ಬೆಂಗಳೂರು; ಕಂದಾಯ, ನಗರಾಭಿವೃದ್ಧಿ ಇಲಾಖೆ ಅಧೀನದಲ್ಲಿರುವ ವಿವಿಧ ಸಕ್ಷಮ ಪ್ರಾಧಿಕಾರಗಳ ವ್ಯಾಪ್ತಿಯಲ್ಲಿನ ಸರ್ಕಾರಿ ಭೂಮಿ, ಸಿ ಎ ನಿವೇಶನಗಳನ್ನು ಮಂಜೂರು ಮಾಡಿಸಿಕೊಳ್ಳುತ್ತಿರುವ ಕಾಂಗ್ರೆಸ್ ಭವನ ಟ್ರಸ್ಟ್, ಯಾವ ಕಾಯ್ದೆ ಅಡಿ ನೋಂದಣಿಯಾಗಿದೆ ಎಂಬ ಬಗ್ಗೆ ಯಾವುದೇ ದಾಖಲೆಗಳನ್ನೂ ಇಲಾಖೆಗಳಿಗೆ ನೀಡದೇ ಇರುವುದು ಇದೀಗ ಬಹಿರಂಗವಾಗಿದೆ.
ಸರ್ಕಾರದ ವಿವಿಧ ಇಲಾಖೆಗಳ ಹೆಸರಿನಲ್ಲಿರುವ ವಿವಿಧ ಸ್ವರೂಪದ ಮತ್ತು ವಿವಿಧ ಸಾರ್ವಜನಿಕ ಉದ್ದೇಶಗಳಿಗೆ, ನಾಗರಿಕ ಸೌಲಭ್ಯ ಉದ್ದೇಶಗಳಿಗೆ ಮೀಸಲಿರಿಸಿರುವ ಮತ್ತು ಕಾಯ್ದಿರಿಸಿರುವ ಸರ್ಕಾರಿ ಜಮೀನುಗಳನ್ನು ಶರವೇಗದಲ್ಲಿ ಮಂಜೂರು ಮಾಡಿಸಿಕೊಳ್ಳುತ್ತಿರುವ ಕಾಂಗ್ರಸ್ ಭವನ ಟ್ರಸ್ಟ್, ಯಾವ ಕಾಯ್ದೆಯಡಿ ನೋಂದಣಿ ಆಗಿದೆ ಎಂಬ ಬಗ್ಗೆ ಯಾವುದೇ ದಾಖಲೆಯನ್ನೂ ಇಲಾಖೆಗಳು, ಸಕ್ಷಮ ಪ್ರಾಧಿಕಾರಗಳಿಗೆ ಒದಗಿಸುತ್ತಿಲ್ಲ.
ಶೈಕ್ಷಣಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಸ್ಥೆಗಳಿಗೆ ಮಾತ್ರ ಮಂಜೂರು ಮಾಡಲು ಅವಕಾಶಗಳಿದ್ದರೂ ಸಹ ಇದನ್ನು ಬದಿಗಿರಿಸಿ, ಕಾಂಗ್ರೆಸ್ ಭವನ ಟ್ರಸ್ಟ್ ಗೆ ಜಮೀನು, ನಿವೇಶನ ಮಂಜೂರು ಮಾಡಿಸಿಕೊಳ್ಳಲು ಇಲಾಖೆಗಳ ಮೇಲೆ ರಾಜ್ಯ ಕಾಂಗ್ರೆಸ್ ಸರ್ಕಾರವು, ಇಲಾಖೆಗಳ ಮುಖ್ಯಸ್ಥರ ಮೇಲೆ ಒತ್ತಡ ಹೇರುತ್ತಿದೆ.
ಮುಧೋಳ ತಾಲೂಕಿನ ಇಂಗಳಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪ್ರಕರಣದಲ್ಲಿ ಕಾಂಗ್ರೆಸ್ ಭವನ ಟ್ರಸ್ಟ್ ನೋಂದಾವಣೆ ಬಗ್ಗೆ ಇಲಾಖೆ ಮಟ್ಟದಲ್ಲಿ ಚರ್ಚೆಗಳು ನಡೆದಿವೆ.
