Friday | June 12, 2026 |

ಬಿಡಿಎ ಇಂಜಿನಿಯರ್ ಮೆಂಬರ್ ಹುದ್ದೆಗೆ ಪ್ರವೀಣ್‌ ಲಿಂಗಯ್ಯ ನೇಮಕದಲ್ಲಿ ಡಿಸಿಎಂ ಮೇಲುಗೈ, ಜಾರಕಿಹೊಳಿ ಮೌನ; ಕೆಟ್ಟ ಪೂರ್ವ ನಿದರ್ಶನಕ್ಕೆ ನಾಂದಿ ಹಾಡಿದ ಸಿಎಂ

ಬೆಂಗಳೂರು;  ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿರುವ ಇಂಜಿನಿಯರ್ ಮೆಂಬರ್ ಹುದ್ದೆಗೆ ಪ್ರವೀಣ್‌ ಲಿಂಗಯ್ಯ ಅವರನ್ನು  ವರ್ಗಾವಣೆ ಮಾಡಲು ನಿಯಮದಲ್ಲ ಅವಕಾಶವಿಲ್ಲದೇ ಇದ್ದರೂ ಸಹ ವರ್ಗಾವಣೆ ಮಾಡಿಸುವಲ್ಲಿ  ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಕಡೆಗೂ  ಮೇಲುಗೈ ಸಾಧಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸಹ ಯಾವುದೇ ತಕರಾರುಗಳನ್ನು ವ್ಯಕ್ತಪಡಿಸದೇ ವರ್ಗಾವಣೆ  ಮಾಡಲು ಸಮ್ಮತಿಸಿದ್ದಾರೆ.

ಬಿಡಿಎನ ಇಂಜಿನಿಯರ್‍‌ ಮೆಂಬರ್ ಹುದ್ದೆಯು  ಲೋಕೋಪಯೋಗಿ ಇಲಾಖೆಗೆ ಮೀಸಲಾಗಿತ್ತು. ಆದರೂ  ಈ  ಹುದ್ದೆಯನ್ನೇ ಬೇರೆಯವರು ಅತಿಕ್ರಮಿಸಿದ್ದರೂ ಸಹ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಅವರು ಈ ಬಗ್ಗೆ ಮೌನ ವಹಿಸಿದ್ದಾರೆ. ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಇಂಜಿನಿಯರ್‍‌ ಮೆಂಬರ್ ಹುದ್ದೆ ಮೇಲೆ ಕಣ್ಣಿಟ್ಟಿದ್ದ ಪಿಡಬ್ಲ್ಯೂಡಿ ಅಧಿಕಾರಿಗಳ ವಲಯದಲ್ಲಿ  ಅಸಮಾಧಾನ ವ್ಯಕ್ತವಾಗಿದೆ.

