Friday | April 24, 2026 |

ಬ್ರಾಂಡೆಡ್ ಔಷಧಿ ಮಾರಾಟ, ರೋಗಿಗಳಿಂದ ಹಣ ವಸೂಲಿ, ಖಾಸಗಿ ಅಂಬ್ಯುಲೆನ್ಸ್ ಜಾಲ, ಪ್ರಭಾವವಿದ್ದರೇ ಐಸಿಯು ಹಾಸಿಗೆ; ವಿಕ್ಟೋರಿಯಾ ನರಕ ದರ್ಶನ ಮಾಡಿಸಿದ ಲೋಕಾ ತನಿಖೆ

ಬೆಂಗಳೂರು; ಬೆಂಗಳೂರು ನಗರದ ಹೃದಯಭಾಗದಲ್ಲಿರುವ ವಿಕ್ಟೋರಿಯಾ ಆಸ್ಪತ್ರೆ ಮತ್ತು ಟ್ರಾಮಾ ಕೇಂದ್ರದಲ್ಲಿ ಅತ್ಯಂತ ಅಸ್ತವ್ಯಸ್ತ, ಆತಂಕಕಾರಿ ಘಟನೆಗಳನ್ನು ನಡೆಯುತ್ತಿವೆ. ಈ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬರುವ ರೋಗಿಗಳನ್ನು ವ್ಯವಸ್ಥಿತವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಕರೆದೊಯ್ಯುವ ಜಾಲವೊಂದು ವ್ಯವಸ್ಥಿತವಾಗಿ ಕಾರ್ಯಾಚರಿಸುತ್ತಿದೆ.

ಅಲ್ಲದೇ ಈ ಆಸ್ಪತ್ರೆ ಆವರಣದಲ್ಲಿ ಖಾಸಗಿ ಆಂಬ್ಯುಲೆನ್ಸ್ ವಾಹನಗಳದ್ದೇ ಪಾರುಪತ್ಯವಾಗಿದೆ. ಮಧ್ಯವರ್ತಿಗಳ ಕೈಗೆ ರೋಗಿಗಳು ಸಿಕ್ಕಿ ನರಳಾಡುತ್ತಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿ ಇರುವ ಜನರಿಕ್ ಮೆಡಿಸಿನ್ ಮಳಿಗೆಗಳಲ್ಲಿ ಬ್ರಾಂಡೆಡ್ ಔಷಧಿಗಳನ್ನು ರೋಗಿಗಳಿಂದ ಹಣ ವಸೂಲಿ ಮಾಡಿ ಮಾರಾಟ ಮಾಡಲಾಗುತ್ತಿದೆ.

ಹೀಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಸ್ತವ್ಯಸ್ತ, ದುರಾಡಳಿತ, ಕರ್ತವ್ಯ ನಿರ್ಲಕ್ಷ್ಯ ಸೇರಿದಂತೆ ಇನ್ನಿತರೆ ಗಂಭೀರ ಲೋಪದೋಷಗಳನ್ನು ಲೋಕಾಯುಕ್ತ ತನಿಖಾ ತಂಡವು ಪತ್ತೆ ಹಚ್ಚಿದೆ.

ವಿಕ್ಟೋರಿಯಾ ಆಸ್ಪತ್ರೆಯಲ್ಲಿನ ಅಸ್ತವ್ಯಸ್ತಗಳ ಬಗ್ಗೆ ಲೋಕಾಯುಕ್ತ ಬಿ ಎಸ್‌ ಪಾಟೀಲ್ ಅವರು ಸ್ವಯಂ ಪ್ರೇರಿತವಾಗಿ ದೂರನ್ನು ದಾಖಲಿಸಿಕೊಂಡಿದ್ದರು. ಈ ದೂರನ್ನಾಧರಿಸಿ ಲೋಕಾಯುಕ್ತ ತನಿಖಾ ತಂಡವು ಪ್ರತ್ಯೇಕವಾಗಿ ಶೋಧನೆ ಕೈಗೊಂಡಿತ್ತು. ಈ ಶೋಧನೆ ವರದಿ ಆಧರಿಸಿ ಇದೀಗ ಲೋಕಾಯುಕ್ತರು ಇದೇ 2026ರ ಏಪ್ರಿಲ್ 27ರಂದು ವಿಚಾರಣೆ ನಡೆಸಲಿದ್ದಾರೆ.

ಈ ವಿಚಾರಣೆಗೆ ಖುದ್ದು ಹಾಜರಾಗಬೇಕು ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮೊಹಮದ್ ಮೊಹ್ಸೀನ್‌,

 

 

ಇಲಾಖೆಯ ನಿರ್ದೇಶಕರು ಸೇರಿದಂತೆ ಒಟ್ಟಾರೆ 11 ಮಂದಿ ವೈದ್ಯರು, ಡೀನ್‌ಗಳಿಗೆ 2026ರ ಏಪ್ರಿಲ್‌ 2ರಂದೇ ನೋಟೀಸ್ ಜಾರಿ ಮಾಡಿದೆ.

 

 

ಲೋಕಾಯುಕ್ತರ ಸಮಗ್ರ ತನಿಖಾ ವರದಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

ಕರ್ನಾಟಕ ಲೋಕಾಯುಕ್ತ ನಗರ ವಿಭಾಗದ ಪೊಲೀಸ್ ಅಧೀಕ್ಷಕ ಶಿವಪ್ರಕಾಶ್ ಮತ್ತು ದೇವರಾಜ್ ಅವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿನ ಮೇಲ್ವಿಚಾರಣೆ ಮಾಡಿದ್ದರು. ಇವರ ನೇತೃತ್ವದ ಪರಿಶೀಲನಾ ತಂಡವು ಸಲ್ಲಿಸಿದ್ದ ವರದಿಯನ್ನ ಪರಿಶೀಲಿಸಿದ್ದ ಲೋಕಾಯುಕ್ತ ಬಿ ಎಸ್ ಪಾಟೀಲ್‌ ಅವರು ‘ವಿಕ್ಟೋರಿಯಾ ಆಸ್ಪತ್ರೆ ಹಾಗೂ ಟ್ರಾಮಾ ಕೇಂದ್ರದಲ್ಲಿ ಅತ್ಯಂತ ಅಸ್ತವ್ಯಸ್ತ ಮತ್ತು ಆತಂಕಕಾರಿ ಘಟನೆಗಳು ನಡೆಯುತ್ತಿರುವುದು ಕಂಡುಬಂದಿದೆ,’ ಎಂದು ವರದಿಯಲ್ಲಿ ಕಳವಳ ವ್ಯಕ್ತಪಡಿಸಿರುವುದು ವರದಿಯಿಂದ ಗೊತ್ತಾಗಿದೆ.

 

 

ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರುಗಳು ತಮ್ಮ ಕರ್ತವ್ಯಗಳಿಗೆ ಸಮಯಕ್ಕೆ ಸರಿಯಾಗಿ ಹಾಜರಾಗುತ್ತಿಲ್ಲ ಎಂಬುದನ್ನು ಈ ವರದಿಯು ಬಹಿರಂಗಪಡಿಸಿದೆ. ಬಹುಮಂದಿ ವೈದ್ಯರು ನಿಗದಿತ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ. ನಿಗದಿತ ಸಮಯ ಮೀರಿದ ನಂತರ ಅತ್ಯಂತ ವಿಳಂಬವಾಗಿ ವೈದ್ಯರು ಹಾಜರಾಗುತ್ತಿದ್ದಾರೆ ಎಂದು ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

ಅವಧಿ ಮೀರಿದ ಔಷಧಗಳ ಪತ್ತೆ- ರೋಗಿಗಳ ಶೋಷಣೆ

ವೈದ್ಯರು ವಿಳಂಬವಾಗಿ ಕರ್ತವ್ಯಕ್ಕೆ ಹಾಜರಾಗುತ್ತಿರುವುದನ್ನು ಹೊರತುಪಡಿಸಿ ಟ್ರಾಮಾ ಕೇಂದ್ರದ ಐಸಿಯು ಘಟಕದಲ್ಲಿ ಅವಧಿ ಮೀರಿದ ಔಷಧಿಗಳು ಪತ್ತೆಯಾಗಿವೆ. ಸರಿಯಾದ ವಿಧಾನಗಳಿಲ್ಲದ ಕಾರಣ ಖಾಸಗಿ ಆಂಬುಲೆನ್ಸ್ ಚಾಲಕರು ಮತ್ತು ಮಧ್ಯವರ್ತಿಗಳಿಂದ ರೋಗಿಗಳ ಶೋಷಣೆ ನಡೆಯುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.

 

 

ಅಂಬ್ಯುಲೆನ್ಸ್‌ಗಳ ಬಳಕೆಗೆ ಸಾಕ್ಷ್ಯವೇ ಇಲ್ಲ

ವಿಕ್ಟೋರಿಯಾ ಆಸ್ಪತ್ರೆ, ವಾಣಿವಿಲಾಸ್, ಟ್ರಾಮಾ ಕೇಂದ್ರ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಅಂಬ್ಯುಲೆನ್ಸ್‌ ಗಳನ್ನು ಅಗತ್ಯವಿರುವ ರೋಗಿಗಳ ಪ್ರಯೋಜನಕ್ಕಾಗಿ ಸರಿಯಾಗಿ ಬಳಸಲಾಗುತ್ತಿದೆ ಎಂಬುದಕ್ಕೆ ಯಾವುದೇ ಸಾಕ್ಷ್ಯವಿಲ್ಲ ಎಂದು ಪರಿಶೀಲನಾ ತಂಡದ ಶೋಧನೆ ವೇಳೆ ಬಹಿರಂಗವಾಗಿದೆ.

ಟ್ರಾಮಾ ಕೇಂದ್ರದ ವೈದ್ಯಾಧಿಕಾರಿ ಡಾ. ಆಸಿಮಾ ಬಾನು ಅವರು ಐಸಿಯುನಲ್ಲಿ ಹಾಸಿಗೆಗಳು ಲಭ್ಯವಿಲ್ಲವೆಂದು ಹೇಳಿದ್ದರೂ. ಸಹ ಪರಿಶೀಲನಾ ತಂಡವು ಆಸ್ಪತ್ರೆಗೆ ಭೇಟಿ ನೀಡಿ ಟ್ರಾಮಾ ಕೇಂದ್ರವನ್ನು ಪರಿಶೀಲಿಸಿತ್ತು. ಟ್ರಾಮಾ ಕೇಂದ್ರದ ಐಸಿಯು ಘಟಕದಲ್ಲಿ ಆರು ಹಾಸಿಗೆಗಳು ಖಾಲಿ ಇರುವುದು ಕಂಡುಬಂದಿತ್ತು.

 

 

ತುರ್ತು ರೋಗಿಗೆ ಹಾಸಿಗೆಗಳೇ ಲಭ್ಯವಿಲ್ಲ-ವೆಂಟಿಲೇಟರ್‍‌ಗಳೂ ದುರಸ್ತಿಯಾಗಿಲ್ಲ

ತುರ್ತು ರೋಗಿಗೆ ಹಾಸಿಗೆಗಳು ಲಭ್ಯವಿಲ್ಲ ಎಂದು ಪರಿಶೀಲನಾ ತಂಡವು ಶೋಧನೆ ವೇಳೆ ಕಂಡುಕೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಡಾ. ಆಸಿಮಾ ಬಾನು ಅವರು ಆ ಆರು ಹಾಸಿಗೆಗಳು ಒಳರೋಗಿಗಳಿಗೆ ಲಭ್ಯವಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೇ ಹಾಸಿಗೆಗಳಿಗೆ ಜೋಡಿಸಲಾದ ವೆಂಟಿಲೇಟರ್‌ಗಳು ಕಾರ್ಯನಿರ್ವಹಿಸುತ್ತಿರಲಿಲ್ಲ. ಈ ಬಗ್ಗೆ ಸಂಬಂಧಿತ ಸೇವಾ ಪೂರೈಕೆದಾರರೊಂದಿಗೆ ಅಸೀಮಾ ಬಾನು ಅವರು ಸಂಪರ್ಕ ಸಾಧಿಸಿದ್ದರೂ ವೆಂಟಿಲೇಟರ್‌ಗಳನ್ನು ದುರಸ್ತಿಗೊಳಿಸಲಿಲ್ಲ ಎಂದು ಪರಿಶೀಲನೆ ನಡೆಸಿದ್ದ ಶೋಧನಾ ತಂಡಕ್ಕೆ ತಿಳಿಸಿರುವುದು ವರದಿಯಿಂದ ಗೊತ್ತಾಗಿದೆ.

‘ವಿಕ್ಟೋರಿಯಾ ಆಸ್ಪತ್ರೆಯಂತಹ ಸ್ಥಳದಲ್ಲಿ ವಿಶೇಷವಾಗಿ ಟ್ರಾಮಾ ಕೇಂದ್ರದಲ್ಲಿ, ಆರು ಹಾಸಿಗೆಗಳು ಬಳಕೆಯಾಗದೆ ಇರುವುದು ದುರದೃಷ್ಟಕರ. ವೈದ್ಯರು ಹೇಳಿರುವುದನ್ನು ಒಪ್ಪಿಕೊಂಡರೂ, ದೋಷಪೂರಿತ ವೆಂಟಿಲೇಟರ್‌ಗಳ ಬಗ್ಗೆ ಸಮಯಕ್ಕೆ ಕ್ರಮ ಕೈಗೊಳ್ಳದ ನಿರ್ಲಕ್ಷ್ಯದ ಪರಿಣಾಮವಾಗಿ ಈ ಪರಿಸ್ಥಿತಿ ಉಂಟಾಗಿದೆ,’ ಎಂದು ವರದಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.

 

 

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಹಂತದಲ್ಲೇ ಆಡಳಿತದಲ್ಲಿ ನಿರ್ಲಕ್ಷ್ಯವಿದೆ. ಟ್ರಾಮಾ ಕೇಂದ್ರವನ್ನು ಸರಿಯಾಗಿ ನಿರ್ವಹಿಸಲಾಗುತ್ತಿಲ್ಲ ಎಂದು ವಿವರಿಸಿದೆ.

ಖಾಸಗಿ ಆಂಬುಲೆನ್ಸ್ ಚಾಲಕರು ಮತ್ತು ಮಾಲೀಕರಿಂದ ಉಂಟಾಗುತ್ತಿರುವ ಅಡಚಣೆಯ ಕಾರಣದಿಂದ ಈ ಪರಿಸ್ಥಿತಿ ಉಂಟಾಗಿದೆ. ಈ ಸಮಸ್ಯೆಯನ್ನು ಗಮನಿಸಿದ ನಂತರ, ಈ ಪ್ರಾಧಿಕಾರವು ದೂರನ್ನು ಪೊಲೀಸರಿಗೆ ಕಳುಹಿಸಿತ್ತು. ಆದರೆ, ಆ ದೂರುದಲ್ಲಿ ಸಂಬಂಧಿತ ವ್ಯಕ್ತಿ ಅಥವಾ ಆಂಬುಲೆನ್ಸ್ ಮಾಲೀಕರು/ಚಾಲಕರ ಕುರಿತು ಯಾವುದೇ ವಿವರಗಳನ್ನು ನೀಡಿಲ್ಲ. ಖಾಸಗಿ ಆಂಬುಲೆನ್ಸ್ ಚಾಲಕರು ಆಸ್ಪತ್ರೆಯ ಆವರಣಕ್ಕೆ ನುಗ್ಗಿ ಅಸ್ತವ್ಯಸ್ತ ಪರಿಸ್ಥಿತಿಯನ್ನು ಸೃಷ್ಟಿಸುತ್ತಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

 

 

‘ಈ ಪ್ರದೇಶದ ಪೊಲೀಸ್ ಉಪ ಆಯುಕ್ತರಿಗೆ ಪರಿಶೀಲನೆ ನಡೆಸುವಂತೆ ಸೂಚಿಸಲಾಗಿದೆ. ಅಲ್ಲದೆ, ನಿಯೋಜಿತ ಪೊಲೀಸ್ ಅಧಿಕಾರಿಗಳಿಗೆ ದುಷ್ಕರ್ಮಿಗಳನ್ನು ಗುರುತಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಲಾಗಿದೆ. ಆಂಬುಲೆನ್ಸ್ ಚಾಲಕರು ಮತ್ತು ಅವರ ಮಧ್ಯವರ್ತಿಗಳಿಂದ ಉಂಟಾಗುತ್ತಿರುವ ಅಶಾಂತಿ ಮತ್ತು ಅಡಚಣೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ಅಗತ್ಯವಿದೆ,’ ಎಂದು ಲೋಕಾಯುಕ್ತರು ವರದಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.

 

 

ಆಸ್ಪತ್ರೆ ಸಿಬ್ಬಂದಿಯ ಪ್ರೋತ್ಸಾಹ

ಪ್ರಾಥಮಿಕವಾಗಿ ನೋಡಿದರೆ ಈ ಪರಿಸ್ಥಿತಿಗೆ ಆಸ್ಪತ್ರೆ ಮತ್ತು ಅದರ ಸಿಬ್ಬಂದಿಯ ಪ್ರೋತ್ಸಾಹವೂ ಕಾರಣವಾಗಿದೆ ಎಂಬುದು ಗೋಚರಿಸುತ್ತದೆ ಎಂದು ವರದಿಯಲ್ಲಿ ಬೊಟ್ಟು ಮಾಡಿದೆ. ಡೀನ್ ಡಾ. ಕಾವ್ಯ ಎಸ್.ಟಿ. ಅವರು ಖಾಸಗಿ ಆಂಬುಲೆನ್ಸ್ ಸೇವೆಗಳನ್ನು ನಿಯಂತ್ರಿಸುವ ಸಲುವಾಗಿ ಪ್ರಿಪೇಯ್ಡ್ ಆಂಬುಲೆನ್ಸ್ ಸೇವೆಗಳನ್ನು ವ್ಯವಸ್ಥೆಗೊಳಿಸಲು ಸರ್ಕಾರಕ್ಕೆ ಈಗಾಗಲೇ ಪತ್ರ ಬರೆದಿದ್ದಾರೆ. ಅದರೆ ಇದುವರೆಗೂ ಯಾವುದೇ ಕ್ರಮವಹಿಸಿಲ್ಲ.

 

 

‘ಇಂತಹ ವಿಷಯಗಳಲ್ಲಿ ರಾಜ್ಯ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಸಲ್ಲಿಸಲಾದ ಯುಕ್ತಿಯುಕ್ತ ಮನವಿಗಳಿಗೆ ಅನುಮೋದನೆ ನೀಡಬೇಕಾಗಿದೆ. ಆದ್ದರಿಂದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ನಿರ್ದೇಶಕರು, ವೈದ್ಯಕೀಯ ಶಿಕ್ಷಣ ಅವರನ್ನು ಈ ಪ್ರಾಧಿಕಾರದ ಮುಂದೆ ಹಾಜರಾಗುವಂತೆ ಸೂಚಿಸಿ, ದುರಾಡಳಿತವನ್ನು ನಿವಾರಿಸಲು ಕೈಗೊಂಡ ಕ್ರಮಗಳ ಕುರಿತು ಮಾಹಿತಿ ನೀಡುವಂತೆ ಕರೆಯುವುದು ಅಗತ್ಯವಾಗಿದೆ,’ ಎಂದು ಲೋಕಾಯುಕ್ತರು ಸೂಚಿಸಿರುವುದು ಗೊತ್ತಾಗಿದೆ.

ಡೀನ್, ಟ್ರಾಮಾ ಕೇಂದ್ರದ ಹೊಣೆಗಾರ ವ್ಯಕ್ತಿ, ವಿಕ್ಟೋರಿಯಾ ಮತ್ತು ವಾಣಿವಿಲಾಸ್ ಆಸ್ಪತ್ರೆಗಳ ಅಧೀಕ್ಷಕರು ಈ ಎಲ್ಲಾ ಕೊರತೆಗಳನ್ನು ಸಂಬಂಧಿಸಿದ ಅಧಿಕಾರಿಗಳು ತುರ್ತು ಆದ್ಯತೆಯೊಂದಿಗೆ ಪರಿಹರಿಸಿ ಸ್ಪಷ್ಟಪಡಿಸಬೇಕು. ಇದಲ್ಲದೆ, ಔಷಧಿಗಳ ಸರಿಯಾದ ವಿತರಣೆ ನಡೆಯುವಂತೆ ಹಾಗೂ ಆಸ್ಪತ್ರೆ ಆವರಣದಲ್ಲಿರುವ ವೈದ್ಯಕೀಯ ಕೇಂದ್ರವು ಸಾರ್ವಜನಿಕರಿಗೆ ಎಲ್ಲಾ ಯುಕ್ತಿಯುಕ್ತ ಸಮಯಗಳಲ್ಲಿ ಲಭ್ಯವಾಗುವಂತೆ ಖಚಿತಪಡಿಸಬೇಕು ಎಂದು ಲೋಕಾಯುಕ್ತರು ವರದಿಯಲ್ಲಿ ನಿರ್ದೇಶಿಸಿರುವುದು ತಿಳಿದು ಬಂದಿದೆ.

 

 

ಖಚಿತವಾಗದ ಔಷಧಗಳ ಲಭ್ಯತೆ

ಆಸ್ಪತ್ರೆಯಲ್ಲಿ ಔಷಧಿಗಳ ಲಭ್ಯತೆ ಸರಿಯಾಗಿ ಖಚಿತಪಡಿಸಲಾಗುತ್ತಿಲ್ಲ. ಪರಿಶೀಲನಾ ತಂಡದ ವರದಿಯೂ ಆಸ್ಪತ್ರೆಯಲ್ಲಿನ ಹಲವು ಕೊರತೆಗಳನ್ನು ಸೂಚಿಸಿದೆ. ಆದ್ದರಿಂದ ಈ ಸೇವಾ ದೋಷಗಳು ಮತ್ತು ಅಕ್ರಮಗಳಿಗೆ ಹೊಣೆಗಾರರಾದ ನಿರ್ದಿಷ್ಟ ಅಧಿಕಾರಿಗಳು/ವೈದ್ಯರು/ಸಿಬ್ಬಂದಿಗಳ ವಿರುದ್ಧ ಮುಂದಿನ ತನಿಖೆ ನಡೆಸುವ ಕುರಿತು ಆದೇಶ ಹೊರಡಿಸಬೇಕು ಎಂದು ಸೂಚಿಸಿದೆ.

 

 

ಅಸ್ಪತ್ರೆಯ ಹಲವು ಮುಖಗಳನ್ನು ಪರಿಚಯಿಸಿದ ಶೋಧನಾ ವರದಿ

2026ರ ಮಾರ್ಚ್‌ 18ರಂದು ನಡೆಸಿದ ಶೋಧನಾ ತಂಡವು ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಯಲ್ಲಿನ ಅವ್ಯವಸ್ಥೆಗಳನ್ನು ಅನಾವರಣಗೊಳಿಸಿದೆ.

ಬ್ರಾಂಡೆಡ್ ಔಷಧಿ ಮಾರಾಟ-ರೋಗಿಗಳಿಂದ ಹಣ ವಸೂಲಿ

ಬೆಳಿಗ್ಗೆ 9.00 ಗಂಟೆಗೆ ಮೊದಲು ಮತ್ತು ಸಂಜೆ 4.00 ಗಂಟೆಯ ನಂತರ ಉಚಿತವಾಗಿ ಔಷಧಿಗಳನ್ನು ವಿತರಿಸುವ ವ್ಯವಸ್ಥೆ ಇಲ್ಲ. ಆಸ್ಪತ್ರೆಗೆ ಬರುವ ರೋಗಿಗಳು ಜನರಿಕ್ ಮೆಡಿಸಿನ್ ಮಳಿಗೆಗಳಲ್ಲಿ ಅಥವಾ ಖಾಸಗಿ ಮೆಡಿಕಲ್ ಅಂಗಡಿಗಳಲ್ಲಿ (ಬಾಲಾಜಿ ಮೆಡಿಕಲ್ ಶಾಪ್) ಹಣ ನೀಡಿ ಔಷಧಿಗಳನ್ನು ಖರೀದಿಸಲು ಬಲವಂತ ಮಾಡುತ್ತಿದ್ದಾರೆ ಎಂದು ವರದಿಯು ಹೇಳಿದೆ.

 

 

ಇದರಿಂದ ಸಾಮಾನ್ಯ ಜನತೆಗೆ ಉಚಿತ ವೈದ್ಯಕೀಯ ಚಿಕಿತ್ಸೆ ನೀಡುವ ಸರ್ಕಾರದ ಉದ್ದೇಶ ಸಾಧನೆಯಾಗುತ್ತಿಲ್ಲ. ವಾಸ್ತವವಾಗಿ ಈ ಪರಿಸ್ಥಿತಿ ಸಾರ್ವಜನಿಕರಿಗೆ ಈ ಸೌಲಭ್ಯವನ್ನು ಬಳಸಿಕೊಳ್ಳಲು ಅಸೌಕರ್ಯ ಉಂಟುಮಾಡುತ್ತದೆ. ಆದ್ದರಿಂದ, ಇದರ ಬಗ್ಗೆ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಶೋಧನಾ ತಂಡವು ಅಭಿಪ್ರಾಯಪಟ್ಟಿದೆ.

 

 

ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿ ಇರುವ ಜನರಿಕ್ ಮೆಡಿಸಿನ್ ಮಳಿಗೆಗಳಲ್ಲಿ ಬ್ರಾಂಡೆಡ್ ಔಷಧಿಗಳನ್ನು ರೋಗಿಗಳಿಂದ ಹಣ ವಸೂಲಿ ಮಾಡಿ ಮಾರಾಟ ಮಾಡಲಾಗುತ್ತಿರುವುದು ಗಮನಕ್ಕೆ ಬಂದಿದೆ.ಸಾಮಾನ್ಯ ಜನರಿಗೆ 24 x 7 ಉಚಿತ ಔಷಧಿಗಳನ್ನು ವಿತರಿಸಲು ವ್ಯವಸ್ಥೆ ಕಲ್ಪಿಸಬೇಕು.

‘ಉಚಿತ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಬರುವ ರೋಗಿಗಳಿಂದ ಹಣ ವಸೂಲಿ ಮಾಡಲಾಗುತ್ತಿದೆ. ಆದ್ದರಿಂದ, ಜನರಿಕ್ ಮೆಡಿಸಿನ್ ಮಳಿಗೆಗಳ ಚಟುವಟಿಕೆಗಳನ್ನು ಸಂಬಂಧಿತ ಅಧಿಕಾರಿಗಳು ನಿಯಮಿತವಾಗಿ ಪರಿಶೀಲಿಸಿ ಮೇಲ್ವಿಚಾರಣೆ ಮಾಡುವ ಅಗತ್ಯವಿದೆ,’ ಎಂದು ವರದಿಯಲ್ಲಿ ಶಿಫಾರಸ್ಸು ಮಾಡಿರುವುದು ತಿಳಿದು ಬಂದಿದೆ.

 

 

ಅತ್ಯಾವಶ್ಯಕ ಔಷಧಿಗಳನ್ನು ಖರೀದಿಸಿದೆ. ಮತ್ತು ಅವುಗಳನ್ನು ರಾತ್ರಿಯ ಸಮಯದಲ್ಲಿ ಸಿಬ್ಬಂದಿ ನರ್ಸ್ ಮತ್ತು ವೈದ್ಯರ ಬೇಡಿಕೆಯ ಮೇರೆಗೆ ರೋಗಿಗಳಿಗೆ ವಿತರಿಸಿರುವುದಕ್ಕೆ ಯಾವುದೇ ದಾಖಲೆಗಳನ್ನು ಸಲ್ಲಿಸಲಾಗಿಲ್ಲ. ಉಚಿತ ಔಷಧಿಗಳನ್ನು ಅಗತ್ಯವಿರುವ ರೋಗಿಗಳಿಗೆ, ವಿಶೇಷವಾಗಿ ರಾತ್ರಿ ಸಮಯದಲ್ಲಿ (ಬೆಳಿಗ್ಗೆ 9.00 ಗಂಟೆಯೊಳಗೆ ಮತ್ತು ಸಂಜೆ 4.00 ಗಂಟೆಯ ನಂತರ) ಸರಿಯಾಗಿ ವಿತರಿಸಲಾಗುವಂತೆ ಮೇಲ್ವಿಚಾರಣೆ ಮಾಡುವ ಅಗತ್ಯವಿದೆ ಎಂದು ವರದಿಯು ಅಭಿಪ್ರಾಯಿಸಿದೆ.

 

ಬ್ರಾಂಡೆಡ್ ಔಷಧಿಗಳ  ಖರೀದಿಗೆ ವೈದ್ಯರಿಂದಲೇ ಒತ್ತಡ

ರೋಗಿಗಳು ಮತ್ತು ಅವರ ಸಹಾಯಕರಿಗೆ ಆಸ್ಪತ್ರೆ ಹೊರಗಿನ ಅಂಗಡಿಗಳಲ್ಲಿ ಬ್ರಾಂಡೆಡ್ ಔಷಧಿಗಳನ್ನು ಖರೀದಿಸಲು ವೈದ್ಯರು ಸೂಚಿಸುತ್ತಿರುವ ಹಲವು ಘಟನೆಗಳು ಶೋಧನಾ ತಂಡದ ಗಮನಕ್ಕೆ ಬಂದಿವೆ. ವಿಕ್ಟೋರಿಯಾ ಆಸ್ಪತ್ರೆಯ ಸಂಪೂರ್ಣ ಆವರಣದಲ್ಲಿ ಇರುವ ಎಲ್ಲಾ ಆರೋಗ್ಯ ಘಟಕಗಳನ್ನು ಗಮನದಲ್ಲಿಟ್ಟುಕೊಂಡು, ಆಸ್ಪತ್ರೆ ಹೊರಗಿನ ಅಂಗಡಿಗಳಿಂದ ಔಷಧಿಗಳನ್ನು ಖರೀದಿಸುವುದನ್ನು ನಿಯಂತ್ರಿಸಲು ವಿಶೇಷ ನಿಗಾವಳಿ ತಂಡವನ್ನು ರಚಿಸುವ ಅಗತ್ಯವಿದೆ ಎಂದು ತಂಡವು ಶಿಫಾರಸ್ಸು ಮಾಡಿದೆ.

ಅಲ್ಲದೇ ಸಂಬಂಧಿತ ಅಧಿಕಾರಿಗಳು ಔಷಧಿಗಳನ್ನು ಖರೀದಿಸುವಲ್ಲಿ ಸರಿಯಾದ ವಿಧಾನಗಳನ್ನು ಅನುಸರಿಸುತ್ತಿಲ್ಲ. ಮತ್ತು ಈ ವಿಷಯದಲ್ಲಿ ಯಾವುದೇ ನಿಯಮಿತ ಕ್ರಮ ಅನುಸರಿಸುವುದಿಲ್ಲ. ವೈದ್ಯರು ಮತ್ತು ಸಿಬ್ಬಂದಿಯೊಂದಿಗೆ ಸಭೆ ನಡೆಸಿ, ಪೂರೈಕೆಗೆ ಅಗತ್ಯವಿರುವ ಔಷಧಿಗಳ ವಿವರಗಳನ್ನು ಸಂಗ್ರಹಿಸುವ ವ್ಯವಸ್ಥೆ ಇಲ್ಲ. ಆದರೆ, ಔಷಧಿಗಳನ್ನು ಫಾರ್ಮಾಸಿಸ್ಟ್‌ಗಳ ಸೂಚನೆಯ ಮೇರೆಗೆ ಮಾತ್ರ ಖರೀದಿಸುವ ಪದ್ಧತಿ ಇದೆ ಎಂದು ಅಭಿಪ್ರಾಯಿಸಿದೆ.

‘ವೈದ್ಯರು ಮತ್ತು ಸಂಬಂಧಿತ ಸಿಬ್ಬಂದಿಯೊಂದಿಗೆ ಸಭೆಗಳನ್ನು ನಡೆಸಿದ ನಂತರ ಅಗತ್ಯ ಔಷಧಿಗಳ ಖರೀದಿ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡುವ ಅಗತ್ಯವಿದೆ. ಔಷಧಿಗಳ ಸಂಗ್ರಹಣಾ ಕೊಠಡಿಯಲ್ಲಿ ಅಪಾರ ಪ್ರಮಾಣದಲ್ಲಿ ಔಷಧಿಗಳನ್ನು ಸಂಗ್ರಹಿಸಲಾಗಿದೆ. ಕಂಪನಿಗಳಿಂದ ಪೂರೈಕೆಯಾದ ಔಷಧಿಗಳನ್ನು ಕೂಡ ಪೆಟ್ಟಿಗೆಯಲ್ಲೇ ಇಡಲಾಗಿದೆ ಮತ್ತು ಅವುಗಳನ್ನು ಬಳಸಲು ಪೆಟ್ಟಿಗೆಗಳನ್ನು ತೆರೆಯುವ ಕ್ರಮವೂ ಕೈಗೊಳ್ಳಲಾಗಿಲ್ಲ,’ ಎಂದು ವರದಿಯಲ್ಲಿ ವಿವರಿಸಿದೆ.

ನಿರ್ವಹಣೆಯಾಗದ ಔಷಧ ಕೊಠಡಿ

ಕೆಲವು ಔಷಧಿಗಳು ವಾಸ್ತವಿಕ ಬಳಕೆಗೆ ಮೀರಿದ ಪ್ರಮಾಣದಲ್ಲಿ ಸಂಗ್ರಹವಾಗಿರುವುದನ್ನು ಪತ್ತೆ ಹಚ್ಚಿರುವ ಶೋಧನಾ ತಂಡವು ಅವುಗಳನ್ನು ಇತರ ಆಸ್ಪತ್ರೆಗಳಿಗೆ ಹಂಚುವ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಬಹಿರಂಗಪಡಿಸಿದೆ. ಅಲ್ಲದೇ ಔಷಧಿಗಳ ಸಂಗ್ರಹಣಾ ಕೊಠಡಿಯನ್ನು ಸರಿಯಾಗಿ ನಿರ್ವಹಿಸಲಾಗುತ್ತಿಲ್ಲ ಮತ್ತು ಅವಧಿ ಮೀರಿದ ಔಷಧಿಗಳ ಬಗ್ಗೆ ಸಂಬಂಧಿತ ವಿಭಾಗಗಳಿಗೆ ಮಾಹಿತಿ ನೀಡುವ ಸರಿಯಾದ ಕ್ರಮವೂ ಅನುಸರಿಸಲಾಗುತ್ತಿಲ್ಲ ಎಂದು ಹೇಳಿದೆ.

ಸಮಯಕ್ಕೆ ಹಾಜರಾಗದ ವೈದ್ಯರ ಪಟ್ಟಿ

ಡಾ. ಸೋಮಶೇಖರ ಎಸ್.ಎ. (ಪ್ರೊಫೆಸರ್), ಡಾ. ದೀಪಕ್ ಎಚ್.ಆರ್. (ಅಸೋಸಿಯೇಟ್ ಪ್ರೊಫೆಸರ್), ಡಾ. ಗೌರವ್ ಎಂ. (ಅಸಿಸ್ಟೆಂಟ್ ಪ್ರೊಫೆಸರ್), ಡಾ. ಸತೀಶ್ ಬಾಬು ಡಿ.ಜಿ. (ಅಸಿಸ್ಟೆಂಟ್ ಪ್ರೊಫೆಸರ್), ಡಾ. ಶಶಾಂಕ್ ಜಿ. (ಅಸಿಸ್ಟೆಂಟ್ ಪ್ರೊಫೆಸರ್), ಡಾ. ರವಿವರ್ಮ ವಿ.ಎನ್. (ಅಸಿಸ್ಟೆಂಟ್ ಪ್ರೊಫೆಸರ್), ಡಾ. ಹೊಯ್ಸಳ ಬಿ. ಗೌಡ (ಸೀನಿಯರ್ ರೆಸಿಡೆಂಟ್ ಡಾಕ್ಟರ್), ಡಾ. ಹೇಮಚಂದ್ರ (ಅಸಿಸ್ಟೆಂಟ್ ಪ್ರೊಫೆಸರ್), ಡಾ. ಶ್ರೀನಿವಾಸ್ ಜಿ. (ಅಸಿಸ್ಟೆಂಟ್ ಪ್ರೊಫೆಸರ್), ಡಾ. ಯೋಗಾನಂದ ಎಂ. (ಅಸಿಸ್ಟೆಂಟ್ ಪ್ರೊಫೆಸರ್), ಡಾ. ಚನ್ನಬಸವರಾಜ್ (ಅಸಿಸ್ಟೆಂಟ್ ಪ್ರೊಫೆಸರ್), ಡಾ. ಪೂರ್ಣಿಮಾ ಆರ್. (ಅಸಿಸ್ಟೆಂಟ್ ಪ್ರೊಫೆಸರ್, ಸರ್ಜಿಕಲ್ ಆಂಕಾಲಜಿ)  ಅವರು ಫೆಬ್ರವರಿ ತಿಂಗಳಲ್ಲಿ ಕೆಳಕಂಡ ವೈದ್ಯರು ತಮ್ಮ ಕರ್ತವ್ಯಕ್ಕೆ ಸಮಯಕ್ಕೆ ಸರಿಯಾಗಿ ಹಾಜರಾಗಿಲ್ಲ . ಇದನ್ನು   ವೈದ್ಯಕೀಯ ಅಧೀಕ್ಷಕರ ಕಚೇರಿಯಿಂದ ಸಂಗ್ರಹಿಸಿದ ಮಾಹಿತಿಯ ಅನುಸಾರ  ಶೋಧನಾ ತಂಡವು ಖಚಿತಪಡಿಸಿಕೊಂಡಿದೆ.

 

 

ಬಯೋಮೆಟ್ರಿಕ್ ಹಾಜರಾತಿ ಮಾಹಿತಿಯ ಪ್ರಕಾರ ಡಾ. ಪ್ರಶಾಂತ್ ವಿ.ಎನ್., ಡಾ. ಶಿವರಂಜನಿ ಎಚ್., ಡಾ. ಹೇಮಚಂದ್ರ ಪಿ., ಡಾ. ಶ್ರೀನಿವಾಸ್ ಜಿ., ಡಾ. ದೀಪಾ ಪಿ. ಅವರು 2026ರ ಜನವರಿ ತಿಂಗಳಲ್ಲಿ ಕ್ರಮವಾಗಿ 19, 10, 22, 21 ದಿನಗಳು ತಡವಾಗಿ ಕೆಲಸಕ್ಕೆ ಹಾಜರಾಗಿದ್ದಾರೆ ಎಂದು ವರದಿಯು ಹೇಳಿದೆ.

 

 

‘ಇವರು ಕ್ರಮವಾಗಿ 15, 13, 4, 2, 10, 15, 15, 21 ದಿನಗಳ ಕಾಲ ಸಮಯಕ್ಕೆ ಸರಿಯಾಗಿ ಕರ್ತವ್ಯ ನಿರ್ವಹಿಸಿಲ್ಲ. ಕ್ರಮವಾಗಿ 21, 3, 9, 21 ದಿನಗಳು. ಇವರ ವಿರುದ್ಧ ನೋಟಿಸ್ ನೀಡುವುದನ್ನು ಹೊರತುಪಡಿಸಿ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ, ಆದರೆ ಸಂಪೂರ್ಣ ತಿಂಗಳ ವೇತನವನ್ನು ಪಾವತಿಸಲಾಗಿದೆ,’ ಎಂದು ತಂಡವು ಪತ್ತೆ ಹಚ್ಚಿರುವುದು ವರದಿಯಿಂದ ತಿಳಿದು ಬಂದಿದೆ.

 

 

ಸರಿಯಾದ ಸಮಯಕ್ಕೆ ಹಾಜರಾಗುವ ಅಭ್ಯಾಸವೇ ಇಲ್ಲ

ವಿಕ್ಟೋರಿಯಾ ಆಸ್ಪತ್ರೆಯ ಶಾಶ್ವತ ಇಎನ್‌ಟಿ ವೈದ್ಯಕೀಯ ಸಿಬ್ಬಂದಿ, ಅನಸ್ತೇಷಿಯಾ ಘಟಕದ ಸಿಬ್ಬಂದಿ, ಮಾನಸಿಕ ಆರೋಗ್ಯ ಘಟಕದ ಸಿಬ್ಬಂದಿಗಳು ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುವ ಅಭ್ಯಾಸದಲ್ಲಿಲ್ಲ. ಹಿರಿಯ ವೈದ್ಯರು ಆಸ್ಪತ್ರೆಯಿಂದ ಹೊರಡುವಾಗ ಬಯೋಮೆಟ್ರಿಕ್ ಮೂಲಕ ತಮ್ಮ ಹಾಜರಾತಿಯನ್ನು ದಾಖಲಿಸುವುದಿಲ್ಲ ಎಂದು ವರದಿಯಲ್ಲಿ ವಿವರಿಸಿದೆ.

ಮೊದಲೇ ಬಯೋಮೆಟ್ರಿಕ್ ಗುರುತು ಮಾಡುವ ವೈದ್ಯರು

‘ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗದ ವೈದ್ಯರು ಮತ್ತು ಸಿಬ್ಬಂದಿಗಳ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ. ವೈದ್ಯಕೀಯ ಅಧೀಕ್ಷಕರು ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗದ ಮತ್ತು ಆಸ್ಪತ್ರೆಯಿಂದ ಬೇಗನೆ ಹೊರಡುವ ಅಭ್ಯಾಸ ಹೊಂದಿರುವ ವೈದ್ಯರು ಅಥವಾ ಸಿಬ್ಬಂದಿಗಳ ವಿರುದ್ಧ ಯಾವುದೇ ಶಿಸ್ತು ಕ್ರಮ ಕೈಗೊಂಡಿಲ್ಲ. ಅವರು ಒಂದು ಬಯೋಮೆಟ್ರಿಕ್ ಹಾಜರಾತಿ ಗುರುತು ಮಾಡಿಸಿಕೊಂಡು ಆಸ್ಪತ್ರೆ ಆವರಣವನ್ನು ಬೇಗನೆ ಬಿಟ್ಟು ಹೋಗುತ್ತಿದ್ದಾರೆ,’ ಎಂದು ವರದಿಯಲ್ಲಿ ವಿವರಿಸಿದೆ.

ಮೆಡಿಕಲ್ ಕಾಲೇಜಿನ ಪ್ರಿನ್ಸಿಪಲ್, ಟ್ರಾಮಾ ಕೇಂದ್ರದ ವಿಶೇಷಾಧಿಕಾರಿ, ಟ್ರಾಮಾ ಕೇಂದ್ರದ ನೋಡಲ್ ಅಧಿಕಾರಿ, ಪ್ರೊಫೆಸರ್ ಹಾಗೂ ಮೈಕ್ರೋಬಯಾಲಜಿ ವಿಭಾಗದ ಮುಖ್ಯಸ್ಥ, ಟ್ರಾಮಾ ಕೇಂದ್ರದ ಫಾರ್ಮಸಿ ಸ್ಟೋರ್‌ಗಳ ಮುಖ್ಯಸ್ಥ ಹೀಗೇ ಒಂದೇ ಸಮಯದಲ್ಲಿ ಐದು ಹುದ್ದೆಗಳ ಹೊಣೆಗಾರಿಕೆಯನ್ನು ಡಾ. ಆಸಿಮಾ ಬಾನು ಅವರು ಡಾ. ಆಸಿಮಾ ಬಾನು ಅವರು ನಿರ್ವಹಿಸುತ್ತಿದ್ದಾರೆ ಎಂದು ಶೋಧನಾ ತಂಡವು ಬಹಿರಂಗಪಡಿಸಿದೆ.

 

 

‘ಒಬ್ಬ ಅಧಿಕಾರಿ ಒಂದೇ ಸಮಯದಲ್ಲಿ 5 ಹುದ್ದೆಗಳ ಜವಾಬ್ದಾರಿಯನ್ನು ನಿರ್ವಹಿಸುವುದು, ಅದೂ ಜನಸಂದಣಿ ಹೆಚ್ಚಿರುವ ವಿಕ್ಟೋರಿಯಾ ಆಸ್ಪತ್ರೆಯಲ್ಲಿ, ಅತ್ಯಂತ ಕಷ್ಟಕರವಾಗಿದೆ. ಆದ್ದರಿಂದ, ಡಾ. ಆಸಿಮಾ ಬಾನು ಅವರಿಗೆ ನೀಡಿರುವ ಐದು ಹುದ್ದೆಗಳ ಬಗ್ಗೆ ಮರುಪರಿಶೀಲನೆ ಅಗತ್ಯವಿದೆ,’ ಎಂದು ವರದಿಯಲ್ಲಿ ಅಭಿಪ್ರಾಯಿಸಿದೆ.

 

 

ಹೊರಗುತ್ತಿಗೆ ಸಿಬ್ಬಂದಿಗಳು ನಿಗದಿತ ಹಾಜರಾತಿ ನೋಂದಣಿಯಲ್ಲಿ ತಮ್ಮ ಹಾಜರಾತಿಯನ್ನು ದಾಖಲಿಸುತ್ತಿಲ್ಲ. ಬಯೋಮೆಟ್ರಿಕ್ ವ್ಯವಸ್ಥೆ ಲಭ್ಯವಿದ್ದರೂ ಅವರ ಹಾಜರಾತಿಯನ್ನು ಖಚಿತಪಡಿಸಲು ಪ್ರತ್ಯೇಕ ಹಾಜರಾತಿ ನೋಂದಣಿ ಪುಸ್ತಕವನ್ನು ನಿರ್ವಹಿಸಲಾಗುತ್ತಿಲ್ಲ ಮತ್ತು ಅದರ ಮೇಲ್ವಿಚಾರಣೆ ಸರಿಯಾಗಿ ನಡೆಯುತ್ತಿಲ್ಲ ಎಂದು ವರದಿಯು ಬಹಿರಂಗಪಡಿಸಿದೆ.

ಹೊರಗುತ್ತಿಗೆ ಸಿಬ್ಬಂದಿಗಳ ಹಾಜರಾತಿ ನೋಂದಣಿಯನ್ನು ಪರಿಶೀಲಿಸಿದಾಗ, ಅವರು ಸಹಿ ಮಾಡುವ ಪದ್ಧತಿ ಇಲ್ಲದೆ, ‘P’ ಎಂಬ ಅಕ್ಷರವನ್ನು ಸೂಚಿಸಿ ಹಾಜರಾತಿ ದಾಖಲಿಸುವ ಪದ್ಧತಿ ಇದೆ. ಈ ವಿಧಾನ ಸರಿಯಲ್ಲ. ಆದ್ದರಿಂದ, ಔಟ್‌ಸೋರ್ಸ್ ಸಿಬ್ಬಂದಿಗಳ ಹಾಜರಾತಿಗೆ ಸಂಬಂಧಿಸಿದ ಸರ್ಕಾರದ ನಿಯಮಗಳನ್ನು ಅನುಸರಿಸುವ ಅಗತ್ಯವಿದೆ ಎಂದು ವರದಿ ಹೇಳಿದೆ.

 

 

ಸಮವಸ್ತ್ರ ಧರಿಸದ ವೈದ್ಯರು

ಬಹುತೇಕ ಎಲ್ಲಾ ವೈದ್ಯರು, ವಿಶೇಷವಾಗಿ ಘಟಕ ಮುಖ್ಯಸ್ಥರು, ಕರ್ತವ್ಯದ ಸಮಯದಲ್ಲಿ ಸಮವಸ್ತ್ರ ಧರಿಸುವ ಅಭ್ಯಾಸದಲ್ಲಿಲ್ಲ. ಆಸ್ಪತ್ರೆಗೆ ಬರುವ ಸಾರ್ವಜನಿಕರು ವೈದ್ಯರು ಮತ್ತು ಸಿಬ್ಬಂದಿಯನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗುತ್ತಿಲ್ಲ. ಈ ವಿಷಯದಲ್ಲಿ ಕಟ್ಟುನಿಟ್ಟಿನ ಮೇಲ್ವಿಚಾರಣೆ ಅಗತ್ಯವಿದೆ ಎಂದು ವರದಿಯಲ್ಲಿ ವಿವರಿಸಿದೆ.

ಟ್ರಾಮಾ ಕೇಂದ್ರದ ವಿಶೇಷಾಧಿಕಾರಿ ಡಾ. ಆಸಿಮಾ ಬಾನು ಅವರು ಆ ಘಟಕದಲ್ಲಿ ನಿರ್ವಹಿಸಲಾದ ಹಾಜರಾತಿ ನೋಂದಣಿಯಲ್ಲಿ ಸಹಿ ಮಾಡಿಲ್ಲ. ಆದರೆ ನಗದು ಘೋಷಣೆ ನೋಂದಣಿಯಲ್ಲಿ ತಮ್ಮ ನಗದು ವಿವರವನ್ನು ದಾಖಲಿಸಿ ಸಹಿ ಮಾಡಿದ್ದಾರೆ ಎಂದು ವರದಿ ಹೇಳಿದೆ.

ಹಾಸಿಗೆ ಲಭ್ಯವಿದ್ದರೂ ರೋಗಿಗೆ ಸಿಗುವುದಿಲ್ಲ

5ನೇ ಮಹಡಿಯಲ್ಲಿ ಇರುವ ಐಸಿಯು ಘಟಕದಲ್ಲಿ 18 ವೆಂಟಿಲೇಟರ್ ಹಾಸಿಗೆಗಳಿವೆ. ಅದರಲ್ಲಿ ಕೇವಲ 12 ಹಾಸಿಗೆಗಳಲ್ಲಿ ಮಾತ್ರ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು ಮತ್ತು ಉಳಿದ 6 ಹಾಸಿಗೆಗಳು ಖಾಲಿಯಾಗಿದ್ದವು. ಜಯಮ್ಮ ಎಂಬ ರೋಗಿಯನ್ನು ಟ್ರಾಮಾ ಕೇಂದ್ರಕ್ಕೆ ತರಲಾಗಿತ್ತು. ಅವರಿಗೆ ಮತ್ತು ಅವರ ಸಹಾಯಕರಿಗೆ ಸುಮಾರು 4 ಗಂಟೆಗಳ ಕಾಲ ಕಾಯಲು ಹೇಳಲಾಯಿತು. ನಂತರ 4 ಗಂಟೆಗಳ ಬಳಿಕ, ಐಸಿಯುನಲ್ಲಿ ಹಾಸಿಗೆ ಲಭ್ಯವಿಲ್ಲ ಎಂದು ತಿಳಿಸಲಾಯಿತು ಎಂದು ಶೋಧನಾ ವೇಳೆ ಕಂಡುಕೊಂಡಿದೆ.

‘ಆದರಿಂದ ನಮ್ಮ ಸಮ್ಮುಖದಲ್ಲೇ ಆ ರೋಗಿಯನ್ನು ಅವರ ಸಹಾಯಕರು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲು ಹಿಂದಕ್ಕೆ ಕರೆದುಕೊಂಡು ಹೋದರು. ಐಸಿಯು ಘಟಕದ ಮುಖ್ಯಸ್ಥರಾದ ಡಾ. ವಿಜಯಕುಮಾರ್ ಅವರು ನಾವು ಐಸಿಯು ಘಟಕಕ್ಕೆ ಪ್ರವೇಶಿಸಿದಾಗ ಹಾಜರಿರಲಿಲ್ಲ. ನಂತರ ಅವರು ಬಂದರೂ ಯೂನಿಫಾರ್ಮ್ ಧರಿಸಿರಲಿಲ್ಲ,’ ಎಂದು ವರದಿಯಲ್ಲಿ ದಾಖಲಿಸಿರುವುದು ತಿಳಿದು ಬಂದಿದೆ.

ಐಸಿಯುನಲ್ಲಿ ಅವಧಿ ಮೀರಿದ ಔಷಧ

ಐಸಿಯು ಘಟಕದಲ್ಲಿ ರೋಗಿಗಳಿಗೆ ನಾಲ್ಕು ಅವಧಿ ಮೀರಿದ ಔಷಧಿಗಳನ್ನು ನೀಡಲಾಗುತ್ತಿತ್ತು. ಆ ಔಷಧಿಗಳನ್ನು ಪ್ರತಿ ರೋಗಿಯ ಹಾಸಿಗೆಯಿಂದ ವಶಪಡಿಸಿಕೊಳ್ಳಲಾಯಿತು. ಐಸಿಯು ಘಟಕದ ಮುಖ್ಯಸ್ಥರು ಅವಧಿ ಮೀರಿದ ಔಷಧಿಗಳ ಬಗ್ಗೆ ಯಾವುದೇ ಸಮರ್ಪಕ ವಿವರಣೆ ನೀಡಿಲ್ಲ. 5ನೇ ಮಹಡಿಯಲ್ಲಿ ಇರುವ ಇನ್ನೊಂದು ನ್ಯೂರೋ ಐಸಿಯು ಘಟಕದಲ್ಲಿ 10 ವೆಂಟಿಲೇಟರ್ ಹಾಸಿಗೆಗಳಿವೆ. ಆ ಘಟಕದಲ್ಲಿ 8 ರೋಗಿಗಳು ದಾಖಲಾಗಿದ್ದು, ಉಳಿದ 2 ಹಾಸಿಗೆಗಳು ಖಾಲಿಯಾಗಿದ್ದವು ಎಂದು ವರದಿ ಹೇಳಿದೆ.

‘ನ್ಯೂರೋ ಐಸಿಯುನಲ್ಲಿ ಹಾಸಿಗೆಗಳ ಲಭ್ಯತೆ ಇಲ್ಲದ ಕಾರಣ ರೋಗಿಗಳ ಸಹಾಯಕರು ಕಾಯುತ್ತಿದ್ದಾರೆ ಎಂದು ತಿಳಿಸಿದ್ದಾರೆ. ವಾಸ್ತವವಾಗಿ, ನಾವು ವೈದ್ಯರನ್ನು ಒಂದು ರೋಗಿಯನ್ನು ದಾಖಲಿಸಲು ಕೇಳಿದ್ದೇವೆ. ನ್ಯೂರೋ ಐಸಿಯು ಘಟಕದಲ್ಲಿ ಎಲ್ಲಾ ವೆಂಟಿಲೇಟರ್ ಹಾಸಿಗೆಗಳ ಬಳಕೆಗೆ ಸರಿಯಾದ ವ್ಯವಸ್ಥೆ ಇಲ್ಲ. ಕೆಲವು ಹಾಸಿಗೆಗಳು ಖಾಲಿಯಾಗಿದ್ದರೂ, ಅವುಗಳನ್ನು ಅಗತ್ಯವಿರುವ ರೋಗಿಗಳಿಗೆ ಬಳಸಲಾಗುತ್ತಿಲ್ಲ. ಐಸಿಯು ಘಟಕಗಳಲ್ಲಿ ಹಾಸಿಗೆಗಳ ಲಭ್ಯತೆ ಇಲ್ಲ ಎಂಬ ಸಾಮಾನ್ಯ ದೂರುಗಳಿವೆ,’ ಎಂದು ವರದಿಯಲ್ಲಿ ವಿವರಿಸಿದೆ.

ಐಸಿಯು ಘಟಕದ ಮೇಲ್ವಿಚಾರಣೆ ನಡೆಸಿ, ವಿಶೇಷವಾಗಿ ಹಾಸಿಗೆಗಳ ಕೊರತೆಯ ಸಮಸ್ಯೆಯನ್ನು ಪರಿಹರಿಸುವ ಅಗತ್ಯವಿದೆ. ಈ ಘಟಕದಲ್ಲಿ ರೋಗಿಗಳಿಗೆ 6 ವಿಧದ ಅವಧಿ ಮೀರಿದ ಔಷಧಿಗಳನ್ನು ನೀಡಲಾಗುತ್ತಿದೆ. ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ. 5ನೇ ಮಹಡಿಯಲ್ಲಿ ಇರುವ ಇನ್ನೊಂದು ಐಸಿಯು ಘಟಕದಲ್ಲಿ 8 ವೆಂಟಿಲೇಟರ್ ಹಾಸಿಗೆಗಳಿವೆ. ಅದರಲ್ಲಿ 7 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು ಮತ್ತು 1 ಹಾಸಿಗೆ ಖಾಲಿಯಾಗಿತ್ತು ಎಂದು ವರದಿಯಲ್ಲಿ ವಾಸ್ತವಾಂಶಗಳನ್ನು ವಿವರಿಸಿದೆ.

ಪ್ರಭಾವವಿದ್ದರೇ ಐಸಿಯು ಹಾಸಿಗೆ

ಟ್ರಾಮಾ ಮತ್ತು ತುರ್ತು ಚಿಕಿತ್ಸಾ ಕೇಂದ್ರವನ್ನು ಸರಿಯಾಗಿ ನಿರ್ವಹಿಸಲಾಗುತ್ತಿಲ್ಲ. ಸ್ಟ್ರೆಚರ್ ಟ್ರಾಲಿಗಳನ್ನು ಸರಿಯಾಗಿ ನಿರ್ವಹಿಸಲಾಗುತ್ತಿಲ್ಲ ಮತ್ತು ಅವುಗಳಿಗೆ ಹಾಸಿಗೆಗಳ ಬಳಕೆಯಲ್ಲಿಯೂ ಕೊರತೆ ಇದೆ.ಸಾಮಾನ್ಯ ಜನರಿಂದ ದೂರು ಬಂದಿದೆ – ಪ್ರಭಾವ (influence) ಇದ್ದರೆ ಮಾತ್ರ ಐಸಿಯು ಹಾಸಿಗೆಗಳು ಮತ್ತು ಸರ್ಕಾರಿ ಸೌಲಭ್ಯಗಳು ನೀಡಲಾಗುತ್ತವೆ.

 

 

ಸಿಬ್ಬಂದಿ ಕೊರತೆ

ವೈದ್ಯರು ಮತ್ತು ನರ್ಸಿಂಗ್ ಸಿಬ್ಬಂದಿಗಳ ತೀವ್ರ ಕೊರತೆ ಇದೆ. ಈ ಕಾರಣದಿಂದ ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಲು ಕಷ್ಟವಾಗುತ್ತಿದೆ. ಟ್ರಾಮಾ ಕೇಂದ್ರದಲ್ಲಿ ಸ್ವಚ್ಛತೆ ಇಲ್ಲ. ಹಲವಾರು ಸಹಾಯಕರು ಟ್ರಾಮಾ ಕೇಂದ್ರದ ಒಳಗೆ ಪ್ರವೇಶಿಸಲು ಅನುಮತಿಸಲಾಗಿದೆ, ಇದರಿಂದ ರೋಗಿಗಳಿಗೆ ಚಿಕಿತ್ಸೆ ಪಡೆಯಲು ಹಾಗೂ ವೈದ್ಯರಿಗೆ ಚಿಕಿತ್ಸೆ ನೀಡಲು ಅಸೌಕರ್ಯ ಉಂಟಾಗುತ್ತಿದೆ ಎಂದು ವರದಿ ಹೇಳಿದೆ.

ಆಸ್ಪತ್ರೆ ಆವರಣದಲ್ಲಿ ಅನಧಿಕೃತ ಆಂಬ್ಯುಲೆನ್ಸ್‌- ರೋಗಿಗಳಿಗೆ ಶೋಷಣೆ

ಟ್ರಾಮಾ ಕೇಂದ್ರ ಮತ್ತು ಇತರ ಘಟಕಗಳ ಮೇಲೆ ಸಮರ್ಪಕ ಮೇಲ್ವಿಚಾರಣೆ ಅಗತ್ಯವಿದೆ ಎಂದು ಹೇಳಿರುವ ಶೋಧನಾ ತಂಡವು ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಅನಧಿಕೃತವಾಗಿ 7 ರಿಂದ 8 ಖಾಸಗಿ ಆಂಬುಲೆನ್ಸ್ ವಾಹನಗಳು ನಿಲ್ಲಿಸಿರುವುದನ್ನು ಕಂಡುಕೊಂಡಿದೆ.

ಆದ್ದರಿಂದ, ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಖಾಸಗಿ ಆಂಬುಲೆನ್ಸ್‌ಗಳನ್ನು ನಿಲ್ಲಿಸುವುದನ್ನು ತಡೆಯುವ ಅಗತ್ಯವಿದೆ, ಇದರಿಂದ ಆಸ್ಪತ್ರೆಯ ಸುಗಮ ಕಾರ್ಯಾಚರಣೆಗೆ ಅಡಚಣೆ ಆಗುವುದನ್ನು ತಪ್ಪಿಸಬಹುದು. ಖಾಸಗಿ ಆಂಬುಲೆನ್ಸ್‌ಗಳನ್ನು ನಿರ್ವಹಿಸುವವರು ರೋಗಿಗಳು ಮತ್ತು ಅವರ ಸಹಾಯಕರನ್ನು ಶೋಷಿಸುತ್ತಿದ್ದಾರೆ ಎಂಬ ಬಗ್ಗೆ ಸಾರ್ವಜನಿಕರಿಂದ ಅನೇಕ ದೂರುಗಳಿವೆ. ಇದಲ್ಲದೆ, ವಿಕ್ಟೋರಿಯಾ ಆಸ್ಪತ್ರೆಯ ಬಗ್ಗೆ ತಪ್ಪು ಸಲಹೆ ನೀಡಿ, ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲು ಪ್ರೇರೇಪಿಸುತ್ತಿದ್ದಾರೆ ಎಂಬ ದೂರುಗಳೂ ಇವೆ.

 

ಲಭ್ಯವಿರದ ಸರ್ಕಾರಿ ಆಂಬ್ಯುಲೆನ್ಸ್‌ ವಾಹನಗಳು

ಸರ್ಕಾರಿ ಆಂಬುಲೆನ್ಸ್ ವಾಹನಗಳಿಗೆ ನಿಯೋಜಿಸಲಾದ ಚಾಲಕರು ತುರ್ತು ಪರಿಸ್ಥಿತಿಯಲ್ಲಿ ರೋಗಿಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸಲು ಅಗತ್ಯವಿರುವಾಗ ಲಭ್ಯವಿರುವುದಿಲ್ಲ. ಈ ಪರಿಸ್ಥಿತಿಯಲ್ಲಿ ಖಾಸಗಿ ಆಂಬುಲೆನ್ಸ್ ಸೇವೆಯನ್ನು ಬಳಸುವ ಪದ್ಧತಿ ಇದೆ. ಆದ್ದರಿಂದ, ಆಸ್ಪತ್ರೆ ಆವರಣದಲ್ಲಿ ಖಾಸಗಿ ಆಂಬುಲೆನ್ಸ್‌ಗಳಿಂದ ಉಂಟಾಗುವ ಸಮಸ್ಯೆಗಳನ್ನು ತಡೆಯುವ ಅಗತ್ಯವಿದೆ. ರೋಗಿಗಳ ಶೋಷಣೆಯನ್ನು ತಪ್ಪಿಸಲು, ವಿಕ್ಟೋರಿಯಾ ಆಸ್ಪತ್ರೆ ಆವರಣದೊಳಗೆ ಪ್ರಿಪೇಯ್ಡ್ ಆಂಬುಲೆನ್ಸ್ ಸೇವೆಯನ್ನು ಪ್ರಾರಂಭಿಸುವುದು ಅಗತ್ಯವಾಗಿದೆ ಎಂದು ವರದಿಯು ಒತ್ತಿ ಹೇಳಿದೆ.

ವಿಕ್ಟೋರಿಯಾ ಆಸ್ಪತ್ರೆಯ ವಿವಿಧ ಘಟಕಗಳಿಗೆ ಸರ್ಕಾರದಿಂದ 9 ಆಂಬುಲೆನ್ಸ್‌ಗಳನ್ನು ಒದಗಿಸಲಾಗಿದೆ. ಸಂಬಂಧಿತ ಘಟಕಗಳ ನಡುವೆ ಸಮನ್ವಯ ಇದ್ದರೆ, ಈ 9 ಆಂಬುಲೆನ್ಸ್‌ಗಳನ್ನು ಸಮರ್ಪಕವಾಗಿ ಬಳಸಬಹುದು. ಆದ್ದರಿಂದ, ಆಂಬುಲೆನ್ಸ್ ವ್ಯವಸ್ಥೆಯನ್ನು ಮೇಲ್ವಿಚಾರಣೆ ಮಾಡಲು ನಿರ್ದಿಷ್ಟ ಅಧಿಕಾರಿಯನ್ನು ನೇಮಿಸುವ ಅಗತ್ಯವಿದೆ ಎಂದು ಸಲಹೆ ನೀಡಿದೆ. ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಆಟೋ ರಿಕ್ಷಾಗಳ ಅನಧಿಕೃತ ನಿಲುಗಡೆ ನಡೆಯುತ್ತಿದೆ. ಆಸ್ಪತ್ರೆಗೆ ಬರುವ ರೋಗಿಗಳು ಮತ್ತು ಅವರ ಸಹಾಯಕರ ಶೋಷಣೆ ನಡೆಯುತ್ತಿದೆ ಎಂಬ ಹಲವಾರು ದೂರುಗಳಿವೆ. ಆದ್ದರಿಂದ, ಇದನ್ನು ತಡೆಯಲು ಆಸ್ಪತ್ರೆ ಆವರಣದೊಳಗೆ ಪ್ರಿಪೇಯ್ಡ್ ಆಟೋ ಸೇವೆಯನ್ನು ಪ್ರಾರಂಭಿಸುವ ಅಗತ್ಯವಿದೆ.

‘ಕಾಳು, ಚಪ್ಪಳಿ ಬಾಬು ಹಾಗೂ ಇತರ ಆಂಬುಲೆನ್ಸ್ ಚಾಲಕರು ರೋಗಿಗಳು ಮತ್ತು ಅವರ ಸಹಾಯಕರನ್ನು ಶೋಷಿಸುತ್ತಿದ್ದಾರೆ ಎಂಬ ದೂರುಗಳಿವೆ. ಅವರು ರೋಗಿಗಳನ್ನು ಬಸವನಗುಡಿ ಖಾಸಗಿ ಆಸ್ಪತ್ರೆಗಳಾದ ನ್ಯೂ ಲೈಫ್ ಆಸ್ಪತ್ರೆ, ಕಾನ್ಫಿಡೊ ಆಸ್ಪತ್ರೆ, ಲೀಲಾವತಿ ಆಸ್ಪತ್ರೆಗಳಿಗೆ ಸಾಗಿಸುತ್ತಿದ್ದಾರೆ ಎಂಬ ಆರೋಪಗಳಿವೆ. ಆದ್ದರಿಂದ, ಆಸ್ಪತ್ರೆಯೊಳಗಿನ ಇಂತಹ ಅನಾಚಾರಗಳನ್ನು ತಡೆಯಲು ಸಮರ್ಪಕ ಪೊಲೀಸ್ ಪಡೆ ನಿಯೋಜಿಸುವ ಅಗತ್ಯವಿದೆ,’ ಎಂದು ಶಿಫಾರಸ್ಸು ಮಾಡಿದೆ.

ನಿಯುರೋ ಸರ್ಜನ್ ಡಾ. ಬಲರಾಜು ಪೈ ಅವರು ನಿವೃತ್ತರಾದ ನಂತರವೂ ಯಾವುದೇ ಕಾರಣವಿಲ್ಲದೆ ಅವರ ಸೇವೆಯನ್ನು 5 ವರ್ಷಗಳ ಕಾಲ ವಿಸ್ತರಿಸಲಾಗಿದೆ ಎಂಬ ದೂರು ಇದೆ. ಇನ್ಫ್ಯೂಷನ್ ಪಂಪ್‌ಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ಸಂಗ್ರಹಿಸಲಾಗಿದೆ. ಅವುಗಳನ್ನು ಬಳಸಲಾಗುತ್ತಿಲ್ಲ. ಆದ್ದರಿಂದ, ಅವುಗಳನ್ನು ಅಗತ್ಯವಿರುವ ಇತರ ಸರ್ಕಾರಿ ಆಸ್ಪತ್ರೆಗಳಿಗೆ ವರ್ಗಾಯಿಸುವ ಅಗತ್ಯವಿದೆ ಎಂದು ವರದಿಯು ಆಭಿಪ್ರಾಯಿಸಿದೆ.

 

 

ಐಸಿಯು ಹಾಸಿಗೆಗಳು, 116 ಸಾಮಾನ್ಯ ಹಾಸಿಗೆಗಳು ಮತ್ತು 4 ಶಸ್ತ್ರಚಿಕಿತ್ಸಾ ಹಾಸಿಗೆಗಳ ಸರಿಯಾದ ನಿರ್ವಹಣೆ ಇಲ್ಲ. ದಾಖಲೆಗಳ ಪರಿಶೀಲನೆಯ ಪ್ರಕಾರ, ರೋಗಿಗಳು ಮತ್ತು ಅವರ ಸಹಾಯಕರ ಸಮರ್ಪಕ ಅನುಮತಿ ಇಲ್ಲದೆ, “ವೈದ್ಯಕೀಯ ಸಲಹೆಗೆ ವಿರುದ್ಧವಾಗಿ ಬಿಡುಗಡೆ” ಎಂದು ಉಲ್ಲೇಖಿಸಿ ರೋಗಿಗಳನ್ನು ಡಿಸ್ಚಾರ್ಜ್ ಮಾಡುವ ಪದ್ಧತಿ ಇದೆ.ಸಾಮಾನ್ಯ ಹಾಗೂ ವಿಶೇಷ ರಜಾದಿನಗಳಲ್ಲಿ ರೋಗಿಗಳಿಗೆ ಸಮರ್ಪಕ ಸೇವೆ ನೀಡಲಾಗುತ್ತಿಲ್ಲ. ಆದ್ದರಿಂದ, ಆಸ್ಪತ್ರೆಯ ಆಡಳಿತದ ಮೇಲೆ ಸಮರ್ಪಕ ಮೇಲ್ವಿಚಾರಣೆ ಅಗತ್ಯವಿದೆ ಎಂದು ವಾಸ್ತವ ಸ್ಥಿತಿಯನ್ನು ಶೋಧನಾ ತಂಡವು ತೆರೆದಿಟ್ಟಿದೆ.

Hot this week

ಈಜಿಪುರ ಮೇಲ್ಸೇತುವೆ ಕಾಮಗಾರಿ; ಪರಿಷ್ಕೃತ ಅಂದಾಜಿನಲ್ಲಿಯೇ ಲೋಪ ಪತ್ತೆ, 8.80 ಕೋಟಿ ಮೊತ್ತಕ್ಕೆ ಲೆಕ್ಕ ಪರಿಶೋಧಕರ ಆಕ್ಷೇಪಣೆ

ಬೆಂಗಳೂರು;  ಈಜಿಪುರ ಎಲಿವೇಟೆಡ್ ಕಾಮಗಾರಿಗೆ ಸಂಬಂಧಿಸಿದಂತೆ ಬೃಹತ್‌ ಬೆಂಗಳೂರು ಮಹಾನಗರಪಾಲಿಕೆಯು ಮಾಡಿದ್ದ...

204 ತಾಲೂಕುಗಳ 2,280 ಗ್ರಾ.ಪಂ.ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ!; ಮುನ್ನೆಚ್ಚರಿಕೆ ವಹಿಸದಿದ್ದರೇ ಹನಿ ನೀರಿಗೂ ತತ್ವಾರ

ಬೆಂಗಳೂರು; ರಾಜ್ಯದಲ್ಲಿ  2026ರ ಬೇಸಿಗೆ ಅವಧಿಯಲ್ಲಿ 204 ತಾಲೂಕುಗಳ ಸುಮಾರು 2,280...

ಕೆಎಸ್‌ಆರ್‍‌ಪಿ, ಐಆರ್‍‌ಬಿ ಘಟಕಗಳಲ್ಲಿ ಆರ್ಡರ್ಲಿ ಜೀವಂತ!; ಕಮಾಂಡೆಂಟ್‌ಗಳಿಂದ ಹಣ ವಸೂಲಿ, ರಾಜಭವನ ಮೆಟ್ಟಿಲೇರಿದ ದೂರು

ಬೆಂಗಳೂರು; ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ ಎಲ್ಲಾ ಘಟಕಗಳು ಮತ್ತು ಇಮಡಿಯಾ...

Topics

ಈಜಿಪುರ ಮೇಲ್ಸೇತುವೆ ಕಾಮಗಾರಿ; ಪರಿಷ್ಕೃತ ಅಂದಾಜಿನಲ್ಲಿಯೇ ಲೋಪ ಪತ್ತೆ, 8.80 ಕೋಟಿ ಮೊತ್ತಕ್ಕೆ ಲೆಕ್ಕ ಪರಿಶೋಧಕರ ಆಕ್ಷೇಪಣೆ

ಬೆಂಗಳೂರು;  ಈಜಿಪುರ ಎಲಿವೇಟೆಡ್ ಕಾಮಗಾರಿಗೆ ಸಂಬಂಧಿಸಿದಂತೆ ಬೃಹತ್‌ ಬೆಂಗಳೂರು ಮಹಾನಗರಪಾಲಿಕೆಯು ಮಾಡಿದ್ದ...

ಮುಕ್ತ ವಿವಿ ಕುಲಪತಿಗೆ ವಿಶೇಷ ವಿನಾಯಿತಿಯ ನಿರಂಕುಶ ಅಧಿಕಾರ?; ಸರ್ಕಾರದ ಕೆಂಗಣ್ಣಿಗೆ ಮತ್ತೆ ಗುರಿಯಾದ ರಾಜ್ಯಪಾಲ!

ಬೆಂಗಳೂರು; ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಡಾ ಶರಣಪ್ಪ ವಿ...

300ಕ್ಕೂ ಹೆಚ್ಚು ಖಾತೆಗಳಲ್ಲಿ 3,171.95 ಕೋಟಿ ರು ಬ್ಯಾಂಕ್‌ ಬ್ಯಾಲೆನ್ಸ್‌; ಲೆಕ್ಕ ಪರಿಶೋಧಕರಿಗೇ ದಾಖಲೆ ನೀಡದ ಜಿಬಿಎ, ಇಷ್ಟೊಂದು ಅಶಿಸ್ತೇ?

ಬೆಂಗಳೂರು; ವಿವಿಧ ಬ್ಯಾಂಕ್‌ಗಳಲ್ಲಿ  300ಕ್ಕೂ ಹೆಚ್ಚು ಖಾತೆಗಳಲ್ಲಿ 3,171.95 ಕೋಟಿ ರು ಬ್ಯಾಂಕ್‌...

Related Articles

Popular Categories

error: Content is protected !!