ಸಿಜಿಡಿ ಶುಲ್ಕ 1 ರು. ಸಾಕೇ?; ತಮಿಳುನಾಡು, ಪ.ಬಂಗಾಳ, ಹಿಮಾಚಲ, ಪಂಜಾಬ್‌ ಮಾದರಿ ಮುಚ್ಚಿಟ್ಟಿದ್ದೇಕೆ?

ಬೆಂಗಳೂರು; ನಗರ ಅನಿಲ ವಿತರಣೆ ಜಾಲ ಅಭಿವೃದ್ಧಿ  ನೀತಿಯ  ಅನುಮೋದನೆಗಾಗಿ ರಾಜ್ಯ ಸಚಿವ ಸಂಪುಟದ ಮುಂದೆ ಪ್ರಸ್ತಾವನೆ ಸಲ್ಲಿಸಿದ್ದ   ರಾಜ್ಯ ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆಯು ಪ್ರಸ್ತಾವನೆಯಲ್ಲಿ ಶುಲ್ಕ ಇಳಿಸಲು  ಅನುಕೂಲವಾಗುವ ಮಾದರಿಗಳನ್ನಷ್ಟೇ ಮುಂದಿರಿಸಿದೆ.

 

ಆದರೆ ಇದೇ ನೀತಿಯನ್ನು ಜಾರಿಗೊಳಿಸಿರುವ ಇತರೆ ರಾಜ್ಯಗಳಲ್ಲಿ ವಿವಿಧ ರೀತಿಯ ಶುಲ್ಕಗಳನ್ನು ನಿಗದಿಪಡಿಸಿದ್ದರೂ ಸಹ ರಾಜ್ಯ ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆಯು ಸಚಿವ ಸಂಪುಟ ಪ್ರಸ್ತಾವನೆಯಲ್ಲಿ ದಾಖಲಿಸಿಲ್ಲ.  ಹಾಗೂ  ಅಧಿಕಾರಿಶಾಹಿಯು ಹಿಡಿದಿರುವ ಒಳ ಮಾರ್ಗದಲ್ಲಿ ಈ ನೀತಿಗೆ ಅನುಮೋದನೆ ನೀಡಿರುವ  ಸರ್ಕಾರವೂ ಕೂಡ ನಡೆದಿದೆಯೇ ಎಂಬ ಸಂಶಯಗಳು ಸಹ  ವ್ಯಕ್ತವಾಗಿವೆ.

 

ಸಿಜಿಡಿ ನೀತಿಯನ್ನು ಜಾರಿಗೊಳಿಸಿರುವ ದೇಶದ ಇತರೆ ರಾಜ್ಯಗಳು ವಿಧಿಸಿರುವ ನೆಲಬಾಡಿಗೆಯ ವಿವರಗಳನ್ನೂ ರಾಜ್ಯ ಮೂಲಸೌಕರ್ಯ ಅಭಿವೃದ್ದಿ ಇಲಾಖೆಯ ಕಾರ್ಯದರ್ಶಿಯಾಗಿದ್ದ ಗೌರವ್‌ ಗುಪ್ತಾ ಅವರು ಸಚಿವ ಸಂಪುಟದ ಗಮನಕ್ಕೆ ಸಂಪೂರ್ಣವಾಗಿ  ತರದೇ ಇರುವುದು ಟಿಪ್ಪಣಿ ಹಾಳೆಗಳಿಂದ ಗೊತ್ತಾಗಿದೆ.

 

ಅಪೂರ್ಣ ಮಾಹಿತಿಯೊಂದಿಗೆ ಸಂಪುಟವನ್ನೂ  ದಾರಿತಪ್ಪಿಸಿ ಸಿಜಿಡಿ ನೀತಿಗೆ ಅನುಮೋದನೆ ಪಡೆದುಕೊಂಡಿರುವುದನ್ನು  ಆರ್‍‌ಟಿಐ  ದಾಖಲೆಗಳು ಬಹಿರಂಗಪಡಿಸಿವೆ.

 

ಈ ನೀತಿಯಿಂದಾಗಿ ಲೋಕೋಪಯೋಗಿ ಇಲಾಖೆ  ಮತ್ತು  ಸ್ಥಳೀಯ ಸಂಸ್ಥೆಗಳಿಗೆ 5,000 ಕೋಟಿ ರು.ನಷ್ಟು ಆದಾಯ ಖೋತಾ ಆಗಲಿದ್ದರೂ ಸಚಿವ ಸಂಪುಟಕ್ಕೆ ಈ ಯಾವ ಆರ್ಥಿಕ ಪರಿಣಾಮವನ್ನೂ ತಿಳಿಸದೇ ಮುಚ್ಚಿಟ್ಟಿದ್ದರ ನಡುವೆಯೇ ನೆರೆಯ ರಾಜ್ಯಗಳಲ್ಲಿನ ಅನುಕೂಲಕರ ಶುಲ್ಕಗಳನ್ನು ಮಾತ್ರ  ಊರುಗೋಲಿನ ರೀತಿ ಬಳಸಿರುವುದು ಮುನ್ನೆಲೆಗೆ ಬಂದಿದೆ.

 

ಇದಕ್ಕೆ ಸಂಬಂಧಿಸಿದಂತೆ ‘ದಿ ಫೈಲ್’ ಸಮಗ್ರ ಕಡತವನ್ನು ಆರ್‍‌ಟಿಐ  ಅಡಿಯಲ್ಲಿ ಪಡೆದುಕೊಂಡಿದೆ.

 

ತೆಲಂಗಾಣ, ಕೇರಳ, ಆಂಧ್ರ ಪ್ರದೇಶಗಳಲ್ಲಿನ ನಗರ ಅನಿಲ ವಿತರಣೆ ಪೈಪ್ ಅಳವಡಿಕೆಗೆ ಯಾವುದೇ ಶುಲ್ಕವಿಲ್ಲ ಎಂದು ರಾಜ್ಯ ಮೂಲ ಸೌಕರ್ಯ  ಇಲಾಖೆ  ಹೇಳಿದೆ. ಆದರೆ  ಅಲ್ಲಿನ ಸರ್ಕಾರಗಳು ಹೊರಡಿಸಿರುವ ಆದೇಶ, ದಾಖಲೆಗಳು  ಪ್ರಸ್ತಾವನೆಯ ಕಡತದಲ್ಲಿ ಇರಿಸಿರುವುದು ಕಂಡುಬಂದಿಲ್ಲ.  ಅಲ್ಲದೇ ಈ ರಾಜ್ಯಗಳ ನೀತಿಯನ್ನು ಸಚಿವ ಸಂಪುಟದ  ಪ್ರಸ್ತಾವನೆಯಲ್ಲಿ ಅಡಕಗೊಳಿಸಿಲ್ಲ.

 

ತೆಲಂಗಾಣಕ್ಕೆ ಸಂಬಂಧಿಸಿದಂತೆ ಅನಿಲ ಪೈಪ್‌ ಲೈನ್‌ ಅಳವಡಿಕೆ ಪರ್ಮಿಷನ್‌ ಶುಲ್ಕ ಎಂಬ ಕಾಲಂನಲ್ಲಿ ರಾಜ್ಯ ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆಯು ಏನನ್ನೂ ನಮೂದಿಸಿಲ್ಲ. ಬದಲಿಗೆ ಖಾಲಿ ಬಿಟ್ಟಿದೆ. ಆದರೆ ರೆಸ್ಟೋರೇಷನ್‌ ಶುಲ್ಕಗಳನ್ನು ನಮೂದಿಸಿದೆ. ಇದೇ ಅಂಶವನ್ನೂ ಸಚಿವ ಸಂಪುಟ ಟಿಪ್ಪಣಿಯಲ್ಲೂ ದಾಖಲಿಸಿದೆ.

 

ತೆಲಂಗಾಣದಲ್ಲಿ ಪರವಾನಿಗೆ ಮತ್ತ ಮೇಲ್ವಿಚಾರಣೆ ಹೆಸರಿನಲ್ಲಿ ಶುಲ್ಕವನ್ನು ತೆಗೆದುಕೊಳ್ಳುತ್ತಿಲ್ಲ. ಆದರೇ ರಸ್ತೆ ಕತ್ತರಿಸುವ ಶುಲ್ಕವನ್ನು ಪುನರ್‌ ನಿರ್ಮಾಣಕ್ಕಾಗಿ ಟಾರ್‌ ರಸ್ತೆಗಳಿಗಾಗಿ ಓಪನ್‌ ಟ್ರೆಂಚ್‌ ಮಾದರಿಗೆ 2,275 ರು., ಪ್ರತಿ ಮೀಟರ್‌ ಮತ್ತು ಕಾಂಕ್ರಿಟ್‌ ರಸ್ತೆಗಳಿಗೆ 1,844 ರು., ಪ್ರತಿ ಮೀಟರ್‌ ಅಲ್ಲದೆ ಟಾರ್‌ ರಸ್ತೆಯಲ್ಲಿ ಹೆಚ್‌ಡಿಡಿ ಪ್ರತಿ ಗುಂಡಿಗಳಿಗೆ ನಗರ ಪ್ರದೇಶದಲ್ಲಿ 11,751 ರು, ಗ್ರಾಮೀಣ ಭಾಗಗಳಲ್ಲಿ ಪ್ರತಿ ಗುಂಡಿಗೆ 10,737 ರು. ಶುಲ್ಕ ಪಡೆದುಕೊಳ್ಳುತ್ತಿದೆ.

 

ಅಲ್ಲದೇ ಶುಲ್ಕದ ಶೇ.16ರಷ್ಟನ್ನು ಮೇಲ್ವಿಚಾರಣೆ ಶುಲ್ಕವನ್ನಾಗಿ ಪಡೆದುಕೊಳ್ಳುತ್ತಿದೆ. ಅಂದರೆ ಟಾರ್‌ ರಸ್ತೆಗಳಿಗೆ ಪ್ರತಿ ಮೀಟರ್‌ಗೆ 364 ರು ಮತ್ತು ಕಾಂಕ್ರಿಟ್‌ ರಸ್ತೆಗಳಿಗೆ 295 ರು, (ಟಾರ್‌ ರಸ್ತೆಗಳಿಗೆ ಪ್ರತಿ ಕಿ ಮೀ ಗೆ 3.64 ಲಕ್ಷ , ಕಾಂಕ್ರಿಟ್‌ರಸ್ತೆಗಳಿಗೆ ಪ್ರತಿ ಕಿ ಮೀ ಗೆ 2.95 ಲಕ್ಷ ರು) ಮೇಲ್ವಿಚಾರಣೆ ಶುಲ್ಕ ಪಡೆಯುತ್ತಿದೆ.

 

2017-18ರಿಂದಲೇ ಈ ಶುಲ್ಕವನ್ನು ಜಾರಿಗೆ ತಂದಿರುವ ತೆಲಂಗಾಣ ಸರ್ಕಾರವು ಈಗಲೂ ಇದನ್ನೇ ಚಾಲ್ತಿಯಲ್ಲಿರಿಸಿರುವುದು ತೆಲಂಗಾಣ ಸರ್ಕಾರದ ಅಧಿಕೃತ ಜಾಲತಾಣದಿಂದ ತಿಳಿದು ಬಂದಿದೆ.

 

ಉತ್ತರ ಪ್ರದೇಶ, ರಾಜಸ್ಥಾನದಲ್ಲಿ ಪ್ರತಿ ಕಿ ಮೀಗೆ ಪರವಾನಿಗೆ ಮತ್ತು ಮೇಲ್ವಿಚಾರಣೆ ಶುಲ್ಕವಾಗಿ  1,000 ರು ನಿಗದಿಗೊಳಿಸಲಾಗಿದೆ. ರಾಜಸ್ಥಾನದಲ್ಲಿ ಪ್ರತಿ ಕಿ ಮೀ ಗೆ 1,000 ರು. ನಿಗದಿಗೊಳಿಸಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರವೇ (2021) ಅಧಿಕಾರದಲ್ಲಿತ್ತು.

 

ದಕ್ಷಿಣ ಭಾರತದ ಅತೀ ದೊಡ್ಡ ರಾಜ್ಯವಾದ ತಮಿಳುನಾಡು ಸಹ 2023ರ ಆರಂಭದಲ್ಲೇ ನಗರ ಅನಿಲ ನೀತಿ ರೂಪಿಸಿದೆ. ಈ ನೀತಿಯ ಪ್ರಕಾರ ಪ್ರತಿ ಕಿ ಮೀ ಗೆ 1,000 ರು. ಪರವಾನಿಗೆ ಮತ್ತು ಮೇಲ್ವಿಚಾರಣೆ  ಶುಲ್ಕ ನಿಗದಿಯಾಗಿದೆ.

 

ಆದರೆ ಇದರ ಜತೆಗೇ  ನೀತಿಯ 3.5.8-3-ಜೆ ನಲ್ಲಿ ತಮಿಳುನಾಡು ಸರ್ಕಾರದ ಕಂದಾಯ ಮತ್ತು ವಿಪತ್ತು ನಿರ್ವಹಣೆ ಇಲಾಖೆಯು ನಿಗದಿಪಡಿಸುವ ಮತ್ತು ಕಾಲಕಾಲಕ್ಕೆ ಪರಿಷ್ಕರಿಸುವ ನೆಲಬಾಡಿಗೆ ದರ (TRACK RENT) ವನ್ನು ಎಲ್ಲಾ ನಗರ ಅನಿಲ ಸರಬರಾಜು ಸಂಸ್ಥೆಗಳು ಪಾವತಿಸತಕ್ಕದ್ದು ಎಂದು ಹೇಳಿದೆ.

 

ಕರ್ನಾಟಕದಲ್ಲಿ ಪರವಾನಿಗೆ ಮತ್ತು ಮೇಲ್ವಿಚಾರಣೆ ಶುಲ್ಕ ನಿಗದಿಪಡಿಸುವಾಗ ಶುಲ್ಕ ಮತ್ತು ನೆಲಬಾಡಿಗೆ ಎರಡನ್ನೂ ಹೊಂದಿರುವ ತಮಿಳುನಾಡಿನ ಮಾದರಿಯನ್ನು ಪ್ರಸ್ತಾಪಿಸದೇ ಮುಚ್ಚಿಡಲಾಗಿದೆ.

 

‘ಒಂದೊಮ್ಮೆ ತಮಿಳುನಾಡಿನ ಮಾದರಿಯನ್ನು ಗಣನೆಗೆ ತೆಗೆದುಕೊಂಡಿದ್ದರೇ  ಕರ್ನಾಟಕದಲ್ಲಿಯೂ ಪರವಾನಿಗೆ ಮತ್ತು ಮೇಲ್ವಿಚಾರಣೆ ಶುಲ್ಕದ ಜತೆಯಲ್ಲಿಯೇ  ವಾರ್ಷಿಕ  ನೆಲಬಾಡಿಗೆ ಪಾವತಿಸುವ ಅಗತ್ಯ ಉದ್ಬವವಾಗುತ್ತಿತ್ತು. ಹೀಗಾಗಿ ತಮಿಳುನಾಡಿನ ಬಗ್ಗೆ ಸೊಲ್ಲೆತ್ತಿಲ್ಲ,’ ಎನ್ನುತ್ತಾರೆ ಬಿಬಿಎಂಪಿಯ ಹಿರಿಯ ಅಧಿಕಾರಿಯೊಬ್ಬರು.

 

ಅದೇ ರೀತಿ ಹಿಮಾಚಲ ಪ್ರದೇಶದಲ್ಲಿಯೂ 2021ರಲ್ಲೇ ಸಿಜಿಡಿ ನೀತಿ ಜಾರಿಗೊಂಡಿದೆ.

 

ಅಲ್ಲಿಯೂ ಯಾವುದೇ ಪರವಾನಿಗೆ ಅಥವಾ ಮೇಲ್ವಿಚಾರಣೆ ಶುಲ್ಕ ವಿಧಿಸಿಲ್ಲ. ಆದರೆ ಪ್ರತಿ ಮೀಟರ್‍‌ಗೆ  60 ರು.ನಂತೆ ವಾರ್ಷಿಕ ನೆಲ ಬಾಡಿಗೆ ವಿಧಿಸಿದೆ. ಹಾಗೆಯೇ ಪ್ರತಿ ವರ್ಷ ನೆಲಬಾಡಿಗೆ ಶೇ.8ರಷ್ಟು ಏರಿಕೆಯ ಷರತ್ತನ್ನೂ ಹಾಕಿದೆ. ಇದರಿಂದಾಗಿ ಪ್ರತಿ ವರ್ಷ ಪ್ರತಿ ಕಿ ಮೀ ಗೆ  60,000 ರುಕ್ಕೂ  ಅಧಿಕ ಆದಾಯವು ಅಲ್ಲಿನ ಸ್ಥಳೀಯ ಸಂಸ್ಥೆಗಳಿಗೆ ದೊರೆಯಲಿದೆ ಎಂದು ಗೊತ್ತಾಗಿದೆ.

 

 

ಇನ್ನು 2018ರಲ್ಲೇ ಸಿಜಿಡಿ ನೀತಿ ಜಾರಿಗೆ ತಂದಿರುವ ಪಂಜಾಬಿನಲ್ಲಿಯೂ ಯಾವುದೇ ಪರವಾನಿಗೆ ಅಥವಾ ಮೇಲ್ವಿಚಾರಣೆ ಶುಲ್ಕ ವಿಧಿಸಿಲ್ಲ. ಇದೇ ನೀತಿಯನ್ನೇ ಪಂಜಾಬ್‌ ಸರ್ಕಾರದ ಅಧಿಕೃತ ಜಾಲತಾಣದಲ್ಲಿ ಅಳವಡಿಸಿದೆ.  ಈ ನೀತಿಯ ಪ್ರತಿಯನ್ನು ಪಂಜಾಬ್‌ ಸರ್ಕಾರದ ಅಧಿಕೃತ ಜಾಲತಾಣದಿಂದಲೇ ಡೌನ್‌ಲೌಡ್‌ ಮಾಡಿಕೊಳ್ಳಲಾಗಿದೆ.

 

ಆದರೆ ಪ್ರತಿ ಮೀಟರ್‍‌ಗೆ  ವಾರ್ಷಿಕ ನೆಲಬಾಡಿಗೆಯೆಂದು 50 ರು ವಿಧಿಸಿದೆ. ಈ ರಾಜ್ಯದಲ್ಲಿ ಪ್ರತೀ ವರ್ಷ ನೆಲ ಬಾಡಿಗೆ ದರವು ಶೇ.5ರಷ್ಟು ಏರಿಕೆಯಾಗಲಿದೆ. ಹೀಗಾಗಿ ಪ್ರತಿ ಕಿ ಮೀ ಗೆ ಪ್ರತಿ ವರ್ಷ  50,000 ರು. ಅಲ್ಲಿನ ಸ್ಥಳೀಯ ಸಂಸ್ಥೆಗಳಿಗೆ ಕನಿಷ್ಠ ಆದಾಯ ಸಿಗಲಿದೆ.

 

ಪಶ್ಚಿಮ ಬಂಗಾಳದಲ್ಲಿಯೂ  ಮೊದಲ 15 ವರ್ಷಗಳಿಗೆ ಕಲ್ಕತ್ತಾದಲ್ಲಿ   ಪ್ರತಿ ಮೀಟರ್‍‌ಗೆ  200 ರು ಹಾಗೂ ಇತರೆ ಭಾಗಗಳಲ್ಲಿ ಪ್ರತಿ ಮೀಟರ್‍‌ಗೆ  150 ರು ವಿಧಿಸಿದೆ.

 

ಅಲ್ಲದೇ ಪ್ರತಿ ವಾಲ್ವ್ ಛೇಂಬರ್ ಗೆ ಕಲ್ಕತ್ತಾದಲ್ಲಿ 1,500 ರು ಮತ್ತು ಇತರೆ ಭಾಗಗಳಲ್ಲಿ 1,000 ರು ನೆಲಬಾಡಿಗೆ ನಿಗದಿಯಾಗಿದೆ. ಇವುಗಳಲ್ಲಿಯೂ ವಾರ್ಷಿಕ ಏರಿಕೆಯೂ ಇರುವುದು ತಿಳಿದು ಬಂದಿದೆ.

 

ಕೇಂದ್ರ ಸರ್ಕಾರವು ಸಲಹಾ ರೂಪದಲ್ಲಿ ನೀಡಿದ್ದ 1,000 ರು ಪರವಾನಿಗೆ ಶುಲ್ಕವನ್ನು  ಅಳವಡಿಸಿಕೊಂಡಿದ್ದರೂ ವಿವಿಧ ರಾಜ್ಯಗಳು ತಮ್ಮ ರಾಜ್ಯಕ್ಕೆ/ ಸ್ಥಳೀಯ ಸಂಸ್ಥೆಗಳಿಗೆ  ಸೂಕ್ತ ಆರ್ಥಿಕ ಮೌಲ್ಯ ದೊರೆಯುವ ನಿಟ್ಟಿನಲ್ಲಿ ನೆಲಬಾಡಿಗೆಯನ್ನು ಸಹ ಅದರ ಜೊತೆಗೆ ಅಳವಡಿಸಿಕೊಂಡಿರುವುದು ಕಂಡು ಬಂದಿದೆ.

 

ಆದರೆ ಕರ್ನಾಟಕದಲ್ಲಿ ಈ ಸಲಹೆಯನ್ನು  ಅಳವಡಿಸಿಕೊಂಡಿಲ್ಲವಷ್ಟೇ  ಅಲ್ಲದೇ, ನೆಲಬಾಡಿಗೆ ಜಾರಿಯಲ್ಲಿರುವ ಯಾವುದೇ ರಾಜ್ಯದ ವ್ಯವಸ್ಥೆಯ ಬಗ್ಗೆ ಸಹ ಉಸಿರೆತ್ತಿಲ್ಲ. ಇದರಿಂದಾಗಿ  ದೇಶದಾದ್ಯಂತ ಕೇವಲ  1,000 ರು ಪರವಾನಿಗೆ ಮತ್ತು ಮೇಲ್ವಿಚಾರಣೆ  ಶುಲ್ಕ ಮಾತ್ರ ಚಾಲ್ತಿಯಲ್ಲಿ   ಇದೆಯೇನೋ ಎಂಬ ಅಭಿಪ್ರಾಯವನ್ನು ಮೂಡಿಸುವ ನಿಟ್ಟಿನಲ್ಲಿ  ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಪ್ರಸ್ತಾವನೆ ಮತ್ತು ಸಚಿವ ಸಂಪುಟ ಟಿಪ್ಪಣಿ ತಯಾರಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ತಯಾರಿಸಿದ್ದ  ಟಿಪ್ಪಣಿಯನ್ನು ಆರ್ಥಿಕ ಇಲಾಖೆಯ ಅಧಿಕಾರಿಗಳು ಕ್ರಮಬದ್ಧವಾಗಿ ಪರಿಶೀಲಿಸಿಯೇ ಇಲ್ಲದಿರುವುದು ಕಂಡುಬಂದಿದೆ. ‘ಇದೊಂದು ದಿವ್ಯ ಕರ್ತವ್ಯ ನಿರ್ಲಕ್ಷ್ಯ. ಇವೆರಡೂ ಕ್ಷಮಿಸಲಾರದ ತಪ್ಪುಗಳೇ.  ಸಾಮಾನ್ಯವಾಗಿ ಕಾಂಗ್ರೆಸ್ ಸರ್ಕಾರಗಳಲ್ಲಿ  ಸಾರ್ವಜನಿಕ ಹಿತಾಸಕ್ತಿಯ ಬಗ್ಗೆ ಇರುವ ನಿರ್ಲಕ್ಷ್ಯದ ಲಾಭ ಪಡೆದಿರುವ ಈ ಅಧಿಕಾರಿಗಳ ನಡೆಯಲ್ಲಿ ಸರ್ಕಾರವು ಕೂಡ ಶಾಮೀಲಾಗಿದೆಯೇ ಎಂದು ಭಾವಿಸಬೇಕಾಗಿದೆ,’ ಎಂದು ಶಂಕಿಸುತ್ತಾರೆ ಹಿರಿಯ ಅಧಿಕಾರಿಯೊಬ್ಬರು.

 

ಈ ಹಿನ್ನೆಲೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಮತ್ತು ಆರ್ಥಿಕ ಇಲಾಖೆಯ ನಡೆಯ ಬಗ್ಗೆ ಈ ಕೆಳಗಿನ ಮೂಲಭೂತ ಪ್ರಶ್ನೆಗಳು ಉದ್ಭವಿಸುತ್ತವೆ.

 

1. 258 ನಗರ ಅನಿಲ ಸರಬರಾಜು ಯೋಜನೆಗಳು ದೇಶದ 26 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಯಲ್ಲಿವೆ. ಹೀಗಿರುವಾಗ ಎಲ್ಲಾ  26 ರಾಜ್ಯಗಳಲ್ಲಿ ಪರವಾನಿಗೆ ಮತ್ತು ಮೇಲ್ವಿಚಾರಣೆ ಶುಲ್ಕ ಎಷ್ಟಿದೆ ಎಂಬ ಬಗ್ಗೆ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಸ್ವತಂತ್ರವಾಗಿ ಪರಿಶೀಲನೆ ಏಕೆ ನಡೆಸಿಲ್ಲ?

 

2. ಸ್ವತಂತ್ರವಾಗಿ ಪರಿಶೀಲನೆ ನಡೆಸದೇ ದೇಶದಾದ್ಯಂತ 1,000 ರು ಪರವಾನಿಗೆ ಮತ್ತು ಮೇಲ್ವಿಚಾರಣೆ  ಶುಲ್ಕ ಮಾತ್ರ  ಇದೆಯೇನೋ ಎಂಬ ಅಭಿಪ್ರಾಯ ಬರುವ ಹಾಗೆ ಏಕೆ ಸಚಿವ ಸಂಪುಟ ಟಿಪ್ಪಣಿಯನ್ನು ತಯಾರಿಸಲಾಗಿದೆ?

 

3. ಪ್ರತಿ ಕಿ ಮೀಗೆ ಪರವಾನಿಗೆ ಮತ್ತು ಮೇಲ್ವಿಚಾರಣೆ ಶುಲ್ಕವಾಗಿ  1,000 ರು ಅನ್ನು ನಿಗದಿಗೊಳಿಸುವಾಗ ಹಿಮಾಚಲ ಪ್ರದೇಶ, ಪಂಜಾಬ್, ತಮಿಳುನಾಡು ಇತ್ಯಾದಿ ರಾಜ್ಯಗಳಲ್ಲಿ ಪರವಾನಿಗೆ ಮತ್ತು ಮೇಲ್ವಿಚಾರಣೆ ಶುಲ್ಕದ ಜೊತೆಯಲ್ಲಿ ಅಳವಡಿಸಿಕೊಳ್ಳಲಾಗಿರುವ ನೆಲಬಾಡಿಗೆಯನ್ನು  ಏಕೆ ಅಳವಡಿಸಿಕೊಳ್ಳಲಾಗಿಲ್ಲ?

 

4. ದೇಶದಾದ್ಯಂತ 1,000 ರು ಪರವಾನಿಗೆ ಶುಲ್ಕ ಇದೆ ಎಂದು ಮೂಲತಃ ಅನಿಲ ಸರಬರಾಜು ಸಂಸ್ಥೆಗಳ ಹಿತ ಕಾಯಲು ಸೃಜಿಸಲಾಗಿರುವ ಕೇಂದ್ರ ಸರ್ಕಾರದ ಸಂಸ್ಥೆಯ ಅಭಿಪ್ರಾಯ ಮಾತ್ರ  ಏಕೆ ಪಡೆಯಲಾಗಿದೆ?

 

5. ಪರವಾನಿಗೆ ಮತ್ತು ಮೇಲ್ವಿಚಾರಣೆ ಶುಲ್ಕದ ಬಗ್ಗೆ ಆರ್ಥಿಕ ಇಲಾಖೆ  ಸ್ವತಂತ್ರವಾಗಿ ಪರಿಶೀಲನೆ ನಡೆಸಿದೆಯೆ? ಅಥವಾ ಮೂಲಸೌಕರ್ಯ ಇಲಾಖೆಯ ಪ್ರಸ್ತಾವನೆಯನ್ನು ಕಣ್ಮುಚ್ಚಿ ಒಪ್ಪಿಕೊಳ್ಳಲಾಗಿದೆಯೆ?

 

6. ಪರವಾನಿಗೆ ಮತ್ತು ಮೇಲ್ವಿಚಾರಣೆ ಶುಲ್ಕ ಇಳಿಸುವ ಬಗ್ಗೆ ಮೂಲಸೌಕರ್ಯ ಇಲಾಖೆ ಪ್ರಸ್ತಾಪಿಸಿರುವಾಗ ಕರ್ನಾಟಕದಲ್ಲಿ ಚಾಲ್ತಿ ಎಷ್ಟು ಶುಲ್ಕ ಇದೆ ಎಂಬುದನ್ನು ಆರ್ಥಿಕ ಇಲಾಖೆ ಖಾತರಿಪಡಿಸಿಕೊಂಡಿದೆಯೆ?
ಕರ್ನಾಟಕದಲ್ಲಿ ಸರ್ಕಾರದ ಆದೇಶದಂತೆ  1957 ರೂ. ಪ್ರತಿ ಮೀಟರಿಗೆ ಪರವಾನಿಗೆ ಮತ್ತು ಮೇಲ್ವಿಚಾರಣೆ ಶುಲ್ಕ ಚಾಲ್ತಿಯಲ್ಲಿರುವುದು  ಗೊತ್ತಿದ್ದೂ ಸದರಿ  ಶುಲ್ಕವನ್ನು ಪ್ರತಿ ಮೀಟರಿಗೆ 1 ರೂಗೆ ಇಳಿಸಲು ಆರ್ಥಿಕ ಇಲಾಖೆ ಒಪ್ಪಿದೆಯೆ?

 

7. ಕರ್ನಾಟಕದಲ್ಲಿ ಸ್ವತ್ತುಗಳ ನೋಂದಣಿ ಶುಲ್ಕ ಮತ್ತು ಮಾರ್ಗದರ್ಶಿ ದರ, ಆಸ್ತಿ ತೆರಿಗೆ ಮುಂತಾದವುಗಳಲ್ಲಿ  ಆದಾಯ ಆಕರದ ಹೆಸರಿನಲ್ಲಿ  ಸಾರ್ವಜನಿಕರಿಗೆ ಆರ್ಥಿಕ ಹೊರೆಯನ್ನು  ಒಂದು ಕಡೆ ಹೆಚ್ಚಿಸುವ ಕರ್ನಾಟಕ ಸರ್ಕಾರ,  ಇನ್ನೊಂದು ಕಡೆ ಖಾಸಗಿ ಸಂಸ್ಥೆಗಳಿಗೆ ಚಾಲ್ತಿಯಲ್ಲಿದ್ದ  ಶುಲ್ಕವನ್ನು  1,957 ರೂ.  ಪ್ರತಿ ಮೀಟರಿನಿಂದ 1 ರೂ. ಪ್ರತಿ ಮೀಟರಿಗೆ (19.57 ಲಕ್ಷ ರು. ಪ್ರತಿ ಕಿ.ಮೀ.ಗೆ ನಿಂದ 1,000 ರು. ಪ್ರತಿ ಕಿ ಮೀ) ಇಳಿಸಿ ನಷ್ಟ ಅನುಭವಿಸುವ ನಿರ್ಧಾರವನ್ನು ಆರ್ಥಿಕ ಇಲಾಖೆ ಏಕೆ ಪ್ರಶ್ನಿಸಲಿಲ್ಲ?

 

ಈ  ಕುರಿತು ‘ದಿ ಫೈಲ್‌’,  ಮೂಲಭೂತ  ಪ್ರಶ್ನೆಗಳಿಗೆ ನಿರ್ದಿಷ್ಟ ಉತ್ತರ ಬಯಸಿ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ 2024ರ ಮಾರ್ಚ್‌ 19ರಂದು ಇ-ಮೈಲ್‌ ಮೂಲಕ ಮುಂಗಡವಾಗಿಯೇ ಕಳಿಸಲಾಗಿತ್ತು.

 

‘ದಿ ಫೈಲ್‌’ ಕೇಳಿದ್ದ ನಿರ್ದಿ‍ಷ್ಟ ಪ್ರಶ್ನೆಗಳಿಗೆ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯು ನಿಖರವಾಗಿ  ಉತ್ತರಿಸಿಲ್ಲ. ಬದಲಿಗೆ ಹಿಂದಿನ ವರದಿಗೆ ನೀಡಿದ್ದ ಸ್ಪಷ್ಟೀಕರಣವನ್ನೇ ಪುನರುಚ್ಛರಿಸಿದೆ. ಅಲ್ಲದೇ ಇದೇ ವಿಷಯಕ್ಕೆ ಸಂಬಂಧಿಸಿದಂತೇ ಯಾವುದೇ ಸ್ಪಷ್ಟೀಕರಣವನ್ನು ನೀಡಲಾಗುವುದಿಲ್ಲ. ಇದೇ ಅಂತಿಮ ಸ್ಪಷ್ಟೀಕರಣ ಎಂದು ತಿಳಿಸುವ ಮೂಲಕ  ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯು  ಈ ವಿಷಯದಲ್ಲಿ  ತನಗೆ ಯಾವುದೇ ಉತ್ತರದಾಯಿತ್ವ ಇಲ್ಲ ಎಂದು  ತಿಳಿಸುತ್ತಿದೆ.

 

ಇಲಾಖೆ ನೀಡಿರುವ  ಹೆಚ್ಚುವರಿ ಸ್ಪಷ್ಟೀಕರಣ

 

ಪೆಟ್ರೋಲಿಯಂ ಮತ್ತು ನ್ಯಾಚುರಲ್ ಗ್ಯಾಸ್ ರೆಗ್ಯುಲೇಟರಿ ಬೋರ್ಡ್ (PNGRB) ಮೂಲಕ ಭಾರತ ಸರ್ಕಾರವು 295 ಭೌಗೋಳಿಕ ಪ್ರದೇಶಗಳನ್ನು ವಿವಿಧ CGD ಘಟಕಗಳಿಗೆ ಅಧಿಕಾರ ನೀಡಿದೆ. ಇದು ಭಾರತದ ಜನಸಂಖ್ಯೆಯ ಸುಮಾರು 98 % ಮತ್ತು 88% ಪ್ರದೇಶಗಳನ್ನು ಒಳಗೊಂಡಿದೆ. 2030 ರ ವೇಳೆಗೆ ದೇಶದ ಪ್ರಾಥಮಿಕ ಶಕ್ತಿ ಮಿಶ್ರಣದಲ್ಲಿ ನೈಸರ್ಗಿಕ ಅನಿಲದ ಪಾಲನ್ನು 6.2% ರಿಂದ 15% ಕ್ಕೆ ಹೆಚ್ಚಿಸುವ ಗುರಿಯನ್ನು ಭಾರತ ಸರ್ಕಾರ (GOI) ಹೊಂದಿದೆ.

 

ಕರ್ನಾಟಕದಲ್ಲಿ ಎಂಟು (8) ಸಿಜಿಡಿ  ಘಟಕಗಳಿವೆ, ಇವುಗಳನ್ನು ಸರ್ಕಾರವು ಆಯ್ಕೆ ಮಾಡಿದೆ. ಎಲ್ಲಾ ಜಿಲ್ಲೆಗಳನ್ನು ಒಳಗೊಂಡಿರುವ ಹದಿನೆಂಟು (18) ಭೌಗೋಳಿಕ ಪ್ರದೇಶಗಳಲ್ಲಿ ಸಿಜಿಡಿ  ಸಂಬಂಧಿತ ಕಾರ್ಯಗಳನ್ನು ಕೈಗೊಳ್ಳಲು ಸಿಟಿ ಗ್ಯಾಸ್ ಡಿಸ್ಟ್ರಿಬ್ಯೂಷನ್ (ಸಿಜಿಡಿ) ಘಟಕಗಳು ತಮ್ಮ ಭೌಗೋಳಿಕ ಪ್ರದೇಶಗಳಲ್ಲಿ (ಜಿಎ) ನಗರ ಅನಿಲ ವಿತರಣೆ ಜಾಲವನ್ನು ಮನೆಗಳು, ವಾಣಿಜ್ಯ, ಕೈಗಾರಿಕೆ ವಿಭಾಗಗಳಿಗೆ ಪೂರೈಸುವ ಜವಾಬ್ದಾರಿ ಹೊಂದಿದೆ.  ಇದು ರಾಜ್ಯದಲ್ಲಿ ಸುಸ್ಥಿರ ಕೈಗಾರಿಕಾ ಬೆಳವಣಿಗೆಗೆ ಸಾಧನವಾಗಿದೆ ಎಂದು ಸ್ಪಷ್ಟೀಕರಣದಲ್ಲಿ ಪ್ರತಿಪಾದಿಸಿದೆ.

 

ಇದರಲ್ಲಿ ಉತ್ತರ ಪ್ರದೇಶದಲ್ಲಿ ಪ್ರತಿ ಕಿಮೀಗೆ ರೂ.1000/- ಅನುಮತಿ ದರಗಳನ್ನು ನಿರ್ದಿಷ್ಟವಾಗಿ ಪಟ್ಟಿಮಾಡಲಾಗಿದೆ ಎಂದು ಮಾಹಿತಿ ಒದಗಿಸಿದೆ.

the fil favicon

SUPPORT THE FILE

Latest News

Related Posts