ಬಿಜೆಪಿ ಅವಧಿಯ ವಸತಿ ಯೋಜನೆಗಳಲ್ಲಿ ಬಹುಕೋಟಿ ಭ್ರಷ್ಟಾಚಾರ; ವಾಸ್ತವಾಂಶ ವರದಿ ಸಲ್ಲಿಕೆಗೆ ನಿರ್ದೇಶನ

ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾಗಿರುವ ವಿವಿಧ ಅಕ್ರಮ, ಭ್ರಷ್ಟಾಚಾರ ಪ್ರಕರಣಗಳ ಕುರಿತು ತನಿಖೆ ನಡೆಸುತ್ತಿರುವ ಮಧ್ಯೆಯೇ ಇದೀಗ ವಸತಿ ಯೋಜನೆಗಳಲ್ಲಿನ ಅಕ್ರಮದ ಹುತ್ತಕ್ಕೆ ಕಾಂಗ್ರೆಸ್‌ ಸರ್ಕಾರವು ಕೈ ಹಾಕಿದೆ.

 

ಬಡವರಿಗೆ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಫಲಾನುಭವಿಗಳಿಗೆ ರಾಜೀವ್‌ ಗಾಂಧಿ ವಸತಿ ನಿಗಮದ ಮೂಲಕ ಮನೆಗಳ ನಿರ್ಮಾಣದ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಸಲ್ಲಿಕೆಯಾಗಿರುವ ದೂರನ್ನಾಧರಿಸಿ ತನಿಖೆಗೆ ಮುಂದಾಗಿದೆ.

 

ಈ ದೂರನ್ನಾಧರಿಸಿ ವಸತಿ ಇಲಾಖೆಯು ವಾಸ್ತವಾಂಶದ ವರದಿಯನ್ನು ಕೇಳಿದೆ. ಈ ಸಂಬಂಧ ವಸತಿ ಇಲಾಖೆಯು ಸರ್ಕಾರದ ಪ್ರಧಾನ ಕಾರ್ಯದರ್ಶಿಯು ರಾಜೀವ್‌ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ 2024ರ ನವೆಂಬರ್‍‌ 13ರಂದು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಕೋವಿಡ್‌ ಅವಧಿಯಲ್ಲಿ ನಡೆದಿದೆ ಎನ್ನಲಾಗಿರುವ ವಿವಿಧ ಸ್ವರೂಪದ ಅಕ್ರಮ, ಭ್ರಷ್ಟಾಚಾರಗಳ ಕುರಿತು ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಮೈಕಲ್‌ ಕುನ್ಹಾ ಅವರು ನೀಡಿದ್ದ ವರದಿ ಆಧರಿಸಿ ಪ್ರತಿಪಕ್ಷ ಬಿಜೆಪಿಯನ್ನು ಹಣಿಯುತ್ತಿರುವ ಬೆನ್ನಲ್ಲೇ ಇದೀಗ ವಸತಿ ಯೋಜನೆಗಳಲ್ಲಿನ ಭ್ರಷ್ಟಾಚಾರ ಪ್ರಕರಣಗಳನ್ನು ಕೆದಕಿರುವುದು ಮುನ್ನೆಲೆಗೆ ಬಂದಿದೆ.

 

‘ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜೀವ್‌ಗಾಂಧಿ ನಿಗಮದಿಂದ ಅನುಷ್ಠಾನಗೊಳಿಸಲಾಗುತ್ತಿದ್ದ ವಸತಿ ಯೋಜನೆಗಳ ಟೆಂಡರ್‍‌, ಕಾಮಗಾರಿಗಳಲ್ಲಿ ಭ್ರಷ್ಟಾಚಾರ, ನಕಲಿ ಬಿಲ್‌, ಅಧಿಕಾರ ದುರುಪಯೋಗ ಕುರಿತು ನಿಯಮಾನುಸಾರ ಕೂಲಂಕಷವಾಗಿ ಪರಿಶೀಲಿಸಿ ಸೂಕ್ತ ಅಭಿಪ್ರಾಯಗಳೊಂದಿಗೆ ವಾಸ್ತವಾಂಶದ ವರದಿಯನ್ನು ಕೂಡಲೇ ಸಲ್ಲಿಸಬೇಕು,’ ಎಂದು ವಸತಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯು ಆರ್‍‌ಜಿಹೆಚ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕರಿಗೆ 2024ರ ನವೆಂಬರ್‍‌ 13ರಂದು ನಿರ್ದೇಶನ ನೀಡಿರುವುದು ಗೊತ್ತಾಗಿದೆ.

 

 

ಬಡವರಿಗೆ ಮನೆಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ 2020ರಿಂದ 2022ರವರೆಗೆ ಒಟ್ಟಾರೆ 2,815.91 ಕೋಟಿ ರು ಅನುದಾನ ಒದಗಿಸಿತ್ತು. ಈ ಅನುದಾನವನ್ನು ಬಳಸಿಕೊಂಡು ವಸತಿ ಗೃಹಗಳ ನಿರ್ಮಾಣಕ್ಕೆ ಟೆಂಡರ್‍‌ ಕರೆದಿತ್ತು. ಆದರೆ ಈ ಟೆಂಡರ್‍‌ಗಳಲ್ಲೇ ಹಲವು ಲೋಪಗಳಿದ್ದವು ಎಂದು ಶ್ರೀನಾಥ್ ಎಂಬುವರು ದೂರಿನಲ್ಲಿ ಆಪಾದಿಸಿದ್ದಾರೆ. ಅಲ್ಲದೇ ಈ ಸಂಬಂಧ ಗುತ್ತಿಗೆದಾರರ ಪಟ್ಟಿಯನ್ನೂ ಒದಗಿಸಿರುವುದು ತಿಳಿದು ಬಂದಿದೆ.

 

 

‘ಟೆಂಡರ್‍‌ ಕಾಮಗಾರಿಗಳಲ್ಲಿ ಭ್ರಷ್ಟಾಚಾರ, ಕಮಿಷನ್‌, ಒಳ ಒಪ್ಪಂದ, ಕಳಪೆ ಕಾಮಗಾರಿಗಳು, ನಕಲಿ ಪಿಎಂಸಿ ರಿಪೋರ್ಟ್‌, ನಕಲಿ ಬಿಲ್‌ಗಳನ್ನು ಸಲ್ಲಿಸಿ ಕೋಟ್ಯಂತರ ರುಪಾಯಿನಷ್ಟು ಭ್ರಷ್ಟಾಚಾರ ನಡೆದಿದೆ,’ ಎಂದು ಶ್ರೀನಾಥ್‌ ಎಂಬುವರು ದೂರಿನಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

 

ಕಿಕ್‌ ಬ್ಯಾಕ್‌ ಮತ್ತು ಕಮಿಷನ್‌ ಪಡೆದಿರುವ ಅಧಿಕಾರಿಗಳು ಟೆಂಡರ್‍‌ನಲ್ಲಿ ಕೆಟಿಪಿಪಿ ಕಾಯ್ದೆ ಪಾಲನೆ ಮಾಡಿಲ್ಲ. ಅತೀ ಕಡಿಮೆ ಅವಧಿಗೆ ತರಾತುರಿಯಲ್ಲಿ ಟೆಂಡರ್‍‌ ಕರೆದಿದ್ದಾರೆ. ಸರ್ಕಾರದ ಸುತ್ತೋಲೆಯನ್ನೂ ಪಾಲಿಸಿಲ್ಲ. ಟೆಂಡರ್‍‌ನ ಅಂದಾಜು ಮೊತ್ತವನ್ನು ದುಪ್ಪಟ್ಟು ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿರುವುದು ತಿಳಿದು ಬಂದಿದೆ.
ಸ್ಪರ್ಧಾತ್ಮಕ ಟೆಂಡರ್‍‌ಗೆ ಅವಕಾಶ ನೀಡಿಲ್ಲ. ಇದರಿಂದ ಸರ್ಕಾರಕ್ಕೆ ಕೋಟ್ಯಂತರ ರುಪಾಯಿ ನಷ್ಟವುಂಟಾಗಿದೆ.

 

 

ಎಲ್‌ 1 ಮತ್ತು ಎಲ್‌ 2 ಅರ್ಹತೆ ಪಡೆದಿರುವ ಗುತ್ತಿಗೆದಾರರೇ ತಾಂತ್ರಿಕವಾಗಿ ಅನರ್ಹವಾಗಿದ್ದಾರೆ. ಕೆ ಡಬ್ಲ್ಯೂ ಷರತ್ತಿನಲ್ಲಿ ಕೇಳಿರುವ ದಾಖಲೆಗಳೇ ಇಲ್ಲ. ನಕಲಿ ಕಾಮಗಾರಿ ದೃಢೀಕರಣ ಪತ್ರಗಳನ್ನು ತಯಾರಿಸಿದ್ದಾರೆ. ನಕಲಿ ಸಿ ಎ ಸರ್ಟಿಫಿಕೇಟ್‌, ನಕಲಿ ಆರ್ಥಿಕ ವಹಿವಾಟು ನಡೆಸಿರುವ ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂದು ಶ್ರೀನಾಥ್‌ ಅವರು ದೂರಿರುವುದು ಗೊತ್ತಾಗಿದೆ.

 

 

ಅದೇ ರೀತಿ ಹಲವಾರು ನಕಲಿ ತಾಂತ್ರಿಕ ಅರ್ಹತಾ ದಾಖಲೆಗಳನ್ನು ಟೆಂಡರ್‍‌ನಲ್ಲಿ ಸಲ್ಲಿಸಿದ್ದಾರೆ. ಅಕ್ರಮವಾಗಿ ಹೆಚ್ಚುವರಿ ದರಕ್ಕೆ ಟೆಂಡರ್‍‌ ಪಡೆದಿದ್ದಾರೆ. ಆದರೂ ಸಹ ಗುತ್ತಿಗೆದಾರರ ಯಾವುದೇ ದಾಖಲೆಗಳನ್ನು ಅಧಿಕಾರಿಗಳು ಸಮಗ್ರವಾಗಿ ಮತ್ತು ಪಾರದರ್ಶಕವಾಗಿ ಪರಿಶೀಲಿಸಿಲ್ಲ. ಅಂದಾಜು ಮೊತ್ತಕ್ಕಿಂತ ಹೆಚ್ಚುವರಿ ದರಕ್ಕೆ ಟೆಂಡರ್‍‌ ಅಂಗೀಕರಿಸಿದ್ದಾರೆ. ಗುತ್ತಿಗೆದಾರರಿಂದ ಒಳ ಒಪ್ಪಂದ ಮಾಡಿಕೊಂಡಿರುವುದು ಕಂಡು ಬಂದಿದೆ ಎಂದು ದೂರಿನಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

ಟೆಂಡರ್‍‌ನಲ್ಲಿ ಯಶಸ್ವಿ ಬಿಡ್‌ದಾರರಾಗಿರುವ ಅನೇಕ ಗುತ್ತಿಗೆದಾರರು ನಿಗದಿತ ಕಾಲಾವಧಿಯಲ್ಲಿ ಕಾಮಗಾರಿಗಳನ್ನು ಅಂತಿಮಗೊಳಿಸಿಲ್ಲ. ಕೇವಲ ಶೇ. 15 ರಿಂದ 20ರಷ್ಟು ಮಾತ್ರ ಕಾಮಗಾರಿ ನಡೆಸಿದ್ದಾರೆ. ಅನೇಕ ಕಾಮಗಾರಿಗಳು ಇದುವರೆಗೂ ಶುರುವಾಗಿಲ್ಲ. ಪ್ರಗತಿಯಲ್ಲಿರುವ ಅನೇಕ ಕಾಮಗಾರಿಗಳೂ ಸಹ ಕಳಪೆಯಾಗಿವೆ. ಕಳಪೆ ಸಾಮಗ್ರಿಗಳನ್ನು ಬಳಸಿದ್ದಾರೆ. ಕಾಮಗಾರಿ ನಿರ್ವಹಣೆ ಸಂಬಂಧ ಸುಳ್ಳು ಪಿಎಂಸಿ ವರದಿ ಸಲ್ಲಿಸಿದ್ದಾರೆ ಎಂದು ಆರೋಪಿಸಿರುವುದು ಗೊತ್ತಾಗಿದೆ.

 

 

‘ಗುತ್ತಿಗೆದಾರರು ಟೆಂಡರ್‍‌ಗಳಿಗೆ ಹಣಕಾಸಿನ ಸಾಮರ್ಥ್ಯ, ಬಿಡ್‌ ಕೆಪಾಸಿಟಿ, ಮ್ಯಾಟ್‌ ಪ್ರಕಾರ ಅನರ್ಹರಾಗಿದ್ದಾರೆ. ಕೈಯಲ್ಲಿರುವ ಮತ್ತು ಪ್ರಗತಿಯಲ್ಲಿರುವ ಅನೇಕ ಕಾಮಗಾರಿಗಳನ್ನು ಮುಚ್ಚಿಟ್ಟು ಅದನ್ನು ತೋರಿಸಿದರೇ ಅನರ್ಹರಾಗುವುದೆಂದು ತಿಳಿದು ಅದನ್ನು ಮರೆ ಮಾಚಿದ್ದಾರೆ. ಸುಳ್ಳು ಮಾಹಿತಿ ನೀಡಿ ನಕಲಿ ದಾಖಲೆಗಳನ್ನೇ ಟೆಂಡರ್‍‌ನಲ್ಲಿ ಸಲ್ಲಿಸಿದ್ದಾರೆ. ಇದರ ಬಗ್ಗೆ ಸೂಕ್ತ ತನಿಖೆ ನಡೆಸಬೇಕು,’ ಎಂದು ಶ್ರೀನಾಥ್‌ ಒತ್ತಾಯಿಸಿದ್ದಾರೆ.

 

 

ಕಾಮಗಾರಿಗಳಿಗೆ ಕಾರ್ಯಾದೇಶ ಪಡೆಯುವ ಪೂರ್ವದಲ್ಲಿ ಭದ್ರತೆಗಾಗಿ ಸಲ್ಲಿಸಿದ್ದ ಕೋಟಿಗಟ್ಟಲೇ ಬ್ಯಾಂಕ್‌ ಗ್ಯಾರಂಟಿ ನೀಡಿರುವುದರಲ್ಲಿಯೂ ಅಕ್ರಮಗಳು ನಡೆದಿವೆ ಎಂದು ಆರೋಪಿಸಲಾಗಿದೆ. ಬ್ಯಾಂಕ್‌ ಗ್ಯಾರಂಟಿ ಅವಧಿ ಈಗಾಗಲೇ ಮುಕ್ತಾಯವಾಗಿದ್ದರೂ ಸಹ ನಿಗಮದ ಅಧಿಕಾರಿಗಳು ಅವುಗಳನ್ನು ನವೀಕರಿಸಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವು ಗುತ್ತಿಗೆದಾರರು/ ಏಜೆನ್ಸಿಗಳು ನಿಗಮಕ್ಕೆ ಗೊತ್ತಿಲ್ಲದೇ ತಮ್ಮ ತಮ್ಮ ಬ್ಯಾಂಕ್‌ಗಳಿಗೆ ಸುಳ್ಳು ಮಾಹಿತಿ ನೀಡಿದ್ದಾರೆ. ಈ ಮೂಲಕ ಎಲ್ಲಾ ಹಣವನ್ನು ಖಾತೆಗೆ ವಾಪಸ್‌ ಮಾಡಿಕೊಂಡಿದ್ದಾರೆ ಎಂದು ಶ್ರೀನಾಥ್‌ ಅವರು ದೂರಿನಲ್ಲಿ ವಿವರಿಸಿದ್ದಾರೆ.

 

ಪಿ ರವೀಂದ್ರನಾಥ್‌, ಎಸ್‌ ಪಿ ದಯಾನಂದ್‌ (ಡಿ ಎಸ್‌ ಮ್ಯಾಕ್ಸ್‌), ಜಿ ವಿ ಗೋಪಾಲರೆಡ್ಡಿ, ಅಭಯ ಬಿಲ್ಡರ್ಸ್‌, ಎಸ್‌ಕೆಎಸ್‌ ಕಾರ್ಕಳ ಇನ್ಪ್ರಾ ಪ್ರಾಜೆಕ್ಟ್ಸ್‌, ಮಧುವೀರ್‍‌ ಎಂಟರ್‍‌ಪ್ರೈಸೆಸ್‌, ಎಜಿಜೆ ಕನ್ಸ್‌ಟ್ರಕ್ಷನ್ಸ್‌, ಉಷಾ ಕನ್ಸ್‌ಟ್ರಕ್ಷನ್ಸ್‌, ಎನ್‌ಎಸ್‌ಎಲ್‌ ಕನ್ಸ್‌ಟ್ರಕ್ಷನ್ಸ್‌, ಜಿವಿಆರ್‍‌ ಇನ್ಫ್ರಾಸ್ಟಕ್ಚರ್ಸ್‌, ಪ್ರೊಫೆಲ್‌, ಜಂಪನ ಕನ್ಸ್‌ಟ್ರಕ್ಷನ್ಸ್‌, ಎನ್‌ಸಿಸಿ ಲಿಮಿಟೆಡ್‌, ಮೆಕೋ ಕನ್ಸ್‌ಟ್ರಕ್ಷನ್ಸ್‌, ಬಿಎಲ್‌ಸಿ ಇನ್ಪ್ರಾಸ್ಟಕ್ಚರ್‍‌ ಸೇರಿದಂತೆ ಹಲವು ಗುತ್ತಿಗೆದಾರರ ಪಟ್ಟಿಯನ್ನು ಒದಗಿಸಿರುವುದು ತಿಳಿದು ಬಂದಿದೆ.

 

 

ವಾಸ್ತವಾಂಶದ ವರದಿ ನೀಡುವ ಸಂಬಂಧ ಸಚಿವ ಜಮೀರ್ ಅಹ್ಮದ್‌ ಖಾನ್ ಅವರು ನಿರ್ದೇಶನ ನೀಡಿರುವುದು ಸಹ ಪತ್ರದಿಂದ ಗೊತ್ತಾಗಿದೆ.

SUPPORT THE FILE

Latest News

Related Posts