3,289 ಕೋಟಿ ರು ಹಗರಣ ಶಂಕೆ; ಅನಿಲ ವಿತರಣಾ ಜಾಲ ಅಭಿವೃದ್ದಿ ನೀತಿ ‘ಕಡತ’ಕ್ಕೆ ಸರ್ಪಗಾವಲು

ಬೆಂಗಳೂರು;  ಅದಾನಿ ಸೇರಿದಂತೆ ಮತ್ತಿತರ ಅನಿಲ ಆಧಾರಿತ ಕಂಪನಿಗಳಿಗೆ ಅಂದಾಜು 3,289.20 ಕೋಟಿ ರು.ನಷ್ಟು ಆರ್ಥಿಕ ಲಾಭ ಮಾಡಿಕೊಟ್ಟಿದೆ ಎನ್ನಲಾಗಿರುವ   ನಗರ ಅನಿಲ ವಿತರಣಾ ಜಾಲ ಅಭಿವೃದ್ದಿಗೆ ರಾಜ್ಯದ ನೀತಿ ಕುರಿತಾದ ಸಮಗ್ರ ಕಡತವನ್ನೇ ಈಗಿನ ರಾಜ್ಯ ಕಾಂಗ್ರೆಸ್‌ ಸರ್ಕಾರವು ವ್ಯವಸ್ಥಿತವಾಗಿ ಮುಚ್ಚಿಡಲು ಯತ್ನಿಸಿರುವುದು ಬಹಿರಂಗವಾಗಿದೆ.

 

ನಗರ ಅನಿಲ ವಿತರಣೆ ಜಾಲ ಅಭಿವೃದ್ಧಿಗೆ ರಾಜ್ಯದ ನೀತಿ ಕುರಿತಾದ ವಿಷಯಕ್ಕೆ ಸಂಬಂಧಿಸಿದಂತೆ ‘ದಿ ಫೈಲ್‌’ ಸಮಗ್ರ ಕಡತವನ್ನು ಕೋರಿ ಸಲ್ಲಿಸಿದ್ದ ಆರ್‌ಟಿಐ ಅಡಿಯಲ್ಲಿ 2023ರ ಡಿಸೆಂಬರ್‌ 4ರಂದು ಸಲ್ಲಿಸಿದ್ದ ಅರ್ಜಿಗೆ ಮಾಹಿತಿ ಹಕ್ಕು ಅಧಿನಿಯಮ 2005ರ ನಿಯಮ 8(1)(i) ರ ವ್ಯಾಪ್ತಿಯ ರಕ್ಷಾಕವಚದಂತೆ ಬಳಸಿ ಕಡತವನ್ನು ಒದಗಿಸಲು ನಿರಾಕರಿಸಿದೆ.

 

ಈ ವಿಷಯದ ಕುರಿತಾಗಿ ಮೂಲ ಸೌಲಭ್ಯ ಅಭಿವೃದ್ಧಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯಲ್ಲಿ ತೆರೆದಿರುವ ಸಮಗ್ರ ಕಡತವು ಸಾರ್ವಜನಿಕವಾಗಿ ಮತ್ತು ಆರ್‌ಟಿಐ ಅಡಿಯಲ್ಲಿ ಬಹಿರಂಗಗೊಳ್ಳದಂತೆ ಸರ್ಕಾರವೇ ಮುಂದೆ ನಿಂತಿದೆ. ಅಲ್ಲದೇ ಅನಿಲ ಆಧಾರಿತ ಖಾಸಗಿ ಕಂಪನಿಗಳ ಪರವಾಗಿರುವ ಸಮಾಲೋಚಕರೊಬ್ಬರು ಈ ಕಡತವನ್ನು  ನಿಧಿ ಕಾಯುವ ಸರ್ಪದಂತೆ ಕಾಯುತ್ತಿದ್ದಾರೆ ಎಂದು ಗೊತ್ತಾಗಿದೆ.

 

ಆರ್‌ಟಿಐ ಕಾಯ್ದೆ ಪ್ರಕಾರ ಕಡತವು  ಸಾರ್ವಜನಿಕವಾಗಿ ಬಹಿರಂಗಗೊಳ್ಳಬೇಕಾದರೆ ಅಥವಾ ಆರ್‌ಟಿಐ ಅಡಿಯಲ್ಲಿ ಅರ್ಜಿದಾರನಿಗೆ ಕಡತವನ್ನು ನೀಡಬೇಕಾದರೇ ಕಡತದೊಳಗಿರುವ ವಿಷಯವು ಮುಕ್ತಾಯಗೊಳ್ಳಬೇಕು. ಒಮ್ಮೆ ಅಧಿಸೂಚನೆ ಹೊರಡಿಸಿದ ನಂತರ ಅದು ಮುಕ್ತಾಯಗೊಂಡಂತೆ. ಕಡತ ಮುಕ್ತಾಯಗೊಳ್ಳಬೇಕು ಅಂತ ಎಲ್ಲಿಯೂ ಹೇಳಿಲ್ಲ. ಆದರೂ ರಾಜ್ಯ  ಕಾಂಗ್ರೆಸ್‌ ಸರ್ಕಾರವು ಕಡತವು ಮುಕ್ತಾಯಗೊಂಡ ನಂತರ ಅರ್ಜಿ ಸಲ್ಲಿಸಿದಲ್ಲಿಎಂದು ಉಲ್ಲೇಖಿಸಿರುವುದು ಹಲವು ಸಂಶಯಗಳಿಗೆ ದಾರಿಮಾಡಿಕೊಟ್ಟಂತಾಗಿದೆ.

 

ನಗರ ಅನಿಲ ವಿತರಣಾ ಜಾಲ ಅಭಿವೃದ್ದಿಗೆ ರಾಜ್ಯದ ನೀತಿಯನ್ನು ರಾಜ್ಯ ಸರ್ಕಾರವು ಅಧಿಕೃತವಾಗಿ ಜಾರಿಗೊಳಿಸಿದೆ ಮತ್ತು ಈ ಕುರಿತು ಅಧಿಸೂಚನೆಯನ್ನೂ ಹೊರಡಿಸಿದೆ. ಹೀಗಾಗಿ ಕಡತವೂ ಮುಕ್ತಾಯಗೊಂಡಂತೆ. ಅಲ್ಲದೇ   ಒಮ್ಮೆ ಅಧಿಸೂಚನೆ ಹೊರಡಿಸಿದ ನಂತರ ಅದಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿ, ವಿವರಗಳೂ ಸಾರ್ವಜನಿಕವಾಗಿ ಲಭ್ಯವಾಗಬೇಕು.

 

ಕಾಯ್ದೆಯ (ಐ) ಅಡಿಯಲ್ಲಿ ಮಂತ್ರಿ ಪರಿಷತ್ತಿನ, ಕಾರ್ಯದರ್ಶಿಗಳ ಮತ್ತು ಇತರೆ ಅಧಿಕಾರಿಗಳ ಚರ್ಚೆಗಳ ದಾಖಲೆಗಳು ಸೇರಿದಂತೆ ಸಚಿವ ಸಂಪುಟದ ಕಾಗದ ಪತ್ರಗಳು, ಮಂತ್ರಿ ಪರಿಷತ್ತಿನ ನಿರ್ಣಯಗಳು, ಆ ನಿರ್ಣಯಗಳಿಗೆ ಕಾರಣಗಳು ಮತ್ತು ತೆಗೆದುಕೊಂಡ ನಿರ್ಣಯಗಳಿಗೆ ಆಧರಿಸಿದ ವಿಷಯ ಸಾಮಗ್ರಿ ಇವುಗಳನ್ನು ನಿರ್ಣಯವನ್ನು ತೆಗೆದುಕೊಂಡ ಮತ್ತು ಆ ವಿಷಯ ಪೂರ್ಣಗೊಂಡ ಅಥವಾ ಮುಕ್ತಾಯಗೊಂಡ ತರುವಾಗ ಸಾರ್ವಜನಿಕರಿಗೆ ತಿಳಿಯುವಂತೆ ಮಾಡಬೇಕು ಎಂದೂ ಕಾಯ್ದೆಯು  ಹೇಳಿದೆ.

 

ಆದರೂ ಈ ವಿಷಯದ ಕುರಿತಾದ ಕಡತವನ್ನು ಆರ್‌ಟಿಐ ಅಡಿಯಲ್ಲಿ ಸಾರ್ವಜನಿಕರಣಗೊಳಿಸಲು ಅಥವಾ ಬಹಿರಂಗಗೊಳಿಸಲು ಸರ್ಕಾರವು ಮುಂದೆ ಬಾರದಿರುವುದು ಹಲವು ಅನುಮಾನಗಳಿಗೆ ಆಸ್ಪದ ಮಾಡಿಕೊಟ್ಟಂತಾಗಿದೆ.

 

ನಷ್ಟದ ಕುರಿತು ದಾಖಲಿಸಿಲ್ಲವೇ?

 

ನಗರ ಅನಿಲ ವಿತರಣಾ ಜಾಲ ಅಭಿವೃದ್ದಿಗೆ ರಾಜ್ಯದ ನೀತಿಯನ್ನು ಜಾರಿಗೊಳಿಸುವುದರಿಂದ ಸರ್ಕಾರಕ್ಕೆ ಎಷ್ಟು ನಷ್ಟವಾಗುತ್ತದೆ ಎಂದು ಯಾವ ಅಧಿಕಾರಿಯೂ ಕಡತದಲ್ಲಿ ದಾಖಲಿಸಿಲ್ಲ ಮತ್ತು ಸರ್ಕಾರಕ್ಕೆ ನಷ್ಟವಾಗಲಿದೆ ಅಥವಾ ಇದರಿಂದಾಗುವ ಆರ್ಥಿಕ ಪರಿಣಾಮಗಳ ಬಗ್ಗೆ ಇಲಾಖೆಯು ಸಚಿವ ಸಂಪುಟದ ಟಿಪ್ಪಣಿಯಲ್ಲಿ ಮುಚ್ಚಿಡಲಾಗಿದೆ ಎಂದು ವಿಶ್ವಸನೀಯ ಮೂಲಗಳು ‘ದಿ ಫೈಳ್‌’ಗೆ ಖಚಿತಪಡಿಸಿವೆ.

 

ಅಸಮ್ಮತಿ ಇತ್ತೇ?

 

ಅಲ್ಲದೇ ಈ ವಿಷಯದ ಕುರಿತು ಆರ್ಥಿಕ ಇಲಾಖೆಯೊಂದಿಗೂ ಸಹ ಚರ್ಚಿಸಿಲ್ಲ ಎಂದು ಗೊತ್ತಾಗಿದೆ. ಈ ನೀತಿ ಜಾರಿಗೊಳಿಸುವ ಬಗ್ಗೆ ಸರ್ಕಾರದ ಅತ್ಯಂತ ಉನ್ನತ ಹುದ್ದೆಯಲ್ಲಿರುವ ಹಿರಿಯ ಅಧಿಕಾರಿಯೊಬ್ಬರು ಇದಕ್ಕೆ ಅಸಮ್ಮತಿ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

 

ಒಂದೊಮ್ಮೆ ಕಡತವನ್ನೇನಾದರೂ  ಒದಗಿಸಿದಲ್ಲಿ ಈ ಎಲ್ಲಾ ವಿವರಗಳೂ ಬಹಿರಂಗಗೊಂಡು ಪ್ರತಿಪಕ್ಷಗಳ ಕೈಗೆ ಪ್ರಬಲ ಅಸ್ತ್ರವನ್ನು ನೀಡಿದಂತಾಗುತ್ತದೆ.  ಹೀಗಾಗಿಯೇ ಕಡತವನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಿದಲ್ಲಿ ಅಥವಾ ಆರ್‌ಟಿಐ ಅಡಿಯಲ್ಲಿ ಸಮಗ್ರ ಕಡತವನ್ನು ಒದಗಿಸಲು ಮಾಹಿತಿ ಹಕ್ಕು ಅಧಿನಿಯಮ 2005ರ ನಿಯಮ 8(1)(i) ರ ವ್ಯಾಪ್ತಿಯನ್ನು ರಕ್ಷಾ ಕವಚದಂತೆ ಬಳಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

 

ಹಿಂಬರಹದಲ್ಲೇನಿದೆ?

 

ಉಲ್ಲೇಖಿತ ಮನವಿಯಲ್ಲಿ ಕೋರಲಾದ ಮಾಹಿತಿಯು ನಗರ ಅನಿಲ ವಿತರಣಾ ಜಾಲ ಅಭಿವೃದ್ದಿಗೆ ರಾಜ್ಯದ ನೀತಿ ಕುರಿತ ವಿಷಯದ ಕಡತವಾಗಿರುತ್ತದೆ. ಆದ್ದರಿಂದ ಸದರಿ ವಿಷಯವು ಮಾಹಿತಿ ಹಕ್ಕು ಅಧಿನಿಯಮ 2005ರ ನಿಯಮ 8(1)(i) ರ ವ್ಯಾಪ್ತಿಯಲ್ಲಿ ಬರುವುದರಿಂದ ಸದರಿ ಕಡತವು ಮುಕ್ತಾಯಗೊಂಡ ನಂತರ ಅರ್ಜಿ ಸಲ್ಲಿಸಿದಲ್ಲಿ ಸದರಿ ಮಾಹಿತಿಯನ್ನು ನೀಡುವ ಬಗ್ಗೆ ನಿಯಮಾನುಸಾರ ಪರಿಶೀಲಿಸಲಾಗುವುದು ಎಂದು ಈ ಮೂಲಕ ತಿಳಿಸಿದೆ ಎಂದು 2023ರ ಡಿಸೆಂಬರ್‌ 27ರಂದು ಮೂಲ ಸೌಲಭ್ಯ ಅಭಿವೃದ್ಧಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಂ ಕೆ ವೆಂಕಟೇಶ್‌ ಅವರು ಹಿಂಬರಹ ನೀಡಿದ್ದಾರೆ.

 

ಮಾಹಿತಿ ಹಕ್ಕು ಅಧಿನಿಯಮದ 8(1)(i) ರಲ್ಲಿ ಏನಿದೆ?

 

ಕೋರಿಕೆಯನ್ನು 1ನೇ ಉಪಪ್ರಕರಣದ ಅಡಿಯಲ್ಲಿ ನಿರಾಕರಿಸಿದಲ್ಲಿ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಯ ಅಥವಾ ಸಂದರ್ಭಾನುಸಾರ ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿಯು ಕೋರಿಕೆ ಸಲ್ಲಿಸುವ ಬಗ್ಗೆ ಅಂಥ ನಿರಾಕರಣೆಗೆ ಕಾರಣಗಳನ್ನು, ಅಂಥ ನಿರಾಕರಣೆ ವಿರುದ್ಧ ಅಪೀಲು ಸಲ್ಲಿಸಲು ಇರುವ ಅವಧಿಯನ್ನು ಮತ್ತು ಅಪೀಲು ಪ್ರಾಧಿಕಾರದ ವಿವರಗಳನ್ನು ತಿಳಿಸತಕ್ಕದ್ದು ಎಂದು ಹೇಳಲಾಗಿದೆ.

 

ಯಾವ ಮಾಹಿತಿಯನ್ನು ನಿರ್ಬಂಧಿಸಬಹುದು?

 

ಯಾವ ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ಭಾರತದ ಸಾರ್ವಭೌಮತ್ವ ಮತ್ತು ಏಕತೆ, ರಾಷ್ಟ್ರದ ಭದ್ರತೆ, ಕಾರ್ಯ ತಂತ್ರ, ರಾಜ್ಯದ ವೈಜ್ಞಾನಿಕ ಅಥವಾ ಆರ್ಥಿಕ ಹಿತಾಸಕ್ತಿಗಳು, ವಿದೇಶದೊಂದಿಗಿನ ಸಂಬಂಧ ಇವುಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೋ ಅಥವಾ ಒಂದು ಅಪರಾಧಕ್ಕೆ ಪ್ರೇರಣೆ ನೀಡುತ್ತದೋ ಅಂಥ ಮಾಹಿತಿಯನ್ನು ನೀಡಲು ನಿರಾಕರಿಸಬಹುದು.

 

ಯಾವುದೇ ನ್ಯಾಯಾಲಯ ಅಥವಾ ನ್ಯಾಯಾಧೀಕರಣವು ಯಾವ ಮಾಹಿತಿ ಪ್ರಕಟಣೆಯನ್ನು ಸ್ಪಷ್ಟವಾಗಿ ನಿಷೇಧಿಸಿದೆಯೋ ಅಥವಾ ಯಾವ ಮಾಹಿತಿಯನ್ನು ಬಹಿರಂಗಪಡಿಸುವುರಿಂದ ನ್ಯಾಯಾಲಯ ನಿಂದನೆಯಾಗಬಹುದೋ ಅಂಥ ಮಾಹಿತಿ, ಯಾವ ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ಸಂಸತ್ತು ಅಥವಾ ರಾಜ್ಯ ವಿಧಾನಮಂಡಲದ ಹಕ್ಕುಚ್ಯುತಿ ಉಂಟಾಗುವುದೋ ಅಂಥ ಮಾಹಿತಿ ನೀಡಲು ಅವಕಾಶವಿಲ್ಲ.

 

ಯಾವ ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ಮೂರನೇ ಪಕ್ಷದಾರನ ಸ್ಪರ್ಧಾತ್ಮಕತೆಗೆ ತೊಂದರೆಯುಂಟಾಗುತ್ತದೋ ಅಂಥ ವಾಣಿಜ್ಯ ರಹಸ್ಯ, ವ್ಯಾಪಾರ ಗೌಪ್ಯತೆಗಳು ಅಥವಾ ಬೌದ್ಧಿಕ ಆಸ್ತಿಯನ್ನೊಳಗೊಂಡ ಮಾಹಿತಿ, ಅಂಥ ಮಾಹಿತಿಯನ್ನು ಬಹಿರಂಗಪಡಿಸುವುದು ಬಹುಸಂಖ್ಯೆಯ ಸಾರ್ವಜನಿಕರ ಹಿತದೃಷ್ಟಿಯಿಂದ ಅಗತ್ಯವೆಂದುಸಕ್ಷಮ ಪ್ರಾಧಿಕಾರಿಗೆ ಮನದಟ್ಟಾದ ಹೊರತು ಅಂತಹ ಮಾಹಿತಿಯನ್ನು ನೀಡುವುದರಿಂದ ವಿನಾಯಿತಿ ಇದೆ.

 

ತನ್ನ ನಂಬಿಕೆಯ ವಿರ್ಶವಾಶದ ಸಂಬಂಧದಲ್ಲಿ ಒಬ್ಬ ವ್ಯಕ್ತಿಗೆ ದೊರಕುವ ಮಾಹಿತಿ, ಅಂಥ ಮಾಹಿತಿಯನ್ನು ಬಹಿರಂಗಪಡಿಸುವುದು ಬಹುಸಂಖ್ಯೆಯ ಸಾರ್ವಜನಿಕರ ಹಿತದೃಷ್ಟಿಯಿಂದ ಅಗತ್ಯವೆಂದು ಸಕ್ಷಮ ಪ್ರಾಧಿಕಾರಿಗೆ ಮನದಟ್ಟಾದ ಹೊರತು, ವಿದೇಶಿ ಸರ್ಕಾರದಿಂದ ರಹಸ್ಯವಾಗಿ ಪಡೆದ ಮಾಹಿತಿ, ಯಾವ ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ಯಾರೇ ವ್ಯಕ್ತಿಯ ಜೀವ ಅಥವಾ ದೈಹಿಕ ಸುರಕ್ಷತೆಗೆ ಅಪಾಯ ಉಂಟಾಗುತ್ತದೋ ಅಂಥ ಮಾಹಿತಿ ಅಥವಾ ಕಾನೂನು ಜಾರಿಯ ಅಥವಾ ಭದ್ರತೆಯ ಉದ್ದೇಶಗಳಿಗಾಗಿ ರಹಸ್ಯವಾಗಿ ನೀಡಿದ ಮಾಹಿತಿಯ ಅಥವಾ ಸಹಾಯದ ಮೂಲವನ್ನು ಗುರುತಿಸಬಹುದಾದಂಥ ಮಾಹಿತಿ ಒದಗಿಸಲು ಸಾಧ್ಯವಿಲ್ಲ.

 

ದೇಶದ ರಕ್ಷಣೆಗಾಗಿ ಅಥವಾ ಕಾನೂನು ಜಾರಿಗಾಗಿ ಸಹಕರಿಸಿದ , ಗೌಪ್ಯ ಮಾಹಿತಿ ನೀಡಲು ಸಹಕರಿಸಿದ ವ್ಯಕ್ತಿಯ ಜೀವಕ್ಕೆ ಅಥವಾ ದೈಹಿಕ ರಕ್ಷಣೆಗೆ ಅಪಾಯಕಾರಿಯಾಗುವಂತಿರುವ ಮಾಹಿತಿ, ಅಪರಾಧವನ್ನು ಪತ್ತೆ ಮಾಡುವ, ಬಂಧಿಸುವ, ಕಾನೂಉ ಕ್ರಮ ಜರುಗಿಸುವ ಪ್ರಕ್ರಿಯೆಗೆ ಅಡ್ಡಿಪಡಿಸುವಂತಿದ್ದರೇ ಅಂತಹ ಮಾಹಿತಿಯನ್ನು ಒದಗಿಸಲು ಅವಕಾಶವಿಲ್ಲ.

 

ನಗರ ಅನಿಲ ವಿತರಣಾ ಜಾಲದ ಅಭಿವೃದ್ದಿಗೆ ರಾಜ್ಯದ ನೀತಿ ಸಂಬಂಧದ ಕಡತವು ಮೇಲಿನ ಯಾವ ನಿರ್ಬಂಧಕ್ಕೂ ಅಥವಾ ಬಹಿರಂಗಪಡಿಸಬಾರದಂತಹ ವಿನಾಯಿತಿಗೆ ಒಳಪಟ್ಟಿಲ್ಲ ಮತ್ತು ಅನ್ವಯಿಸುವುದೂ ಇಲ್ಲ. ಹೀಗಿದ್ದರೂ ಕಡತವನ್ನು ಒದಗಿಸದೇ ಕಡತದೊಳಗಿರುವ ಸಮಗ್ರ ವಿವರಗಳನ್ನು ಮುಚ್ಚಿಟ್ಟಿರುವುದು ಸಂಶಯಗಳನ್ನು ಮತ್ತಷ್ಟು ಬಲಪಡಿಸಿದಂತಾಗಿದೆ.

 

ಪ್ರಕರಣದ ವಿವರ

 

ನಗರ ಅನಿಲ ವಿತರಣಾ ಜಾಲದ ಅಭಿವೃದ್ದಿಗೆ ರಾಜ್ಯ ಕಾಂಗ್ರೆಸ್‌ ಸರ್ಕಾರವು ರೂಪಿಸಿರುವ ನೀತಿಯಿಂದಾಗಿ ಅದಾನಿ ಸೇರಿದಂತೆ ಮತ್ತಿತರ ಅನಿಲ ಆಧಾರಿತ ಕಂಪನಿಗಳಿಗೆ ಅಂದಾಜು 3,289.20 ಕೋಟಿ ರು.ನಷ್ಟು ಆರ್ಥಿಕ ಲಾಭ ಮಾಡಿಕೊಟ್ಟಿದೆ ಎಂದು ಹೇಳಲಾಗುತ್ತಿದೆ.

 

ರಾಜ್ಯ ಕಾಂಗ್ರೆಸ್‌ ಸರ್ಕಾರವು ನೈಸರ್ಗಿಕ ಅನಿಲ ಸರಬರಾಜು ಮಾಡಲು ಪೈಪ್ ಅಳವಡಿಕೆ ಈ ಮೊದಲು ನಿಗದಿಪಡಿಸಿದ್ದ ಶುಲ್ಕವನ್ನು ಅತ್ಯಂತ ಕನಿಷ್ಟಕ್ಕಿಳಿಸಿದೆ. ಇದು  ಅದಾನಿ ಮತ್ತಿತರೆ ಕಂಪನಿಗಳಿಗೆ ಬಹುದೊಡ್ಡ ಆರ್ಥಿಕ ಲಾಭವನ್ನು ತಂದುಕೊಟ್ಟಿದೆ ಎನ್ನಲಾಗಿದೆ.

 

ಮತ್ತೊಂದು ಆಘಾತಕಾರಿ ಅಂಶವೆಂದರೇ ರಾಜ್ಯ ಕಾಂಗ್ರೆಸ್‌ ಸರ್ಕಾರವು ರೂಪಿಸಿರುವ ಅನಿಲ ವಿತರಣಾ ಜಾಲ ಅಭಿವೃದ್ಧಿ ನೀತಿಯಿಂದಾಗಿ ರಾಜ್ಯದಲ್ಲಿ ಹನ್ನೊಂದು ಸ್ಥಳಗಳಲ್ಲಿ ಅನಿಲ ಸರಬರಾಜು ಗುತ್ತಿಗೆ ಪಡೆದುಕೊಂಡಿರುವ ಅದಾನಿ ಕಂಪನಿಯೊಂದಕ್ಕೇ ಅಂದಾಜು 387 ಕೋಟಿ ರು.ಗೂ ಅಧಿಕ ಮೊತ್ತದ ಲಾಭ ಮಾಡಿಕೊಟ್ಟಂತಾಗಿದೆ. ನೂತನ ನೀತಿಯಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಬರಬೇಕಿದ್ದ ಬೃಹತ್‌ ಪ್ರಮಾಣದ ಆದಾಯವೂ ತಪ್ಪಿ ಹೋದಂತಾಗಿದೆ.

 

ಈ ನೀತಿಯು ರಾಜ್ಯಕ್ಕೆ ಸಂಬಂಧಿಸಿದ ಕೆಲವು ತಿದ್ದುಪಡಿಗಳೊಂದಿಗೆ ಕೇಂದ್ರದ ಕಾನೂನಿನ ರೂಪಾಂತರವಾಗಿದೆ ಎಂದು ಕಾಂಗ್ರೆಸ್‌ ಸರ್ಕಾರವು ಹೇಳಿಕೊಂಡಿತ್ತು. ಆದರೆ ಹಿಂದಿನ ಬಿಜೆಪಿ ಸರ್ಕಾರವು ಈ ನೀತಿಯತ್ತ ಕಣ್ಣೆತ್ತಿಯೂ ನೋಡಿರಲಿಲ್ಲ. ಆದರೀಗ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವು 6 ತಿಂಗಳು ಪೂರ್ಣಗೊಳಿಸುವ ಮುನ್ನವೇ ಖಾಸಗಿ ಕಂಪನಿಗಳಿಗೆ 3,289 ಕೋಟಿಯಷ್ಟು ಲಾಭ ಮಾಡಿಕೊಟ್ಟಿರುವುದು ಹಲವು ಸಂಶಯಗಳಿಗೆ ದಾರಿಮಾಡಿಕೊಟ್ಟಿತ್ತು.  ಇದು ರಾಜ್ಯದಲ್ಲಿ  ಅನಿಲ ಹಗರಣಕ್ಕೆ ಮುನ್ನುಡಿಯಂತಾಗಿತ್ತು.

 

ಸರ್ಕಾರವು ರೂಪಿಸಿರುವ ನೀತಿಯಲ್ಲೇನಿದೆ?

 

ಗ್ಯಾಸ್‌ ಪೈಪ್‌ಲೈನ್‌ ಹಾಕಲು ಅನುಮತಿಗಳನ್ನು ಕೈಗೆಟುಕುವ ದರದಲ್ಲಿ ಒದಗಿಸುವ ಅಗತ್ಯವಿದೆ. ರಸ್ತೆಗಳ ಉದ್ದಕ್ಕೂ ಗ್ಯಾಸ್‌ ಪೈಪ್‌ಲೈನ್‌ ಹಾಕಲು ಅನುಮತಿ ಮತ್ತು ಮೇಲ್ವಿಚಾರಣೆ ಶುಲ್ಕಗಳು ಪ್ರತಿ ಕಿ ಮೀ ಗೆ 1,000 ಆಗಿರಬೇಕು.

 

ಅನುಮತಿ ಮತ್ತು ಮೇಲ್ವಿಚಾರಣೆ ಶುಲ್ಕಗಳು ಲೋಕೋಪಯೋಗಿ ಇಲಾಖೆ ಪ್ರದೇಶಗಳು, ಮಹಾನಗರಪಾಲಿಕೆ ಪ್ರದೇಶಗಳು, ನಗರ ಮುನ್ಸಿಪಲ್‌ ಕಾರ್ಪೋರೇಷನ್‌ ಪ್ರದೇಶಗಳು, ನಗರಾಭಿವೃದ್ದಿ ಪ್ರಾಧಿಕಾರ ಪ್ರದೇಶಗಳು, ಪಮಚಾಯತ್‌ ಪ್ರದೇಶಗಳು, ಜಲಸಂಪನ್ಮೂಲ ಇಲಾಖೆ ಪ್ರದೇಶ (ಜಲಮೂಲ ಕ್ರಾಸಿಂಗ್‌ ಸೇರಿದಂತೆ), ಕೆಎಐಡಿಬಿ ಮತ್ತಿತರೆ ಕೈಗಾರಿಕೆ ಪ್ರದೇಶಗಳು ಇತ್ಯಾದಿ ವ್ಯಾಪ್ತಿಯ ಎಲ್ಲಾ ರಸ್ತೆಗಳಿಗೆ ಏಕರೂಪವಾಗಿ ಅನ್ವಯಿಸುತ್ತದೆ ಎಂದು ರಾಜ್ಯದಾದ್ಯಂತ ಅನುಮತಿ ಶುಲ್ಕಗಳನ್ನು ನಿಗದಿಗೊಳಿಸಿದೆ.

 

ಮೀಟರ್‌ ಶುಲ್ಕದಲ್ಲಿ ಕಡಿಮೆಗೊಳಿಸಿದ್ದೇಕೆ?

 

ನೈಸರ್ಗಿಕ ಅನಿಲ ಸರಬರಾಜು ಮಾಡಲು ಪೈಪ್ ಅಳವಡಿಕೆಗೆ ಈ ಮೊದಲು ಬೆಂಗಳೂರು ವ್ಯಾಪ್ತಿಯಲ್ಲಿ ಪ್ರತಿ ಮೀಟರ್‌ಗೆ 1,900 ರು ಶುಲ್ಕವಿತ್ತು. ಮತ್ತು ರಾಜ್ಯದ ಇತರೆ ಭಾಗಗಳಲ್ಲಿ 1,857 ರು. ಇತ್ತು. ಆದರೀಗ ಕಾಂಗ್ರೆಸ್‌ ಸರ್ಕಾರವು ರೂಪಿಸಿರುವ ನೀತಿಯು ಅದನ್ನು ಮೀಟರ್‌ಗೆ 1 ರುಪಾಯಿ ಕಡಿಮೆಗೊಳಿಸಿದೆ. ಅಂದರೆ ಪ್ರತಿ ಕಿ ಮೀಗೆ 18.57 ಲಕ್ಷ ರು.ಗಳಿಂದ ಕೇವಲ 1,000 ರೂಪಾಯಿ ಆಗಲಿದೆ.

 

ಇದರ ಪ್ರಕಾರ ಅದಾನಿ ಕಂಪನಿಯೂ ಸೇರಿದಂತೆ ಇನ್ನಿತರೆ ಕಂಪನಿಗಳಿಗೆ 3,289.20 ಕೋಟಿ ರು.ನಷ್ಟು ಆರ್ಥಿಕ ಲಾಭವನ್ನು ಹರಿವಾಣದಲ್ಲಿಟ್ಟು ಕೊಟ್ಟಂತಾಗಿದೆ.

 

ಕಂಪನಿಗಳಿಗೆ ಸಂಭಾವ್ಯ ಆರ್ಥಿಕ ಲಾಭದ ಪಟ್ಟಿ

 

ಬಾಗಲಕೋಟೆ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಯಲ್ಲಿ 1,979 ಕಿ ಮೀಗಳಲ್ಲಿ ಅನಿಲ ವ ಅನಿಲ ವಿತರಣಾ ಜಾಲ ಅಭಿವೃದ್ಧಿಪಡಿಸಲು ಎಜಿ ಮತ್ತು ಪಿ ಎಲ್‌ಎನ್‌ಜಿ ಮಾರ್ಕೇಟಿಂಗ್‌ ಪ್ರೈವೈಟ್‌ ಲಿಮಿಟೆಡ್‌ ಗುತ್ತಿಗೆ ಪಡೆದುಕೊಂಡಿದೆ. ನೂತನ ನೀತಿಯಿಂದಾಗಿ 367.30 ಯಷ್ಟು ಲಾಭ ಆಗಿರುವುದು ಗೊತ್ತಾಗಿದೆ.

 

ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಯಲ್ಲಿ ಎಜಿ ಮತ್ತು ಪಿ ಎಲ್‌ಎನ್‌ಜಿ ಮಾರ್ಕೇಟಿಂಗ್‌ ಪ್ರೈವೈಟ್‌ ಲಿಮಿಟೆಡ್‌ 1, 187 ಕಿ ಮೀ ಗೆ 220.30 ಕೋಟಿ ರು., ಕಲ್ಬಗುಇF ಮತ್ತು ವಿಜಯಪುರ ಜಿಲ್ಲೆಯಲ್ಲಿ (ಎಜಿ ಅಂಡ್‌ ಪಿ, ಅಟ್ಲಾಂಟಿಕ್‌ ಗಲ್ಫ್‌ ಅನದ ಫೆಸಿಫಿಕ್‌ ಕಂಪನಿ ಮನಿಲಾ) 1,395 ಕಿ ಮೀ ಗೆ 258.91 ಕೋಟಿ ರು., ಮೈಸೂರುಕ ಮಂಡ್ಯ,ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ (ಎಜಿ ಅಂಡ್‌ ಪಿ, ಅಟ್ಲಾಂಟಿಕ್‌ ಗಲ್ಫ್‌ ಅನದ ಫೆಸಿಫಿಕ್‌ ಕಂಪನಿ ಮನಿಲಾ) 1,293 ಕಿ ಮೀ ಗೆ 239.98 ಕೋಟಿ ರು. , ಉತ್ತರ ಕನ್ನಡ, ಹಾವೇರಿ, ಶಿವಮೊಗ್ಗ ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ (ಎಜಿ ಅಂಡ್‌ ಪಿ, ಅಟ್ಲಾಂಟಿಕ್‌ ಗಲ್ಫ್‌ ಅನದ ಫೆಸಿಫಿಕ್‌ ಕಂಪನಿ ಮನಿಲಾ) 1,993 ಕಿ ಮೀ ಗೆ 369.90 ಕೋಟಿ ರು. ಗಳಷ್ಟು ಆರ್ಥಿಕ ಲಾಭವಾಗಿರುವುದು ತಿಳಿದು ಬಂದಿದೆ.

3,289 ಕೋಟಿ ರು ಅನಿಲ ಹಗರಣ; ಕಾಂಗ್ರೆಸ್‌ ಸರ್ಕಾರದ ನೂತನ ನೀತಿ, ಅದಾನಿ ಮತ್ತಿತರರಿಗೆ ಲಾಭವಾಯಿತೇ?

 

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ (ಮೇಘಾ ಇಂಜಿನಿಯರಿಂಗ್‌ ಮತ್ತು ಇನ್ಫ್ರಾಸ್ಟಕ್ಚರ್ಸ್‌ ಲಿಮಿಟೆಡ್‌ ) 999 ಕಿ ಮೀ ಗೆ 185.41 ಕೋಟಿ ರು., ತುಮಕೂರು (ಮೇಘಾ ಇಂಜಿನಿಯರಿಂಗ್‌ ಮತ್ತು ಇನ್ಫ್ರಾಸ್ಟಕ್ಚರ್ಸ್‌ ಲಿಮಿಟೆಡ್‌ ) ಜಿಲ್ಲೆಯಲ್ಲಿ 1,800 ಕಿ ಮೀ ಗೆ 334.08 ಕೋಟಿ ರು., ಧಾರವಾಡ ಜಿಲ್ಲೆಯಲ್ಲಿ ( ಇಂಡಿಯನ್‌ ಆಯಿಲ್‌ ಅದಾನಿ ಗ್ಯಾಸ್‌ ಲಿಮಿಟೆಡ್‌)1,520 ಕಿ ಮೀ ಗೆ 282.11 ಕೋಟಿ ರು., ಬೆಳಗಾವಿ ಜಿಲ್ಲೆಯಲ್ಲಿ (ಮೇಘಾ ಇಂಜಿನಿಯರಿಂಗ್‌ ಮತ್ತು ಇನ್ಫ್ರಾಸ್ಟಕ್ಚರ್ಸ್‌ ಲಿಮಿಟೆಡ್‌ ) 1,800 ಕಿ ಮೀ ಗೆ 334.08 ಕೋಟಿ ರು, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಯ 75 ಕಿ ಮೀ ಗೆ (ಯುನಿಸನ್‌ ಎನ್ವಾರ್‌ಮೆಂಟ್‌ ಪ್ರೈವೈಟ್‌ ಲಿಮಿಟೆಡ್‌) 13.92 ಕೋಟಿ ರು. ಆರ್ಥಿಕ ಲಾಭವು ಕಂಪನಿಗಳಿಗೆ ತಂದುಕೊಟ್ಟಿರುವುದು ಗೊತ್ತಾಗಿದೆ.

 

ಉಡುಪಿ ಜಿಲ್ಲೆಯಲ್ಲಿ (ಅದಾನಿ ಗ್ಯಾಸ್‌ ಲಿಮಿಟೆಡ್‌) 569 ಕಿ ಮೀ ಗೆ 105.60 ಕೋಟಿ ರು., ಬಳ್ಳಾರಿ ಮತ್ತು ಗದಗ್‌ ಜಿಲ್ಲೆಯಲ್ಲಿ (ಭಾರತ್‌ ಗ್ಯಾಸ್‌ ರಿಸೋರ್ಸ್‌ ಲಿಮಿಟೆಡ್‌) 1,365 ಕಿ ಮೀ ಗೆ 253.34 ಕೋಟಿ ರು., ಬೀದರ್‌ ಜಿಲ್ಲೆಯಲ್ಲಿ (ಭಾರತ್‌ ಗ್ಯಾಸ್‌ ರಿಸೋರ್ಸ್‌ 143 ಕಿ ಮೀ ಗೆ 26.54 ಕೋಟಿ ರು., ದಕ್ಷಿಣ ಕನ್ನಡ ಜಿಲ್ಲೆಯಲ್ಲಿ (ಗೈಲ್‌ ಗ್ಯಾಸ್‌ ಇಂಡಿಯಾ ಲಿಮಿಟೆಡ್‌) 1,250 ಕಿ ಮೀ ಗೆ 232.00 ಕೋಟಿ ರು., ರಾಮನಗರ ಜಿಲ್ಲೆಯಲ್ಲಿ (ಮಹಾರಾಷ್ಟ್ರ ನ್ಯಾಚುರಲ್‌ ಗ್ಯಾಸ್‌ ಲಿಮಿಟೆಡ್‌) 354 ಕಿ ಮೀ ಗೆ 65.70 ಕೋಟಿ ರು ಸೇರಿದಂತೆ ಒಟ್ಟಾರೆ 3,289.20 ಕೋಟಿಯಷ್ಟು ಲಾಭವು ಅನಾಯಸವಾಗಿ ಕಂಪನಿಗಳ ಬೊಕ್ಕಸ ಸೇರಲಿದೆ.

 

‘ಸರ್ಕಾರ ಪ್ರತಿ ಕಿ.ಮೀ ರಸ್ತೆ ನಿರ್ಮಾಣಕ್ಕೆ ಬೆಂಗಳೂರಿನಲ್ಲಿ ಕನಿಷ್ಟ 1.5 ರಿಂದ 3 ಕೋಟಿ ವ್ಯಯಿಸುತ್ತಿದೆ. ಅಂದರೆ ಪ್ರತಿ ಮೀಟರಿಗೆ ರಸ್ತೆ ನಿರ್ಮಾಣಕ್ಕೆ 15,000 ದಿಂದ 30,000 ರೂಪಾಯಿ ವೆಚ್ಚವಾಗುತ್ತದೆ. ಆದರೆ ಅದರ ಕೆಳಗೆ ಪೈಪ್ ಅಳವಡಿಸಲು ಮೀಟರಿಗೆ ಕೇವಲ ಒಂದು ರೂಪಾಯಿ. ಬಿಬಿಎಂಪಿಯ ಸ್ಥಳ ಗುತ್ತಿಗೆ ಪಡೆಯಲು ಮಾರ್ಗದರ್ಶಿ ದರದ ಶೇ 10ರಷ್ಟು ಪ್ರತಿ ವರ್ಷ ನೀಡಬೇಕು. ಹೀಗಿರುವಾಗ ಒಂದು ರೂಪಾಯಿ ಶುಲ್ಕ ಇಡುವ ಅಗತ್ಯ ಏನಿತ್ತು? ನಿಶುಲ್ಕ ಮಾಡಬಹುದಿತ್ತಲ್ಲ,’ ಎನ್ನುತ್ತಾರೆ ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು.

 

ಯಾವುದೇ ಸರ್ಕಾರಿ ನೀತಿಯನ್ನು ಗುತ್ತಿಗೆದಾರರಿಗೆ ಗುತ್ತಿಗೆ ನೀಡಿದ ಮೇಲೆ ಅವರ ಹೂಡಿಕೆಯಲ್ಲಿ ಉಳಿತಾಯವಾಗಿ ಅವರಿಗೆ ಆರ್ಥಿಕ ಅನುಕೂಲವಾಗುವಂತೆ ಪರಿಷ್ಕರಿಸುವುದಿಲ್ಲ. ಅದು ಕಾನೂನು ಬಾಹಿರ. ಗುತ್ತಿಗೆದಾರರು ಯೋಜನೆಯ ಒಟ್ಟೂ ಮೊತ್ತವನ್ನು ಎಲ್ಲಾ ಖರ್ಚುಗಳನ್ನು ಪರಿಗಣಿಸಿಯೇ ಮಾಡಿದ್ದಾರೆ. ಸಾರ್ವಜನಿಕರಿಗೆ ಅನಿಲ ಸರಬರಾಜು ದರ ಕೂಡ ಈ ಮೊತ್ತದ ಮೇಲೆಯ ಆಧಾರಿತವಾಗಿರುತ್ತದೆ.

the fil favicon

SUPPORT THE FILE

Latest News

Related Posts