ಇದಕ್ಕೆ ಸಂಬಂಧಿಸಿದಂತೆ ‘ದಿ ಫೈಲ್’ಗೆ ಕೆಲವು ಟಿಪ್ಪಣಿ ಹಾಳೆಗಳು ಲಭ್ಯವಾಗಿವೆ.
ಲಭ್ಯವಿರುವ ಟಿಪ್ಪಣಿ ಹಾಳೆಗಳಲ್ಲಿ ‘ ಕಾಂಗ್ರೆಸ್ ಭವನ ಟ್ರಸ್ಟ್, ಯಾವ ಕಾಯ್ದೆ ಅಡಿ ನೋಂದಣಿ ಆಗಿದೆ’ ಎಂಬ ಕುರಿತು ಚರ್ಚೆಯಾಗಿರುವುದು ಗೊತ್ತಾಗಿದೆ.
ಪರೋಪಕಾರಿಯೋ ಅಥವಾ ಚಾರಿಟಬಲ್ ?
ಕರ್ನಾಟಕ ಯೋಜನಾ ಪ್ರಾಧಿಕಾರಗಳು (ನಾಗರಿಕ ಸೌಕರ್ಯ ನಿವೇಶನಗಳ ಹಂಚಿಕೆ )ನಿಯಮಗಳು 2016ರ ನಿಯಮ (3)ರ ಉಪ ನಿಯಮ (1)ರಲ್ಲಿ ಪ್ರಾಧಿಕಾರವು ನಾಗರಿಕ ಸೌಲಭ್ಯಕ್ಕಾಗಿ ಮೀಸಲಿಟ್ಟ ಜಾಗವನ್ನು ಕೇಂfರ ಮತ್ತು ರಾಜ್ಯ ಸರ್ಕಾರ, ಶಾಸನಬದ್ಧ ಸಂಸ್ಥೆಗಳು, ಸ್ಥಳೀಯ ಪ್ರಾಧಿಕಾರಗಳು ಹಾಗೂ ಸಂಸ್ಥೆಗಳಿಗೆ ಗುತ್ತಿಗೆ ನೀಡುವ ಅಧಿಕಾರ ಹೊಂದಿದೆ ಎಂದು ತಿಳಿಸಿದೆ.
ನಾಗರಿಕ ಸೌಲಭ್ಯಗಳ ಬಗ್ಗೆ ಕರ್ನಾಟಕ ಯೋಜನಾ ಪ್ರಾಧಿಕಾರಗಳು (ನಾಗರಿಕ ಸೌಕರ್ಯ ನಿವೇಶನಗಳ ಹಂಚಿಕೆ) ನಿಯಮಗಳು 2016ರ ನಿಯಮ (2) (ಸಿ)(1)ರಲ್ಲಿ ಕೇಂದ್ರ ಅಥವಾ ರಾಜ್ಯ ಸರ್ಕಾರದ ಇಲಾಖೆ, ಶಾಸನಬದ್ಧ ಸಂಸ್ಥೆ ಮತ್ತು ಸ್ಥಳೀಯ ಪ್ರಾಧಿಕಾರ ಒದಗಿಸಲಾಗುವ ನಾಗರಿಕ ಸೌಲಭ್ಯಗಳ ಬಗ್ಗೆ ಸ್ಪಷ್ಟವಾಗಿ ತಿಳಿಸಿದೆ.
‘ಲಾಭರಹಿತ ಆಧಾರದ ಮೇಲೆ ಸಂಸ್ಥೆ ನಡೆಸುವ ಸೌಲಭ್ಯಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಲಾಭರಹಿತ ಆರೋಗ್ಯ ಸೌಲಭ್ಯಗಳು, ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆ ಕೇಂದ್ರಗಳು, ದತ್ತಿ ಅಥವಾ ಲೋಕೋಪಕಾರಿ ಸೇವೆಗಳು,’ ಮಾತ್ರ ನಾಗರಿಕ ಸೌಲಭ್ಯ ಎಂದು ವರ್ಗೀಕರಿಸಿದೆ.
