ಅನಿಲ ನೀತಿ; ಕಂಪನಿಗಳ ಲಾಭಾಂಶ ಮರೆಮಾಚಿದ ಸರ್ಕಾರದಿಂದ ಅಸಮಂಜಸ ಪ್ರತಿಪಾದನೆ

ಬೆಂಗಳೂರು;  ರಾಜ್ಯ ಅನಿಲ ಸರಬರಾಜು ನೀತಿಯಿಂದ ನಗರಪಾಲಿಕೆ, ಪುರಸಭೆ ಸೇರಿದಂತೆ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಸುಮಾರು  5,000 ಕೋಟಿ ರುಪಾಯಿ ಮೊತ್ತದಷ್ಟು ಆದಾಯ ಖೋತಾ ಆಗಲಿದೆ ಎಂಬುದನ್ನು  ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆಯು  ತಳ್ಳಿ ಹಾಕಿದೆ.

 

ಈ ಕುರಿತು ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆಯು  ಸ್ಪಷ್ಟನೆ ನೀಡಿದೆ.  ಅಲ್ಲದೇ ಇದೇ ಸ್ಪಷ್ಟೀಕರಣದಲ್ಲಿ  ಖಾಸಗಿ ಏಜೆನ್ಸಿ/ ಕಂಪನಿಗಳಿಗೆ  ಪ್ರೋತ್ಸಾಹ  (incentive) ನೀಡುತ್ತಿದೆ ಎಂದು ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ. ಹಾಗೆಯೇ ವಿವಿಧ ಇಲಾಖೆಗಳು ನೀಡಿರುವ ಭಿನ್ನವಾದ ಅಭಿಪ್ರಾಯಗಳನ್ನು ಸ್ಪಷ್ಟೀಕರಣದಲ್ಲಿ ಮರೆಮಾಚಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

 

‘ಈ  ಅನಿಲ ನೀತಿ ಮೂಲಕ ಸರ್ಕಾರವು ಖಾಸಗಿ ಸಂಸ್ಥೆಗಳಿಗೆ ಲಾಭ ಮಾಡಿಕೊಡುತ್ತಿದೆ ಎಂದು ತೋರುತ್ತಿದ್ದರೂ ಆ ಲಾಭವು ಸಾರ್ವಜನಿಕರಿಗೆ ಅಗ್ಗದ ಪಿಎನ್‌ಜಿ ಮತ್ತು ಸಿಎನ್‌ಜಿ ರೂಪದಲ್ಲಿ ವರ್ಗಾವಣೆ ಮಾಡಲಾಗುವುದು,’ ಎಂದು ಇಲಾಖೆಯ ಕಾರ್ಯದರ್ಶಿ ಡಾ ಮಂಜುಳ ಅವರು ಪ್ರತಿಪಾದಿಸಿದ್ದಾರೆ.

 

ಖಾಸಗಿ ಕಂಪನಿಗಳಿಗೆ ರಾಜ್ಯ ಅನಿಲ ನೀತಿಯಿಂದ ಲಾಭವಾಗಲಿದೆ ಎಂದು ಹೇಳಿರುವ ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆಯು  ‘ದಿ ಫೈಲ್‌’ ಪ್ರಕಟಿಸಿದ್ದ ಸರಣಿ  ವರದಿಗಳನ್ನು  ಪುಷ್ಟೀಕರಿಸಿದಂತಾಗಿದೆ.

 

ಆದರೆ ಪ್ರತಿ  ಕಂಪನಿಗೆ ಆಗಿರುವ  ಲಾಭಾಂಶದ ಮೊತ್ತ ಎಷ್ಟು ಎಂದು ಲೆಕ್ಕ ಹಾಕಿಲ್ಲ. ಈ ಅಂಶವನ್ನು  ಸಚಿವ ಸಂಪುಟದ ಟಿಪ್ಪಣಿಯಲ್ಲಾಗಲೀ ಅಥವಾ ಇಲಾಖೆಯ ಕಾರ್ಯದರ್ಶಿ ನೀಡಿರುವ ಸ್ಪಷ್ಟೀಕರಣದಲ್ಲಾಗಲಿ ಎಲ್ಲಿಯೂ   ಸ್ಪಷ್ಟಪಡಿಸಿಲ್ಲ ಮತ್ತು ಉಲ್ಲೇಖಿಸಿಯೂ ಇಲ್ಲ.  ಹೀಗಿರುವಾಗ  ಖಾಸಗಿ ಕಂಪನಿಗಳಿಗೆ ಆಗುತ್ತಿರುವ ಲಾಭಾಂಶವನ್ನು ಸಚಿವ ಸಂಪುಟ ಟಿಪ್ಪಣಿ ಮತ್ತು ಈ ಸಂಬಂಧ ಹೊರಡಿಸಿರುವ ಅಧಿಸೂಚನೆಗಳಲ್ಲಿ  ಮುಚ್ಚಿಡುವ ಉದ್ದೇಶ ಅಡಗಿದೆಯೇ  ಎಂಬ ಅನುಮಾನಗಳು ವ್ಯಕ್ತವಾಗಿವೆ.

 

ಅಲ್ಲದೇ  ರಾಜ್ಯ ಅನಿಲ ನೀತಿಯು ಸರ್ಕಾರದ ಎಲ್ಲಾ ಇಲಾಖೆಗಳ ಸಾಮೂಹಿಕ ಮತ್ತು ಪರಿಗಣಿತ ನಿರ್ಧಾರ ಎಂದು ಇಲಾಖೆ ಸ್ಪಷ್ಟೀಕರಿಸುತ್ತಿದೆ. ಆದರೆ  ಸಚಿವ ಸಂಪುಟ ಟಿಪ್ಫಣಿಯಲ್ಲಿಯೇ ನಗರಾಭಿವೃದ್ಧಿ ಇಲಾಖೆಯ ಅಭಿಪ್ರಾಯವು ಸ್ವೀಕೃತಗೊಂಡಿರುವುದಿಲ್ಲ ಮತ್ತು ಲೋಕೋಪಯೋಗಿ ಇಲಾಖೆಯ ಅಭಿಪ್ರಾಯವನ್ನು ಆಡಳಿತ ಇಲಾಖೆಯಾದ ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆಯೇ ಒಪ್ಪಿಲ್ಲ ಎಂದು ಹೇಳಿದೆ.

 

ಅನಿಲ ನೀತಿ ಶುಲ್ಕ; ಪಿಡಬ್ಲ್ಯೂಡಿಗೆ ಕಿಮ್ಮತ್ತಿಲ್ಲ, ನಗರಾಭಿವೃದ್ಧಿ ಅಭಿಪ್ರಾಯವೇ ಇಲ್ಲ, ತಿಪ್ಪೆ ಸಾರಿಸಿತು ಸಾರಿಗೆ

 

ಈ ಅಂಶವನ್ನು ಸಚಿವ ಸಂಪುಟ ಟಿಪ್ಪಣಿಯಲ್ಲಿಯೂ ಇಲಾಖೆಯೇ ದಾಖಲಿಸಿದೆ.  ಆದರೂ ಇಲಾಖೆಯ ಕಾರ್ಯದರ್ಶಿ ಡಾ ಮಂಜುಳ  ಅವರು ನೀಡಿರುವ ಸ್ಪಷ್ಟೀಕರಣದಲ್ಲಿ ಇದೊಂದು ಸಾಮೂಹಿಕ ಹಾಗೂ ಪರಿಗಣಿತ ನಿರ್ಧಾರ ಎಂದು  ಪ್ರತಿಪಾದಿಸಿರುವುದು ಅಸಮಂಜಸ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

ಇಲಾಖೆಯು ನೀಡಿರುವ ಸ್ಪಷ್ಟೀಕರಣ

 

ಈ ರಾಜ್ಯದ ಪ್ರತಿಯೊಬ್ಬ ನಾಗರಿಕರಿಗೂ ಸಾರ್ವಜನಿಕ ಉಪಯುಕ್ತತೆಯನ್ನು ಲಭ್ಯವಾಗುವಂತೆ ಮಾಡುವ ಪ್ರಯತ್ನವಾಗಿ ರಾಜ್ಯ ಸಿಜಿಡಿ ನೀತಿಯನ್ನು ಸಿದ್ಧಪಡಿಸಲಾಗಿದೆ. ಎಲ್‌ಪಿಜಿ   ಸಿಲಿಂಡರ್‌ಗಿಂತ ಕಡಿಮೆ ಬೆಲೆಯ ಮತ್ತು ಸುರಕ್ಷಿತವಾದ ಪಿಎನ್‌ಜಿ  ಲಭ್ಯವಾಗುವಂತೆ ಮಾಡಲು ಇದು ಒಂದು ಪ್ರಯತ್ನವಾಗಿದೆ.

 

ಮನೆಗಳಿಗೆ 24×7 ನಂತೆ ಅನಿಲ ಲಭ್ಯವಾಗುವಂತೆ ಬಹಳ ಅನುಕೂಲಕರವಾಗಿದೆ. ನಗರಗಳಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಮಾಲಿನ್ಯವನ್ನು ತಡೆಯಲು ನೈಸರ್ಗಿಕ ಅನಿಲವು ಪರಿಹಾರವಾಗಿದೆ. ಅದು ವಾಹನ ಅಥವಾ ಕೈಗಾರಿಕಾ ಆಗಿರಬಹುದು. ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಭಾರತದ COP-21 ಬದ್ಧತೆಗಳನ್ನು ಪೂರೈಸಲು ಅನುಕೂಲವಾಗುವಂತೆ ಉಪಕ್ರಮಗಳನ್ನು ತೆಗೆದುಕೊಳ್ಳಲು ರಾಜ್ಯವು ಬದ್ಧವಾಗಿದೆ ಎಂದು ಸ್ಪಷ್ಟೀಕರಣದಲ್ಲಿ ಇಲಾಖೆಯು ವಿವರಿಸಿದೆ.

 

ನಗರಗಳಲ್ಲಿ ಅನಿಲ ವಿತರಣೆಯ ಅಭಿವೃದ್ಧಿ, ಪ್ರೋತ್ಸಾಹ ನೀಡುವುದು ಮತ್ತು ಅದನ್ನು ಸಕ್ರಿಯಗೊಳಿಸಲು  ರಾಜ್ಯದ ಅಗತ್ಯತೆಗಳ ಆಧಾರದ ಮೇಲೆ ನೀತಿಯನ್ನು ಸಿದ್ಧಪಡಿಸಲು ಭಾರತ ಸರ್ಕಾರವು ಮಾಡಿದ ಪುನರಾವರ್ತಿತ ವಿನಂತಿಗಳಿಗೆ ರಾಜ್ಯವು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದೆ. ರಾಜ್ಯದಲ್ಲಿನ ತಮ್ಮ ಭೌಗೋಳಿಕ ಪ್ರದೇಶದಲ್ಲಿ (GA) ಸಾರ್ವಜನಿಕರಿಗೆ ಪಿಎನ್‌ಜಿ ಮತ್ತು ಸಿಎನ್‌ಜಿ  ಬೆಲೆಗಳಿಗೆ ಅನುಮತಿ ಶುಲ್ಕಗಳಲ್ಲಿನ ಕಡಿತದ ಲಾಭವನ್ನು ಆಯಾ ಸಿಜಿಡಿ ಘಟಕವು ವರ್ಗಾಯಿಸಲಿದೆ. ಈ ಸಂಬಂಧ  ಎಲ್ಲಾ ಸಿಜಿಡಿ  ಘಟಕಗಳಿಂದಲೂ  ತೀರ್ಮಾನ ತೆಗೆದುಕೊಳ್ಳಲಾಗಿದೆ.

 

ಈ  ಕಾರ್ಯಗಳ ಆಧಾರದ ಮೇಲೆ ಮೇಲಿನ ಅಂಶವನ್ನು ನೀತಿಯ ಅಧ್ಯಾಯ 6 ಷರತ್ತು (xii) ನಲ್ಲಿ ಸೇರಿಸಲಾಗಿದೆ. 07.11.2023 ರಂದು ಸಿಜಿಡಿ  ನೀತಿಯನ್ನು ಸೂಚಿಸಿದ ನಂತರ ರಾಜ್ಯ ಸರ್ಕಾರವು 08.11.2023 ರಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ (MoP&NG) ಮತ್ತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ (PNGRB) ಎರಡಕ್ಕೂ ತಕ್ಷಣವೇ ಪತ್ರ ಬರೆದಿದೆ ಎಂದು ಸ್ಪಷ್ಟೀಕರಣದಲ್ಲಿ ಮಾಹಿತಿ ಒದಗಿಸಿದೆ.

 

 

ಗ್ಯಾಸ್ ಪೈಪ್‌ಲೈನ್ ಹಾಕುವಿಕೆ ಮತ್ತು ಮೇಲ್ವಿಚಾರಣಾ ಶುಲ್ಕಗಳನ್ನು ಪ್ರತಿ ಮೀಟರ್‌ಗೆ ರೂ. 1/- ಕ್ಕೆ ಕಡಿತಗೊಳಿಸುವುದರ ಪ್ರಯೋಜನವನ್ನು ಸಿಜಿಡಿ   ಘಟಕಗಳು ಸಾರ್ವಜನಿಕರಿಗೆ ವರ್ಗಾಯಿಸುತ್ತವೆ.  ನೀತಿಯ ಉಪಕ್ರಮಗಳಿಂದಾಗುವ ಲಾಭವನ್ನು ಯಾವುದೇ ಸಿಜಿಡಿ  ಘಟಕಗಳು ಉಳಿಸಿಕೊಂಡಿಲ್ಲ ಮತ್ತು ಸಾರ್ವಜನಿಕರಿಗೆ ರವಾನಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳುವುದು.

 

ಈ  ನೀತಿಯ ಮೂಲಕ ಸರ್ಕಾರವು ಘಟಕಗಳನ್ನು ಪ್ರೋತ್ಸಾಹಿಸುತ್ತಿದೆ ಎಂದು ತೋರುತ್ತಿದ್ದರೂ, ಅದೇ ನೀತಿಯು ಸಾರ್ವಜನಿಕರಿಗೆ ಅಗ್ಗದ ಪಿಎನ್‌ಜಿ ಮತ್ತು ಸಿಎನ್‌ಜಿ ರೂಪದಲ್ಲಿ ಪ್ರೋತ್ಸಾಹಕಗಳನ್ನು ರವಾನಿಸಲು ಅನುವು ಮಾಡಿಕೊಡುತ್ತದೆ ಎಂದು ಸ್ಪಷ್ಟೀಕರಣದಲ್ಲಿ ವಿವರಿಸಿದೆ.

 

 

ಈ ಯೋಜನೆಯ ಪ್ರಯೋಜನಗಳಾದ ಪಿಎನ್‌ಜಿ  ಮತ್ತು ಸಿಎನ್‌ಜಿಯು  ರಾಜ್ಯದ ಸಾರ್ವಜನಿಕರಿಗೆ ತಲುಪುವಂತೆ ಮಾಡಲು ಎಲ್ಲಾ ರಾಜ್ಯ ಸರ್ಕಾರದ ಇಲಾಖೆಗಳ ಸಾಮೂಹಿಕ ಮತ್ತು ಪರಿಗಣನೆಯ ನಿರ್ಧಾರವನ್ನು ರಾಜ್ಯ ಸಚಿವ ಸಂಪುಟದಲ್ಲಿ ರಾಜ್ಯ ಸಿಜಿಡಿ  ನೀತಿಯನ್ನು ಅನುಮೋದಿಸಲಾಗಿದೆ.  ಈ ನೀತಿಯು ಕೇಂದ್ರ ಸರ್ಕಾರದ ಸಾರ್ವಜನಿಕ ಉದ್ಯಮ  (PSU) ಗಳು ಮತ್ತು ಖಾಸಗಿ ಕಂಪನಿಗಳನ್ನು ಒಳಗೊಂಡಿರುವ ಎಲ್ಲಾ 8 ಸಿಜಿಡಿ  ಘಟಕಗಳಿಗೆ ಏಕರೂಪವಾಗಿ ರಾಜ್ಯದಲ್ಲಿ ಅನ್ವಯವಾಗುವಂತೆ ಮಾಡಲಾಗಿದೆ.

 

ಸಿಜಿಡಿ  ಯೋಜನೆಗಳು ಪ್ರತಿ ಮನೆಗೆ ಮತ್ತು ವಾಣಿಜ್ಯ / ಕೈಗಾರಿಕಾ ಗ್ರಾಹಕರಿಗೆ ಹಸಿರು ಇಂಧನವನ್ನು ಪಿಎನ್‌ಜಿ  ರೂಪದಲ್ಲಿ ಅಗ್ಗದ ಮತ್ತು ಅನುಕೂಲಕರವಾದ ನೈಸರ್ಗಿಕ ಅನಿಲವನ್ನು ಸಕ್ರಿಯಗೊಳಿಸುತ್ತದೆ. ಸಿಎನ್‌ಜಿ  ರೂಪದಲ್ಲಿ ನೈಸರ್ಗಿಕ ಅನಿಲವು ಪರ್ಯಾಯ ಹಸಿರು ಇಂಧನದಲ್ಲಿ ವಾಹನಗಳನ್ನು ಓಡಿಸಲು ಸಹಾಯ ಮಾಡುತ್ತದೆ ಮತ್ತು ವಾಹನ ಮಾಲಿನ್ಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಸ್ಪಷ್ಟೀಕರಣದಲ್ಲಿ ತನ್ನ ನೀತಿಯನ್ನು ಇಲಾಖೆಯು ಸಮರ್ಥಿಸಿಕೊಂಡಿದೆ.

 

ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗೆ ಸಹಾಯ ಮಾಡಲು ನೀತಿಯನ್ನು ರೂಪಿಸಲಾಗಿಲ್ಲ.  ಆದರೆ ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಮತ್ತು ಜನರ ಹೆಚ್ಚಿನ ಒಳಿತಿಗಾಗಿ ಇದನ್ನು ರೂಪಿಸಲಾಗಿದೆ.  ಭಾರತ ಸರ್ಕಾರದ ಪುನರಾವರ್ತಿತ ವಿನಂತಿಗೆ ರಾಜ್ಯ ಸರ್ಕಾರವು ಸ್ಪಂದಿಸಿದೆ.  ಉತ್ತರ ಪ್ರದೇಶ, ರಾಜಸ್ಥಾನ, ತೆಲಂಗಾಣ, ಕೇರಳ ಮತ್ತು ತಮಿಳುನಾಡು ಇತರ ರಾಜ್ಯಗಳೊಂದಿಗೆ ಕರ್ನಾಟಕವೂ  ಸೇರಿಕೊಂಡಿದೆ, ಇದು ತಮ್ಮ ರಾಜ್ಯಗಳಲ್ಲಿ ನಗರ  ಅನಿಲ  ವಿತರಣಾ ಯೋಜನೆಯನ್ನು ಉತ್ತೇಜಿಸಲು ಇದೇ ರೀತಿಯ ಪ್ರಗತಿಪರ ಕ್ರಮಗಳನ್ನು ಕೈಗೊಂಡಿದೆ.

 

ರಾಜ್ಯ ಕಾಂಗ್ರೆಸ್‌ ಸರ್ಕಾರವು  ಅನುಮೋದಿಸಿರುವ ರಾಜ್ಯ ಅನಿಲ ಸರಬರಾಜು ನೀತಿಯು, ನಗರಪಾಲಿಕೆ, ಪುರಸಭೆ ಸೇರಿದಂತೆ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಸುಮಾರು  5,000 ಕೋಟಿ ರುಪಾಯಿ ಮೊತ್ತದಷ್ಟು ಆದಾಯ ಖೋತಾಕ್ಕೆ ಕಾರಣವಾಗಿದೆ ಎಂದು ‘ದಿ ಫೈಲ್‌’ 2024ರ ಮಾರ್ಚ್‌ 19ರಂದು ವರದಿ ಪ್ರಕಟಿಸಿತ್ತು.

ನಗರ ಅನಿಲ ವಿತರಣೆ ಜಾಲ ನೀತಿ; 5,000 ಕೋಟಿ ಆದಾಯ ಖೋತಾ, ಸಂಪುಟವನ್ನೂ ದಾರಿತಪ್ಪಿಸಿದ ಇಲಾಖೆ

ಅಷ್ಟೇ ಅಲ್ಲ, ರಾಜ್ಯ ಅನಿಲ ನೀತಿಯಿಂದಾಗಿ ಅನಿಲ ಆಧಾರಿತ ಬೃಹತ್‌ ಉದ್ಯಮಗಳಿಗೆ ಇಷ್ಟೇ ಪ್ರಮಾಣದಲ್ಲಿ ಅಂದರೇ 5,000 ಕೋಟಿ ರು ಆರ್ಥಿಕ ಲಾಭವೂ ಆಗಲಿದೆ. ಈ ನೀತಿಯು ಇಷ್ಟೊಂದು ಅಗಾಧ ಪ್ರಮಾಣದಲ್ಲಿ ಆರ್ಥಿಕ ಪರಿಣಾಮಗಳಿಗೆ ಕಾರಣವಾಗಲಿದೆ. ಆದರೂ ಸಹ ಯಾವುದೇ ಆರ್ಥಿಕ ಹೊರೆ ಉಂಟಾಗುವುದಿಲ್ಲ ಎಂದು ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆಯು ಸಚಿವ ಸಂಪುಟವನ್ನೂ ದಿಕ್ಕು ತಪ್ಪಿಸಿರುವುದು ದಾಖಲೆಗಳಿಂದ  ಕಂಡುಬಂದಿತ್ತು.

 

ಕರ್ನಾಟಕ ರಾಜ್ಯ ಅನಿಲ ನೀತಿ ಕುರಿತು ‘ದಿ ಫೈಲ್‌’ ಈಗಾಗಲೇ ಪ್ರಕಟಿಸಿದ್ದ ಎರಡು ಪ್ರಾಥಮಿಕ ವರದಿಗಳ ಪ್ರಕಾರ 3,289 ಕೋಟಿ ರು. ಆದಾಯ ಖೋತಾ ಆಗಲಿತ್ತು.

3,289 ಕೋಟಿ ರು ಅನಿಲ ಹಗರಣ; ಕಾಂಗ್ರೆಸ್‌ ಸರ್ಕಾರದ ನೂತನ ನೀತಿ, ಅದಾನಿ ಮತ್ತಿತರರಿಗೆ ಲಾಭವಾಯಿತೇ?

ಆರಂಭದಲ್ಲಿ ಈ ಸಂಬಂಧದ ಕಡತವನ್ನೇ ಇಲಾಖೆಯು ಆರ್‍‌ಟಿಐ ಅಡಿಯಲ್ಲಿ ಒದಗಿಸಿರಲಿಲ್ಲ. ಈ ಕಡತವು ಸಾರ್ವಜನಿಕವಾಗಿ ಬಹಿರಂಗಗೊಳ್ಳದಂತೆ ಅಧಿಕಾರಿಶಾಹಿಯ ಒಂದು ತಂಡ ಸರ್ಪಗಾವಲು ಹಾಕಿತ್ತು.

3,289 ಕೋಟಿ ರು ಹಗರಣ ಶಂಕೆ; ಅನಿಲ ವಿತರಣಾ ಜಾಲ ಅಭಿವೃದ್ದಿ ನೀತಿ ‘ಕಡತ’ಕ್ಕೆ ಸರ್ಪಗಾವಲು

 

ಅನಿಲ ವಿತರಣೆ ಅಭಿವೃದ್ಧಿ ಜಾಲ ನೀತಿಯಿಂದಾಗಿ ಅದಾನಿ, ಮೇಘಾ, ಅಶೋಕಂ ಸೇರಿದಂತೆ ಇನ್ನಿತರೆ ಅನುಷ್ಠಾನ ಏಜೆನ್ಸಿಗಳಿಗೆ ಇದರಿಂದ ಬಹುಕೋಟಿಗಳಷ್ಟು ಲಾಭ ಆಗಲಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿರುವುದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts