3 ವರ್ಷದಲ್ಲಿ 15,769 ಲೈಂಗಿಕ ಹಿಂಸೆ, 8,333 ಪೋಕ್ಸೋ, 1,606 ಅತ್ಯಾಚಾರ, 880 ಮಹಿಳೆಯರ ಅಕ್ರಮ ಸಾಗಾಣಿಕೆ

photo credit;halappa achar official twitter account

ಬೆಂಗಳೂರು; ರಾಜ್ಯದ ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಲೈಂಗಿಕ ಕಿರುಕುಳ, ಲೈಂಗಿಕ ಹಿಂಸೆ, ಮಹಿಳೆಯರ ಮೇಲಿನ ಅತ್ಯಾಚಾರ, ಮಹಿಳೆಯರ ಅಕ್ರಮ ಸಾಗಾಣಿಕೆಯಂತಹ ಪ್ರಕರಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದ್ದು ಕಳೆದ ಮೂರು ವರ್ಷಗಳಲ್ಲಿ ರಾಜ್ಯದ ವಿವಿಧೆಡೆ ಒಟ್ಟು 8,333 ಪ್ರಕರಣ, 1,606 ಅತ್ಯಾಚಾರ, 880 ಮಹಿಳೆಯರ ಅಕ್ರಮ ಸಾಗಾಣಿಕೆ, 2,830 ಕೊಲೆ ಪ್ರಕರಣಗಳು ವರದಿಯಾಗಿವೆ.

 

ರಾಜ್ಯದಲ್ಲಿ ಚೈಲ್ಡ್‌ ಲೈನ್‌ 1098ನ್ನು ಸದ್ಯದಲ್ಲೇ ಮುಚ್ಚುವ ಹುನ್ನಾರ ನಡೆದಿರುವ ಹೊತ್ತಿನಲ್ಲಿಯೇ ಬಹಿರಂಗಗೊಂಡಿರುವ ಪೋಕ್ಸೋ ಪ್ರಕರಣಗಳ ಅಂಕಿ ಸಂಖ್ಯೆಗಳು ಮುನ್ನೆಲೆಗೆ ಬಂದಿವೆ.

 

ವಿಧಾನಪರಿಷತ್‌ ಸದಸ್ಯ ಗೋವಿಂದರಾಜು ಅವರು ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ 2023ರ ಫೆಬ್ರುವರಿ 14ರಂದು ಉತ್ತರಿಸಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವ ಹಾಲಪ್ಪ ಆಚಾರ್‌ ಅವರು ಪೋಕ್ಸೋ ಸೇರಿದಂತೆ ಇನ್ನಿತರೆ ಪ್ರಕರಣಗಳ ಅಂಕಿ ಸಂಖ್ಯೆಗಳನ್ನು ವಿಧಾನಪರಿಷತ್‌ಗೆ ಒದಗಿಸಿದ್ದಾರೆ.

 

2020ರಲ್ಲಿ 2,166, 2021ರಲ್ಲಿ 2,863, 2022ರಲ್ಲಿ 3,097, 2023ರ ಜನವರಿವರೆಗೆ 207 ಪೋಕ್ಸೋ ಅಡಿಯಲ್ಲಿ ಪ್ರಕರಣಗಳು ದಾಖಲಾಗಿವೆ. ಕರ್ನಾಟಕ ರಾಜ್ಯ ಮಹಿಳಾ ಆಯೋಗದಲ್ಲಿ ಕಳೆದ ಮೂರು ವರ್ಷದಲ್ಲಿ 1,606 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. 2020ರಲ್ಲಿ 479, 2021ರಲ್ಲಿ 559, 2022ರಲ್ಲಿ 539, 2023ರಲ್ಲಿ 29 ಅತ್ಯಾಚಾರ ಪ್ರಕರಣಗಳ ಕುರಿತಾಗಿ ದೂರು ಸಲ್ಲಿಕೆಯಾಗಿವೆ. 12 ಮಂದಿ ಮೇಲೆ ಆಸಿಡ್‌ ದಾಳಿ ಆಗಿರುವುದು ಸಚಿವ ಹಾಲಪ್ಪ ಆಚಾರ್‌ ಅವರು ನೀಡಿರುವ ಉತ್ತರದಿಂದ ತಿಳಿದು ಬಂದಿದೆ.

 

ಮಹಿಳೆಯರ ಮಕ್ಕಳ ಅಕ್ರಮ ಸಾಗಾಣಿಕೆ ಕಳೆದ ಮೂರು ವರ್ಷದಲ್ಲಿ 880 ಮಹಿಳೆಯರನ್ನು ಅಕ್ರಮವಾಗಿ ಸಾಗಿಸಲಾಗಿದೆ. 2020ರಲ್ಲಿ ಒಟ್ಟು 548 ಪ್ರಕರಣಗಳು ವರದಿಯಾಗಿವೆ. ಈ ಪೈಕಿ 348 ಮಹಿಳೆಯರನ್ನು ಅಕ್ರಮವಾಗಿ ಸಾಗಿಸಲಾಗಿದೆ. 2021ರಲ್ಲಿ 216, 2022ರಲ್ಲಿ 298, 2023ರ ಜನವರಿ ಅಂತ್ಯದವರೆಗೆ 18 ಮಹಿಳೆಯರನ್ನು ಅಕ್ರಮವಾಗಿ ಸಾಗಿಸಲಾಗಿದೆ ಎಂದು ಗೊತ್ತಾಗಿದೆ.