ನಿಯಮ 2 (ಎಫ್)ನಲ್ಲಿ ‘ಸಂಸ್ಥೆ ಎಂದರೆ ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960 ಅಥವಾ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ರ ಅಡಿಯಲ್ಲಿ ನೋಂದಾಯಿಸಲಾದ ಸಂಘ ಅಥವಾ ಸಂಘ ಅಥವಾ ಶೈಕ್ಷಣಿಕ, ಧಾರ್ಮಿಕ ಅಥವಾ ಸಾಂಸ್ಕೃತಿಕ ಸಂಸ್ಥೆಯಾಗಿರಬಹುದಾದ ದತ್ತಿ ಉದ್ದೇಶಕ್ಕಾಗಿ ಸಂಪೂರ್ಣವಾಗಿ ರಚಿಸಲಾದ ಟ್ರಸ್ಟ್,’ ಎಂದು ವಿವರಿಸಿದೆ.
‘ನಿಯಮ 2(ಸಿ)(1) ಮತ್ತು ನಿಯಮ 2(f) ರ ಪ್ರಕಾರ ಸದರಿ ಸಂಸ್ಥೆಯು ಟ್ರಸ್ಟ್ ಆಗಿ ನೋಂದಣಿಯಾಗಿದೆ. ನೋಂದಣಿ ಪತ್ರದಲ್ಲಿ ಯಾವ ಕಾಯ್ದೆಯಡಿ ನೋಂದಣಿಯಾಗಿದೆ ಎಂಬುದು ಕಂಡುಬಂದಿಲ್ಲ. ಆದಾಯ ತೆರಿಗೆ ವಿನಾಯ್ತಿ, ಚಾರಿಟಬಲ್ ಟ್ರಸ್ಟ್ ಅಥವಾ ಪರೋಪಕಾರಿ ಸೇವೆಗಳ ಬಗ್ಗೆ ಯಾವುದೇ ದಾಖಲಾತಿ ಸಲ್ಲಿಸಿಲ್ಲ,’ ಎಂದು ಟಿಪ್ಪಣಿ ಹಾಳೆಯಲ್ಲಿ ಪ್ರಸ್ತಾವಿಸಿರುವುದು ಗೊತ್ತಾಗಿದೆ.
ಹಿಂದುಳಿದ ಮತ್ತು ನಾಯಕ ಜನಾಂಗದವರ ಸ್ಮಶಾನಕ್ಕೆ ಮೀಸಲಿಟ್ಟಿರುವುದು ಮತ್ತು ಒಕ್ಕಲಿಗರ ಸಮುದಾಯ ಭವನ, ಪೌರ ಕಾರ್ಮಿಕರು, ಸಫಾಯಿ ಕರ್ಮಚಾರಿಗಳಿಗೆ ನಿವೇಶನ, ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯ ಸ್ಥಾಪನೆ ಸೇರಿದಂತೆ ಇನ್ನಿತರೆ ಸಾರ್ವಜನಿಕ ಉದ್ದೇಶಗಳಿಗಾಗಿ ಕಾಯ್ದಿರಿಸಿದ್ದ ಸರ್ಕಾರಿ ಜಮೀನನ್ನು ಕಾಂಗ್ರೆಸ್ ಭವನ ಟ್ರಸ್ಟ್ಗೆ ಮಂಜೂರು ಮಾಡಲು ಸಚಿವ ಸಂಪುಟವು ಈಚೆಗಷ್ಟೇ ಅನುಮೋದನೆ ನೀಡಿದೆ.
ಹಿಂದುಳಿದ ಜಾತಿಗಳ ಜನರ ಸ್ಮಶಾನ, ನಿವೇಶನ ಉದ್ದೇಶದ ಸರ್ಕಾರಿ ಭೂಮಿ ಮೇಲೂ ಕಾಂಗ್ರೆಸ್ ಭವನ ಟ್ರಸ್ಟ್ನ ಕಣ್ಣು
ರಾಜ್ಯದ ನಗರಾಭಿವೃದ್ದಿ ಪ್ರಾಧಿಕಾರಗಳ ವ್ಯಾಪ್ತಿಯಲ್ಲಿನ ಬಡಾವಣೆಗಳಲ್ಲಿ ನಾಗರೀಕ ಸೌಲಭ್ಯಗಳ ಉದ್ದೇಶಗಳಿಗಾಗಿ ಮೀಸಲಿಟ್ಟ ನಿವೇಶನಗಳನ್ನು ಮಂಜೂರು ಮಾಡಿಸಿಕೊಳ್ಳುತ್ತಿರುವ ಕಾಂಗ್ರೆಸ್ ಭವನ ಟ್ರಸ್ಟ್, ಇದೀಗ ಕಂದಾಯ ಇಲಾಖೆ ವ್ಯಾಪ್ತಿಯಲ್ಲಿನ ಸರ್ಕಾರಿ ಜಮೀನುಗಳನ್ನೂ ಮಂಜೂರು ಮಾಡಿಸಿಕೊಳ್ಳಲು ಹೊರಟಿದೆ. ಅಲ್ಲದೇ ಸರ್ಕಾರಿ ಜಮೀನು ಮಂಜೂರು ಮಾಡಿಸಿಕೊಳ್ಳಲು ಭೂ ಮಂಜೂರಾತಿ ನಿಯಮಗಳನ್ನೂ ಸಡಿಲಿಸಲು ಸಚಿವ ಸಂಪುಟವು ಒಪ್ಪಿಗೆ ನೀಡಿದೆ.
