Friday | September 11, 2026 |

ಗ್ಯಾರಂಟಿಗಳಿಂದ ಹೆಚ್ಚಿದ ಹಣಕಾಸಿನ ಒತ್ತಡ, ಶಾಸಕಾಂಗದ ಅನುಮೋದನೆಯಿಲ್ಲದೇ 10,035 ಕೋಟಿ ವೆಚ್ಚಕ್ಕೆ ಆದೇಶ

ಬೆಂಗಳೂರು; ರಾಜ್ಯ ಶಾಸಕಾಂಗದ ಅನುಮೋದನೆಗೆ ಮುಂಚಿತವಾಗಿಯೇ 10,035.13 ಕೋಟಿ ರು ವೆಚ್ಚಕ್ಕೆ ಕಾರ್ಯನಿರ್ವಾಹಕ ಆದೇಶಗಳನ್ನು ಹೊರಡಿಸಿರುವುದನ್ನು ಸಿಎಜಿಯು ಪತ್ತೆ ಹಚ್ಚಿದೆ. ಹಾಗೆಯೇ ಈಗಾಗಲೇ ಜಾರಿಯಲ್ಲಿರುವ ಗ್ಯಾರಂಟಿ ಯೋಜನೆಗಳಿಗೆ ರಾಜ್ಯ ಸರ್ಕಾರವು ಸಾಲಗಳ ಮೇಲೆಯೇ ಅವಲಂಬಿತವಾಗಿದೆ ಎಂಬ ಸಂಗತಿಯನ್ನೂ ಬಹಿರಂಗಪಡಿಸಿದೆ.

ವಿಧಾನಮಂಡಲದ ಉಭಯ ಸದನಗಳಿಗೆ 2025ರ ಮಾರ್ಚ್‌ 31ರ ಅಂತ್ಯಕ್ಕೆ ಕೊನೆಗೊಂಡ ವರ್ಷದ ರಾಜ್ಯ ಹಣಕಾಸು ಲೆಕ್ಕ ಪರಿಶೋಧನಾ ವರದಿಯು ರಾಜ್ಯದ ಹಣಕಾಸಿನ ಅಶಿಸ್ತಿನ ಹಲವು ಮುಖಗಳನ್ನು ತೆರೆದಿಟ್ಟಿದೆ.

 

 

ರಾಜ್ಯ ಹಣಕಾಸಿನ ಶಿಸ್ತು, ವಿತ್ತೀಯ ಹೊಣೆಗಾರಿಕೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಚೆಗಷ್ಟೇ ವಿಧಾನಮಂಡಲದಲ್ಲಿ  ಭಾಷಣ ಮಾಡಿದ್ದರು. ರಾಜ್ಯವು ಹಣಕಾಸಿನ ಶಿಸ್ತನ್ನು ಉಲ್ಲಂಘಿಸಿಲ್ಲ ಎಂದೂ ಉಭಯ ಸದನಗಳಲ್ಲಿ  ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ರಾಜ್ಯ ಹಣಕಾಸು ಲೆಕ್ಕ ಪರಿಶೋಧನೆ ವರದಿಯಲ್ಲಿ ಹಣಕಾಸಿನ ಶಿಸ್ತು ಮತ್ತು ಶಾಸಕಾಂಗದ ಅನುಮೋದನೆಗೂ ಮುನ್ನವೇ ಖರ್ಚು ಮಾಡಿರುವ ಸಾವಿರಾರು ಕೋಟಿ ರುಪಾಯಿಗಳ ಅಂಕಿ ಅಂಶವನ್ನು ಒದಗಿಸಿರುವುದು ಮುನ್ನೆಲೆಗೆ ಬಂದಿದೆ.

