Friday | September 4, 2026 |

ಕಾಂಗ್ರೆಸ್‌ ಭವನಗಳಿಗೆ ಸಿ ಎ ನಿವೇಶನ!; ಬಹುಕೋಟಿ ಬೆಲೆಯಿದ್ದರೂ ಉಚಿತ ಮಂಜೂರಿಗೆ ತರಾತುರಿ

ಬೆಂಗಳೂರು;  ರಾಜ್ಯದಲ್ಲಿರುವ ನಗರಾಭಿವೃದ್ಧಿ ಪ್ರಾಧಿಕಾರಗಳ ವ್ಯಾಪ್ತಿಯಲ್ಲಿ ನಾಗರಿಕ ಸೌಲಭ್ಯ ಉದ್ದೇಶಗಳಿಗಾಗಿಯೇ ಮೀಸಲಿರಿಸಿರುವ ನಿವೇಶನಗಳನ್ನು ಜಿಲ್ಲಾ ಮಟ್ಟದಲ್ಲಿ ಕಾಂಗ್ರೆಸ್ ಭವನಗಳಿಗೆ ಮಂಜೂರು ಮಾಡುವ ಪ್ರಕ್ರಿಯೆಯು ಬಿರುಸಿನಿಂದ ಸಾಗಿದೆ.

 

ಹುಬ್ಬಳ್ಳಿ ಮಹಾನಗರ ಪಾಲಿಕೆಗೆ ಸೇರಿದ ಜಾಗವನ್ನು ಧಾರವಾಡ ಜಿಲ್ಲಾ ಕಾಂಗ್ರೆಸ್​ ಕಚೇರಿ ನಿರ್ಮಾಣಕ್ಕೆ ಮಂಜೂರು ಮಾಡಿರುವ ಪ್ರಕರಣವು ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವ ಹೊತ್ತಿನಲ್ಲೇ ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೆಸ್‌ ಭವನ ಕಟ್ಟಡ ನಿರ್ಮಾಣಕ್ಕೂ ಸಿ ಎ ನಿವೇಶನ ಉಚಿತವಾಗಿ ಮಂಜೂರು ಮಾಡಬೇಕು ಎಂದು  ಕೋರಿರುವ ಪ್ರಸ್ತಾವನೆಯು ಮುನ್ನೆಲೆಗೆ ಬಂದಿದೆ.

 

ಇದಕ್ಕೆ ಸಂಬಂಧಿಸಿದಂತೆ ಕೆಲವು ದಾಖಲೆಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ರಾಷ್ಟ್ರೋತ್ಥಾನ ಪರಿಷತ್‌, ಜನಸೇವಾ ಟ್ರಸ್ಟ್‌ ಸೇರಿದಂತೆ ಸಂಘ ಪರಿವಾರದ ಇನ್ನಿತರೆ ಸಂಘ ಸಂಸ್ಥೆಗಳಿಗೂ ಗೋಮಾಳ, ಸರ್ಕಾರಿ ಜಮೀನು, ಬಿ ಖರಾಬು ಜಮೀನುಗಳನ್ನು ಚಿಲ್ಲರೆ ದರದಲ್ಲಿ ಮಂಜೂರು ಮಾಡಿತ್ತು.

 

ರಾಷ್ಟ್ರೋತ್ಥಾನ ಪರಿಷತ್‌, ಬಿಜೆಪಿ ಕಚೇರಿಗೆ ಗೋಮಾಳ, ಜಮೀನು ಹಂಚಿಕೆ ಸುತ್ತ ‘ದಿ ಫೈಲ್‌’ನ 13 ವರದಿಗಳು

 

ಇದೀಗ ಕಾಂಗ್ರೆಸ್‌ ಸರ್ಕಾರವು ಸಹ ಜಿಲ್ಲಾ ಕೇಂದ್ರಗಳಲ್ಲಿ ಕಾಂಗ್ರೆಸ್‌ ಭವನಗಳಿಗೆ ಕಟ್ಟಡ ನಿರ್ಮಾಣಕ್ಕೆ ನಗರಾಭಿವೃದ್ಧಿ ಪ್ರಾಧಿಕಾರಗಳ ಅಧೀನದಲ್ಲಿ ಮತ್ತು ನಾಗರಿಕ ಸೌಲಭ್ಯಗಳಿಗೆಂದು ಮೀಸಲಿರಿಸಿರುವ ನಿವೇಶನಗಳ ಮೇಲೆ ಕಣ್ಣು ಹಾಕಿರುವುದು ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಗಿದೆ.

