ಬೆಂಗಳೂರು; ಯಲಹಂಕದಲ್ಲಿರುವ ಮುಸಾಫಿರ್ ಖಾನ (ಚಟ್ಟಾರಾಂ) ಸುನ್ನಿ ವಕ್ಫ್ ಸಂಸ್ಥೆಗೆ ಸೇರಿದ 239.38 ಎಕರೆಯಲ್ಲಿ 5.31 ಎಕರೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಶಾಸಕ ಎನ್ ಎ ಹ್ಯಾರೀಸ್ ಅವರು ತಮ್ಮ ತಾಯಿ ಮತ್ತು ಪತ್ನಿ ಹೆಸರಿನಲ್ಲಿ ಖರೀದಿಸಿರುವುದನ್ನು ಉಪ ಲೋಕಾಯುಕ್ತರಾಗಿದ್ದ ಎನ್ ಆನಂದ್ ಅವರು ಪತ್ತೆ ಹಚ್ಚಿರುವುದು ಇದೀಗ ಬಹಿರಂಗವಾಗಿದೆ.
ಅಲ್ಲದೇ ಮುಸಾಫಿರ್ ಖಾನ ಸುನ್ನಿ ವಕ್ಫ್ ಸಂಸ್ಥೆಗೆ ಸೇರಿದ್ದ ಭೂಮಿಗೆ ಸಂಬಂಧಿಸಿದಂತೆ ಮಾರಾಟಗಾರರು ಮಾಡಿಕೊಟ್ಟಿದ್ದ ಸೇಲ್ ಡೀಡ್‌ಗಳನ್ನು ಪರಿಶೀಲಿಸದೆಯೇ ವಕ್ಫ್ ಆಸ್ತಿಗಳನ್ನು ಖರೀದಿಸಲಾಗಿತ್ತು. ಈ ಪ್ರಕ್ರಿಯೆಯಲ್ಲಿ ಎನ್ ಎ ಹ್ಯಾರೀಸ್ ಅವರು ಭಾಗಿಯಾಗಿದ್ದಾರೆ. ಮತ್ತು ಈ ಪ್ರಕರಣವನ್ನು ತನಿಖೆಗೊಳಪಡಿಸುವ ಅವಶ್ಯಕತೆ ಇದೆ ಎಂದು ಉಪ ಲೋಕಾಯುಕ್ತರಾಗಿದ್ದ ಎನ್ ಅನಂದ್ ಅವರು ನೀಡಿದ್ದ ತನಿಖಾ ವರದಿಯಲ್ಲಿ ಶಿಫಾರಸ್ಸು ಮಾಡಿದ್ದರು.
ಉಪ ಲೋಕಾಯುಕ್ತ ಎನ್ ಆನಂದ್ ಅವರು ನೀಡಿದ್ದ ತನಿಖಾ ವರದಿ ಮತ್ತು ಇದರೊಂದಿಗೆ ಲಗತ್ತಿಸಿದ್ದ ಸಮಗ್ರ ದಾಖಲಾತಿಗಳನ್ನು ಒಳಗೊಂಡ 27,000ಕ್ಕೂ ಹೆಚ್ಚು ಪುಟಗಳ ದಾಖಲೆಗಳನ್ನು ‘ದಿ ಫೈಲ್’, ಆರ್‍ಟಿಐ ಅಡಿಯಲ್ಲಿ ಪಡೆದುಕೊಂಡಿದೆ.
ಯಲಹಂಕ ಹೋಬಳಿಯ ಒಡೆಯರಪುರ ವಿವಿಧ ಸರ್ವೆ ನಂಬರ್‍ಗಳಲ್ಲಿನ ವಕ್ಫ್‌ಗೆ ಸೇರಿರುವ 5.31 ಎಕರೆ ಭೂಮಿಯನ್ನು ಖರೀದಿಸುವ ಸಂದರ್ಭದಲ್ಲಿ ಇದರ ಮೂಲವನ್ನು ಮಾರಾಟಗಾರರಿಂದ ಪರಿಶೀಲಿಸಿಲ್ಲ ಎಂಬುದು ಸ್ಪಷ್ಟವಾಗಿದೆ. ಈ ದಾಖಲೆಗಳ ಪ್ರಕಾರ ಸುರಯ್ಯಾ ಮೊಹಮ್ಮದ್ (ನಾ ಹ್ಯಾರಿಸ್ ಅವರ ತಾಯಿ) ಮತ್ತು ತಾಹಿರಾ ಹ್ಯಾರಿಸ್ ( ಎನ್ ಎ ಹ್ಯಾರಿಸ್ ಅವರ ಪತ್ನಿ) ಮಾರಾಟಗಾರರ ಶೀರ್ಷಿಕೆಯನ್ನು ಪರಿಶೀಲಿಸದೇ ಆಸ್ತಿಗಳನ್ನು ಖರೀದಿಸಿದ್ದಾರೆ ಎಂದು ತೀರ್ಮಾನಿಸಲು ಪ್ರಾಥಮಿಕವಾಗಿ ಸಾಕ್ಷ್ಯಗಳಿವೆ ಎಂದು ಉಪ ಲೋಕಾಯುಕ್ತರ ತನಿಖಾ ವರದಿಯು ಅಭಿಪ್ರಾಯಪಟ್ಟಿರುವುದು ತಿಳಿದು ಬಂದಿದೆ.
ಈ ಭೂಮಿಯ ಖರೀದಿಸುವ ಪ್ರಕ್ರಿಯೆ ಮತ್ತು ಸುರಯ್ಯಾ ಮೊಹಮದ್ ಮತ್ತು ತಾಹಿರಾ ಹ್ಯಾರೀಸ್ ಅವರಿಗೆ ವರ್ಗಾಯಿಸುವ ಪ್ರಕ್ರಿಯೆಯಲ್ಲಿ ಎನ್ ಎ ಹ್ಯಾರೀಸ್ ಅವರು ಭಾಗವಹಿಸಿದ್ದರು . ಈ ಮಾರಾಟ ವಹಿವಾಟುಗಳ ಪ್ರಾಮಾಣಿಕತೆಯನ್ನು ತನಿಖೆ ಮಾಡುವ ಅವಶ್ಯಕತೆಯಿದೆ. ಮತ್ತು ಇದು ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದೆ ಎಂದು ಒಪ್ಪಿಕೊಳ್ಳಬಹುದು ಎಂದು ಎನ್ ಆನಂದ್ ಅವರ ತನಿಖಾ ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ತನಿಖಾ ವರದಿಯಲ್ಲೇನಿದೆ?
ಯಲಹಂಕ ಹೋಬಳಿಯ ಒಡೆಯರಪುರ ಸರ್ವೆ ನಂಬರ್ 4,5,2,13,11,7,8 ಮತ್ತು 9 ರಲ್ಲಿ ಮತ್ತು ಬೇರೆ ಬೇರೆ ಹಳ್ಳಿಯಲ್ಲಿ ಗೆಜೆಟ್ ಅಧಿಸೂಚನೆ ( MBW 19(1)65, 22n JULY 1965) ಪ್ರಕಾರ ಮುಸಾಫಿರ್ ಖಾನ (ಚಟ್ಟಾರಾಂ) ಸುನ್ನಿ ವಕ್ಫ್ ಸಂಸ್ಥೆಯು 239. 38 ಎಕರೆ ಭೂಮಿ ಹೊಂದಿತ್ತು. ಇದರಲ್ಲಿ ತೆರೆದ ಅಂಗಳ, ಅಂಗಡಿಗಳು ಕೂಡ ಇದ್ದವು. ಭೂ ದಾಖಲೆಗಳು, ಭೂ ಮಾಪನ ನಿರ್ದೇಶಕರ ಕಚೇರಿಯು ಮುಸಾಫಿರ್ ಖಾನಾ ನಿರ್ವಹಣೆಗಾಗಿ ಈ ಭೂಮಿಗಳನ್ನು ಸಣ್ಣ ಇನಾಂಗಳ ಅಂತಿಮ ಹಕ್ಕುಪತ್ರಗಳನ್ನು ಷರತ್ತುಬದ್ಧವಾಗಿ ನೀಡಿತ್ತು.
ಈ ಸಂಬಂಧ ಹಲವು ನಿದರ್ಶನಗಳನ್ನು ವಿವರಿಸಿರುವ ಉಪ ಲೋಕಾಯುಕ್ತ ಎನ್ ಆನಂದ್ ಅವರು ಪ್ರಕರಣವಾರು ಹೇಗೆಲ್ಲಾ ವಹಿವಾಟು ನಡೆದಿದೆ ಮತ್ತು ವಕ್ಫ್ ಕಾಯ್ದೆಗಳ ಉಲ್ಲಂಘನೆ ಹೇಗೆಲ್ಲಾ ಆಗಿದೆ ಎಂಬುದನ್ನು ವರದಿಯಲ್ಲಿ ಸುದೀರ್ಘವಾಗಿ ವಿವರಿಸಿರುವುದು ತಿಳಿದು ಬಂದಿದೆ.
ಮುಸಾಫಿರ್ ಖಾನಾದ ಭೂಮಿಗಳನ್ನು ಕಿತಾಬುಲ್ ಔಕಾಫ್‌ನಲ್ಲಿ ವಕ್ಫ್ ಕಾಯ್ದೆ 1954ರ ಸೆಕ್ಷನ್ 26 ಮತ್ತು 28 ರ ಅಡಿಯಲ್ಲಿ ನೋಂದಾಯಿಸಲು ( LCC NO 4, 1975) 1975ರಲ್ಲೇ ವಕ್ಫ್ ಬೋರ್ಡ್‌ನ ಆಡಳಿತಾಧಿಕಾರಿಯು ಆದೇಶಿಸಿದ್ದರು. ಈ ಅಸ್ತಿಗಳಿಗೆ ಸಂಬಂಧಿಸಿದಂತೆ ಹಲವು ಒಪ್ಪಂದಗಳನ್ನು ಮಾಡಿಕೊಳ್ಳಲಾಗಿತ್ತು. ಸೈಯದ್ ಉಸ್ಮಾನ್ ಎಂಬುವರು ಈ ಆಸ್ತಿಯಲ್ಲಿದ್ದ ಮೂರು ಅಂಗಡಿಗಳನ್ನು (213/193, 214/194 ಮತ್ತು 215/195 ಖಾತೆ ಸಂಖ್ಯೆ ಹೊಂದಿರುವ m.no 7170720) ವೈ ಎನ್ ಅಶ್ವತ್ ಎಂಬುವರಿಗೆ ವರ್ಗಾಯಿಸಿದ್ದರು.
ಇದನ್ನು ವಕ್ಫ್ ಮಂಡಳಿಯ ಅಂದಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯು ವಕ್ಫ್ ಕಾಯ್ದೆಯ ಸೆಕ್ಷನ್ 52ರ ಅಡಿಯಲ್ಲಿ ಈ ಕುರಿತು ವಿಚಾರಣೆ ನಡೆಸಿದ್ದರು. ಆರೋಪಿ ವರ್ಗಾವಣೆದಾರ ಮತ್ತು ವರ್ಗಾವಣೆದಾರರಿಗೆ ನೋಟೀಸ್ ನೀಡಲಾಗಿತ್ತು. ನಂತರ ವಕ್ಫ್ ಕಾಯ್ದೆ ಸೆಕ್ಷನ್ 51ರ ಉಲ್ಲಂಘನೆ ಮಾಡಿದ್ದನ್ನು ಖಚಿತಪಡಿಸಿಕೊಂಡಿದ್ದರು. ವರ್ಗಾವಣೆಯಾದ ಆಸ್ತಿಯನ್ನು ವಶಪಡಿಸಿಕೊಳ್ಳಲು 2005ರ ಜುಲೈ 5ರಂದು (ನಮೂನೆ ಸಂಖ್ಯೆ 67) ಬೆಂಗಳೂರು ನಗರದ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದರು ಎಂದು ತನಿಖಾ ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಈ ವರದಿ ಅನುಸಾರ ಬೆಂಗಳೂರು ನಗರ ಜಿಲ್ಲಾಧಿಕಾರಿಯವರು ವೈ ಎನ್ ಅಶ್ವಥ್ ಮತ್ತು ಬಿ ಎಚ್ ರೇಣುಕಾ ಅವರಿಗೆ 30 ದಿನದೊಳಗೇ ವಕ್ಫ್ ಆಸ್ತಿಯನ್ನು ವಕ್ಫ್ ಮಂಡಳಿಗೆ ಹಸ್ತಾಂತರಿಸಬೇಕು ಎಂದು ಆದೇಶಿಸಿದ್ದರು. ಒಂದೊಮ್ಮೆ ಹಸ್ತಾಂತರಿಸದಿದ್ದಲ್ಲಿ ಪೊಲೀಸರ ನೆರವಿನೊಂದಿಗೆ ಕಂದಾಯ ಇಲಾಖೆಯು ಈ ಆಸ್ತಿಯನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುತ್ತದೆ ಎಂದು ಆದೇಶದಲ್ಲಿ ಎಚ್ಚರಿಸಿದ್ದರು.
ವಕ್ಫ್ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ವರದಿ ಮತ್ತು ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶವನ್ನು ವೈ ಎನ್ ಅಶ್ವತ್ ಮತ್ತು ಬಿ ಎಚ್ ರೇಣುಕಾ ಎಂಬುವರು ವಕ್ಫ್‌ನ ನ್ಯಾಯ ಮಂಡಳಿಯಲ್ಲಿ ಮೇಲ್ಮನವಿ ಮೂಲಕ 2010 ಫೆಬ್ರವರಿ 19 ರಂದು ಪ್ರಶ್ನಿಸಿದ್ದರು. ನಂತರ ಹೈಕೋರ್ಟ್‌ನಲ್ಲಿಯೂ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು. ಈ ಅರ್ಜಿಯು 2012ರವರೆಗೆ ಹೈಕೋರ್ಟ್‌ನಲ್ಲಿ ಬಾಕಿ ಇತ್ತು. 2018ರಲ್ಲಿ ಅರ್ಜಿಯು ವಜಾಗೊಂಡಿರುವುದು ಗೊತ್ತಾಗಿದೆ.
ಇದಲ್ಲದೇ ಸರ್ವೆ ನಂಬರ್ 2,3,4 ಮತ್ತು 15 ರಲ್ಲಿನ 25 ಎಕರೆ 37 ಗುಂಟೆಗಳಲ್ಲಿ 38 ಎಕರೆ 23 ಗುಂಟೆ ಭೂಮಿಗೆ ಸಂಬಂಧಿಸಿದ ಪ್ರಕರಣವನ್ನು ತನಿಖಾ ವರದಿಯಲ್ಲಿ ವಿವರಿಸಿದೆ. ಈ ಭೂಮಿಗೆ ಸಂಬಂಧಿಸಿದಂತೆ ಆಸ್ತಿಯನ್ನು ವಶಪಡಿಸಿಕೊಂಡವರು ಎಂದು ಹೇಳಲಾದ ವ್ಯಕ್ತಿಯನ್ನು ಭೂಸ್ವಾಧೀನದಾರ ಎಂದು ಘೋಷಿಸಿತ್ತು. ಅದನ್ನು ತೆರವುಗೊಳಿಸಬೇಕಾಗುತ್ತದೆ ಮತ್ತು ದಾಖಲೆಗಳನ್ನು ಮರುಪಡೆಯಬೇಕಾಗಿದೆ ಎಂದು ವಕ್ಫ್ ಮಂಡಳಿಯ ವಿಚಾರಣಾ ಅಧಿಕಾರಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು 2015ರ ಫೆ.9ರಂದು (ENQ/379/BNU/2012) ತೀರ್ಪು ನೀಡಿದ್ದರು.
ಈ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲು ಮತ್ತು ಆಸ್ತಿಯ ಸ್ವಾಧೀನವನ್ನು ವಕ್ಫ್ ಮಂಡಳಿ ಹೆಸರಿನಲ್ಲಿ ಮರುಸ್ಥಾಪಿಸಲು ವಕ್ಫ್ ಕಾಯ್ದೆ ಸೆಕ್ಷನ್ 52 (1)ರ ಅಡಿಯಲ್ಲಿ ಜಿಲ್ಲಾಧಿಕಾರಿಯನ್ನು ವಕ್ಫ್ ಮಂಡಳಿಯು ಕೋರಿತ್ತು. ಅಲ್ಲದೇ ಇದೇ ರೀತಿ ವಕ್ಫ್ ಗೆ ಸೇರಿದ ಮತ್ತಷ್ಟು ಆಸ್ತಿಗಳಿಗೆ ಸಂಬಂಧಿಸಿದಂತೆ ಆಸ್ತಿಗಳ ಮರು ಸ್ಥಾಪನೆಗಾಗಿ 2015ರ ಫೆ.9ರಂದು ಹಲವು ಆದೇಶಗಳನ್ನು ಹೊರಡಿಸಿದ್ದರು.
ವಡೇರಪುರ ಗ್ರಾಮದ ಸರ್ವೆ ನಂಬರ್ 11ರಲ್ಲಿನ 12 ಗುಂಟೆ, ಸರ್ವೆ ಸಂಖ್ಯೆ 15 ರ ಆಸ್ತಿ ಹೊಂದಿರುವ 4 ಎಕರೆ ಮತ್ತು 14 ಗುಂಟೆ, 0.18 ಗುಂಟೆಯ ಖರಾಬು ಭೂಮಿ, ಸರ್ವೆ ನಂಬರ್ 13ರಲ್ಲಿನ 3 ಎಕರೆ 1 ಗುಂಟೆ (ಒಟ್ಟು 5 ಎಕರೆ 31 ಗುಂಟಾಗಳ ಭೂಮಿಯಲ್ಲಿ) ಯನ್ನು ವಕ್ಫ್ ಎಂದು ಗೆಜೆಟ್‌ನಲ್ಲಿ ಅಧಿಸೂಚಿಸಿತ್ತು. ಉಳಿದ ಪ್ರದೇಶಗಳಿಗೆ ಸಂಬಂಧಿಸಿದಂತೆ ದಾಖಲೆಗಳು ಲಭ್ಯವಿರಲಿಲ್ಲ. ಮತ್ತು ಸರ್ವೆ ನಂಬರ್ 11 ಮ್ತು 13ಕ್ಕೆ ಸಂಬಂಧಿಸಿದಂತೆ ಕೆಲವು ಮಾರಾಟ ಪತ್ರಗಳ ಪ್ರತಿಗಳನ್ನು ಉಪ ನೋಂದಣಿದಾರರ ಕಚೇರಿಯಿಂದ ಉಪ ಲೋಕಾಯುಕ್ತರ ನೇತೃತ್ವದ ತನಿಖಾ ತಂಡವು ಪಡೆದಿತ್ತು.
ಇದೇ 5.31 ಎಕರೆ ವಿಸ್ತೀರ್ಣದ ಭೂಮಿಯನ್ನು ಎನ್ ಎ ಹ್ಯಾರೀಸ್ ಅವರು ತಮ್ಮ ತಾಯಿ ಮತ್ತು ಪತ್ನಿ ಹೆಸರಿನಲ್ಲಿ ಖರೀದಿಸಿದ್ದರು. ಈ ಖರೀದಿ ಪ್ರಕ್ರಿಯೆಯನ್ನು ಉಪ ಲೋಕಾಯುಕ್ತರು ತನಿಖೆ ಸಂದರ್ಭದಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಈ ಭೂಮಿಗೆ ಸಂಬಂಧಿಸಿದಂತೆ 2006ರ ನವೆಂಬರ್ 22ರಂದು ಶಕೀರಾ ಬೇಗಂ, ಸೈಯದ್ ಇಬ್ರಾಹಿಂ, ಸೈಯದ್ ಮುಯಿನ್ ಉರ್ ರೆಹಮ್ನಾ, ಸರ್ವತ್ ಬೇಗಂ ಇಶ್ರತ್ ಬೇಗಂ, ನುಸ್ರತ್ ಬೇಗಂ, ನಜೀಮಾ ಬೇಗಂ (ಮಾರಾಟಗಾರರು) ಆಬ್ಸಲೂಟ್ ಸೇಲ್ ಡೀಡ್‌ಗಳನ್ನು ಕಾರ್ಯಗತಗೊಳಿಸಿದ್ದರು.
ಹ್ಯಾರೀಸ್ ಅವರು ತಮ್ಮ ತಾಯಿ ಸುರಯ್ಯಾ ಮೊಹಮ್ಮದ್ ಅವರ ಹೆಸರಿನಲ್ಲಿ 2.30 ಎಕರೆ ಮತ್ತು ಪತ್ನಿ ತಾಹೀರಾ ಹ್ಯಾರೀಸ್ ಹೆಸರಿನಲ್ಲಿ 3.01 ಎಕರೆ ಸೇರಿದಂತೆ ಒಟ್ಟು 5.31 ಎಕರೆಯನ್ನು ಖರೀದಿಯಾಗಿತ್ತು. ಈ ಪೈಕಿ 2.30 ಎಕರೆಯು ಮೂಲತಃ ಮೊದಲ ಮಾರಾಟಗಾರನ ಪತಿ ಸೈಯದ್ ಯೂಸೂಫ್ ಅವರಿಗೆ ಸೇರಿತ್ತು. ಸೈಯದ್ ಯೂಸೂಫ್ ಅವರು ಜೀವಿತಾವಧಿಯಲ್ಲಿ ಈ ಆಸ್ತಿಯನ್ನು ಅನುಭವಿಸಿದ್ದರು. ಇವರ ನಿಧನಾನಂತರ ಈ ಆಸ್ತಿಗೆ ತಮ್ಮ ಮಕ್ಕಳನ್ನು ಕಾನೂನುಬದ್ಧ ಉತ್ತರಾಧಿಕಾರಿಗಳನ್ನು ನೇಮಿಸಿದ್ದರು.
ಈ ಆಸ್ತಿಗಳು (22/7/1965 ) ಗೆಜೆಟ್‌ನಲ್ಲಿ (ಸಂಖ್ಯೆ 74 ರಲ್ಲಿ) ಸೂಚಿತ ವಕ್ಫ್ ಆಸ್ತಿಗಳಾಗಿವೆ. ಮಾರಾಟ ಪತ್ರಗಳಿಂದ,ಹೇಳಲಾದ ಸೈಯದ್ ಯೂಸುಫ್ ಸರ್ವೆ ಸಂಖ್ಯೆ 11 ಮತ್ತು 13 ರ ಜಮೀನುಗಳ ಸಂಪೂರ್ಣ ಮಾಲೀಕರಾದರು ಎಂಬುದು ಸ್ಪಷ್ಟವಾಗಿಲ್ಲ. ಈ ಆಸ್ತಿಗಳಿಗೆ ಮಾರಾಟಗಾರರ ಟೈಟಲ್ ವಿವರಣೆಯು ಅಸ್ಪಷ್ಟವಾಗಿದೆ. ಮೊದಲ ಮಾರಾಟಗಾರರ ಪತಿ ಮತ್ತು 2 ರಿಂದ 7 ಮಾರಾಟಗಾರರ ತಂದೆ ಸೈಯದ್ ಯೂಸಫ್ ಮೇಲಿನ ಆಸ್ತಿಗಳಿಗೆ ಹೇಗೆ ಮಾಲೀಕರಾದರು ಎಂಬುದನ್ನು ದಾಖಲೆಯಲ್ಲಿ ಹೇಳಲಾಗಿಲ್ಲ. ಇವು ವಕ್ಫ್ ಆಸ್ತಿಗಳೆಂದು ಒಪ್ಪಿಕೊಳ್ಳಲಾಗಿದೆ ಮತ್ತು ವಕ್ಫ್ ಆಸ್ತಿಗಳಾಗಿಯೇ ಮುಂದುವರೆದಿದೆ ಎಂದು ಉಪ ಲೋಕಾಯುಕ್ತರ ತನಿಖಾ ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಈ ಆಸ್ತಿಗಳನ್ನು ಖರೀದಿಸಿರುವ ಸುರಯ್ಯಾ ಮೊಹಮ್ಮದ್ ಮತ್ತು ತಾಹೀರಾ ಹ್ಯಾರೀಸ್ ಅವರು ನಲಪದ್ ಹೌಸ್‌ನ 23ನೇ ನಂಬರ್‍ನಲ್ಲಿ ವಾಸಿಸುತ್ತಿದ್ದಾರೆ ಎಂದು ತನಿಖಾ ವರದಿಯಲ್ಲಿ ಉಲ್ಲೇಖಿಸಿದೆ.
‘ಈ ಆಸ್ತಿಗಳಿಗೆ ತಮ್ಮ ಶೀರ್ಷಿಕೆಯ ಮೂಲವನ್ನು ಮಾರಾಟಗಾರರು, ಮಾರಾಟಗಾರರಿಂದ ಪರಿಶೀಲಿಸಿಲ್ಲ ಎಂಬುದು ಸ್ಪಷ್ಟವಾಗಿದೆ.
ಮೇಲಿನ ದಾಖಲೆಗಳ ಅಡಿಯಲ್ಲಿ ಮಾರಾಟಗಾರರಾದ ಸುರಯ್ಯಾ ಮೊಹಮ್ಮದ್ (ಎನ್ ಎ ಹ್ಯಾರಿಸ್ ಅವರ ತಾಯಿ) ಮತ್ತು ತಾಹಿರಾ ಹ್ಯಾರಿಸ್ 2/0 ನಾ ಹ್ಯಾರಿಸ್ ಅವರು ಮಾರಾಟಗಾರರ ಶೀರ್ಷಿಕೆಯನ್ನು ಪರಿಶೀಲಿಸದೇ ಮೇಲಿನ ಆಸ್ತಿಗಳನ್ನು ಖರೀದಿಸಿದ್ದಾರೆ ಎಂದು ತೀರ್ಮಾನಿಸಲು ಪ್ರಾಥಮಿಕವಾಗಿ ಸಾಕ್ಷ್ಯಗಳಿವೆ,’ ಎಂದು ತನಿಖಾ ವರದಿಯಲ್ಲಿ ಹೇಳಿರುವುದು ಗೊತ್ತಾಗಿದೆ.
ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರೂ ಸಹ ವರದಿಯನ್ನು ಸಲ್ಲಿಸಿದ್ದಾರೆ. ವಕ್ಫ್ ಆಸ್ತಿಗಳನ್ನು ಎನ್ ಎ ಹ್ಯಾರೀಸ್ ಅವರು ಸುರಯ್ಯಾ ಮೊಹಮದ್ ಮತ್ತು ತಾಹೀರ್ ಹ್ಯಾರೀಸ್ ಅವರ ಹೆಸರಿನಲ್ಲಿ ಖರೀದಿ ಮತ್ತು ವರ್ಗಾಯಿಸುವ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ ಎಂದುಅ ಹೇಳಲಾಗಿದೆ ಎಂದು ಪ್ರಸ್ತಾವಿಸಿರುವ ಉಪ ಲೋಕಾಯುಕ್ತ ಎನ್ ಆನಂದ್ ಅವರು ಈ ಮಾರಾಟ ವಹಿವಾಟುಗಳ ಪ್ರಾಮಾಣಿಕತೆಯನ್ನು ತನಿಖೆ ಮಾಡುವ ಅವಶ್ಯಕತೆಯಿದೆ ಮತ್ತು ಇದು ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದೆ ಎಂದು ಒಪ್ಪಿಕೊಳ್ಳಬಹುದು ಎಂದು ಸಹ ಅಭಿಪ್ರಾಯಿಸಿದ್ದರು.