ಬೆಂಗಳೂರು; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹುಟ್ಟೂರು ಸಿದ್ದರಾಮನಹುಂಡಿ ಗ್ರಾಮದ ಬಳಿ ಇರುವ ಶ್ರೀನಿವಾಸಪುರ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸ್ವಕ್ಷೇತ್ರ ಕನಕಪುರದಲ್ಲಿ ದಲಿತ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಿದ್ದರ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಸರ್ಕಾರವು ಕರ್ನಾಟಕ ಸಾಮಾಜಿಕ ಬಹಿಷ್ಕಾರ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ ) ವಿಧೇಯಕ 2025ನ್ನು ಮಂಡಿಸಲು ಸಿದ್ಧತೆ ನಡೆಸಿದೆ.
ಮಹಾರಾಷ್ಟ್ರ ರಾಜ್ಯ ಸರ್ಕಾರವು ಈಗಾಗಲೇ ಸಾಮಾಜಿಕ ಬಹಿಷ್ಕಾರವನ್ನು ಅಪರಾಧೀಕರಿಸಿದ ಮೊದಲ ರಾಜ್ಯವಾಗಿದೆ. 2016ರಲ್ಲಿ ಮಹಾರಾಷ್ಟ್ರ ಸರ್ಕಾರವು ಸಾಮಾಜಿಕ ಬಹಿಷ್ಕಾರ ಕಾಯಿದೆಯು ಜಾತಿ ಮತ್ತು ಸಮುದಾಯ ಪಂಚಾಯತ್‌ಗಳಂತಹ ನ್ಯಾಯಾಂಗೇತರ ಸಂಸ್ಥೆಗಳಿಂದ ಆಚರಿಸುವ ಸಾಮಾಜಿಕ ಬಹಿಷ್ಕಾರವನ್ನು ನಿಷೇಧಿಸಿದೆ.
ಇದೀಗ ರಾಜ್ಯ ಕಾಂಗ್ರೆಸ್ ಸರ್ಕಾರವೂ ಸಹ ರೂಪಿಸಿರುವ ಕರ್ನಾಟಕ ಸಾಮಾಜಿಕ ಬಹಿಷ್ಕಾರ ವಿಧೇಯಕವು ಮುನ್ನೆಲೆಗೆ ಬಂದಿದೆ.
ಈ ವಿಧೇಯಕವನ್ನು ಕರ್ನಾಟಕ ವಿಧಾನಮಂಡಲದಲ್ಲಿ ಮಂಡಿಸಲು ಸಚಿವ ಸಂಪುಟಕ್ಕೆ ಕಾನೂನು, ನ್ಯಾಯ, ಮಾನವ ಹಕ್ಕುಗಳ ಇಲಾಖೆಯು ಕಡತವನ್ನು (LAW-LCE/11/2025) ಮಂಡಿಸಿದೆ. ಇದಕ್ಕೆ ಕಾನೂನು ಸಚಿವ ಎಚ್ ಕೆ ಪಾಟೀಲ್ ಅವರು ಅನುಮೋದಿಸಿದ್ದಾರೆ.
ಇಲಾಖೆಯು ಸಚಿವ ಸಂಪುಟಕ್ಕೆ ಮಂಡಿಸಿರುವ ರಹಸ್ಯ ಹಾಳೆಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
ಕರ್ನಾಟಕ ಸಾಮಾಜಿಕ ಬಹಿಷ್ಕಾರ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ ) ವಿಧೇಯಕ 2025ಕ್ಕೆ ಆರ್ಥಿಕ ಇಲಾಖೆಯು ತಾತ್ವಿಕ ಅನುಮೋದನೆಯನ್ನು ನೀಡಿದೆ. ಅಲ್ಲದೇ ಪ್ರಸ್ತಾವಿತ ವಿಧೇಯಕವನ್ನು ಜಾರಿಗೊಳಿಸಿದಲ್ಲಿ ಉಂಟಾಗಬಹುದಾದ ಆರ್ಥಿಕ ಹೊರೆಯನ್ನು ಪ್ರಸ್ತುತ ಹಂತದಲ್ಲಿ ಅಂದಾಜಿಸಲು ಸಾಧ್ಯವಿಲ್ಲ ಎಂದು ಆರ್ಥಿಕ ಇಲಾಖೆಯು ಅಭಿಪ್ರಾಯಿಸಿದೆ.
