ಬದಲಿ ನಿವೇಶನ; ಸರ್ಕಾರದ ಅನುಮೋದನೆಯಿಲ್ಲದೇ ಅನಗತ್ಯ ನಿರ್ಣಯ, ಪದೇಪದೇ ನಿಯಮಗಳ ಉಲ್ಲಂಘನೆ

ಬೆಂಗಳೂರು; ಬದಲಿ ನಿವೇಶನ ಮಂಜೂರಾತಿಗೆ ಸಂಬಂಧಿಸಿದ ಹಲವು ಪ್ರಕರಣಗಳಲ್ಲಿ ಕರ್ನಾಟಕ ನಗರಾಭಿವೃದ್ದಿ ಪ್ರಾಧಿಕಾರಗಳ ನಿಯಮ 16 (1)ನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಪದೇ ಪದೇ  ಉಲ್ಲಂಘಿಸಿತ್ತು. ಅಲ್ಲದೇ ಹಿಂದಿನ ಬಿಜೆಪಿ ಸರ್ಕಾರವೂ  ಹಲವು ಪ್ರಕರಣಗಳಲ್ಲಿ ಬದಲಿ ನಿವೇಶನಗಳನ್ನು  50;50ರ ಅನುಪಾತದಲ್ಲಿ ಮಂಜೂರು ಮಾಡಿತ್ತು ಎಂಬ ಸಂಗತಿಯು ಆರ್‍‌ಟಿಐ ದಾಖಲೆಗಳಿಂದ ಬಹಿರಂಗವಾಗಿದೆ.

 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಬದಲಿ ನಿವೇಶನ ನೀಡಿರುವ ಪ್ರಕರಣದಲ್ಲಿ ಲೋಕಾಯುಕ್ತರು ಸಲ್ಲಿಸಿದ್ದ ಬಿ  ರಿಪೋರ್ಟ್‌ನ್ನು ಸ್ನೇಹಮಯಿ ಕೃಷ್ಣ ಅವರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ. ಈ ಮಧ್ಯೆ  ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಬಿ ಎಂ ಪಾರ್ವತಿ ಅವರಿಗೆ 14 ಬದಲಿ ನಿವೇಶನ (ಈಗ ವಾಪಸ್‌ ಮಾಡಲಾಗಿದೆ) ಹಂಚಿಕೆ ಮಾಡಿದ ಸಂದರ್ಭದಲ್ಲಿ ಮುಡಾ ಆಯುಕ್ತರಾಗಿದ್ದ ಡಾ  ಡಿ ಬಿ ನಟೇಶ್‌ ಅವರಿಗೆ ಜಾರಿ ನಿರ್ದೇಶನಾಲಯ ಜಾರಿ ಮಾಡಿದ್ದ  ಸಮನ್ಸ್‌ ರದ್ದುಪಡಿಸಿ ಏಕಸದಸ್ಯ ಪೀಠ ಮಾಡಿದ್ದ ಆದೇಶಕ್ಕೆ ತಡೆಯಾಜ್ಞೆ ನೀಡಲು ಕರ್ನಾಟಕ ಹೈಕೋರ್ಟ್‌ ನಿರಾಕರಿಸಿದೆ.

 

ಈ ಬೆಳವಣಿಗೆ ನಡುವೆಯೇ  ಬದಲಿ ನಿವೇಶನಗಳಿಗೆ ಸಂಬಂಧಿಸಿದಂತೆ ಮುಡಾವು ನಿರಂತರವಾಗಿ ನಿಯಮಗಳನ್ನು ಉಲ್ಲಂಘಿಸುತ್ತಿತ್ತು ಎಂದು ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರು ಟಿಪ್ಪಣಿ ಹಾಳೆಯಲ್ಲಿ ಪ್ರಸ್ತಾವಿಸಿರುವುದು ಮುನ್ನೆಲೆಗೆ ಬಂದಿದೆ.

