ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಮುರುಘಾ ಶರಣರ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

photo credit; vijayakarnataka

ಬೆಂಗಳೂರು;  ಮಕ್ಕಳ ಮೇಲೆ ಲೈಂಗಿಕ  ದೌರ್ಜನ್ಯ  ಎಸಗಿದ್ದಾರೆ ಎಂಬ ಗುರುತರ ಆರೋಪದಡಿಯಲ್ಲಿ  ಚಿತ್ರದುರ್ಗದ  ಮುರುಘರಾಜೇಂದ್ರ ಬೃಹನ್ಮಠದ ಡಾ ಶಿವರಾತ್ರಿ ಮುರುಘಾ ಶರಣರ ವಿರುದ್ಧ  ಪೋಕ್ಸೊ ಕಾಯಿದೆ ಅಡಿಯಲ್ಲಿ ಮೈಸೂರಿನಲ್ಲಿ    ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

 

ಚಿತ್ರದುರ್ಗದ ಬೃಹನ್ಮಠದ ಆಡಳಿತದಲ್ಲಿರುವ ವಿದ್ಯಾರ್ಥಿನಿಲಯದ ಹಲವು ವಿದ್ಯಾರ್ಥಿನಿಯರಿಗೆ ಸ್ವಾಮೀಜಿ ಅವರು ಹಲವು ದಿನಗಳಿಂದಲೂ  ಲೈಂಗಿಕವಾಗಿ ತೊಂದರೆ ನೀಡುತ್ತಿದ್ದಾರೆ. ಹೀಗಾಗಿ ನ್ಯಾಯ ದೊರಕುವ ಕುರಿತು ಯಾವುದೇ ವಿಶ್ವಾಸವಿಲ್ಲ ಎಂದು ತೊಂದರೆಗೊಳಗಾದ ವಿದ್ಯಾರ್ಥಿನಿಯರು ಮೈಸೂರಿನಲ್ಲಿರುವ ಒಡನಾಡಿ ಸಂಸ್ಥೆಯ ಕದ ತಟ್ಟಿದ್ದರು ಎಂದು ಗೊತ್ತಾಗಿದೆ.

 

ಸಂಸ್ಥೆ ನೀಡಿದ ದೂರು ಆಧರಿಸಿ ಮೈಸೂರು ಜಿಲ್ಲಾ  ಮಕ್ಕಳ ಕಲ್ಯಾಣ ಸಮಿತಿ ಶುಕ್ರವಾರ ವಿಚಾರಣೆ ನಡೆಸಿದೆ ಎಂದು ತಿಳಿದು ಬಂದಿದೆ. ತೊಂದರಗೊಳಗಾದ ವಿದ್ಯಾರ್ಥಿನಿಯರ ಹೇಳಿಕೆಯಲ್ಲಿ ಸತ್ಯಾಂಶವಿದೆ ಎಂಬುದನ್ನು ಖಚಿತಪಡಿಸಿಕೊಂಡ ನಂತರ ಮುರುಘಾ ಶರಣರ ವಿರುದ್ಧ  ಸ್ವಾಮೀಜಿ ವಿರುದ್ದ ಪೋಕ್ಸೊ ಕಾಯಿದೆ ಅಡಿ ಮೊಕದ್ದಮೆ ದಾಖಲಿಸಬೇಕು ಎಂದು  ಸಮಿತಿಯು ಆದೇಶ ಹೊರಡಿಸಿದೆ ಎಂದು ತಿಳಿದು ಬಂದಿದೆ. ಈ ಸಂಬಂಧ ಮುರುಘಾ ಶರಣರನ್ನು ಮೊದಲ ಆರೋಪಿಯನ್ನಾಗಿಸಿ ಎಫ್‌ಐಆರ್‌ ದಾಖಲಿಸಲಾಗಿದೆ. ಎಫ್‌ಐಆರ್‌ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಸಮಿತಿ ಆದೇಶದ ಅನ್ವಯ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅರುಂಧತಿ ಅವರು ನೀಡಿದ ದೂರು ಆಧರಿಸಿ ನಜರ್‌ಬಾದ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಘಟನೆ ಚಿತ್ರದುರ್ಗದಲ್ಲಿ ನಡೆದಿರುವುದರಿಂದ ಪೊಲೀಸರು ಇಡೀ ಪ್ರಕರಣಗಳನ್ನು ಚಿತ್ರದುರ್ಗಕ್ಕೆ ವರ್ಗಾವಣೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆರಂಭದಲ್ಲಿ  ಮೈಸೂರು ನಜರಾಬಾದ್‌ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದಾರಾದರೂ ಆ ನಂತರ ಜಿಲ್ಲಾಧಿಕಾರಿ ಗಮನಕ್ಕೆ ತಂದ ನಂತರ ಪ್ರಕರಣ ದಾಖಲಿಸಲಾಗಿದೆ ಎಂದು ಗೊತ್ತಾಗಿದೆ.

