ಬೆಂಗಳೂರು; ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧೀನದಲ್ಲಿ ಬೆಂಗಳೂರು ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವೀಕಾರ ಕೇಂದ್ರದ ಹೆಣ್ಣು ಮಕ್ಕಳನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಮತ್ತು ಈ ಸ್ವೀಕಾರ ಕೇಂದ್ರದಿಂದ 1,776 ಮಹಿಳೆ ಮತ್ತು ಹೆಣ್ಣು ಮಕ್ಕಳನ್ನು ನಾಪತ್ತೆ ಮಾಡಿಸಲಾಗಿದೆ ಎಂಬ ಗುರುತರವಾದ ಆರೋಪ ಕೇಳಿ ಬಂದಿದೆ.
ಈ ಪ್ರಕರಣದ ಕುರಿತು ಗಜೇಂದ್ರಕುಮಾರ್ ಗೌಡ ಎಂಬುವರು ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ 2019ರಲ್ಲೇ ದೂರು ದಾಖಲಿಸಿದ್ದರು. ಈ ಅರ್ಜಿ ಸಲ್ಲಿಕೆಯಾಗಿ 7 ವರ್ಷ ಕಳೆದರೂ ಸಹ ಆಯೋಗವು ಈ ಸಂಗತಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಕರ್ನಾಟಕ ರಾಜ್ಯ ಮಹಿಳಾ ಆಯೋಗವು 2019ರಿಂದಲೂ ಇತರೆ ಸಕ್ಷಮ ಪ್ರಾಧಿಕಾರಗಳಿಗೆ ಪತ್ರ ಬರೆಯವುದರಲ್ಲಿಯೇ ಕಾಲಹರಣ ಮಾಡುತ್ತಿದೆ. ಇಲಾಖೆಯು ಇಂತಹ ಪ್ರಕರಣಗಳ ಕುರಿತು ಕ್ರಮವಹಿಸದೇ ಇರುವುದು ಆತಂಕ ಮಾತ್ರವಲ್ಲದೇ ತೀವ್ರ ಕಳವಳಕ್ಕೆ ಕಾರಣವಾಗಿದೆ.
ಅದೇ ರೀತಿ ಈ ಕುರಿತು ಸಲ್ಲಿಕೆಯಾಗಿರುವ ದೂರರ್ಜಿ ಕುರಿತು ಸೂಕ್ತ ಕ್ರಮಕೈಗೊಂಡು 15 ದಿನದೊಳಗೆ ವರದಿ ಸಲ್ಲಿಸಬೇಕು ಎಂದು ಡಿಜಿಪಿ ಮತ್ತು ಮಹಿಳಾ ಮತ್ತು ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ ಆಯೋಗವು 2026ರ ಜುಲೈ 4ರಂದೇ ನಿರ್ದೇಶನ ನೀಡಿತ್ತು. ಆದರೆ ಡಿಜಿಪಿ ಅವರಾಗಲೀ, ಇಲಾಖೆಯ ಸರ್ಕಾರದ ಕಾರ್ಯದರ್ಶಿಯು ಗಡುವು ಮೀರಿದರೂ ಸಹ ಯಾವುದೇ ವರದಿಯನ್ನು ಆಯೋಗಕ್ಕೆ ಸಲ್ಲಿಸಿಲ್ಲ ಎಂದು ತಿಳಿದು ಬಂದಿದೆ. ಈ ಸಂಬಂಧ ದೂರುದಾರರು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧುರಿ ಅವರ ಗಮನಕ್ಕೂ ತಂದಿದ್ದರು ಎಂದು ತಿಳಿದು ಬಂದಿದೆ.
