆ. ಈ ಮಠದೊಂದಿಗೆ ಸಂಬಂಧವಿಟ್ಟುಕೊಂಡ ರಾಜ್ಯದ ಚುಕ್ಕಾಣಿ ಹಿಡಿದು ಆಡಳಿತ ನಡೆಸಿದ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಸಮಾಜದ ಇತರ ಗಣ್ಯ ವ್ಯಕ್ತಿಗಳು ಈ ಪ್ರಕರಣದ ಮೇಲೆ ಪ್ರಭಾವ ಬೀರಬಹುದು,’ ಎಂದು ಸಾಮಾಜಿಕ ಕಾರ್ಯಕರ್ತ ಎಚ್‌ ಎಂ ವೆಂಕಟೇಶ್‌, ಹೆಚ್ ಜಿ ರಮೇಶ್, ಪ್ರದೀಪ್ ಮೆಂಡೋ, ಹಂದ್ರಾಳ ನಾಗಭೂಷಣ್‌, ತಿಪ್ಪೇಸ್ವಾಮಿ ಅವರು ಶಂಕೆ ವ್ಯಕ್ತಪಡಿಸಿದ್ದರು.

 

ಶರಣರ ವಿರುದ್ಧದ ಪ್ರಕರಣ ಹೊರರಾಜ್ಯಕ್ಕೆ ವರ್ಗಾಯಿಸಲು ಮನವಿ; ಪೋಕ್ಸೋ ತನಿಖೆ ಮೇಲೆ ಪ್ರಭಾವ!

 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಪ್ರಾಥಮಿಕ ತನಿಖೆ ವೇಳೆಯಲ್ಲಿಯೇ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನೀಡಿರುವ ಹೇಳಿಕೆಯು ದೌರ್ಜನ್ಯಕ್ಕೆ ಒಳಗಾಗಿ ನೊಂದಿರುವ ವಿದ್ಯಾರ್ಥಿನಿಯರಿಗೆ ನ್ಯಾಯ ಸಿಗುವ ವಿಶ್ವಾಸವೂ ಇಲ್ಲವಾಗಿದೆ. ‘ಹೀಗಾಗಿ ಪೋಕ್ಸೋ ಕಾಯಿದೆಯ ಪ್ರಕರಣವನ್ನು ಕರ್ನಾಟಕ ರಾಜ್ಯವನ್ನು ಹೊರತುಪಡಿಸಿ ಬೇರೆ ರಾಜ್ಯಕ್ಕೆ ಪ್ರಕರಣವನ್ನು ವರ್ಗಾವಣೆ ಮಾಡಬೇಕು. ಅಲ್ಲಿನ ತನಿಖೆ ಸಂಸ್ಥೆಗೆ ವಿಚಾರಣೆ ಹೊಣೆಯನ್ನು ನೀಡಿ ಅಲ್ಲಿನ ನ್ಯಾಯಾಲಯದಲ್ಲಿ ತನಿಖೆ ಮತ್ತು ವಿಚಾರಣೆ ನಡೆದಲ್ಲಿ ಪ್ರಕರಣದ ಸತ್ಯತೆಯು ಪ್ರಾಮಾಣಿಕವಾಗಿ ಹೊರಬರುವುದರಲ್ಲಿ ಸಂಶಯವಿಲ್ಲ,’ ಎಂದು ಮನವಿಯಲ್ಲಿ ಕೋರಿದ್ದರು.

 

ಈ ಹಿಂದೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ವಿರುದ್ದ ದಾಖಲಾಗಿದ್ದ ಗಂಭೀರ ಪ್ರಕರಣದ ವಿಚಾರಣೆಯನ್ನು ತಮಿಳುನಾಡನ್ನು ಹೊರತುಪಡಿಸಿ ಕರ್ನಾಟಕದ ಬೆಂಗಳೂರಿನಲ್ಲಿ ವಿಚಾರಣೆ ನಡೆದಿತ್ತು. ಆಗ ಸಮರ್ಪಕವಾದ ತೀರ್ಪು ಪ್ರಕಟವಾಗಿತ್ತು. ಅತ್ಯಂತ ಪ್ರಭಾವಿಗಳಾದ ಡಾ ಶಿವಮೂರ್ತಿ ಮುರುಘಾ ಶರಣರ ವಿರುದ್ಧದ ಪೋಕ್ಸೋ ಕಾಯ್ದೆಯ ಪ್ರಕರಣವನ್ನು ಹೊರ ರಾಜ್ಯದಲ್ಲಿ ವಿಚಾರಣೆ, ತನಿಖೆ ನಡೆದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ ಎಂದು ಮನವಿಯಲ್ಲಿ ವಿವರಿಸಿದ್ದರು.

 

‘ಮಾಧ್ಯಮಗಳಲ್ಲಿ ಈಗಾಗಲೇ ವರದಿಯಾಗಿರುವಂತೆ ಶಿವಮೂರ್ತಿ ಮುರುಘಾ ಶರಣರು ಸಂಧಾನಕ್ಕೂ ಸಿದ್ಧ ಸಮರಕ್ಕೂ ಸಿದ್ಧ ಎಂದು ಹೇಳಿಕೆ ನೀಡಿದ್ದಾರೆ. ವಿದ್ಯಾರ್ಥಿನಿಯರ ಮೇಲೆ ನಡೆದ ದೈಹಿಕ ದೌರ್ಜನ್ಯಕ್ಕೆ ಸಂಧಾನ ಮಾಡುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿರುವ ಸಾಮಾಜಿಕ ಹೋರಾಟಗಾರರು ಪ್ರಕರಣವನ್ನು ಹೊರಾಜ್ಯಕ್ಕೆ ವರ್ಗಾವಣೆ ಮಾಡುವುದೇ ಒಳಿತು ಎಂದು ಮನವಿಯಲ್ಲಿ ಅಭಿಪ್ರಾಯಿಸಿದ್ದಾರೆ.

 

ಈ ಪ್ರಕರಣದಲ್ಲಿ ಪಾರದರ್ಶಕವಾದ ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಗೆ ಗುರಿಪಡಿಸುವ ಇಚ್ಚಾಶಕ್ತಿ ಇರಬೇಕು. ಪ್ರಕರಣವನ್ನು ಹೊರ ರಾಜ್ಯಕ್ಕೆ ವರ್ಗಾವಣೆ ಮಾಡಬೇಕು. ಸಾಧ್ಯವಾಗದೇ ಇದ್ದಲ್ಲಿ ಕೊನೆಯ ಪಕ್ಷ ಚಿತ್ರದುರ್ಗದಿಂದ ಮೈಸೂರು ಜಿಲ್ಲೆಗೆ ಪ್ರಕರಣವನ್ನು ವರ್ಗಾವಣೆ ಮಾಡಿ ವಿದ್ಯಾರ್ಥಿನಿಯರ ಆಶೋತ್ತರಗಳಿಗೆ ನ್ಯಾಯ ಒದಗಿಸಿ ಕೊಡಬೇಕು ಎಂದು ಸಾಮಾಜಿಕ ಹೋರಾಟಗಾರರು ಕೋರಿದ್ದರು.

the fil favicon

SUPPORT THE FILE

Latest News

Related Posts