ಬೆಂಗಳೂರು; ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನಲ್ಲಿ ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಮಂಜೂರು ಮಾಡಲು ಉದ್ದೇಶಿಸಿರುವ ಜಮೀನು, ಡೀಮ್ಡ್ ಅರಣ್ಯದ ಪಟ್ಟಿಯಲ್ಲಿ ಅಧಿಸೂಚಿಸಲಾಗಿದೆಯೇ ಎಂಬ ಬಗ್ಗೆ ಅರಣ್ಯ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಪತ್ರ ಬರೆದಿರುವುದು ಇದೀಗ ಬಹಿರಂಗವಾಗಿದೆ.
ಸ್ಮಶಾನ ಸೇರಿದಂತೆ ಇನ್ನಿತರೆ ಸಾರ್ವಜನಿಕ ಉದ್ದೇಶಗಳಿಗಾಗಿ ಕಾಯ್ದಿರಿಸಿ ಮೀಸಲಿರಿಸಿದ್ದ ಸರ್ಕಾರಿ ಜಮೀನುಗಳನ್ನು ಮಂಜೂರು ಮಾಡಿಸಿಕೊಳ್ಳುತ್ತಿರುವ ಕಾಂಗ್ರೆಸ್ ಭವನ ಟ್ರಸ್ಟ್, ಹೆಬ್ರಿ ತಾಲೂಕಿನಲ್ಲಿ ಮಂಜೂರು ಮಾಡಿಸಿಕೊಳ್ಳಲು ಹೊರಟಿರುವ ಜಮೀನಿನ ಸ್ವರೂಪದ ಪ್ರಶ್ನೆಯು ಮುನ್ನೆಲೆಗೆ ಬಂದಿದೆ.
ಉಡುಪಿ ಜಿಲ್ಲೆ ಮತ್ತು ತಾಲೂಕಿನ ಅಂಜಾರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಅಂದಾಜು 35 ಲಕ್ಷ ರು ಮೌಲ್ಯದ ಗೋಮಾಳ ಜಮೀನನ್ನು ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಮಂಜೂರು ಮಾಡಿದೆ. ಇದರ ಬೆನ್ನಲ್ಲೇ ಇದೇ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನಲ್ಲಿನ ಕುಮ್ಕಿ ಮಿತಿಯಲ್ಲಿರುವ ಜಾಗವನ್ನೂ ಮಂಜೂರು ಮಾಡಿಸಿಕೊಳ್ಳಲು ಸರ್ಕಾರದ ಮೇಲೆ ಒತ್ತಡ ಹೇರಿರುವುದು ಚರ್ಚೆಗೆ ಗ್ರಾಸವಾಗಿದೆ.
ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಹೆಬ್ರಿ ಗ್ರಾಮದಲ್ಲಿ ಕಾಂಗ್ರೆಸ್ ಭವನ ನಿರ್ಮಾಣ ಮಾಡಲು ಕಾಂಗ್ರೆಸ್ ಭವನ ಟ್ರಸ್ಟ್ ಕೋರಿರುವ ಜಮೀನು, ಪರಿಭಾವಿತ ಅರಣ್ಯಗಳು ಹಾಗೂ ಇತರೆ ಅರಣ್ಯಗಳ ಜಮೀನಿನ ಪಟ್ಟಿಯಲ್ಲಿ ಅಧಿಸೂಚಿಸಲಾಗಿದೆಯೇ ಎಂಬ ಕುರಿತು ಅರಣ್ಯ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಪತ್ರ ಬರೆದಿದ್ದಾರೆ. 2025ರ ನವೆಂಬರ್ 7ರಂದು ಬರೆದಿರುವ ಪತ್ರದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಅರಣ್ಯ ಇಲಾಖೆಯ ಪತ್ರದಲ್ಲೇನಿದೆ?
ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಹೆಬ್ರಿ ಗ್ರಾಮದ ಸರ್ವೆ ನಂಬರ್ 307/1ರಲ್ಲಿ 1.58ರ ಪೈಕಿ 0.10 ಎಕರೆ ಕುಮ್ಕಿ ಮಿತಿಯಲ್ಲಿರುವ ಜಮೀನು ಪರಿಭಾವಿತ ಅರಣ್ಯಗಳ ಹಾಗೂ ಇತರೆ ಅರಣ್ಯ ಜಮೀನಿನ ಪಟ್ಟಿಯಲ್ಲಿ ಅಧಿಸೂಚಿಸಲಾಗಿದೆಯೇ ಎಂಬ ಬಗ್ಗೆ ಮಾಹಿತಿಯನ್ನು ನಿಯಮಾನುಸಾರ ಪರಿಶೀಲಿಸಿ ಸ್ಪಷ್ಟ ಅಭಿಪ್ರಾಯವನ್ನು ಕಂದಾಯ ಇಲಾಖೆಗೆ ಸಲ್ಲಿಸಬೇಕು ಎಂದು 2025ರ ಆಗಸ್ಟ್ 2ರಂದೇ ಅರಣ್ಯ ಇಲಾಖೆಯು, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಸೂಚಿಸಿತ್ತು.
ಪ್ರಸ್ತಾವವನ್ನೇ ಪರಿಷ್ಕರಿಸಿದ್ದ ಕಾಂಗ್ರೆಸ್ ಭವನ ಟ್ರಸ್ಟ್
ಈ ಮಧ್ಯೆ ಕಂದಾಯ ಇಲಾಖೆಯು ಮತ್ತೊಂದು ಕಡತ ( ಸಂಖ್ಯೆ RD/33/LGA/2025) ಸಲ್ಲಿಸಿತ್ತು. ಕಾಂಗ್ರೆಸ್ ಭವನ ಕಟ್ಟಡ ನಿರ್ಮಾಣ ಉದ್ದೇಶಕ್ಕೆ ಕಾಂಗ್ರೆಸ್ ಭವನ ಟ್ರಸ್ಟ್ ಹೆಸರಿನಲ್ಲಿ ಮಂಜೂರು ಮಾಡಲು ಕೋರಿದ್ದ 0.10 ಎಕರೆ ಜಮೀನಿನ ಬದಲಾಗಿ 0.26.75 ಎಕರೆ ಪ್ರದೇಶಕ್ಕೆ ಮಂಜೂರು ಮಾಡಲು ಪರಿಷ್ಕೃತ ಪ್ರಸ್ತಾವ ಸಲ್ಲಿಸಿತ್ತು. ಈ ಸಂಬಂಧ ಅರಣ್ಯ ಇಲಾಖೆಯ ಅಭಿಪ್ರಾಯವನ್ನು ಕಂದಾಯ ಇಲಾಖೆಯು ಕೋರಿತ್ತು ಎಂಬುದು ಕಡತದಿಂದ ತಿಳಿದು ಬಂದಿದೆ.

‘ಈ ಹಿನ್ನೆಲೆಯಲ್ಲಿ ಪ್ರಸ್ತುತ ಕಂದಾಯ ಇಲಾಖೆಯು ಪ್ರಸ್ತಾಪಿಸಿರುವಂತೆ ಕಾಂಗ್ರೆಸ್ ಭವನ ಕಟ್ಟಡ ನಿರ್ಮಾಣ ಉದ್ದೇಶಕ್ಕೆ ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಹೆಬ್ರಿ ಗ್ರಾಮದ ಸರ್ವೆ ನಂಬರ್ 307/1ರಲ್ಲಿನ 0.26.75 ಎಕರೆ ಪ್ರದೇಶ ಕುಮ್ಕಿ ಮಿತಿಯಲ್ಲಿರುವ ಜಮೀನು ಪರಿಭಾವಿತ ಅರಣ್ಯಗಳ ಹಾಗೂ ಇತರೆ ಅರಣ್ಯ ಜಮೀನಿನ ಪಟ್ಟಿಯಲ್ಲಿ ಅಧಿಸೂಚಿಸಲಾಗಿದೆಯೇ ಎಂಬ ಬಗ್ಗೆ ಮಾಹಿತಿಯನ್ನು ನಿಯಮಾನುಸಾರ ಪರಿಶೀಲಿಸಬೇಕು. ಮತ್ತು ಸ್ಪಷ್ಟ ಅಭಿಪ್ರಾಯವನ್ನು ಕಂದಾಯ ಇಲಾಖೆಗೆ ಸಲ್ಲಿಸಬೇಕು,’ ಎಂದು ಅರಣ್ಯ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಸೂಚಿಸಿರುವುದು ಗೊತ್ತಾಗಿದೆ.