2024-25ರ ಅವಧಿಯಲ್ಲಿಯೇ ಶಾಸಕಾಂಗದಿಂದ ಕ್ರಮಬದ್ಧಗೊಳಿಸಬೇಕಾದ ಮೂರು ಅನುದಾನಗಳ ಅಡಿಯಲ್ಲಿ 4,388.75 ಕೋಟಿಯಷ್ಟು ಹೆಚ್ಚುವರಿ ವೆಚ್ಚ ಮಾಡಿರುವುದನ್ನು ಸಿಎಜಿಯು ಪತ್ತೆ ಹಚ್ಚಿದೆ. ಅಲ್ಲದೇ  2020-21ರಿಂದ 2023-24ವರೆಗೆ 5,175.21 ಕೋಟಿ ಹೆಚ್ಚುವರಿ ವೆಚ್ಚವನ್ನು ಇನ್ನೂ ಕ್ರಮಬದ್ಧಗೊಳಿಸಿಲ್ಲದಿರುವುದು ಸಹ ಸಿಎಜಿ ವರದಿಯಿಂದ ತಿಳಿದು ಬಂದಿದೆ.

ಸಂವಿಧಾನಕ್ಕೆ ವಿರುದ್ಧವಾಗಿ ವರ್ತನೆ

ಭಾರತ ಸಂವಿಧಾನದ 266 (3)ನೇ ವಿಧಿಗೆ ವಿರುದ್ಧವಾಗಿ ರಾಜ್ಯ ಸರ್ಕಾರವು ವರ್ತಿಸಿರುವುದನ್ನು ಸಿಎಜಿಯು ಅನಾವರಣಗೊಳಿಸಿದೆ. ಬಂಡವಾಳ, ರಾಜಸ್ವ ವಿಭಾಗದ ಅಡಿಯಲ್ಲಿ 21 ಅನುದಾನಗಳನ್ನು ಒಳಗೊಂಡ 10,035.13 ಕೋಟಿಗೆ ಶಾಸಕಾಂಗದ ಅನುಮೋದನೆಎ ಮುಂಚಿತವಾಗಿ ವೆಚ್ಚಕ್ಕಾಗಿ ಕಾರ್ಯನಿರ್ವಾಹಕ ಆದೇಶಗಳನ್ನು ಹೊರಡಿಸಿತ್ತು. ಇವುಗಳನ್ನು ವರ್ಷದ ಅವಧಿಯಲ್ಲಿ ಪೂರಕ ಅನುದಾನಗಳ ಮೂಲಕ ಕ್ರಮಬದ್ಧಗೊಳಿಸಲಾಗಿದೆ. ಇದು ಒಟ್ಟು ಪೂರಕ ಅಂದಾಜಿ ಶೇ. 36ರಷ್ಟಿದೆ. ಆದರೂ ಈ ಪದ್ಧತಿಯು ಸಾಂವಿಧಾನಿಕ ನಿಬಂಧನೆಗಳಿಗೆ ವಿರುದ್ಧವಾಗಿದೆ ಎಂದು ಸಿಎಜಿಯು ತನ್ನ ವರದಿಯಲ್ಲಿ ವಿಶ್ಲೇಷಿಸಿದೆ.

 

 

ಅಲ್ಲದೇ ಶಾಸಕಾಂಗದ ಅನುಮೋದನೆಯ ಮೊದಲು ರಾಜ್ಯವು ವೆಚ್ಚವನ್ನು ಭರಿಸಲು ಕಾರ್ಯಕಾರಿ ಮಾರ್ಗವನ್ನು ಆಶ್ರಯಿಸುವುದನ್ನು ತಪ್ಪಿಸಬೇಕು. ಮತ್ತು ಪ್ರಸ್ತುತ ಹಾಗೂ ಹಿಂದಿನ ವರ್ಷಗಳ ಹೆಚ್ಚುವರಿ ವೆಚ್ಚವನ್ನು ಶಾಸಕಾಂಗದ ಮೂಲಕ ಕ್ರಮಬದ್ಧಗೊಳಿಸಬೇಕು ಎಂದು ಸಿಎಜಿಯು ಶಿಫಾರಸ್ಸು ಮಾಡಿರುವುದು ವರದಿಯಿಂದ ತಿಳಿದು ಬಂದಿದೆ.