ಚಿಕ್ಕಬಳ್ಳಾಪುರ ತಾಲೂಕು ನಂದಿ ಹೋಬಳಿಯ ಅಗಲಕುರ್ಕಿ ಗ್ರಾಮದಲ್ಲಿ ಅನುಮೋದಿತ ಬಡಾವಣೆಯಲ್ಲಿ ನಿವೇಶನ ಕೋರಿದ್ದರು. ಆದರೀಗ ನಗರಾಭಿವೃದ್ದಿ ಇಲಾಖೆಯು ಸ್ಥಳವನ್ನು ಬದಲಾಯಿಸಿತ್ತು.
ಕಾಂಗ್ರೆಸ್ ಭವನ ಟ್ರಸ್ಟ್ಗೆ ‘ಪುಕ್ಕಟೆ’ಯಾಗಿ ಸಿ ಎ ನಿವೇಶನ; ಬೊಕ್ಕಸಕ್ಕೆ ನಷ್ಟವಾದರೂ ಸಚಿವ ಸಂಪುಟಕ್ಕೆ ಕಡತ ಮಂಡನೆ
ಚಿಕ್ಕಬಳ್ಳಾಪುರ ಜಿಲ್ಲೆಗೆ ಉಸ್ತುವಾರಿ ಸಚಿವ ಉನ್ನತ ಶಿಕ್ಷಣ ಸಚಿವ ಡಾ ಎಂ ಸಿ ಸುಧಾಕರ್ ಅವರ ಸೂಚನೆಯಂತೆ ನಗರಾಭಿವೃದ್ದಿ ಇಲಾಖೆಯು ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೆಸ್ ಭವನದ ಕಟ್ಟಡ ನಿರ್ಮಾಣಕ್ಕೆ ನಿವೇಶನವನ್ನು ಮಂಜೂರು ಮಾಡಲು ತಯಾರಿ ನಡೆಸಿತ್ತು. ಈ ಕುರಿತು ‘ದಿ ಫೈಲ್’, ಮೇ 5ರಂದೇ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.
ಕಾಂಗ್ರೆಸ್ ಭವನಗಳಿಗೆ ಸಿ ಎ ನಿವೇಶನ!; ಬಹುಕೋಟಿ ಬೆಲೆಯಿದ್ದರೂ ಉಚಿತ ಮಂಜೂರಿಗೆ ತರಾತುರಿ
ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ವ್ಯಾಪ್ತಿ ಮತ್ತು ವಶದಲ್ಲಿರುವ ನಿವೇಶನವನ್ನು ಜಿಲ್ಲಾ ಕಾಂಗ್ರೆಸ್ ಭವನ ಕಟ್ಟಡ ನಿರ್ಮಾಣಕ್ಕೆ ಜಮೀನು ಮಂಜೂರು ಮಾಡಲು ಸಚಿವ ಸಂಪುಟವು ಅನುಮೋದಿಸಿತ್ತು.
ಕಾಂಗ್ರೆಸ್ ಪಕ್ಷಕ್ಕೆ ನಗರ ಪಾಲಿಕೆ ಆಸ್ತಿ ಮಂಜೂರು; ಬಿಜೆಪಿ ಹಾದಿ ತುಳಿದ ಕಾಂಗ್ರೆಸ್, ಕಡಿಮೆ ಬೆಲೆ ನಿಗದಿಯೇಕೆ?
ಆದರೀಗ ಆರ್ಥಿಕ ಇಲಾಖೆಯು ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಯ ಆಸ್ತಿಯನ್ನು ಮಂಜೂರು ಮಾಡುವ ಪ್ರಸ್ತಾವನೆಯನ್ನು ಸಚಿವ ಸಂಪುಟದ ಮುಂದೆ ಮಂಡಿಸಲು ಒಪ್ಪಿಗೆ ಸೂಚಿಸಿತ್ತು. ಇದರ ಅಭಿಪ್ರಾಯದ ಮೇರೆಗೆ ಸಚಿವ ಸಂಪುಟವೂ 2025ರ ಫೆ.20ರಂದು ನಡೆದ ಸಭೆಯಲ್ಲಿ ಮಂಜೂರು ಮಾಡಿತ್ತು.
ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್, ಶಾಸಕ ವಿನಯ್ ಕುಲಕರ್ಣಿ, ಪ್ರಸಾದ್ ಅಬ್ಬಯ್ಯ ಮತ್ತಿತರರು ಈ ಪ್ರಸ್ತಾವನೆಗೆ ಶಿಫಾರಸ್ಸು ಮಾಡಿದ್ದರು. ಇದನ್ನಾಧರಿಸಿ ಆರ್ಥಿಕ ಇಲಾಖೆಯ ಅಭಿಪ್ರಾಯ ಪಡೆಯಲು ಕಡತವನ್ನು ಪೌರಾಡಳಿತ ಇಲಾಖೆಯು ಕಡತವನ್ನು (DMA/DEV/OTH/285/2024) ಮಂಡಿಸಿದ್ದರು.
ಕಚೇರಿ ನಿರ್ಮಾಣಕ್ಕೆ ಪಾಲಿಕೆ ಆಸ್ತಿ ಮೇಲೆ ಕಣ್ಣು ಹಾಕಿದ ಕೆಪಿಸಿಸಿ; ಕಡಿಮೆ ಬೆಲೆಯಲ್ಲಿ ಮಂಜೂರಾತಿಗೆ ಒತ್ತಡ
ಕೆಪಿಸಿಸಿಗೆ ಕಾರ್ಯಾಲಯ ಕಚೇರಿ ನಿರ್ಮಾಣ ಮಾಡಲು ಉದ್ದೇಶಿತ ಆಸ್ತಿಯು ಮಹಾನಗರಪಾಲಿಕೆಯ ಆಸ್ತಿಯಾಗಿದೆ. ಸರ್ಕಾರವು ನಿಗದಿಪಡಿಸಿರುವ ಮಾರ್ಗಸೂಚಿಗಳ ರೀತಿ ಪಾಲಿಕೆಯ ಆಸ್ತಿಗಳನ್ನು ಕೆಲವು ಉದ್ದೇಶಗಳನ್ನು ಹೊರತುಪಡಿಸಿ ಸಾರ್ವಜನಿಕ ಹರಾಜು ಮೂಲಕ ಮಾರಾಟ ಮಾಡಲು ಅವಕಾಶವಿದೆ. ಈ ಪ್ರಕರಣದಲ್ಲಿಯೂ ಸಾರ್ವಜನಿಕ ಹರಾಜು ಮುಖಾಂತರವೇ ಆಸ್ತಿಯನ್ನು ಹಂಚಿಕೆ ಮಾಡಬೇಕಾಗಿದೆ ಎಂದು ತಿಳಿಸಿತ್ತು.
ಆದರೆ ಈ ಪ್ರಸ್ತಾವಿತ ವಿಷಯಕ್ಕೆ ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ಅನುಮೋದನೆ ಆಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ಧಾರವಾಡ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯ ನಿರ್ಮಾಣ ಮಾಡುವ ಸಲುವಾಗಿ ಜಾಗವನ್ನು ಮಂಜೂರು ಮಾಡಲು ಪ್ರಸ್ತಾವನೆ ಸಲ್ಲಿಸಿದ್ದಾರೆ. ಇದಕ್ಕೆ ತಗುಲುವ ವೆಚ್ಚವನ್ನು ಈಗಿನ ಸರ್ಕಾರದ ದರ ಅಥವಾ ಅದಕ್ಕಿಂತ ಕಡಿಮೆ ಬೆಲೆಯನ್ನು ಭರಿಸಲು ಸಿದ್ಧರಿದ್ದೇವೆ ಎಂದು ತಿಳಿಸಿದ್ದರು.
