ಬೆಂಗಳೂರು; ವಿಧಾನಸೌಧದ ಕೂಗಳತೆ ದೂರದಲ್ಲಿರುವ ಲೋಕೋಪಯೋಗಿ ಇಲಾಖೆಯ ಬಹು ಮಹಡಿ ಕಟ್ಟಡದಲ್ಲಿರುವ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಇಂಜಿನಿಯರ್‍ಗಳಿಗೆ ಗುತ್ತಿಗೆದಾರರಿಬ್ಬರು ಬೆದರಿಕೆ ಒಡ್ಡಿರುವ ಪ್ರಕರಣವು ಇದೀಗ ಬಹಿರಂಗವಾಗಿದೆ.
ಲೋಕೋಪಯೋಗಿ ಇಲಾಖೆಯ ವಿವಿಧ ಕಾಮಗಾರಿಗಳನ್ನು ನಡೆಸುತ್ತಿರುವ ಗುತ್ತಿಗೆದಾರರಿಬ್ಬರು, ಅಸಭ್ಯ, ವಿಚಿತ್ರ ನಡವಳಿಕೆ ಪ್ರದರ್ಶಿಸಿದ್ದಾರೆ ಮತ್ತು ಅವರನ್ನು ಪ್ರಶ್ನಿಸಿದ್ದ ಮಹಿಳಾ ಇಂಜಿನಿಯರ್ ಒಬ್ಬರನ್ನು ಎತ್ತಂಗಡಿ ಮಾಡಿಸಲಾಗುವುದು ಎಂದು ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ಲಿಖಿತ ದೂರನ್ನೂ ನೀಡಿದ್ದಾರೆ.
ಈ ಕುರಿತು ಇಬ್ಬರು ಮಹಿಳಾ ಇಂಜಿನಿಯರ್‍ಗಳಿಬ್ಬರು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್ ಮತ್ತು ವಿಧಾನಸೌಧ ಪೊಲೀಸ್ ಠಾಣೆಗೆ ಲಿಖಿತ ದೂರು ಸಲ್ಲಿಸಿದ್ದಾರೆ. ಈ ದೂರನ್ನಾಧರಿಸಿ ಆಪಾದಿತ ಗುತ್ತಿಗೆದಾರೊಬ್ಬರ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಮಹಿಳಾ ಇಂಜಿನಿಯರ್‍ಗಳಿಬ್ಬರು ಸಲ್ಲಿಸಿರುವ ಲಿಖಿತ ದೂರು ಮತ್ತು ಎಫ್‌ಐಆರ್ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಅಶ್ವಿನಿ ಲಕ್ಷ್ಮಯ್ಯ ಮತ್ತು ಪೂರ್ಣಿಮಾ ಎಂಬುವರು ಪ್ರತ್ಯೇಕವಾದ ದೂರುಗಳನ್ನು ಸಲ್ಲಿಸಿದ್ದರು. ಹಿರಿಯ ಅಧಿಕಾರಿಗಳು ಸಚಿವ ಸತೀಶ್ ಜಾರಕಿಹೊಳಿ ಅವರೊಂದಿಗೆ ಈ ಪ್ರಕರಣದ ಕುರಿತು ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.
ಅಶ್ವಿನಿ ಲಕ್ಷ್ಮಯ್ಯ ಎಂಬುವರು ಸಲ್ಲಿಸಿದ್ದ ದೂರಿನ ಮೇಲೆಯೇ ‘ಇಬ್ಬರು ಕಂಟ್ರಾಕ್ಟರ್‍ಗಳ ಮೇಲೆ ಕಾನೂನಿನಂತೆ ತುರ್ತು ಕ್ರಮ ಕೈಗೊಂಡು ಇನ್ನು ಮುಂದೆ ಮಹಿಳಾ ಸಿಬ್ಬಂದಿಗಳಿಗೆ ಭದ್ರತೆ ಬಗ್ಗೆ ಕಟ್ಟುನಿಟ್ಟಿನ ಕ್ರಮಕೈಗೊಂಡು ವರದಿ ನೀಡಬೇಕು,’ ಎಂದು ಖುದ್ದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್ ಅವರು ಸೂಚಿಸಿದ್ದಾರೆ.
ಪಿಡಬ್ಲ್ಯೂಡಿ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಅಶ್ವಿನಿ ಲಕ್ಷ್ಮಯ್ಯ ಎಂಬುವರು 2024ರ ಆಗಸ್ಟ್ 27ರಂದು ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ನಂಜಪ್ಪ ಮತ್ತು ಸಂಗಮೇಶ್ ಎಂಬ ಇಬ್ಬರು ಪಿಡಬ್ಲ್ಯೂಡಿ ಗುತ್ತಿಗೆದಾರರು ಅವಾಚ್ಯ ಪದಗಳಿಂದ ಜೋರಾಗಿ ಮಾತನಾಡಿದ್ದರು. ಇದನ್ನು ಪ್ರಶ್ನಿಸಿದ್ದ ಅಶ್ವಿನಿ ಲಕ್ಷ್ಮಯ್ಯ ಅವರು ಸೌಜನ್ಯದಿಂದ ವರ್ತಿಸಲು ಕೋರಿದ್ದರು. ಆದರೆ ಗುತ್ತಿಗೆದಾರರು ‘ಲೇಡಿಸ್ ತರಹ ಬಿಹೇವ್ ಮಾಡುವುದನ್ನು ಕಲಿಯಿರಿ,’ ಎಂದು ಏರು ದನಿಯಲ್ಲಿ ಹೇಳಿದ್ದರು ಎಂದು ದೂರಿನಲ್ಲಿ ಘಟನೆಯನ್ನು ವಿವರಿಸಿರುವುದು ಗೊತ್ತಾಗಿದೆ.
ಗುತ್ತಿಗೆದಾರರ ಏರು ದನಿಗೆ ಪ್ರತ್ಯುತ್ತರ ನೀಡಿದ್ದ ಮಹಿಳಾ ಇಂಜಿನಿಯರ್ ‘ ಸ್ವಾಮಿ ಯಾವುದೇ ಮಹಿಳಾ ಅಧಿಕಾರಿಗಳು ಹೇಗೆ ಲೇಡೀಸ್ ತರಹ ಬಿಹೇವ್ ಮಾಡಬೇಕು ಎಂದು ಯಾವುದೇ ಕಾನೂನಿನಲ್ಲಿ ಹೇಳಲಾಗಿಲ್ಲ,’ ಎಂದು ಉತ್ತರಿಸಿದ್ದರು. ಈ ಸಂಬಂಧ ಮಾತಿಗೆ ಮಾತು ಬೆಳೆಸಿದ್ದ ಗುತ್ತಿಗೆದಾರರಿಬ್ಬರು ‘ ನಿಮ್ಮನ್ನು ಈ ಕಾರ್ಯಸ್ಥಳದಿಂದ ಹೇಗೆ ಎತ್ತಂಗಡಿ ಮಾಡಿಸಬೇಕು ಎಂಬುದು ನಮಗೆ ತಿಳಿದಿದೆ,’ ಎಂದು ಬೈಯುತ್ತಾ ವಿಚಿತ್ರವಾದ ಹಾಗೂ ಅಸಭ್ಯವಾಗಿ ನಡೆದುಕೊಂಡಿದ್ದರು ಎಂದು ದೂರಿನಲ್ಲಿ ವಿವರಿಸಿಲಾಗಿದೆ.
ಅಲ್ಲದೇ ಟೆಂಡರ್ ನೋಟಿಫಿಕೇಷನ್ ಪ್ರತಿಯನ್ನು ನೀಡಬೇಕು ಎಂದು ಎಕ್ಸಿಕ್ಯೂಟಿವ್ ಇಂಜಿನಿಯರ್ ಜತೆ ಮಾತನಾಡಬೇಕು ಎಂದು ಬಲವಂತ ಮಾಡಿದ್ದರು ಎಂದೂ ದೂರಿನಲ್ಲಿ ಹೇಳಲಾಗಿದೆ.
‘ನಾವುಗಳು ಸಂಸ್ಕಾರವಂತ ಹಾಗೂ ಸದ್ಗಹೃಸ್ಥ ಕುಟುಂಬದಿಂದ ಬಂದವರಾಗಿದ್ದು ಈ ಕಚೇರಿ ಕರ್ತವ್ಯದ ಒತ್ತಡದಡಿಯಲ್ಲಿ ದಿನನಿತ್ಯ ಸರಿ ಸುಮಾರು 7ರಿಂದ 8 ಗಂಟೆ ರಾತ್ರಿವರೆಗೂ ಕಚೇರಿಯಲ್ಲಿ ಒಬ್ಬೊಬ್ಬರೇ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಇಂತಹ ಸನ್ನಿವೇಶಗಳು ನಮ್ಮ ಸುರಕ್ಷತೆ ಮತ್ತು ಕೆಲಸ ಕಾರ್ಯಗಳಿಗೆ ಅಡಚಣೆಯಾಗಿರುತ್ತದೆ. ಇಂತಹವರುಗಳ ವರ್ತನೆಯಿಂದ ತಡವಾದ ಸಮಯದವರೆಗೂ ಕೆಲಸ ಮಾಡುವುದು ಕಷ್ಟ ಸಾಧ್ಯವಾಗಿದೆ. ಇದರಿಂದ ಮುಂದೆ ಯಾವುದಾದರೂ ಅನಾಹುತಗಳು ಆಗಬಹುದೆಂಬ ಭಯವೂ ನಮ್ಮಲ್ಲಿ ಉಂಟಾಗಿದೆ,’ ಎಂದು ದೂರಿನಲ್ಲಿ ಅಳಲು ತೋಡಿಕೊಂಡಿರುವುದು ಗೊತ್ತಾಗಿದೆ.
ಗುತ್ತಿಗೆದಾರರಾದ ನಂಜಪ್ಪ ಮತ್ತು ಸಂಗಮೇಶ್ ಅವರ ವಿರುದ್ಧ ಸೂಕ್ತ ಶಿಸ್ತಿನ ಕ್ರಮ ಕೈಗೊಳ್ಳಬೇಕು ಮತ್ತು ಮಹಿಳಾ ಅಧಿಕಾರಿಗಳು ಮತ್ತು ನೌಕರರು ನಿರ್ಭೀತಿಯಿಂದ ಸರ್ಕಾರದ ಕರ್ತವ್ಯಗಳನ್ನು ನಿರ್ವಹಿಸಲು ಅನುವು ಮಾಡಿಕೊಡಬೇಕು ಎಂದೂ ದೂರಿನಲ್ಲಿ ಕೋರಿರುವುದು ತಿಳಿದು ಬಂದಿದೆ.
ಅದೇ ರೀತಿ ಇದೇ ಸಂಗಮೇಶ್ ಎಂಬ ಗುತ್ತಿಗೆದಾರ, ಹೈಕೋರ್ಟ್ ಸ್ಪೆಷಲ್ ಬಿಲ್ಡಿಂಗ್‌ನ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಪೂರ್ಣಿಮಾ ನೆಲಗಳಿ ಎಂಬುವರ ಬಳಿಯೂ ಮಹಿಳೆಯ ಘನತೆಗೆ ಕುಂದು ಬರುವ ರೀತಿಯಲ್ಲಿ ವರ್ತಿಸಿದ್ದಾರೆ ಎಂದು ದೂರಲಾಗಿದೆ. ಈ ಸಂಬಂಧ ಪೂರ್ಣಿಮಾ ಅವರು ವಿಧಾನಸೌಧ ಪೊಲೀಸ್ ಠಾಣೆಗೆ 2025ರ ಜನ ಜನವರಿ 10ರಂದು ದೂರು ಸಲ್ಲಿಸಿದ್ದಾರೆ.
ಪೂರ್ಣಿಮಾ ಅವರ ದೂರಿನಲ್ಲೇನಿದೆ?
2025ರ ಜನವರಿ 4ರಂದು ಪೂರ್ಣಿಮಾ ಅವರು ಕಚೇರಿಯಲ್ಲಿ ನಡೆಯುತ್ತಿದ್ದ ಆನ್‌ಲೈನ್ ಸಭೆಯಲ್ಲಿ ಭಾಗಿಯಾಗಿದ್ದರು. ಈ ವೇಳೆಯಲ್ಲಿ ಸಂಗಮೇಶ್ ಎಂಬುವರು ಕಚೇರಿಗೆ ಸುಮಾರು ಮಧ್ಯಾಹ್ನ 12 ಗಂಟೆಗೆ ಬಂದಿದ್ದರು. ಬೈಯಪ್ಪನಹಳ್ಳಿ ಜ್ಯುಡಿಷಿಯಲ್ ಕ್ವಾಟ್ರರ್ಸ್ ವರ್ಕ್‌ಗೆ ಸಂಬಂಧಿಸಿದಂತೆ ಮಾಹಿತಿ ಕೇಳಿದ್ದರು. ಆನ್‌ಲೈನ್ ಮೀಟಿಂಗ್ ಮುಗಿದ ಮೇಲೆ ಚರ್ಚಿಸೋಣ ಎಂದು ಪೂರ್ಣಿಮಾ ಅವರು ಹೇಳಿದ್ದರು.
ಆದರೆ ಸಂಗಮೇಶ್ ಅವರು ‘ ನನ್ನ ಕಡೆ ಬೆರಳು ತೋರಿಸುತ್ತಾ ನನ್ನ ಘನತೆಗೆ ಧಕ್ಕೆ ಬರುವ ರೀತಿಯಲ್ಲಿ ನನ್ನ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆ. ಇದರಿಂದ ನನ್ನ ಕಚೇರಿಯ ಕರ್ತವ್ಯಕ್ಕೆ ಅಡ್ಡಿಯುಂಟಾಗಿರುತ್ತದೆ. ಅಲ್ಲದೇ ನನ್ನನ್ನು ಒಬ್ಬ ಮಹಿಳೆ ಎಂಬುದನ್ನೂ ಅರಿಯದೇ ನನಗೆ ಕುಂದು ಬರುವ ರೀತಿಯಲ್ಲಿ ಏಕವಚನದಲ್ಲಿ ಮಾತನಾಡಿದ್ದಾರೆ. ಇದರಿಂದ ನನ್ನ ಘನತೆಗೆ ಧಕ್ಕೆಯುಂಟಾಗಿದೆ,’ ಎಂದು ಪೂರ್ಣಿಮಾ ಅವರು ದೂರಿನಲ್ಲಿ ಘಟನೆಯನ್ನು ವಿವರಿಸಿರುವುದು ತಿಳಿದು ಬಂದಿದೆ.
ಅಲ್ಲದೇ ‘ಕಚೇರಿ ಕರ್ತವ್ಯದ ಒತ್ತಡದಡಿಯಲ್ಲಿ ದಿನನಿತ್ಯ ಸುಮಾರು ರಾತ್ರಿ 8 ಗಮಟೆವರೆಗ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಇಂತಹ ಸನ್ನಿವೇಶಗಳು ನಮ್ಮ ಸರಕ್ಷತೆ ಮತ್ತು ಕೆಲಸ ಕಾರ್ಯಗಳಿಗೆ ಅಡಚಣೆ ಮಾಡುತ್ತಿವೆ. ಅವರುಗಳ ವರ್ತನೆಯಿಂದ ತಡವಾದ ಸಮಯದವರೆಗೂ ಕೆಲಸ ಮಾಡುವುದು ಕಷ್ಟಸಾಧ್ಯವಾಗಿದೆ. ಇದರಿಂದ ಮುಂದೆ ಯಾವುದಾದರೂ ಅನಾಹುತಗಳು ಆಗಬಹುದು ಎಂಬ ಭಯವೂ ನನ್ನಲ್ಲಿ ಉಂಟಾಗಿದೆ,’ ಎಂದು ವಿಧಾನಸೌಧ ಪೊಲೀಸ್ ಠಾಣೆಗೆ ಸಲ್ಲಿಸಿರುವ ದೂರಿನಲ್ಲಿ ಅಳಲು ತೋಡಿಕೊಂಡಿರುವುದು ಗೊತ್ತಾಗಿದೆ.
ಇದನ್ನಾಧರಿಸಿ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಸಂಗಮೇಶ್ ಎಂಬ ಗುತ್ತಿಗೆದಾರರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಸಂಗಮೇಶ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ 2023ರ ಸೆಕ್ಷನ್ 132 ಮತ್ತು 7ರ ಅಡಿಯಲ್ಲಿ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.