 

ವಿಶೇಷವೆಂದರೇ ಉನ್ನತ ಶಿಕ್ಷಣ ಸಚಿವ ಡಾ ಎಂ ಸಿ ಸುಧಾಕರ್‍‌ ಅವರು ಚಿಕ್ಕಬಳ್ಳಾಪುರ ಜಿಲ್ಲೆಗೆ  ಉಸ್ತುವಾರಿ ಸಚಿವರಾಗಿದ್ದಾರೆ. ಇವರ ಸೂಚನೆಯಂತೆ ನಗರಾಭಿವೃದ್ದಿ ಇಲಾಖೆಯು ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೆಸ್‌ ಭವನದ ಕಟ್ಟಡ ನಿರ್ಮಾಣಕ್ಕೆ ನಿವೇಶನವನ್ನು ಮಂಜೂರು ಮಾಡಲು ತಯಾರಿ ನಡೆಸಿದೆ.

 

ಕಾಂಗ್ರೆಸ್‌ ಜಿಲ್ಲಾಧ್ಯಕ್ಷರ ಮನವಿಯಲ್ಲೇನಿದೆ?

 

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಾಂಗ್ರೆಸ್‌ ಭವನ ಟ್ರಸ್ಟ್‌ಗೆ ಉಚಿತವಾಗಿ ನಿವೇಶನವನ್ನು ಮಂಜೂರು ಮಾಡಬೇಕು ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಕೆ ಎನ್‌ ಕೇಶವರೆಡ್ಡಿ ಅವರು 2024ರ ಡಿಸೆಂಬರ್‍‌ 4ರಂದು ನಗರಾಭಿವೃದ್ದಿ ಸಚಿವ ಬೈರತಿ ಸುರೇಶ್‌ ಅವರಿಗೆ ಮನವಿ ಸಲ್ಲಿಸಿದ್ದರು.

 

ಚಿಕ್ಕಬಳ್ಳಾಪುರ ತಾಲೂಕು ನಂದಿ ಹೋಬಳಿಯ ಅಗಲಕುರ್ಕಿ ಗ್ರಾಮದ ಸರ್ವೆ ನಂಬರ್‍‌ 89/1, 89/2, 89/3 ಹಾಗೂ ಸರ್ವೆ ನಂಬರ್‍‌ 90, 91ರಲ್ಲಿ ಒಟ್ಟು 7 ಎಕರೆ 17 ಗುಂಟೆ ವಿಸ್ತೀರ್ಣದ ಪ್ರದೇಶದಲ್ಲಿ ವಸತಿ ಬಡಾವಣೆಗೆ ನಕ್ಷೆ ಅನುಮೋದನೆಯಾಗಿದೆ.  ಈ ಬಡಾವಣೆಯಲ್ಲಿರುವ 1,507.57 ಚ ಮೀ ಅಳತೆಯ ನಿವೇಶನವನ್ನು ನಾಗರಿಕ ಸೌಲಭ್ಯ  ನಿವೇಶನಕ್ಕಾಗಿ ಕಾಯ್ದರಿಸಿದೆ. ಈ ಜಮೀನನ್ನು ಜಿಲ್ಲಾ ಕಾಂಗ್ರೆಸ್‌ ಭವನ ಟ್ರಸ್ಟ್‌ಗೆ ಉಚಿತವಾಗಿ ಮಂಜೂರು ಮಾಡಬೇಕು ಎಂದು ಕೋರಿರುವುದು ಪತ್ರದಿಂದ ಗೊತ್ತಾಗಿದೆ.

 

 

7 ಎಕರೆ 17 ಗುಂಟೆ ವಿಸ್ತೀರ್ಣದ ಜಮೀನಿನಲ್ಲಿ ಖಾಸಗಿ ಬಡಾವಣೆ ಅಭಿವೃದ್ಧಿಗೊಂಡಿದೆ. ಈ ಖಾಸಗಿ ಬಡಾವಣೆಯಲ್ಲಿ 1,507.57 ಚ ಮೀ ಅಳತೆಯ ನಿವೇಶನವು ನಾಗರಿಕ ಸೌಕರ್ಯಗಳಿಗೆ ಮೀಸಲಿರಿಸಿದೆ. ಈ ನಿವೇಶನವನ್ನು ಕಾಂಗ್ರೆಸ್‌ ಭವನ ಟ್ರಸ್ಟ್‌ಗೆ ಕಟ್ಟಡ ನಿರ್ಮಾಣ ಮಾಡಲು ನಿವೇಶನದ ಒಟ್ಟು ಅಳತೆ 1,507.57 ಚ ಮೀ ಇದ್ದು ಉಪ ನೋಂದಣಿ ಮೌಲ್ಯ (ಎಸ್‌ ಆರ್‍‌ ವ್ಯಾಲ್ಯು) ಚ ಮೀಟರ್‍‌ಗೆ 10,500 ರು ಇದೆ. ಒಟ್ಟು 1,58,29,500 ರು ಗಳಾಗಲಿದೆ. ಪ್ರಾರಂಭಿಕ ಠೇವಣಿ ಶೇ. 10ರಷ್ಟು ಎಂದರೆ 15,82, 950 ರುಗಳನ್ನು ಪಾವತಿಸಬೇಕು ಎಂದು ತಿಳಿಸಿದೆ  ಎಂಬ ಮಾಹಿತಿಯು ಪತ್ರದಿಂದ ತಿಳಿದು ಬಂದಿದೆ.

 

ಉಚಿತ ಮಂಜೂರಿಗೆ ಕೋರಿದ ಜಿಲ್ಲಾ ಕಾಂಗ್ರೆಸ್‌

 

ಅಗಲಕುರ್ಕಿಯಲ್ಲಿನ ಖಾಸಗಿ ಬಡಾವಣೆಯಲ್ಲಿರುವ ಸಿ ಎ ನಿವೇಶನವನ್ನು ಉಚಿತವಾಗಿ ಮಂಜೂರು ಮಾಡಬೇಕು ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೆ ಎನ್‌ ಕೇಶವರೆಡ್ಡಿ ಅವರು ಮನವಿಯಲ್ಲಿ ಕೋರಿದ್ದಾರೆ.

 

‘ಅಗಲಕುರ್ಕಿ ಗ್ರಾಮದ ಸರ್ವೆ ನಂಬರ್‍‌ 89/1, 89/2, 89/3, 90/ 91ರಲ್ಲಿ 07-17 ಗುಂಟೆ ವಿಸ್ತೀರ್ಣದ ಜಮೀನಿನಲ್ಲಿ ಅಭಿವೃದ್ಧಿಪಡಿಸಿರುವ ಖಾಸಗಿ ಬಡಾವಣೆಯಲ್ಲಿ 1,507.57 ಚ ಮೀಟರ್‍‌ ವಿಸ್ತೀರ್ಣ ಹೊಂದಿರುವ ನಾಗರಿಕ ಸೌಲಭ್ಯ ನಿವೇಶನವನ್ನು ಕಾಂಗ್ರೆಸ್‌ ಭವನ ಟ್ರಸ್ಟ್‌ಗೆ ಕಟ್ಟಡ ನಿರ್ಮಾಣ ಮಾಡಲು ಉಚಿತವಾಗಿ ನಿವೇಶವನ್ನು ಮಂಜೂರು ಮಾಡಬೇಕು ಮತ್ತು ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು,’ ಎಂದು ಕೇಶವರೆಡ್ಡಿ ಅವರು ಸಚಿವ ಬೈರತಿ ಸುರೇಶ್‌ ಅವರಿಗೆ ಕೋರಿರುವುದು ಪತ್ರದಿಂದ ತಿಳಿದು ಬಂದಿದೆ.