ಐದು ಗ್ಯಾರಂಟಿಗಳನ್ನು ಸಾಮಾಜಿಕ ಪ್ರಯೋಜನ, ಗ್ಯಾರಂಟಿಗಳಿಂದಾಗಿ ಉಂಟಾಗಿರುವ ಆದಾಯದ ಒತ್ತಡ, ಹಣಕಾಸಿನ ಸುಸ್ಥಿರತೆ, ಆರ್ಥಿಕ ಅಪಾಯ ಮತ್ತು ಭವಿಷ್ಯದಲ್ಲಿ ಆರ್ಥಿಕ ಹೊರೆ ಕುರಿತು ಅಂಕಿ ಅಂಶಗಳ ಸಮೇತ ವಿಶ್ಲೇಷಣೆ ಮಾಡಿರುವುದು ವರದಿಯಿಂದ ಗೊತ್ತಾಗಿದೆ.

ಮಾಧ್ಯಮ ವರದಿಗಳ ಅವಲಂಬಿಸಿದ ಸಿಎಜಿ

2023-24ರಲ್ಲಿ ಐದು ಗ್ಯಾರಂಟಿ ಯೋಜನೆಗಳಿಗೆ 36,538 ಕೋಟಿ ರು ಆಯವ್ಯಯ ಮಾಡಿತ್ತು. ಇದು 2024-25ರಲ್ಲಿ 51,646 ಕೋಟಿಗೆ ಏರಿದೆ. ಈ ಯೋಜನೆಗಳು ರಾಜ್ಯದ ಪ್ರಮುಖ ಸಾಮಾಜಿಕ ಕಲ್ಯಾಣ ಯೋಜನೆಗಳಾಗಿವೆ ಎಂದು ಸಿಎಜಿ ವರದಿಯು ಬಣ್ಣಿಸಿದೆ. ಅಲ್ಲದೇ ಈ ಯೋಜನೆಗಳ ಸಾಮಾಜಿಕ ಪರಿಣಾಮಗಳನ್ನು ವಿಶ್ಲೇ‍ಷಿಸಲು ಸಿಎಜಿಯು ಮಾಧ್ಯಮ ವರದಿಗಳನ್ನು ಅವಲಂಬಿಸಿದೆ.

ಆದಾಯದ ಒತ್ತಡವಿದೆಯೇ?

ಐದು ಗ್ಯಾರಂಟಿ ಯೋಜನೆಗಳ ಒಟ್ಟು ವೆಚ್ಚವು ರಾಜ್ಯದ ಆದಾಯದ ಸುಮಾರು 20 ಪ್ರತಿಶತ ಮತ್ತು ಸ್ವಂತ ಆದಾಯದ 27 ಪ್ರತಿಶತದಷ್ಟಿತ್ತು. 2024-25ನೇ ವರ್ಷದಲ್ಲಿ ರಾಜ್ಯದ ಆದಾಯವು ಹಿಂದಿನ ವರ್ಷಕ್ಕಿಂತ ಶೇ. 10.63ರಷ್ಟು ಬೆಳೆದಿದ್ದರೂ ಅದರ ಖರ್ಚು ಶೆ. 14.99ರಷ್ಟು ಹೆಚಚಾಗಿದೆ. ರಾಜಸ್ವ  ವೆಚ್ಚದ ಬೆಳವಣಿಗೆಯು ಮುಖ್ಯವಾಗಿ ಖಾತರಿ ಯೋಜನೆಗಳಿಂದಾಗಿವೆ ಎಂದು ಸಿಎಜಿಯು ವಿಶ್ಲೇಷಿಸಿರುವುದು ತಿಳಿದು ಬಂದಿದೆ.