ಈ ವಿಧೇಯಕದ ಅನುಷ್ಠಾನದಿಂದಾಗಿ ಉಂಟಾಗುವ ಸಂಭಾವ್ಯ ವೆಚ್ಚವನ್ನು ಇಲಾಖೆಗೆ ಹಂಚಿಕೆ ಮಾಡಿರುವ ಆಯವ್ಯಯ ಅವಕಾಶದಲ್ಲಿ ಭರಿಸಬೇಕು ಎಂದು ಆರ್ಥಿಕ ಇಲಾಖೆ ಹೇಳಿರುವುದು ಸಚಿವ ಸಂಪುಟಕ್ಕೆ ಮಂಡಿಸಿರುವ ಕಡತದ ರಹಸ್ಯ ಹಾಳೆಯಿಂದ ತಿಳಿದು ಬಂದಿದೆ.
ವಿಧೇಯಕಕ್ಕೆ ಸಮರ್ಥನೆ
ಈ ವಿಧೇಯಕವು ರಾಜ್ಯದ ಜನರು ತಮ್ಮ ಮಾನವ ಹಕ್ಕುಗಳೊಂದಿಗೆ ಸಾಮರಸ್ಯದಿಂದ ಬದುಕುವುದನ್ನು ಖಚಿತಪಡಿಸಿಕೊಳ್ಳಲು, ನಾಗರಿಕರಲ್ಲಿ ಭ್ರಾತೃತ್ವವನ್ನು ಉತ್ತೇಜಿಸಲಿದೆ. ವ್ಯಕ್ತಿಯ ಘನತೆಯನ್ನು ಖಚಿತಪಡಿಸುವುದು ಸಹ ಭಾರತದ ಸಂವಿಧಾನದ ಪೀಠಿಕೆಯಲ್ಲಿನ ಗುರಿಗಳಲ್ಲಿ ಒಂದಾಗಿದೆ. ಯಾವುದೇ ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪನ್ನು ಸಾಮಾಜಿಕವಾಗಿ ಬಹಿಷ್ಕರಿಸುವುದು ಸಂವಿಧಾನದಲ್ಲಿ ಪ್ರತಿಪಾದಿಸಲಾದ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ವಿವರಿಸಿರುವುದು ಗೊತ್ತಾಗಿದೆ.
ಇನ್ನು ಜೀವಂತವಾಗಿದೆ ಸಾಮಾಜಿಕ ಬಹಿಷ್ಕಾರ
ರಾಜ್ಯದ ಕೆಲವು ಭಾಗಗಳಲ್ಲಿ ಸಾಮಾಜಿಕ ಬಹಿಷ್ಕಾರ, ಒಬ್ಬ ವ್ಯಕ್ತಿ ಅಥವಾ ಅವರ ಕುಟುಂಬ ಸದಸ್ಯರು ಸೇರಿದಂತೆ ವ್ಯಕ್ತಿಗಳ ಗುಂಪನ್ನು ಬಹಿಷ್ಕರಿಸುವ ಅಮಾನವೀಯ ಪದ್ಧತಿ ಇನ್ನೂ ಮುಂದುವರೆದಿದೆ ಎಂದು ಗಮನಿಸಲಾಗಿದೆ. ಒಬ್ಬ ವ್ಯಕ್ತಿ ಅಥವಾ ಅವರ ಕುಟುಂಬ ಸದಸ್ಯರು ಸೇರಿದಂತೆ ವ್ಯಕ್ತಿಗಳ ಗುಂಪನ್ನು ಸಾಮಾಜಿಕವಾಗಿ ಬಹಿಷ್ಕರಿಸುವ ದುಷ್ಟತನವನ್ನು ಸಂಪೂರ್ಣವಾಗಿ ತೊಡೆದುಹಾಕಲು ಅಸ್ತಿತ್ವದಲ್ಲಿರುವ ಕಾನೂನುಗಳು ಪರಿಣಾಮಕಾರಿಯಲ್ಲ ಎಂದು ಸಾಬೀತಾಗಿದೆ ಎಂದು ಕಾನೂನು ಇಲಾಖೆಯು ಸಚಿವ ಸಂಪುಟಕ್ಕೆ ಮಂಡಿಸಿರುವ ಕಡತದಲ್ಲಿ ವಿವರಿಸಿದೆ.