 

ವಿಧಾನಪರಿಷತ್‌ನಲ್ಲಿ ಸಚಿವ ಹಾಲಪ್ಪ ಆಚಾರ್‌ ಅವರು ಒದಗಿಸಿರುವ ಅಂಕಿಅಂಶದ ಪ್ರತಿ

ರಾಜ್ಯದಲ್ಲಿ ಚೈಲ್ಡ್‌ ಲೈನ್‌ 1098ನ್ನು ಸದ್ಯದಲ್ಲೇ ಮುಚ್ಚುವ ಹುನ್ನಾರ ನಡೆದಿದೆ. ಇದು ಸರ್ಕಾರದ ಗಮನಕ್ಕೂ ಬಂದಿದೆ. ಉಚಿತ ಮಕ್ಕಳ ಸಹಾಯವಾಣಿ ಸಂಖ್ಯೆ 1098ನ್ನು ರಾಷ್ಟ್ರವ್ಯಾಪ್ತಿ ಜಾರಿಯಲ್ಲಿರುವ ಸಂಖ್ಯೆಯಾಗಿದ್ದು ಬಾಲ್ಯ ವಿವಾಹ, ಲೈಂಗಿಕ ದೌರ್ಜನ್ಯ, ಬಾಲ ಕಾರ್ಮಿಕತೆ, ಬೀದಿಬದಿ ಮಕ್ಕಳ ರಕ್ಷಣೆ ಮುಂತಾದ ಸಂಕಷ್ಟದಲ್ಲಿ ಸಿಲುಕಿರುವ ಮಕ್ಕಳ ರಕ್ಷಣೆಗಾಗಿ ಕೇಂದ್ರ ಸರ್ಕಾರದ ಸಮಗ್ರ ಮಕ್ಕಳ ರಕ್ಷಣೆ ಯೋಜನೆ ಹಾಗೂ ಪ್ರಸ್ತುತ ಜಾರಿಯಲ್ಲಿರುವ ಮಿಷನ್‌ ವಾತ್ಸಲ್ಯ ಯೋಜನೆಯಡಿ ಜಾರಿಗೊಳಿಸಲಾಗುತ್ತಿದೆ ಎಂದು ಸಚಿವರು ಉತ್ತರ ಒದಗಿಸಿದ್ದಾರೆ.

 

ಮಿಷನ್‌ ವಾತ್ಸಲ್ಯ ಮಾರ್ಗಸೂಚಿಯನ್ವಯ ಎಲ್ಲಾ ತುರ್ತು ಸೇವೆಗಳನ್ನು ಕೇಂದ್ರೀಕೃತಗೊಳಿಸುವ ಉದ್ದೇಶದಿಂದ ಎಲ್ಲಾ ಉಚಿತ ಸಹಾಯವಾಣಿಗಳನ್ನು 112 ಸಂಖ್ಯೆಯೊಂದಿಗೆ ವಿಲೀನಗೊಳಿಸಲಾಗುತ್ತಿದೆ.

 

ಕೊಲೆ ಸುಲಿಗೆ ಪ್ರಕರಣಗಳ ಸಂಖ್ಯೆಯೂ ಏರುಮುಖ

 

ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಕೊಲೆ, ಸುಲಿಗೆ, ದರೋಡೆ, ಲೈಂಗಿಕ ಹಿಂಸೆ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿವೆ ಎಂಬ ಪ್ರತಿಪಕ್ಷಗಳ ಆರೋಪವನ್ನು ಬಲಗೊಳಿಸುವಂತಹ ಅಂಕಿ ಅಂಶಗಳನ್ನು ವಿಧಾನಪರಿಷತ್‌ನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಬಹಿರಂಗಗೊಳಿಸಿದ್ದಾರೆ.

 

ರಾಜ್ಯದಲ್ಲಿ 2021ರಿಂದ 2023ವರೆಗೆ 2,830 ಕೊಲೆ ಪ್ರಕರಣಗಳು ವರದಿಯಾಗಿವೆ. 2,154 ಸುಲಿಗೆ, 412 ದರೋಡೆ ಪ್ರಕರಣಗಳು, 6 ಉಗ್ರ ಚಟುವಟಿಕೆ, 99 ಮತೀಯ ಗಲಭೆಗಳು ವರದಿಯಾಗಿವೆ ಎಂದು ಪರಿಷತ್‌ನಲ್ಲಿ ಮಂಡಿಸಿರುವ ಅಂಕಿ ಅಂಶಗಳು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆಯೇ ಎಂಬ ಭಾವನೆಯು ಸಾರ್ವಜನಿಕರ ವಲಯದಲ್ಲಿ ವ್ಯಕ್ತವಾಗಿದೆ.

 

ಅಲ್ಲದೇ ರಾಜ್ಯದಲ್ಲಿ ಕಳೆದ ಮೂರು ವರ್ಷದಲ್ಲಿ ಗಂಡನಿಂದ ಕ್ರೂರವಾಗಿ 7,377 ಮಹಿಳೆಯರು ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಡಿಪಿ ಕಾಯ್ದೆಯಡಿ 5,783, 501 ವರದಕ್ಷಿಣೆ ಕಿರುಕುಳ,  15,769 ಲೈಂಗಿಕ ಹಿಂಸೆ ಪ್ರಕರಣಗಳು,    1,606 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ.

 

ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ನೀಡಿರುವ ಉತ್ತರದ ಪ್ರತಿ

 

ಕರ್ನಾಟಕ ರಾಜ್ಯ ಇತರೆ ನಗರ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಎನ್‌ಐಎ ಕಚೇರಿ, ಘಟಕಗಳನ್ನು ಸ್ಥಾಪಿಸುವ ಯಾವುದೇ ಪ್ರಸ್ತಾವನೆ ಇರುವುದಿಲ್ಲ ಎಂದು ಉತ್ತರ ಒದಗಿಸಿದ್ದಾರೆ.

the fil favicon

SUPPORT THE FILE

Latest News

Related Posts