ಭಾರತೀಯ ಜನತಾ ಪಾರ್ಟಿಯು ತಾಲೂಕು ಪ್ರದೇಶಗಳಲ್ಲಿ ಸ್ವಂತ ಕಚೇರಿಗಾಗಿ ಕಟ್ಟಡ ನಿರ್ಮಾಣ ಮಾಡಲು ಪರಿಶಿಷ್ಟ ಜಾತಿಯ ಸರ್ಕಾರಿ ವಿದ್ಯಾರ್ಥಿ ನಿಲಯಗಳೂ ಸೇರಿದಂತೆ ಸಾರ್ವಜನಿಕ ಉದ್ದೇಶಕ್ಕೆ ಕಾಯ್ದಿರಿಸಿರುವ ನಿವೇಶನ, ಜಮೀನುಗಳ ಮೇಲೆ ಕಣ್ಣು ಹಾಕಿತ್ತು.
ಬಿಜೆಪಿ ಕಚೇರಿ ಕಟ್ಟಡ ನಿರ್ಮಾಣಕ್ಕೆ ಪರಿಶಿಷ್ಟರ ವಿದ್ಯಾರ್ಥಿ ನಿಲಯಕ್ಕೆ ಮೀಸಲಾದ ನಿವೇಶನ!; ಕಾರಜೋಳರ ಒತ್ತಡ?
ಪರಿಶಿಷ್ಟ ಜಾತಿಯ ಸರ್ಕಾರಿ ವಿದ್ಯಾರ್ಥಿ ನಿಲಯಗಳ ಕಟ್ಟಡ ನಿರ್ಮಾಣ ಸಂಬಂಧ ಕಾಯ್ದರಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಆಯುಕ್ತರು ವರದಿ ನೀಡಿದ್ದರೂ ಇದೇ ಜಾಗದಲ್ಲಿ ಭಾರತೀಯ ಜನತಾ ಪಕ್ಷದ ಕಚೇರಿ ಕಟ್ಟಡ ನಿರ್ಮಾಣ ಮಾಡಲು ಖಾಲಿ ನಿವೇಶನ ಮಂಜೂರು ಮಾಡಲು ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿದ್ದನ್ನು ಸ್ಮರಿಸಬಹುದು.
ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ರಾಷ್ಟ್ರೋತ್ಥಾನ ಪರಿಷತ್, ಜನಸೇವಾ ಟ್ರಸ್ಟ್ ಸೇರಿದಂತೆ ಸಂಘ ಪರಿವಾರದ ಇನ್ನಿತರೆ ಸಂಘ ಸಂಸ್ಥೆಗಳಿಗೂ ಗೋಮಾಳ, ಸರ್ಕಾರಿ ಜಮೀನು, ಬಿ ಖರಾಬು ಜಮೀನುಗಳನ್ನು ಚಿಲ್ಲರೆ ದರದಲ್ಲಿ ಮಂಜೂರು ಮಾಡಿತ್ತು.
ರಾಷ್ಟ್ರೋತ್ಥಾನ ಪರಿಷತ್, ಬಿಜೆಪಿ ಕಚೇರಿಗೆ ಗೋಮಾಳ, ಜಮೀನು ಹಂಚಿಕೆ ಸುತ್ತ ‘ದಿ ಫೈಲ್’ನ 13 ವರದಿಗಳು
ಇದೀಗ ಕಾಂಗ್ರೆಸ್ ಸರ್ಕಾರವು ಸಹ ಜಿಲ್ಲಾ ಕೇಂದ್ರಗಳಲ್ಲಿ ಕಾಂಗ್ರೆಸ್ ಭವನಗಳಿಗೆ ಕಟ್ಟಡ ನಿರ್ಮಾಣಕ್ಕೆ ನಗರಾಭಿವೃದ್ಧಿ ಪ್ರಾಧಿಕಾರಗಳ ಅಧೀನದಲ್ಲಿ ಮತ್ತು ನಾಗರಿಕ ಸೌಲಭ್ಯಗಳಿಗೆಂದು ಮೀಸಲಿರಿಸಿರುವ ನಿವೇಶನಗಳ ಮೇಲೆ ಕಣ್ಣು ಹಾಕಿರುವುದು ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಗಿದೆ.