ಬೆಂಗಳೂರು; ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ದೇವನೂರು ಮೂರನೇ ಹಂತದಲ್ಲಿ ನಿವೇಶನಗಳು ಲಭ್ಯವಿದ್ದರೂ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಸಮಾನಾಂತರ ಬಡಾವಣೆಯಲ್ಲಿ ನಿವೇಶನಗಳನ್ನು ನೀಡಲಾಗಿತ್ತು!
ಬದಲಿ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಸಿಬಿಐ ತನಿಖೆ ನಡೆಸಬೇಕು ಎಂದು ಕೋರಿರುವ ಅರ್ಜಿಯ ವಿಚಾರಣೆ ನಡೆಸಿ ಆದೇಶ ಕಾಯ್ದಿರಿಸಿರುವ ಬೆನ್ನಲ್ಲೇ ದೇವನೂರಿನ ಮೂರನೇ ಹಂತದಲ್ಲಿ ನಿವೇಶನಗಳು ಲಭ್ಯವಿದ್ದವು ಎಂಬುದಕ್ಕೆ ಸಂಬಂಧಿಸಿದಂತೆ ಮತ್ತೊಂದು ದಾಖಲೆಯನ್ನು ದೂರುದಾರ ಸ್ನೇಹಮಯಿ ಕೃಷ್ಣ ಅವರು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ್ದಾರೆ.
ಮೈಸೂರಿನ ದೇವನೂರಿನ ಮೂರನೇ ಹಂತದಲ್ಲಿ ನಿವೇಶನದಲ್ಲಿ ಲಭ್ಯವಿರಲಿಲ್ಲ. ಹೀಗಾಗಿ ಸಮಾನಂತರ ಬಡಾವಣೆಯಲ್ಲಿ ನಿವೇಶನಗಳನ್ನು ನೀಡಬೇಕು ಎಂದು ಮನವಿ ಮಾಡಿಕೊಳ್ಳಲಾಗಿತ್ತು ಎಂದು ಪ್ರತಿಪಕ್ಷ ನಾಯಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿ ತಿರುಗೇಟು ನೀಡಿದ್ದರು.
ಟ್ವೀಟ್‌ನ ಪೂರ್ಣ ಸಾರಾಂಶದಲ್ಲೇನಿದೆ?
ಮುಡಾ ಅಕ್ರಮವಾಗಿ ಸ್ವಾಧೀನಪಡಿಸಿಕೊಂಡ ನಮ್ಮ ಕುಟುಂಬದ ಜಮೀನಿಗೆ ಬದಲಿ ಭೂಮಿ ನೀಡುವಂತೆ ನನ್ನ ಪತ್ನಿ ಸಲ್ಲಿಸಿದ್ದ ಅರ್ಜಿಯಲ್ಲಿ ನಾಲ್ಕೈದು ಪದಗಳಿಗೆ ವೈಟ್ನರ್ ಹಚ್ಚಿದ್ದನ್ನೇ ಮಹಾನ್ ಅಪರಾಧವೆಂಬಂತೆ ಗಂಟಲು ಹರಿದುಕೊಂಡ ಬಿಜೆಪಿ-ಜೆಡಿಎಸ್ ನಾಯಕರೇ, ವೈಟ್ನರ್ ಹಿಂದಿರುವ ಅಕ್ಷರಗಳೇನು ಎಂಬುದು ಈ ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ನಿಮ್ಮ ದ್ವೇಷದ ಕನ್ನಡಕ ಕಳಚಿಟ್ಟು ಸರಿಯಾಗಿ ಕಣ್ಣು ಬಿಟ್ಟು ನೋಡಿ ಎಂದಿದ್ದರು.
ಅಲ್ಲದೇ ‘ ನನ್ನ ಪತ್ನಿ ಬದಲಿ ಭೂಮಿ ಕೇಳಿದ್ದು ತನ್ನದೇ ಜಮೀನನ್ನು ಮುಡಾ ವಶಕ್ಕೆ ಪಡೆದು ಅಭಿವೃದ್ಧಿಪಡಿಸಲಾದ ದೇವನೂರು 3ನೇ ಹಂತದ ಬಡಾವಣೆಯಲ್ಲಿ ಅಥವಾ ನಂತರ ಪ್ರಾಧಿಕಾರವು ಅಭಿವೃದ್ಧಿಇಪಡಿಸಿದ ಸಮಾನಾಂತರ ಬಡಾವಣೆಯಲ್ಲಿ. ಅಲ್ಲಿ ನಿವೇಶನಗಳು ಲಭ್ಯವಿರದ ಕಾರಣಕ್ಕೆ ದೇವನೂರು 3ನೇ ಹಂತದ ಬಡಾವಣೆಯಲ್ಲಿ ಅಥವಾ ನಂತರ ಎಂಬ ನಾಲ್ಕೈದು ಪದಗಳಿಗೆ ವೈಟ್ನರ್ ಹಾಕಿ, ಪ್ರಾಧಿಕಾರ ಅಭಿವೃದ್ಧಿಪಡಿಸಿದ ಸಮಾನಂತರ ಬಡಾವಣೆಯಲ್ಲಿ ನಿವೇಶನ ನೀಡಬೇಕೆಂಬ ಮನವಿ ಮಾಡಿದ್ದಾರೆ. ಇದರಲ್ಲಿ ಟಿಪ್ಪಣಿಯೂ ಇಲ್ಲ, ಆದೇಶವೂ ಇಲ್ಲ, ಅಪ್ಪಣೆಯೂ ಇಲ್ಲ. ತನಗೆ ಸೇರಿದ ಭೂಮಿಯಲ್ಲೇ ನಿವೇಶನ ಕೊಡಿ ಎಂಬ ಮನವಿ ಅಷ್ಟೇ ಇದೆ,’ ಎಂದು ಟ್ವೀಟ್‌ನಲ್ಲಿ ವಿವರಿಸಿದ್ದರು.
ಆದರೀಗ ಸ್ನೇಹಮಯಿ ಕೃಷ್ಣ ಅವರು ಬಿಡುಗಡೆ ಮಾಡಿರುವ ದಾಖಲೆಯಲ್ಲಿ ದೇವನನೂರು ಮೂರನೇ ಹಂತದ ಬಡಾವಣೆಯಲ್ಲಿ 370 ನಿವೇಶನಗಳು ಬಾಕಿ ಇದ್ದವು ಎಂಬ ಮಾಹಿತಿಯನ್ನೂ ಪ್ರಾಧಿಕಾರವೇ ಬಹಿರಂಗಪಡಿಸಿರುವುದು ತಿಳಿದು ಬಂದಿದೆ.
ಇದರ ಪ್ರಕಾರ ದೇವನೂರು ಮೂರನೇ ಹಂತದ ಬಡಾವಣೆಯಲ್ಲಿ ಒಟ್ಟು 4,395 ನಿವೇಶನಗಳನ್ನು ರಚಿಸಲಾಗಿತ್ತು. ಇದರಲ್ಲಿ ಒಟ್ಟು 4,025 ನಿವೇಶನಗಳು ಹಂಚಿಕೆಯಾಗಿದ್ದವು. ಈ ಬಡಾವಣೆಯಲ್ಲಿ 370 ನಿವೇಶನಗಳು ಹಂಚಿಕೆಯಾಗದೇ ಬಾಕಿ ಉಳಿದಿವೆ. ಈ ಮಾಹಿತಿಯನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವಿಶೇಷ ತಹಶೀಲ್ದಾರ್ ಅವರು 2025ರ ಜನವರಿ 28ರಂದು ಒದಗಿಸಿದ್ದಾರೆ.
‘ಸಿದ್ದರಾಮಯ್ಯನವರು, ದೇವನೂರು ಮೂರನೇ ಹಂತದಲ್ಲಿ ನಿವೇಶನಗಳು ಲಭ್ಯವಿರದ ಕಾರಣಕ್ಕೆ ಸಮಾನಂತರ ಬಡಾವಣೆಯಲ್ಲಿ ನಿವೇಶನಗಳನ್ನು ನೀಡುವಂತೆ ಮನವಿ ಮಾಡಿಕೊಳ್ಳಲಾಗಿತ್ತು ಎಂಬಂತೆ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಹೇಳಿಕೊಂಡಿದ್ದರಲ್ಲವೆ ? ಈ ಕಾರಣ ಇಟ್ಟುಕೊಂಡು ವಿಜಯನಗರದಲ್ಲಿ 14 ನಿವೇಶನಗಳನ್ನು ಪಡೆದುಕೊಂಡಿರುವುದು ನಿಮಗೆ ಗೊತ್ತಿದೆ. ನೆನ್ನೆ “ಪ್ರಾಧಿಕಾರ” ದ ಅಧಿಕಾರಿಗಳು ನನಗೆ ನೀಡಿರುವ ಮಾಹಿತಿ ಗಮನಿಸಿ, ದೇವನೂರು ಮೂರನೇ ಹಂತದಲ್ಲಿ ಇನ್ನೂ 370 ನಿವೇಶನಗಳು ಬಾಕಿ ಎಂದು ತಿಳಿಸಿರುವುದು ಕಂಡು ಬರುತ್ತದೆ ! ಯಾರು ಸುಳ್ಳು ಹೇಳುತ್ತಿದ್ದಾರೆ ಎಂಬುದನ್ನು ರಾಜ್ಯದ ಜನರು ಗಮನಿಸಬೇಕಿದೆ,’ ಎಂದು ಸ್ನೇಹಮಯಿ ಕೃಷ್ಣ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರ ಹೆಸರಿನಲ್ಲಿ 14 ಬದಲಿ ನಿವೇಶನಗಳನ್ನು ನೀಡುವ ಸಂಬಂಧ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ನಡೆದಿದ್ದ ಸಭೆಯಲ್ಲಿ ಅಂದಿನ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಅವರ ಪುತ್ರ ಹಾಗೂ ಶಾಸಕ ಯತೀಂದ್ರ ಅವರು ಮೂಕ ಪ್ರೇಕ್ಷಕರಾಗಿದ್ದರು ಎಂಬುದನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದ್ದು ಚರ್ಚೆಗೆ ಗ್ರಾಸವಾಗಿತ್ತು.
ಬದಲಿ ನಿವೇಶನ; ಅರ್ಜಿದಾರ, ಪುತ್ರ ಮೂಕಪ್ರೇಕ್ಷಕರಲ್ಲ, ಎ ಸಿ ಕೊಠಡಿಯಲ್ಲೇ ತಯಾರಾಗಿತ್ತೇ ತಪಾಸಣೆ ವರದಿ?
ಬದಲಿ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ 2021ರ ಮಾರ್ಚ್ 20ರಂದು ನಡೆದಿದ್ದ ಸಾಮಾನ್ಯ ಸಭೆಯಲ್ಲಿ ವಿಧಾನಸಭೆ ಸದಸ್ಯರೂ ಮತ್ತು ಸಿದ್ದರಾಮಯ್ಯ ಅವರ ಪುತ್ರನೂ ಆಗಿರುವ ಡಾ ಯತೀಂದ್ರ ಅವರು ಹಾಜರಾಗಿದ್ದರು. ಇದೇ ಸಭೆಯಲ್ಲಿಯೇ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ 14 ಬದಲಿ ನಿವೇಶನಗಳು ಹಂಚಿಕೆಗೆ ಅನುಮೋದನೆ ನೀಡಲಾಗಿತ್ತು.
ಅದೇ ರೀತಿ ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳು ನೀಡಿರುವ ಸ್ಥಳ ತಪಾಸಣೆ ವರದಿಯ ಕುರಿತೂ ಅವಲೋಕಿಸಿತ್ತು.
ಸಿಎಂ ಪತ್ನಿಗೆ ಬದಲಿ ನಿವೇಶನ; ತಹಶೀಲ್ದಾರ್ ವರದಿಯಲ್ಲಿ ಉಲ್ಲೇಖವಾಗದ ಉದ್ಯಾನ, ರಸ್ತೆ ವಿವರ
‘ಈ ಜಮೀನಿನಲ್ಲಿ ವಿದ್ಯುತ್ ತಂತಿಗಳು ಹಾದು ಹೋಗಿಲ್ಲ, ಮರಗಳು ಬೆಳೆದಿಲ್ಲ, ಕಟ್ಟಡಗಳು ತಲೆ ಎತ್ತಿಲ್ಲ ಮತ್ತು ಭೂ ಸ್ವಾಧೀನದಿಂದ ಕೈಬಿಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ವರದಿಯಲ್ಲಿ ನಿರೂಪಣೆ ಮಾಡಿದ್ದರು. ಆಗ ಕೃಷಿ ಭೂಮಿಯ ಅಸ್ತಿತ್ವವೇ ಸಂದೇಹವಿದ್ದುದರಿಂದ ಅವರು ಏನನ್ನು ಪರಿಶೀಲಿಸಿದರು ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು,’ ಎಂದು ಉಲ್ಲೇಖಿಸಿದ್ದರು.
ಸಿಎಂ ಪತ್ನಿಗೆ ಬದಲಿ ನಿವೇಶನ ಪ್ರಕರಣ; ಮೂಲ ಜಮೀನಿನ ಸ್ಥಳದಲ್ಲಿದ್ದ ರಸ್ತೆಯನ್ನೇ ಮುಚ್ಚಿಟ್ಟರೇ ಜಿಲ್ಲಾಧಿಕಾರಿ?
ಕೃಷಿಯಿಂದ ವಸತಿ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡಿರುವ ಪರಿಶೀಲಿಸಿರುವುದೇ ಒಂದು ನಿಗೂಢವಾಗಿದೆ. ವಾಸ್ತವಿಕವಾಗಿ ಸ್ಥಳ ಪರಿಶೀಲನೆ ನಡೆದಿದೆಯೇ ಅಥವಾ ಹವಾನಿಯಂತ್ರಿತ ಚೇಂಬರ್‌ಗಳಲ್ಲಿ ಕುಳಿತು ವರದಿಯನ್ನು ಬರೆಯಲಾಗಿದೆಯೇ ಎಂಬ ಬಗ್ಗೆ ವಿಚಾರಣೆ ನಡೆಸಬೇಕು ಎಂದೂ ತೀರ್ಪಿನಲ್ಲಿ ಹೇಳಿತ್ತು.
60;40ರ ಅನುಪಾತದ ಬದಲಿಗೆ 50;50 ರ ಅನುಪಾತದಲ್ಲಿ ಬದಲಿ ನಿವೇಶನ ಹಂಚಿಕೆ ಪ್ರಕ್ರಿಯೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಮೊದಲ ಅವಧಿಯಲ್ಲೇ ನಡೆದಿತ್ತು.
60;40 ರ ಬದಲಿಗೆ 50;50 ಅನುಪಾತದಲ್ಲಿ ಬದಲಿ ನಿವೇಶನ; ಸಿದ್ದರಾಮಯ್ಯರ ಮೊದಲ ಅವಧಿಯಲ್ಲೇ ಚಮತ್ಕಾರ!
ಈ ಎಲ್ಲಾ ಅಂಶಗಳ ಕುರಿತು ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಅವಲೋಕಿಸಿರುವುದನ್ನು ಸ್ಮರಿಸಬಹುದು.