 

ಸಚಿವ ಸಂಪುಟಕ್ಕೆ ಮಂಡಿಸಲು ಒಪ್ಪಿಗೆ ನೀಡಿದ ಆರ್ಥಿಕ ಇಲಾಖೆ

 

ಈ ಸಂಬಂಧ ನಗರಾಭಿವೃದ್ಧಿ ಇಲಾಖೆಯು (ನಅಇ 15 ಬಿ ಇ ಎಂ 2025)  ಆರ್ಥಿಕ ಇಲಾಖೆಯ ಅಭಿಪ್ರಾಯವನ್ನು ಕೋರಿತ್ತು. ಈ ಪ್ರಸ್ತಾವನೆಯನ್ನು ಪರಿಶೀಲಿಸಿರುವ ಆರ್ಥಿಕ ಇಲಾಖೆಯು ಪ್ರಸ್ತಾವನೆಯನ್ನು ಸಚಿವ ಸಂಪುಟದ ಮುಂದೆ ಮಂಡಿಸಬೇಕು ಎಂದು ( ಆಇ 105/ವೆಚ್ಚ-9/2025, 23.04.205)  ಸೂಚಿಸಿದೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಅನುಮೋದಿಸಿರುವುದು ಪತ್ರದಿಂದ ಗೊತ್ತಾಗಿದೆ.

 

 

ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ವ್ಯಾಪ್ತಿ ಮತ್ತು ವಶದಲ್ಲಿರುವ ನಿವೇಶನವನ್ನು ಜಿಲ್ಲಾ ಕಾಂಗ್ರೆಸ್‌ ಭವನ ಕಟ್ಟಡ ನಿರ್ಮಾಣಕ್ಕೆ ಜಮೀನು ಮಂಜೂರು ಮಾಡಲು ಸಚಿವ ಸಂಪುಟವು ಅನುಮೋದಿಸಿತ್ತು.

 

ಕಾಂಗ್ರೆಸ್‌ ಪಕ್ಷಕ್ಕೆ ನಗರ ಪಾಲಿಕೆ ಆಸ್ತಿ ಮಂಜೂರು; ಬಿಜೆಪಿ ಹಾದಿ ತುಳಿದ ಕಾಂಗ್ರೆಸ್‌, ಕಡಿಮೆ ಬೆಲೆ ನಿಗದಿಯೇಕೆ?

 

ಆದರೀಗ ಆರ್ಥಿಕ ಇಲಾಖೆಯು ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಯ ಆಸ್ತಿಯನ್ನು ಮಂಜೂರು ಮಾಡುವ ಪ್ರಸ್ತಾವನೆಯನ್ನು ಸಚಿವ ಸಂಪುಟದ ಮುಂದೆ ಮಂಡಿಸಲು ಒಪ್ಪಿಗೆ ಸೂಚಿಸಿತ್ತು. ಇದರ ಅಭಿಪ್ರಾಯದ ಮೇರೆಗೆ ಸಚಿವ ಸಂಪುಟವೂ 2025ರ ಫೆ.20ರಂದು ನಡೆದ ಸಭೆಯಲ್ಲಿ ಮಂಜೂರು ಮಾಡಿದೆ.

 

ಇದನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯರಾದ ಬೀರಪ್ಪ ಹಾಗೂ ಸಂತೋಷ್ ಎಸ್.ಚವಾಣ್  ಅವರು ಪಿಐಎಲ್‌ ಸಲ್ಲಿಸಿದ್ದರು. ಈ ಸಂಬಂಧ ಹೈಕೋರ್ಟ್‌, ರಾಜ್ಯ ಸರ್ಕಾರಕ್ಕೆ ನೋಟೀಸ್‌ ಜಾರಿ ಮಾಡಿತ್ತು.

 

ಆರ್ಥಿಕ ಇಲಾಖೆಯ ಅಭಿಪ್ರಾಯದಲ್ಲೇನಿತ್ತು?

 

ಪ್ರಸ್ತಾವನೆಯನ್ನು ಪರಿಶೀಲಿಸಿದೆ. ಪ್ರಸ್ತಾವನೆಯನ್ನು ಸಚಿವ ಸಂಪುಟದ ಮುಂದೆ ಮಂಡಿಸಲು ಕ್ರಮ ವಹಿಸುವಂತೆ ಆಡಳಿತ ಇಲಾಖೆಗೆ ತಿಳಿಸಿದೆ,’ ಎಂದು ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಯು 2025ರ ಫೆ.3ರಂದೇ ತನ್ನ ಅಭಿಪ್ರಾಯವನ್ನು ತಿಳಿಸಿತ್ತು.