ಇಂತಹ ಪ್ರಕರಣಗಳ ಬಗ್ಗೆ ವಿಶೇಷ ತನಿಖಾ ತಂಡವನ್ನು ರಚಿಸಲು ಆಯೋಗವು ಸರ್ಕಾರಕ್ಕೆ ಶಿಫಾರಸ್ಸು ಮಾಡಿಲ್ಲ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸಹ ಇಂತಹ ಪ್ರಕರಣಗಳ ಬಗ್ಗೆ ದಿವ್ಯ ನಿರ್ಲಕ್ಷ್ಯ ವಹಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಮತ್ತೊಂದು ವಿಶೇಷವೆಂದರೇ 2019ರಲ್ಲಿ ಅಧಿಕಾರದಲ್ಲಿದ್ದ ಸಚಿವರಿಗೆ ಮತ್ತು ಪೊಲೀಸ್ ಆಯುಕ್ತರಿಗೆ ದೂರುದಾರರು ಪತ್ರ ಬರೆದಿದ್ದರು. ಈ ಅರ್ಜಿ ಮೇಲೆ ಅಂದಿನ ಸಚಿವರು ಮತ್ತು ಪೊಲೀಸ್ ಆಯುಕ್ತರು ಯಾವುದೇ ಕ್ರಮವಹಿಸಿಲ್ಲ. ಹೀಗಾಗಿ ಗಜೇಂದ್ರಕುಮಾರ್ ಗೌಡ ಅವರು ಮಹಿಳಾ ಆಯೋಗದ ಮೆಟ್ಟಿಲೇರಿದ್ದರು.
ಈ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೂ 2026ರ ಜೂನ್ 23ರಂದು ದೂರರ್ಜಿ ಸಲ್ಲಿಸಿದ್ದರು.
ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಿದ್ದ ದೂರರ್ಜಿಯಲ್ಲೇನಿದೆ?
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವಾಲಯದ ಕಡತ (ಸಂಖ್ಯೆ; ಮಮಿ 347 ಎಸ್‌ಜೆಪಿ 2018) ರಲ್ಲಿನ ಬೆಂಗಳೂರು ನಗರ ಸ್ವೀಕಾರ ಕೇಂದ್ರವು ಸುಮಾರು 1,776 ಮಹಿಳೆಯರು ಮತ್ತು ಹೆಣ್ಣು ಮಕ್ಕಳನ್ನು ದಾಖಲಿಸಿಕೊಂಡಿದ್ದು ಇಲ್ಲಿಯವರೆಗೂ ಇವರ ಬಗ್ಗೆ ಯಾವುದೇ ದಾಖಲೆಗಳು ಜೀವಂತ ಸುಳಿವು ನೀಡದೇ ಇಲಾಖೆಯು ಈ ಗಂಭೀರ ಪ್ರಕರಣವನ್ನು ಮುಚ್ಚು ಹಾಕುವುದಕ್ಕೆ ಸದಾ ಪ್ರಯತ್ನಿಸುತ್ತಿದೆ. ಆದ್ದರಿಂದ ಈ ಕೂಡಲೇ ತಾವು ಈ ಕೃತ್ಯದಲ್ಲಿ ಭಾಗಿಯಾಗಿರುವ ಎಲ್ಲಾ ಅಧಿಕಾರಿ, ಸಿಬ್ಬಂದಿ ವಿರುದ್ಧ ಕಾನೂನು, ಶಿಸ್ತು ಕ್ರಮ ಜರುಗಿಸಬೇಕು ಎಂದು ದೂರರ್ಜಿಯಲ್ಲಿ ಕೋರಿದ್ದರು.

ಈ ದೂರರ್ಜಿ ಮೇಲೆಯೇ ಮುಖ್ಯ ಕಾರ್ಯದರ್ಶಿಗಳು ವಿವರಗಳೊಂದಿಗೆ ಮಂಡಿಸಿ ಎಂದು ಷರಾ ಬರೆದಿದ್ದರು. ಆದರೂ ಸಹ ಇಲಾಖೆಯ ಸರ್ಕಾರದ ಕಾರ್ಯದರ್ಶಿಯು ಮುಖ್ಯ ಕಾರ್ಯದರ್ಶಿಗಳಿಗೂ ಯಾವುದೇ ವಿವರಗಳನ್ನು ಮಂಡಿಸಿಲ್ಲ ಎಂದು ತಿಳಿದು ಬಂದಿದೆ.
ಇಂತಹ ಪ್ರಕರಣಗಳ ತನಿಖೆ ನಡೆಸಬೇಕು ಎಂದು ಗಜೇಂದ್ರಕುಮಾರ್ ಗೌಡ ಎಂಬುವರು ಮಹಿಳಾ ಆಯೋಗವನ್ನು ಪದೇ ಪದೇ ಎಡತಾಕಿದ್ದರು. 2026ರ ಜೂನ್ 23ರಂದು ಆಯೋಗದ ಕಾರ್ಯದರ್ಶಿಗೆ ದೂರರ್ಜಿ ಸಲ್ಲಿಸಿದ್ದರು.

ಈ ಪ್ರಕರಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ನಿರ್ಲಕ್ಷ್ಯ ವಹಿಸಿರುವುದು ಅನುಮಾನಕ್ಕೆ ದಾರಿಮಾಡಿಕೊಟ್ಟಂತಾಗಿದೆ ಎಂದು ದೂರರ್ಜಿಯಲ್ಲಿ ಆಯೋಗದ ಗಮನ ಸೆಳೆದಿತ್ತು.
ಇದೀಗ ಆಯೋಗವು 2026ರ ಜುಲೈ 4ರಂದು ಪೊಲೀಸ್ ಮಹಾನಿರ್ದೇಶಕರು, ಆರಕ್ಷಕ ಮಹಾನಿರೀಕ್ಷಕರಿಗೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ ಮತ್ತೊಂದು ಪತ್ತವನ್ನು ಬರೆದಿದೆ.
ಈ ಮೂರು ಪತ್ರಗಳು ದಿ ಫೈಲ್‌ಗೆ ಲಭ್ಯವಾಗಿವೆ.
ಡಿಜಿಪಿಗೆ ಬರೆದ ಪತ್ರದಲ್ಲೇನಿದೆ?
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯು ನಡೆಸುತ್ತಿರುವ ಸ್ವೀಕಾರ ಕೇಂದ್ರದಲ್ಲಿ ಮಹಿಳೆಯರ ಮತ್ತು ಹೆಣ್ಣು ಮಕ್ಕಳನ್ನು ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಈ ಕೇಂದ್ರದಲ್ಲಿ 1,776 ಮಹಿಳೆ ಮತ್ತು ಹೆಣ್ಣು ಮಕ್ಕಳ ನಾಪತ್ತೆ ಮಾಡಿಸಿರುತ್ತಾರೆ ಎಂದು ಗಜೇಂದ್ರಕುಮಾರ್ ಗೌಡ ಎಂಬುವರು ಮನವಿಯಲ್ಲಿ ತಿಳಿಸಿದ್ದಾರೆ. ಈ ಅರ್ಜಿಗೆ ಸಂಬಂಧಿಸಿದಂತೆ ಇಲಾಖೆ ಸಚಿವರಿಗೆ ಮತ್ತುಪೊಲೀಸ್ ಆಯುಕ್ತರಿಗೆ 2019ರ ಮಾರ್ಚ್ 30ರಂದು ಪತ್ರ ಬರೆಯಲಾಗಿತ್ತು. ಈ ಅರ್ಜಿಗೆ ಕ್ರಮ ಕೈಗೊಂಡಿಲ್ಲ ಎಂದು ದೂರುದಾರರು ಆಯೋಗಕ್ಕೆ ತಿಳಿಸಿದ್ದಾರೆ. ಈ ಅರ್ಜಿಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಕೈಗೊಂಡ ವರದಿಯನ್ನು 15 ದಿನದೊಳಗೇ ಆಯೋಗಕ್ಕೆ ಕಳಿಸಬೇಕು ಎಂದು ನಿರ್ದೇಶನ ನೀಡಿರುವುದು ಆಯೋಗದ ಪತ್ರದಿಂದ ತಿಳಿದು ಬಂದಿದೆ.

