ಸಿಜಿಡಿ ನೀತಿ; ಬೊಕ್ಕಸಕ್ಕೆ ಅಪಾರ ನಷ್ಟವಾಗಲಿದ್ದರೂ ನಷ್ಟದ ಪ್ರಶ್ನೆಯೇ ಇಲ್ಲವೆಂದು ಪ್ರತಿಪಾದನೆ, ಹಾರಿಕೆ ಉತ್ತರವಲ್ಲವೇ?

ಬೆಂಗಳೂರು;  ರಾಜ್ಯ ಅನಿಲ ಸರಬರಾಜು ನೀತಿಯು ನಗರಪಾಲಿಕೆ, ಪುರಸಭೆ ಸೇರಿದಂತೆ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಸಾವಿರಾರು  ಕೋಟಿ ರುಪಾಯಿ ಮೊತ್ತದಷ್ಟು ಆದಾಯ ಖೋತಾಕ್ಕೆ ಕಾರಣವಾಗಲಿದ್ದರೂ ಸಹ ಈ ನೀತಿಯಿಂದ ಆರ್ಥಿಕ ನಷ್ಟದ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ರಾಜ್ಯ ಕಾಂಗ್ರೆಸ್‌ ಸರ್ಕಾರವು ಪ್ರತಿಪಾದಿಸಿದೆ.

 

ರಾಜ್ಯ ನಗರ ಅನಿಲ ವಿತರಣೆ ನೀತಿಯಲ್ಲಿನ ಹಲವು ಲೋಪ ದೋಷಗಳು ಮತ್ತು ಈ ನೀತಿಯಿಂದಾಗುತ್ತಿರುವ ಆರ್ಥಿಕ ನಷ್ಟದ ಕುರಿತು ವಿಧಾನಪರಿಷತ್‌ನ ಸದಸ್ಯ ಡಿ ಎಸ್‌ ಅರುಣ್‌ ಅವರು ಕೇಳಿದ್ದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿರುವ ಸಚಿವ ಎಂ ಬಿ ಪಾಟೀಲ್‌ ಅವರು, ನೀತಿಯಲ್ಲಿನ ಸಾರವನ್ನು ಮಾತ್ರ ಮುಂದಿರಿಸಿ ಸ್ಥಳೀಯ ಸಂಸ್ಥೆಗಳಿಗೆ ಆಗಲಿದೆ ಎಂದು ಹೇಳಲಾಗಿರುವ ಆದಾಯ ಖೋತಾದ ಬಗೆಗಿನ ಮಾಹಿತಿಯನ್ನು ಒದಗಿಸಿಲ್ಲ.

 

ಈ ನೀತಿಯಿಂದ ಆಗಲಿದೆ ಎನ್ನಲಾಗಿರುವ ಆದಾಯ ಖೋತಾ ಅಥವಾ ಆರ್ಥಿಕ ನಷ್ಟದ ಕುರಿತು ಉತ್ತರದಲ್ಲಿ ಎಲ್ಲಿಯೂ ವಿಶ್ಲೇಷಣೆ ಅಂಶಗಳೂ ಕೂಡ ಇಲ್ಲ. ರಾಜ್ಯ ಅನಿಲ ನೀತಿಯಿಂದಾಗಿ ಅನಿಲ ಆಧರಿತ ಬೃಹತ್‌ ಉದ್ಯಮಗಳಿಗೆ ಇಷ್ಟೇ ಪ್ರಮಾಣದಲ್ಲಿ ಅಂದರೇ 5,000 ಕೋಟಿಯಷ್ಟು ಆರ್ಥಿಕ ಲಾಭವೂ ಆಗುತ್ತಿದೆ. ಅದೇ ರೀತಿ ಈ ನೀತಿಯು ಇಷ್ಟೊಂದು ಅಗಾಧ ಪ್ರಮಾಣದಲ್ಲಿ ನಷ್ಟಕ್ಕೂ ಕಾರಣವಾಗಲಿದೆ.

 

ಆದರೂ ಸಹ ಯಾವುದೇ ಆರ್ಥಿಕ ನಷ್ಟದ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಉತ್ತರ ಒದಗಿಸಿರುವ ಸರ್ಕಾರದ ನಡೆಯು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಂತಾಗಿದೆ.

 

ಡಿ ಎಸ್‌ ಅರುಣ್‌ ಅವರು ಕೇಳಿದ್ದ ಪ್ರಶ್ನೆಯಲ್ಲೇನಿದೆ?

 

ಸರ್ಕಾರಿ ಆದೇಶ ಸಂಖ್ಯೆ (ಐಡಿಡಿ 67 ಐಟಿಎಸ್‌ 2022, ದಿನಾಂಕ 7ನೇ ನವೆಂಬರ್ 2023ರಂತೆ ಜಾರಿಗೆ ತರಲಾಗಿರುವ ರಾಜ್ಯ ನಗರ ಅನಿಲ ನೀತಿಯಂಗತೆ ಅಳವಡಿಕೆ ಶುಲ್ಕವನ್ನು ಪ್ರತಿ ಮೀಟರ್‍‌ ಗೆ 1 ರುಗೆ ಇಳಿಸಿರುವುದರಿಂದ ನೇರ ಆರ್ಥಿಕ ಪರಿಣಾಮವಾಗಿ ಸರ್ಕಾರದ ಬೊಕ್ಕಸಕ್ಕೆ ಹಾನಿ ಉಂಟಾಗುವುದು ಸರ್ಕಾರದ ಗಮನಕ್ಕೆ ಬಂದಿದೆಯೇ?

 

ಅನಿಲ ವಿತರಣೆ ನೀತಿ ಜಾರಿಗೆ ತರುವ ಪೂರ್ವದಲ್ಲಿ ಇದರಿಂದ ಉಂಟಾಗಬಹುದಾದ ಆರ್ಥಿಕ ಪರಿಣಾಮಗಳ ವಿಶ್ಲೇ‍ಷಣೆ ಮಾಡಲಾಗಿದೆಯೇ?

 

 

ಹಾಗಿದ್ದಲ್ಲಿ ಸದರಿ ಆರ್ಥಿಕ ನೀತಿಯ ಪರಿಣಾಮಗಳೇನು, ಈ ನಿಟ್ಟಿನಲ್ಲಿ ಆರ್ಥಿಕ ಇಲಾಖೆಯು ವ್ಯಕ್ತಪಡಿಸಿರುವ ಅಭಿಪ್ರಾಯವೇನು?

 

ರಾಜ್ಯ ನಗರ ಅನಿಲ ವಿತರಣೆ ನೀತಿ ಜಾರಿಗೆ ಬಮದ ನಂತರ ಯಾವ ಯಾವ ಅನಿಲ ವಿತರಣೆ ಸಂಸ್ಥೆಗಳಿಗೆ ನಗರ ಸ್ಥಳೀಯ ಸಂಸ್ಥೆಗಳಿಗೆ ಲೋಕೋಪಯೋಗಿ ಇಲಾಖೆಯಿಂದ ಎಷ್ಟು ಕಿ ಮೀ ಉದ್ದದವರೆಗೆ ಅನಿಲ ಕೊಳವೆ ಅಳವಡಿಸಲು ಅನುಮತಿ ನೀಡಲಾಗಿದೆ

 

ಈ ಅನುಮತಿಗಳಿಗೆ ಪಡೆದಿರುವ ಶುಲ್ಕ ಎಷ್ಟು, ನೀತಿ ಜಾರಿಗೆ ಬರುವ ಪೂರ್ವದಲ್ಲಿ ಜಾರಿಯಲ್ಲಿದ್ದ ಶುಲ್ಕದಂತೆ ಅನುಮತಿ ನೀಡಿದ್ದರೇ ವಸೂಲಾಗಬಹುದಾಗಿದ್ದ ಶುಲ್ಕ ಎಷ್ಟು ಮಾಹಿತಿ ನೀಡಬೇಕು ಎಂದು ಪ್ರಶ್ನೆ ಕೇಳಿದ್ದರು.

 

ಆದರೆ ಸಚಿವ ಎಂ ಬಿ ಪಾಟೀಲ್‌ ಅವರು ರಾಜ್ಯ ಅನಿಲ ವಿತರಣೆ ನೀತಿ ಮತ್ತು ಅದರ ಉದ್ದೇಶದ ಬಗ್ಗೆ ಸುದೀರ್ಘವಾಗಿ ಉತ್ತರಿಸಿ ಒಂದೇ ಸಾಲಿನಲ್ಲಿ ಆರ್ಥಿಕ ನಷ್ಟ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹಾರಿಕೆ ಉತ್ತರ ನೀಡಿದ್ದಾರೆ.

 

ಎಂ ಬಿ ಪಾಟೀಲ್‌ ಉತ್ತರದಲ್ಲೇನಿದೆ?

 

ಅನಿಲ ಪೈಪ್‌ ಅಳವಡಿಕೆ ಮತ್ತು ಮೇಲ್ವಿಚಾರಣೆ ಶುಲ್ಕಗಳನ್ನು ಮೀಟರ್‍‌ಗೆ 1 ರು ಗೆ ಇಳಿಸುವ ಅನುಗುಣವಾದ ಪ್ರಯೋಜನವನ್ನು ಸಿಜಿಡಿ ಸಂಸ್ಥೆಗಳು ತಮ್ಮ ಭೌಗೋಳಿಕ ಪ್ರದೇಶಗಳಲ್ಲಿ ಪಿಎನ್‌ಜಿ ಮತ್ತು ಸಿಎನ್‌ಜಿ ಶುಲ್ಕಗಳಲ್ಲಿ ಸಾರ್ವಜನಿಕರಿಗೆ ವರ್ಗಾಯಿಸುವುದನ್ನು ಖಚಿತಪಡಿಸಿಕೊಳ್ಳಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಮತ್ತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ ಎರಡಕ್ಕೂ 2023ರ ನವೆಂಬರ್‍‌ 3ರಂದು ಪತ್ರದ ಮೂಲಕ ವಿನಂತಿಸಲಾಗಿದೆ.

 

 

ನೀತಿಯ ಈ ಉಪ ಕ್ರಮಗಳಿಂದ ಬರುವ ಲಾಭವನ್ನು ಸಿಜಿಡಿ ಸಂಸ್ಥೆಗಳು ತಮ್ಮಲ್ಲಿ ಉಳಿಸಿಕೊಳ್ಳದೇ ಸಾರ್ವಜನಿಕರಿಗೆ ವರ್ಗಾಯಿಸಲು ಇದು ಅನುವು ಮಾಡಿಕೊಡುತ್ತದೆ.

 

 

ಸರ್ಕಾರದ ಉಪ ಕ್ರಮಗಳನ್ನು ಕೇವಲ ಅನಿಲ ಪೈಪ್‌ ಹಾಕಲು ಅನುಮತಿ ಶುಲ್ಕದ ಆದಾಯದ ದೃಷ್ಟಿಯಿಂದ ಅಳೆಯಲಾಗುವುದಿಲ್ಲ. ಆದರೆ ಸಿಜಿಡಿ ಮೂಲಸೌಕರ್ಯದಿಂದ ಉದ್ಭವಿಸಬಹುದಾದ ಸಾಮಾಜಿಕ ಪ್ರಯೋಜನಗಳು ಮತ್ತು ಪರಿಸರ ಪ್ರಯೋಜನಗಳ ಪರಿಭಾಷೆಯಲ್ಲಿ ಅಳೆಯಬೇಕಾಗಿರುತ್ತದೆ. ಹಾಗಾಗಿ ಆರ್ಥಿಕ ನಷ್ಟದ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಉತ್ತರದಲ್ಲಿ ವಿವರಿಸಿದ್ದಾರೆ.

 

 

ಮೂಲ ಸೌಕರ್ಯ ಅಭಿವೃದ್ದಿ ಇಲಾಖೆಯು ಹೇಗೆ ಸಚಿವ ಸಂಪುಟವನ್ನೂ ದಿಕ್ಕು ತಪ್ಪಿಸಿದೆಯೋ ಅದೇ ರೀತಿ ಸಚಿವರೂ ಸಹ ಅದೇ ಮಾರ್ಗ ಹಿಡಿದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

‘ರಾಜ್ಯ ಅನಿಲ ನೀತಿಯಿಂದಾಗಿ ಅನಿಲ ಆಧಾರಿತ ಬೃಹತ್‌ ಉದ್ಯಮಗಳಿಗೆ ಇಷ್ಟೇ ಪ್ರಮಾಣದಲ್ಲಿ ಅಂದರೇ 5,000 ಕೋಟಿ ಆರ್ಥಿಕ ಲಾಭವೂ ಆಗಲಿದೆ. ಈ ನೀತಿಯು ಇಷ್ಟೊಂದು ಅಗಾಧ ಪ್ರಮಾಣದಲ್ಲಿ ನಷ್ಟಕ್ಕೆ ಕಾರಣವಾಗಲಿದೆ. ಆದರೂ ಸಹ ಯಾವುದೇ ನಷ್ಟ ಉಂಟಾಗುವುದಿಲ್ಲ ಎಂದು ಮೂಲ ಸೌಕರ್ಯ ಅಭಿವೃದ್ದಿ ಇಲಾಖೆಯು ಸಚಿವ ಸಂಪುಟವನ್ನೂ ದಿಕ್ಕು ತಪ್ಪಿಸಿದೆ. ಈ ಮೊದಲು ಪ್ರತಿ ಮೀಟರಿಗೆ 1,857 ರುಪಾಯಿ ಇದ್ದ ಅನುಮತಿ ಶುಲ್ಕವು  ಮೀಟರಿಗೆ 1 ರುಪಾಯಿ ಆದರೆ ನಷ್ಟ ಹೇಗೆ ಆಗುವುದಿಲ್ಲ,’ ಎಂದು ಅಧಿಕಾರಿಯೊಬ್ಬರು ಪ್ರಶ್ನಿಸುತ್ತಾರೆ.

 

ಪಿಡಬ್ಲ್ಯೂಡಿ ಅಭಿಪ್ರಾಯದತ್ತ ಗಮನಿಸದೇ

ಸದನವನ್ನು ದಾರಿತಪ್ಪಿಸಿದರೇ ಎಂ ಬಿ ಪಾಟೀಲ್‌?

 

ಈ ನೀತಿಯ ಬಗ್ಗೆ ಲೋಕೋಪಯೋಗಿ ಇಲಾಖೆಯು ಈಗಾಗಲೇ ತನ್ನ ಹಿಂದಿನ ಆದೇಶದಲ್ಲಿ 1,857 ರು ಪ್ರತಿ ಮೀಟರ್‍‌ ಪರವಾನಿಗೆ ಶುಲ್ಕ ಮತ್ತು ಮೇಲ್ವಿಚಾರಣೆ ಶುಲ್ಕವೆಂದು ಪ್ರತಿ ಮೀಟರ್‍‌ಗೆ 1000 ಇದೆ. ಕಡಿಮೆ ಮಾಡಿದರೆ ನಷ್ಟವಾಗುತ್ತದೆ ಎಂದು ತಿಳಿಸಿತ್ತು. ಪಿಡಬ್ಲ್ಯೂಡಿಯು ನೀಡಿದ್ದ ಈ ಅಭಿಪ್ರಾಯದ ಪ್ರತಿಯು ಸಚಿವ ಸಂಪುಟದ ಕಡತದಲ್ಲೇ ಇದ್ದರೂ ಸಹ ಆರ್ಥಿಕ ನಷ್ಟದ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಉತ್ತರ ನೀಡುವ ಮೂಲಕ ಸದನವನ್ನೂ ದಾರಿ ತಪ್ಪಿಸಿದಂತಾಗಿದೆ.

 

ಅನಿಲ ವಿತರಣೆ ಜಾಲ ಅಭಿವೃದ್ಧಿ ನೀತಿ ಅಡಿಯಲ್ಲಿ ಲೋಕೋಪಯೋಗಿ ಇಲಾಖೆಯ ಅಧೀನ ರಸ್ತೆಗಳು ಮತ್ತು ಪಟ್ಟಣ ಹಾಗೂ ನಗರ ಪ್ರದೇಶಗಳ ಮೇಲುಸ್ತುವಾರಿ ಹೊಂದಿರುವ ನಗರಾಭಿವೃದ್ಧಿ ಇಲಾಖೆಗಳು ಅತಿ ಮುಖ್ಯವಾಗಿ ಒಳಪಡುತ್ತವೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ಜತೆಯಲ್ಲಿ ಕರ್ನಾಟಕ ಸರ್ಕಾರದ (ಕಾರ್ಯಕಲಾಪಗಳ ನಿರ್ವಹಣೆ) ನಿಯಮಗಳ ಪ್ರಕಾರ ಈ ಎರಡು ಇಲಾಖೆಗಳ ಅಭಿಪ್ರಾಯ ಅತೀ ಮುಖ್ಯ.

 

ಮತ್ತೊಂದು ಸಂಗತಿ ಎಂದರೇ ನಗರಾಭಿವೃದ್ಧಿ ಇಲಾಖೆಯು ಈ ನೀತಿಯ ಬಗ್ಗೆ ಅಭಿಪ್ರಾಯವನ್ನೇ ನೀಡಿಲ್ಲ ಎಂದು ಸಚಿವ ಸಂಪುಟ ಟಿಪ್ಪಣಿಯಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆಯೇ ದಾಖಲಿಸಿದೆ.

 

‘ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಯಾವ ಅಂಗಸಂಸ್ಥೆಗಳ ಒಟ್ಟು ಎಷ್ಟು ಆದಾಯ ಕಡಿಮೆ ಆಗುತ್ತದೆ, ಮತ್ತು ಆದಾಯದಲ್ಲಿ ಆಗುವ ಈ ಕೊರತೆಯನ್ನು ಹೇಗೆ ಭರಿಸಲಾಗುತ್ತದೆ ಎನ್ನುವುದನ್ನು ನಗರಾಭಿವೃದ್ಧಿ ಇಲಾಖೆ ತನ್ನ ಅಭಿಪ್ರಾಯದಲ್ಲಿ ತಿಳಿಸಿರಬೇಕಿತ್ತು. ನಗರ ಸ್ಥಳೀಯ ಸಂಸ್ಥೆ ಪ್ರದೇಶದಲ್ಲಿ 1,957 ರು ಪ್ರತಿ ಮೀಟರ್‍‌ಗೆ ಪರವಾನಿಗೆ ಮತ್ತು ಮೇಲ್ವಿಚಾರಣೆ ಶುಲ್ಕದ ಆದೇಶ ಇರುವುದು ಗೊತ್ತಿದ್ದೂ ಶುಲ್ಕವನ್ನು ಪ್ರತಿ ಮೀಟರ್‍‌ಗೆ 1 ರು ಗೆ ಇಳಿಸಲು ಪ್ರಸ್ತಾಪಿಸಿದೆ. ಈ ಜವಾಬ್ದಾರಿಯನ್ನು ನಗರಾಭಿವೃದ್ಧಿ ಇಲಾಖೆ ನಿರ್ವಹಿಸದ ಕಾರಣಕ್ಕಾಗಿ ನಗರ ಸ್ಥಳೀಯ ಸಂಸ್ಥೆಗಳಿಗೆ ಸಹಸ್ರಾರು ಕೋಟಿ ರುಪಾಯಿಗಳ ನಷ್ಟ ಆಗುತ್ತಿದೆ,’ ಎನ್ನುತ್ತಾರೆ ನಗರಾಭಿವೃದ್ಧಿ ಇಲಾಖೆಯ ಮತ್ತೊಬ್ಬ ಹಿರಿಯ ಅಧಿಕಾರಿ.

 

ಆರ್ಥಿಕ ಪರಿಣಾಮ ಮುಚ್ಚಿಟ್ಟಿರುವುದರ

 

ಹಿಂದಿದೆಯೇ ದುರುದ್ದೇಶ?

 

ಅನಿಲ ಸರಬರಾಜು ಪೈಪ್‌ ಅಳವಡಿಕೆಗೆ ಪರವಾನಿಗೆ ಮತ್ತು ಮೇಲ್ವಿಚಾರಣೆ ಶುಲ್ಕವನ್ನು ಕಡಿಮೆ ಮಾಡುವ ಏಕೈಕ ಉದ್ದೇಶದಿಂದ ಕೈಗೊಂಡಿರುವ ಈ ಪ್ರಕ್ರಿಯೆಯಲ್ಲಿ ಶುಲ್ಕ ಇಳಿಕೆಯನ್ನು 7 ಸಂದರ್ಭಗಳಲ್ಲಿ ಸಚಿವ ಸಂಪುಟ ಟಿಪ್ಪಣಿಯಲ್ಲಿ ದಾಖಲಿಸಿದೆ. ಆದರೂ ಶುಲ್ಕ ಇಳಿಕೆಯಿಂದಾಗುವ ಯಾವುದೇ ಆರ್ಥಿಕ ಪರಿಣಾಮವನ್ನು ಸಚಿವ ಸಂಪುಟ ಟಿಪ್ಪಣಿ ತಯಾರಿಸುವಾಗ ದುರುದ್ಧೇಶಪೂರ್ವಕವಾಗಿ ಮುಚ್ಚಿಡಲಾಗಿದೆ ಎಂಬ ವಾದವೂ ಕೇಳಿ ಬಂದಿದೆ.

 

ಕರ್ನಾಟಕದಲ್ಲಿ ಸ್ಥಾಪನೆಗೆ ರಹದಾರಿ ಪಡೆದಿರುವ 18 ಯೋಜನೆಗಳನ್ನು ಪಟ್ಟಿಯನ್ನು ಸಚಿವರು ಒದಗಿಸಿದ್ದಾರೆ. ‘ಈ ಪಟ್ಟಿಯಲ್ಲಿ ಯೋಜನೆಗಳಿಗೆ ಮೊದಲ ಹಂತದಲ್ಲಿ ಒಟ್ಟು 25,580 ಕಿ ಮೀ ಉದ್ದದ ಪೈಪ್‌ ಅಳವಡಿಕೆಯನ್ನು ಸಹ ದಾಖಲಿಸಲಾಗಿದೆ. ಅಂದರೆ ಈ 25,580 ಕಿ ಮೀ ಉದ್ದದ ಪೈಪ್‌ ಅಳವಡಿಕೆಗೆ ಪ್ರತಿ ಮೀಟರ್‍‌ಗೆ 1,957ರು ನಂತೆ ಪರವಾನಿಗೆ ಮತ್ತು ಮೇಲ್ವಿಚಾರಣೆ ಶುಲ್ಕವಾಗಿ 5,006 ಕೋಟಿ ರು ಆದಾಯ, ಸರ್ಕಾರದ ವಿವಿಧ ಇಲಾಖೆಗಳಿಗೆ ಬರಬೇಕಿತ್ತು,’ ಎಂದು ಪ್ರತಿಪಾದಿಸುತ್ತಾರೆ ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಯೊಬ್ಬರು.

 

ನೂತನ ಅನಿಲ ಸರಬರಾಜು ನೀತಿ ಜಾರಿಗೆ ಬಂದ ನಂತರ ಪರವಾನಿಗೆ ಮತ್ತು ಮೇಲ್ವಿಚಾರಣೆ ಶುಲ್ಕ ಪ್ರತಿ ಮೀಟರ್‍‌ಗೆ 1 ರು ಆಗಿದೆ. ಈ ಹಿನ್ನೆಲೆಯಲ್ಲಿ ಕೇವಲ 2.56 ಕೋಟಿ ರು ಆದಾಯ ಸರ್ಕಾರದ ವಿವಿಧ ಇಲಾಖೆಗಳಿಗೆ ದೊರೆಯಲಿದೆ. ಅಂದರೆ 5,003 ಕೋಟಿ ಆದಾಯ ಖೋತಾ ಆಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಹೀಗಿದ್ದರೂ ಸಹ ಸರ್ಕಾರಕ್ಕೆ ಯಾವುದೇ ಆರ್ಥಿಕ ನಷ್ಟ ಇಲ್ಲ ಎಂದು ನೀಡಿರುವ ಉತ್ತರವು ದಿಕ್ಕು ತಪ್ಪಿಸಲು ಯತ್ನಿಸಿದಂತಿದೆ.

 

‘ಮುಖ್ಯ ಕಾರ್ಯದರ್ಶಿಗಳು ಸಚಿವ ಸಂಪುಟದ ಅನುಮೋದನೆ ನಂತರ ಈ ಬಗ್ಗೆ ಚರ್ಚಿಸಲಾಗಿದೆ ಮತ್ತು ಅನಿಲ ಸರಬರಾಜು ಸಂಸ್ಥೆಗಳಿಗೆ ಆಗುವ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ಆಡಳಿತ ಶಾಖೆ ಕ್ರಮ ಕೈಗೊಳ್ಳಬೇಕು ಎಂದು ತಮ್ಮ ವಿಶೇಷ ಟಿಪ್ಪಣಿಯಲ್ಲಿ ದಾಖಲಿಸಿದ್ದಾರೆ. ಇದರಿಂದಾಗಿ ಈ ನೀತಿಯನ್ನು ಜಾರಿಗೆ ತಂದಲ್ಲಿ ಅನಿಲ ಸರಬರಾಜು ಸಂಸ್ಥೆಗಳಿಗೆ ಲಾಭ ಆಗುತ್ತದೆ ಎನ್ನುವುದು ಖಾತ್ರಿಯಾದಂತಲ್ಲವೇ,’ ಎನ್ನುತ್ತಾರೆ ಹಿರಿಯ ಅಧಿಕಾರಿಯೊಬ್ಬರು.

 

ಅಲ್ಲದೇ ‘ಮುಖ್ಯ ಕಾರ್ಯದರ್ಶಿಗಳು ಅನಿಲ ಸರಬರಾಜು ಸಂಸ್ಥೆಗಳಿಗೆ ಲಾಭ ಆಗುವ ವಿಷಯವನ್ನು ಮೂಲ ಸೌಕರ್ಯ ಅಭಿವೃದ್ದಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳೊಡೆನಯೂ ಚರ್ಚಿಸಿದ್ದಾರೆ ಎಂದಂತಾಯಿತು. ಹೀಗಿದ್ದರೂ ಸಚಿವ ಸಂಪುಟದ ಟಿಪ್ಪಣಿಯಲ್ಲಾಗಲೀ ಕಡತದಲ್ಲಾಗಲೀ ಏಕೆ ನಷ್ಟವನ್ನು ಲೆಕ್ಕ ಹಾಕಿಲ್ಲ,’ ಎಂದು ತಮ್ಮ ವಾದವನ್ನು ಮುಂದುವರೆಸುತ್ತಾರೆ.

 

ರಾಜ್ಯ ನಗರ ಅನಿಲ ವಿತರಣೆ (ಸಿಜಿಡಿ) ನೀತಿಯಿಂದಾಗಿ ಸರ್ಕಾರಕ್ಕೆ ಆಗಿರುವ ಭಾರೀ ಪ್ರಮಾಣದ ನಷ್ಟದ ಕುರಿತು  ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು  ಚಳಿಗಾಲದ  ವಿಧಾನಸಭೆ ಅಧಿವೇಶನದಲ್ಲಿ ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ 90 ದಿನಗಳಾದರೂ ಆಡಳಿತ ಇಲಾಖೆಯು ಉತ್ತರವನ್ನೇ ಒದಗಿಸಿಲ್ಲ.

 

ಅದಾನಿ, ಇತರ ಕಂಪನಿಗಳಿಗೆ ಭರ್ಜರಿ ಲಾಭ!, ಸರ್ಕಾರಕ್ಕೆ ಅಪಾರ ನಷ್ಟ; 90 ದಿನಗಳಾದರೂ ಮಾಹಿತಿ ನೀಡಿಲ್ಲವೇಕೆ?

ಮತ್ತೊಂದು ವಿಶೇಷವೆಂದರೇ ಈ ನೀತಿ ಕುರಿತು ಬಸನಗೌಡ ಪಾಟೀಲ ಯತ್ನಾಳ ಅವರು ಮೂಲಸೌಕರ್ಯ ಅಭಿವೃದ್ದಿ ಇಲಾಖೆಗೆ. ಆದರೆ ಇದನ್ನು ವಿಧಾನಸಭೆ ಸಚಿವಾಲಯ ಸಿಬ್ಬಂದಿ ಈ ಪ್ರಶ್ನೆಯನ್ನು ಆಹಾರ, ನಾಗರಿಕ ಸರಬರಾಜು ಇಲಾಖೆಗೆ ವರ್ಗಾಯಿಸಿದ್ದರು.

 

ಈ ನೀತಿಯನ್ನು ಹಿಂದಿನ ಬಿಜೆಪಿ ಸರ್ಕಾರವು ಜಾರಿಗೊಳಿಸಿರಲಿಲ್ಲ. ಎರಡು ಬಾರಿ ಸಂಪುಟಕ್ಕೆ ಪ್ರಸ್ತಾವನೆ ಮಂಡನೆಯಾಗಿತ್ತಾದರೂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರವು ಈ ಕುರಿತು ನಿರ್ಧಾರ ಕೈಗೊಂಡಿರಲಿಲ್ಲ. ಆದರೆ ಕಾಂಗ್ರೆಸ್‌ ಸರ್ಕಾರವು ಅಧಿಕಾರಕ್ಕೆ ಬಂದ ಕೆಲವೇ ಕೆಲವು ತಿಂಗಳಲ್ಲಿ ಈ  ನೀತಿಯನ್ನು ಜಾರಿಗೊಳಿಸಿತ್ತು.

 

3,289 ಕೋಟಿ ರು ಅನಿಲ ಹಗರಣ; ಕಾಂಗ್ರೆಸ್‌ ಸರ್ಕಾರದ ನೂತನ ನೀತಿ, ಅದಾನಿ ಮತ್ತಿತರರಿಗೆ ಲಾಭವಾಯಿತೇ?

 

ಇದಕ್ಕೆ ಸಂಬಂಧಿಸಿದಂತೆ ‘ದಿ ಫೈಲ್‌’ ಆರ್‍‌ಟಿಐ ಅಡಿಯಲ್ಲಿ ಕಡತವನ್ನು ಕೋರಿತ್ತು. ಆದರೆ ಕಡತವನ್ನು ನೀಡಿರಲಿಲ್ಲ.

 

3,289 ಕೋಟಿ ರು ಹಗರಣ ಶಂಕೆ; ಅನಿಲ ವಿತರಣಾ ಜಾಲ ಅಭಿವೃದ್ದಿ ನೀತಿ ‘ಕಡತ’ಕ್ಕೆ ಸರ್ಪಗಾವಲು

‘ದಿ ಫೈಲ್‌’ ಪುನಃ ಆರ್‍‌ಟಿಐ ಅಡಿಯಲ್ಲಿ ಅರ್ಜಿ ಸಲ್ಲಿಸಿತ್ತು. ಇಲಾಖೆ ಒದಗಿಸಿದ್ದ ದಾಖಲೆ ಪ್ರಕಾರ ನಗರ ಅನಿಲ ವಿತರಣೆ ಜಾಲ ನೀತಿಯ ಕುರಿತು   ಆಡಳಿತ ಇಲಾಖೆಯು ಸಚಿವ ಸಂಪುಟವನ್ನು ದಾರಿತಪ್ಪಿಸಿತ್ತು.

 

ನಗರ ಅನಿಲ ವಿತರಣೆ ಜಾಲ ನೀತಿ; 5,000 ಕೋಟಿ ಆದಾಯ ಖೋತಾ, ಸಂಪುಟವನ್ನೂ ದಾರಿತಪ್ಪಿಸಿದ ಇಲಾಖೆ

 

‘ದಿ ಫೈಲ್‌’ ಪ್ರಕಟಿಸಿದ್ದ ಈ ವರದಿಗೆ ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆಯು ಸ್ಪಷ್ಟನೆ ನೀಡಿತ್ತು.

 

ಸಿಜಿಡಿ ನೀತಿ; ‘ದಿ ಫೈಲ್‌’ ವರದಿಗೆ ಸ್ಪಷ್ಟೀಕರಣ ನೀಡಿದ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ

 

ಇದೇ ಸಿಜಿಡಿ ನೀತಿಯನ್ನು ಅನುಷ್ಠಾನಗೊಳಿಸಿದ್ದ  ನೆರೆಯ ರಾಜ್ಯಗಳು ತಮ್ಮ ಸ್ಥಳೀಯ ಸಂಸ್ಥೆಗಳಿಗೆ ಆದಾಯ ತಂದುಕೊಂಡಿದ್ದವು. ಆದರೂ ಈ ರಾಜ್ಯಗಳನ್ನು ರಾಜ್ಯ ಸರ್ಕಾರವು ಮುಚ್ಚಿಟ್ಟಿದ್ದವು.

 

ಸಿಜಿಡಿ ಶುಲ್ಕ 1 ರು. ಸಾಕೇ?; ತಮಿಳುನಾಡು, ಪ.ಬಂಗಾಳ, ಹಿಮಾಚಲ, ಪಂಜಾಬ್‌ ಮಾದರಿ ಮುಚ್ಚಿಟ್ಟಿದ್ದೇಕೆ?

ಈ ನೀತಿಯಲ್ಲಿ ನಮೂದಿಸಿರುವ ಶುಲ್ಕವನ್ನು ಅನುಷ್ಠಾನಗೊಳಿಸಿದರೆ ರಾಜ್ಯ ಬೊಕ್ಕಸಕ್ಕೆ ಹಾನಿಯಾಗಲಿದೆ ಎಂದು ಲೋಕೋಪಯೋಗಿ ಇಲಾಖೆಯು ತನ್ನ ಅಭಿಪ್ರಾಯದಲ್ಲಿ ಸ್ಪಷ್ಟವಾಗಿ ಹೇಳಿತ್ತು. ಆದರೂ ಪಿಡಬ್ಲ್ಯೂಡಿ ಅಭಿಪ್ರಾಯವನ್ನು ಮೂಲ ಸೌಕರ್ಯ ಇಲಾಖೆಯು ಬದಿಗೊತ್ತಿತ್ತು.

 

ಅನಿಲ ನೀತಿ ಶುಲ್ಕ; ಪಿಡಬ್ಲ್ಯೂಡಿಗೆ ಕಿಮ್ಮತ್ತಿಲ್ಲ, ನಗರಾಭಿವೃದ್ಧಿ ಅಭಿಪ್ರಾಯವೇ ಇಲ್ಲ, ತಿಪ್ಪೆ ಸಾರಿಸಿತು ಸಾರಿಗೆ

 

ಈ ನೀತಿಯಿಂದಾಗಿ ರಾಜ್ಯ ಸಂಚಿತ ನಿಧಿಗೆ ನಷ್ಟವಾಗಿತ್ತಲ್ಲದೇ ಖಾಸಗಿ ಏಜೆನ್ಸಿಗಳಿಗೆ ಬೇಷರತ್‌ ಲಾಭಾಂಶವಾಗಿತ್ತು.

 

ಅನಿಲ ನೀತಿ ಶುಲ್ಕದಲ್ಲಿ ಇಳಿಕೆ; ರಾಜ್ಯ ಸಂಚಿತ ನಿಧಿಗೆ ನಷ್ಟ, ಖಾಸಗಿ ಏಜೆನ್ಸಿಗಳಿಗೆ ಬೇಷರತ್‌ ಲಾಭಾಂಶ!

 

ಆದರೂ ಮೂಲಸೌಕರ್ಯ ಇಲಾಖೆಯು ಈ ನೀತಿ ಕುರಿತು ಅಸಮಂಜಸವಾಗಿ ಪ್ರತಿಪಾದನೆ ಮಾಡಿತ್ತು.

 

ಅನಿಲ ನೀತಿ; ಕಂಪನಿಗಳ ಲಾಭಾಂಶ ಮರೆಮಾಚಿದ ಸರ್ಕಾರದಿಂದ ಅಸಮಂಜಸ ಪ್ರತಿಪಾದನೆ

 

ಅಲ್ಲದೇ ಅನಿಲ ನೀತಿ ಶುಲ್ಕ ಇಳಿಕೆಯಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಹೇಗೆಲ್ಲಾ ಧಕ್ಕೆಯಾಗಲಿದೆ ಎಂದು ಪಿಡಬ್ಲ್ಯೂಡಿ ಇಲಾಖೆಯು ವಿವರಿಸಿತ್ತು.

 

ಅನಿಲ ನೀತಿ ಶುಲ್ಕ ಇಳಿಕೆಯಿಂದ ಸರ್ಕಾರದ ಬೊಕ್ಕಸಕ್ಕೆ ಧಕ್ಕೆ; ಪಿಡಬ್ಲ್ಯೂಡಿ ಟಿಪ್ಪಣಿ ಹಾಳೆಗಳು ಬಹಿರಂಗ

 

ಈ ಎಲ್ಲಾ ಬೆಳವಣಿಗೆಗಳ ಕುರಿತು ವಿಧಾನಸಭೆಯಲ್ಲಿ ಶಾಸಕರು ಕೇಳಿದ್ದ ಪ್ರಶ್ನೆಗಳಿಗೂ ಸರ್ಕಾರವು ಉತ್ತರಿಸದೇ ಇರುವುದು ಸಂಶಯಗಳನ್ನು ಬಲಪಡಿಸಿದಂತಾಗಿದೆ.

SUPPORT THE FILE

Latest News

Related Posts