 

 

ಈ ಅಭಿಪ್ರಾಯವನ್ನು ಮುಂದಿರಿಸಿದ್ದ ನಗರಾಭಿವೃದ್ಧಿ ಇಲಾಖೆಯು ಸಹ ಸಚಿವ ಸಂಪುಟದ ಮುಂದೆ ಪ್ರಸ್ತಾವನೆಯನ್ನು ಮಂಡಿಸಿತ್ತು.

 

 

ಈ ಆಸ್ತಿಯನ್ನು  ಕಡಿಮೆ ಬೆಲೆಯಲ್ಲಿ  ಮಂಜೂರು ಮಾಡುವ ಸಂಬಂಧ  ಪ್ರಸ್ತಾವನೆ ಸಲ್ಲಿಸಿದೆ. ಈ ಪ್ರಸ್ತಾವನೆ ಅಧರಿಸಿ ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಯು ಆಯುಕ್ತರು ಪೌರಾಡಳಿತ ನಿರ್ದೇಶನಾಲಯಕ್ಕೆ ಕಡತ ಮಂಡಿಸಿದ್ದರು.

 

ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್, ಶಾಸಕ ವಿನಯ್ ಕುಲಕರ್ಣಿ, ಪ್ರಸಾದ್ ಅಬ್ಬಯ್ಯ ಮತ್ತಿತರರು ಈ ಪ್ರಸ್ತಾವನೆಗೆ ಶಿಫಾರಸ್ಸು ಮಾಡಿದ್ದರು.  ಇದನ್ನಾಧರಿಸಿ ಆರ್ಥಿಕ ಇಲಾಖೆಯ ಅಭಿಪ್ರಾಯ ಪಡೆಯಲು ಕಡತವನ್ನು ಪೌರಾಡಳಿತ ಇಲಾಖೆಯು ಕಡತವನ್ನು (DMA/DEV/OTH/285/2024)  ಮಂಡಿಸಿದ್ದರು.

 

ಕಚೇರಿ ನಿರ್ಮಾಣಕ್ಕೆ ಪಾಲಿಕೆ ಆಸ್ತಿ ಮೇಲೆ ಕಣ್ಣು ಹಾಕಿದ ಕೆಪಿಸಿಸಿ; ಕಡಿಮೆ ಬೆಲೆಯಲ್ಲಿ ಮಂಜೂರಾತಿಗೆ ಒತ್ತಡ

 

ಪೌರಾಡಳಿತ ಇಲಾಖೆಯ ಪ್ರಸ್ತಾವನೆಯಲ್ಲೇನಿತ್ತು?

 

ಕೆಪಿಸಿಸಿಗೆ ಕಾರ್ಯಾಲಯ ಕಚೇರಿ ನಿರ್ಮಾಣ ಮಾಡಲು  ಉದ್ದೇಶಿತ ಆಸ್ತಿಯು ಮಹಾನಗರಪಾಲಿಕೆಯ ಆಸ್ತಿಯಾಗಿದೆ.  ಸರ್ಕಾರವು ನಿಗದಿಪಡಿಸಿರುವ ಮಾರ್ಗಸೂಚಿಗಳ ರೀತಿ ಪಾಲಿಕೆಯ ಆಸ್ತಿಗಳನ್ನು ಕೆಲವು ಉದ್ದೇಶಗಳನ್ನು ಹೊರತುಪಡಿಸಿ ಸಾರ್ವಜನಿಕ ಹರಾಜು ಮೂಲಕ ಮಾರಾಟ ಮಾಡಲು ಅವಕಾಶವಿದೆ. ಈ ಪ್ರಕರಣದಲ್ಲಿಯೂ ಸಾರ್ವಜನಿಕ ಹರಾಜು ಮುಖಾಂತರವೇ ಆಸ್ತಿಯನ್ನು ಹಂಚಿಕೆ ಮಾಡಬೇಕಾಗಿದೆ ಎಂದು ತಿಳಿಸಿತ್ತು.

 

 

ಆದರೆ ಈ ಪ್ರಸ್ತಾವಿತ ವಿಷಯಕ್ಕೆ ಪಾಲಿಕೆಯ ಕೌನ್ಸಿಲ್‌ ಸಭೆಯಲ್ಲಿ ಅನುಮೋದನೆ ಆಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್ ಅವರು ಧಾರವಾಡ ಜಿಲ್ಲಾ ಕಾಂಗ್ರೆಸ್‌ ಕಾರ್ಯಾಲಯ ನಿರ್ಮಾಣ ಮಾಡುವ ಸಲುವಾಗಿ ಜಾಗವನ್ನು ಮಂಜೂರು ಮಾಡಲು ಪ್ರಸ್ತಾವನೆ ಸಲ್ಲಿಸಿದ್ದಾರೆ. ಇದಕ್ಕೆ ತಗುಲುವ ವೆಚ್ಚವನ್ನು ಈಗಿನ ಸರ್ಕಾರದ ದರ ಅಥವಾ ಅದಕ್ಕಿಂತ ಕಡಿಮೆ ಬೆಲೆಯನ್ನು ಭರಿಸಲು ಸಿದ್ಧರಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನು ಒಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಪ್ರಸ್ತಾವನೆಯನ್ನು ಸಚಿವ ಸಂಪುಟದ ಅನುಮೋದನೆಗೆ ಮಂಡಿಸಲು ಸೂಚಿಸಿದ್ದಾರೆ ಎಂದು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಟಿಪ್ಪಣಿ ಹಾಳೆಯಲ್ಲಿ ಉಲ್ಲೇಖಿಸಿತ್ತು.

 

ಮಹಾನಗರಪಾಲಿಕೆಗಳ ಆಸ್ತಿ, ಜಾಗವನ್ನು ಮಾರಾಟ ಮಾಡಲು ಕರ್ನಾಟಕ ಮಹಾನಗರಪಾಲಿಕೆಎಗಳ ಅಧಿನಿಯಮ 1976ರ ಕಲಂ 176 (6) ಅಡಿ ಪಾಲಿಕೆಗಳ ಜಾಗಗಳನ್ನು ಮಾರಾಟ, ಗುತ್ತಿಗೆ ನೀಡಲು ಸರ್ಕಾರದ ಪೂರ್ವಾನುಮೋದನೆ ಪಡೆಯಬೇಕು. ಆದರೆ ನಗರ ಸ್ಥಳೀಯ ಸಂಸ್ಥೆಗಳ ಜಾಗವನ್ನು ವಿಲೇವಾರಿ ಮಾಡುವ ಕುರಿತು 2003ರ ಜೂನ್‌ 2ರಲ್ಲಿ ಮಾರ್ಗಸೂಚಿಗಳನ್ನು ಹೊರಡಿಸಿದೆ. ಇದರ ಪ್ರಕಾರ ಕೆಪಿಸಿಸಿ ಕಚೇರಿ ನಿರ್ಮಾಣ ಮಾಡಲು ಪ್ರಸ್ತಾಪಿಸಿರುವ ಜಾಗವನ್ನು ಹರಾಜು ಮೂಲಕವೇ ವಿಲೇವಾರಿ ಮಾಡಬೇಕು ಎಂದು ಟಿಪ್ಪಣಿ ಹಾಳೆಯಲ್ಲಿ ವಿವರಿಸಿತ್ತು.

 

 

‘ಆದರೆ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್‌ ಕಾರ್ಯಾಲಯ ನಿರ್ಮಿಸಲು ಜಾಗವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಮಂಜೂರು ಮಾಡಬೇಕು ಎಂದು ಕೋರಿದೆ. ಹೀಗಾಗಿ ಪಾಲಿಕೆಯ ಒಡೆತನದಲ್ಲಿರುವ 2,988.29 ಚ ಮೀ ವಿಸ್ತೀರ್ಣ ಜಾಗವನ್ನು ಕೆಪಿಸಿಸಿಗೆ ಮಾರುಕಟ್ಟೆ ದರದಲ್ಲಿ ಮಂಜೂರು ಮಾಡುವ ಕುರಿತು ಸಚಿವ ಸಂಪುಟಕ್ಕೆ ಟಿಪ್ಪಣಿ ಸಿದ್ಧಪಡಿಸಬೇಕು,’  ಎಂದು ಟಿಪ್ಪಣಿ ಹಾಳೆಯಲ್ಲಿ ಉಲ್ಲೇಖಿಸಿತ್ತು.

 

ಈ ಪ್ರಸ್ತಾವನೆಗೆ ಆರ್ಥಿಕ ಇಲಾಖೆಯ ಸಹಮತಿ, ಅಭಿಪ್ರಾಯ ಪಡೆಯಲು ಆದೇಶ ನೀಡಬೇಕು ಎಂದು ನಗರಾಭಿವೃದ್ಧಿ ಇಲಾಖೆಯು 2024ರ ಡಿಸೆಂಬರ್‍‌ 31ರಂದು ಕಡತ ಮಂಡಿಸಿತ್ತು.

 

 

 

ಭಾರತೀಯ ಜನತಾ ಪಾರ್ಟಿಯು ತಾಲೂಕು ಪ್ರದೇಶಗಳಲ್ಲಿ ಸ್ವಂತ ಕಚೇರಿಗಾಗಿ ಕಟ್ಟಡ ನಿರ್ಮಾಣ ಮಾಡಲು ಪರಿಶಿಷ್ಟ ಜಾತಿಯ ಸರ್ಕಾರಿ ವಿದ್ಯಾರ್ಥಿ ನಿಲಯಗಳೂ ಸೇರಿದಂತೆ ಸಾರ್ವಜನಿಕ ಉದ್ದೇಶಕ್ಕೆ ಕಾಯ್ದಿರಿಸಿರುವ ನಿವೇಶನ, ಜಮೀನುಗಳ ಮೇಲೆ ಕಣ್ಣು ಹಾಕಿತ್ತು.

 

 

ಬಿಜೆಪಿ ಕಚೇರಿ ಕಟ್ಟಡ ನಿರ್ಮಾಣಕ್ಕೆ ಪರಿಶಿಷ್ಟರ ವಿದ್ಯಾರ್ಥಿ ನಿಲಯಕ್ಕೆ ಮೀಸಲಾದ ನಿವೇಶನ!; ಕಾರಜೋಳರ ಒತ್ತಡ?

 

ಪರಿಶಿಷ್ಟ ಜಾತಿಯ ಸರ್ಕಾರಿ ವಿದ್ಯಾರ್ಥಿ ನಿಲಯಗಳ ಕಟ್ಟಡ ನಿರ್ಮಾಣ ಸಂಬಂಧ ಕಾಯ್ದರಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಆಯುಕ್ತರು ವರದಿ ನೀಡಿದ್ದರೂ ಇದೇ ಜಾಗದಲ್ಲಿ ಭಾರತೀಯ ಜನತಾ ಪಕ್ಷದ ಕಚೇರಿ ಕಟ್ಟಡ ನಿರ್ಮಾಣ ಮಾಡಲು ಖಾಲಿ ನಿವೇಶನ ಮಂಜೂರು ಮಾಡಲು ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿದ್ದನ್ನು ಸ್ಮರಿಸಬಹುದು.

Hot this week

ಘನತ್ಯಾಜ್ಯ ಸಂಗ್ರಹಣೆ, ಸಾಗಾಣಿಕೆಗೆ ವಾಹನಗಳ ಬಾಡಿಗೆ ವೆಚ್ಚ; ದರಗಳ ಪರಿಷ್ಕರಣೆಗೆ ಅನುಸರಿಸಿರುವ ಮಾನದಂಡದಲ್ಲಿ ಲೋಪವಿದೆಯೇ?

ಬೆಂಗಳೂರು; ಘನತ್ಯಾಜ್ಯ ಸಂಗ್ರಹಣೆ ಮತ್ತು ಸಾಗಾಣಿಕೆಗೆ ವಾಹನಗಳ ಬಾಡಿಗೆ ವೆಚ್ಚ ದರಗಳ...

ಭ್ರಷ್ಟಾಚಾರ, ಅಧಿಕ ಆಸ್ತಿ ಗಳಿಕೆ ಆರೋಪ; 4 ವರ್ಷಗಳಲ್ಲಿ 1,248 ಪ್ರಕರಣ ದಾಖಲು, ಸಿ ಗುಂಪಿನ ನೌಕರರೇ ಹೆಚ್ಚು

ಬೆಂಗಳೂರು; ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ, ಲಂಚಕ್ಕಾಗಿ ಬೇಡಿಕೆಯಿಟ್ಟ  ಆರೋಪಗಳಿಗೆ ಸಂಬಂಧಿಸಿದಂತೆ ...

