Thursday | July 9, 2026 |

ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್‌ನಲ್ಲಿ ಬಹುಕೋಟಿ ಹಗರಣ; ಲೋಕಾಯುಕ್ತದಿಂದ ತನಿಖೆ, ಹೊರಬಿದ್ದ ಆದೇಶ

ಬೆಂಗಳೂರು; ಕೋಲಾರ ಮತ್ತು ಚಿಕ್ಕಬಳ್ಳಾಪುರ ಕೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ಹಿಂದಿನ ಕಾಂಗ್ರೆಸ್‌ ಮತ್ತು ಬಿಜೆಪಿ ಅವಧಿಯಿಂದಲೂ ನಡೆದಿರುವ ವಿವಿಧ ರೀತಿಯ ಅಕ್ರಮಗಳು ಮತ್ತು ಹಣ ದುರುಪಯೋಗ ಪ್ರಕರಣಗಳ ಕುರಿತು ತನಿಖೆ ನಡೆಸಲು ರಾಜ್ಯ ಕಾಂಗ್ರೆಸ್‌ ಸರ್ಕಾರವು ಲೋಕಾಯುಕ್ತಕ್ಕೆ ವಹಿಸಿದೆ.

ಕೋಲಾರ – ಚಿಕ್ಕಬಳ್ಳಾಪುರ ಕೇಂದ್ರ ಸಹಕಾರ ಬ್ಯಾಂಕ್‌ನ ವಿವಿಧ ಶಾಖೆಗಳಲ್ಲಿ ನಡೆದ 9.86 ಕೋಟಿ ರೂಪಾಯಿ ಅವ್ಯವಹಾರ ನಡೆದಿತ್ತು. ಈ ಪ್ರಕರಣದಲ್ಲಿ ಭಾಗಿ ಆಗಿದ್ದಾರೆ ಎನ್ನಲಾಗಿದ್ದ ಹಲವರನ್ನು ಅಮಾನತುಗೊಳಿಸಿರುವ ನಡುವೆಯೇ ಲೋಕಾಯುಕ್ತ ತನಿಖೆಗೆ ವಹಿಸಿರುವುದು ಮುನ್ನೆಲೆಗೆ ಬಂದಿದೆ.

ಈ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ವಹಿಸಿರುವ ಸಹಕಾರ ಇಲಾಖೆಯು 2026ರ ಏಪ್ರಿಲ್‌ 4ರಂದು ಆದೇಶ ವಹಿಸಿದೆ. ಮುಚ್ಚಿದ ಲಕೋಟೆಯಲ್ಲಿನ ಈ ಆದೇಶದ ಪ್ರತಿಯನ್ನು ಲೋಕಾಯುಕ್ತ ಸಂಸ್ಥೆಯು 2026ರ ಏಪ್ರಿಲ್‌ 9ರಂದು ಸ್ವೀಕರಿಸಿದೆ. ಈ ಆದೇಶದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ಸಾರ್ವಜನಿಕ ಠೇವಣಿ ಹಣವು ದುರುಪಯೋಗವಾಗಿತ್ತು. ನಬಾರ್ಡ್‌, ಅಪೆಕ್ಸ್‌ ಬ್ಯಾಂಕ್‌ನಿಂದ ಸಾಲ ಪಡೆದುಕೊಂಡು ಬ್ಯಾಂಕ್‌ನಿಂದ ಕೆಸಿಸಿ ಸಾಲ, ಇತರೆ ಸಾಲ ಮತ್ತು ಸ್ವ ಸಹಾಯ ಸಂಘಗಳಿಗೆ ಸಾಲವನ್ನು ನಿಯಮಾನುಸಾರ ನೀಡಿರಲಿಲ್ಲ. ಅಲ್ಲದೇ ಸರ್ಕಾರದ ನಿಯಮಾನುಸಾರ ಬಡ್ಡಿ ಸಹಾಯಧನ ಕ್ಲೈಮ್ ಮಾಡಿರಲಿಲ್ಲ.

2017-18ರಿಂದ 2023-24ರವರ ಅವಧಿಯಲ್ಲಿ ನಡೆದ ವಂಚನೆ ಮತ್ತು ಹಣ ದುರುಪಯೋಗ ಪ್ರಕರಣಗಳು ಕಂಡು ಬಂದಿದ್ದವು. ಈ ಬಗ್ಗೆ ಇಲಾಖೆಯಿಂದ ತನಿಖೆಗೆ ಆದೇಶ ಮಾಡಿತ್ತು. ಇದನ್ನು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿಗಳ ಮೂಲಕ ಪ್ರಶ್ನಿಸಲಾಗಿತ್ತು. ಹೈಕೋರ್ಟ್‌ನಲ್ಲಿ ಒಟ್ಟು 20ಕ್ಕಿಂತ ಹೆಚ್ಚು ರಿಟ್ ಅರ್ಜಿಗಳು ದಾಖಲಾಗಿದ್ದವು. ಈ ಅರ್ಜಿಗಳ ಮೇಲೆ ಮಧ್ಯಂತರ ಆದೇಶಗಳನ್ನು ಪಡೆದುಕೊಳ್ಳುತ್ತಿದ್ದರು. ಸದ್ಯ ಈ ಎಲ್ಲಾ ರಿಟ್‌ ಅರ್ಜಿಗಳು ಹೈಕೋರ್ಟ್‌ನಲ್ಲಿ ಇತ್ಯರ್ಥಕ್ಕೆ ಬಾಕಿ ಇವೆ.

ಇದೆಲ್ಲವೂ ಬಹುಕೋಟಿ ಹಗರಣವಾಗಿದೆ. 2017-18ರಿಂದ 2023-24ರವರೆಗಿನ ಅವಧಿಯಲ್ಲಿ ಸರ್ಕಾರದ ನಿಯಮ ಮೀರಿ ಸಾಲ ವಿತರಣೆ ಆಗಿತ್ತು. ಸರ್ಕಾರ ನೀಡಿದ್ದ ಸಹಾಯಧನ ಮತ್ತು ಇದರ ಕ್ಲೈಮ್‌ ಮಾಡುವಲ್ಲಿಯೂ ಭಾರೀ ಪ್ರಮಾಣದ ಅವ್ಯವಹಾರ ನಡೆದಿತ್ತು. ಹಣ ದುರುಪಯೋಗವೂ ಆಗಿತ್ತು. ಹೀಗಾಗಿ ಇಂತಹ ಪ್ರಕರಣಗಳನ್ನು ಪಾರದರ್ಶಕ ಹಾಗೂ ತ್ವರಿತ ತನಿಖೆ ನಡೆಸಲು ಪ್ರತ್ಯೇಕ ತನಿಖಾ ತಂಡ ರಚಿಸಬೇಕು, ಇಲ್ಲವೇ ಲೋಕಾಯುಕ್ತ ತನಿಖೆ ನಡೆಸಬೇಕು ಎಂದು ವಿಧಾನ ಪರಿಷತ್‌ನಲ್ಲಿ ಸದಸ್ಯ ಎಂ ಎಲ್ ಅನಿಲ್ ಕುಮಾರ್ ಅವರು ನಿಯಮ 330ರ ಅಡಿ ಗಮನಸೆಳೆಯುವ ಸೂಚನೆ ನೀಡಿದ್ದರು.

 

 

ಅಲ್ಲದೇ ಲೋಕಾಯುಕ್ತದಿಂದ ತನಿಖೆ ನಡೆಸಿ ಸಂಬಂಧಪಟ್ಟವರ ಮೇಲೆ ಶಿಸ್ತು, ಕ್ರಿಮಿನಲ್ ಮತ್ತು ಸಿವಿಲ್ ಕ್ರಮ ಕೈಗೊಂಡು ವಂಚನೆಯಾಗಿರುವ ಸಾರ್ವಜನಿಕ ಹಣವನ್ನು ವಸೂಲಾತಿ ಮಾಡಬೇಕು. ಬ್ಯಾಂಕಿನ ಆರ್ಥಿಕತೆಯನ್ನು ಸುಸ್ಥಿತಿಗೆ ತರಲು ಕ್ರಮವಹಿಸಬೇಕು ಎಂದು ಸದನದಲ್ಲಿ ಹಲವು ಬಾರಿ ಪ್ರಸ್ತಾವಿಸಿದ್ದರು. ಸರ್ಕಾರದ ಹಣವನ್ನು ವಸೂಲು ಮಾಡಲಾಗುವುದು ಎಂದು ಸರ್ಕಾರವು ಸದನದಲ್ಲಿ ಹೇಳಿಕೆ ನೀಡಿದ್ದರೂ ಸಹ ಯಾವುದೇ ಕ್ರಮವಹಿಸಿರಲಿಲ್ಲ. ಹೀಗಾಗಿ 2025ರಲ್ಲಿ ಪುನಃ ನಿಯಮ 330ರ ಅಡಿ ಗಮನಸೆಳೆಯುವ ಸೂಚನೆಯಲ್ಲಿ ಈ ಪ್ರಕರಣವನ್ನು ಪ್ರಸ್ತಾವಿಸಿದ್ದರು.

ಅಲ್ಲದೇ ಈ ಹಿಂದಿನ ಸಹಕಾರ ಸಚಿವರು ಈ ಬ್ಯಾಂಕ್‌ನ ಅವ್ಯವಹಾರಗಳ ಕುರಿತಾದ ತನಿಖೆಯನ್ನು ಸಿಐಡಿ, ಕರ್ನಾಟಕ ಲೋಕಾಯುಕ್ತ ಅಥವಾ ನಿವೃತ್ತ ನ್ಯಾಯಾಧೀಶರಿಗೆ ವಹಿಸಬೇಕು ಎಂಬುದರ ಕುರಿತು ಪರಿಶೀಲನೆ ಮಾಡಿ ಆದಷ್ಟು ಬೇಗ ಕ್ರಮ ವಹಿಸಲಾಗುವುದು ಎಂದು ಸದನಕ್ಕೆ ಭರವಸೆ ನೀಡಿದ್ದರು. ಇದೀಗ ಸರ್ಕಾರವು ಈ ಪ್ರಕರಣವನ್ನು ಲೋಕಾಯುಕ್ತದಿಂದಲೇ ತನಿಖೆ ನಡೆಸಲು ನಿರ್ಧರಿಸಿದೆ. ಇಲಾಖೆಯ ಈ ತೀರ್ಮಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದಿಸಿದ್ದಾರೆ.

 

 

ಈ ಬ್ಯಾಂಕ್‌ನಲ್ಲಿ ನಡೆದಿದೆ ಎನ್ನಲಾಗಿದ್ದ 9.86 ಕೋಟಿ ರೂ. ಅವ್ಯವಹಾರ ಪ್ರಕರಣಗಳಲ್ಲಿ ಭಾಗಿ ಆಗಿದ್ದಾರೆ ಎಂದು ಆರೋಪಿತರಾಗಿದ್ದ ಕೋಲಾರ, ಕೆಜಿಎಫ್‌ ಹಾಗೂ ಚಿಂತಾಮಣಿ ತಾಲೂಕು ವ್ಯವಸ್ಥಾಪಕರನ್ನು ಅಮಾನತು ಮಾಡಲಾಗಿತ್ತು. ಕೋಲಾರ ಶಾಖೆಯಲ್ಲಿ 1.50 ಕೋಟಿ ರೂ., ಕೆಜಿಎಫ್‌ ಶಾಖೆಯಲ್ಲಿ 4.17 ಕೋಟಿ ರೂಪಾಯಿ ಹಾಗೂ ಚಿಂತಾಮಣಿ ಶಾಖೆಯಲ್ಲಿ 2.23 ಕೋಟಿ ರೂಪಾಯಿ ಹಣ ದುರುಪಯೋಗವಾಗಿರುವುದು ಆಂತರಿಕ ತನಿಖೆಯಲ್ಲಿ ಸಾಬೀತಾಗಿತ್ತು.

ಈ ಡಿಸಿಸಿ ಬ್ಯಾಂಕಿನಲ್ಲಿ 2017-18ನೇ ಸಾಲಿನಿಂದ 2020- 21ನೇ ಸಾಲಿನವರೆಗೆ ನಡೆದಿರುವ ಅಕ್ರಮಗಳನ್ನು ತನಿಖೆ ನಡೆಸುವಂತೆ ಮುನೀಶ್‌ ಎಂಬುವರು ದೂರು ನೀಡಿದ್ದರು. ಅದರಂತೆ ಬ್ಯಾಂಕಿನ ಆಂತರಿಕ ಪರಿವೀಕ್ಷಣಾ ತಂಡ ನಡೆಸಿದ್ದ ತನಿಖೆಯಲ್ಲಿ ಮೂರು ಶಾಖೆಗಳಲ್ಲಿ ಕೋಟ್ಯಂತರ ರೂ. ಹಣ ದುರುಪಯೋಗ ಆಗಿರುವುದನ್ನು ದೃಢಪಡಿಸಿತ್ತು.

ಕೋಲಾರ ಶಾಖೆಯಲ್ಲಿ 1.50 ಕೋಟಿ ರೂ., ಕೆಜಿಎಫ್‌ ಶಾಖೆಯಲ್ಲಿ 4.17 ಕೋಟಿ ರೂ. ಹಾಗೂ ಚಿಂತಾಮಣಿ ಶಾಖೆಯಲ್ಲಿ 2.23 ಕೋಟಿ ರೂ. ಹಣ ದುರುಪಯೋಗವಾಗಿರುವುದು ಆಂತರಿಕ ತನಿಖೆಯಲ್ಲಿ ಸಾಬೀತಾದ ಹಿನ್ನೆಲೆಯಲ್ಲಿ ವ್ಯವಸ್ಥಾಪಕರಾದ ಎಂ ಅಮರೇಶ್‌, ಜಿಎನ್‌ ಗಿರೀಶ್‌ ಹಾಗೂ ಜಿ ನಾಗರಾಜ್‌ ಎಂಬುವರ ವಿರುದ್ಧ ವಿಚಾರಣೆಯನ್ನು ಕಾಯ್ದಿರಿಸಿ ಸೇವೆಯಿಂದ ಅಮಾನತುಗೊಳಿಸಲಾಗಿತ್ತು.

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ಸುಮಾರು ₹11 ಕೋಟಿಗೂ ಹೆಚ್ಚು ಸಾಲ ಮನ್ನಾ ಮತ್ತು ಸಾಲ ವಿತರಣೆಯಲ್ಲಿ ಅವ್ಯವಹಾರ ನಡೆದ ಹಿನ್ನೆಲೆಯಲ್ಲಿ, ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿದ್ದರು. ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡ ಅವರ ನಿವಾಸ ಸೇರಿದಂತೆ ಹಲವೆಡೆ ದಾಳಿ ನಡೆಸಿ, ಮುಖ್ಯ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಪ್ರಮುಖ ವ್ಯವಸ್ಥಾಪಕರನ್ನು ಅಮಾನತುಗೊಳಿಸಲಾಗಿತ್ತು.

ಚಿಂತಾಮಣಿ ಶಾಖೆ ಸೇರಿದಂತೆ ವಿವಿಧ ಕಡೆ ರೈತರ ಸಾಲಮನ್ನಾ ಹಣ ದುರ್ಬಳಕೆ, ನಕಲಿ ದಾಖಲೆ ಸೃಷ್ಟಿಸಲಾಗಿತ್ತು. 2025ರ ಮೇ ತಿಂಗಳಿನಲ್ಲಿ ಕೋಲಾರ, ಕೆಜಿಎಫ್, ಚಿಂತಾಮಣಿ ಸೇರಿದಂತೆ ಒಟ್ಟು 9 ಕಡೆ ಏಕಕಾಲದಲ್ಲಿ ಲೋಕಾಯುಕ್ತ ದಾಳಿ ನಡೆದಿತ್ತು. ಬ್ಯಾಂಕ್‌ನ ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡರ ನಿವಾಸ ಮತ್ತು ಕಚೇರಿಗಳಲ್ಲಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿತ್ತು. ಈ ಅವ್ಯವಹಾರವು ಸುಮಾರು ₹11 ಕೋಟಿಯಿಂದ ₹400 ಕೋಟಿಯವರೆಗೆ ಇರಬಹುದು ಎಂಬ ಆರೋಪಗಳಿವೆ, ಮತ್ತು ಈ ಬಗ್ಗೆ ತೀವ್ರ ತನಿಖೆ ನಡೆಸಲು ಒತ್ತಾಯಿಸಿತ್ತು.

ಏನಿದು ಅವ್ಯವಹಾರ?

ಸ್ವ ಸಹಾಯ ಸಂಘಗಳ ಸಾಲಗಳ ಬಡ್ಡಿಯನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಭರಿಸುತ್ತವೆ. ಆದರೆ, ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಬಡ್ಡಿ ಬಿಡುಗಡೆಯಾಗದಿದ್ದರೂ, ಹಣ ಸಂದಾಯವಾಗಿದೆ ಎಂದು ದಾಖಲೆಗಳಲ್ಲಿ ನಮೂದು ಮಾಡಿ ಬ್ಯಾಂಕಿನಲ್ಲಿರುವ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿತ್ತು.

ಎರಡು ಕಡೆ ಎಫ್‌ಐಆರ್‌

ಚಿಂತಾಮಣಿ ಹಾಗೂ ಗುಡಿಬಂಡೆ ಶಾಖೆಗಳಲ್ಲಿರುವ ಡಿಸಿಸಿ ಬ್ಯಾಂಕಿನ ಹಣ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಫ್‌ಐಆರ್‌ ದಾಖಲಾಗಿದೆ. ಬ್ಯಾಂಕಿನ ಸಿಇಒ ಸೇರಿದಂತೆ ಹಲವು ವ್ಯವಸ್ಥಾಪಕರು ಹಾಗೂ ಸಿಬ್ಬಂದಿಯ ವಿರುದ್ಧವೂ ಪ್ರಕರಣ ದಾಖಲಾಗಿತ್ತು. ಅದರಂತೆ ಹಣ ದುರುಪಯೋಗಕ್ಕೆ ಸಂಬಂಧಿಸಿದಂತೆ 17 ಮಂದಿಯ ವಿರುದ್ಧ ಆರೋಪವಿದ್ದರೂ, ಕೇವಲ ಮೂವರ ವಿರುದ್ಧವೇ ಕ್ರಮಕೈಗೊಳ್ಳಲಾಗಿದೆ ಎಂಬ ದೂರುಗಳು ಸಲ್ಲಿಕೆಯಾಗಿದ್ದವು.

ಡಿಸಿಸಿ ಬ್ಯಾಂಕಿನಲ್ಲಿ ನಡೆದಿರುವ ಕೋಟ್ಯಂತರ ರೂಪಾಯಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಮೂವರನ್ನು ಅಮಾನತು ಮಾಡಿದ್ದು, ಅವ್ಯವಹಾರದಲ್ಲಿ ಭಾಗಿಯಾದ ಇನ್ನೂ 12 ಮಂದಿ ವಿರುದ್ಧ ಕ್ರಮ ಕೈಗೊಳ್ಳಲು ಸಿಇಒ ಅವರು ಮೀನಾಮೇಷ ಎಣಿಸುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ದೂರುದಾರ ಮುನೀಶ್‌ ಆಪಾದಿಸಿದ್ದರು.

Hot this week

ಈಶಾ ಎಜುಕೇಷನ್, ಈಶಾ ಯೋಗ ಸೆಂಟರ್‍‌ಗೆ ಅಕ್ರಮ ಲಾಭ, ಸರ್ಕಾರಕ್ಕೆ ವಂಚನೆ, ದ್ರೋಹ ಆರೋಪ; ದಿ ಫೈಲ್ ವರದಿ ಬೆನ್ನಲ್ಲೇ ಜಿಲ್ಲಾಧಿಕಾರಿಯಿಂದ ವರದಿ ಕೇಳಿದ ಸರ್ಕಾರ

ಬೆಂಗಳೂರು; ಚಿಕ್ಕಬಳ್ಳಾಪುರ ತಾಲೂಕಿನ ಆವಲಗುರ್ಕಿ ಗ್ರಾಮದಲ್ಲಿನ ವಿವಿಧ ಸರ್ವೇ ನಂಬರ್‍‌ಗಳಲ್ಲಿ ಒಟ್ಟಾರೆ...

ಏತ ನೀರಾವರಿ ಯೋಜನೆಗೆ ಭೂ ಸ್ವಾಧೀನ; ಅಭಿವೃದ್ಧಿ ಹೊಂದಿದ ಜಮೀನುಗಳ ಸರ್ವೇ ನಂಬರ್‍‌ ವಿವರಣೆ ನೀಡದ ಅಧಿಕಾರಿವರ್ಗ

ಬೆಂಗಳೂರು; ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಗುತ್ತಿಹೊಳೆ ಗ್ರಾಮದಲ್ಲಿ ವೀರಭದ್ರೇಶ್ವರ ಏತ...
Please Scan to make Your Contribution

Topics

ಈಶಾ ಎಜುಕೇಷನ್, ಈಶಾ ಯೋಗ ಸೆಂಟರ್‍‌ಗೆ ಅಕ್ರಮ ಲಾಭ, ಸರ್ಕಾರಕ್ಕೆ ವಂಚನೆ, ದ್ರೋಹ ಆರೋಪ; ದಿ ಫೈಲ್ ವರದಿ ಬೆನ್ನಲ್ಲೇ ಜಿಲ್ಲಾಧಿಕಾರಿಯಿಂದ ವರದಿ ಕೇಳಿದ ಸರ್ಕಾರ

ಬೆಂಗಳೂರು; ಚಿಕ್ಕಬಳ್ಳಾಪುರ ತಾಲೂಕಿನ ಆವಲಗುರ್ಕಿ ಗ್ರಾಮದಲ್ಲಿನ ವಿವಿಧ ಸರ್ವೇ ನಂಬರ್‍‌ಗಳಲ್ಲಿ ಒಟ್ಟಾರೆ...

ಏತ ನೀರಾವರಿ ಯೋಜನೆಗೆ ಭೂ ಸ್ವಾಧೀನ; ಅಭಿವೃದ್ಧಿ ಹೊಂದಿದ ಜಮೀನುಗಳ ಸರ್ವೇ ನಂಬರ್‍‌ ವಿವರಣೆ ನೀಡದ ಅಧಿಕಾರಿವರ್ಗ

ಬೆಂಗಳೂರು; ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಗುತ್ತಿಹೊಳೆ ಗ್ರಾಮದಲ್ಲಿ ವೀರಭದ್ರೇಶ್ವರ ಏತ...

3 ವರ್ಷವಾದರೂ ಆರಂಭವಾಗದ ಕಟ್ಟಡ ಭಗ್ನಾವಶೇಷ ಘಟಕ; ನಗರಾಭಿವೃದ್ಧಿ ಸಚಿವರ ತವರಲ್ಲೇ ನಾಗರಿಕರಿಗೆ ದಂಡ, ರದ್ದಾಗದ ಬೈಲಾ

ಮೈಸೂರು;  ನಗರಾಭಿವೃದ್ಧಿ ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿನ ...

ಖಾಸಗಿ ಮಠದ ಒಡೆತನದ ಆಸ್ತಿಯಲ್ಲಿ ಸರ್ಕಾರಿ ಕಾಮಗಾರಿ, 8.4 ಕೋಟಿ ವೆಚ್ಚ; ತನಿಖೆ ಹಾದಿ ತಪ್ಪಿಸಿದರೇ ನಿವೃತ್ತ ಐಎಎಸ್ ಅಧಿಕಾರಿ ಐಎಸ್‌ಎನ್ ಪ್ರಸಾದ್‌?

ಬೆಂಗಳೂರು;  ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಾಮಚಂದ್ರಾಪುರ ಗ್ರಾಮದ ಚಂದ್ರಮೌಳೇಶ್ವರ ದೇವಸ್ಥಾನ...

Related Articles

Popular Categories

error: Content is protected !!