ಬೆಂಗಳೂರು; ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸರ್ಕಾರದ ಆದೇಶವನ್ನು ಗಾಳಿಗೆ ತೂರಿರುವ ಕಲ್ಬುರ್ಗಿ ವಿಶ್ವವಿದ್ಯಾಲಯವು 5.69 ಲಕ್ಷ ಸಂಖ್ಯೆಯ ಅಂಕಪಟ್ಟಿಗಳನ್ನು ಮುದ್ರಿಸಿದೆ.
ವಿಶೇಷವೆಂದರೇ ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ಕಲ್ಬುರ್ಗಿ ವಿಶ್ವವಿದ್ಯಾಲಯವು ಸರ್ಕಾರದ ಆದೇಶ ಉಲ್ಲಂಘಿಸಿ 1.80 ಲಕ್ಷ ಸಂಖ್ಯೆಯಷ್ಟು ಅಂಕಪಟ್ಟಿಗಳನ್ನು ಮುದ್ರಿಸಿತ್ತು.
ಅಂಕಪಟ್ಟಿ ಮತ್ತು ಪ್ರಮಾಣ ಪತ್ರಗಳನ್ನು ನ್ಯಾಡ್ಡ್ ಡಿಜಿ ಲಾಕರ್‍ನಲ್ಲಿ ದೃಢೀಕೃತವೆಂದು ಪರಿಗಣಿಸಬೇಕು ಎಂದು ರಾಜ್ಯ ಸರ್ಕಾರವು ಹೊರಡಿಸಿದ್ದ ಆದೇಶಗಳ ಉಲ್ಲಂಘಿಸಿ ಭೌತಿಕ ಅಂಕಪಟ್ಟಿಗಳನ್ನು 2021ರಿಂದ 2025ರ ಇದುವರೆಗೆ ಮುದ್ರಿಸಿದ ಪರಿಣಾಮ ಕಲ್ಬುರ್ಗಿ ವಿಶ್ವವಿದ್ಯಾಲಯವೊಂದರಲ್ಲೇ 11.67 ಕೋಟಿಯಷ್ಟು ಆರ್ಥಿಕ ನಷ್ಟ ಉಂಟಾಗಿದೆ.
ಕಲ್ಬುರ್ಗಿ ವಿಶ್ವವಿದ್ಯಾಲಯದಲ್ಲಿನ ಪದವಿ ಮತ್ತು ಸ್ನಾತಕೋತ್ತರ ಪದವಿಗಳಿಗೆ ಸಂಬಂಧಿಸಿದ ಅಂಕಪಟ್ಟಿ ಮುದ್ರಣ ಮತ್ತು ವಿತರಣೆಗೆ ಸಂಬಂಧಿಸಿದಂತೆ ಹಲವು ದೂರುಗಳು ಸರ್ಕಾರಕ್ಕೆ ಸಲ್ಲಿಕೆಯಾಗಿದ್ದವು. ಈ ಎಲ್ಲಾ ದೂರುಗಳ ವಿಚಾರಣೆ ನಡೆಸಿರುವ ಉನ್ನತ ಶಿಕ್ಷಣ ಇಲಾಖೆಯು, ಸಕ್ಷಮ ಪ್ರಾಧಿಕಾರಗಳಿಂದ ವರದಿ ಪಡೆದುಕೊಂಡಿದೆ.
ಇದಕ್ಕೆ ಸಂಬಂಧಿಸಿದಂತೆ ಟಿಪ್ಪಣಿ ಹಾಳೆಗಳು ‘ದಿ ಫೈಲ್’ಗೆ (ED/127/UGV/2024-COMPUTER NUMBER 1490590) ಲಭ್ಯವಾಗಿವೆ.
ಹಾಗೆಯೇ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಅಂಕಪಟ್ಟಿ ಮುದ್ರಿಸಿ ಸರಬರಾಜು ಮಾಡಿರುವ ಪ್ರಕರಣದಲ್ಲಿ ಆರ್ಥಿಕ ನಷ್ಟಕ್ಕೆ ಕಾರಣರಾದ ಕುಲಪತಿ, ಕುಲಸಚಿವರು ಮತ್ತು ಅಧಿಕಾರಿ ಸಿಬ್ಬಂದಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಲು ಸರ್ಕಾರವು ಚಿಂತಿಸುತ್ತಿದೆ. ಅಲ್ಲದೆ ಇಡೀ ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲನೆಗೆ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ 8(1)ಮತ್ತು 14(8) ಅನ್ವಯ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ತನಿಖಾ ಸಮಿತಿ ರಚಿಸಲು ಶಿಫಾರಸ್ಸು ಮಾಡಲಿದೆ ಎಂದು ಗೊತ್ತಾಗಿದೆ.
11.67 ಕೋಟಿ ನಷ್ಟ
ಈ ವರದಿಗಳ ಪ್ರಕಾರ 2021ರಿಂದ 2025ರವರೆಗೆ ಕಲ್ಬುರ್ಗಿ ವಿಶ್ವವಿದ್ಯಾಲಯವು ಸರ್ಕಾರದ ಆದೇಶಗಳನ್ನು ಉಲ್ಲಂಘಿಸಿದೆ. ಮತ್ತು ಬೊಕ್ಕಸಕ್ಕೆ 11.67 ಕೋಟಿಯಷ್ಟು ಆರ್ಥಿಕ ನಷ್ಟವುಂಟಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಉನ್ನತ ಶಿಕ್ಷಣ ಇಲಾಖೆಯು ವಿಚಾರಣೆ ಮುಂದುವರೆಸಿದೆ. ಈ ಸಂಬಂಧ ಕೆಲವು ದಾಖಲೆಗಳು ಮತ್ತು ಟಿಪ್ಪಣಿ ಹಾಳೆಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
ಅಂಕಪಟ್ಟಿಗಳನ್ನು ಭೌತಿಕವಾಗಿ ಮುದ್ರಿಸಿ ವಿಶ್ವವಿದ್ಯಾಲಯಕ್ಕೆ ಆರ್ಥಿಕ ನಷ್ಟವುಂಟು ಮಾಡಿಲ್ಲ ಎಂದು ಮೌಲ್ಯಮಾಪನ ವಿಭಾಗದ ಕುಲಸಚಿವರು ಸಮಜಾಯಿಷಿ ನೀಡಿದ್ದರೂ ಸಹ ಉನ್ನತ ಶಿಕ್ಷಣ ಇಲಾಖೆಯು ಒಪ್ಪಿಲ್ಲ. ಬದಲಿಗೆ ಇದಕ್ಕೆ ಕಾರಣರಾದ ಕುಲಪತಿ ಮತ್ತು ಕುಲಸಚಿವರು (ಆಡಳಿತ-ಮೌಲ್ಯಮಾಪನ) ಗಳ ಪಟ್ಟಿಯನ್ನು ಸಿದ್ಧಪಡಿಸಿದೆ.
ಆದೇಶ ಉಲ್ಲಂಘನೆ
ವಿದ್ಯಾರ್ಥಿಗಳಿಗೆ ಅಂಕಪಟ್ಟಿ ಮತ್ತು ಪ್ರಮಾಣಪತ್ರಗಳನ್ನು ಡಿಜಿಟಲ್ ರೂಪದಲ್ಲಿ ಸಿದ್ಧಪಡಿಸಿ ಕರ್ನಾಟಕ ದತ್ತಾಂಶ ಕೇಂದ್ರ (ಕೆಎಸ್‌ಡಿಸಿ)ದಲ್ಲಿ ಶೇಖರಿಸಬೇಕು. ಮತ್ತು ಇದರ ಪ್ರತಿಗಳನ್ನು ನ್ಯಾಡ್ ಮತ್ತು ಡಿಜಿಲಾಕರ್‍ನಲ್ಲಿ ಕಡ್ಡಾಯವಾಗಿ ಅಳವಡಿಸಿ ಅನುಷ್ಠಾನಗೊಳಿಸಬೇಕು. ಹಾಗೂ ಅಂಕಪಟ್ಟಿ ಮತ್ತು ಪ್ರಮಾಣಪತ್ರಗಳನ್ನು ಮುದ್ರಿಸಬಾರದು. ಈ ಬಗ್ಗೆ ಕ್ರಮ ವಹಿಸಬೇಕು ಎಂದು 2022ರ ಫೆ.28ರಂದು ಸರ್ಕಾರವು ಆದೇಶ (ಸಂಖ್ಯೆ; ಇಡಿ 323 ಯುಎನ್ 2020) ಹೊರಡಿಸಿತ್ತು.
ಆದರೆ ಕಲ್ಬುರ್ಗಿ ವಿಶ್ವವಿದ್ಯಾಲಯವು ಈ ಆದೇಶವನ್ನು ಗಾಳಿಗೆ ತೂರಿತ್ತು.
2021ರ ಮೇ 8ರಂದು 5,000 ಅಂಕಪಟ್ಟಿಗಳನ್ನು ಮುದ್ರಿಸಿತ್ತು. 2021ರ ಜುಲೈ 6ರಂದು 39,000, 2022ರ ಮಾರ್ಚ್ 3ರಂದು 15,000, 2022ರ ಮಾರ್ಚ್ 17ರಂದು 60,000, 2022ರ ಫೆ.16ರಂದು 36,000, 2023ರ ಮಾರ್ಚ್ 14ರಂದು 25,000, 2023ರ ನವೆಂಬರ್ 23ರಂದು 2,50,000, 2025ರ ಜನವರಿ 7ರಂದು 1,09,000, 2025ರ ಜನವರಿ 7ರಂದು 2,10,000 ಅಂಕಪಟ್ಟಿಗಳನ್ನು ಮುದ್ರಿಸಿತ್ತು. ಒಟ್ಟಾರೆ ಕಳೆದ ನಾಲ್ಕು ವರ್ಷಗಳಲ್ಲಿ 7,49,600 ಅಂಕಪಟ್ಟಿಗಳನ್ನು ಮುದ್ರಿಸಿತ್ತು.
ಬಿಜೆಪಿ ಸರ್ಕಾರದ ಅವಧಿಯಲ್ಲಿ 1.80 ಲಕ್ಷ ಸಂಖ್ಯೆಯಷ್ಟು ಅಂಕಪಟ್ಟಿಗಳು ಮುದ್ರಿತವಾಗಿದ್ದರೇ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ 2 ವರ್ಷದಲ್ಲಿ 5.69 ಲಕ್ಷ ಸಂಖ್ಯೆಯಷ್ಟು ಅಂಕಪಟ್ಟಿಗಳನ್ನು ಮುದ್ರಣ ಮಾಡಿತ್ತು.
‘ಅಂಕಪಟ್ಟಿ ಮತ್ತು ಪ್ರಮಾಣಪತ್ರಗಳನ್ನು ಮುದ್ರಿಸದಿರಲು ಕ್ರಮವಹಿಸಬೇಕು ಮತ್ತು ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿನ ಎಲ್ಲಾ ವಿಶ್ವವಿದ್ಯಾಲಯಗಳಿಗೆ ನಿರ್ದೇಶನ ನೀಡಲಾಗಿತ್ತು. ಆದರೂ ಸರ್ಕಾರದ ಆದೇಶಗಳನ್ನು ಗಾಳಿಗೆ ತೂರಿ ವಿಶ್ವವಿದ್ಯಾಲಯದ ಅಧಿಕಾರಿ ಮತ್ತು ಸಿಬ್ಬಂದಿಗಳು 2021ರಿಂದ 2024ರವರೆಗೆ ಅಂಕಪಟ್ಟಿಗಳ ಸರಬರಾಜು ಮತ್ತು ಮುದ್ರಣಕ್ಕಾಗಿ ಒಟ್ಟು 11,67,74,305 ರು.ಗಳನ್ನು ವೆಚ್ಚ ಮಾಡಿ ವಿಶ್ವವಿದ್ಯಾಲಯಕ್ಕೆ ಆರ್ಥಿಕ ನಷ್ಟವುಂಟು ಮಾಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ,’ ಎಂದು ಉನ್ನತ ಶಿಕ್ಷಣ ಇಲಾಖೆಯು ಟಿಪ್ಪಣಿ ಹಾಳೆಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಆರ್ಥಿಕ ನಷ್ಟಕ್ಕೆ ಕಾರಣರಾದವರ ಪಟ್ಟಿ
ಕುಲಪತಿಗಳಾದ ಪ್ರೊ ಚಂದ್ರಕಾಂತ ಎಂ ಯಾತನೂರ, ಪ್ರೊ ದಯಾನಂದ ಅಗಸರ, ವಿಜಯಪುರದಲ್ಲಿನ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದ ಕುಲಸಚಿವರಾಗಿದ್ದ ಪ್ರೊ ಸಂಜೀವಕುಮಾರ ಕೆ ಎಂ, ಮೈಸೂರು ವಿಶ್ವವಿದ್ಯಾಲಯದ ಪ್ರೊ ಸೋನಾರ ನಂದಪ್ಪ ಡಿ, ಬಳ್ಳಾರಿಯ ಶ್ರೀ ಕೃಷ್ಣದೇವರಾಯ ವಿವಿಯ ಪ್ರೊ ಮೇಧಾವಿನಿ ಎಸ್ ಕಟ್ಟಿ, ಮಹಿಳಾ ವಿಶ್ವವಿದ್ಯಾಲಯದ ಪ್ರೊ ಜ್ಯೋತಿ ಧಮ್ಮ ಪ್ರಕಾಶ, ಕಲ್ಬುರ್ಗಿ ವಿವಿಯ ಡಾ ಎನ್ ಜಿ ಕಣ್ಣೂರ, ಆಡಳಿತ ವಿಭಾಗದ ಕುಲಸಚಿವರಾದ ಶರಣಬಸಪ್ಪ ಕೋಟೆಪ್ಪಗೋಳ, ಪ್ರೊ ವಿ ಟಿ ಕಾಂಬಳೆ, ಡಾ ಬಿ ಶರಣಪ್ಪ ಅವರ ಅವಧಿಯಲ್ಲಿ ಅಂಕಪಟ್ಟಿಗಳನ್ನು ಮುದ್ರಿಸಿ ಆರ್ಥಿಕ ನಷ್ಟವುಂಟಾಗಿದೆ ಎಂದು ಇಲಾಖೆಯು ಪಟ್ಟಿಯನ್ನು ಸಿದ್ಧಪಡಿಸಿರುವುದು ಗೊತ್ತಾಗಿದೆ.
ಈ ಪೈಕಿ ಪ್ರೊ ಸಂಜೀವಕುಮಾರ್ ಕೆ ಎಂ ಅವರು ನಿಧನರಾಗಿದ್ದಾರೆ ಎಂದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.
ಕುಲಸಚಿವರ ವರದಿಯಲ್ಲೇನಿದೆ?
2021ರಿಂದ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ನೀಡದೇ ಭೌತಿಕ ಅಂಕಪಟ್ಟಿಗಳನ್ನು ಮುದ್ರಿಸಲಾಗಿತ್ತು. ಇದರಿಂದಾಗಿ ವಿಶ್ವವಿದ್ಯಾಲಯಕ್ಕೆ ಆರ್ಥಿಕ ನಷ್ಟವುಂಟಾಗಿತ್ತು. ಈ ಕುರಿತು ವಿಶ್ವವಿದ್ಯಾಲಯದ ಪರೀಕ್ಷಾ ಮತ್ತು ಹಣಕಾಸು ವಿಭಾಗವು ಮಾಹಿತಿ ಮತ್ತು ವರದಿಯನ್ನು ಸಲ್ಲಿಸಿದ್ದರು.
ಪರೀಕ್ಷಾ ವಿಭಾಗವು ನೀಡಿದ್ದ ಮಾಹಿತಿ ಮತ್ತು ವರದಿ ಪ್ರಕಾರ 2021ರಲ್ಲಿ ಒಟ್ಟು 2,42,88,000 ಹಾಗೂ 2022ರಲ್ಲಿ 3,58,98,000 ಮತ್ತು 2024ರಲ್ಲಿ ಎನ್‌ಇಪಿ ಬ್ಯಾಚ್ ಗೆ ಬೇಕಾದ ಯುಯುಸಿಎಂಎಸ್ ಮಾದರಿಯಿಲ್ಲಿ ಅಂಕಪಟ್ಟಿಗಳನ್ನು ಪಡೆದುಕೊಂಡಿತ್ತು. ಇದೆಲ್ಲದರ ಒಟ್ಟು ಮೊತ್ತ 4.00 ಲಕ್ಷ ರು ಗಳಾಗಿದ್ದವು.
ಹಣಕಾಸು ವಿಭಾಗವು ನೀಡಿರುವ ಮಾಹಿತಿ ಮತ್ತು ವರದಿ ಪ್ರಕಾರ 2021ರಿಂದ 2024ರವರೆಗೆ ಅಂಕಪಟ್ಟಿಗಳನ್ನು ಮುದ್ರಿಸಲಾಗಿತ್ತು. 2021ರಲ್ಲಿ 1,68,43,425 ರು, 2022ರಲ್ಲಿ 3,54,03,480 ರು., 2023ರಲ್ಲಿ 6,45,27,400 ಸೇಇ ಟ್ಟಾರೆ 11,67,74,305 ರು ವೆಚ್ಚವಾಗಿತ್ತು.
ಅದೇ ರೀತಿ ‘ಹಿಂದಿನ ಕುಲಸಚಿವರಾದ ಪ್ರೊ ಡಿ ಎಂ ಮದ್ರಿ, ಪ್ರೊ ಸಂಜೀವ್ ಕುಮಾರ್, ಪ್ರೊ ಸೊನಾರ ನಂದಪ್ಪ, ಪ್ರೊ ದಮ್ಮ ಪ್ರಕಾಶ್ ಅವರು ನಾಲ್ಕು ವರ್ಷಗಳಿಂದ ವಿದ್ಯಾರ್ಥಿಗಳ ಅಂಕಪಟ್ಟಿ ಹಾಗೂ ಘಟಿಕೋತ್ಸವ ಪ್ರಮಾಣಪತ್ರಗಳನ್ನು ನೀಡದೇ ವಿಳಂಬ ಮಾಡಿದ್ದಾರೆ,’ ಎಂದೂ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
ವಿಶ್ವವಿದ್ಯಾಲಯಕ್ಕೆ ಈಗಾಗಲೇ ಶುಲ್ಕ ಭರಿಸಿರುವ ಮಹಾವಿದ್ಯಾಲಯಗಳೀಗೆ ಅಂಕಪಟ್ಟಿಗಳನ್ನು ರವಾನಿಸಲಾಗಿದೆ. ಶೇ.55ರಷ್ಟು ಮಹಾವಿದ್ಯಾಲಯಗಳು ವಿವಿ ಶುಲ್ಕ ಭರಿಸಿರಲಿಲ್ಲ. ಹೀಗಾಗಿ ಶುಲ್ಕ ಭರಿಸಬೇಕಾದ ಮಹಾವಿದ್ಯಾಲಯಗಳ ಪಟ್ಟಿಯನ್ನು ವಿ ವಿ ಯ ಅಂತರ್ಜಾಲದಲ್ಲಿ ಪ್ರಕಟಿಸಿದೆ. ಈ ಮಹಾವಿದ್ಯಾಲಯಗಳು ಶುಲ್ಕವನ್ನು ಭರಿಸಿದ್ದಲ್ಲಿ ಅಂಕಪಟ್ಟಿಗಳನ್ನು ರವಾನಿಸಲು ಕ್ರಮ ವಹಿಸಲಾಗುವುದು ಎಂದು ಟಿಪ್ಪಣಿ ಹಾಳೆಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಅಂಕಪಟ್ಟಿಗಳನ್ನು ಡಿಜಿ ಲಾಕರ್ ರೂಪದಲ್ಲಿ ನ್ಯಾಡ್ ಡಿಜಿ ಲಾಕರ್‍ನಲ್ಲಿ ಸಂಗ್ರಹಿಸಲಾಗಿತ್ತು. ಇದರ ಮೂಲಕ ಮುದ್ರಣವಾದ ಅಂಕಪಟ್ಟಿಗಳಲ್ಲಿ ವಿದ್ಯಾರ್ಥಿಗಳ ಒಟ್ಟು ಅಂಕಗಳು ಹಾಗೂ ವಿಷಯಗಳಲ್ಲಿ ಬದಲಾವಣೆಗಳು ಕಂಡು ಬರುತ್ತಿವೆ. ಯುಯುಸಿಎಂಎಸ್‌ನ ಎನ್‌ಇಪಿ ಬ್ಯಾಚ್‌ನ ಅಂಕಪಟ್ಟಿಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಸರ್ಕಾರಕ್ಕೆ ಮಾಹಿತಿ ನೀಡಿರುವುದು ಗೊತ್ತಾಗಿದೆ.
‘ಪರೀಕ್ಷಾ ವಿಭಾಗದಲ್ಲಿ 2021ರಿಂದ 2025ರವರೆಗೆ ಇಲ್ಲಿಯವರೆಗೆ ಒಟ್ಟು 7,49,600 ಅಂಕಪಟ್ಟಿಗಳನ್ನು ಮುದ್ರಿಸಲಾಗಿದೆ. ಅಂಕಪಟ್ಟಿಗಳನ್ನು ಮುದ್ರಿಸಿ ಆರ್ಥಿಕ ನಷ್ಟಕ್ಕೆ ಕಾರಣರಾಗಿರುವ ಅಧಿಕಾರಿ ಸಿಬ್ಬಂದಿಗಳ ಪಟ್ಟಿಯನ್ನೂ ಒದಗಿಸಲಾಗಿದೆ,’ ಎಂದು ಸರ್ಕಾರಕ್ಕೆ ನೀಡಿದ ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಶೇ.60ರಷ್ಟು ಕಾಲೇಜುಗಳು ವಿಶ್ವವಿದ್ಯಾಲಯಕ್ಕೆ ಪರೀಕ್ಷಾ ಶುಲ್ಕವನ್ನು ಭರಿಸಿರಲಿಲ್ಲ. ಹೀಗಾಗಿ ಮಹಾವಿದ್ಯಾಲಯಗಳ ಅಂಕಪಟ್ಟಿಗಳನ್ನು ತಡೆಹಿಡಿದಿತ್ತು. ಇದರ ಬಗ್ಗೆ ಅನೇಕ ಬಾರಿ ಸುತ್ತೋಲೆ ರವಾನಿಸಿತ್ತು. ಆದರೂ ಕಾಲೇಜುಗಳ ಪ್ರಾಂಶುಪಾಲರು ಸ್ಪಂದಿಸಿರಲಿಲ್ಲ ಎಂದು ಕಲ್ಬುರ್ಗಿ ವಿವಿಯು ಸರ್ಕಾರಕ್ಕೆ ಮಾಹಿತಿ ಒದಗಿಸಿತ್ತು.
ಖಾಸಗಿ ಕಂಪನಿಗೆ 425 ಕೋಟಿ ಲಾಭ; ಸರ್ಕಾರದ ಸೂಚನೆ ಬದಿಗಿರಿಸಿ ಹಗರಣಕ್ಕೆ ನಾಂದಿ ಹಾಡಿದ ರಾಜ್ಯಪಾಲ?
ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ರಾಯಚೂರು ಮತ್ತು ಬೀದರ್ ಬೇರ್ಪಟ್ಟಿದ್ದವು. ಹೀಗಾಗಿ ಶುಲ್ಕ ಭರಿಸದೇ ಇರುವ ಮಹಾವಿದ್ಯಾಲಯಕ್ಕೆ ಅಂಕಪಟ್ಟಿಗಳು ಸಲ್ಲಿಕೆಯಾಗಿರಲಿಲ್ಲ. ಸಿಬಿಸಿಎಸ್ ಬ್ಯಾಚ್‌ನ ಎಸ್ ಸಿ, ಎಸ್ ಟಿ, ಒಬಿಸಿ ವಿದ್ಯಾರ್ಥಿಗಳಿಗೆ ನೇರವಾಗಿ ವಿದ್ಯಾರ್ಥಿ ವೇತನದ ಹಣ ಪಾವತಿಯಾಗುತ್ತಿದೆ. ಪ್ರಾಂಶುಪಾಲರು ವಿದ್ಯಾರ್ಥಿಗಳಿಂದ ಬಾಕಿ ಉಳಿದ ಪರೀಕ್ಷಾ ಶುಲ್ಕವನ್ನು ಅವರಿಂದ ಭರಿಸಿಕೊಂಡು ವಿಶ್ವವಿದ್ಯಾಲಯಕ್ಕೆ ಸಲ್ಲಿಸುವುದು ಕಾಲೇಜಿನ ಜವಾಬ್ದಾರಿಯಾಗಿತ್ತು. ಇದನ್ನು ಹೊರತುಪಡಿಸಿ ಪ್ರಾಂಶುಪಾಲರು ಗೊಂದಲ ಸೃಷ್ಟಿಸಿದ್ದರು ಎಂದು ವಿವಿಯು ಸರ್ಕಾರಕ್ಕೆ ಸಲ್ಲಿಸಿದ್ದ ವರದಿಯಲ್ಲಿ ವಿವರಿಸಿತ್ತು.