ಅರಣ್ಯ ಒತ್ತುವರಿ, ಅಕ್ರಮ ಮಂಜೂರಾತಿ ಸಾಬೀತು; ಮಾಜಿ ಸ್ಪೀಕರ್ ರಮೇಶ್‌ಕುಮಾರ್ ವಿರುದ್ಧ ಕ್ರಮಕ್ಕೆ ಶಿಫಾರಸ್ಸು

ಬೆಂಗಳೂರು;  ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಅರಣ್ಯ ವ್ಯಾಪ್ತಿಯಲ್ಲಿ 60 ಎಕರೆ 23 ಗುಂಟೆ ಗುಂಟೆ ವಿಸ್ತೀರ್ಣದ ಅರಣ್ಯ ಪ್ರದೇಶವನ್ನು ಮಾಜಿ ಸ್ಪೀಕರ್‍‌ ಕೆ ಆರ್‍‌ ರಮೇಶ್‌ಕುಮಾರ್‍‌ ಅವರು ಒತ್ತುವರಿ ಮಾಡಿಕೊಂಡು ಅನಧಿಕೃತವಾಗಿ ಸ್ವಾಧೀನದಲ್ಲಿರುವುದನ್ನು ಜಂಟಿ ಸರ್ವೆ ನಡೆಸಿದ್ದ ತನಿಖಾಧಿಕಾರಿಗಳು ಸಾಬೀತುಪಡಿಸಿದ್ದಾರೆ.

 

ಹೈಕೋರ್ಟ್‌ ಸೂಚನೆಯಂತೆ ಕಂದಾಯ, ಅರಣ್ಯ ಮತ್ತು ಭೂ ಮಾಪನ ಇಲಾಖೆ ಅಧಿಕಾರಿಗಳ ತಂಡವು ಜಿನಗಲಕುಂಟೆ ಅರಣ್ಯ ಪ್ರದೇಶದಲ್ಲಿ ಜಂಟಿ ಸರ್ವೇ ನಡೆಸಿತ್ತು. ಈ ವರದಿಯನ್ನು ಇದೀಗ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಬೆಂಗಳೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ 2025ರ ಜನವರಿ 24ರಂದೇ ಸಲ್ಲಿಸಿದ್ದಾರೆ. ಈ ವರದಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

ಜಂಟಿ ಸರ್ವೆ ನಡೆದಿದ್ದ ಸಮಯದಲ್ಲಿ ಖುದ್ದು ಮಾಜಿ ಸ್ಪೀಕರ್ ಕೆ ಆರ್‍‌ ರಮೇಶ್‌ಕುಮಾರ್‍‌ ಅವರು ಹಾಜರಿದ್ದರು. 60 ಎಕರೆ  23 ಗುಂಟೆ ವಿಸ್ತೀರ್ಣದ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವುದನ್ನು ನಕಾಶೆ ದಾಖಲೆಗಳೊಂದಿಗೆ ಮನದಟ್ಟು ಮಾಡಿಕೊಡಲಾಗಿದೆ ಎಂಬ ಸಂಗತಿಯನ್ನೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ವರದಿಯಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.

 

ಒತ್ತುವರಿಯಾಗಿರುವ 60 ಎಕರೆ 23 ಗುಂಟೆ ವಿಸ್ತೀರ್ಣದ ಅರಣ್ಯ ಭೂಮಿಯನ್ನು ಕರ್ನಾಟಕ ಅರಣ್ಯ ಕಾಯ್ದೆ 1963ರ ಸೆಕ್ಷನ್‌ 64 ಪ್ರಕಾರ ತೆರವುಗೊಳಿಸಬೇಕು. ಮತ್ತು ಕಾನೂನು ರೀತಿ ಸೂಕ್ತ ಕ್ರಮ ಜರುಗಿಸಬೇಕು. ಅಕ್ರಮ ಭೂ ಮಂಜೂರಾತಿಯನ್ನೂ ರದ್ದುಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ವರದಿಯಲ್ಲಿ ಶಿಫಾರಸ್ಸು ಮಾಡಿರುವುದು ತಿಳಿದು ಬಂದಿದೆ.

 

 

ಅಲ್ಲದೇ ಅನಧಿಕೃತವಾಗಿ 60 ಎಕರೆ 23 ಗುಂಟೆ ಅರಣ್ಯ ಪ್ರದೇಶದಲ್ಲಿ ಸ್ವಾಧೀನದಲ್ಲಿರುವ ಕೆ ಆರ್‍‌ ರಮೇಶ್‌ ಕುಮಾರ್‍‌ ಅವರಿಂದ ಪರಿಸರಕ್ಕಾದ ನಷ್ಟವನ್ನು ಭರಿಸಿಕೊಳ್ಳಬೇಕು ಎಂದು ಶಿಫಾರಸ್ಸು ಮಾಡಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿಯವರು ಇದಕ್ಕೆ ಸಹಕರಿಸಿರುವ ಅಧಿಕಾರಿಗಳ ವಿರುದ್ಧ ಸಕ್ಷಮ ನ್ಯಾಯಾಲಯದಲ್ಲಿ ಕ್ರಿಮಿನಲ್‌ ಮೊಕದ್ದಮೆ ಹೂಡಲು ಕ್ರಮ ಜರುಗಿಸಬೇಕು ಎಂದೂ ಖಡಕ್ಕಾಗಿ ಶಿಫಾರಸ್ಸು ಮಾಡಿರುವುದು ಗೊತ್ತಾಗಿದೆ.

 

‘ಶ್ರೀನಿವಾಸಪುರ ಅರಣ್ಯ ವಲಯದಲ್ಲಿ ದಾಖಲಾದ ಅರಣ್ಯ ಅಪರಾಧ ಮೊಕದ್ದಮೆ (ಸಂಖ್ಯೆ 59/2006-07 , 2006ರ ಜುಲೈ 15) ಸಂಬಂಧಿಸಿದಂತೆ ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ಅನಧಿಕೃತವಾಗಿ ಸ್ವಾಧೀನದಲ್ಲಿರುವುದಕ್ಕಾಗಿ ಅರಣ್ಯ ಸಂರಕ್ಷಣಾ ಕಾಯ್ದೆ 1980ರ ಅನ್ವಯ ಪರಿಸರಕ್ಕಾದ ನಷ್ಟದ ಮೊತ್ತವನ್ನು ಆರೋಪಿತ ಕೆ ಆರ್‍‌ ರಮೇಶ್‌ಕುಮಾರ್‍‌ ಅವರಿಂದ ವಸೂಲಿ ಮಾಡಿ ಸರ್ಕಾರಕ್ಕೆ ಭರಿಸಲು ಕ್ರಮಕೈಗೊಳ್ಳಬೇಕು,’ ಎಂದು ವರದಿಯಲ್ಲಿ ಹೇಳಲಾಗಿದೆ.

 

 

 

ಅಲ್ಲದೇ ‘ಅಕ್ರಮ ಭೂ ಮಂಜೂರಾತಿ ಮಾಡಿರುವ ಅಕ್ರಮ ದಾಖಲೆಗಳನ್ನು ಸೃಷ್ಟಿಸಲು ಸಹಕರಿಸಿರುವ ಕಂದಾಯ ಅಧಿಕಾರಿಗಳ ವಿರುದ್ಧ ಸಕ್ಷಮ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕ್ರಮ ವಹಿಸಬೇಕು. ಈ ಕೃತ್ಯದಲ್ಲಿ ಭಾಗಿಯಾದ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಸಕ್ಷಮ ಪ್ರಾಧಿಕಾರದಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕು,’ ಎಂದೂ ಶಿಫಾರಸ್ಸು ಮಾಡಲಾಗಿದೆ.

 

ಮತ್ತೊಂದು ವಿಶೇಷವೆಂದರೇ ಆರೋಪಿತ ಕೆ ಆರ್‍‌ ರಮೇಶ್‌ ಕುಮಾರ್‍‌ ಅವರು ಅಧಿಸೂಚಿತ ಅರಣ್ಯ ಪ್ರದೇಶವಾಗಿರುವ ಹೊಸಹುಡ್ಯ ಗ್ರಾಮದ ಸರ್ವೆ ನಂಬರ್‍‌ 1 ಮತ್ತು 2 ರಲ್ಲಿ 60 ಎಕರೆ 23 ಗುಂಟೆ ಅರಣ್ಯ ಪ್ರದೇಶದಲ್ಲಿ ಅನಧಿಕೃತ ಅತಿಕ್ರಮಣ ಮಾಡಿಕೊಂಡು ಸ್ವಾಧೀನದಲ್ಲಿದ್ದಾರೆ ಎಂದು ನಮೂದಿಸಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿಯವರೇ ಸಹಿ ಮಾಡಿದ್ದಾರೆ.

 

‘ನಾನು ನನ್ನ ಸ್ವಂತ ಕೈಬರಹದಿಂದ ರಿಟ್‌ ಪಿಟಿಷನ್ ಸಂಖ್ಯೆ 35827/2024ರ ಪ್ರತಿವಾದಿ 9 ಅವರು ಅಧಿಸೂಚಿತ ಅರಣ್ಯ ಪ್ರದೇಶವಾದ ಹೊಸ ಹುಡ್ಯ ಗ್ರಾಮದ ಸರ್ವೆ ನಂಬರ್‍‌ 1ರಲ್ಲಿ 6 ಎಕರೆ ಹಾಗೂ ಸರ್ವೆ ನಂಬರ್‍‌ 2ರಲ್ಲಿ 54 ಎಕರೆ 23 ಗುಂಟೆ ಸೇರಿ ಒಟ್ಟಾರೆ 60 ಎಕರೆ 23 ಗುಂಟೆ ಅರಣ್ಯ ಪ್ರದೇಶದಲ್ಲಿ ಅನಧಿಕೃತ ಅತಿಕ್ರಮಣ ಮಾಡಿಕೊಂಡು ಸ್ವಾಧೀನದಲ್ಲಿದ್ದಾರೆ ಎಂದು ನಮೂದಿಸಿ ಸಹಿ ಮಾಡಿರುತ್ತೇನೆ,’ ಎಂದು ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

 

ಹಾಗೆಯೇ ಈ ಪ್ರಕರಣದಲ್ಲಿ ಕೋಲಾರ ಜಿಲ್ಲಾಧಿಕಾರಿ ಮತ್ತು ಸರ್ವೇ ಅಧಿಕಾರಿಯಿಂದ ಏಕಪಕ್ಷೀಯ ವರದಿ ನೀಡಿರುವುದನ್ನೂ ಸಹ ಉಪ ಅರಣ್ಯ ಸಂರಕ್ಷಣಾಧಿಕಾರಿಯವರು ಆಕ್ಷೇಪಿಸಿದ್ದಾರೆ. ಜಂಟಿ ಸರ್ವೆ ಸಂದರ್ಭದಲ್ಲಿ ಎಲ್ಲೆಲ್ಲಿ ಲೋಪಗಳಾಗಿವೆ, ಆರೋಪಿತರನ್ನು ಎಲ್ಲೆಲ್ಲಿ ರಕ್ಷಣೆ ಮಾಡಲಾಗಿದೆ ಎಂಬುದರ ಕುರಿತು ಇಂಚಿಂಚೂ ಮಾಹಿತಿಯನ್ನು ವರದಿಯಲ್ಲಿ ಪ್ರಸ್ತಾವಿಸಿರುವುದು ಗೊತ್ತಾಗಿದೆ.

 

ಜಂಟಿ ಮೋಜಣಿ ನಕ್ಷೆ ವಿವರಣೆಯಲ್ಲೇನಿದೆ?

 

2025ರ ಜನವರಿ 15 ಮತ್ತು 16ಂದು ಅರಣ್ಯ ಮತ್ತು ಕಂದಾಯ ಇಲಾಖೆಯ ವತಿಯಿಂದ ಜಂಟಿಯಾಗಿ ಭೌತಿಕವಾಗಿ ಮಾಡಿದ ಮೋಜಣಿಗೆ ತಾಳೆಯಾಗುತ್ತಿದೆ. ನಕಾಶೆಯ ಷರಾ 3ರಲ್ಲಿ ನಮೂದಿಸಿರುವಂತೆ ಬಿ 1, ಬಿ 2, ಬಿ 3, ಬಿ 4 ಮತ್ತು ಬ5 ಎಂದು ನಮೂದಿಸಿರುವ ಬಿಂದುಗಳು 1944ರ ನವೆಂಬರ್‍‌ 13ರಂದು ನೀಡಿದ್ದ ಹೊಸಹುಡ್ಯ ಗ್ರಾಮದ ಸರ್ವೆ ನಂಬರ್‍‌ 1 ಮ್ತು 2ರಲ್ಲಿ ಹಾದು ಹೋಗುವ ಅರಣ್ಯ ಪ್ರದೇಶದ ಗಡಿ ಆಗಿದೆ. ಈ ಪೈಕಿ ಬಿ 2 ಎಂದು ಗುರುತಿಸಿರುವ ಹೊಸಹುಡ್ಯ ಗ್ರಾಮದ ಈಶಾನ್ಯ ಭಾಗದ ಗಡಿಯಿಂದ ಹೊರಗಿರುವ ಹದ್ದುಗಿಡದ ಹಳ್ಳದಲ್ಲಿ ಬರುತ್ತಿದೆ ಎಂದು ವಿವರಿಸಲಾಗಿದೆ.

 

 

ಬಿ 1, ಸಿ 1, ಸಿ 2, ಬಿ 4, ಬಿ 5 ಎಂದು ಗುರುತಿಸಿರುವ ಪ್ರದೇಶವು ಅಧಿಸೂಚನೆಯಂತೆ ಭೌತಿಕವಾಗಿ ಮೋಜಣಿ ಮಾಡಿ ಸ್ಥಳದಲ್ಲಿ ಗುರುತಿಸಿದ ಅರಣ್ಯ ಪ್ರದೇಶವಾಗಿದೆ. ಇದರ ವಿಸ್ತೀರ್ಣ 120 ಎಕರೆ 38 ಗುಂಟೆ ಆಗಿದೆ. ಅಂದರೆ ಸರ್ವೆ ನಂಬರ್‍‌ 2ರಲ್ಲಿ ಅಧಿಸೂಚಿತ ವಿಸ್ತೀರ್ಣಕ್ಕಿಂತ 7 ಎಕರೆ 38 ಗುಂಟೆ ವಿಸ್ತೀರ್ಣ ಹೆಚ್ಚಾಗಿರುತ್ತದೆ ಎಂದು ವರದಿಯು ಉಲ್ಲೇಖಿಸಿದೆ.

 

‘ನಕಾಶೆಯ ಷರಾ 5ರಂತೆ ನಕಾಶೆಯನ್ನು ಪರಿಶೀಲಿಸಿದಾಗ ಉಚ್ಛನ್ಯಾಯಾಲಯದ ರಿಟ್‌ ಪ್ರಕರಣ (ಸಂಖ್ಯೆ 39676/2010 ಹಾಗೂ 12996/2012ರ) ಗಳ ಅರ್ಜಿದಾರರು ಕ್ರಯಕ್ಕೆ ಪಡೆದ ಒಟ್ಟು 53 ಎಕರೆ 35 ಗುಂಟೆ ವಿಸ್ತೀರ್ಣದ ಪೈಕಿ 33 ಎಕರೆ 31 ಗುಂಟೆ ವಿಸ್ತೀರ್ಣವು ಅಧಿಸೂಚಿತ ಅರಣ್ಯ ಪ್ರದೇಶದ ಒಳಭಾಗದಲ್ಲಿ ಹಾಗೂ ಉಳಿಕೆ 20 ಎಕರೆ 04 ಗುಂಟೆ ವಿಸ್ತೀರ್ಣವು ಕಂದಾಯ ಪ್ರದೇಶದಲ್ಲಿ ಬರುತ್ತಿದೆ ಎಂದು ನಮೂದಿಸಲಾಗಿದೆ. ಕ್ರಯಕ್ಕೆ ಪಡೆದ ಭೂಮಿಯನ್ನು ಸ್ಪಷ್ಟವಾಗಿ ಯಾವುದೇ ಬಣ್ಣದಿಂದ ಗುರುತಿಸಿಲ್ಲ. ಬದಲಾಗಿ ವಿಸ್ತೀರ್ಣವನ್ನು ಮಾತ್ರ ನಮೂದಿಸಿದೆ,’ ಎಂದು ಕಂದಾಯ ಇಲಾಖೆಯ ಅಧಿಕಾರಿಗಳ ಲೋಪಗಳನ್ನು ಬಯಲು ಮಾಡಿರುವುದು ವರದಿಯಿಂದ ತಿಳಿದು ಬಂದಿದೆ.

 

ರಿಟ್‌ ಪ್ರಕರಣ (ಸಂಖ್ಯೆ 39676/2010 ಮತ್ತು 12996/2012)ಗಳಲ್ಲಿ ಸ್ಪಷ್ಟವಾಗಿ ಅರ್ಜಿದಾರರು ಖರೀದಿಸಲಾಗಿದೆ ಎಂದು ಹೇಳುತ್ತಿರುವ ಜಮೀನು, ಅರಣ್ಯ ಪ್ರದೇಶದ ಒಳಭಾಗದಲ್ಲಿ ಬರುವ ವಿಸ್ತೀರ್ಣ ಹಾಗೂ ಅರಣ್ಯ ಪ್ರದೇಶದ ಹೊರಗೆ ಬರುವ ಕಂದಾಯ ಭೂಮಿಯ ವಿಸ್ತೀರ್ಣವನ್ನು ಅಳತೆ ಮಾಡಿ ಗುರುತಿಸುವಂತೆ ನಿರ್ದೇಶಿಸಿದೆ. ಈ ನಕಾಶೆಯನ್ನು ಈ ಅಂಶವನ್ನು ಸ್ಪಷ್ಟವಾಗಿ ಗುರುತಿಸಿಲ್ಲ ಎಂದೂ ವರದಿಯಲ್ಲಿ ಪ್ರಸ್ತಾವಿಸಿರುವುದು ಗೊತ್ತಾಗಿದೆ.

 

‘ಸರ್ವೆ ನಂಬರ್‍‌ 2ರ ಪೈಕಿ ಪೋಡಿಯಾಗಿ ಅಧಿಸೂಚಿತ ಅರಣ್ಯ ಗಡಿ ಹೊರಭಾಗದಲ್ಲಿ ಇರುವ ಜಮೀನುಗಳೆಂದು ಹಾಗೂ ಗುಲಾಬಿ ಬಣ್ಣದಿಂದ ಗುರುತಿಸಿರುವ ಸರ್ವೆ ನಂಬರ್‍‌ 2 ರ ಪೈಕಿ ಪೋಡಿಯಾಗಿ ಅರಣ್ಯ ಮತ್ತು ಕಂದಾಯ ಜಮೀನಿನ ಗಡಿಯಲ್ಲಿ ಬರುವ ಸರ್ವೆ ನಂಬರ್‍‌ಗಳು ಎಂದು ಗುರುತಿಸಲಾಗಿದೆ. ಆದರೆ ವಿಸ್ತೀರ್ಣವನ್ನು ನಮೂದಿಸಿಲ್ಲ. ಈ ಮೇಲಿನ ಎರಡೂ ರಿಟ್‌ ಪ್ರಕರಣಗಳಲ್ಲಿ ಸ್ಪಷ್ಟವಾಗಿ ಫಿರ್ಯಾದಿದಾರರು ಖರೀದಿಸಿರುವ ಭೂಮಿಯಲ್ಲಿ ಅರಣ್ಯ ಪ್ರದೇಶದ ಒಳಭಾಗದಲ್ಲಿ ಬರುವ ವಿಸ್ತೀರ್ಣ ಹಾಗೂ ಅರಣ್ಯ ಪ್ರದೇಶದ ಹೊರಗೆ ಬರುವ ಕಂದಾಯ ಭೂಮಿಯ ವಿಸ್ತೀರ್ಣವನ್ನು ಅಳತೆ ಮಾಡಿ ಗುರುತಿಸುವಂತೆ ನಿರ್ದೇಶಿಸಿದೆ. ಆದರೆ ನಕಾಶೆಯಲ್ಲಿ ಈ ಅಂಶವನ್ನು ಸ್ಪಷ್ಟವಾಗಿ ಗುರುತಿಸಿಲ್ಲ,’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿಯವರು ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

ಸರ್ವೆ ನಂಬರ್‍‌ 1 ಮತ್ತು 2ರ ಅಧಿಸೂಚನೆಯಂತೆ ಅರಣ್ಯ ಗಡಿ ಒಳಗೆ ಪೋಡಿ ಆಗದ ಇರುವ 72 ಎಕರೆ 35 ಗುಂಟೆ ವಿಸ್ತೀರ್ಣದ ಪ್ರದೇಶವಾಗಿರುತ್ತದೆ ಎಂದು ಸದರಿ ಜಾಗದಲ್ಲಿ ರಿಟ್‌ ಪ್ರಕರಣದ ಫಿರ್ಯಾದುದಾರರಿಗೆ 16 ಎಕರೆ 25 ಗುಂಟೆ ಪ್ರದೇಶಕ್ಕೆ ಖಾತೆ ಇರುವುದಾಗಿ ಇತರರು ಉಳಿಕೆ ಜಮೀನಿನಲ್ಲಿ ಸ್ವಾಧೀನದಲ್ಲಿದ್ದಾರೆ ಎಂದು ಗುರುತಿಸಲಾಗಿದೆ. ಆದರೆ ಈ ರಿಟ್‌ ಪ್ರಕರಣದಲ್ಲಿ ಸ್ಪಷ್ಟವಾಗಿ ಫಿರ್ಯಾದಿದಾರರು ಖರೀದಿಸಿರುವ ವಿಸ್ತೀರ್ನವನ್ನು ಮಾತ್ರ ಅಳತೆ ಮಾಡುವಂತೆ ನಿರ್ದೇಶಿಸಿದೆ.

 

‘ಫಿರ್ಯಾದುದಾರರ ಹೆಸರಿಗೆ ಖಾತೆ ಇರುವ ಹಾಗೂ ಸರ್ವೆ ನಂಬರ್‍‌ 1 ಮತ್ತು 2ರ ಅಧಿಸೂಚಿತ ಅರಣ್ಯ ಪ್ರದೇಶದಲ್ಲಿ ಅತಿಕ್ರಮಣ ಮಾಡಿಕೊಂಡಿರುವ ಇತರರ ಪ್ರದೇಶವನ್ನು ಮೋಜಣಿ ಮಾಡಿ ಗುರುತಿಸುವಂತೆ ನಿರ್ದೇಶಿಸಿರುವುದಿಲ್ಲ. ಸರ್ವೆ ನಂಬರ್‍‌ 1 ಮತ್ತು 2ರ ಜಂಟಿ ಮೋಜಣಿ ಕಾರ್ಯಕ್ಕಾಗಿ ಫಿರ್ಯಾದುದಾರರಿಗೆ ಮಾತ್ರ ಜಿಲ್ಲಾಧಿಕಾರಿಗಳು ನೋಟೀಸ್‌ ನೀಡಿದ್ದಾರೆ. ಇತರರಿಗೆ ನೋಟೀಸ್‌ನ್ನು ನೀಡಿರುವುದಿಲ್ಲ. ಹಾಗೂ ಇತರರ ಜಮೀನನ್ನು ಸಹ ಮೋಜಣಿ ಮಾಡದೆಯೇ ನಕಾಶೆಯಲ್ಲಿ ಗುರುತಿಸಿರುವುದು ಅನಾವಶ್ಯಕವಾಗಿದೆ,’ ಎಂದು ವಿವರಿಸಿರುವುದು ಗೊತ್ತಾಗಿದೆ.

 

ಈ ಸರ್ವೇ ಕಾರ್ಯವನ್ನು ಅರಣ್ಯ ಹಾಗೂ ಕಂದಾಯ ಇಲಾಖೆಯಿಂದ ಜಂಟಿ ಕೈಗೊಂಡಿದೆ. ಮೋಜಣಿ ನಕ್ಷೆ ತಯಾರಿಸುವ ವೇಳೆಯಲ್ಲಿ ಅರಣ್ಯ ಇಲಾಖೆಯ ಗಮನಕ್ಕೂ ತಾರದೇ ಜಿಲ್ಲಾಧಿಕಾರಿಗಳು, ಭೂ ದಾಖಲೆಗಳ ಉಪ ನಿರ್ದೇಶಕರು ಏಕಪಕ್ಷೀಯವಾಗಿ ನಕ್ಷೆ ತಯಾರಿಸಿದ್ದಾರೆ. ಈ ನಕ್ಷೆ ತಯಾರಿಸುವ ವೇಳೆಯಲ್ಲಿ ಅರಣ್ಯ ಇಲಾಖೆಯವರ ಸಹಭಾಗಿತ್ವವನ್ನು ವಿನಿಯೋಗಿಸಿಕೊಂಡಿದ್ದಲ್ಲಿ ನಮ್ಮ ಷರಾವನ್ನು ಸಹ ನಕಾಶೆಯಲ್ಲಿ ಮುದ್ರಿಸಬಹುದಾಗಿತ್ತು ಎಂದೂ ವರದಿಯಲ್ಲಿ ಅಭಿಪ್ರಾಯಿಸಿರುವುದು ತಿಳಿದು ಬಂದಿದೆ.

 

ಮೋಜಣಿಯು ಕಾನೂನುಬದ್ಧವಾಗಿ ಹಾಗೂ ನಿಯಮಾನುಸಾರವಿದೆ. ಅದರಂತೆ ರಿಟ್‌ (ಪಿಟಿಷನ್‌ 35827/2024) 9ನೇ ಪ್ರತಿವಾದಿ ಕೆ ಆರ್‍‌ ರಮೇಶ್‌ ಕುಮಾರ್‍‌ ಅವರು ಅಧಿಸೂಚಿತ ಜಿನಗಲಕುಂಟೆ ರಾಜ್ಯ ಅರಣ್ಯ ಪ್ರದೇಶದ ಹೊಸಹುಡ್ಯ ಗ್ರಾಮದ ಸರ್ವೆ ನಂಬರ್‍‌ 1ರಲ್ಲಿ 6 ಎಕರೆ ಹಾಗೂ ಸರ್ವೆ ನಂಬರ್‍‌ 2ರಲ್ಲಿ 54 ಎಕರೆ 23 ಗುಂಟೆ ಒಟ್ಟಾರೆ 60 ಎಕರೆ 23 ಗುಂಟೆ ವಿಸ್ತೀರ್ಣದ ಅರಣ್ಯ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವುದು ಸಾಬೀತಾಗಿದೆ ಎಂದು ವರದಿಯಲ್ಲಿ ವಿವರಿಸಿದ್ದಾರೆ.

 

 

ಜಿನಗಲಕುಂಟೆ ರಾಜ್ಯ ಅರಣ್ಯ ಪ್ರದೇಶಕ್ಕೆ ಸೇರಿದ 1937 ಹಾಗೂ 1944ರ ಅಧಿಸೂಚನೆ ಪ್ರಕಾರ ಹೊಸಹುಡ್ಯ ಗ್ರಾಮದ ಸರ್ವೆ ನಂಬರ್‍‌ 01ರಲ್ಲಿ 315 ಎಕರೆ 32 ಗುಂಟೆ ಹಾಗೂ ಸರ್ವೆ ನಂಬರ್‍‌ 2ರಲ್ಲಿ 113 ಎಕರೆ ಪ್ರದೇಶವು ನಿಯಮಾನುಸಾರ ಅರಣ್ಯ ಭೂಮಿಯಾಗಿಯೇ ಉಳಿದಿದೆ. ರಮೇಶ್‌ ಕುಮಾರ್‍‌ ಅವರು ಒತ್ತುವರಿ ಮಾಡಿರುವ ಅರಣ್ಯ ಪ್ರದೇಶವನ್ನು ಅರಣ್ಯೇತರ ಉದ್ದೇಶಕ್ಕಾಗಿ ಯಾವುದೇ ಸರ್ಕಾರಿ ಅಧಿಸೂಚನೆಯಲ್ಲಿ ಮಾರ್ಪಾಡು ಮಾಡಿ ಆದೇಶ ಹೊರಡಿಸಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

 

ರಮೇಶ್‌ ಕುಮಾರ್‍‌ ಅವರು ಹೊಸ ಹುಡ್ಯ ಗ್ರಾಮದ ಸರ್ವೆ ನಂಬರ್‍‌ 1 ಮತ್ತು 2ರಲ್ಲಿ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವುದು ಕರ್ನಾಟಕ ಅರಣ್ಯ ಕಾಯ್ದೆ 1963, ಕರ್ನಾಟಕ ಅರಣ್ಯ ನಿಯಮಾವಳಿ 1969, ಅರಣ್ಯ ಸಂರಕ್ಷಣಾ ಕಾಯ್ದೆ 1980 ಭಾರತ ಸುಪ್ರೀಂ ಕೋರ್ಟ್‌ ನೀಡಿದ್ದ (ರಿಟ್‌ ಅರ್ಜಿ ಸಂಖ್ಯೆ 202/905ರ ಟಿ ಎನ್‌ ಗೋದಾವರ್ಮನ್‌ ವರ್ಸ್‌ಸ್‌ ಭಾರತ ಸರ್ಕಾರ ) ಮತ್ತು ಇತರರು ಪ್ರಕರಣದಲ್ಲಿ 1996ರ ಡಿಸೆಂಬರ್‍‌ 12ರಂದು ನೀಡಿದ್ದ ತೀರ್ಪಿಗೆ ವಿರುದ್ಧವಾಗಿದೆ ಎಂದು ಕಾನೂನಾತ್ಮಕ ಅಂಶಗಳನ್ನು ವರದಿಯಲ್ಲಿ ಪ್ರಸ್ತಾವಿಸಿರುವುದು ತಿಳಿದು ಬಂದಿದೆ.

 

ಅಲ್ಲದೇ ‘ ಕರ್ನಾಟಕ ಸರ್ಕಾರ ಮತ್ತು ಇತರರ ವರ್ಸಸ್‌ ಐ ಎಸ್‌ ನಿರ್ವಾಣೆಗೌಡ ಹಾಗೂ ಇತರರು (2007) ಎಸ್‌ಸಿಸಿ 744 ಪ್ರಕರಣದಲ್ಲಿ ನೀಡಿರುವ ಆದೇಶದಂತೆ ಜಿನಗಲಕುಂಟೆ ರಾಜ್ಯ ಅರಣ್ಯ ಪ್ರದೇಶಕ್ಕೆ ಹೊಸಹುಡ್ಯ ಗ್ರಾಮದ ಸರ್ವೆ ನಂಬರ್‍‌ 1 ಮತ್ತು 2ರ ಅಧಿಸೂಚಿತ ಅರಣ್ಯ ಪ್ರದೇಶದಲ್ಲಿ ರಮೇಶ್‌ಕುಮಾರ್‍‌ ಅವರ ಹೆಸರಿಗೆ ಖಾತೆ ಪೋಡಿ ಮತ್ತು ಮಂಜೂರು ಮಾಡಿರುವ ಜಮೀನುಗಳು ಅಮಾನ್ಯವಾಗಿರುತ್ತದೆ,’ ಎಂದು ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

 

ಕೋಲಾರ ಅರಣ್ಯ ವಿಭಾಗದಲ್ಲಿನ ಜಿನಗುಲಕುಂಟೆ ಅರಣ್ಯ ಪ್ರದೇಶದಲ್ಲಿನ 61.39 ಎಕರೆ ಒತ್ತುವರಿಗೆ ಸಂಬಂಧಿಸಿದಂತೆ  ಅರಣ್ಯಾಧಿಕಾರಿಗಳು ನಡೆಸಿದ್ದ ಜಂಟಿ ಸರ್ವೆಗೆ ಸಂಬಂಧಿಸಿದ ನಕ್ಷೆ , ವರದಿ ಮತ್ತು ದಾಖಲೆಗಳನ್ನು ಕಂದಾಯ ಇಲಾಖೆಯು ಇದೀಗ ಅರಣ್ಯ ಇಲಾಖೆಗೆ ವರ್ಗಾಯಿಸಿತ್ತು.

 

ಭೂಮಾಪನ ಇಲಾಖೆಯು, ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ಸರ್ಕಾರದ ಅಪರ ಮುಖ್ಯಕಾರ್ಯದರ್ಶಿ ಅಂಜುಂ ಪರ್ವೆಜ್ ಅವರಿಗೆ  ವರದಿ, ದಾಖಲೆಗಳನ್ನು ರವಾನಿಸಿದೆ. ಈ ಸಂಬಂಧ ಭೂಮಾಪನ ಇಲಾಖೆಯು  2025ರ ಜನವರಿ 27ರಂದು ಪತ್ರ (ಅ.ಸ.ಪತ್ರ ಸಂಖ್ಯೆ; ಕಂಇ 23 ಪ್ರ.ಕಾ (ಭೂಮಾಪನ)  ಬರೆದಿದ್ದರು.

 

ಒತ್ತುವರಿ; ಅರಣ್ಯ ಇಲಾಖೆ ಕೈ ಸೇರಿದ ಕೆ ಆರ್ ರಮೇಶ್‌ ಕುಮಾರ್ ವಿರುದ್ಧ ಪ್ರಕರಣದ ಸರ್ವೆ ವರದಿ

 

 

ಮಾಜಿ ಸಚಿವ ಹಾಗೂ ಸ್ಪೀಕರ್‍‌ ಆಗಿದ್ದ ಕೆ ರಮೇಶ್‌ ಕುಮಾರ್‍‌ ಅವರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿರುವ 61.39 ಎಕರೆ ಅರಣ್ಯ ಪ್ರದೇಶದ ಕುರಿತು   ಜಂಟಿ ಸರ್ವೆ ಕಾರ್ಯ ಕೈಗೆತ್ತಿಕೊಳ್ಳಬೇಕು ಎಂದು ಬೆಂಗಳೂರು ಪ್ರಾದೇಶಿಕ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿಯವರು ಕೋಲಾರ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು.

 

61.39 ಎಕರೆ ಅರಣ್ಯ ಪ್ರದೇಶ ಒತ್ತುವರಿ; ಡಿ.20ರಂದು ಜಂಟಿ ಸರ್ವೆ, ಇನ್ನಾದರೂ ತಾರ್ಕಿಕ ಅಂತ್ಯ ಕಾಣುವುದೇ?

 

ಒತ್ತುವರಿಯಾಗಿದೆ ಎಂದು ಹೇಳಲಾಗಿರುವ ಜಿನಗುಲಕುಂಟೆ ಅರಣ್ಯ ಪ್ರದೇಶವನ್ನು 2024ರ ಡಿಸೆಂಬರ್‍‌ 20ರಂದು ಬೆಳಿಗ್ಗೆ ಜಂಟಿ ಸರ್ವೆ ನಡೆಸಲು ಮುಂದಾಗಿತ್ತು. ಇದೇ ದಿನದಂದು ರಮೇಶ್‌ ಕುಮಾರ್‍‌ ಅವರೂ ಸಹ ದಾಖಲೆಗಳೊಂದಿಗೆ ಹಾಜರಾಗಬೇಕು ಎಂದು ಸೂಚಿಸಿತ್ತು.

 

 

ಕೋಲಾರ ವಿಭಾಗದ ಶ್ರೀನಿವಾಸಪುರ ವಲಯದ ಜಿನಗಲಕುಂಟೆ ಅರಣ್ಯ ಪ್ರದೇಶದ ಹೊಸ ಹುಡ್ಯ ಗ್ರಾಮದ ಸರ್ವೆ ನಂಬರ್ 1 ಮತ್ತು 2ರಲ್ಲಿ 61.39 ಎಕರೆ ಅರಣ್ಯ ಪ್ರದೇಶವು ಒತ್ತುವರಿಯಾಗಿದೆ. ಈ ಕುರಿತು ನ್ಯಾಯಾಲಯದಲ್ಲಿ ರಿಟ್‌ ಅರ್ಜಿ ಕೂಡ (ಸಂಖ್ಯೆ; 12996/2012) ದಾಖಲಾಗಿತ್ತು. ಈ ಕುರಿತು ಜಂಟಿ ಸರ್ವೆಯನ್ನು ಶೀಘ್ರವಾಗಿ ಕೈಗೆತ್ತಿಗೊಳ್ಳಬೇಕು ಎಂದು ಹೈಕೋರ್ಟ್‌ 2013ರ ಜುಲೈ 11ರಂದು ಆದೇಶ ಹೊರಡಿಸಿತ್ತು.

 

 

SUPPORT THE FILE

Latest News

Related Posts