ನಗರ ಅನಿಲ ವಿತರಣೆ ಜಾಲ ನೀತಿ; 5,000 ಕೋಟಿ ಆದಾಯ ಖೋತಾ, ಸಂಪುಟವನ್ನೂ ದಾರಿತಪ್ಪಿಸಿದ ಇಲಾಖೆ

ಬೆಂಗಳೂರು; ರಾಜ್ಯ ಕಾಂಗ್ರೆಸ್‌ ಸರ್ಕಾರವು  ಅನುಮೋದಿಸಿರುವ ರಾಜ್ಯ ಅನಿಲ ಸರಬರಾಜು ನೀತಿಯು, ನಗರಪಾಲಿಕೆ, ಪುರಸಭೆ ಸೇರಿದಂತೆ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಸುಮಾರು  5,000 ಕೋಟಿ ರುಪಾಯಿ ಮೊತ್ತದಷ್ಟು ಆದಾಯ ಖೋತಾಕ್ಕೆ ಕಾರಣವಾಗಿದೆ.

 

ಅಷ್ಟೇ ಅಲ್ಲ, ರಾಜ್ಯ ಅನಿಲ ನೀತಿಯಿಂದಾಗಿ ಅನಿಲ ಆಧಾರಿತ ಬೃಹತ್‌ ಉದ್ಯಮಗಳಿಗೆ ಇಷ್ಟೇ ಪ್ರಮಾಣದಲ್ಲಿ ಅಂದರೇ 5,000 ಕೋಟಿ ರು ಆರ್ಥಿಕ ಲಾಭವೂ ಆಗಲಿದೆ. ಈ ನೀತಿಯು ಇಷ್ಟೊಂದು ಅಗಾಧ ಪ್ರಮಾಣದಲ್ಲಿ ಆರ್ಥಿಕ ಪರಿಣಾಮಗಳಿಗೆ ಕಾರಣವಾಗಲಿದೆ. ಆದರೂ ಸಹ ಯಾವುದೇ ಆರ್ಥಿಕ ಹೊರೆ ಉಂಟಾಗುವುದಿಲ್ಲ ಎಂದು ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆಯು ಸಚಿವ ಸಂಪುಟವನ್ನೂ ದಿಕ್ಕು ತಪ್ಪಿಸಿರುವುದು ದಾಖಲೆಗಳಿಂದ  ಕಂಡುಬಂದಿದೆ.

 

ಕರ್ನಾಟಕ ರಾಜ್ಯ ಅನಿಲ ನೀತಿ ಕುರಿತು ‘ದಿ ಫೈಲ್‌’ ಈಗಾಗಲೇ ಪ್ರಕಟಿಸಿದ್ದ ಎರಡು ಪ್ರಾಥಮಿಕ ವರದಿಗಳ ಪ್ರಕಾರ 3,289 ಕೋಟಿ ರು. ಆದಾಯ ಖೋತಾ ಆಗಲಿತ್ತು.

3,289 ಕೋಟಿ ರು ಅನಿಲ ಹಗರಣ; ಕಾಂಗ್ರೆಸ್‌ ಸರ್ಕಾರದ ನೂತನ ನೀತಿ, ಅದಾನಿ ಮತ್ತಿತರರಿಗೆ ಲಾಭವಾಯಿತೇ?

ಆರಂಭದಲ್ಲಿ ಈ ಸಂಬಂಧದ ಕಡತವನ್ನೇ ಇಲಾಖೆಯು ಆರ್‍‌ಟಿಐ ಅಡಿಯಲ್ಲಿ ಒದಗಿಸಿರಲಿಲ್ಲ. ಈ ಕಡತವು ಸಾರ್ವಜನಿಕವಾಗಿ ಬಹಿರಂಗಗೊಳ್ಳದಂತೆ ಅಧಿಕಾರಿಶಾಹಿಯ ಒಂದು ತಂಡ ಸರ್ಪಗಾವಲು ಹಾಕಿತ್ತು.

3,289 ಕೋಟಿ ರು ಹಗರಣ ಶಂಕೆ; ಅನಿಲ ವಿತರಣಾ ಜಾಲ ಅಭಿವೃದ್ದಿ ನೀತಿ ‘ಕಡತ’ಕ್ಕೆ ಸರ್ಪಗಾವಲು

 

ಅನಿಲ ವಿತರಣೆ ಅಭಿವೃದ್ಧಿ ಜಾಲ ನೀತಿಯ ಕುರಿತಾಗಿ ಮೂಲಸೌಕರ್ಯ ಅಭಿವೃದ್ದಿ ಇಲಾಖೆಯಲ್ಲಿ ತೆರೆದಿದ್ದ ಕಡತ ಮತ್ತು ಇದಕ್ಕೆ ಸಂಬಂಧಿಸಿದ ಸಮಗ್ರ ದಾಖಲೆಗಳಿಗಾಗಿ ‘ದಿ ಫೈಲ್‌’ ಮತ್ತೊಮ್ಮೆ ಆರ್‍‌ಟಿಐ ಅಡಿಯಲ್ಲಿ ಅರ್ಜಿ ದಾಖಲಿಸಿತ್ತು. ಈ ಕಡತವನ್ನು ಇಲಾಖೆಯು ಇದೀಗ ಒದಗಿಸಿದೆ.

 

ಆರ್‌ಟಿಐ ಅಡಿಯಲ್ಲಿ ಪಡೆದಿರುವ ದಾಖಲೆಗಳನ್ನು ‘ದಿ ಫೈಲ್‌’ನ ತನಿಖಾ ತಂಡವು ಪರಿಶೀಲಿಸಿದೆ. ಇದರ  ಪ್ರಕಾರ ಕರ್ನಾಟಕ ಸರ್ಕಾರವು ಜಾರಿಗೊಳಿಸಿರುವ ಈ ನೀತಿಯಿಂದಾಗಿ 5,000 ಕೋಟಿ ರು.  ಆದಾಯ ಖೋತಾ ಆಗಲಿದೆ ಎಂಬುದು ಗೊತ್ತಾಗಿದೆ.

 

ಪರವಾನಿಗೆ ಮತ್ತು ಮೇಲ್ವಿಚಾರಣೆ ಶುಲ್ಕವಾಗಿ 5,003 ಕೋಟಿ ರು.ಗಳ ಆದಾಯವು ಸರ್ಕಾರದ ವಿವಿಧ ಇಲಾಖೆಗಳಿಗೆ ಬರಬೇಕಿತ್ತು. ನೂತನ ಅನಿಲ ಸರಬರಾಜು ನೀತಿ ಪ್ರಕಾರ ಪರವಾನಿಗೆ ಮತ್ತು ಮೇಲ್ವಿಚಾರಣೆ ಶುಲ್ಕ ಪ್ರತಿ ಮೀಟರ್‌ಗೆ 1 ರು. ಮಾತ್ರ ಆಗಲಿದೆ. ಹೀಗಾಗಿ ಕೇವಲ 2.56 ಕೋಟಿ ರು ಮಾತ್ರ ಸರ್ಕಾರದ ವಿವಿಧ ಇಲಾಖೆಗಳಿಗೆ ದೊರೆಯಲಿದೆ. ಅಂದರೇ ಉಳಿದ 5,000 ಕೋಟಿ ರು. ಅನಿಲ ಆಧಾರಿತ ದೊಡ್ಡ ದೊಡ್ಡ ಕಂಪನಿಗಳಿಗೆ ಆರ್ಥಿಕ ಲಾಭ ಮಾಡಿಕೊಟ್ಟಂತಾಗಿದೆ.

 

ಅದರೂ ಮೂಲಸೌಕರ್ಯ ಅಭಿವೃದ್ದಿ ಖಾತೆ ಸಚಿವ ಎಂ ಬಿ ಪಾಟೀಲ್‌ ಸೇರಿದಂತೆ ಇಡೀ ಕಾಂಗ್ರೆಸ್‌ ಸರ್ಕಾರವೇ ಈ ನೀತಿಯನ್ನು ಸಮರ್ಥಿಸಿಕೊಂಡಿದೆ. ವಿಶೇಷವೆಂದರೇ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರ  ಅವಧಿಯಲ್ಲಿಯೂ ಈ ನೀತಿಯ ಪ್ರಸ್ತಾವನೆಯನ್ನು ಅನುಮೋದನೆಗೆ ಸಲ್ಲಿಸಿತ್ತು.

 

ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯು ಸಲ್ಲಿಸಿದ್ದ ಪ್ರಸ್ತಾವನೆ ಕುರಿತು ಸಚಿವ ಸಂಪುಟವು ಯಾವುದೇ ನಿರ್ಣಯ ಕೈಗೊಂಡಿರಲಿಲ್ಲ. ಬದಲಿಗೆ ನೀತಿ ಕುರಿತು ಚರ್ಚಿಸಿ ಕಡೆಯಲ್ಲಿ ಈ ಪ್ರಸ್ತಾವನೆಯನ್ನು ಮುಂದೂಡಿತ್ತು ಎಂಬುದು ಸಚಿವ ಸಂಪುಟ ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

 

ವಸತಿ ಸಚಿವ ವಿ ಸೋಮಣ್ಣ ಅವರು ಕರಡು ಸಚಿವ ಸಂಪುಟಕ್ಕೆ ಟಿಪ್ಪಣಿ ಸಲ್ಲಿಸಲು ಅನುಮತಿ ನೀಡಿದ್ದರು.

 

ಅಲ್ಲದೇ ಹಿಂದಿನ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ಸಿಜಿಡಿ ನೀತಿಯನ್ನು ಇತರೆ ರಾಜ್ಯಗಳು ಪಾಲಿಸಿರುವ ಬಗ್ಗೆ ಮತ್ತು ಅವುಗಳ ಪಟ್ಟಿಯನ್ನು ಸಲ್ಲಿಸಬೇಕು ಎಂದು ಷರಾ ಬರೆದಿದ್ದರು ಎಂಬುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

 

ಆದರೆ ಕಾಂಗ್ರೆಸ್‌ ಸರ್ಕಾರವು ಅಧಿಕಾರಕ್ಕೆ ಬಂದ ಆರಂಭಿಕ ವರ್ಷದಲ್ಲೇ  ನೂತನ   ಅನಿಲ ನೀತಿಗೆ ಅನುಮೋದನೆ ಕೋರಿ ಮೂಲ ಸೌಲಭ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು  ಜಲ ಸಾರಿಗೆ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್‌ ಗುಪ್ತಾ ಅವರು ಮತ್ತೊಮ್ಮೆ  ಪ್ರಸ್ತಾವನೆ ಸಲ್ಲಿಸಿದ್ದರು.

 

 

ಈ ನೀತಿಯಿಂದಾಗಿ ರಾಜ್ಯ ಬೊಕ್ಕಸದ ಮೇಲೆ ಆಗಲಿರುವ ನೈಜ  ಆರ್ಥಿಕ ಪರಿಣಾಮಗಳ ಕುರಿತು ಇಲಾಖೆಯು ಸಚಿವ ಸಂಪುಟದ ಮುಂದೆ ಸಣ್ಣ ವಿವರಣೆಯನ್ನೂ ನೀಡಿಲ್ಲ ಎಂಬುದು ಸಚಿವ ಸಂಪುಟ ಟಿಪ್ಪಣಿಯಿಂದ ಕಂಡುಬಂದಿದೆ.

 

ಸಚಿವ ಸಂಪುಟ ಟಿಪ್ಪಣಿಯಲ್ಲೇನಿದೆ?

 

ಸಚಿವ ಸಂಪುಟ ಟಿಪ್ಪಣಿ ಕಂಡಿಕೆ 3.1ರಲ್ಲಿ ‘ಸಿಜಿಡಿ ಸಂಸ್ಥೆಗಳು ತಮ್ಮ ಸ್ವಂತ ವೆಚ್ಚದಲ್ಲಿಯೇ ನಗರ ಅನಿಲ ವಿತರಣೆ ಯೋಜನೆಯನ್ನು ಅನುಷ್ಠಾನಗೊಳಿಸಿ ನಿರ್ವಹಿಸಲು PNGRB ಗೆ ಬದ್ಧವಾಗಿರುತ್ತವೆ. ಆದ್ದರಿಂದ ಕರ್ನಾಟಕ ರಾಜ್ಯದಲ್ಲಿ ನಗರ ಅನಿಲ ವಿತರಣೆ ಜಾಲದ ಅಭಿವೃದ್ದಿ ನೀತಿಗೆ ಅನುಮೋದನೆ ನೀಡಿದಲ್ಲಿ ರಾಜ್ಯ ಸರ್ಕಾರದ ಮೇಲೆ ಯಾವುದೇ ಆರ್ಥಿಕ ಹೊರೆ ಉಂಟಾಗುವುದಿಲ್ಲ,’ ಎಂದು ಗೌರವ್‌ ಗುಪ್ತಾ ಅವರು ಅನುಮೋದನೆ ಕೋರಿದ್ದರು.

 

 

 

 

 

 

‘ಆದರೆ ನಗರ ಅನಿಲ ವಿತರಣೆ ಯೋಜನೆಯನ್ನು ಯಾರು ಅನುಷ್ಠಾನ ಮಾಡುತ್ತಿದ್ದಾರೆ ಎಂಬುದರ ಮೇಲೆ ಸದರಿ ನೀತಿಯ ಆರ್ಥಿಕ ಪರಿಣಾಮ ಅವಲಂಬಿತವಾಗಿರುವುದಿಲ್ಲ. ಯಾವುದೇ ಪ್ರಸ್ತಾವನೆಯ ಮೂಲಕ ಚಾಲ್ತಿಯಲ್ಲಿರುವ ಶುಲ್ಕವನ್ನು ಮಾರ್ಪಡಿಸಿದಲ್ಲಿ  ಒಟ್ಟು ಎಷ್ಟು ಆದಾಯ ಕಡಿಮೆ ಆಗುತ್ತದೆ, ಯಾವ ಇಲಾಖೆ ಅಥವಾ ಅಂಗಸಂಸ್ಥೆಗಳ ಆದಾಯ ಬಾಧಿತವಾಗುತ್ತವೆ,  ಮತ್ತು ಆದಾಯದಲ್ಲಿ ಆಗುವ ಈ ಕೊರತೆಯನ್ನು ಹೇಗೆ ಭರಿಸಲಾಗುತ್ತದೆ ಎನ್ನುವುದು ಆರ್ಥಿಕ ಪರಿಣಾಮದ ವ್ಯಾಖ್ಯೆ ಮತ್ತು ಸಚಿವ ಸಂಪುಟ ಟಿಪ್ಪಣಿಯಲ್ಲಿ ಒಳಗೊಂಡಿರಬೇಕಿತ್ತು. ಅಲ್ಲದೇ ಈ ನೀತಿಗೆ ಅನುಮೋದನೆ ನೀಡುವ ಮುನ್ನ ಆರ್ಥಿಕ ಇಲಾಖೆಯೂ ಸಹ ಕೂಲಂಕುಶವಾಗಿ ಪರಿಶೀಲನೆ ನಡೆಸಬೇಕಿತ್ತು ,’ ಎನ್ನುತ್ತಾರೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು.

 

ಅನಿಲ ಸರಬರಾಜು ಪೈಪ್‌ ಅಳವಡಿಕೆಗೆ ಪರವಾನಿಗೆ ಮತ್ತು ಮೇಲ್ವಿಚಾರಣೆ ಶುಲ್ಕವನ್ನು ಕಡಿಮೆ ಮಾಡುವ ಏಕೈಕ ಉದ್ದೇಶದಿಂದ ರೂಪಿಸಿರುವ  ಈ ನೀತಿಯನ್ನು ಸಮರ್ಥಿಸುವ ಈ   ಪ್ರಕ್ರಿಯೆಯಲ್ಲಿ ಶುಲ್ಕ ಇಳಿಕೆಯನ್ನು 7 ಸಂದರ್ಭಗಳಲ್ಲಿ ಸಚಿವ ಸಂಪುಟ ಟಿಪ್ಪಣಿಯಲ್ಲಿ ದಾಖಲಿಸಿದೆ. ಆದರೂ ಶುಲ್ಕ ಇಳಿಕೆಯಿಂದಾಗುವ ಯಾವುದೇ ಆದಾಯ ಕೊರತೆ ಮತ್ತು ಆ ಕೊರತೆಯನ್ನು ಭರಿಸಲು ಅಗತ್ಯ ಹೆಚ್ಚುವರಿ ಅನುದಾನದ ಬಗ್ಗೆ ಮತ್ತು ಆರ್ಥಿಕ  ಪರಿಣಾಮವನ್ನು ಸಚಿವ ಸಂಪುಟ ಟಿಪ್ಪಣಿ ತಯಾರಿಸುವಾಗ ಮುಚ್ಚಿಟ್ಟಿರುವುದು ಸಹ ಮೇಲ್ನೋಟಕ್ಕೆ ಕಂಡು ಬಂದಿದೆ.

 

ರಾಜ್ಯದಲ್ಲಿ ರಹದಾರಿ ಪಡೆದಿರುವ 18 ಯೋಜನೆಗಳನ್ನು ಸಚಿವ ಸಂಪುಟ ಟಿಪ್ಪಣಿಯಲ್ಲಿ ದಾಖಲಿಸಲಾಗಿದೆ. ಈ ಪಟ್ಟಿಯಲ್ಲಿ ಮೊದಲ ಹಂತದಲ್ಲಿ 25,580 ಕಿ ಮೀ ಉದ್ದದ ಪೈಪ್‌ ಅಳವಡಿಕೆಯನ್ನು ಸಹ ದಾಖಲಿಸಿದೆ.  ಅಂದರೆ 25,580 ಕಿ ಮೀ ಉದ್ದದ ಪೈಪ್‌ ಅಳವಡಿಕೆಗೆ ಪ್ರತಿ ಮೀಟರ್‌ಗೆ 1,957 ರು ನಂತೆ ಪರವಾನಿಗೆ ಮತ್ತು ಮೇಲ್ವಿಚಾರಣೆ   ಶುಲ್ಕವಾಗಿ 5,003 ಕೋಟಿ ರು. ಆದಾಯ ಸರ್ಕಾರದ ವಿವಿಧ ಇಲಾಖೆಗಳಿಗೆ ಬರಬೇಕಿತ್ತು. ಆದರೆ ಇಷ್ಟೊಂದು ಅಗಾಧ ಪ್ರಮಾಣದ ಮೊತ್ತವು ನೇರವಾಗಿ ಅನಿಲ ಆಧಾರಿತ ಕಂಪನಿಗಳ ಬೊಕ್ಕಸಕ್ಕೆ ಲಾಭವಾಗಿ ಜಮೆಯಾಗಲಿದೆ ಎಂದು ತಿಳಿದು ಬಂದಿದೆ.

 

ಹೀಗಿದ್ದರೂ ಸಹ ಸರ್ಕಾರಕ್ಕೆ ಯಾವುದೇ ಆರ್ಥಿಕ ಹೊರೆ  ಇಲ್ಲ ಎಂದು ಆರ್ಥಿಕ ಪರಿಣಾಮದ ಬಗ್ಗೆ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯು ಮಾಡಿಕೊಂಡಿರುವ ಸಮರ್ಥನೆಯೇ   ದಿಕ್ಕುತಪ್ಪಿಸುವಂತಿದೆ.  ಇಲಾಖೆಯ ಈ ಪ್ರಸ್ತಾವನೆಯು ಸಾರ್ವಜನಿಕ ಹಿತಾಸಕ್ತಿಯಲ್ಲಿ ಉತ್ತರ ಅತ್ಯಗತ್ಯವಾಗಿರುವ  ಹಲವು ಪ್ರಶ್ನೆಗಳಿಗೆ ದಾರಿಮಾಡಿಕೊಟ್ಟಿದೆ.

 

ಪ್ರಶ್ನೆಗಳೇನು?

1. ಚಾಲ್ತಿಯಲ್ಲಿದ್ದ ಅಳವಡಿಕೆ ಮತ್ತು ಮೇಲುಸ್ತುವಾರಿ ಶುಲ್ಕವನ್ನು ಪ್ರತಿ ಮೀಟರ್‍‌ಗೆ  1,957 ರು ನಿಂದ ರೂ.1 ಕ್ಕೆ ಇಳಿಸಲಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಮತ್ತು ಅದರ ವಿವಿಧ ಇಲಾಖೆ/ಅಂಗಸಂಸ್ಥೆಗಳಿಗೆ ಬರಬೇಕಿದ್ದ ಸಹಸ್ರಾರು ಕೋಟಿ ರು. ಆದಾಯ ಖೋತಾ ಆಗಿರುವುದು ಸತ್ಯವೇ, ಸುಳ್ಳೇ?
2. ಶುಲ್ಕ ಇಳಿಕೆಯಿಂದಾಗಿ ಅನಿಲ ಸರಬರಾಜು ಗುತ್ತಿಗೆಯನ್ನು  ಈಗಾಗಲೇ ಪಡೆದಿರುವ ಮೇಘಾ ಇಂಜಿನಿಯರಿಂಗ್‌, ಅದಾನಿ ಮುಂತಾದ ಖಾಸಗಿ ಗುತ್ತಿಗೆದಾರ ಸಂಸ್ಥೆಗಳಿಗೆ ಸಹಸ್ರಾರು ಕೋಟಿ ರು.ಲಾಭವಾಗುತ್ತಿರುವುದು ಸತ್ಯವೇ, ಸುಳ್ಳೇ?
3. ಸರ್ಕಾರದ ವಿವಿಧ ಇಲಾಖೆಗಳಿಗೆ ದೊರೆಯಲಿದ್ದ ಸಹಸ್ರಾರು ಕೋಟಿ ರೂ. ಆದಾಯ ಖೋತಾ ಆಗುತ್ತಿದ್ದರೂ  ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಕಡತದ ಪ್ರಸ್ತಾವನೆಯಲ್ಲೇಕೆ  ಲೆಕ್ಕ ಹಾಕಿಲ್ಲ ಮತ್ತು ಈ ಬಗ್ಗೆ ಸಂಪೂರ್ಣವಾಗಿ ಮೌನವಾಗಿರುವುದೇಕೆ?
4. ಸರ್ಕಾರದ ವಿವಿಧ ಇಲಾಖೆಗಳಿಗೆ ದೊರೆಯಲಿದ್ದ ಸಹಸ್ರಾರು ಕೋ.ರೂ. ಆದಾಯ ಖೋತಾ ಆಗುತ್ತಿದ್ದರೂ ಅದನ್ನು ಸಚಿವ ಸಂಪುಟದ ಆರ್ಥಿಕ ಪರಿಣಾಮದಲ್ಲಿ  ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ದಾಖಲಿಸಿಲ್ಲವೇಕೆ?
5. ಶುಲ್ಕ ಇಳಿಕೆಯನ್ನು  7 ಸಂದರ್ಭಗಳಲ್ಲಿ ಆರ್ಥಿಕ ಇಲಾಖೆಯೇ ಪರಿಶೀಲಿಸಿರುವ ಸಚಿವ ಸಂಪುಟ ಟಿಪ್ಪಣಿಯಲ್ಲಿ ದಾಖಲಿಸಲಾಗಿರುವ ಹಿನ್ನೆಲೆಯಲ್ಲಿ  ಸದರಿ ಶುಲ್ಕ ಇಳಿಕೆಯಿಂದ ಸರ್ಕಾರದ ವಿವಿಧ ಇಲಾಖೆಗಳಿಗೆ ದೊರೆಯಲಿದ್ದ ಆದಾಯ ಖೋತಾ ಆಗುತ್ತಿದೆಯೇ ಇಲ್ಲವೇ,  ಆಗುತ್ತಿದ್ದರೆ ಎಷ್ಟು ಆದಾಯ ಖೋತಾ ಆಗುತ್ತಿದೆ ಎಂದು ಆರ್ಥಿಕ ಇಲಾಖೆ ಪರಿಶೀಲಿಸಿಲ್ಲವೇ, ಪರಿಶೀಲಿಸಿದಲ್ಲಿ ಈ ಬಗ್ಗೆ ಏಕೆ ಗಮನ ಸೆಳೆದಿಲ್ಲ?
6. ಶುಲ್ಕ ಇಳಿಕೆಯಿಂದಾಗಿ ಮೇಘಾ ಇಂಜಿನಿಯರಿಂಗ್‌, ಅದಾನಿ ಮುಂತಾದ ಖಾಸಗಿ ಗುತ್ತಿಗೆದಾರ ಸಂಸ್ಥೆಗಳಿಗೆ ಲಾಭ ಆಗುತ್ತಿರುವುದು ಆರ್ಥಿಕ ಇಲಾಖೆಯ ಅರಿವಿಗೆ ಬಂದಿಲ್ಲವೇ? ಗುತ್ತಿಗೆದಾರರು ಗುತ್ತಿಗೆ ಪಡೆದ ನಂತರ ಅವರಿಗೆ ಸಹಸ್ರಾರು ಕೋಟಿ ರು. ಆರ್ಥಿಕ ಅನುಕೂಲ ಆಗುವ ಹಾಗೆ ನೀತಿಯಲ್ಲಿ ಮಾಡಿರುವ  ಬದಲಾವಣೆಯು ಕಾನೂನು ಸಮ್ಮತವಾಗಿದೆಯೇ?
7. ವಿವಿಧ ಇಲಾಖೆಗಳಿಗೆ ದೊರೆಯಲಿದ್ದ ಆದಾಯ ಖೋತಾ ಆಗುತ್ತಿದ್ದರೂ ಅದರ ಬಗ್ಗೆ ಸಚಿವ ಸಂಪುಟ ಟಿಪ್ಪಣಿಯ ಆರ್ಥಿಕ ಪರಿಣಾಮದ ವಿಭಾಗದಲ್ಲಿ ದಿಕ್ಕುತಪ್ಪಿಸುವ ಹೇಳಿಕೆ ದಾಖಲಿಸಿರುವ ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆಯ ಕ್ರಮವನ್ನು ಆರ್ಥಿಕ ಇಲಾಖೆಯು ಒಪ್ಪುತ್ತದೆಯೇ?
the fil favicon

SUPPORT THE FILE

Latest News

Related Posts