ಅಭಿವೃದ್ಧಿ ಪ್ರಾಧಿಕಾರದ ಬಡಾವಣೆ ನಿರ್ಮಾಣಕ್ಕೆ ಅತ್ಯಂತ ಮುಖ್ಯವಾದ ಸರ್ವೇಯಿಂಗ್ ವಿಭಾಗದ ಶಿಕ್ಷಣ ಬಹುಮುಖ್ಯ. ಆದರೆ ಈ ಶಿಕ್ಷಣವನ್ನೇ ಪಡೆದಿರದ  ಪರಿಸರ  ಇಂಜಿನಿಯರಿಂಗ್ ಶಿಕ್ಷಣ ಪಡೆದಿದ್ದಾರೆ ಎನ್ನಲಾಗಿರುವ  ಪ್ರವೀಣ್ ಲಿಂಗಯ್ಯರನ್ನು  ಬಿಡಿಎಗೆ ವರ್ಗಾವಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಅನುಮೋದಿಸಿದ್ದಾರೆ. ಈ  ಮೂಲಕ ನಿಯಮ ಉಲ್ಲಂಘನೆ ಮಾಡಿರುವುದಲ್ಲದೇ  ಕೆಟ್ಟ ಪೂರ್ವ ನಿದರ್ಶನಕ್ಕೆ  ನಾಂದಿ ಹಾಡಿದ್ದಾರೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಇಂಜಿನಿಯರ್ ಮೆಂಬರ್ ಹುದ್ದೆಗೆ ಪ್ರವೀಣ್ ಲಿಂಗಯ್ಯ ಅವರನ್ನೇ ವರ್ಗಾವಣೆ ಮಾಡಬೇಕು ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‍‌  ನಾಲ್ಕು ದಿನದ ಹಿಂದೆಯಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಟಿಪ್ಪಣಿ ಹಾಕಿದ್ದರು. ಈ ಟಿಪ್ಪಣಿ ಕೈ ಸೇರಿದ ನಾಲ್ಕೇ ನಾಲ್ಕು ದಿನದೊಳಗೆ  ಚಿರತೆ ವೇಗದಲ್ಲಿ  ಪ್ರವೀಣ್ ಲಿಂಗಯ್ಯ ಅವರನ್ನು ಬಿಡಿಎ ಇಂಜಿನಿಯರ್ ಮೆಂಬರ್ ಹುದ್ದೆಗೆ ವರ್ಗಾವಣೆ ಮಾಡಿರುವ  ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಆದೇಶವನ್ನೂ ಹೊರಡಿಸಿದೆ.

 

 

ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ  ಶಿಫಾರಸ್ಸನ್ನು ಅಂಗೀಕರಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅವರು ಪ್ರವೀಣ್‌ ಲಿಂಗಯ್ಯ ಅವರನ್ನು ಈ ಹುದ್ದೆಗೆ ವರ್ಗಾವಣೆ ಮಾಡಲು ನಿಯಮದಲ್ಲಿ ಅವಕಾಶವಿದೆಯೇ ಇಲ್ಲವೇ ಎಂಬ ಬಗ್ಗೆ  ಪರಿಶೀಲನೆ ನಡೆಸದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಈ ಹುದ್ದೆಯ ಮೇಲೆ ಕಣ್ಣಿಟ್ಟಿದ್ದ ಮತ್ತು   ನಿಯಮಾನುಸಾರ ಅರ್ಹರಾಗಿದ್ದ ಲೋಕೋಪಯೋಗಿ ಇಲಾಖೆಯ ಹಲವು ಮುಖ್ಯ ಇಂಜಿನಿಯರ್‍‌ಗಳಲ್ಲಿ  ಸಹಜವಾಗಿಯೇ  ಅಸಮಾಧಾನವಿದೆ.  ಲೋಕೋಪಯೋಗಿ ಇಲಾಖೆಗೆ ಮೀಸಲಾಗಿದ್ದ ಹುದ್ದೆಯನ್ನೇ ಬೇರೆಯವರು ಬಂದು ನಿಯಮ ಬಾಹಿರವಾಗಿ ಅತಿಕ್ರಮಿಸಿಕೊಳ್ಳುತ್ತಿದ್ದರೂ ಇಲಾಖಾ ಸಚಿವರು ಮೌನವಾಗಿ ಸಮ್ಮತಿ ನೀಡುತ್ತಿರುವುದು ಲೋಕೋಪಯೋಗಿ ಸಚಿವರಿಗೆ ಇಲಾಖೆಯ ಇಂಜಿನಿಯರ್‍‌ಗಳ ಹಿತಾಸಕ್ತಿಯೂ ಅವರಿಗೆ ಮುಖ್ಯ ವಿಷಯವಾಗಿಲ್ಲ ಎನ್ನುತ್ತಾರೆ  ಹುದ್ದೆಯ ಆಕಾಂಕ್ಷಿ ಇಂಜಿನಿಯರ್‍‌ ಒಬ್ಬರು.
ಈ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇಂತಹ ನಿಯಮಬಾಹಿರ ಕ್ರಮಗಳನ್ನೇ ಹೆಚ್ಚುಹೆಚ್ಚಾಗಿ ಅನುಷ್ಠಾನಗೊಳಿಸುತ್ತಿದೆ.  ನಿಯಮ ಮೀರುವ ದಾರ್ಷ್ಟ್ಯ ಪದೇಪದೇ  ತೋರುತ್ತಿದೆ. ಸರ್ಕಾರದ ಈ ನಡೆಯು  ಹಲವಾರು ಸಂಶಯಗಳಿಗೆ ಕಾರಣವಾಗಿದೆ ಎನ್ನುತ್ತಾರೆ ಮತ್ತೊಬ್ಬ ಮುಖ್ಯ ಇಂಜಿನಿಯರ್‍‌.

 

ಕರ್ನಾಟಕ ನಗರ ನೀರು ಸರಬರಾಜು,  ಒಳಚರಂಡಿ ಮಂಡಳಿಯ ಮುಖ್ಯ ಅಭಿಯಂತರ ಹುದ್ದೆಯು ಲೋಕೋಪಯೋಗಿ ಇಲಾಖೆಯ ವೃಂದಕ್ಕೆ ಎನ್‌ ಕೇಡರ್ ಆಗಿದ್ದರೂ ಬಿಬಿಎಂಪಿ ವೃಂದದ ಅಧಿಕಾರಿಯಾಗಿರುವ ಕಾರಣಕ್ಕೆ ನಿಯಮಬಾಹಿರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬಂದಿತ್ತು.

ಈ ಎಲ್ಲಾ  ಆರೋಪಗಳನ್ನು ಬದಿಗೊತ್ತಿ ಪ್ರವೀಣ್‌ ಲಿಂಗಯ್ಯ ಅವರನ್ನು ಬಿಡಿಎನ ಇಂಜಿನಿಯರ್‍‌ ಮೆಂಬರ್  ಹುದ್ದೆಗೆ ವರ್ಗಾವಣೆ ಮಾಡಲು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಕೋರಿದ್ದರು.

ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ವೃಂದ ಮತ್ತು ನೇಮಕಾತಿ ನಿಯಮಗಳ ಪ್ರಕಾರ ಬಿಡಿಎ ಸದಸ್ಯ ಇಂಜಿನಿಯರ್‍‌  ಹುದ್ದೆಯು ಲೋಕೋಪಯೋಗಿ ಇಲಾಖೆಯ ಮುಖ್ಯ ಇಂಜಿನಿಯರ್ ಹುದ್ದೆಯ ವೃಂದದ ಹುದ್ದೆಗೆ ಮೀಸಲಾಗಿದೆ. ಅಲ್ಲದೇ ಜಿಬಿಎ ಅಥವಾ ಈ ಹಿಂದಿನ ಬಿಬಿಎಂಪಿ ವೃಂದ ಮತ್ತು ನೇಮಕಾತಿಗಳ ಅನ್ವಯ ಬಿಬಿಎಂಪಿ ವೃಂದಕ್ಕೆ ಸೇರಿರುವ ಯಾವುದೇ ಅಧಿಕಾರಿಯು ಎರವಲು ಸೇವೆ ಮೇಲೆ ಅನ್ಯ ಇಲಾಖೆ ಅಥವಾ ಪ್ರಾಧಿಕಾರ, ನಿಗಮ, ಮಂಡಳಿಗಳಲ್ಲಿ  ನಿಯೋಜನೆಗೆ ಅವಕಾಶವಿಲ್ಲ. ಹಾಗೆಯೇ ಬಿಬಿಎಂಪಿ ವೃಂದಕ್ಕೆ ಸೇರಿರುವ ಅಧಿಕಾರಿಗಳು ಕರ್ನಾಟಕ ನಾಗರಿಕ ಸೇವಾ ನಿಯಮಗಳಿಗೆ ಒಳಪಡುವುದಿಲ್ಲ.

ಹೀಗಿದ್ದರೂ ಬಿಬಿಎಂಪಿ ವೃಂದಕ್ಕೆ ಸೇರಿರುವ ಮುಖ್ಯ ಇಂಜಿನಿಯರ್‍‌ ಪ್ರವೀಣ್‌ ಲಿಂಗಯ್ಯ ಅವರನ್ನು ಬಿಡಿಎನ ಸದಸ್ಯ ಇಂಜಿನಿಯರ್ ಹುದ್ದೆಗೆ ವರ್ಗಾವಣೆ ಮಾಡಿರುವುದು ನಿಯಮ ಉಲ್ಲಂಘನೆ ಮಾಡಿದಂತಾಗಿದೆ.

ಡಿ ಕೆ ಶಿವಕುಮಾರ್ ಅವರು ಪ್ರವೀಣ್ ಲಿಂಗಯ್ಯ ಅವರನ್ನು ಸದಸ್ಯ ಇಂಜಿನಿಯರ್ ಹುದ್ದೆಗೆ ವರ್ಗಾವಣೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಟಿಪ್ಪಣಿಯಲ್ಲಿ ಕೋರಿದ್ದಾರೆ. ಇದಕ್ಕೆ ನಗರಾಭಿವೃದ್ಧಿ ಇಲಾಖೆಯ ಅಧಿಕಾರಿ ವರ್ಗದಲ್ಲೇ ಆಕ್ಷೇಪಗಳು ವ್ಯಕ್ತವಾಗಿದ್ದವು.

 

 

ಪ್ರವೀಣ್‌ ಲಿಂಗಯ್ಯ ಅವರು ಮೂಲತಃ ಗ್ರೇಟರ್ ಬೆಂಗಳೂರು ಪ್ರಾಧಿಕಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇವರು  ಪ್ರಸ್ತುತ   ಎರವಲು ಸೇವೆ ಮೇಲೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.   ಇದೀಗ ಅವರನ್ನು ಬಿಡಿಎನಲ್ಲಿ ಖಾಲಿ ಆಗುತ್ತಿರುವ ಸದಸ್ಯ ಇಂಜಿನಿಯರ್ ಹುದ್ದೆಗೆ ವರ್ಗಾವಣೆ ಮಾಡಲು ಡಿ ಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಮೇಲೆ ಒತ್ತಡ ಹೇರಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು.

ಬಿಬಿಎಂಪಿ ವೃಂದಕ್ಕೆ ಸೇರಿರುವ ಮುಖ್ಯ ಇಂಜಿನಿಯರ್ ಪ್ರವೀಣ್ ಲಿಂಗಯ್ಯ ಅವರು ನಿಯಮ ಮೀರಿ ಮುಖ್ಯ ಅಭಿಯಂತರರ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಆರೋಪಗಳ ನಡುವೆಯೇ ಪ್ರವೀಣ್ ಲಿಂಗಯ್ಯ ಅವರನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಖಾಲಿಯಾಗುತ್ತಿರುವ ಮುಖ್ಯ ಇಂಜಿನಿಯರ್/ಪ್ರಾಧಿಕಾರದ ಸದಸ್ಯ ಇಂಜಿನಿಯರ್ ಹುದ್ದೆಗೆ ವರ್ಗಾವಣೆ ಮಾಡಬೇಕು ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದಿರುವ ಪತ್ರದ ಬಗ್ಗೆ ನಗರಾಭಿವೃದ್ಧಿ ಇಲಾಖೆಯ ಅಧಿಕಾರಿವರ್ಗದಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು.

ಜಲಮಂಡಳಿ ಮತ್ತು ಕೆಯುಡಿಎಫ್‌ಸಿ ಮುಖ್ಯ ಅಭಿಯಂತರರ ಹುದ್ದೆ ಪಿಡಬ್ಲ್ಯೂಡಿ ಇಲಾಖೆಯ ಇಂಜಿನಿಯರ್‍‌ಗಳಿಗೆ ಎನ್‌ ಕೇಡರ್ ಆಗಿದೆ. ಅಂದರೆ ಎರವಲು ಸೇವೆಯ ಮೇಲೆ ಕೇವಲ ಲೋಕೋಪಯೋಗಿ ಇಲಾಖೆಯ ಮುಖ್ಯ ಇಂಜಿನಿಯರ್ ಮಾತ್ರ ಬಿಡಿಎನ ಮೆಂಬರ್ ಸೆಕ್ರೆಟರಿ ಹುದ್ದೆಗೆ ವರ್ಗಾವಣೆಗೊಳ್ಳಬಹುದು. ಆದರೆ ಬಿಬಿಎಂಪಿ ಕೇಡರ್‍‌ನಿಂದ ಬಿಡಿಎ ಇಂಜಿನಿಯರ್ ಮೆಂಬರ್  ಹುದ್ದೆಗೆ ವರ್ಗಾವಣೆಗೊಳ್ಳಲು ನಿಯಮದಲ್ಲಿ ಅವಕಾಶವಿಲ್ಲ.

ಅಲ್ಲದೇ ಬಿಡಿಎನಲ್ಲಿಯೂ ಇದೇ ಸಮಸ್ಯೆ ಇದೆ. ಸದಸ್ಯ ಅಭಿಯಂತರ ಹುದ್ದೆ ಲೋಕೋಪಯೋಗಿ ಇಲಾಖೆಗೆ ಎನ್‌ ಕೇಡರ್ ಆಗಿದೆ. ಎನ್‌ ಕೇಡರ್ ಅಂದರೇ ಯಾವ ಹುದ್ದೆಯನ್ನು ಇತರ ಇಲಾಖೆಯ ಯಾವ ಅಧಿಕಾರಿ ಅಲಂಕರಿಸಬಹುದು ಎಂದು ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಸ್ಪಷ್ಟವಾಗಿ ಇದೆ. ಆದರೂ ಈ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿ ಪ್ರವೀಣ್‌ ಲಿಂಗಯ್ಯ ಅವರನ್ನು ಬಿಡಿಎ ಇಂಜಿನಿಯರ್ ಮೆಂಬರ್ ಹುದ್ದೆಗೆ ವರ್ಗಾವಣೆ ಮಾಡಲು ಕೋರಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಂತಾಗಿದೆ.

ಇವರಲ್ಲದೇ ಜಿಬಿಎಯ ಇನ್ನೋರ್ವ ಮುಖ್ಯ ಅಭಿಯಂತರ ನಂದೀಶ್ ಎಂಬುವರು ಸಹ ಕೆ.ಯು.ಐ.ಡಿ.ಎಫ್.ಸಿ ಯುಲ್ಲಿ ಮುಖ್ಯ ಅಭಿಯಂತರರಾಗಿದ್ದಾರೆ. ಅದರೆ ಇದು ಕೂಡ ನಿಯಮಬಾಹಿರ ಎಂಬ ಆರೋಪ ಕೇಳಿ ಬಂದಿದೆ. ಇವರು ಮೂಲತಃ ಪರಿಸರ ಅಭಿಯಂತರರಾಗಿದ್ದರೂ ಸಿವಿಲ್ ವಿಭಾಗದ ಮುಖ್ಯ ಅಭಿಯಂತರರ ಹುದ್ದೆಗೆ ನೇಮಕ ಮಾಡಿರುವುದು ಚರ್ಚೆಗೆ ಗ್ರಾಸವಾಗಿತ್ತು.

ಘನತ್ಯಾಜ್ಯ ನಿರ್ವಹಣೆ-4 ನೇ ವಿಭಾಗದಲ್ಲಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ  ಪ್ರವೀಣ್ ಲಿಂಗಯ್ಯ ಅವರನ್ನು ಬಿಬಿಎಂಪಿಯ ಟಿಇಸಿ ವಿಭಾಗದ ಕೆಲಸ ಕಾರ್ಯಗಳ ಹಿತದೃಷ್ಟಿಯಿಂದ ಹೆಚ್ಚುವರಿ ಪ್ರಭಾರದ ಮೇಲೆ  2021ರ ಸೆ.27ರಂದೇ  ವರ್ಗಾಯಿಸಿತ್ತು.