ಈ ಜಮೀನನ್ನು ಕರ್ನಾಟಕ ಭೂ ಮಂಜೂರಾತಿ ನಿಯಮ 1969ರ ನಿಯಮ 27ರ ಅಡಿ ವಿಶೇಷ ಪ್ರಕರಣ ಎಂದು ಪರಿಗಣಿಸಲು ಕಂದಾಯ ಇಲಾಖೆಯು ನಿರ್ಧರಿಸಿದೆ. ಹಾಗೆಯೇ ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ಕಲಂ 79ರ ಅಡಿ ಕುಮ್ಕಿ ಹಕ್ಕಿನಿಂದ ವಿರಹಿತ ಕಟ್ಟಡ ನಿರ್ಮಾಣ ಮಾಡುವ ಉದ್ದೇಶಕ್ಕೆ ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಮಂಜೂರು ಮಾಡಲು ಅರಣ್ಯ ಇಲಾಖೆಯ ಅಭಿಪ್ರಾಯವನ್ನು ಕೋರಿರುವುದು ಸಹ ತಿಳಿದು ಬಂದಿದೆ.
ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಸೂಚನೆ ಮೇರೆಗೆ ಸಚಿವ ಈಶ್ವರ್ ಖಂಡ್ರೆ ಮತ್ತು ಕಂದಾಯ ಸಚಿವ ಕೃಷ್ಣಬೈರೇಗೌಡರು ಜಮೀನು ಮಂಜೂರು ಮಾಡಲು ಕ್ರಮ ವಹಿಸಿದ್ದಾರೆ ಎಂದು ಗೊತ್ತಾಗಿದೆ.
ಉಡುಪಿ ಜಿಲ್ಲೆ ಮತ್ತು ತಾಲೂಕಿನ ಅಂಜಾರು ಗ್ರಾಮದ ಸರ್ವೆ ನಂಬರ್ 32ರಲ್ಲಿ ಒಟ್ಟಾರೆ 86 ಸೆಂಟ್ಸ್ ವಿಸ್ತೀರ್ಣದ ಗೋಮಾಳ ಜಮೀನನ್ನೂ ಸಹ ಈಗಾಗಲೇ ಮಂಜೂರು ಮಾಡಿದೆ.
ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಸರ್ಕಾರಿ ಜಮೀನು; ಆರ್ಥಿಕ ಇಲಾಖೆಯಿಂದ ಪ್ರಸ್ತಾವ ತಿರಸ್ಕೃತವಾದರೂ ಮಂಜೂರು
ನಗರ ಸ್ಥಳೀಯ ಸಂಸ್ಥೆಗಳ ಸಾರ್ವಜನಿಕ ಉದ್ದೇಶಗಳನ್ನು ಹೊರತುಪಡಿಸಿ ಬೇರೆ ಉದ್ದೇಶಗಳಿಗೆ ನಗರ ಸ್ಥಳೀಯ ಸಂಸ್ಥೆಗಳ ಮಾಲೀಕತ್ವದಲ್ಲಿರುವ ನಾಗರಿಕ ಸೌಲಭ್ಯದ ನಿವೇಶನಗಳನ್ನು ಹಂಚಿಕೆ ಮಾಡಲು ಅವಕಾಶವಿಲ್ಲ. ಈ ಸಂಬಂಧ ಸಿದ್ದರಾಮಯ್ಯ ಅವರು ಮೊದಲ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದಾಗಲೇ (ಸರ್ಕಾರದ ಅಧಿಸೂಚನೆ ದಿನಾಂಕ; 24/05/2017) ಅಧಿಸೂಚನೆ ಹೊರಡಿಸಿತ್ತು. ಆದರೀಗ ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿರುವ ಸಂದರ್ಭದಲ್ಲೇ 2017ರ ಅಧಿಸೂಚನೆಯನ್ನೇ ಉಲ್ಲಂಘಿಸಿತ್ತು.
ಕಾಂಗ್ರೆಸ್ ಭವನ ಟ್ರಸ್ಟ್‌ಗೆ ನಿವೇಶನ; ತನ್ನದೇ ಅಧಿಸೂಚನೆ ಉಲ್ಲಂಘಿಸಿದ ಕಾಂಗ್ರೆಸ್ ಸರ್ಕಾರ
ಪೌರಾಡಳಿತ ಇಲಾಖೆ ವ್ಯಾಪ್ತಿಯಲ್ಲಿನ ಪುರಸಭೆಗಳ ವ್ಯಾಪ್ತಿಯಲ್ಲಿ 25 ನಿವೇಶನಗಳನ್ನು ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಮಂಜೂರು ಮಾಡಬೇಕು ಎಂದು ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಸಚಿವ ರಹೀಂ ಖಾನ್ ಅವರಿಗೆ ನಿರ್ದೇಶನ ನೀಡಿದ್ದರು.
ಕಾಂಗ್ರೆಸ್ ಭವನ ಟ್ರಸ್ಟ್‌ಗೆ 25 ನಿವೇಶನ; ಪೌರಾಡಳಿತ ಇಲಾಖೆ ಕುತ್ತಿಗೆ ಮೇಲೆ ಕುಳಿತ ಡಿ ಕೆ ಶಿವಕುಮಾರ್
ಕೊಪ್ಪಳ ನಗರದಲ್ಲಿ ಸರ್ಕಾರಿ ಮಾರ್ಗಸೂಚಿ ದರದ ಪ್ರಕಾರ 1.31 ಕೋಟಿ ರು ಬೆಲೆಬಾಳುವ ಸಿ ಎ ನಿವೇಶನವನ್ನು ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಕೇವಲ 13.19 ಲಕ್ಷ ರುಪಾಯಿಗೆ ರಿಯಾಯಿತಿ ದರದಲ್ಲಿ ಮಂಜೂರು ಮಾಡಿತ್ತು.
ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಕೊಪ್ಪಳದಲ್ಲೂ ನಿವೇಶನ; 1.18 ಕೋಟಿ ನಷ್ಟ, ನಿಯಮ ಉಲ್ಲಂಘಿಸಿದ ಸರ್ಕಾರ
ರಾಜ್ಯ ಕಾಂಗ್ರೆಸ್ ಸರ್ಕಾರವು ನಗರಾಭಿವೃದ್ಧಿ, ಪೌರಾಡಳಿತ, ಕಂದಾಯ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆ ಸೇರಿದಂತೆ ಇನ್ನಿತರೆ ಇಲಾಖೆಗಳ ವಶ ಅಥವಾ ಸ್ವಾಧೀನದಲ್ಲಿರುವ ಸರ್ಕಾರಿ ಜಾಗಗಳನ್ನು ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಮಂಜೂರು ಮಾಡುತ್ತಿರುವ ಪ್ರಕರಣದಲ್ಲಿ ಹಿತಾಸಕ್ತಿ ಸಂಘರ್ಷ ಎದುರಾಗಿತ್ತು.
