ಬಡ್ಡಿ ದಂಧೆ, ಮೀಟರ್ ಬಡ್ಡಿ, ಬೆದರಿಕೆ ಆರೋಪ; ಧರ್ಮಸ್ಥಳ ಸಂಘದ ವೀರೇಂದ್ರ ಹೆಗ್ಗಡೆ ಸೇರಿ ಹಲವರ ವಿರುದ್ಧ ದೂರು

ಬೆಂಗಳೂರು;  ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಿರುಸಾಲ ನೀಡುವ ಚಟುವಟಿಕೆಗಳ ಕಾರ್ಯಾಚರಣೆ ನೆಸುತ್ತಿರುವ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಘದ ನೌಕರರ ವಿರುದ್ಧ ರಾಜ್ಯದ ಹಲವು ಪೊಲೀಸ್‌ ಠಾಣೆಗಳಲ್ಲಿ ದೂರುಗಳು ಸಲ್ಲಿಕೆಯಾಗಿವೆ.

 

ಆರ್‍‌ಬಿಐ ನಿಯಮಗಳನ್ನು ಉಲ್ಲಂಘಿಸಿ ವಾರದ ಬಡ್ಡಿ ವಿಧಿಸುತ್ತಿರುವುದು, ಅರ್ಜಿದಾರರ ಸ್ವ ಸಹಾಯ ಸಂಘದ ಬ್ಯಾಂಕ್‌ ಪಾಸ್‌ ಬುಕ್‌, ಪಿಆರ್‍‌ಕೆ ಬಾಂಡ್‌ ಕೊಡದೇ ಸಂಘವು ಬಡ್ಡಿ ದಂಧೆ ನಡೆಸುತ್ತಿದೆ. ಈ ಸಂಘದ ಅಧ್ಯಕ್ಷರಾದ ಡಾ ವೀರೇಂದ್ರ ಹೆಗ್ಡೆ ಅವರ ಬಗ್ಗೆ ಪರಿಶೀಲಿಸಿ ಕ್ರಮ ಜರುಗಿಸಬೇಕು ಎಂಬ ದೂರು ಸಹ ಸಲ್ಲಿಕೆಯಾಗಿದೆ.

 

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘವು ಅತೀ ಹೆಚ್ಚಿನ ಬಡ್ಡಿ ವಸೂಲಿ ಮಾಡುತ್ತಿದೆ ಎಂದು ಮಳವಳ್ಳಿ ಕಾಂಗ್ರೆಸ್ ಶಾಸಕ ಪಿ ಎಂ ನರೇಂದ್ರಸ್ವಾಮಿ ಅವರು ಬಹಿರಂಗವಾಗಿ ಆರೋಪ ಮಾಡಿದ್ದರು. ಇದರ ಬೆನ್ನಲ್ಲೇ ಈ ಸಂಘವು ಮೈಕ್ರೋ ಫೈನಾನ್ಸ್‌ ವ್ಯಾಪ್ತಿಗೆ ಬರುವುದಿಲ್ಲ ಎಂದು ಸಹಕಾರ ಸಚಿವ ಕೆ ಎನ್‌ ರಾಜಣ್ಣ ಅವರು ಹೇಳಿಕೆ ನೀಡಿದ್ದರು. ಈ ಮಧ್ಯೆ ಮೈಕ್ರೋ ಫೈನಾನ್ಸ್‌  ದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಸುಗ್ರೀವಾಜ್ಞೆ ಹೊರಡಿಸಲು ಮುಂದಾಗಿದೆ.

 

ಮೈಕ್ರೋ ಫೈನಾನ್ಸ್‌ ಸಂಸ್ಥೆಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ನಿವಾರಣೆ ಹಾಗೂ ಮೈಕ್ರೋ ಫೈನಾನ್ಸ್‌ಗಳ ಹಾವಳಿಗೆ ಕಡಿವಾಣ ಹಾಕುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಕೃಷ್ಣಾದಲ್ಲಿ ಉನ್ನತ ಮಟ್ಟದ ಸಭೆಯೂ ನಡೆದಿದೆ.
ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ವಿರುದ್ಧ ನೌಕರರ ಹೆಸರು ಸಮೇತ ಕಳೆದ ಒಂದು ವರ್ಷದಿಂದಲೂ ಸಲ್ಲಿಕೆಯಾಗಿರುವ ದೂರುಗಳು ಮುನ್ನೆಲೆಗೆ ಬಂದಿವೆ.

 

ಈ ಸಂಘವು ಆರ್‍‌ಬಿಐ ನಿಯಮ ಪಾಲಿಸಿಲ್ಲ, ನಿಯಮ ಮೀರಿ ವಿಪರೀತ ಬಡ್ಡಿ ವಿಧಿಸಿರುವುದು, ಮಾನಸಿಕ ಸೇರಿದಂತೆ ವಿವಿಧ ರೀತಿಯ ಕಿರುಕುಳ, ಮಾನ ಹಾನಿ ಮಾಡುವುದು, ಮನೆಗೆ ನುಗ್ಗಿ ತೊಂದರೆ ನೀಡುತ್ತಿರುವುದು, ಮೀಟರ್‍‌ ಬಡ್ಡಿ, ಬೆದರಿಕೆ ಹಾಕುವುದು, ಮರು ಪಾವತಿಸಿದ ಹಣಕ್ಕೆ ಮಾಹಿತಿ ನೀಡದೇ ಇರುವುದು, ಮಾನಸಿಕ ಹಿಂಸೆ ನೀಡುವುದು, ಉಳಿತಾಯ ಹಣದ ಬಗ್ಗೆ ಲೆಕ್ಕ ನೀಡದಿರುವುದು, ಸಾಲ ನೀಡಿಕೆ ಮತ್ತು ಮರು ಪಾವತಿ ಕುರಿತು ಸಮರ್ಪಕ ದಾಖಲಾತಿಗಳನ್ನು ನೀಡುತ್ತಿಲ್ಲ ಎಂದು ಆರೋಪಿಸಿ  ಹತ್ತಾರು ದೂರುಗಳು ಸಲ್ಲಿಕೆಯಾಗಿವೆ.

 

ಶ್ರೀ ಕ್ಷೇತ್ರ ಎಸ್‌ಕೆಡಿಆರ್‍‌ಡಿಪಿ ಗ್ರಾಮೀಣಾಭಿವೃದ್ಧಿ ಯೋಜನೆಯ ಶ್ರವಣಬೆಳಗೊಳದ ಶಾಖೆಯ ಸುನೀತಾ ಮತ್ತು ಸಿಒ ನಿರ್ವಾಹಕರಾದ ಅನಿಲ್‌ ಕುಮಾರ್‍‌ ಮತ್ತು ಟ್ರಸ್ಟ್‌ನ ಇತರೆ ಸದಸ್ಯರು ಸಿಬ್ಬಂದಿಯು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಮಹೇಂದ್ರ ಎಂಬುವರ ಕುಟುಂಬದ ಸದಸ್ಯರಿಗೆ ನಿಯಮ ಮೀರಿ ವಿಪರೀತ ಬಡ್ಡಿ ವಿಧಿಸಿದ್ದಾರೆ. ಮತ್ತು ಪ್ರತಿ ವಾರ ಮನೆಗೆ ನುಗ್ಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ (ದೂರಿನ ಸಂಖ್ಯೆ; 1/1623/2025- ದಿನಾಂಕ 02/01/2025) ವಿವರಿಸಿರುವುದು ಗೊತ್ತಾಗಿದೆ.

 

ದಕ್ಷಿಣ ಕನ್ನಡ ಜಿಲ್ಲೆಯ  ಕಡಬ ತಾಲೂಕಿನ ಬಂತ್ರ ಗ್ರಾಮದ ಕೃಷ್ಣ ರೈ ಎಂಬುವರು ಸಂಘವು ಆರ್‍‌ಬಿಐ ನಿಯಮವನ್ನು ಪಾಲಿಸುತ್ತಿಲ್ಲ ಮತ್ತು ಅವ್ಯವಹಾರ ನಡೆಸುತ್ತಿದೆ ಎಂದು ದೂರಿದ್ದಾರೆ. ಈ ದೂರಿನಲ್ಲಿಯೂ ಸಂಘದ ದಕ್ಷಿಣ ಕನ್ನಡ ಜಿಲ್ಲೆ ಅಧ್ಯಕ್ಷ ಅನಿಲ್‌ಕುಮಾರ್‍‌ ಎಂಬುವರ ಹೆಸರನ್ನು ಉಲ್ಲೇಖಿಸಿರುವುದು ತಿಳಿದು ಬಂದಿದೆ.

 

ಅದೇ ರೀತಿ ಇದೇ ಕಡಬ ತಾಲೂಕಿನ ಹಳೆನೆರಂಕಿ ಗ್ರಾಮದ ಎಂ ದಿವಾಕರ ಎಂಬುವರೂ ಸಹ ಸಂಘವು ಆರ್‍‌ಬಿಐ ನಿಯಮವನ್ನು ಪಾಲಿಸುತ್ತಿಲ್ಲ ಎಂದು ದೂರಿದ್ದಾರೆ. ಈ ಸಂಘದ ಸಿಬ್ಬಂದಿಯು ಅರ್ಜಿದಾರರಿಗೆ ತೊಂದರೆ ನೀಡಿದ್ದಾರೆ ಎಂದು ದೂರಿನಲ್ಲಿ (ದೂರಿನ ಸಂಖ್ಯೆ 177/ಪಿಟಿನ್‌/ಕೆಪಿಎಸ್‌/2024, ದಿನಾಂಕ 25.12.2024) ವಿವರಿಸಲಾಗಿದೆ ಎಂದು ಗೊತ್ತಾಗಿದೆ.

 

 

ಬಂಟ್ವಾಳದ ಕುಕ್ಕಡಕಟ್ಟೆಯ ಬಲಪುನಿ ಗ್ರಾಮದ ನೂರ್‍‌ ಜಾನ್‌ ಎಂಬ ಅರ್ಜಿದಾರರಿಗೆ ಸಂಗದ ನಳಿನಾಕ್ಷಿ ಮತ್ತು ಇತರರು ಕಿರುಕುಳ ನೀಡಿದ್ದಾರೆ ಎಂದು 2024ರ ಫೆ.2ರಂದೇ ದೂರಿರುವುದು ತಿಳಿದು ಬಂದಿದೆ.

 

ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪೆಡುಬೆಲ್ಲದ ಹರೀಶ್‌ ಅಮೀನ್‌ ಎಂಬುವರು ಪಡೆದಿದ್ದ 3.00 ಲಕ್ಷ ರು. ಮೊತ್ತದ ಸಾಲಕ್ಕೆ ನಿಯಮ ಮೀರಿ ಬಡ್ಡಿ ವಿಧಿಸಿದ್ದಾರೆ ಮತ್ತು ಇದಕ್ಕೆ ಮೀಟರ್‍‌ ಬಡ್ಡಿ ವಿಧಿಸಲಾಗಿದೆ. ಪ್ರತಿ ವಾರವೂ 8-10 ಮಂದಿ ಮನೆಗೆ ನುಗ್ಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು (ದೂರಿನ ಸಂಖ್ಯೆ; 377/ಪಿಟಿಎನ್/ಎಸ್‌ಎಚ್‌ಆರ್‍‌/ಯುಡಿ/2024, ದಿನಾಂಕ 23.12.2024) ದೂರಲಾಗಿದೆ. ಈ ದೂರಿನಲ್ಲಿಯೂ ಸಂಘದ ಸಿಓ ಅನಿಲ್‌ ಕುಮಾರ್ ಅವರನ್ನು ಪ್ರತಿವಾದಿಯನ್ನಾಗಿಸಲಾಗಿದೆ ಎಂದು ಗೊತ್ತಾಗಿದೆ.

 

ಬೆಳ್ತಂಗಡಿಯ ರೇಖ್ಯಾ ಗ್ರಾಮದ ಜಯಶ್ರೀ ಅವರಿಗೂ ಸಂಘದ ಅಧ್ಯಕ್ಷ , ಸಿಓ ಮತ್ತು ಸದಸ್ಯರು ನಿಯಮ ಮೀರಿ ವಿಪರೀತವಾಗಿ ವಾರದ ಬಡ್ಡಿ ವಿಧಿಸಿದ್ದಾರೆ. ಪ್ರತಿ ವಾರ ಮನೆಗೆ ನುಗ್ಗಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ದೂರಿನಲ್ಲಿ (ದೂರಿನ ಸಂಖ್ಯೆ; 355/ಒಪಿಎಸ್‌/2024, ದಿನಾಂಕ 30/12/2024) ವಿವರಿಸಿರುವುದು ತಿಳಿದು ಬಂದಿದೆ.

 

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಪುಂಚಪಡಿ ಗ್ರಾಮದ ಕಮಲ ಎಂಬುವರು ಪಡೆದಿದ್ದ ಸಾಲವನ್ನು ಮರು ಪಾವತಿಸಲು ಬಾಕಿ ಇರಿಸಿಕೊಂಡಿದ್ದರು. ಸಾಲ ಮರುಪಾವತಿಸಲು ಬಾಕಿ ಇದ್ದುದರಿಂದ ಸಂಘದ ಅಧ್ಯಕ್ಷ ಅನಿಲ್‌ಕುಮಾರ್‍‌ ಮತ್ತು ಇತರ ಸದಸ್ಯರು ಕಿರುಕುಳ ನೀಡಿದ್ದಾರೆ ಎಂದು 2024ರ ಡಿಸೆಂಬರ್‍‌ 16ರಂದೇ ದೂರಿರುವುದು ಗೊತ್ತಾಗಿದೆ.

 

 

ಮಂಡ್ಯ ಜಿಲ್ಲೆಯ ಮೇಲುಕೋಟೆ ತಾಲೂಕಿನ ಎಚ್‌ ಆರ್‍‌ ಉಮಾದೇವಿ ಎಂಬುವರು ಪಡೆದಿದ್ದ ಸಾಲಕ್ಕೆ ಸಂಘದ ಸಿಒ ಅನಿಲ್‌ಕುಮಾರ್ ಮತ್ತು ಇತರೆ ಸದಸ್ಯರು ನಿಯಮ ಮೀರಿ ವಿಪರೀತವಾದ ಬಡ್ಡಿ ವಿಧಿಸಿದ್ದರು ಎಂದು ದೂರಿನಲ್ಲಿ ಆಪಾದಿಸಿದ್ದರು. ಅಲ್ಲದೇ ಪ್ರತಿ ವಾರ ಮನೆಗೆ ನುಗ್ಗಿ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದೂ ದೂರಿರುವುದು ತಿಳಿದು ಬಂದಿದೆ.

 

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ವಡಕಪ್ಪ ಬಿ ಎಂಬುವರು ಎಸ್‌ಕೆಡಿಆರ್‍‌ಡಿಪಿ ಸಂಘದಲ್ಲಿ ಹಣ ಪಡೆದಿದ್ದರು. ಇದನ್ನು ಮರು ಪಾವತಿಸಿದ್ದರು. ಆದರೆ ಸಂಘದ ಅನುಮೇಶ ಮತ್ತು ಸಿದ್ದರಾಮ ಎಂಬುವರು ಮಾಹಿತಿ ನೀಡುತ್ತಿಲ್ಲ ಎಂದು ವಡಕಪ್ಪ ಅವರು 2024ರ ಡಿಸೆಂಬರ್‍‌ 19ರಂದು ದೂರಿರುವುದು ಗೊತ್ತಾಗಿದೆ.

 

ವಿಜಯನಗರ ಜಿಲ್ಲೆಯ ಹೆಚ್‌ಬಿ ಹಳ್ಳಿ ತಾಲೂಕಿನ ಮೋರಗೇರಿ ಗ್ರಾಮದ ನೀಲಗುಂಡ ಎಂಬುವರು ಸಂಘದಿಂದ ಪಡೆದಿದ್ದ ಸಾಲಕ್ಕೆ ಹಂತಹಂತವಾಗಿ ಮರುಪಾವತಿಸಿದ್ದರು. ಆದರೆ ಸಂಘದ ನಾಗವೇಣಿ, ಪೂಜಾ ಮತ್ತು ಸೂಪರ್‍‌ವೈಜರ್‍‌ ಗುತ್ತೆಪ್ಪ ಎಂಬುವರು ರಸೀದಿ ನೀಡಿಲ್ಲ. ಬದಲಿಗೆ ಬೆದರಿಕೆ ಹಾಕಿದ್ದರು ಎಂದು ನೀಲಗುಂಡ ಅವರು 2024ರ ನವೆಂಬರ್‍‌ 29ರಂದು ( ಸಂಖ್ಯೆ 328/2024) ದೂರಿದ್ದಾರೆ.

 

 

ಉಡುಪಿಯ ತೆಂಕುಬಿರ್ತಿಯ ವಿಮಲ ಎಂಬುವರು ಸಹ ಎಸ್‌ಕೆಡಿಆರ್‍‌ಡಿಪಿಯ ಸಿಬ್ಬಂದಿಯಿಂದ ಮಾನಸಿಕ ಕಿರುಕುಳಕ್ಕೆ ಒಳಗಾಗಿದ್ದಾರೆ. ಈ ಕುರಿತು 2025ರ ಜನವರಿ 3ರಂದು ದೂರು (ಸಂಖ್ಯೆ; 9/1208/2025) ನೀಡಿದ್ದಾರೆ. ಕುಂದಾಪುರದ ಅಂಗಲಿ ಗ್ರಾಮದ ಚಂದ್ರ ಕಾಲಂಜೆ ಎಂಬುವರು ಸಹ ಸಂಘದ ಹಣಕಾಸಿನ ವ್ಯವಹಾರದ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಿ ದೂರು (ಸಂಖ್ಯೆ; 306/ಪಿಟಿನ್‌/ಕೆಎನ್‌ಡಿ/2024, ದಿನಾಂಕ 02/12/2024) ಎಂದು ಗೊತ್ತಾಗಿದೆ.

 

ಅದೇ ರೀತಿ ಕಾರ್ಕಳದ ಅಬ್ದುಲ್‌ ಎಂಬುವರು ಎಸ್‌ಕೆಡಿಆರ್‍‌ಡಿಪಿ ಸಂಘದಿಂದ 2 ಲಕ್ಷ ರು ಸಾಲ ಪಡೆದಿದ್ದರು. ಇವರು ಪ್ರತಿ ವಾರ 1,500 ರು. ನಂತೆ ಸಾಲವನ್ನು ಮರು ಪಾವತಿಸುತ್ತಿದ್ದರು. ಒಂದು ವರ್ಷದಿಂದ ಸಾಲ ಪಾವತಿಸಿರಲಿಲ್ಲ. ಅದಕ್ಕೆ ಸಂಘದ ರಮ್ಯ ಮತ್ತು ಇತರೆ 8-10 ಮಂದಿ ನಿಯಮ ಮೀರಿ ಬಡ್ಡಿ ವಿಧಿಸಿದ್ದರು. ಅಲ್ಲದೇ ಪ್ರತಿ ವಾರ ಮನೆಗೆ ಬಂದು ಮಾನಸಿಕ ಹಿಂಸೆ, ತೊಂದರೆ ನೀಡಿದ್ದರು ಎಂದು ಅಬ್ದುಲ್‌ ಎಂಬುವರು (ಸಂಖ್ಯೆ; ಪಿಟಿನ್‌/589/ಕೆಟಿಪಿಎಸ್‌ 2024/ ದಿನಾಂಕ 27/12/2024) ದೂರಿನಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

ನೀತಿ ತಂಡದ ರಾಜ್ಯಾಧ್ಯಕ್ಷ ಜಯಂತ್‌ ಟಿ ಕೆ ಎಂಬುವರು ವೀರೇಂದ್ರ ಹೆಗಡೆ, ಅನಿಲ್‌ಕುಮಾರ್, ಜಯರಾಮ್‌ ನೆಲ್ಲಿಕಾಯಿ, ಮಂಡ್ಯ ಜಿಲ್ಲಾ ನಿರ್ದೇಶಕ ಪಾಂಡಿಯನ್‌ ಅವರ ವಿರುದ್ಧ ಇ-ಮೇಲ್‌ ಮೂಲಕ ದೂರು ನೀಡಿದ್ದಾರೆ ಎಂದು ಗೊತ್ತಾಗಿದೆ. ‘ ಸಾಲದ ಹಣ ಮರು ಪಾವತಿಗೆ ಸಂಬಂಧಿಸಿದಂತೆ ಅವಾಚ್ಯ ಶಬ್ದಗಳ ನಿಂದನೆ ಸಹಿಸಲಾರದೆ ಮಂಡ್ಯ ಜಿಲ್ಲೆ ಮಳವಳ್ಳಿಯ ತಾಲೂಕು ಮಡಿಯೂರು ಗ್ರಾಮದ ಮಹಾಲಕ್ಷ್ಮಿ ಎಂಬುವರು ಆತ್ಮಹತ್ಯೆಗೆ ಶರಣಾಗಿದ್ದಾರೆ,’ ಎಂದು ಇ-ಮೇಲ್‌ನಲ್ಲಿ ಸಲ್ಲಿಸಿರುವ ದೂರಿನಲ್ಲಿ ವಿವರಿಸಿದ್ದಾರೆ ಎಂದು ತಿಳಿದು ಬಂದಿದೆ.

 

 

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಂಜಿಕಲ್ಲು ಗ್ರಾಮದ ಸಂಧ್ಯಾ ಎಂಬುವರು ಸಹ ಸಂಘದ ಭವ್ಯ ಎಂಬುವರ ವಿರುದ್ಧ (ಪಿಟಿಎನ್‌/787/ಬಿಆರ್‍‌ಪಿಎಸ್‌/2024, 26/12/2024) ದೂರಿದ್ದಾರೆ. ಸಾಲ ಮರು ಪಾವತಿ ಮತ್ತು ಬಡ್ಡಿ ವಸೂಲಿಗಾರರು ವಸೂಲಿ ವಿಚಾರದಲ್ಲಿ ತೊಂದರೆ ನೀಡುತ್ತಿದ್ದಾರೆ ಎಂದು ದೂರಿರುವುದು ಗೊತ್ತಾಗಿದೆ.

 

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಂಪುರ ಗ್ರಾಮದ ಆನಂದ್‌ ಎಂಬುವರು ಸಂಘದಿಂದ ಪಡೆದಿದ್ದ ಸಾಲವನ್ನು ತೀರಿಸಿದ್ದರು. ಆದರೆ ಉಳಿತಾಯದ ಹಣದ ವಿಚಾರವಾಗಿ ಸಂಘದವರು ಸರಿಯಾಗಿ ಲೆಕ್ಕ ನೀಡಿಲ್ಲ ಎಂದು ದೂರಿನಲ್ಲಿ ಆಪಾದಿಸಿದ್ದಾರೆ. ಹಾಗೆಯೇ ಉಡುಪಿಯ ಕುಂಜಿಗುಡ್ಡದ ಶ್ರೀಕಾಂತ್‌ ಆಚಾರ್ಯ ಅವರು ಸಂಘದಿಂದ 2.50 ಲಕ್ಷ ರು. ಹಣವನು ಸಾಲವಾಗಿ ಪಡೆದಿದ್ದರು. ಈ ಹಣವನ್ನು ಬಡ್ಡಿ ಸಮೇತ ಕಟ್ಟಬೇಕು ಎಂದು ರಮ್ಯ, ಶಾರದ ರೈ ಎಂಬುವರು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು (ಸಂಖ್ಯೆ; ಪಿಟಿನ್‌/17/1224/2025, 04/01/2025) ದೂರಿರುವುದು ತಿಳಿದು ಬಂದಿದೆ.

 

ಕುಂಜಿಗುಡ್ಡದ ನಾರಾಯಣ ಆಚಾರ್ಯ ಎಂಬುವರು ಸಹ ಸಂಘದಿಂದ 2.00 ಲಕ್ಷ ರು ಸಾಲ ಪಡೆದಿದ್ದರು. ಈ ಹಣವನ್ನು ಬಡ್ಡಿ ಸಮೇತ ಕಟ್ಟಬೇಕು ಎಂದು ಸಂಘದ ರಮ್ಯ ಮತ್ತು ಶಾರದ ರೈ ಅವರು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು (ದೂರಿನ ಸಂಖ್ಯೆ; 18/1224/2025 ದಿನಾಂಕ 04/01/2025) ಎಂದು ಆರೋಪಿಸಿರುವುದು ಗೊತ್ತಾಗಿದೆ.

 

ಸಂಘದ ಅಧ್ಯಕ್ಷ ಹಾಗೂ ನಿರ್ದೇಶಕ ಅನಿಲ್‌ಕುಮಾರ್‍‌ ಹಾಗೂ ಸದಸ್ಯರು ಮತ್ತು ಸಿಬ್ಬಂದಿಯು ಆರ್‍‌ಬಿಐನ ನಿಯಮಗಳನ್ನು ಪಾಲಿಸದೇ ವ್ಯವಹಾರ ನಡೆಸುತ್ತಿದ್ದಾಋಎ. ಇವರ ನಿರ್ದಶನದ ಮೇರೆಗೆ ಸಂಸ್ಥೆಯ ಪ್ರತಿನಿಧಿಯಾಗಿರುವ ಮೀನಾಕ್ಷಿ ಎಂಬುವರು ಹಣ ಮಾರು ಮರು ಪಾವತಿಸಲು ಗಲಾಟೆ ಮಾಡುತ್ತಿದ್ದಾರೆ ಎಂದು ವಿರಾಜಪೇಟೆಯ ವಿ ಗೀತ ಎಂಬುವರು (ಎಲ್‌ಪಿನಂ 07/2024/ ದಿನಾಂಕ 04/01/2025) ದೂರಿದ್ದಾರೆ.

 

 

ಕುಜುಮರುಗುಡ್ಡೆಯ ರತ್ನಾವತಿ ಆಚಾರ್ಯ ಎಂಬುವರು ಸಂಘದ ಅಧಿಕಾರಿಗಳ ವಿರುದ್ಧ ದೂರಿದ್ದಾರೆ. ಧರ್ಮಸ್ಥಳ ಸಂಘದಿಂದ ಪಡೆದಿದ್ದ ಸಾಲಕ್ಕೆ ಸಮರ್ಪಕ ದಾಖಲೆಗಳನ್ನು ನೀಡುತ್ತಿಲ್ಲ ಎಂದು ( ಸಿಎನ್‌ಒ 08/ಪಿಟಿಎನ್/ಕೆಟಿಪಿಎಸ್‌/2025, ದಿನಾಂಕ 05/01/2025) ಆರೋಪಿಸಿದ್ದಾರೆ.

 

ಕೊಡಗು ಜಿಲ್ಲೆಯ ಶುಂಠಿಕೊಪ್ಪದ ಜಯಂತ್‌ ಎಸ್‌ ಎಂಬವರು ಸಂಘದ ಚಿತ್ರ ಎಂಬುವರ ವಿರುದ್ಧ ದೂರಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆ ಹಾಗೂ ಮೈಕ್ರೋ ಫೈನಾನ್ಸ್‌ ಸಂಸ್ಥೆಯಿಂದ ಹಾಗೂ ಇತರೆ ಸಂಘದಿಂದ ಜಯಂತ್‌ ಅವರು ಸಾಲ ಪಡೆದಿದ್ದರು. ಎಸ್‌ಕೆಡಿಆರ್‍‌ಪಿ ಅಧ್ಯಕ್ಷರು, ಸದಸ್ಯರು ಮತ್ತು ಸಿಬ್ಬಂದಿಯು ಅರ್ಜಿದಾರರ ಮನೆ ಬಾಗಿಲಿಗೆ ಬಂದು ಹಣ ಕಟ್ಟುವಂತೆ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು (ಎಲ್‌ಪಿಟಿಎನ್ 07/2025, ದಿನಾಂಕ 05/01/2025) ಆಪಾದಿಸಿರುವುದು ಗೊತ್ತಾಗಿದೆ.

 

ಮಂಡ್ಯದ ಕೆ ಆರ್‍‌ ಪೇಟೆ ಟೌನ್‌ನ ರಾಜೇಶ್ವರಿ ಎಂಬುವರು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದಿಂದ ಸಾಲ ಪಡೆದಿದ್ದರು. ಈ ಸಾಲವನ್ನು ಮರು ಪಾವತಿಸಿದ್ದರು. ಆದರೆ ಉಳಿತಾಯ ಪಾಸ್‌ ಬುಕ್‌ ಮತ್ತು ಇತರೆ ದಾಖಲೆಗಳನ್ನು ನೀಡಿರಲಿಲ್ಲ. ಸಂಘದ ಕೆಆರ್‍‌ ಪೇಟೆಯ ಶಾಖೆಯ ಅಧ್ಯಕ್ಷರು ಮತ್ತು ಇತರರು ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿರುವುದು ತಿಳಿದು ಬಂದಿದೆ.

 

 

ದಕ್ಷಿಣ ಕನ್ನಡದ ಸಂತೋಷ್‌ ಕುಮಾರ್‍‌ ಎಂಬುವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ಅಧ್ಯಕ್ಷರಾದ ಡಾ ವೀರೇಂದ್ರ ಹೆಗ್ಡೆ ಅವರ ವಿರುದ್ಧವೂ ( ಒಪಿಆರ್‍‌ 11/ಪಿಟಿನ್‌/ಕೆಪಿಎಸ್‌/2025, 17/01/2025) ದೂರಿದ್ದಾರೆ. ಆರ್‍‌ಬಿಐ ನಿಯಮಗಳನ್ನು ಉಲ್ಲಂಘಿಸಿ ವಾರದ ಬಡ್ಡಿ ವಿಧಿಸಲಾಗುತ್ತಿದೆ. ಅರ್ಜಿದಾರರ ಸ್ವ ಸಹಾಯ ಸಂಘದ ಬ್ಯಾಂಕ್‌ ಪಾಸ್‌ ಬುಕ್‌ , ಪಿಆರ್‍‌ಕೆ ಬಾಂಡ್‌ ಕೊಡದೇ ಬಡ್ಡಿ ದಂಧೆ ನಡೆಸಲಾಗುತ್ತಿದೆ. ಈ ಸಂಘದ ಅಧ್ಯಕ್ಷರಾದ ಡಾ ವೀರೇಂದ್ರ ಹೆಗ್ಡೆ ಅವರ ಬಗ್ಗೆ ಪರಿಶೀಲಿಸಿ ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಕೋರಿರುವುದು ಗೊತ್ತಾಗಿದೆ.

SUPPORT THE FILE

Latest News

Related Posts