 

 

ಐಐಟಿಯಲ್ಲಿ ಓದಿರುವ ಮತ್ತು ಎಂ.ಟೆಕ್ ಮಾಡಿರುವ ಮುಖ್ಯ ಇಂಜಿನಿಯರುಗಳು ಜಿಬಿಎ ವ್ಯಾಪ್ತಿಯಲ್ಲಿ  ಕಾರ್ಯನಿರ್ವಹಿಸುತ್ತಿದ್ದಾಗಲೂ ಈ ಇಂಜಿನಿಯರ್‍‌ಗಳನ್ನು  ನಗರಪಾಲಿಕೆಗಗಳಿಗೆ ಸೀಮಿತಗೊಳಿಸಿದೆ. ಅವರನ್ನು ಮುಖ್ಯವಲ್ಲದ ಕೆಲಸಗಳಿಗೆ ಅಂದರೆ  ಕಸ ಸಂಗ್ರಹಣೆಯಂತಹ ಕೆಲಸಗಳಿಗೆ ತೊಡಗಿಸಲಾಗಿದೆ. ಅಂದರೆ ಅವರ ಸೇವೆಯನ್ನು ಸಮರ್ಪಕ ಮತ್ತು ಪರಿಣಾಮಕಾರಿಯಾಗಿ ಬಳಸಿಕೊಂಡಿಲ್ಲ ಎಂಬ ಮಾತುಗಳು ಜಿಬಿಎ ವ್ಯಾಪ್ತಿಯಲ್ಲಿ ಕೇಳಿ ಬಂದಿದ್ದವು.

ಆದರೆ  ಓರ್ವ ಮೆಕ್ಯಾನಿಕಲ್ ಇಂಜಿನಿಯರ್‍‌ ಆಗಿರುವ ರಾಜೇಶ್‌ ಎಂಬುವರಿಗೆ ಘನ ತ್ಯಾಜ್ಯ ನಿರ್ವಹಣೆ ಮತ್ತು ಬೃಹತ್ ನೀರುಗಾಲುವೆ ಮುಖ್ಯ ಇಂಜಿನಿಯರ್ ಹುದ್ದೆ ಕರುಣಿಸಿದೆ.  ಇನ್ನೋರ್ವ ಕೆಮಿಕಲ್ ಇಂಜಿನಿಯರ್ ಮಾದೇಶ ಎಂಬುವರಿಗೆ ಮುಖ್ಯ ರಸ್ತೆ ಅಭಿವೃದ್ಧಿ ಮುಖ್ಯ ಇಂಜಿನಿಯರ್ ಹುದ್ದೆ ನೀಡಿದೆ. ಮತ್ತೊಬ್ಬ ಮೆಕ್ಯಾನಿಕಲ್ ಇಂಜಿನಿಯರ್ ಆದ ವಿಶ್ವನಾಥ್‌ ಎಂಬುವರಿಗೆ ಎಲಿವೇಟೆಡ್ ಕಾರಿಡಾರ್ ಇಂಜಿನಿಯರ್ ಹುದ್ದೆ ನೀಡಲಾಗಿದೆ. ಇದಲ್ಲದೇ  ಮತ್ತೋರ್ವ ಪರಿಸರ ಇಂಜಿನಿಯರ್ ಆದ ಪ್ರೇಮಲತಾ ಎಂಬುವರಿಗೆ ಟಿವಿಸಿಸಿ ಮುಖ್ಯ ಇಂಜಿನಿಯರ್ ಹುದ್ದೆ ನೀಡಿದೆ.

‘ಹೀಗೆ ಸಿವಿಲ್ ಇಂಜಿನಿಯರಿಂಗ್ ಪದವಿಯನ್ನೇ ಹೊಂದಿರದ ಇಂಜಿನಿಯರ್‍‌ಗಳನ್ನು ಸಿವಿಲ್ ಇಂಜಿನಿಯರ್‍‌ಗಳಿಗೆ ಮೀಸಲಾದ ಹುದ್ದೆಗಳಿಗೆ ನಿಯೋಜಿಸಲಾಗುತ್ತಿದೆ. ಇದರಿಂದಾಗಿ ನಗರ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಕಾಮಗಾರಿಗಳು ತರಬೇತಿಯೇ ಇಲ್ಲದ ಇಂಜಿನಿಯರ್‍‌ಗಳಿಂದ ನಿರ್ವಹಿಸಲ್ಪಡುತ್ತಿದೆ, ‘ ಎನ್ನುತ್ತಾರೆ ಜಿಬಿಎನ ಹೆಸರು ಹೇಳಲಿಚ್ಛಿಸದ ಮುಖ್ಯ ಇಂಜಿನಿಯರ್‍‌ಯೊಬ್ಬರು.

Hot this week

ತ್ಯಾಜ್ಯ ವಿಲೇವಾರಿ ಟೆಂಡರ್ ಪ್ರಕ್ರಿಯೆಗಳಲ್ಲಿ ಅಕ್ರಮ ಆರೋಪ; ಮಧ್ಯಪ್ರವೇಶಕ್ಕೆ ಲೋಕಭವನ ಕದ ತಟ್ಟಿದ ಬಿಜೆಪಿ, ಸ್ವತಂತ್ರ ತನಿಖೆಗೆ ಮುಂದಾಗುವರೇ?

ಬೆಂಗಳೂರು; ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಸಮಗ್ರ ಘನ ತ್ಯಾಜ್ಯ ನಿರ್ವಹಣಾ...

ಕಸ ವಿಲೇವಾರಿ ಟೆಂಡರ್‍‌ನಲ್ಲಿ ಅಕ್ರಮ; 10,000 ಕೋಟಿ ಕಿಕ್‌ ಬ್ಯಾಕ್‌ ಆರೋಪ, ಹೈಕಮಾಂಡ್ ಕಪ್ಪದ ಟೆಂಡರ್, ರಾಜ್ಯಪಾಲರಿಗೆ ದೂರು, ದಿ ಫೈಲ್ ವರದಿ ಬೆನ್ನಲ್ಲೇ ತುಟಿ ಬಿಚ್ಚಿದ ಆರ್ ಅಶೋಕ್

ಬೆಂಗಳೂರು; ಸಮಗ್ರ ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಬಿಎಸ್‌ಡಬ್ಲ್ಯೂಎಂಎಲ್‌ ಯೋಜಿಸಿದ್ದ ಟೆಂಡರ್ ಪ್ಯಾಕೇಜ್‌ಗಳಲ್ಲಿ...

ಒಂದು ರಾಷ್ಟ್ರ ಒಂದು ಚುನಾವಣೆ; ಸಂಸತ್‌ ಜಂಟಿ ಸಮಿತಿಗೆ 5 ತಿಂಗಳಾದರೂ ಮಾಹಿತಿ ನೀಡದ ರಾಜ್ಯ

ಬೆಂಗಳೂರು; ಒಂದು ರಾಷ್ಟ್ರ ಒಂದು ಚುನಾವಣೆಗೆ ಸಂಬಂಧಿಸಿದಂತೆ ಸಂವಿಧಾನದ 129ನೇ ತಿದ್ದುಪಡಿ...
Please Scan to make Your Contribution

Topics

ಕಸ ವಿಲೇವಾರಿ ಟೆಂಡರ್‍‌ನಲ್ಲಿ ಅಕ್ರಮ; 10,000 ಕೋಟಿ ಕಿಕ್‌ ಬ್ಯಾಕ್‌ ಆರೋಪ, ಹೈಕಮಾಂಡ್ ಕಪ್ಪದ ಟೆಂಡರ್, ರಾಜ್ಯಪಾಲರಿಗೆ ದೂರು, ದಿ ಫೈಲ್ ವರದಿ ಬೆನ್ನಲ್ಲೇ ತುಟಿ ಬಿಚ್ಚಿದ ಆರ್ ಅಶೋಕ್

ಬೆಂಗಳೂರು; ಸಮಗ್ರ ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಬಿಎಸ್‌ಡಬ್ಲ್ಯೂಎಂಎಲ್‌ ಯೋಜಿಸಿದ್ದ ಟೆಂಡರ್ ಪ್ಯಾಕೇಜ್‌ಗಳಲ್ಲಿ...

ಒಂದು ರಾಷ್ಟ್ರ ಒಂದು ಚುನಾವಣೆ; ಸಂಸತ್‌ ಜಂಟಿ ಸಮಿತಿಗೆ 5 ತಿಂಗಳಾದರೂ ಮಾಹಿತಿ ನೀಡದ ರಾಜ್ಯ

ಬೆಂಗಳೂರು; ಒಂದು ರಾಷ್ಟ್ರ ಒಂದು ಚುನಾವಣೆಗೆ ಸಂಬಂಧಿಸಿದಂತೆ ಸಂವಿಧಾನದ 129ನೇ ತಿದ್ದುಪಡಿ...

ಐಪಿಜಿಆರ್‍ಎಸ್, ಸಕಾಲ ಮತ್ತು ಸಿಪಿಗ್ರಾಮ್ಸ್‌, ಸಿಎಂ ಜನಸ್ಪಂದನ, ಸಿ ಎಸ್ ಕಚೇರಿಯಲ್ಲಿ ಇತ್ಯರ್ಥವಾಗದ 37,782 ಅರ್ಜಿಗಳು; ನಿಷ್ಕ್ರೀಯವಾಯಿತೇ ಆಡಳಿತ?

ಬೆಂಗಳೂರು;  ಸಾರ್ವಜನಿಕರು ವಿವಿಧ ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ಐಪಿಜಿಆರ್‍ಎಸ್, ಸಕಾಲ ಮತ್ತು ಸಿಪಿಗ್ರಾಮ್ಸ್‌,...

ಅತಿಥಿ ಶಿಕ್ಷಕರ ನೇಮಕ ಪದ್ಧತಿಗೆ ರಾಜ್ಯ ಶಿಕ್ಷಣ ನೀತಿ ಆಯೋಗ ವಿರೋಧ; ಪದ್ದತಿ ಸಂಪೂರ್ಣವಾಗಿ ತೆಗೆದು ಹಾಕದೇ ವರದಿಯನ್ನೇ ಮೂಲೆಗುಂಪು ಮಾಡಿತೇ ಸರ್ಕಾರ?

ಬೆಂಗಳೂರು; 'ರಾಜ್ಯದಲ್ಲಿ   ಬೇರೂರಿದ ಗುತ್ತಿಗೆ ಶಿಕ್ಷಕ ನೇಮಕ ಪದ್ಧತಿಯಿಂದಾಗಿ  ವೃತ್ತಿಪರತೆಯ ಕೊರತೆ...

ಕಸ ವಿಲೇವಾರಿ ಟೆಂಡರ್ ಪ್ರಕ್ರಿಯೆಗಳಲ್ಲಿ ಬಹುಕೋಟಿ ಮೊತ್ತದ ಹಗರಣ; ಯತ್ನಾಳ್, ಶೋಭಾ ನಂತರ ಧೀರಜ್ ಮುನಿರಾಜು ದೂರು, ತುಟಿಬಿಚ್ಚದ ಪ್ರತಿಪಕ್ಷ ನಾಯಕ ಅಶೋಕ್

ಬೆಂಗಳೂರು; ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬೆಂಗಳೂರಿನ ಸಮಗ್ರ ಘನತ್ಯಾಜ್ಯ ನಿರ್ವಹಣೆಗೆ...

Related Articles

Popular Categories

error: Content is protected !!