ತುಮಕೂರು ಮಹಾನಗರ ಪಾಲಿಕೆಯ ಸುಪರ್ದಿಯಲ್ಲಿರುವ ಬಹು ಕೋಟಿ ಬೆಲೆಬಾಳುವ ಒಟ್ಟು ಜಮೀನಿನ ಪೈಕಿ 2 ಎಕರೆ ಜಾಗವನ್ನು ಸಾರ್ವಜನಿಕ ಹರಾಜು ನಡೆಸದೇ ನೇರವಾಗಿ ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಮಂಜೂರು ಮಾಡಿ ಆದೇಶ ಹೊರಡಿಸಿದೆ. ಅಲ್ಲದೇ ಈ ಜಾಗವು ವ್ಯಾಜ್ಯದಿಂದ ಕೂಡಿದೆಯಲ್ಲದೇ ನ್ಯಾಯಾಲಯದಲ್ಲಿ ಅಸಲು ದಾವೆ ಅರ್ಜಿಯ ವಿಚಾರಣೆಯು ಇನ್ನೂ ಇತ್ಯರ್ಥಗೊಂಡಿಲ್ಲ. ಆದರೂ ಸಹ ಕಾಂಗ್ರೆಸ್ ಭವನ ಟ್ರಸ್ಟ್‌ಗೆ 2 ಎಕರೆ ಜಮೀನು ಮಂಜೂರು ಮಾಡಲು ಸಚಿವ ಸಂಪುಟವು ತೀರ್ಮಾನ ತೆಗೆದುಕೊಂಡಿತ್ತು.
ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಚಿಲ್ಲರೆ ದರದಲ್ಲಿ 2 ಎಕರೆ ಜಮೀನು; ಹರಾಜು ನಡೆಸದೇ ಮಂಜೂರು, ನಿಯಮ ಉಲ್ಲಂಘನೆ
ಹೀಗೆ ಬಹುಕೋಟಿಯಷ್ಟು ಬೆಲೆ ಬಾಳುವ ಈ ಜಮೀನನ್ನು ಮಾರ್ಗಸೂಚಿ ಮೌಲ್ಯದ ಕೇವಲ ಶೇ.5ರಷ್ಟು ಅಂದರೇ 90 ಲಕ್ಷ ರು ದರ ವಿಧಿಸಿ ಈಗ ಕಾಂಗ್ರೆಸ್ ಪಕ್ಷಕ್ಕೆ ಮಂಜೂರು ಮಾಡಲಾಗಿದೆ. ಸಚಿವ ಸಂಪುಟವು ಕೈಗೊಂಡಿರುವ ತೀರ್ಮಾನವು (ಸಂಖ್ಯೆ ಸಿ; 396/2025) ಸರ್ಕಾರದ ಬೊಕ್ಕಸಕ್ಕೆ ಉಂಟಾಗಿರುವ ನಷ್ಟಕ್ಕೆ ಕಾರಣವಾಗಿತ್ತು.
ಕಾಂಗ್ರೆಸ್ ಭವನ ಟ್ರಸ್ಟ್‌ಗೆ ನಿವೇಶನ; ಆರ್‍ಡಿಪಿಆರ್‍ನಿಂದ ಪ್ರಸ್ತಾವ ತಿರಸ್ಕೃತ, ಸರ್ಕಾರಕ್ಕೆ ಮುಖಭಂಗ?
ಬೆಳಗಾವಿಯಲ್ಲಿನ ಕಾಂಗ್ರೆಸ್ ಅಧಿವೇಶನಕ್ಕೆ ನೂರು ವರ್ಷಗಳಾದ ಹಿನ್ನೆಲೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷವು (ಕೆಪಿಸಿಸಿ) ರಾಜ್ಯಾದ್ಯಂತ 100 ಕಾಂಗ್ರೆಸ್ ಭವನಗಳನ್ನು ನಿರ್ಮಾಣ ಮಾಡಲು ತೀರ್ಮಾನಿಸಿದೆ. ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಈ ಸಂಬಂಧ ಪಕ್ಷಕ್ಕೆ ಗುರಿ ನೀಡಿದ್ದರು. ಹೀಗಾಗಿ ಎಲ್ಲಾ ಸಚಿವರೂ ನಗರ ಮತ್ತು ಗ್ರಾಮೀಣ ಸ್ಥಳೀಯ ಸರ್ಕಾರಗಳ ಅಧೀನದಲ್ಲಿರುವ ಮತ್ತು ಅವುಗಳ ಹೆಸರಿನಲ್ಲಿರುವ ಜಮೀನು, ನಿವೇಶನಗಳನ್ನು ಮಂಜೂರು ಮಾಡಿಸಿಕೊಳ್ಳಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು.
ಕಾಂಗ್ರೆಸ್ ಕಚೇರಿ ಕಟ್ಟಡ ನಿರ್ಮಾಣ; ಪಂಚಾಯ್ತಿಗಳ ಜಾಗದ ಮೇಲೂ ಕಣ್ಣು ಹಾಕಿದ ಕಾಂಗ್ರೆಸ್ ಭವನ ಟ್ರಸ್ಟ್
ಕಾಂಗ್ರೆಸ್ ಭವನ ಟ್ರಸ್ಟ್ ಯಾವ ಕಾಯ್ದೆ ಅಡಿ ನೋಂದಣಿಯಾಗಿದೆ ಎಂಬುದರ ಕುರಿತು ಇಲಾಖೆಯು ಪ್ರಶ್ನಿಸಿತ್ತು.
ಸರ್ಕಾರಿ ಜಾಗ ಮಂಜೂರು ಮಾಡಿಸಿಕೊಳ್ಳುತ್ತಿರುವ ಕಾಂಗ್ರೆಸ್ ಭವನ ಟ್ರಸ್ಟ್, ಯಾವ ಕಾಯ್ದೆಯಡಿ ನೋಂದಣಿಯಾಗಿದೆ?
ಹಿಂದುಳಿದ ಮತ್ತು ನಾಯಕ ಜನಾಂಗದವರ ಸ್ಮಶಾನಕ್ಕೆ ಮೀಸಲಿಟ್ಟಿರುವುದು ಮತ್ತು ಒಕ್ಕಲಿಗರ ಸಮುದಾಯ ಭವನ, ಪೌರ ಕಾರ್ಮಿಕರು, ಸಫಾಯಿ ಕರ್ಮಚಾರಿಗಳಿಗೆ ನಿವೇಶನ, ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯ ಸ್ಥಾಪನೆ ಸೇರಿದಂತೆ ಇನ್ನಿತರೆ ಸಾರ್ವಜನಿಕ ಉದ್ದೇಶಗಳಿಗಾಗಿ ಕಾಯ್ದಿರಿಸಿದ್ದ ಸರ್ಕಾರಿ ಜಮೀನನ್ನು ಕಾಂಗ್ರೆಸ್ ಭವನ ಟ್ರಸ್ಟ್‌ಗೆ ಮಂಜೂರು ಮಾಡಲು ಸಚಿವ ಸಂಪುಟವು ಈಚೆಗಷ್ಟೇ ಅನುಮೋದನೆ ನೀಡಿತ್ತು.
ಹಿಂದುಳಿದ ಜಾತಿಗಳ ಜನರ ಸ್ಮಶಾನ, ನಿವೇಶನ ಉದ್ದೇಶದ ಸರ್ಕಾರಿ ಭೂಮಿ ಮೇಲೂ ಕಾಂಗ್ರೆಸ್ ಭವನ ಟ್ರಸ್ಟ್‌ನ ಕಣ್ಣು
ಚಿಕ್ಕಬಳ್ಳಾಪುರ ತಾಲೂಕು ನಂದಿ ಹೋಬಳಿಯ ಅಗಲಕುರ್ಕಿ ಗ್ರಾಮದಲ್ಲಿ ಅನುಮೋದಿತ ಬಡಾವಣೆಯಲ್ಲಿ ನಿವೇಶನ ಕೋರಿದ್ದರು. ಆದರೀಗ ನಗರಾಭಿವೃದ್ದಿ ಇಲಾಖೆಯು ಸ್ಥಳವನ್ನು ಬದಲಾಯಿಸಿತ್ತು.
ಕಾಂಗ್ರೆಸ್ ಭವನ ಟ್ರಸ್ಟ್‌ಗೆ ‘ಪುಕ್ಕಟೆ’ಯಾಗಿ ಸಿ ಎ ನಿವೇಶನ; ಬೊಕ್ಕಸಕ್ಕೆ ನಷ್ಟವಾದರೂ ಸಚಿವ ಸಂಪುಟಕ್ಕೆ ಕಡತ ಮಂಡನೆ
ಚಿಕ್ಕಬಳ್ಳಾಪುರ ಜಿಲ್ಲೆಗೆ ಉಸ್ತುವಾರಿ ಸಚಿವ ಉನ್ನತ ಶಿಕ್ಷಣ ಸಚಿವ ಡಾ ಎಂ ಸಿ ಸುಧಾಕರ್ ಅವರ ಸೂಚನೆಯಂತೆ ನಗರಾಭಿವೃದ್ದಿ ಇಲಾಖೆಯು ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೆಸ್ ಭವನದ ಕಟ್ಟಡ ನಿರ್ಮಾಣಕ್ಕೆ ನಿವೇಶನವನ್ನು ಮಂಜೂರು ಮಾಡಲು ತಯಾರಿ ನಡೆಸಿತ್ತು. ಈ ಕುರಿತು ‘ದಿ ಫೈಲ್’, ಮೇ 5ರಂದೇ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.
ಕಾಂಗ್ರೆಸ್ ಭವನಗಳಿಗೆ ಸಿ ಎ ನಿವೇಶನ!; ಬಹುಕೋಟಿ ಬೆಲೆಯಿದ್ದರೂ ಉಚಿತ ಮಂಜೂರಿಗೆ ತರಾತುರಿ
ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ವ್ಯಾಪ್ತಿ ಮತ್ತು ವಶದಲ್ಲಿರುವ ನಿವೇಶನವನ್ನು ಜಿಲ್ಲಾ ಕಾಂಗ್ರೆಸ್ ಭವನ ಕಟ್ಟಡ ನಿರ್ಮಾಣಕ್ಕೆ ಜಮೀನು ಮಂಜೂರು ಮಾಡಲು ಸಚಿವ ಸಂಪುಟವು ಅನುಮೋದಿಸಿತ್ತು.
ಕಾಂಗ್ರೆಸ್ ಪಕ್ಷಕ್ಕೆ ನಗರ ಪಾಲಿಕೆ ಆಸ್ತಿ ಮಂಜೂರು; ಬಿಜೆಪಿ ಹಾದಿ ತುಳಿದ ಕಾಂಗ್ರೆಸ್, ಕಡಿಮೆ ಬೆಲೆ ನಿಗದಿಯೇಕೆ?
ಆದರೀಗ ಆರ್ಥಿಕ ಇಲಾಖೆಯು ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಯ ಆಸ್ತಿಯನ್ನು ಮಂಜೂರು ಮಾಡುವ ಪ್ರಸ್ತಾವನೆಯನ್ನು ಸಚಿವ ಸಂಪುಟದ ಮುಂದೆ ಮಂಡಿಸಲು ಒಪ್ಪಿಗೆ ಸೂಚಿಸಿತ್ತು. ಇದರ ಅಭಿಪ್ರಾಯದ ಮೇರೆಗೆ ಸಚಿವ ಸಂಪುಟವೂ 2025ರ ಫೆ.20ರಂದು ನಡೆದ ಸಭೆಯಲ್ಲಿ ಮಂಜೂರು ಮಾಡಿತ್ತು.
ಕಚೇರಿ ನಿರ್ಮಾಣಕ್ಕೆ ಪಾಲಿಕೆ ಆಸ್ತಿ ಮೇಲೆ ಕಣ್ಣು ಹಾಕಿದ ಕೆಪಿಸಿಸಿ; ಕಡಿಮೆ ಬೆಲೆಯಲ್ಲಿ ಮಂಜೂರಾತಿಗೆ ಒತ್ತಡ
ಭಾರತೀಯ ಜನತಾ ಪಾರ್ಟಿಯು ತಾಲೂಕು ಪ್ರದೇಶಗಳಲ್ಲಿ ಸ್ವಂತ ಕಚೇರಿಗಾಗಿ ಕಟ್ಟಡ ನಿರ್ಮಾಣ ಮಾಡಲು ಪರಿಶಿಷ್ಟ ಜಾತಿಯ ಸರ್ಕಾರಿ ವಿದ್ಯಾರ್ಥಿ ನಿಲಯಗಳೂ ಸೇರಿದಂತೆ ಸಾರ್ವಜನಿಕ ಉದ್ದೇಶಕ್ಕೆ ಕಾಯ್ದಿರಿಸಿರುವ ನಿವೇಶನ, ಜಮೀನುಗಳ ಮೇಲೆ ಕಣ್ಣು ಹಾಕಿತ್ತು.
ಬಿಜೆಪಿ ಕಚೇರಿ ಕಟ್ಟಡ ನಿರ್ಮಾಣಕ್ಕೆ ಪರಿಶಿಷ್ಟರ ವಿದ್ಯಾರ್ಥಿ ನಿಲಯಕ್ಕೆ ಮೀಸಲಾದ ನಿವೇಶನ!; ಕಾರಜೋಳರ ಒತ್ತಡ?
ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ರಾಷ್ಟ್ರೋತ್ಥಾನ ಪರಿಷತ್, ಜನಸೇವಾ ಟ್ರಸ್ಟ್ ಸೇರಿದಂತೆ ಸಂಘ ಪರಿವಾರದ ಇನ್ನಿತರೆ ಸಂಘ ಸಂಸ್ಥೆಗಳಿಗೂ ಗೋಮಾಳ, ಸರ್ಕಾರಿ ಜಮೀನು, ಬಿ ಖರಾಬು ಜಮೀನುಗಳನ್ನು ಚಿಲ್ಲರೆ ದರದಲ್ಲಿ ಮಂಜೂರು ಮಾಡಿತ್ತು.
ರಾಷ್ಟ್ರೋತ್ಥಾನ ಪರಿಷತ್, ಬಿಜೆಪಿ ಕಚೇರಿಗೆ ಗೋಮಾಳ, ಜಮೀನು ಹಂಚಿಕೆ ಸುತ್ತ ‘ದಿ ಫೈಲ್’ನ 13 ವರದಿಗಳು
ಇದೀಗ ಕಾಂಗ್ರೆಸ್ ಸರ್ಕಾರವು ಸಹ ಜಿಲ್ಲಾ ಕೇಂದ್ರಗಳಲ್ಲಿ ಕಾಂಗ್ರೆಸ್ ಭವನಗಳಿಗೆ ಕಟ್ಟಡ ನಿರ್ಮಾಣಕ್ಕೆ ನಗರಾಭಿವೃದ್ಧಿ ಪ್ರಾಧಿಕಾರಗಳ ಅಧೀನದಲ್ಲಿ ಮತ್ತು ನಾಗರಿಕ ಸೌಲಭ್ಯಗಳಿಗೆಂದು ಮೀಸಲಿರಿಸಿರುವ ನಿವೇಶನಗಳ ಮೇಲೆ ಕಣ್ಣು ಹಾಕಿರುವುದು ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಗಿದೆ.









