40 ಪರ್ಸೆಂಟ್‌ ಕಮಿಷನ್‌ ಆರೋಪ; ಅಂಬಿಕಾಪತಿ ಆರೋಪ ಆಧಾರರಹಿತ, ಶುದ್ಧ ಸುಳ್ಳೆಂದ ಲೋಕಾ ಪೊಲೀಸ್‌ ತನಿಖೆ

ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಗುತ್ತಿಗೆದಾರ ಸಂಘದ ಉಪಾಧ್ಯಕ್ಷ ಅಂಬಿಕಾಪತಿ ಅವರು ಬಿಬಿಎಂಪಿಗೆ ಸಂಬಂಧಿಸಿದಂತೆ ಮಾಡಿದ್ದ 40 ಪರ್ಸೆಂಟ್‌ ಕಮಿಷನ್‌ ಆರೋಪಗಳು ಆಧಾರರಹಿತವಾಗಿವೆ ಎಂದು ಲೋಕಾಯುಕ್ತ ತನಿಖಾಧಿಕಾರಿಗಳು ವರದಿ ಸಲ್ಲಿಸಿರುವುದು ಇದೀಗ ಬಹಿರಂಗವಾಗಿದೆ.

 

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಬಿಬಿಎಂಪಿಯಲ್ಲಿ 40 ಪರ್ಸೆಂಟ್‌ ಕಮಿಷನ್‌ ಹಣಕ್ಕೆ ಬೇಡಿಕೆ ಇಡಲಾಗಿತ್ತು ಎಂದು ಅಂಬಿಕಾಪತಿ ಅವರು ಆರೋಪ ಮಾಡಿದ್ದರು. ಇದನ್ನೇ ಪ್ರತ್ಯಾಸ್ತ್ರವನ್ನಾಗಿ ಮಾಡಿಕೊಂಡಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆದಿಯಾಗಿ ಇಡೀ ಕಾಂಗ್ರೆಸ್‌ ಪಕ್ಷವು  ಬಿಜೆಪಿ ಸರ್ಕಾರದ ಮೇಲೆ ಮುಗಿಬಿದ್ದಿತ್ತು.

 

ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿಯೇ ತನಿಖೆ ನಡೆಸಿರುವ ಕರ್ನಾಟಕ ಲೋಕಾಯುಕ್ತ ಪೊಲೀಸರು ಇದೀಗ ಅಂಬಿಕಾಪತಿ ಮಾಡಿದ್ದ ಆರೋಪಗಳೇ ಆಧಾರರಹಿತವಾಗಿವೆ ಎಂದು ತನಿಖಾ ವರದಿಯನ್ನು ಲೋಕಾಯುಕ್ತಕ್ಕೆ ಸಲ್ಲಿಸಿದ್ದಾರೆ. ಅಲ್ಲದೇ ಲೋಕಾಯುಕ್ತ ಪೊಲೀಸರ ತನಿಖಾ ವರದಿಯನ್ನು ಲೋಕಾಯುಕ್ತರು ಅನುಮೋದಿಸಿದ್ದಲ್ಲಿ ದೂರಿನಲ್ಲಿ ತನಿಖೆ ಕೈಗೊಳ್ಳಬೇಕಾದ ಅಂಶ ಯಾವುದೂ ಇಲ್ಲ ಎಂದು ಮುಕ್ತಾಯಗೊಳಿಸಬಹುದು ಎಂದು ಕಡತವನ್ನು ಮಂಡಿಸಿದೆ.

 

ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾಗಿರುವ ಹತ್ತಾರು ಅಕ್ರಮಗಳ ಕುರಿತು ತನಿಖಾ ಆಯೋಗ ಮತ್ತು ವಿಶೇಷ ತನಿಖಾ ತಂಡಗಳನ್ನು ರಚನೆ ಮಾಡಲಾಗಿದೆ. ಇದರ ಬೆನ್ನಲ್ಲೇ 40 ಪರ್ಸೆಂಟ್‌ ಕಮಿಷನ್‌ ಆರೋಪದ ಕುರಿತು ಅಂಬಿಕಾಪತಿ ಅವರ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ವರದಿಯೂ ಮುನ್ನೆಲೆಗೆ ಬಂದಿದೆ.

 

ಹಿಂದಿನ ಬಿಜೆಪಿ ಸರ್ಕಾರವು ಅಂಬಿಕಾಪತಿ ಅವರು ಮಾಡಿದ್ದ ಆರೋಪಗಳ ಕುರಿತು ತನಿಖೆ ನಡೆಸಲು ಲೋಕಾಯುಕ್ತಕ್ಕೆ ವಹಿಸಿ ಆದೇಶಿಸಿತ್ತು. ಈ ಕುರಿತು ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು 2024ರ ಜುಲೈ 24ರಂದೇ ವರದಿ ಸಲ್ಲಿಸಿರುವುದು ಗೊತ್ತಾಗಿದೆ.

 

ವರದಿಯಲ್ಲೇನಿದೆ?

 

ಅಂಬಿಕಾಪತಿ ಅವರು ಕಳೆದ 6 ವರ್ಷಗಳಲ್ಲಿ ಬಿಬಿಎಂಪಿ ಪೂರ್ವ ವಿಭಾಗದಲ್ಲಿ ಆಟದ ಮೈದಾನಕ್ಕೆ ಸಂಬಂಧಿಸಿದ ಗುತ್ತಿಗೆ ಪಡೆಯದೇ ಇರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಬಗ್ಗೆ ಬಿಬಿಎಂಪಿಯ ಕಾರ್ಯಾದೇಶ (ಸಂ.ಇಇ ಡಬ್ಲ್ಯೂಓ/30/2019-20 ದಿ. 05.08.2019ರ ಬಗ್ಗೆ/ದಾಖಲಾತಿ) ಗಳನ್ನು ಪೊಲೀಸರು ಪರಿಶೀಲನೆ ಮಾಡಿದ್ದಾರೆ. ಈ ದಾಖಲೆಗಳ ಪ್ರಕಾರ ಆಟದ ಮೈದಾನದ ಕಾಮಗಾರಿಯನ್ನು ಗುತ್ತಿಗೆದಾರ ಎನ್‌ ಎಂ ಕೃಷ್ಣಮೂರ್ತಿ ಅವರು ಪೂರ್ಣಗೊಳಿಸಿದ್ದಾರೆ ಎಂದು ವರದಿಯಲ್ಲಿ ಲೋಕಾಯುಕ್ತ ಪೊಲೀಸರು ಉಲ್ಲೇಖಿಸಿರುವುದು ಗೊತ್ತಾಗಿದೆ.

 

‘ಅಂಬಿಕಾಪತಿ ಅವರು ಇತರೆ ಕಾಮಗಾರಿಗಳನ್ನು ಗುತ್ತಿಗೆ ಪಡೆದಿರುವ ಬಗ್ಗೆ ಸಂಬಂಧಪಟ್ಟ ಇಲಾಖೆಯಲ್ಲಿ ಮಾಹಿತಿ ಕೇಳಲಾಗಿ ಅಂಬಿಕಾಪತಿ ಅವರು ಇತರೆ ಯಾವುದೇ ಕಾಮಗಾರಿಯನ್ನು ಗುತ್ತಿಗೆ ಪಡೆಯದೇ ಇರುವ ಬಗ್ಗೆ ಬಿಬಿಎಂಪಿ ಪೂರ್ವ ವಿಭಾಗದವರು ಸಲ್ಲಿಸಿರುವ ದಾಖಲಾತಿಗಳಿಂದ ಕಂಡುಬಂದಿರುತ್ತದೆ,’ ಎಂದು ಟಿಪ್ಪಣಿ ಹಾಳೆಯಲ್ಲಿಯಲ್ಲಿ ಪ್ರಸ್ತಾವಿಸಿರುವುದು ತಿಳಿದು ಬಂದಿದೆ.

 

 

ಎನ್‌ ಎಂ ಕೃಷ್ಣಮೂರ್ತಿ ಅವರಿಗೆ 5,20,25,492.70 ರು ಮೊತ್ತಕ್ಕೆ ಕಾಮಗಾರಿ ನೀಡಲಾಗಿದೆ. ಈ ಕಾಮಗಾರಿಯು ಪೂರ್ಣಗೊಂಡಿದೆ. ಟೆಂಡರ್‍‌ ಪಾಸ್‌ ಮಾಡುವ ಸಂಬಂಧ ಯಾವುದೇ ಅಧಿಕಾರಿಗೆ ಲಂಚದ ಹಣ ನೀಡಿರುವುದಿಲ್ಲ. ನಿಯಮಾನುಸಾರ ಟೆಂಡರ್ ಪಡೆದು ಕಾಮಗಾರಿ ಪೂರ್ಣಗೊಳಿಸಲಾಗಿದೆ ಎಂದು ಪೊಲೀಸರಿಗೆ ಹೇಳಿಕೆ ನೀಡಿರುವುದು ವರದಿಯಿಂದ ಗೊತ್ತಾಗಿದೆ.

 

ಈ ಹೇಳಿಕೆಯನ್ನು ಪರಿಗಣಿಸಿರುವ ಲೋಕಾಯುಕ್ತ ಪೊಲೀಸರು ಅಂಬಿಕಾಪತಿ ಅವರು ಈ ಪ್ರಕರಣದಲ್ಲಿ ಮಾಡಿದ್ದ ಆರೋಪವು ಆಧಾರರಹಿತವಾಗಿದೆ ಎಂದು ತೀರ್ಮಾನಿಸಿರುವುದು ತಿಳಿದು ಬಂದಿದೆ.

 

 

‘ಆಟದ ಮೈದಾನದ 5 ಕೋಟಿ ರು. ಕಾಮಗಾರಿ ಗುತ್ತಿಗೆ ಪಡೆಯಲು ಬಿಬಿಎಂಪಿ ಪೂರ್ವ ಉಪ ವಿಭಾಗದ ಅಧಿಕಾರಿಗಳು ಮತ್ತು ಮಧ್ಯವರ್ತಿಗಳಿಗೆ ಕಮಿಷನ್‌ ರೂಪದಲ್ಲಿ ಲಂಚ ನೀಡಿರುವ ಬಗ್ಗೆ ಯಾವುದೇ ತರಹದ ಕಾಮಗಾರಿಗಳ ಗುತ್ತಿಗೆ ಸಹ ಪಡೆದಿರುವುದಿಲ್ಲ ಎಂದು ಬಿಬಿಎಂಪಿಯು ಸಲ್ಲಿಸಿಕೊಂಡಿದೆ. ಇದು ದಾಖಲಾತಿಗಳ ಪರಿಶೀಲನೆಯಿಂಲೂ ಕಂಡುಬಂದಿರುತ್ತದೆ. ಅಂಬಿಕಾಪತಿ ಅವರು ಮರಣ ಹೊಂದಿರುವ ಕಾರಣ ಇವರಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಇವರು ಮಾಡಿರುವ ಆಪಾದನೆಗಳಿಗೆ ಪೂರಕ ಮಾಹಿತಿ, ದಾಖಲಾತಿಗಳು ದೊರಕದ ಕಾರಣ ಮೇಲ್ನೋಟಕ್ಕೆ ಈ ಆಪಾದನೆಯು ಸಾಬೀತಾಗಿರುವುದಿಲ್ಲ,’ ಎಂದು ಪೊಲೀಸರು ತಮ್ಮ ವರದಿಯಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.

 

ಕಮಿಷನ್‌ ಮತ್ತು ಲಂಚದ ಆರೋಪ ಮಾಡಿದ್ದ ಅಂಬಿಕಾಪತಿ ಅವರು ಖಾಸಗಿ ಸುದ್ದಿವಾಹಿನಿಗೆ ಸಂದರ್ಶನ ನೀಡಿದ್ದರು. ಇದನ್ನಾಧರಿಸಿ ತನಿಖೆ ನಡೆಸಿ ವರದಿ ಸಲ್ಲಿಸಬೇಕು ಎಂದು ಸರ್ಕಾರಿ ಆದೇಶ ಹೊರಡಿಸಿತ್ತು. ಆದರೆ ಅಂಬಿಕಾಪತಿ ಅವರು ಯಾವ ದಿನಾಂಕದಂದು ಸುದ್ದಿವಾಹಿನಿಗೆ ಸಂದರ್ಶನ ನೀಡಿರುತ್ತಾರೆ ಎಂದು ಸರ್ಕಾರಿ ಆದೇಶದಲ್ಲಿ ಉಲ್ಲೇಖಿಸಿರಲಿಲ್ಲ ಎಂದು ಪ್ರಸ್ತಾವಿಸಿದೆ.

 

ಅಲ್ಲದೆ 2022 ಮತ್ತು ಹಿಂದಿನ 5 ವರ್ಷಗಳ ಹಿಂದಿನ ಅವದಿಯಲ್ಲಿಯೂ ಅಂಬಿಕಾಪತಿ ಅವರು ಬಿಬಿಎಂಪಿಯ ಪೂರ್ವ ವಲಯ ಮತ್ತು ಬಿಬಿಎಂಪಿಯ ಇತರೆ ವಲಯಗಳಲ್ಲಿ ಯಾವುದೇ ಕಾಮಗಾರಿಯ ಗುತ್ತಿಗೆಯನ್ನು ಪಡೆದಿರುವುದಿಲ್ಲ ಎಂದು ಪೊಲೀಸರು ತಮ್ಮ ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

ಹಾಗೆಯೇ ಅಂಬಿಕಾಪತಿ ಅವರ ಮಗ ಪ್ರದೀಪ್‌ ಅವರೂ ಸಹ ತಮ್ಮ ತಂದೆಯ ಗುತ್ತಿಗೆ ಕಾಮಗಾರಿ ಕೆಲಸಗಳ ಬಗ್ಗೆ ತನಿಖೆಗೆ ಯಾವುದೆ ಮಾಹಿತಿಗಳಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಹೀಗಾಗಿ 2022ಕ್ಕಿಂತ ಹಿಂದಿನ 5 ವರ್ಷಗಳ ಅವಧಿಯಲ್ಲಿ ಯಾವುದೇ ಕಾಮಗಾರಿ ಗುತ್ತಿಗೆಯನ್ನು ಅಂಬಿಕಾಪತಿ ಅವರು ಪಡೆದಿಲ್ಲ. ಹೀಗಾಗಿ ಖಾಸಗಿ ಸುದ್ದಿವಾಹಿನಿಗೆ ನೀಡಿದ್ದ ಸಂದರ್ಶನದಲ್ಲಿ ಮಾಡಿದ್ದ ಆರೋಪಗಳು ಶುದ್ದ ಸುಳ್ಳು ಆಗಿರುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.

 

 

‘ಈ ವರದಿಯನ್ನು ಲೋಕಾಯುಕ್ತರು ಅನುಮೋದಿಸಿದ್ದಲ್ಲಿ ಕರ್ನಾಟಕ ಲೋಕಾಯುಕ್ತ ಪೊಲೀಸರ ತನಿಖಾ ವರದಿಯನ್ನು ಒಪ್ಪಿಕೊಂಡು ಈ ದೂರಿನಲ್ಲಿ ತನಿಖೆ ಕೈಗೊಲ್ಳಬೇಕಾದ ಅಂಶ ಯಾವುದು ಇರುವುದಿಲ್ಲ ಎಂದು ಈ ದೂರನ್ನು ಮುಕ್ತಾಯಗೊಳಿಸಬಹುದಾಗಿದೆ,’ ಎಂದು ಟಿಪ್ಪಣಿ ಹಾಳೆಯಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.

 

ಕಾಂಗ್ರೆಸ್‌ ಪಕ್ಷವು ಎರಡನೇ ಬಾರಿ ಅಧಿಕಾರಕ್ಕೆ ಬಂದ ಆರಂಭದಲ್ಲಿ ಅಂಬಿಕಾಪತಿ ಅವರ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆಯಲ್ಲಿ 44 ಕೋಟಿ ರು ನಗದು ಪತ್ತೆಯಾಗಿತ್ತು. ಈ ಹಣವನ್ನು ಕಾರಿನಲ್ಲಿ ತೆಲಂಗಾಣ ಹಾಗೂ ತಮಿಳುನಾಡಿಗೆ ಸಾಗಿಸಲು ಸಿದ್ಧತೆಯಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು.
ಗುತ್ತಿಗೆದಾರರಾಗಿದ್ದ ಅಂಬಿಕಾಪತಿ, ಕೆಲ ರಾಜಕಾರಣಿಗಳ ವಿರುದ್ಧ ಕಮಿಷನ್‌ ದಂಧೆಯ ಆರೋಪ ಮಾಡಿದ್ದರು.

 

ತಮ್ಮ ವಿರುದ್ಧ ಕಮಿಷನ್‌ ಆರೋಪ ಮಾಡಿದ್ದ ಅಂಬಿಕಾಪತಿ ವಿರುದ್ಧ ಬಿಜೆಪಿ ಶಾಸಕ ಮುನಿರತ್ನ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈ ಪ್ರಕರಣದಲ್ಲಿ ವೈಯಾಲಿಕಾವಲ್‌ ಠಾಣೆ ಪೊಲೀಸರು ಅಂಬಿಕಾಪತಿ ಅವರನ್ನು ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು.

 

ಅಂಬಿಕಾಪತಿ ಅವರು ಇನ್ನೊಬ್ಬ ಪ್ರಮುಖ ಗುತ್ತಿಗೆದಾರರಾದ ಡಿ.ಕೆಂಪಣ್ಣ ಅವರ ನೇತೃತ್ವದ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ರಾಜ್ಯ ಸರ್ಕಾರದ ಸಚಿವರು ಗುತ್ತಿಗೆ ಕಾಮಗಾರಿಯಲ್ಲಿ ಶೇ.40ರಷ್ಟು ಕಮಿಷನ್‌ಗೆ ಬೇಡಿಕೆ ಇಟ್ಟಿದ್ದಾರೆ ಎಂದು ಕೆಂಪಣ್ಣ ಪ್ರಧಾನಿಗೆ ಪತ್ರ ಬರೆಯುವ ಮೂಲಕ ಗಮನ ಸೆಳೆದಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts