ನಳೀನ್‌ ಕಟೀಲ್‌ರ ನಿವೇಶನಕ್ಕೆ ಶುದ್ಧಕ್ರಯ ಪತ್ರ; ಕಾನೂನು ಅಭಿಪ್ರಾಯ ಬದಿಗೊತ್ತಿ ನಿಯಮ ಸಡಿಲಿಕೆ

ಬೆಂಗಳೂರು; ಮಾಜಿ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ನಳೀನ್‌ ಕುಮಾರ್ ಕಟೀಲು ಅವರಿಗೆ ಬಿಡಿಎ ಹಂಚಿಕೆ ಮಾಡಿರುವ  ‘ಜಿ’ ಕೆಟಗರಿ ನಿವೇಶನಕ್ಕೆ ಶುದ್ಧ ಕ್ರಯ ಪತ್ರ ನೋಂದಾಯಿಸಿಕೊಡುವ ಸಂಬಂಧ ಈಗಿನ ರಾಜ್ಯ ಕಾಂಗ್ರೆಸ್ ಸರ್ಕಾರವು  ಕಾನೂನು ಇಲಾಖೆಯ ಅಭಿಪ್ರಾಯವನ್ನೇ   ಬದಿಗೊತ್ತಲು ಮುಂದಾಗಿದೆ.

 

ಗುತ್ತಿಗೆ ಅವಧಿಯಲ್ಲಿ ಶುದ್ಧ ಕ್ರಯ ಪತ್ರ ನೋಂದಾಯಿಸಿಕೊಡಲು ಅವಕಾಶವಿಲ್ಲ ಎಂದು ಕಾನೂನು ಇಲಾಖೆಯು ಸ್ಪಷ್ಟವಾಗಿ ಅಭಿಪ್ರಾಯ ನೀಡಿದೆ. ಇದನ್ನಾಧರಿಸಿ ಕೋರಿಕೆಯನ್ನು ತಿರಸ್ಕರಿಸಬೇಕಿದ್ದ ನಗರಾಭಿವೃದ್ಧಿ ಇಲಾಖೆಯು ಬಿಡಿಎನ ನಿವೇಶನ ಹಂಚಿಕೆ ನಿಯಮಗಳನ್ನು ಸಡಿಲಿಸಲು ನಿರ್ಧರಿಸಿದೆ.  ಇದೀಗ ಈ ಪ್ರಸ್ತಾವನೆಗೆ ಸಚಿವ ಸಂಪುಟದ ಒಪ್ಪಿಗೆ ಪಡೆಯಲು ಕಡತ ಮಂಡಿಸಿದೆ.

 

ಈ ಪ್ರಕರಣದ ಕುರಿತಾದ ಕಡತ ಮತ್ತು ಪ್ರಸ್ತಾವನೆಯನ್ನು ಸಚಿವ ಸಂಪುಟಕ್ಕೆ ಮಂಡಿಸಬೇಕು ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದರು ಎಂದು ಪ್ರಸ್ತಾವನೆಯಿಂದ ಗೊತ್ತಾಗಿದೆ.

 

ಈ ಸಂಬಂಧ ನಗರಾಭಿವೃದ್ಧಿ ಇಲಾಖೆಯು ಸಚಿವ ಸಂಪುಟಕ್ಕೆ ಮಂಡಿಸಿರುವ ಪ್ರಸ್ತಾವನೆಯ (ನಅಇ 183 ಬೆಂಭೂಸ್ವಾ 2024 (ಇ) 2025)  ರಹಸ್ಯ ಹಾಳೆಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಪ್ರಸ್ತಾವನೆಯಲ್ಲೇನಿದೆ?

 

ಮಾಜಿ ಲೋಕಸಭೆ ಸದಸ್ಯರಾದ ನಳೀನ್‌ ಕುಮಾರ್ ಕಟೀಲು ಅವರಿಗೆ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರವು ‘ಜಿ’ ಕೆಟಗರಿ ಅಡಿಯಲ್ಲಿ ಹೊಸೂರು ಸರ್ಜಾಪುರ ರಸ್ತೆಯ ಸೆಕ್ಟರ್‍‌ 3ನೇ ಬಡಾವಣೆಯಲ್ಲಿ 50/80  (15.10+15.25 ಅಳತೆಯ ನಿವೇಶನವನ್ನು (ಸಂಖ್ಯೆ; 13/ಬಿ1)  2011ರ ಜೂನ್‌ 2ರಂದೇ ಹಂಚಿಕೆ ಮಾಡಿತ್ತು. ನಿವೇಶನದ ಪೂರ್ಣ ಮೌಲ್ಯವನ್ನು 2012ರ ಫೆ.18ರಂದು ತಡವಾಗಿ  ಪಾವತಿಸಿದ್ದರು.

 

ನಿಗದಿತ ಅವಧಿಯಲ್ಲಿ ಪೂರ್ಣ ಮೌಲ್ಯವನ್ನು ಪಾವತಿಸದ ಕಾರಣ ಬಿಡಿಎಯು ದಂಡ ವಿಧಿಸಿತ್ತು. ದಂಡದ ಮೊತ್ತವನ್ನೂ ನಳೀನ್‌ ಕುಮಾರ್ ಕಟೀಲು ಅವರು 2012ರ ಮೇ 9ರಂದು ಪಾವತಿಸಿದ್ದರು. ಹಾಗೆಯೇ ಗುತ್ತಿಗೆ ಹಾಗೂ ಮಾರಾಟ ಒಪ್ಪಂದ ಪತ್ರವನ್ನು ನೋಂದಾಯಿಸಿಕೊಡಬೇಕು ಎಂದು ಕೋರಿದ್ದರು. ಆದರೆ ಬಿಡಿಎಯು ಗುತ್ತಿಗೆ ಹಾಗೂ ಮಾರಾಟ ಒಪ್ಪಂದ ಕರಾರು ಪತ್ರ ನೋಂದಾಯಿಸಿರಲಿಲ್ಲ.

 

ನಂತರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂದರೇ 2020ರ ನವೆಂಬರ್‍‌ 18ರಂದು ಗುತ್ತಿಗೆ ಹಾಗೂ ಮಾರಾಟ ಒಪ್ಪಂದ ಕರಾರು ಪತ್ರವನ್ನು ನೋಂದಾಯಿಸಲಾಗಿತ್ತು ಎಂಬುದು ಸಚಿವ ಸಂಪುಟಕ್ಕೆ ಮಂಡಿಸಿರುವ ಪ್ರಸ್ತಾವನೆಯಿಂದ ತಿಳಿದು ಬಂದಿದೆ.

 

ಅಲ್ಲದೇ ಇಂತಹುದೇ ಗುತ್ತಿಗೆ ಪ್ರಕರಣದಲ್ಲಿ (ಸರ್ಕಾರದ ಆದೇಶ ಸಂಖ್ಯೆ ನಅಇ 256 ಎಂಎನ್‌ಎಕ್ಸ್ 2023 (ಇ), ದಿನಾಂಕ 19.07.2024) ಸರ್ ಎಂ ವಿಶ್ವೇಶ್ವರಯ್ಯ 8ನೇ ಬ್ಲಾಕ್‌ ಬಡಾವಣೆಯಲ್ಲಿನ ನಿವೇಶನ (ಸಂಖ್ಯೆ 1312) ಮೂಲ ಹಂಚಿಕೆದಾರರಾದ ಮಾಜಿ ಶಾಸಕ ಮನೋಹರ ಐನಾಪುರ ಅವರಿಗೆ ವಿಶೇಷ ಪ್ರಕರಣವೆಂದು ಪರಿಗಣಿಸಲಾಗಿತ್ತು.

 

ಐನಾಪುರ ಪ್ರಕರಣದಲ್ಲಿ ಖಾಲಿ ನಿವೇಶನದ ದಂಡ ಶುಲ್ಕವನ್ನು ವಿಧಿಸಿ ನೋಂದಣಿ ಮಾಡಿಕೊಟ್ಟಿದ್ದ ಗುತ್ತಿಗೆಯನ್ನು ಸಡಿಲಿಸಲಾಗಿತ್ತು. ಮತ್ತು ಶುದ್ಧ ಕ್ರಯಪತ್ರವನ್ನು ನೋಂದಣಿ ಮಾಡಿಕೊಡಲಾಗಿತ್ತು. ಹೀಗಾಗಿ ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಗುತ್ತಿಗೆ ಅವಧಿ ಸಡಿಲಿಸಿ ಹಂಚಿಕೆಯಾಗಿರುವ ನಿವೇಶನದ ಶುದ್ಧ ಕ್ರಯಪತ್ರವನ್ನು ನೋಂದಣಿ ಮಾಡಿಕೊಡಬೇಕು ಎಂದೂ ನಳೀನ್‌ ಕುಮಾರ್ ಕಟೀಲು ಅವರು ಸರ್ಕಾರವನ್ನು ಕೋರಿದ್ದರು ಎಂದು ಗೊತ್ತಾಗಿದೆ.

 

ಜಿ ಕೆಟಗರಿ ನಿವೇಶನಗಳ ಹಂಚಿಕೆಗೆ ಸಂಬಂಧಿಸಿದಂತೆ ಉಚ್ಛ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು. ಹೀಗಾಗಿ ಕಟೀಲು ಅವರಿಗೆ ಹಂಚಿಕೆಯಾಗಿದ್ದ ನಿವೇಶನವನ್ನು ನೋಂದಾಯಿಸಿರಲಿಲ್ಲ. ಜಿ ಕೆಟಗರಿ ನಿವೇಶನಗಳ ಪ್ರಕರಣಗಳ ಕುರಿತು ನಿವೃತ್ತ ನ್ಯಾಯಮೂರ್ತಿ ಡಿ ವಿ ಶೈಲೇಂದ್ರಕುಮಾರ್‍‌ ನೇತೃತ್ವದ ವಿಚಾರಣೆ ಸಮಿತಿಯ ಆದೇಶದಂತೆ 2020ರ ನವೆಂಬರ್‍‌ 18ರಂದು ಗುತ್ತಿಗೆ ಹಾಗೂ ಮಾರಾಟ ಒಪ್ಪಂದ ಪತ್ರವನ್ನು ನೋಂದಾಯಿಸಿ ಸ್ವಾಧೀನ ಪತ್ರವನ್ನೂ ನೀಡಿತ್ತು.

 

ನಿವೇಶನದ ಪೂರ್ಣ ಮೌಲ್ಯವನ್ನು ಸಂದಾಯ ಮಾಡಿರುವ ಹಿನ್ನೆಲೆಯಲ್ಲಿ ಗುತ್ತಿಗೆ ಅವಧಿಯನ್ನು ಸಡಿಲಿಸಿ ಶುದ್ಧ ಕ್ರಯ ಪತ್ರ ನೋಂದಾಯಿಸಿಕೊಡಬೇಕು ಎಂದು ಕೋರಿದ್ದರು. ಆದರೆ ಕಾನೂನು ಇಲಾಖೆಯು ಇದನ್ನು ಒಪ್ಪಿರಲಿಲ್ಲ.

 

‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ನಿವೇಶನ ಹಂಚಿಕೆ ) ನಿಯಮಗಳು 1984ರ ಅನ್ವಯ ಗುತ್ತಿಗೆ ಅವಧಿಯಲ್ಲಿ ಶುದ್ಧ ಕ್ರಯ ಪತ್ರವನ್ನು ನೋಂದಾಯಿಸಿಕೊಡಲು ಅವಕಾಶವಿರುವುದಿಲ್ಲ,’ ಎಂದು ಕಾನೂನು ಇಲಾಖೆಯು ಅಭಿಪ್ರಾಯಿಸಿತ್ತು.

 

 

ಆದರೆ ನಗರಾಭಿವೃದ್ಧಿ ಇಲಾಖೆಯು ಈ ಅಭಿಪ್ರಾಯವನ್ನು ಬದಿಗೊತ್ತಿ ಸಚಿವ ಸಂಪುಟಕ್ಕೆ ಪ್ರಸ್ತಾವನೆಯನ್ನು ಮಂಡಿಸಿದೆ.

 

‘ಆದರೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ನಿವೇಶನಗಳ ಹಂಚಿಕೆ) ನಿಯಮಗಳು 1984ನ್ನು ಸಡಿಲಿಸಿ ವಿಶೇಷ ಪ್ರಕರಣವೆಂದು ಪರಿಗಣಿಸಿ ನಳೀನ್‌ ಕುಮಾರ್ ಕಟೀಲು ಅವರಿಗೆ ಬಿಡಿಎನಿಂದ ಜಿ ಪ್ರವರ್ಗದಡಿ ಹಂಚಿಕೆಯಾಗಿರುವ ನಿವೇಶನವನ್ನು ಗುತ್ತಿಗೆ ಅವಧಿಯಲ್ಲಿ ಶುದ್ಧ ಕ್ರಯ ಪತ್ರ ನೋಂದಾಯಿಸಿಕೊಡಲು ಅನುಮತಿ ನೀಡುವ ಪ್ರಸ್ತಾವನೆಯನ್ನು ಸಚಿವ ಸಂಪುಟದ ಮುಂದೆ ಮಂಡಿಸಿ ಸೂಕ್ತ ನಿರ್ಣಯ ಕೈಗೊಳ್ಳಬೇಕಾಗಿರುತ್ತದೆ,’ ಎಂದು ನಗರಾಭಿವೃದ್ಧಿ ಇಲಾಖೆಯು ಪ್ರತಿಕ್ರಿಯಿಸಿತ್ತು. ಇದಕ್ಕೆ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಅನುಮೋದಿಸಿದ್ದರು  ಎಂಬುದು ತಿಳಿದು ಬಂದಿದೆ.

 

ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಅನುಮೋದನೆ ನೀಡಿರುವ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಇಲಾಖೆಯು ಸಚಿವ ಸಂಪುಟಕ್ಕೆ ಕಡತ ಮಂಡಿಸಿದೆ. ಇದರಲ್ಲಿ ಎರಡು ಅಂಶಗಳಿಗೆ ಅನುಮೋದನೆ ಪಡೆಯಲು ಕೋರಿದೆ.

 

ಗುತ್ತಿಗೆ ಅವಧಿಯಲ್ಲಿ ಶುದ್ಧ ಕ್ರಯಪತ್ರವನ್ನು ನೋಂದಾಯಿಸಿಕೊಡಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಿವೇಶನಗಳ ಹಂಚಿಕೆ ನಿಯಮಗಳು 1984 ರಡಿ ಅವಕಾಶವಿಲ್ಲದೇ ಇರುವುದರಿಂದ ಈ ಪ್ರಸ್ತಾವನೆಯನ್ನು ತಿರಸ್ಕರಿಸಬೇಕು.

 

 

ಅಥವಾ ಈ ಪ್ರಕರಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಶುದ್ಧ ಕ್ರಯ ಪತ್ರವನ್ನು ನೋಂದಾಯಿಸಿಕೊಡಲು ಅನುಮತಿ ನೀಡಬೇಕು ಎಂದು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಸ್‌ ಆರ್ ಉಮಾಶಂಕರ್ ಅವರು ಕೋರಿರುವುದು ಸಚಿವ ಸಂಪುಟದ ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

SUPPORT THE FILE

Latest News

Related Posts