 

ದೂರಿನಲ್ಲೇನಿದೆ?

 

 

ಚಿತ್ರದುರ್ಗದ ಮುರುಘಾಮಠದ ವಿದ್ಯಾರ್ಥಿನಿಲಯದಲ್ಲಿರುವ ನಮ್ಮನ್ನು ಸ್ವಾಮೀಜಿ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಎಸ್‌ಎಸ್ಎಲ್‌ಸಿ ಓದುತ್ತಿರುವ ವಿದ್ಯಾರ್ಥಿನಿಯರು ದೂರು ನೀಡಿದ್ದರು.

 

‘ಸ್ವಾಮೀಜಿ ಅವರಿಗೆ ಹಣ್ಣು ತೆಗೆದುಕೊಂಡು ಹೋಗಿ ಎಂದು ಮಹಿಳಾ ವಾರ್ಡನ್ ಅವರೇ ನಮ್ಮನ್ನು ಕಳುಹಿಸುತ್ತಿದ್ದರು. ಸ್ವಾಮೀಜಿ ಇದ್ದ ಸ್ಥಳಕ್ಕೆ ತೆರಳಿದರೆ ಅಲ್ಲಿ ನಮಗೆ ಮತ್ತು ಬರುವಂತೆ ಮಾಡಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದರು. ಇಂಥ ಅನುಭವ ಹಲವು ವಿದ್ಯಾರ್ಥಿನಿಯರಿಗೆ ಆಗಿದ್ದರೂ ದೂರು ನೀಡಲು ಹೆದರುತ್ತಿದ್ದರು. ನಮಗೆ ಚಿತ್ರದುರ್ಗದಲ್ಲಿ ನ್ಯಾಯ ಸಿಗಲಿಲ್ಲ ಎನ್ನುವ ಕಾರಣಕ್ಕೆ ಮೈಸೂರಿನ ಒಡನಾಡಿ ಸಂಸ್ಥೆಗೆ ದೂರು ನೀಡಿದ್ದೇವೆ ಎಂದು ಹೇಳಿಕೊಂಡಿದ್ದರು,’ ಎಂದು ತಿಳಿದು ಬಂದಿದೆ.

 

ಒಡನಾಡಿ ಸಂಸ್ಥೆಯವರು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಮಕ್ಕಳ ಹೇಳಿಕೆ ಆಧರಿಸಿ ದೂರು ನೀಡಿದ್ದರು. ವಿಚಾರಣೆ ನಡೆಸಿದಾಗ ಮಕ್ಕಳು ತಮಗಾದ ಅನುಭವವನ್ನು ಸಮಿತಿ ಮುಂದೆ ದಾಖಲಿಸಿದ್ದರು.ವಿಸ್ತೃತ ವಿಚಾರಣೆ ನಂತರ ಸಮಿತಿಯು ಮೊಕದ್ದಮೆ ದಾಖಲಿಸಲು ಮಕ್ಕಳ ರಕ್ಷಣಾಧಿಕಾರಿಗೆ ಆದೇಶ ನೀಡಿತ್ತು. ಸಮಿತಿ ಅಧ್ಯಕ್ಷರಾದ  ಕಮಲ ಅವರು ರಜೆ ಇದ್ದ ಕಾರಣ  ಹಿರಿಯ ಸದಸ್ಯ ಧನಂಜಯ ಎಲಿಯೂರು, ಸದಸ್ಯರಾದ ಅಶೋಕ್ ಹಾಗೂ ಸವಿತಾಕುಮಾರಿ ವಿಚಾರಣೆ ನಡೆಸಿದರು.

 

ಸ್ವಾಮೀಜಿ ಅವರು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಕುರಿತು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೂರು ನೀಡಿದ್ದು, ನಜರ್‌ಬಾದ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ ಎಂದು ಮೈಸೂರು ಡಿಸಿಪಿ ಪ್ರದೀಪ್‌ ಗುಂಟಿ ಅವರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

 

ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಪೋಷಕರು ಎಂದು ಹೇಳಿಕೊಳ್ಳುತ್ತಲೇ ತಮ್ಮ ಕುರಿತಾದ ಅಪ್ರಿಯವಾದ ಸಂಗತಿಗಳ ಕುರಿತು ಯಾರೂ ಪ್ರಕಟಿಸಬಾರದು ಮತ್ತು ಚರ್ಚಿಸಬಾರದು ಎಂದು ನಿರ್ದಿಷ್ಟ ಪ್ರಕರಣ, ನಿರ್ದಿಷ್ಟ ವಸ್ತು ಸಂಗತಿಯನ್ನು ಉಲ್ಲೇಖಿಸದೇ ತಡೆಯಾಜ್ಞೆ ಕೋರಿರುವ ಚಿತ್ರದುರ್ಗ ಮುರುಘಾಮಠದ ಡಾ ಶಿವಮೂರ್ತಿ ಮುರುಘಾ ಶರಣರು ಬೆಂಗಳೂರಿನ ಸಿಟಿ ಸಿವಿಲ್‌ ನ್ಯಾಯಾಲಯದಲ್ಲಿ ಅಸಲು ದಾವೆ ಸಲ್ಲಿಸಿದ್ದನ್ನು ಸ್ಮರಿಸಬಹುದು.

 

 

ಮುರುಘಾ ಮಠಕ್ಕೆ ನೂತನ ಉತ್ತರಾಧಿಕಾರಿ ನೇಮಕ ಮಾಡಿರುವ ಬೆನ್ನಲ್ಲೇ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಮುರುಘಾ ಶರಣರು ಸಲ್ಲಿಸಿರುವ ಅಸಲು ದಾವೆಯು ಕುತೂಹಲ ಕೆರಳಿಸಿದೆ.  2022ರ ಏಪ್ರಿಲ್‌ 13ರಂದು ಸಲ್ಲಿಸಿರುವ ಅಸಲು  ದಾವೆ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ. ವೈಯಕ್ತಿಕವಾಗಿ ಅಸಲು ದಾವೆ ಸಲ್ಲಿಸಲಾಗಿದೆಯೇ ವಿನಃ ಮಠದ ಮೂಲಕ ಅಸಲು ದಾವೆ ಸಲ್ಲಿಸಿರಲಿಲ್ಲ.

 

 

ಈ ಅರ್ಜಿಯು ಮಠದ ಮುಖ್ಯಸ್ಥರಿಗೆ ಸಂಬಂಧಿಸಿದ ಯಾವುದೇ ವರದಿಯ ಮೇಲೆ ಸಂಪೂರ್ಣ ನಿಷೇಧ ಹೇರಲಿದೆ. ಇದು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ದಾಳಿ ಎಂದು ಕಾನೂನು ತಜ್ಞರು, ವಕೀಲರು ಅಭಿಪ್ರಾಯಿಸಿದ್ದರು.

 

 

ಡೆಕ್ಕನ್‌ ಹೆರಾಲ್ಡ್‌, ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌, ದಿ ಟೈಮ್ಸ್‌ ಆಫ್ ಇಂಡಿಯಾ, ಡೆಕ್ಕನ್ ಕ್ರಾನಿಕಲ್‌, ದಿ ಹಿಂದು, ವಿಜಯ್‌ ಟೈಮ್ಸ್‌, ಕನ್ನಡಪ್ರಭ, ಸಂಯುಕ್ತ ಕರ್ನಾಟಕ, ಉದಯವಾಣಿ, ಸಂಜೆವಾಣಿ, ಈ ಸಂಜೆ, ವಿಜಯ ಕರ್ನಾಟಕ, ಡೈಲಿ ಸಾಲಾರ್‌, ಸಿಯಾಸತ್‌, ಡೈಲಿ ಪಾಸ್ಬಾನ್‌, ಈನಾಡು, ಆಂಧ್ರ ಜ್ಯೋತಿ, ಮಲಯಾಳಂ ಮನೋರಮ, ಎನ್‌ಡಿಟಿವಿ, ನ್ಯೂಸ್‌ 9, ಟೈಮ್ಸ್‌ ನೌ, ಆಜ್‌ತಕ್‌, ಟಿವಿ ಟುಡೆ, ಸಿಎನ್‌ಬಿಸಿ, ಸ್ಟಾರ್‌, ಸ್ಟಾರ್ ಇಂಡಿಯಾ ಪ್ರೈವೈಟ್‌ ಲಿಮಿಟೆಡ್‌, ಉದಯ ಟಿವಿ, ಈ ನಾಡು (ಕನ್ನಡ), ಈ ಟಿವಿ ಕನ್ನಡ ನ್ಯೂಸ್‌ ಡಿವಿಜನ್‌, ಸಮಯ ಟಿವಿ, ಜನಶ್ರೀ, ಪಬ್ಲಿಕ್‌, ಕಲರ್ಸ್‌ ಕನ್ನಡ, ರಾಜ್‌ ನ್ಯೂಸ್‌ ಕನ್ನಡ, ಕಸ್ತೂರಿ ನ್ಯೂಸ್‌ 24, ಕಲ್ಕಿ ಕನ್ನಡ, ಪ್ರಜಾ ಟಿವಿ ಕನ್ನಡ, ಅಸೋಸಿಯೇಟೆಡ್‌ ಬ್ರಾಡ್‌ಕಾಸ್ಟಿಂಗ್‌ ಕಂಪನಿ (ಟಿವಿ 9 , ನ್ಯೂಸ್‌ 9), ಏಷ್ಯಾ ನ್ಯೂಸ್‌ ನೆಟ್‌ ವರ್ಕ್‌ ಪ್ರೈವೈಟ್‌ ಲಿಮಿಟೆಡ್‌, ಕಸ್ತೂರಿ ಮೀಡಿಯಾ ಪ್ರೈವೈಟ್‌ ಲಿಮಿಟೆಡ್, ದ್ವಿಗ್ವಿಜಯ ನ್ಯೂಸ್‌, ಬೆಂಗಳೂರು ಮಿರರ್‌, ಈ ಟಿವಿ ಭಾರತ್‌ ಕನ್ನಡ ಮಾಧ್ಯಮ ಸಂಸ್ಥೆಗಳನ್ನು ಪ್ರತಿವಾದಿಗಳನ್ನಾಗಿಸಿದೆ. ಡಿಜಿಟಲ್‌ ಮಾಧ್ಯಮಗಳನ್ನು, ಟ್ವಿಟರ್‌, ಫೇಸ್‌ಬುಕ್‌ಗಳನ್ನು ಪ್ರತಿವಾದಿಯನ್ನಾಗಿಸಿಲ್ಲ.

 

 

ಡೆಕ್ಕನ್‌ ಹೆರಾಲ್ಡ್‌ನ್ನು ಪ್ರತಿವಾದಿಯನ್ನಾಗಿಸಿರುವ ಮುರುಘಾ ಶರಣರು ಸಲ್ಲಿಸಿರುವ ಅಸಲು ದಾವೆಯಲ್ಲಿ ಪ್ರಜಾವಾಣಿ ಮತ್ತು ವಿಶ್ವವಾಣಿ ಪತ್ರಿಕೆಯನ್ನು ಹೆಸರಿಸದಿರುವುದು ಅಚ್ಚರಿ ಮೂಡಿಸಿದೆ. ಕಾಕತಾಳಿಯ ಎಂದರೆ ಶರಣರು ಪ್ರಜಾವಾಣಿಯಲ್ಲಿ ಆಗಾಗ್ಗೆ ಅಂಕಣಗಳನ್ನು ಬರೆಯುತ್ತಿರುವುದನ್ನು ನೆನೆಯಬಹುದು.

 

 

ಶ್ರೀ ಶ್ರೀ ಮುರುಘರಾಜೇಂದ್ರ ಬೃಹನ್ಮಠಕ್ಕೆ ಸಂಬಂಧಿಸಿದದಂತೆ ವರದಿಗಳು ಅಥವಾ ಲೇಖನಗಳು ಅಥವಾ ಯಾವುದೇ ಇತರ ವಿಷಯಗಳ ಪ್ರಸಾರ ಅಥವಾ ಕಾರ್ಯಕ್ರಮಗಳ ಪುನರಾವರ್ತಿತ ಪ್ರಸಾರ, ಅಥವಾ ಚರ್ಚೆಗಳು ಅಥವಾ ಯಾವುದೇ ರೀತಿಯ ಚರ್ಚೆ ಅಥವಾ ವರದಿ ಪ್ರಕಟಿಸಬಾರದು. ಪ್ರತಿವಾದಿಗಳು, ಅದರ ಸಹವರ್ತಿಗಳು, ಸೋದರ ಸಂಸ್ಥೆಗಳು, ಅದರ ಏಜೆಂಟ್‌ಗಳು, ಪ್ರತಿನಿಧಿಗಳು, ವರದಿಗಾರರು, ಅಧಿಕಾರಿಗಳು, ಉದ್ಯೋಗಿಗಳು ಮತ್ತು / ಅಥವಾ ಯಾವುದೇ ವ್ಯಕ್ತಿ, ಘಟಕ, ಮುದ್ರಣ ಅಥವಾ ವಿದ್ಯುನ್ಮಾನ ಮಾಧ್ಯಮದಲ್ಲಿ ಅಥವಾ ಇಂಟರ್ನೆಟ್ ಮೂಲಕ ಅಥವಾ ಯಾವುದೇ ಪ್ರಕಟಣೆ, ಮರುಪ್ರಕಟಣೆ, ಯಾವುದೇ ಕಾರ್ಯಗಳನ್ನು ನಿರ್ವಹಿಸುವುದನ್ನು ತಡೆಯಬೇಕು ಎಂದು ಅಸಲು ದಾವೆಯಲ್ಲಿ ಕೋರಿದ್ದಾರೆ.

 

 

ಅನೇಕ ಪ್ರತಿಸ್ಪರ್ಧಿಗಳು, ಗುಂಪುಗಳು ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ಪಿರ್ಯಾದಿಯ ವರ್ಚಸ್ಸನ್ನು ಹಾಳುಗೆಡವಲು ಯತ್ನಿಸುತ್ತಿವೆ. ಸಾಮಾಜಿಕ ಮಾಧ್ಯಮದ ಪ್ರಾಯೋಜಿತ ಕೃತ್ಯಗಳು ಮಾನಹಾನಿಕರ ಸ್ವರೂಪದಲ್ಲಿವೆ. ವಾಕ್ ಸ್ವಾತಂತ್ರ್ಯವನ್ನು ಉತ್ತೇಜಿಸಲು ಅನುಮತಿ ಇದೆಯಾದರೂ, ಇನ್ನೊಬ್ಬ ವ್ಯಕ್ತಿಯ ಪ್ರತಿಷ್ಠೆ ಮತ್ತು ಘನತೆಗೆ ಮಾನಹಾನಿ ಮತ್ತು ಕಳಂಕವನ್ನು ಉಂಟುಮಾಡಿದಾಗ ಕಾನೂನು ಕೂಡ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಿರ್ಬಂಧವನ್ನು ಇರಿಸುತ್ತದೆ ಎಂದು ಅಸಲು ದಾವೆಯಲ್ಲಿ ಉಲ್ಲೇಖಿಸಲಾಗಿದೆ.ಈ ಕುರಿತು ‘ದಿ ಫೈಲ್‌’ 2022ರ ಜೂನ್‌ 1ರಂದು ವರದಿ ಪ್ರಕಟಿಸಿತ್ತು.

 

 

ಮುರುಘಾ ಶರಣರಿಗೆ ಭೀತಿ!; ನಿರ್ದಿಷ್ಟ ಪ್ರಕರಣ ಉಲ್ಲೇಖಿಸದೇ ತಡೆಯಾಜ್ಞೆ ಕೋರಿ ಅಸಲುದಾವೆ

ಸುದ್ದಿ ವಾಹಿನಿಗಳು ವಿವಿಧ ರೀತಿಯ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತವೆ. ಆದ್ದರಿಂದ, ಪ್ರತಿವಾದಿಗಳ ಗುರಿಯು ಸತ್ಯಗಳ ಗುಂಪನ್ನು ಸಂವೇದನಾಶೀಲಗೊಳಿಸುವುದು ಮತ್ತು ಅವುಗಳನ್ನು ಹಗರಣವನ್ನಾಗಿ ಪರಿವರ್ತಿಸುವುದು, ಸಾರ್ವಜನಿಕ ಜೀವನದಲ್ಲಿ ಮತ್ತು ಸಾರ್ವಜನಿಕರಲ್ಲಿ ಫಿರ್ಯಾದಿಗಳ ಖ್ಯಾತಿಗೆ ಧಕ್ಕೆ ತರಲಿದೆ ಎಂದು ಹೇಳಿರುವುದು ಅಸಲು ದಾವೆಯಿಂದ ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts