ಸಿದ್ದು, ಡಿಕೆಶಿ ವಿರುದ್ಧ ಪ್ರಕರಣ; 3.16 ಕೋಟಿ ಸಂಭಾವನೆ, ಕಪಿಲ್‌ ಸಿಬಲ್‌ ಮೂಲ ಬಿಲ್‌ಗಳನ್ನು ಸಲ್ಲಿಸಿರಲಿಲ್ಲವೇ?

ಬೆಂಗಳೂರು; ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‍‌ ಅವರ ವಿರುದ್ಧ ಸಿಬಿಐ ತನಿಖೆಗೆ ವಹಿಸಿದ್ದ ಆದೇಶವನ್ನು ಹಿಂಪಡೆದುಕೊಂಡಿರುವುದನ್ನು ನ್ಯಾಯಾಲಯದಲ್ಲಿ ಸಮರ್ಥಿಸಿಕೊಂಡಿದ್ದ ಹಿರಿಯ ವಕೀಲ ಕಪಿಲ್‌ ಸಿಬಲ್‌ ಅವರು 3.16 ಕೋಟಿ ರು.ಗಳ ಮೊತ್ತದ ಸಂಭಾವನೆಗೆ ಸಂಬಂಧಿಸಿದಂತೆ ಒಳಾಡಳಿತ ಇಲಾಖೆಗೆ ಮೂಲ ಬಿಲ್‌ಗಳನ್ನೇ ಸಲ್ಲಿಸಿರಲಿಲ್ಲ!

 

ಅಲ್ಲದೇ ಈ ಪ್ರಕರಣಗಳಲ್ಲಿ ಸರ್ಕಾರದ ಪರವಾಗಿ ವಾದ ಮಂಡಿಸುವ ಸಂಬಂಧ ಕಪಿಲ್‌ ಸಿಬಲ್‌ ಅವರನ್ನು ಒಳಾಡಳಿತ ಇಲಾಖೆಯ ಅಪರಾಧಗಳು- ಎ ಶಾಖೆಯು ನೇಮಕ ಆದೇಶ ಹೊರಡಿಸಿರಲಿಲ್ಲ. ಆದರೂ ಸಹ ಒಳಾಡಳಿತ ಇಲಾಖೆಯ ಅಪರಾಧಗಳು -ಎ ಶಾಖೆಯು ಕಪಿಲ್‌ ಸಿಬಲ್‌ ಅವರು ಕೋರಿದ್ದ ಸಂಭಾವನೆಯ ಬಿಲ್‌ಗಳ ಕುರಿತಾಗಿ ಅಡ್ವೋಕೇಟ್‌ ಜನರಲ್‌ ಅವರೊಂದಿಗೆ ಪತ್ರ ವ್ಯವಹಾರ ನಡೆಸಿತ್ತು.

 

ಈ ಸಂಬಂಧ ಒಳಾಡಳಿತ ಇಲಾಖೆಯ ಅಪರಾಧ ಶಾಖೆಯ ಅಧಿಕಾರಿಗಳು ಅಡ್ವೋಕೇಟ್‌ ಜನರಲ್‌ ಕಚೇರಿಯೊಂದಿಗೆ ಇ-ಮೇಲ್‌ ಮೂಲಕ ಸಂಪರ್ಕಿಸಿದ್ದರು. ಆದರೂ ಸಹ ಸಂಭಾವನೆ ಪಾವತಿ ವಿಚಾರದ ಕುರಿತು ಆರ್‍‌ಟಿಐ ಅಡಿಯಲ್ಲಿ ಯಾವುದೇ ಮಾಹಿತಿಯನ್ನು ನೀಡಿಲ್ಲ. ಒಳಾಡಳಿತ ಇಲಾಖೆಯ ಅಪರಾಧಗಳು -ಎ ಶಾಖೆಯ ನಡೆಯು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

 

ಮೂಲ ಬಿಲ್‌ಗಳನ್ನು ಸಲ್ಲಿಸಿರಲಿಲ್ಲವೇ?

 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರವು 14 ಬದಲಿ ನಿವೇಶನಗಳನ್ನು ಹಂಚಿಕೆ ಮಾಡಿದ್ದ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ಸಿಬಿಐ ತನಿಖೆ ನಡೆಸಬೇಕು ಎಂದು ಸ್ನೇಹಮಯಿ ಕೃಷ್ಣ ಎಂಬುವರು ದಾವೆ (ರಿಟ್‌ ಅರ್ಜಿ ಸಂಖ್ಯೆ 27084/2024, 22356/2024) ಹೂಡಿದ್ದರು.

 

ಅದೇ ರೀತಿ ಡಿ ಕೆ ಶಿವಕುಮಾರ್‍‌ ವಿರುದ್ಧ ಅಕ್ರಮ ಆಸ್ತಿ ಗಳಿಕೆ, ಹಣ ಅಕ್ರಮ ವಹಿವಾಟು ತಡೆ ಕಾಯ್ದೆ ಅಡಿಯಲ್ಲಿ ಹಿಂದಿನ ಬಿಜೆಪಿ ಸರ್ಕಾರವು ಸಿಬಿಐ ತನಿಖೆಗೆ ವಹಿಸಿತ್ತು. ಇದನ್ನು ಈಗಿನ ರಾಜ್ಯ ಕಾಂಗ್ರೆಸ್‌ ಸರ್ಕಾರವು ಹಿಂಪಡೆದುಕೊಂಡಿತ್ತು. ಸರ್ಕಾರದ ಈ ನಡೆಯನ್ನು ಪ್ರಶ್ನಿಸಿದ್ದ ಬಿಜೆಪಿ ಶಾಸಕ (ಈಗ ಉಚ್ಚಾಟಿತ) ಬಸನಗೌಡ ಪಾಟೀಲ ಯತ್ನಾಳ ಅವರು ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ರಿಟ್‌ ಅರ್ಜಿ (27220/2023, c/w 670/2024) ಸಲ್ಲಿಸಿದ್ದರು.

 

ಈ ಮೇಲಿನ ಎಲ್ಲಾ ಅರ್ಜಿಗಳಲ್ಲಿ ಸರ್ಕಾರದ ನಡೆಯನ್ನು ಸಮರ್ಥಿಸಿಕೊಳ್ಳಲು ರಾಜ್ಯ ಅಡ್ವೋಕೇಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ ಅವರು ಹಿರಿಯ ವಕೀಲ ಹಾಗೂ ರಾಜ್ಯಸಭೆ ಸದಸ್ಯ ಕಪಿಲ್‌ ಸಿಬಲ್‌ ಅವರ ಸೇವೆಯನ್ನು ಬಳಸಿಕೊಂಡಿದ್ದರು. ಈ ಸಂಬಂಧ ಕಪಿಲ್‌ ಸಿಬಲ್‌ ಅವರು ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯ ಸರ್ಕಾರದ ಪರವಾಗಿ ಹಾಜರಾಗಿದ್ದರು ಮತ್ತು ಸಂಭಾವನೆ ಕೋರಿದ್ದರು.

 

ವಿಶೇಷವೆಂದರೇ ಕಪಿಲ್‌ ಸಿಬಲ್‌ ಅವರು ಕೋರಿದ್ದ ಸಂಭಾವನೆಗೆ ಸಂಬಂಧಿಸಿದಂತೆ ಮೂಲ ಬಿಲ್‌ಗಳನ್ನೇ ಸಲ್ಲಿಸಿರಲಿಲ್ಲ ಎಂದು ತಿಳಿದು ಬಂದಿದೆ. ಒಳಾಡಳಿತ ಇಲಾಖೆಯು ಈ ಸಂಬಂಧ ಮೂಲ ಬಿಲ್‌ಗಳು ಇಲ್ಲದಿರುವ ಕುರಿತು ಟಿಪ್ಪಣಿ ಮಾಡಿಕೊಂಡಿತ್ತು ಎಂದು ಗೊತ್ತಾಗಿದೆ.

 

 

ಹಾಗೆಯೇ ಒಳಾಡಳಿತ ಇಲಾಖೆಯ ಅಪರಾಧಗಳು -ಎ ಶಾಖೆ ಅಧೀನ ಕಾರ್ಯದರ್ಶಿ ಅಂಬಿಕಾ ಅವರು ಸಹ ಮೂಲ ಬಿಲ್‌ಗಳನ್ನು ಕಳಿಸಬೇಕು ಎಂದು 2025ರ ಏಪ್ರಿಲ್‌ 24ರಂದು ಬೆಳಿಗ್ಗೆ 11.54 ಕ್ಕೆ  ಅಡ್ವೋಕೇಟ್‌ ಜನರಲ್‌ ಅವರಿಗೆ ಇ-ಮೇಲ್‌ ಕೂಡ ಮಾಡಿದ್ದರು.

 

‘ಕಪಿಲ್‌ ಸಿಬಲ್‌ ಅವರು ರಿಟ್‌ ಪಿಟಿಷನ್‌ ಸಂಖ್ಯೆ 27084/2024, 23356/2024 ಗೆ ಸಂಬಂಧಿಸಿದಂತೆ ಸಲ್ಲಿಸಿರುವ ಬಿಲ್‌ಗಳ ಜೆರಾಕ್ಸ್‌ ಪ್ರತಿಯು ಸರ್ಕಾರದಲ್ಲಿ ಸ್ವೀಕೃತವಾಗಿದೆ. ಎಚ್‌ಎಲ್‌ಸಿ ಶಾಖೆಯು ಮೂಲ ಬಿಲ್‌ಗಳನ್ನು ಕೇಳುತ್ತಿದೆ. ಹೀಗಾಗಿ ಮೂಲ ಬಿಲ್‌ಗಳನ್ನು ಕಳಿಸಿಕೊಡಬೇಕು,’ ಎಂದು ಅಂಬಿಕಾ ಅವರು ಅಡ್ವೋಕೇಟ್‌ ಜನರಲ್‌ ಕಚೇರಿಗೆ ಇ-ಮೈಲ್‌ ಮೂಲಕ ಕೋರಿದ್ದರು ಎಂದು ತಿಳಿದು ಬಂದಿದೆ.

 

ಇದೇ ರಿಟ್‌ ಅರ್ಜಿಗಳ ಕುರಿತಾಗಿಯೇ ‘ದಿ ಫೈಲ್‌’, ಆರ್‍‌ಟಿಐ ಅಡಿಯಲ್ಲಿ ಕಾನೂನು ಇಲಾಖೆಗೆ ಮಾಹಿತಿ ಕೋರಿತ್ತು.

 

 

ಈ ಅರ್ಜಿಗಳನ್ನು ಕಾನೂನು ಇಲಾಖೆಯು ಒಳಾಡಳಿತ ಇಲಾಖೆಯ ಅಪರಾಧಗಳು ಶಾಖೆ ಎ ಗೆ ವರ್ಗಾಯಿಸಿತ್ತು.
ಇದಕ್ಕೆ 2025ರ ಮೇ 22ರಂದು ಹಿಂಬರಹ ನೀಡಿರುವ ಒಳಾಡಳಿತ ಇಲಾಖೆಯ ಅಪರಾಧ ಶಾಖೆಗಳು ಎ ವಿಭಾಗವು, ಈ ಮಾಹಿತಿಯು ಅಪರಾಧ ಶಾಖೆ – ಎ ವಿಭಾಗಕ್ಕೆ ಸಂಬಂಧಿಸಿಲ್ಲ ಮತ್ತು ಈ ರಿಟ್‌ ಅರ್ಜಿಗಳಲ್ಲಿ ವಾದ ಮಾಡಲು ಕಪಿಲ್‌ ಸಿಬಲ್‌ ಅವರನ್ನು ನೇಮಕ ಮಾಡಿಲ್ಲ ಎಂದು ಉತ್ತರಿಸಿದೆ.

 

‘ರಿಟ್‌ ಅರ್ಜಿ ಸಂಖ್ಯೆ 27084/2024, 22356/2024 ಅರ್ಜಿಯು ಅಪರಾಧಗಳು ಎ ಶಾಖೆಗೆ ಸಂಬಂಧಿಸಿರದ ಕಾರಣ ಈ ರಿಟ್‌ ಅರ್ಜಿಯಲ್ಲಿ ವಾದ ಮಂಡಿಸಲು ಕಪಿಲ್‌ ಸಿಬಲ್‌ ಅವರನ್ನು ನೇಮಕ ಮಾಡಿರುವುದಿಲ್ಲ. ಮುಂದುವರೆದು ರಿಟ್‌ ಅರ್ಜಿ ಸಂಖ್ಯೆ 27484/2024ರಲ್ಲಿ ವಾದ ಮಾಡಲು ಕಪಿಲ್‌ ಸಿಬಲ್‌ ಅವರನ್ನು ನೇಮಕ ಮಾಡಿರುವುದಿಲ್ಲ.  ನ್ಯಾಯಾಲಯದಲ್ಲಿ ಹಾಜರಾಗಿರುವ ಕುರಿತು ಮಾಹಿತಿಯನ್ನು ಅಡ್ವೋಕೇಟ್‌ ಜನರಲ್‌ ಕಚೇರಿಯಿಂದ ಪಡೆಯಬಹುದು,’ ಎಂದು 2025ರ ಮೇ 22ರಂದು ಒಳಾಡಳಿತ ಇಲಾಖೆಯು ಹಿಂಬರಹದಲ್ಲಿ ತಿಳಿಸಿದೆ.

 

 

ಇವೇ ಪ್ರಕರಣಗಳಲ್ಲಿ ಸರ್ಕಾರದ ಪರ ನ್ಯಾಯಾಲಯದಲ್ಲಿ ಹಾಜರಾಗಿದ್ದ ಕಪಿಲ್‌ ಸಿಬಲ್‌ ಅವರು ಮೂಲ ಬಿಲ್‌ಗಳನ್ನು ಸಲ್ಲಿಸಿಲ್ಲ ಎಂದು ಇದೇ ಒಳಾಡಳಿತ ಇಲಾಖೆಯ ಅಪರಾಧಗಳು ಎ ಶಾಖೆಯ ಅಧಿಕಾರಿಗಳು ಅಡ್ವೋಕೇಟ್‌ ಜನರಲ್‌ ಕಚೇರಿಗೆ ಇ-ಮೇಲ್‌ನಲ್ಲಿ ಪತ್ರ ವ್ಯವಹಾರ ನಡೆಸಿದ್ದರೂ ಸಹ ಆರ್‍‌ಟಿಐ ಅಡಿಯಲ್ಲಿ ಕಪಿಲ್‌ ಸಿಬಲ್‌ ಅವರನ್ನು ನೇಮಿಸಿಯೇ ಇಲ್ಲ ಎಂದು ಉತ್ತರಿಸಿರುವ ನಡೆಯು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

 

ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್  ವಿರುದ್ಧ ಈ ಹಿಂದಿನ ಬಿಜೆಪಿ ಸರ್ಕಾರ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆದಿದ್ದ ರಾಜ್ಯ ಕಾಂಗ್ರೆಸ್‌ ಸರ್ಕಾರದ ನಿರ್ಧಾರವನ್ನು,   ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಬಲವಾಗಿ ಸಮರ್ಥಿಸಿಕೊಂಡಿದ್ದ ಹಿರಿಯ ವಕೀಲ ಕಪಿಲ್‌ ಸಿಬಲ್‌ ಅವರು 2.80 ಕೋಟಿ ರು.ಗಳ ಸಂಭಾವನೆ ಕೋರಿದ್ದರು.

 

ಡಿಕೆಶಿ ವಿರುದ್ಧ ಸಿಬಿಐ ತನಿಖೆ ಹಿಂಪಡೆತಕ್ಕೆ ಸಮರ್ಥನೆ; ಕಪಿಲ್‌ ಸಿಬಲ್‌ರಿಂದ 2.80 ಕೋಟಿ ಸಂಭಾವನೆ ಕೋರಿಕೆ

 

 

ಮುಡಾ ಪ್ರಕರಣದಲ್ಲಿಯೂ ರಾಜ್ಯ ಸರ್ಕಾರದ ನಿರ್ಧಾರವನ್ನು ನ್ಯಾಯಾಲಯಗಳಲ್ಲಿ  ಬಲವಾಗಿ ಸಮರ್ಥಿಸಿಕೊಂಡಿದ್ದ  ಕಪಿಲ್‌ ಸಿಬಲ್‌ ಅವರು 1.49 ಕೋಟಿ ರು ಸಂಭಾವನೆ ಕೋರಿದ್ದರು.

 

ಸಿದ್ದು ವಿರುದ್ಧ ಸಿಬಿಐ ತನಿಖೆಗೆ ತಡೆ; ಸರ್ಕಾರದ ನಿಲುವು ಸಮರ್ಥನೆ, ಕಪಿಲ್‌ ಸಿಬಲ್‌ರಿಗೆ 1.49 ಕೋಟಿ ಸಂಭಾವನೆ

 

 

ಉಚ್ಛ ನ್ಯಾಯಾಲಯ ಮತ್ತು ಸರ್ವೋಚ್ಛ ನ್ಯಾಯಾಲಯದಲ್ಲಿನ ಪ್ರಕರಣಗಳಲ್ಲಿ ಸರ್ಕಾರದ ಪರವಾಗಿ ಹಾಜರಾದ ಹಿರಿಯ ವಕೀಲರ ಸಂಭಾವನೆ ನಿಗದಿಪಡಿಸಲು 2025 ಮಾರ್ಚ್‌ 26ರಂದು ನಡೆದಿದ್ದ ಸಭೆಯಲ್ಲಿ ಈ ಕುರಿತು ಚರ್ಚೆಯಾಗಿತ್ತು.

 

ಆದಾಯ ಮೂಲಕ್ಕಿಂತ 200 ಕೋಟಿ ಹೆಚ್ಚು ಅಕ್ರಮ ಸಂಪಾದನೆ ಮಾಡಿದ್ದರು ಎಂಬ ಆರೋಪಕ್ಕೆ ಸಂಬಂಧಿಸಿದಂತೆ  ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಮತ್ತು ಇತರರ ವಿರುದ್ಧ ತನಿಖೆ ನಡೆಸಲು ಸಿಬಿಐಗೆ ಹಸ್ತಾಂತರಿಸಿದ್ದ ಪ್ರಕರಣವನ್ನು  ಹಿಂಪಡೆದುಕೊಳ್ಳಲು ಗೃಹ ಇಲಾಖೆಯು  ಸಚಿವ ಸಂಪುಟಕ್ಕೆ ಪ್ರಸ್ತಾವನೆಯನ್ನು ಮಂಡಿಸಿತ್ತು.

 

ಡಿ ಕೆ ಶಿವಕುಮಾರ್‍‌ ವಿರುದ್ಧ ಸಿಬಿಐ ತನಿಖೆ; ಬಿಜೆಪಿ ಸರ್ಕಾರದ ಆದೇಶ ಹಿಂಪಡೆಯಲು ಸಚಿವ ಸಂಪುಟಕ್ಕೆ ಪ್ರಸ್ತಾವನೆ

 

ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆಗೆ ನೀಡಿ ಆದೇಶಿಸಿದ್ದ ಈ ಹಿಂದಿನ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಆದೇಶ ರದ್ದು ಕೋರಿರುವ ಮೇಲ್ಮನವಿ ವಿಚಾರಣೆ ಕುರಿತು ಇದೇ ನವೆಂಬರ್‍‌ 29ರಂದು ಕರ್ನಾಟಕ ಹೈಕೋರ್ಟ್‌ ವಿಚಾರಣೆ ನಿಗದಿಪಡಿಸಿರುವ ಬೆನ್ನಲ್ಲೇ ಹಿಂದಿನ ಸರ್ಕಾರವು ಸಿಬಿಐ ತನಿಖೆಗೆ ಹೊರಡಿಸಿದ್ದ ಆದೇಶವನ್ನು ಹಿಂಪಡೆಯಲು ಗೃಹ ಸಚಿವ ಡಾ ಜಿ ಪರಮೇಶ್ವರ್‍‌ ಅವರು ಅನುಮೋದಿಸಿದ್ದರು.

SUPPORT THE FILE

Latest News

Related Posts