ಸಾರ್ವಜನಿಕ ಹಿತದೃಷ್ಟಿಯಿಂದ ಮತ್ತು ಸಾಮಾಜಿಕ ಸುಧಾರಣೆಯ ವಿಷಯವಾಗಿ ಸಾಮಾಜಿಕ ಬಹಿಷ್ಕಾರವನ್ನು ನಿಷೇಧಿಸುವುದು ಅವಶ್ಯಕವಾಗಿದೆ. ಈ ಮಸೂದೆಯ ವಿಷಯವು ಭಾರತ ಸಂವಿಧಾನದ 7 ನೇ ಷೆಡ್ಯೂಲ್‌ನ 3 ನೇ ಪಟ್ಟಿಯ 5 ಮತ್ತು 23 ನೇ ಮತ್ತು 14, 16 ಮತ್ತು 21 ನೇ ವಿಧಿಗಳ ಅಡಿಯಲ್ಲಿ ಬರಲಿದೆ. ಹೀಗಾಗಿ ರಾಜ್ಯ ಶಾಸಕಾಂಗವು ಈ ಮಸೂದೆಯನ್ನು ಜಾರಿಗೆ ತರುವ ಅಧಿಕಾರವನ್ನು ಹೊಂದಿದೆ.
ಹಾಗೆಯೇ ಈ ಮಸೂದೆಯ ನಿಬಂಧನೆಗಳು ಕೇಂದ್ರದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ನಿಬಂಧನೆಗಳೊಂದಿಗೆ ಸಂಘರ್ಷಿಸುವುದಿಲ್ಲ. ಆದ್ದರಿಂದ ಅದನ್ನು ರಾಷ್ಟ್ರಪತಿಗಳ ಪರಿಗಣನೆಗೆ ಕಾಯ್ದಿರಿಸುವ ಅಗತ್ಯವಿಲ್ಲ ಎಂದು ಹೇಳಿರುವುದು ತಿಳಿದು ಬಂದಿದೆ.
ಕಾಯಿದೆಯ ಪರಿಣಾಮ
ಸರ್ಕಾರದ ಸಕ್ರಿಯ ಭಾಗವಹಿಸುವಿಕೆ ಮತ್ತು ಸಾಮಾಜಿಕ ಬಹಿಷ್ಕಾರಗಳ ದುಷ್ಟತನವನ್ನು ಎದುರಿಸಲು ಕಾನೂನು ಅಂಗೀಕಾರದೊಂದಿಗೆ, ಸಮುದಾಯದ ಸದಸ್ಯರು ತಮ್ಮ ಸಾಂವಿಧಾನಿಕ ಹಕ್ಕುಗಳನ್ನು ಹೆಚ್ಚು ಸುಲಭವಾಗಿ ಮತ್ತು ಕಾನೂನುಬದ್ಧವಾಗಿ ಚಲಾಯಿಸಬಹುದು. ಜನರು ಈಗ ತಮ್ಮ ಜಾತಿಯ ಹೊರಗೆ ಮದುವೆಯಾಗಬಹುದು ಮತ್ತು ಸಾರ್ವಜನಿಕ ಸ್ಥಳಗಳು, ಬಾವಿಗಳು ಮತ್ತು ದೇವಾಲಯಗಳು ಸಾರ್ವಜನಿಕರಿಗೆ ಮುಕ್ತವಾಗಿರಲಿದೆ.