 

ಈ ಸಂಬಂಧ ‘ದಿ ಫೈಲ್‌’ ಸಮಗ್ರ ಕಡತವನ್ನು ಆರ್‍‌ಟಿಐ ಅಡಿಯಲ್ಲಿ ಪಡೆದುಕೊಂಡಿದೆ.

 

ಬದಲಿ ನಿವೇಶನಗಳನ್ನು ಮಂಜೂರು ಮಾಡುವ ಸಂಬಂಧ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ವಿವಿಧ ಸಭೆಗಳಲ್ಲಿ ತೀರ್ಮಾನ ಕೈಗೊಂಡಿತ್ತು. ಅಲ್ಲದೇ ತುಂಡು ಭೂಮಿ ಹಂಚಿಕೆ, ಭೂ ಪರಿಹಾರವಾಗಿ ಜಾಗ ನೀಡುವ ಕುರಿತು ಮಾರ್ಗಸೂಚಿಗಳನ್ನು ತಯಾರಿಸುವವರೆಗೂ ಯಾವುದೇ ಕ್ರಮ ವಹಿಸಬಾರದು ಎಂದು ನಗರ ಗ್ರಾಮಾಂತರ ಯೋಜನೆ ನಿರ್ದೇಶನಾಲಯವು 2023ರಲ್ಲಿ ಹಲವು ಬಾರಿ ನಿರ್ದೇಶನಗಳನ್ನು ನೀಡಿತ್ತು. ಆದರೆ ಈ ಎಲ್ಲಾ ನಿರ್ದೇಶನಗಳನ್ನು ಮುಡಾ ಅಧಿಕಾರಿವರ್ಗವು ಉಲ್ಲಂಘಿಸಿತ್ತು ಎಂಬುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

 

2020ರ ಸೆ.14, ನವೆಂಬರ್‍‌ 6, 2021ರ ಆಗಸ್ಟ್‌ 27 ಹಾಗೂ 2022ರ ಜೂನ್‌ 22ರಂದು ಪ್ರಾಧಿಕಾರದ ಸಭೆಗಳ ವಿವಿಧ ವಿಷಯಗಳಲ್ಲಿ ಬದಲಿ ನಿವೇಶನಗಳನ್ನು ಮಂಜೂರು ಮಾಡಲು ಮುಡಾ ತೀರ್ಮಾನಿಸಿತ್ತು. ಅಲ್ಲದೇ ಪ್ರಾಧಿಕಾರವು ನಡೆಸಿದ್ದ ಈ ಎಲ್ಲಾ ಸಭೆಗಳಲ್ಲಿ ಮಾತ್ರವಲ್ಲದೇ ಹೆಚ್ಚಿನ ಎಲ್ಲಾ ಸಭೆಗಳಲ್ಲೂ ಇದೇ ರೀತಿ ನಿರ್ಣಯಗಳನ್ನು ಕೈಗೊಂಡಿತ್ತು ಎಂಬುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

 

 

ಹಂಚಿಕೆಮಾಡಲಾದ ನಿವೇಶನಗಳ ಸ್ವಾಧೀನತೆಯನ್ನು ಪಡೆಯಲು ನಿಯಮಗಳಲ್ಲಿ ತಿಳಿಸಿದ ಕಾರಣಗಳಿಂದಾಗಿ ಸಾಧ್ಯವಾಗದೇ ಇದ್ದ ಸಂದರ್ಭದಲ್ಲಿ ಮಾತ್ರ ಬದಲಿ ನಿವೇಶನವನ್ನು ನಿಯಮ 16ರ ಅಡಿಯಲ್ಲಿ ವಿಧಿಸಲಾಗಿರುವ ಷರತ್ತುಗಳಂತೆ ಮಾತ್ರ ಹಂಚಿಕೆ ಮಾಡಲು ಅವಕಾಶ ಕಲ್ಪಿಸಿತ್ತು.

 

ಬದಲಿ ನಿವೇಶನ ಹಂಚಿಕೆಗೆ ಮುಂದಿರಿಸಿದ್ದ ಕಾರಣಗಳಿವು

 

ಮೂಲ ನಿವೇಶನಗಳು ದ್ವಿ ಮಂಜೂರಾತಿಯಾಗಿರುವುದು, ನಕ್ಷೆಯಲ್ಲಿ ಲಭ್ಯವಿದ್ದು ಭೌತಿಕವಾಗಿ ಕಡತಗಳು ಲಭ್ಯವಿಲ್ಲದೇ ಇರುವುದು, ಮಂಜೂರುಆತಿ ಅಳತೆಯಲ್ಲಿ ಭೌತಿಕವಾಗಿ ಕಡಿಮೆ ಇರುವುದು, ಭೂ ಸ್ವಾಧೀನ ಪ್ರಕ್ರಿಯೆಗೆ ಒಳಪಡದೇ ಇರುವುದು, ಡಿ ನೋಟೀಫೈ ಪ್ರದೇಶದಲ್ಲಿ ಕಂಡುಬಂದಿರುವುದು, ನಿವೇಶನಗಳು ಮೂಲೆ ನಿವೇಶನಗಳಾಗಿರುವುದು, ನಿವೇಶನಗಳ ಮೇಲೆ ಹೈಟೆನ್ಷನ್‌ ಲೈನ್‌ ಹಾದು ಹೋಗಿರುವುದು, ಪ್ರಾಧಿಕಾರದ ಬಡಾವಣೆಗೆ ಹೊಂದಿಕೊಂಡಂತಹ ಖಾಸಗಿ ಬಡಾವಣೆಗಳಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಿರುವುದು, ಭೂ ಮಾಲೀಕರಿಗೆ ಪರಿಹಾರ ನೀಡದೇ ಅಭಿವೃದ್ದಿಪಡಿಸಿದ ಪ್ರಕರಣಗಳು, ನ್ಯಾಯಾಲಯದ ಪ್ರಕರಣಗಳು ಹೀಗೆ ವಿವಿಧ ಕಾರಣಗಳನ್ನು ನಮೂದಿಸಿ ನಿವೇಶನ ಮಂಜೂರಾದ ಜಮೀನಿನ ಮಾಲೀಕರಿಗೆ 50;50 ಅನುಪಾತದಲ್ಲಿ ಬದಲಿ ನಿವೇಶನ ಹಂಚಿಕೆ ಮಾಡಿತ್ತು ಎಂದು ಟಿಪ್ಪಣಿ ಹಾಳೆಯಲ್ಲಿ ಪ್ರಸ್ತಾವಿಸಿರುವುದು ಗೊತ್ತಾಗಿದೆ.

 

 

ಅಲ್ಲದೆ ‘ಹಲವಾರು ಪ್ರಕರಣಗಳಲ್ಲಿ ಪ್ರಾಧಿಕಾರದ ಆಯುಕ್ತರು ನಿಯಮ 16)1)ರ ಅವಕಾಶಗಳನ್ನು ಉಲ್ಲಂಘಿಸಿ ಬದಲಿ ನಿವೇಶನ ಮಂಜೂರು ಮಾಡುವ ಬಗ್ಗೆ ಕ್ರಮ ವಹಿಸಿರುವುದು ಕಂಡು ಬಂದಿರುತ್ತದೆ. ಈ ನಿಯಮದಿಂದ ಒಮ್ಮೆ ಪ್ರಾಧಿಕಾರದ ಹಂಚಿಕೆಯಾದ ನಿವೇಶನಗಳನ್ನು ಸ್ವಾಧೀನಕ್ಕೆ ಪಡೆಯಲು ಸಾಧ್ಯವಾಗದ ಸಂದರ್ಭದಲ್ಲಿ ಮಾತ್ರ ಬದಲಿ ನಿವೇಶನ ಮಂಜೂರು ಮಾಡಲು ಅವಕಾಶಿವೆ. ಆದರೆ ಪ್ರಾಧಿಕಾರದ ಅಯುಕ್ತರು ಮತ್ತು ಅಧಿಕಾರಿ, ಸಿಬ್ಬಂದಿಗಳು ಈ ನಿಯಮಗಳನ್ನು ಉಲ್ಲಂಘಿಸಿ ಕ್ರಮ ವಹಿಸಿರುವುದು ಕಂಡು ಬಂದಿರುತ್ತದೆ,’ ಎಂದು ನಗರ ಗ್ರಾಮಾಂತರ ಯೋಜನೆ ನಿರ್ದೇಶನಾಲಯದ ಯೋಜನಾ ನಿರ್ದೇಶಕರು ಟಿಪ್ಪಣಿ ಹಾಳೆಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

 

ಅದೇ ರೀತಿ ಪ್ರಾಧಿಕಾರದ ಆಯುಕ್ತರು ಹಲವು ಪ್ರಕರಣಗಳಲ್ಲಿ ಬದಲಿ ನಿವೇಶನ ಮಂಜೂರು ಮಾಡಲು ಶೇ. 50;50ರ ಅನುಪಾತವನ್ನು ಅನುಸರಿಸಿತ್ತು. ಆದರೆ ಇದನ್ನು ಯಾವ ನಿಯಮಗಳಡಿ ಕ್ರಮ ಕೈಗೊಳ್ಳಲಾಗಿದೆ ಎಂಬ ವಿವರಗಳನ್ನು ಸಭೆಯ ವಿಷಯಗಳ ಟಿಪ್ಪಣಿಗಳಲ್ಲಿ ಉಲ್ಲೇಖಿಸಿಲ್ಲ. ಹಾಗೂ ವಿಷಯದ ಸಂಬಂಧ ಸರ್ಕಾರದ ಮಾರ್ಗದರ್ಶನಕ್ಕಾಗಲೀ ಅಥವಾ ಅನುಮೋದನೆಗಾಗಲೀ ಪ್ರಸ್ತಾವನೆ ಸಲ್ಲಿಸಿಲ್ಲ. ಮತ್ತು ಈ ಯಾವ ವಿಷಯಗಳಿಗೂ  ಅನುಮೋದನೆಯನ್ನು ಪಡೆಯದೇ ಕ್ರಮವಹಿಸಿರುವುದು ಕಂಡುಬಂದಿದೆ ಎಂದು ಯೋಜನಾ ನಿರ್ದೇಶಕರು ಟಿಪ್ಪಣಿ ಹಾಳೆಯಲ್ಲಿ ವಿವರಿಸಿದ್ದಾರೆ.

 

ಕರ್ನಾಟಕ ನಗರಾಭಿವೃದ್ದಿ ಪ್ರಾಧಿಕಾರಗಳಿಗೆ ಸಂಬಂಧಿಸಿದಂತೆ 2009ರ ಆಗಸ್ಟ್‌ 1ರಂದು ಹೊರಡಿಸಿದ್ದ ಕರ್ನಾಟಕ ರಾಜ್ಯ ಪತ್ರದದ ಪ್ರಕಾರ ನಗರಾಭಿವೃದ್ಧಿ ಪ್ರಾಧಿಕಾರಗಳು ಪರಿಹಾರದ ಬದಲಿಗೆ ಅಥವಾ ಭೂ ಮಾಲೀಕನೊಂದಿಗೆ ಪರಸ್ಪರ ಸಹಮತಿಯೊಂದಿಗೆ ಮಾಡಿಕೊಂಡ ಒಡಂಬಡಿಕೆಯಂತೆ ನಿವೇಶನಗಳನ್ನು ಆ ಯೋಜನೆಯಡಿಯಲ್ಲಿ ಅಭಿವೃದ್ಧಿಪಡಿಸುವ ಸದರಿ ಬಡಾವಣೆಯಲ್ಲಿಯೇ ನಿಯಮ 3(ಇ)ರಂತೆ ಲಾಟರಿ ಮೂಲಕ ನಿವೇಶನ ಹಂಚಿಕೆ ಮಾಡಲು ಅವಕಾಶ ಕಲ್ಪಿಸಿದೆ.

 

 

‘ಆದರೆ ಹಲವಾರು ಪ್ರಕರಣಗಳನ್ನು ಗಮನಿಸಲಾಗಿ ಈ ನಿಯಮಗಳು ಜಾರಿಗೆ ಬರುವ ಪೂರ್ವದಲ್ಲಿ ಜಮೀನುಗಳನ್ನು ಭೂ ಸ್ವಾಧೀನ ಕಾಯ್ದೆ 1894 ಮತ್ತು ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ 1987ರ ಕಲಂ 35 ಮತ್ತು 36ರ ಅಡಿ ಭೂ ಸ್ವಾಧೀನಪಡಿಸಿಕೊಂಡು ಅನುಷ್ಟಾನಗೊಳಿಸಿದ ವಸತಿ ಬಡಾವಣೆಗಳಿಗೂ ಅನ್ವಯಿಸಿ ನಿಯಮಬಾಹಿರವಾಗಿ ಕ್ರಮ ಕೈಗೊಂಡಿದೆ,’ ಎಂದು ಯೋಜನಾ ನಿರ್ದೇಶಕರು ಟಿಪ್ಪಣಿ ಹಾಳೆಯಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.

 

ಈ ಎಲ್ಲಾ ಅಂಶಗಳನ್ನೂ ನಗರ ಗ್ರಾಮಾಂತರ ಯೋಜನೆ ನಿರ್ದೇಶಕರು ಸರ್ಕಾರದ ಗಮನಕ್ಕೆ ತಂದಿದ್ದರು. ‘ಇಂತಹ ವಿಷಯಗಳಲ್ಲಿ ಪ್ರಾಧಿಕಾರವು ಸರ್ಕಾರದ ಅನುಮೋದನೆಯಿಲ್ಲದೇ ಅನಗತ್ಯ ನಿರ್ಣಯಗಳನ್ನು ಕೈಗೊಳ್ಳುತ್ತಿರುವುದು ಸಮಂಜಸವಲ್ಲ. ಈ ವಿಷಯಗಳಲ್ಲಿ ಪ್ರಾಧಿಕಾರದ ಆಯುಕ್ತರೂ ಕೂಡ ಯಾವುದೇ ಪ್ರತಿರೋಧ ಮಾಡದಿರುವುದು ಕಂಡು ಬಂದಿದೆ. ಈ ರೀತಿಯ ನಿರ್ಣಯಗಳಿಂದ ಸರ್ಕಾರದ ಬೊಕ್ಕಸಕ್ಕೆ ಆರ್ಥಿಕ ನಷ್ಟ ಉಂಟಾಗುತ್ತಿರುವುದನ್ನು ಗಮನಿಸಬಹುದಾಗಿದೆ,’ ಎಂದೂ ಟಿಪ್ಪಣಿಯಲ್ಲಿ ಸರ್ಕಾರದ ಗಮನಕ್ಕೆ ತಂದಿದ್ದರು.

 

ಈ ಟಿಪ್ಪಣಿಯನ್ನಾಧರಿಸಿ ನಗರಾಭಿವೃದ್ದಿ ಇಲಾಖೆಯು 2023ರ ಮಾರ್ಚ್‌ 14ರಂದು ಮುಡಾ ಆಯುಕ್ತರಿಗೆ ಪತ್ರವನ್ನು ಬರೆದಿತ್ತು.

 

ಈ ಪತ್ರದಲ್ಲೇನಿದೆ?

 

ಪ್ರಾಧಿಕಾರವು ಹಲವಾರು ಪ್ರಕರಣಗಳಲ್ಲಿ ನಿಯಮ 16 (1)ರ ಅವಕಾಶಗಳನ್ನು ಉಲ್ಲಂಘಿಸಿ ಬದಲಿ ನಿವೇಶನ ಮಂಜೂರು ಮಾಡಿ ಕ್ರಮವಹಿಸಿರುವುದು ಕಂಡು ಬಂದಿರುತ್ತದೆ. ಹಲವು ಪ್ರಕರಣಗಳಲ್ಲಿ ಭೂ ಮಾಲೀಕರಿಗೆ ಪರಿಹಾರ ನೀಡಿಲ್ಲವೆಂದು ಬದಲಿಯಾಗಿ ಅಭಿವೃದ್ಧಿಹೊಂದಿದ ಜಾಗದಲ್ಲಿ ಬೆಲೆಬಾಳುವ ಆಸ್ತಿಗಳನ್ನು ಹಂಚಿಕೆ ಮಾಡಿದೆ. ಹಾಗೂ ಶೆ.50;50ರ ಅನುಪಾತವನ್ನು ಅನುಸರಿಸಿರುವುದು ಕಂಡುಬಂದಿದೆ. ಯಾವ ನಿಯಮಗಳಡಿ ಕ್ರಮ ಕೈಗೊಳ್ಳಲಾಗಿದೆ ಎಂಬ ವಿವರಗಳನ್ನು ಸಭೆಯ ವಿಷಯಗಳ ಟಿಪ್ಪಣಿಗಳಲ್ಲಿ ಉಲ್ಲೇಖಿಸಿಲ್ಲ.

 

 

 

ತುಂಡು ಭೂಮಿ ಹಂಚಿಕೆ, ಭೂ ಪರಿಹಾರವಾಗಿ ಬದಲಿ ಜಾಗ ನೀಡಿರುವ ಪ್ರಕರಣಗಳಲ್ಲಿ ಕಾಯ್ದೆ ಮತ್ತು ನಿಯಮಗಳಿಗೆ ವ್ಯತಿರಿಕ್ತವಾಗಿ ಕ್ರಮಕೈಗೊಂಡಲ್ಲಿ ಪ್ರಾಧಿಕಾರಕ್ಕೆ ಆರ್ಥಿಕ ನಷ್ಟವುಂಟಾಗುವ ಸಂಭವ ಇರುತ್ತದೆ. ಹಾಗಾಗಿ ಹಿಂದಿನ ಪ್ರಕರಣಗಳಿಗೂ ಪ್ರಾಧಿಕಾರವೇ ಜವಾಬ್ದಾರಿಯಾಗಿದೆ ಎಂದು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ 2023ರ ಮಾರ್ಚ್‌ 14ರಂದೇ ಪತ್ರ ಬರೆದಿದ್ದರು.

 

‘ತುಂಡು ಭೂಮಿ ಹಂಚಿಕೆ, ಭೂ ಪರಿಹಾರವಾಗಿ ಜಾಗ ನೀಡುವ ಕುರಿತು ಮಾರ್ಗಸೂಚಿ ತಯಾರಿಸುವುದು ಅವಶ್ಯಕತೆ ಇದೆ. ಈ ಮಾರ್ಗಸೂಚಿ ತಯಾರಿಸುವವರೆಗೂ ಇಂತಹ ಪ್ರಕರಣಗಳಲ್ಲಿ ಯಾವುದೇ ನಿರ್ಣಯಗಳನ್ನು ಕೈಗೊಳ್ಳಬಾರದು,’  ಎಂದು ಪತ್ರದಲ್ಲಿ ನಿರ್ದೇಶನ ನೀಡಿರುವುದು ಗೊತ್ತಾಗಿದೆ.

SUPPORT THE FILE

Latest News

Related Posts