ಕನ್ಸೋರ್ಟಿಯಂ ಷರತ್ತು, ಸದಸ್ಯರ ಷೇರು; ಅಂಜುಂ ಪರ್ವೇಜ್ ಸಮಿತಿಯ ಆಕ್ಷೇಪಣೆ ತಳ್ಳಿ ಹಾಕಿದ ಘನತ್ಯಾಜ್ಯ ನಿರ್ವಹಣೆ ಮಂಡಳಿ

ಬೆಂಗಳೂರು; ಕಸ ಸಂಗ್ರಹಣೆ ಮತ್ತು ಸಾಗಾಣಿಕೆಗೆ 21 ಪ್ಯಾಕೇಜ್‌ಗಳಲ್ಲಿ ರೂಪಿಸಿರುವ  ಕನ್ಸೋರ್ಟಿಯಂನಲ್ಲಿ...
Please Scan to make Your Contribution

Topics

ಘನತ್ಯಾಜ್ಯ ಸಂಗ್ರಹಣೆ, ಸಾಗಾಣಿಕೆಗೆ ವಾಹನಗಳ ಬಾಡಿಗೆ ವೆಚ್ಚ; ದರಗಳ ಪರಿಷ್ಕರಣೆಗೆ ಅನುಸರಿಸಿರುವ ಮಾನದಂಡದಲ್ಲಿ ಲೋಪವಿದೆಯೇ?

ಬೆಂಗಳೂರು; ಘನತ್ಯಾಜ್ಯ ಸಂಗ್ರಹಣೆ ಮತ್ತು ಸಾಗಾಣಿಕೆಗೆ ವಾಹನಗಳ ಬಾಡಿಗೆ ವೆಚ್ಚ ದರಗಳ...

ಭ್ರಷ್ಟಾಚಾರ, ಅಧಿಕ ಆಸ್ತಿ ಗಳಿಕೆ ಆರೋಪ; 4 ವರ್ಷಗಳಲ್ಲಿ 1,248 ಪ್ರಕರಣ ದಾಖಲು, ಸಿ ಗುಂಪಿನ ನೌಕರರೇ ಹೆಚ್ಚು

ಬೆಂಗಳೂರು; ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ, ಲಂಚಕ್ಕಾಗಿ ಬೇಡಿಕೆಯಿಟ್ಟ  ಆರೋಪಗಳಿಗೆ ಸಂಬಂಧಿಸಿದಂತೆ ...

ಕನ್ಸೋರ್ಟಿಯಂ ಷರತ್ತು, ಸದಸ್ಯರ ಷೇರು; ಅಂಜುಂ ಪರ್ವೇಜ್ ಸಮಿತಿಯ ಆಕ್ಷೇಪಣೆ ತಳ್ಳಿ ಹಾಕಿದ ಘನತ್ಯಾಜ್ಯ ನಿರ್ವಹಣೆ ಮಂಡಳಿ

ಬೆಂಗಳೂರು; ಕಸ ಸಂಗ್ರಹಣೆ ಮತ್ತು ಸಾಗಾಣಿಕೆಗೆ 21 ಪ್ಯಾಕೇಜ್‌ಗಳಲ್ಲಿ ರೂಪಿಸಿರುವ  ಕನ್ಸೋರ್ಟಿಯಂನಲ್ಲಿ...

ಐಪಿಎಸ್ ರವೀಂದ್ರ ಕಾಶಿನಾಥ್ ಗಡಾದಿ ವಿರುದ್ಧ ಆರೋಪ; 4 ತಿಂಗಳಾದರೂ ಸಲ್ಲಿಕೆಯಾಗದ ಚಾರ್ಜ್‌ಶೀಟ್‌, ಇಲಾಖೆ ವಿಚಾರಣೆ ವಿಳಂಬ

ಬೆಂಗಳೂರು; ಕರ್ತವ್ಯಲೋಪ ಮತ್ತು ನಿಯಮ ಉಲ್ಲಂಘನೆ ಮಾಡಿರುವ ಆರೋಪಕ್ಕೆ ಗುರಿಯಾಗಿರುವ ಐಪಿಎಸ್...

Related Articles

Popular Categories

error: Content is protected !!