ಇದೇ ಪತ್ರವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸರ್ಕಾರದ ಕಾರ್ಯದರ್ಶಿಯವರಿಗೂ ಕಳಿಸಿದ್ದಾರೆ.

ಹಾಗೆಯೇ ಬೆಂಗಳೂರು ಜಿಲ್ಲಾಧಿಕಾರಿಯವರಿಗೂ ಸಹ ಇದೇ ಪತ್ರವನ್ನು ರವಾನಿಸಿದ್ದಾರೆ. ಸಿಡಬ್ಲ್ಯೂಸಿ ಕಮಿಟಿಯ ಅಧ್ಯಕ್ಷರಾಗಿರುವುದರಿಂದ ಸ್ವೀಕಾರ ಕೇಂದ್ರಕ್ಕೆ ಭೇಟಿ ನೀಡಿ ಮಹಿಳೆ ಮತ್ತು ಹೆಣ್ನು ಮಕ್ಕಳ ನಾಪತ್ತೆ ಬಗ್ಗೆ ವಿಚಾರಣೆ ನಡೆಸಿ ಕೈಗೊಂಡ ಕ್ರಮದ ವರದಿಯನ್ನು 15 ದಿನದೊಳಗೆ ಆಯೋಗಕ್ಕೆ ಕಳಿಸಿಕೊಡಬೇಕು ಎಂದು ಸೂಚಿಸಿತ್ತು.

ಇದಕ್ಕೂ ಮೊದಲು ಅಂದರೇ 2019ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾಗಿದ್ದ ಜಯಮಾಲಾ ಅವರು ಸಹ ಈ ಬಗ್ಗೆ ಟಿಪ್ಪಣಿ ಹೊರಡಿಸಿದ್ದರು.

ಆದರೂ ಇಲಾಖೆಯು ಈ ಬಗ್ಗೆ ಕ್ರಮವನ್ನೇ ವಹಿಸಿರಲಿಲ್ಲ. ಈ ಬಗ್ಗೆ ಗಜೇಂದ್ರಕುಮಾರ್ ಗೌಡ ಅವರು ನಿರಂತರವಾಗಿ ಎಡೆಬಿಡದೇ ಇಲಾಖೆಯನ್ನು ಎಡತಾಕುತ್ತಿದ್ದರೂ ಸಹ ಈ ಬಗ್ಗೆ ತನಿಖೆ ನಡೆಸಲು ಒಂದೇ ಒಂದು ಕ್ರಮ ವಹಿಸಿಲ್ಲ. ತೀರಾ ಇತ್ತೀಚೆಗೆ ಅಂದರೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೇಯ ನಿರ್ದೇಶಕರು, ಇಲಾಖೆಯ ಉಪ ನಿರ್ದೇಶಕರಿಗೆ 2026ರ ಮಾರ್ಚ್ 17ರಂದು ಪತ್ರ ಬರೆದಿದ್ದರು.
‘ಅಧಿಕಾರಿಗಳು ಸಿಬ್ಬಂದಿಗಳು ಸ್ವೀಕಾರ ಕೇಂದ್ರದಲ್ಲಿ 1,776 ಅನಾಥ, ನಿರ್ಗತಿಕ ಹೆಣ್ಣು ಮಕ್ಕಳನ್ನು ಅನೈತಿಕ ಚಟುವಟಿಕೆ, ವೇಶ್ಯಾವಾಟಿಕೆಗೆ ಹಾಗೂ ಅಕ್ರಮವಾಗಿ ದುಡಿಸಿಕೊಳ್ಳುತ್ತಿದ್ದು ಇವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಗಜೇಂದ್ರ ಕುಮಾರ ಗೌಡ ಅರ್ಜಿ ಸಲ್ಲಿಸಿದ್ದಾರೆ. ಈ ದೂರಿನ ಕುರಿತು ಸ್ವೀಕಾರ ಕೇಂದ್ರದ ಅಧೀಕ್ಷಕರಿಂದ ಸ್ವೀಕಾರ ಕೇಂದ್ರದಲ್ಲಿ ಲಭ್ಯವಿರುವ ದಾಖಲೆಗಳನ್ನು ಪರಿಶೀಲಿಸಿ ಅಧೀಕ್ಷಕರಿಂದ ವರದಿ ಪಡೆದು ಶೀಘ್ರವಾಗಿ ಕಚೇರಿಗೆ ಸಲ್ಲಿಸಬೇಕು,’ ಎಂದು ಸೂಚಿಸಿದ್ದರು. ಆದರೆ ಈ ಸೂಚನೆಯನ್ನು ಉಪನಿರ್ದೇಶಕರು ಪಾಲಿಸಿಲ್ಲ ಎಂದು ಗೊತ್ತಾಗಿದೆ.

ರಾಜ್ಯ ಸರ್ಕಾರದ ಅಂಕಿ-ಅಂಶಗಳ ಪ್ರಕಾರ 2020ರಿಂದ 2025ರ ವರೆಗಿನ ಅವಧಿಯಲ್ಲಿ ಹಸುಗೂಸಿನಿಂದ ಹಿಡಿದು 18 ವರ್ಷದೊಳಗಿನ ಒಟ್ಟು 16,106 ಮಕ್ಕಳು (ಗಂಡು ಮತ್ತು ಹೆಣ್ಣು ಸೇರಿ )ನಾಪತ್ತೆಯಾಗಿದ್ದಾರೆ. ಇವರಲ್ಲಿ 14,089 ಮಂದಿಯನ್ನು ಪತ್ತೆಹಚ್ಚಲಾಗಿತ್ತು. 2,017 ಮಕ್ಕಳ ಸುಳಿವು ಸಿಕ್ಕಿಲ್ಲ. ಇದೇ ಅವಧಿಯಲ್ಲಿ 71,699 ಮಹಿಳೆಯರು ನಾಪತ್ತೆಯಾಗಿದ್ದರು. 68,718 ಮಂದಿಯನ್ನು ಪೊಲೀಸರು ಪತ್ತೆಹಚ್ಚಿದ್ದರು.
ಅದೇ ರೀತಿ 38,073 ಪುರುಷರು ಕಾಣೆಯಾಗಿದ್ದು, ಇದರಲ್ಲಿ 31,603 ಮಂದಿ ಪತ್ತೆಯಾಗಿದ್ದರು. ಉಳಿದವರು ಏನಾದರೆಂಬ ಮಾಹಿತಿ ಈವರೆಗೂ ದೊರೆತಿಲ್ಲ. ಈ ರೀತಿ ನಾಪತ್ತೆ ಆಗುತ್ತಿರುವವರಲ್ಲಿ 13ರಿಂದ 18 ವರ್ಷದೊಳಗಿನವರೇ ಹೆಚ್ಚಾಗಿರುವುದು ಕಳವಳ ಮೂಡಿಸಿತ್ತು. ಈ ವಯೋಮಾನದ 11,202 ಮಂದಿ ನಾಪತ್ತೆಯಾಗಿದ್ದು, 10,431 ಮಂದಿಯನ್ನು ಸುರಕ್ಷಿತವಾಗಿ ಪತ್ತೆಹಚ್ಚಲಾಗಿತ್ತು. ಆದರೆ, 910 ಹೆಣ್ಣು ಮಕ್ಕಳು ಇಂದಿಗೂ ಪತ್ತೆಯಾಗದೆ ಉಳಿದಿದ್ದಾರೆ. ವಯಸ್ಕರ ದತ್ತಾಂಶಗಳನ್ನು ಪರಿಶೀಲಿಸಿದರೆ ಕಾಣೆಯಾದ ಮಹಿಳೆಯರ ಸಂಖ್ಯೆ ಹೆಚ್ಚಿತ್ತು. ಆದರೆ ಸರಾಸರಿಯಾಗಿ ಪತ್ತೆಯಾಗದೆ ಉಳಿದ ಪುರುಷರ ಸಂಖ್ಯೆ ಹೆಚ್ಚಿನ ಸಂಖ್ಯೆಯಲ್ಲಿತ್ತು.
ಈ ಅಂಕಿ-ಅಂಶಗಳ ಬಗ್ಗೆ ನ್ಯಾಯಾಲಯವೂ ಗಂಭೀರ ಕಳವಳ ವ್ಯಕ್ತಪಡಿಸಿತ್ತು. ನಾಪತ್ತೆಯಾಗುವ ವ್ಯಕ್ತಿಗಳ ಪತ್ತೆಗಾಗಿ ಅನುಸರಿಸಬೇಕಾದ ಕಾರ್ಯವಿಧಾನದ ಬಗ್ಗೆ ಪೊಲೀಸ್ ಇಲಾಖೆಯು ಜ. 29ರಂದು ಹೊರಡಿಸಿರುವ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಮತ್ತು ಅದರ ಪ್ರಗತಿಯ ಬಗ್ಗೆ ನಿರಂತರ ನಿಗಾ ವಹಿಸಬೇಕು ಎಂದು ನಿರ್ದೇಶನ ನೀಡಿತ್ತು. ಅಪ್ರಾಪ್ತರು ಮತ್ತು ಹೆಣ್ಣು ಮಕ್ಕಳು ನಾಪತ್ತೆಯಾಗುತ್ತಿರುವುದರ ಹಿಂದೆ ಮಾನವ ಕಳ್ಳಸಾಗಾಣಿಕೆಯ ಜಾಲವೂ ಇರಬಹುದು ಎಂಬ ಬಗ್ಗೆ ಆತಂಕ ವ್ಯಕ್ತಪಡಿಸಿರುವ ನ್ಯಾಯಾಲಯವು ಪೊಲೀಸರು ಈ ಬಗ್ಗೆಯೂ ತನಿಖೆಯಲ್ಲಿ ಗಮನಹರಿಸಬೇಕು ಎಂದು ಹೇಳಿತ್ತು.
5 ವರ್ಷದಲ್ಲಿ 763 ಮಾನವ ಕಳ್ಳಸಾಗಾಣಿಕೆ ಪ್ರಕರಣ ದಾಖಲು;ಬಾಲಮಂದಿರಗಳಿಂದ 485 ಮಕ್ಕಳು ನಾಪತ್ತೆ
ಮಕ್ಕಳ ನಾಪತ್ತೆ ಕುರಿತು ಆರಗ ಜ್ಞಾನೇಂದ್ರ ಅವರು ವಿಧಾನಸಭೆಗೆ ಅಂಕಿ ಅಂಶ ಒದಗಿಸಿದ್ದರು. ಈ ಕುರಿತು ದಿ ಫೈಲ್ ವರದಿ ಪ್ರಕಟಿಸಿತ್ತು.
ಮೂರು ವರ್ಷಗಳಲ್ಲಿ ಮಕ್ಕಳೂ ಸೇರಿ 6,804 ಗಂಡಸರು ಮತ್ತು ಮಹಿಳೆಯರು ನಾಪತ್ತೆ; ಪತ್ತೆ ಹಚ್ಚುವಲ್ಲಿ ವಿಫಲ
ವಿಧಾನಸಭೆ ಮತ್ತು ವಿಧಾನ ಪರಿಷತ್ ನಲ್ಲಿಯೂ ಸಹ ಈ ಬಗ್ಗೆ ಹೆಚ್ಚು ಚರ್ಚೆಯೇ ನಡೆದಿರಲಿಲ್ಲ.