 

 

ರಾಜಸ್ವದ ವೃದ್ಧಿಯು ಸ್ಥಿರವಾಗಿದೆ ಎಂದು ಹೇಳಿರುವ ಸಿಎಜಿಯು ಈ ಖಾತರಿ ಯೋಜನೆಗಳ ಪುನರಾವರ್ತಿತ ವೆಚ್ಚಗಳನ್ನು ಒಳಗೊಳ್ಳಲು  ಅದು ಸಾಕಾಗುವುದಿಲ್ಲ. ಮತ್ತು ರಾಜ್ಯವು ಖಾತರಿ ಯೋಜನೆಗಳಿಗೆ ಹಣಕಾಸು ಒದಗಿಸಲು ಸಾಲಗಳ ಮೇಲೆಯೇ ಅವಲಂಬಿಸಬೇಕಾಗಿದೆ ಎಂದು ಹೇಳಿದೆ.  ಅಲ್ಲದೇ ಸಹಾಯಧನಗಳ ಪ್ರವೃತ್ತಿಯು ಹೆಚ್ಚಾಗುತ್ತಿದೆ. ಇದರಿಂದಾಗಿ ಪೌಷ್ಟಿಕಾಂಶ, ಸ್ಥಳೀಯ ಸಂಸ್ಥೆಗಳು, ನಿಗಮಗಳು, ನಗರಾಭಿವೃದ್ದಿ ಪ್ರಾಧಿಕಾರಗಳು, ಕೊಳೆಗೇರಿ ಸುಧಾರಣೆ ಮಂಡಳಿಗಳಿಗೆ ಸಹಾಯ, ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳಲ್ಲಿ ಗ್ರಾಮ ಪಂಚಾಯ್ತಿಗಳಿಗೆ  ಸಹಾಯ ಇತ್ಯಾದಿಗಳಂತಹ  ಕೆಲವು ಯೋಜನೆಗಳಿಗೆ ರಾಜ್ಯವು ತನ್ನ ಹಣವನ್ನು ಕಡಿತಗೊಳಿಸಬೇಕಾಯಿತು ಎಂದು ಗ್ಯಾರಂಟಿಗಳಿಂದಾಗಿರುವ ಆರ್ಥಿಕ  ಪರಿಣಾಮವನ್ನು  ಒರೆಗೆ ಹಚ್ಚಿದೆ.

20,834 ಕೋಟಿ ಆದಾಯ ಕೊರತೆ-85,030 ಕೋಟಿ ವಿತ್ತೀಯ ಕೊರತೆ

ಈ ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಆಗಿರುವ ಆರ್ಥಿಕ ಪರಿಣಾಮಗಳನ್ನು ಸಿಎಜಿಯು ಮತ್ತಷ್ಟು ವಿಸ್ತರಿಸಿದೆ. ಹಣಕಾಸಿನ ಸುಸ್ಥಿರತೆ ಬೆಳಕಿನಲ್ಲಿ ಆದಾಯ ಮತ್ತು ವೆಚ್ಚದ ನಡುವೆ ಉಂಟಾಗಿರುವ ಅಸಮತೋಲನವನ್ನು ಬೆಳಕಿಗೆ ತಂದಿದೆ. ಸಿಎಜಿ ವರದಿ ಪ್ರಕಾರ ಆದಾಯ ಮತ್ತು ವೆಚ್ಚದ ನಡುವಿನ ಅಸಮತೋಲನವು 20,834 ಕೋಟಿ ರು ಗಳ ಆದಾಯ ಕೊರತೆಗೆ ಕಾರಣವಾಗಿದೆ. ಇದರ ಪರಿಣಾಮವಾಗಿ ರಾಜ್ಯದ ವಿತ್ತೀಯ ಕೊರತೆಯು 2023-24ರಲ್ಲಿ 65,522 ಕೋಟಿ ಗಳಿಂದ 2024-25ರಲ್ಲಿ 85,030 ಕೋಟಿ ರು.ಗಳಿಗೆ ಏರಿತು ಎಂದು ವಿಶ್ಲೇಷಿಸಿದೆ.

 

 

ಗ್ಯಾರಂಟಿ ಯೋಜನೆಗಳು ಮತ್ತು ಅದರಿಂದ ಉಂಟಾಗುವ ಕೊರತೆಗಳನ್ನು ನೀಗಿಸಲು ಆರ್ಥಿಕ ಸಹಾಯ ಒದಗಿಸಲು ಸರ್ಕಾರವು ಮುಂದಾಗಿತ್ತು. ಇದಕ್ಕಾಗಿ ರಾಜ್ಯ ಸರ್ಕಾರವು 71, 525.15 ಕೋಟಿ ರುಗಳ ನಿವ್ವಳ ಮಾರುಕಟ್ಟೆ ಸಾಲವನ್ನು ಪಡೆದುಕೊಂಡಿತು. ಇದು ಹಿಂದಿನ ವರ್ಷದ (63,000 ಕೋಟಿ) ನಿವ್ವಳ ಸಾಲಗಳಿಗಿಂತಲೂ 8,525.15 ಕೋಟಿಯಷ್ಟು ಹೆಚ್ಚಾಗಿದೆ.

ಆರ್ಥಿಕ ಅಪಾಯವೇನು?

ಹಿಂದಿನ ವ‍ರ್ಷಕ್ಕೆ ಹೋಲಿಸಿದರೇ 2024-25ರಲ್ಲಿ ರಾಜ್ಯದ ಒಟ್ಟಾರೆ ಬಂಡವಾಳ ವೆಚ್ಚವು 5,786 ಕೋಟಿಗಳಷ್ಟು ಹೆಚ್ಚಾಅಗಿತ್ತು. ಮೂಲ ಸೌಕರ್ಯಕ್ಕಾಗಿ ರಾಜ್ಯದಿಂದ ವಾಸ್ತವಿಕ ವೆಚ್ಚ, ನೆರವು 3,284 ಕೋಟಿಗಳಷ್ಟು ಹೆಚ್ಚಾಗಿದೆ. ಸ್ಥೂಲ ಬಂಡವಾಳ ರಚನೆಯಲ್ಲಿನ ಈ ಕುಗ್ಗುವಿಕೆ ಭವಿಷ್ಯದ ಬೆಳವಣಿಗೆಯ ನಿರೀಕ್ಷೆಗಳಿಗೆ ಹಾನಿಕಾರಕ ಎಂದು ಸಾಬೀತುಪಡಿಸಬಹುದು ಎಂದು ಸಿಎಜಿ ತನ್ನ ವರದಿಯಲ್ಲಿ ವಿಶ್ಲೇಷಿಸಿರುವುದು ತಿಳಿದು ಬಂದಿದೆ.

ಭವಿಷ್ಯದಲ್ಲಿ ಹೊರೆಯಾಗಲಿದೆಯೇ?

ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಅಪಾಯ ಮಾತ್ರವಲ್ಲ, ಭವಿಷ್ಯದಲ್ಲಿಯೂ ಆರ್ಥಿಕ ಹೊರೆಗಳು ಸಂಭವಿಸಲಿವೆ ಎಂದು ಸಿಎಜಿ ವರದಿಯು ವಿವರಿಸಿದೆ. ಸಾಲದ ಹೆಚ್ಚಳವು ಋಣ ಸೇವೆ ಬಾಧ್ಯತೆಗಳಲ್ಲಿ ಹೆಚ್ಚಾಗಲು ಕಾರಣವಾಗಲಿದೆ. ಅಸಲು ಮತ್ತು ಬಡ್ಡಿ ಬಾಧ್ಯತೆಗಳ ಹೆಚ್ಚಿನ ಮರು ಪಾವತಿಯು ಅಭಿವೃದ್ದಿ ಮತ್ತು ಮೂಲಸೌಕರ್ಯ ಹೂಡಿಕೆ ಮತ್ತು ಇತರೆ ಕಲ್ಯಾಣ ಕ್ರಮಗಳಂತಹ ಬಂಡವಾಳ ವೆಚ್ಚವನ್ನೂ ಹಿಮ್ಮೆಟ್ಟಿಸಬಹುದು ಎಂದು ಸಿಎಜಿ ವರದಿಯು ಅಂದಾಜಿಸಿದೆ.

 

 

ಅಲ್ಲದೇ ಸಾಲ ಪಡೆಯುವ ಪ್ರವೃತ್ತಿ ಹೆಚ್ಚಾಗುತ್ತಿದೆ ಎಂದಿರುವ ಸಿಎಜಿಯು ಕರ್ನಾಟಕ ಆರ್ಥಿಕ ಸಂಹಿತೆಯಲ್ಲಿ ನಿರ್ದಿಷ್ಟಪಡಿಸಿದ ಆರ್ಥಿಕ ಗುರಿಗಳನ್ನು ಉಲ್ಲಂಘಿಸುವ ಅಪಾಯವನ್ನೂ ಹೊಂದಿವೆ ಎಂದು ವಿವರಿಸಿದೆ. ಅದೇ ರೀತಿ ಅಸ್ತಿತ್ವದಲ್ಲಿರುವ ಸಹಾಯಧನಗಳು, ಆರ್ಥಿಕ ನೆರವನ್ನು ತರ್ಕಬದ್ಧಗೊಳಿಸದೇ ಅಥವಾ ಉತ್ತಮ ಗುರಿಯನ್ನು ನಿಗದಿಪಡಿಸದೇ ಪ್ರಸ್ತುತ ರೂಪದಲ್ಲಿಯೇ 5 ಖಾತರಿ ಯೋಜನೆಗಳ ಅನುಷ್ಠಾನವು ರಾಜ್ಯದ ಹಣಕಾಸಿನ ಮೇಲೆ ಒತ್ತಡ ಉಂಟು ಮಾಡುತ್ತವೆ ಎಂದು ವಿಶ್ಲೇಷಿಸಿದೆ.

Hot this week

ದಿ ಫೈಲ್‌ ಸಂಪಾದಕರಿಗೆ ಜೀವ ಬೆದರಿಕೆ, ಅವಾಚ್ಯ ಶಬ್ದಗಳಿಂದ ನಿಂದನೆ ಪ್ರಕರಣ; ಅಪರಿಚಿತನ ವಿರುದ್ಧ ಕಡೆಗೂ ಎಫ್‌ಐಆರ್ ದಾಖಲಿಸಿದ ಪೊಲೀಸರು

ಬೆಂಗಳೂರು; ದಿ ಫೈಲ್‌ ಸುದ್ದಿ ಜಾಲತಾಣದಲ್ಲಿ ಪ್ರಕಟಿಸಿದ್ದ ವರದಿ ಉಲ್ಲೇಖಿಸಿ ಸಂಪಾದಕರಿಗೆ...

ಬಹು ದೊಡ್ಡ ಬರಗಾಲ; ಜಿಲ್ಲಾಧಿಕಾರಿಗಳ ಪಿ ಡಿ ಖಾತೆಗಳಲ್ಲಿ 310 ಕೋಟಿಯಷ್ಟೇ ಲಭ್ಯ

ಬೆಂಗಳೂರು; ರಾಜ್ಯದ ಇತಿಹಾಸದಲ್ಲಿ ಎರಡನೇ ಬಾರಿಗೆ ಕಾಣಿಸಿಕೊಂಡಿರುವ ಬಹುದೊಡ್ಡ ಬರಕ್ಕೆ ತುತ್ತಾಗಿರುವ...

ಶೇ 14 ಟೆಂಡರ್ ಪ್ರೀಮಿಯಂಗೆ ಸಮರ್ಥನೆ ಮಾಡಲು ಶೇ.10ರಷ್ಟು ಸೇವಾ ಶುಲ್ಕ ಸೇರಿಸಿದ್ದ ಬಿಎಸ್‌ಡಬ್ಲ್ಯೂಎಂಎಲ್; ಆರ್ಥಿಕ ಇಲಾಖೆ ಅವಲೋಕನ

ಬೆಂಗಳೂರು; ಘನತ್ಯಾಜ್ಯ ಸಂಗ್ರಹಣೆ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಾಗಾಣಿಕೆ ಮಾಡುವ...
Please Scan to make Your Contribution

Topics

ದಿ ಫೈಲ್‌ ಸಂಪಾದಕರಿಗೆ ಜೀವ ಬೆದರಿಕೆ, ಅವಾಚ್ಯ ಶಬ್ದಗಳಿಂದ ನಿಂದನೆ ಪ್ರಕರಣ; ಅಪರಿಚಿತನ ವಿರುದ್ಧ ಕಡೆಗೂ ಎಫ್‌ಐಆರ್ ದಾಖಲಿಸಿದ ಪೊಲೀಸರು

ಬೆಂಗಳೂರು; ದಿ ಫೈಲ್‌ ಸುದ್ದಿ ಜಾಲತಾಣದಲ್ಲಿ ಪ್ರಕಟಿಸಿದ್ದ ವರದಿ ಉಲ್ಲೇಖಿಸಿ ಸಂಪಾದಕರಿಗೆ...

ಬಹು ದೊಡ್ಡ ಬರಗಾಲ; ಜಿಲ್ಲಾಧಿಕಾರಿಗಳ ಪಿ ಡಿ ಖಾತೆಗಳಲ್ಲಿ 310 ಕೋಟಿಯಷ್ಟೇ ಲಭ್ಯ

ಬೆಂಗಳೂರು; ರಾಜ್ಯದ ಇತಿಹಾಸದಲ್ಲಿ ಎರಡನೇ ಬಾರಿಗೆ ಕಾಣಿಸಿಕೊಂಡಿರುವ ಬಹುದೊಡ್ಡ ಬರಕ್ಕೆ ತುತ್ತಾಗಿರುವ...

ಶೇ 14 ಟೆಂಡರ್ ಪ್ರೀಮಿಯಂಗೆ ಸಮರ್ಥನೆ ಮಾಡಲು ಶೇ.10ರಷ್ಟು ಸೇವಾ ಶುಲ್ಕ ಸೇರಿಸಿದ್ದ ಬಿಎಸ್‌ಡಬ್ಲ್ಯೂಎಂಎಲ್; ಆರ್ಥಿಕ ಇಲಾಖೆ ಅವಲೋಕನ

ಬೆಂಗಳೂರು; ಘನತ್ಯಾಜ್ಯ ಸಂಗ್ರಹಣೆ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಾಗಾಣಿಕೆ ಮಾಡುವ...

ತನಿಖೆಯಿಂದ ಪತ್ತೆ ಹಚ್ಚಬಹುದಾದನ್ನು ದೂರುದಾರ ಸಾಬೀತುಪಡಿಸಬೇಕೇ?; ಸಿದ್ದಾರ್ಥ ವಿಹಾರ ಟ್ರಸ್ಟ್‌ ಪ್ರಕರಣದಲ್ಲಿ ನ್ಯಾಯಪೀಠದ ಅವಲೋಕನ

ಬೆಂಗಳೂರು; 'ದೂರುದಾರರ ವಿಚಾರಣೆಯ ಮೂಲಕವೇ  ಸಂಪೂರ್ಣ ಸರಪಳಿಯನ್ನು ಬಿಚ್ಚಿಡುವಂತೆ ಖಾಸಗಿ ದೂರುದಾರರಿಂದ...

ಸಿದ್ದಾರ್ಥ ವಿಹಾರ ಟ್ರಸ್ಟ್‌ ಪ್ರಕರಣ; ಖಾಸಗಿ ದೂರು ಮುಂದುವರೆಸಲು ಹೈಕೋರ್ಟ್‌ ಅನುಮತಿ, ಖರ್ಗೆ ಕುಟುಂಬಕ್ಕೆ ಸಂಕಷ್ಟ!

ಬೆಂಗಳೂರು; ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ಸಚಿವ...

Related Articles

Popular Categories

error: Content is protected !!