ಮಹಾರಾಷ್ಟ್ರವು ಸಾಮಾಜಿಕ ಬಹಿಷ್ಕಾರವನ್ನು ಅಪರಾಧೀಕರಿಸಿದ ಮೊದಲ ರಾಜ್ಯವಾಗಿದೆ. 2016ರ ಮಹಾರಾಷ್ಟ್ರ ಸಾಮಾಜಿಕ ಬಹಿಷ್ಕಾರ ಕಾಯಿದೆಯು ಜಾತಿ ಮತ್ತು ಸಮುದಾಯ ಪಂಚಾಯತ್‌ಗಳಂತಹ ನ್ಯಾಯಾಂಗೇತರ ಸಂಸ್ಥೆಗಳಿಂದ ಆಚರಿಸುವ ಸಾಮಾಜಿಕ ಬಹಿಷ್ಕಾರವನ್ನು ನಿಷೇಧಿಸಿದೆ. ಈ ಕಾಯಿದೆಯು ಸಾಮಾಜಿಕ ಬಹಿಷ್ಕಾರವನ್ನು ಅಪರಾಧವೆಂದು ಪರಿಗಣಿಸಿ, ಅದನ್ನು ತಡೆಗಟ್ಟಲು ಕಾನೂನು ಕ್ರಮವನ್ನು ಜರುಗಿಸಿದೆ.
ಮಹಾರಾಷ್ಟ್ರ ಸಾಮಾಜಿಕ ಬಹಿಷ್ಕಾರ ಕಾಯಿದೆ 2016 ರ ಪ್ರಕಾರ ವ್ಯಕ್ತಿ ಅಥವಾ ಗುಂಪಿನ ಸಾಮಾಜಿಕ ಬಹಿಷ್ಕಾರವನ್ನು ನಿಷೇಧಿಸುತ್ತದೆ. ಸಾಮಾಜಿಕ ಬಹಿಷ್ಕಾರವನ್ನು ಹೇರಿದವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು ಒಂದು ಲಕ್ಷ ರೂಪಾಯಿ ದಂಡ ವಿಧಿಸಬಹುದು. ಈ ಕಾಯಿದೆಯಡಿ ದೂರು ದಾಖಲಿಸಿದ 6 ತಿಂಗಳೊಳಗೆ ವಿಚಾರಣೆಯನ್ನು ಪೂರ್ಣಗೊಳಿಸಬೇಕು. ಜಾತಿ ಮತ್ತು ಸಮುದಾಯ ಪಂಚಾಯತ್‌ಗಳಂತಹ ನ್ಯಾಯಾಂಗೇತರ ಸಂಸ್ಥೆಗಳು ಸಾಮಾಜಿಕ ಬಹಿಷ್ಕಾರವನ್ನು ಹೇರುವ ಪ್ರಕ್ರಿಯೆಯನ್ನು ತಡೆಯುವುದು ಉದ್ದೇಶವನ್ನು ಕಾಯಿದೆಯು ಹೊಂದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರುಣಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಶ್ರೀನಿವಾಸಪುರ ಗ್ರಾಮದಲ್ಲಿ ಪಂಚಾಯಿತಿಯ ಆದೇಶವನ್ನು ಉಲ್ಲಂಘಿಸಿದ ಆರೋಪದ ಮೇಲೆ ದಲಿತ ಕುಟುಂಬವೊಂದಕ್ಕೆ ಗ್ರಾಮದ ಮುಖಂಡರು ಸಾಮಾಜಿಕ ಬಹಿಷ್ಕಾರ ಹಾಕಿದ್ದರು.
ಅದೇ ರೀತಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸ್ವಕ್ಷೇತ್ರವಾದ ಕನಕಪುರ ತಾಲೂಕಿನ ಬನವಾಸಿ ಗ್ರಾಮದ ಮಾರಮ್ಮನ ಜಾತ್ರೆಯಲ್ಲಿ ಪಾಲ್ಗೊಳ್ಳಲು ಸಮಾನ ಅವಕಾಶ ನೀಡಬೇಕೆಂದು ಕೇಳಿದ ದಲಿತರಿಗೆ, ಸವರ್ಣಿಯರು ಸಾಮಾಜಿಕ ಬಹಿಷ್ಕಾರ ಹಾಕಲಾಗಿತ್ತು. ಚಾಮರಾಜನಗರ ಜಿಲ್ಲೆಯ ಹಲವೆಡೆ ಸಾಮಾಜಿಕ ಬಹಿಷ್ಕಾರದ ಪಿಡುಗು ಹತ್ತಾರು ಕುಟುಂಬಗಳನ್ನು ಬಾಧಿಸುತ್ತಿರುವುದನ್ನು ಸ್ಮರಿಸಬಹುದು.