ಶಕ್ತಿ ಯೋಜನೆ; 1,373 ಕೋಟಿ ರು.ನಲ್ಲಿ 399 ಕೋಟಿಯಷ್ಟೇ ಬಿಡುಗಡೆ, ಬಿಗಡಾಯಿಸಿದ ಆರ್ಥಿಕ ಪರಿಸ್ಥಿತಿ

ಬೆಂಗಳೂರು:  ಶಕ್ತಿ ಯೋಜನೆಯನ್ನು ಅನುಷ್ಠಾನಗೊಳಿಸಿರುವ ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ ಸಹಾಯಾನುದಾನವನ್ನು ಪೂರ್ಣ ಪ್ರಮಾಣದಲ್ಲಿ ಬಿಡುಗಡೆ ಮಾಡುತ್ತಿಲ್ಲ. ಸಾರಿಗೆ ನಿಗಮಗಳು ಕ್ಲೈಮ್‌ ಮಾಡುತ್ತಿರುವ ವೆಚ್ಚಕ್ಕಿಂತಲೂ ಅತ್ಯಂತ ಕಡಿಮೆ ಸಹಾಯ ಧನ ಬಿಡುಗಡೆ ಮಾಡುತ್ತಿದೆ. ಹೀಗಾಗಿ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿರುವುದು ಇದೀಗ ಬಹಿರಂಗವಾಗಿದೆ.

 

ಶಕ್ತಿ ಯೋಜನೆಯಡಿ ಜೂನ್‌ 2023ರಿಂದ ಫೆಬ್ರುವರಿ 2024ರವರೆಗೆ ಸಹಾಯಾನುದಾನ ಬಿಡುಗಡೆ ಮಾಡಿದೆಯಾದರೂ ಇನ್ನೂ 1,373.77 ಕೋಟಿ ರು. ಕೊರತೆಯುಂಟಾಗಿದೆ. ಈ ಬಗ್ಗೆ ಕೆಎಸ್‌ಆರ್‍‌ಟಿಸಿ ವ್ಯವಸ್ಥಾಪಕ ನಿರ್ದೇಶಕರು ಗಮನಕ್ಕೆ ತಂದಿದ್ದರು. ಆದರೂ ಸಹ ನಿಗಮಗಳು ಇರಿಸಿದ್ದ ಬೇಡಿಕೆ ಪೈಕಿ 2024ರ ಮಾರ್ಚ್‌ 13ರಂದು ಕೇವಲ 399.75 ಕೋಟಿ ರು.ಗಳನ್ನು ಬಿಡುಗಡೆ ಮಾಡಿದೆ.

 

ಈ ಯೋಜನೆಯಡಿ ಬಿಡುಗಡೆ ಮಾಡಲು ಇನ್ನೂ 974.02 ಕೋಟಿ ರು.ಗಳನ್ನು ಬಾಕಿ ಉಳಿಸಿಕೊಂಡಿದೆ. ಸರ್ಕಾರವು ಬಿಡುಗಡೆ ಮಾಡಿರುವ ಸಹಾಯಾನುದಾನವು ಸಾರಿಗೆ ನಿಗಮಗಳಿಗೆ ಅರೆ ಕಾಸಿನ ಮಜ್ಜಿಗೆಯಂತಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಸೇರಿದಂತೆ ಕೆಎಸ್‌ಆರ್‍‌ಟಿಸಿಗೆ 151.36 ಕೋಟಿ ರು., ಬಿಎಂಟಿಸಿಗೆ 69.77 ಕೋಟಿ ರು., ವಾಯುವ್ಯ ಕರ್ನಾಟಕ ಸಾರಿಗೆಗೆ 97.31 ಕೋಟಿ ರು., ., ಕಲ್ಯಾಣ ಕರ್ನಾಟಕ ಸಾರಿಗೆಗೆ 81.29 ಕೋಟಿ ರು. ಸೇರಿ ಒಟ್ಟಾರೆ 399.75 ಕೋಟಿ ರು.,ಗ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.

 

ವ್ಯವಸ್ಥಾಪಕ ನಿರ್ದೇಶಕರ ಪತ್ರದಲ್ಲೇನಿತ್ತು?

 

ಶಕ್ತಿ ಯೋಜನೆಯಡಿ ಸರ್ಕಾರದ ಆಯವ್ಯಯ ಹಂಚಿಕೆಯ 2,800.00 ಕೋಟಿ ರು.ಗಳ ಅನುದಾನದಲ್ಲಿ ಮಾಹೆವಾರು ಲಭ್ಯವಾಗುವ ಅನುದಾನದಂತೆ ಸರ್ಕಾರದಿಂದ ಸಹಾಯಧನ ಬಿಡುಗಡೆಗೊಳಿಸಲು ಕ್ರಮವಹಿಸಲಾಗುತ್ತಿದೆ.

 

ನಿಗಮಗಳಿಂದ ಕ್ಲೈಮ್‌ ಮಾಡುತ್ತಿರುವ ವೆಚ್ಚಕ್ಕಿಂತ ಕಡಿಮೆ ಸಹಾಯಧನ ಬಿಡುಗಡೆ ಮಾಡುತ್ತಿರುವುದರಿಂದ ಮರುಪಾವತಿ ಮೊತ್ತದಲ್ಲಿ ಕೊರತೆಯುಂಟಾಗಿದೆ. ಹೀಗಾಗಿ ರಸ್ತೆ ಸಾರಿಗೆ ನಿಗಮಗಳಿಗೆ ತೀವ್ರತರದ ಆರ್ಥಿಕ ನಷ್ಟವುಂಟಾಗುತ್ತಿದೆ ಎಂದು ಕೆಎಸ್‌ಆರ್‍‌ಟಿಸಿ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿರುವುದು ಗೊತ್ತಾಗಿದೆ.

 

ಕೊರತೆ ಪ್ರಮಾಣ

 

ಶಕ್ತಿ ಯೋಜನೆಯಡಿ ಜೂನ್ 2023ರಿಂದ 2024ರ ಫೆಬ್ರುವರಿಗೆ ಬಿಡುಗಡೆಗೊಳಿಸಿರುವ ಮೊತ್ತದಲ್ಲಿ ಕೆಎಸ್‌ಆರ್‍‌ಟಿಸಿಗೆ 520.96 ಕೋಟಿ ರು., ಬಿಎಂಟಿಸಿಗೆ 239.84 ಕೋಟಿ ರು., , ವಾಯುವ್ಯ ಕರ್ನಾಟಕ ಸಾರಿಗೆಗೆ 334.45 ಕೋಟಿ ರು, ರು., ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ 279.41 ಕೋಟಿ ರು., ಹೀಗೆ ಒಟ್ಟಾರೆ 1,373.77 ಕೋಟಿ ಕೊರತೆಯುಂಟಾಗಿದೆ.

 

ಕೆಎಸ್‌ಆರ್‍‌ಟಿಸಿ ಬೇಡಿಕೆ ಇರಿಸಿದ್ದ 520.96 ಕೋಟಿ ರು. ನಲ್ಲಿ 151.36 ಕೋಟಿ ರು. ಬಿಡುಗಡೆ ಮಾಡಿರುವ ಸರ್ಕಾರವು 369.6 ಕೋಟಿ ರು. ಬಾಕಿ ಇರಿಸಿಕೊಂಡಿದೆ. ಅದೇ ರೀತಿ ಬಿಎಂಟಿಸಿಗೆ 170.07 ಕೋಟಿ ರು., ವಾಯುವ್ಯ ಕರ್ನಾಟಕ ಸಾರಿಗೆ ನಿಗಮಕ್ಕೆ 237.14 ಕೋಟಿ ರು., ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ 198.12 ಕೋಟಿ ರು. ಬಾಕಿ ಇರಿಸಿಕೊಂಡಿರುವುದು ಗೊತ್ತಾಗಿದೆ.

 

2023-24ನೇ ಸಾಲಿನ ಪೂರಕ ಅಂದಾಜುಗಳು (ಎರಡು ಮತ್ತು ಅಂತಿಮ ಕಂತು) ವೆಚ್ಚ ಮಾಡಲು ಅನುಮತಿ ಪತ್ರ ನೀಡಿತ್ತು. ಪೂರಕ ಅಂದಾಜುಗಳಲ್ಲಿ ಅಭಿಯಾಚನೆ ಕ್ರಮಾಂಕ 05ರಲ್ಲಿ ಶಕ್ತಿ ಯೋಜನೆಯ ಲೆಕ್ಕ ಶೀರ್ಷಿಕೆ (3055-00-190-0-16-106) ಸಹಾಯಧನದಡಿ 284.00.00 ಕೋಟಿ ರು., ಮತ್ತು ಪರಿಶಿಷ್ಟ ಜಾತಿ ಉಪ ಯೋಜನೆಯಡಿ 80.00 ಕೋಟಿ, ಗಿರಿಜನ ಉಪಯೋಜನೆಯಡಿ 36.00 ಕೋಟಿ ಸೇರಿದಂತೆ 400.00 ಕೋಟಿ ರು. ಗಳನ್ನು ಹಂಚಿಕೆ ಮಾಡಲಾಗಿದೆ.

 

 

 

ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಒದಗಿಸುವ ಶಕ್ತಿ ಯೋಜನೆಗೆ ಸಂಬಂಧಿಸಿದಂತೆ ಮೊದಲ ಕಂತಿನ ಮೊತ್ತವಾದ 250.96 ಕೋಟಿ ರು ಪೈಕಿ 125.48 ಕೋಟಿ ರು.ಗಳನ್ನಷ್ಟೇ ಬಿಡುಗಡೆ ಮಾಡಿದೆ. ಬಿಡುಗಡೆಗೆ ಇನ್ನೂ 125 ಕೋಟಿ ರು.ಗಳನ್ನು ಆರಂಭಿಕ ಹಂತದಲ್ಲೇ  ಬಾಕಿ ಇರಿಸಿಕೊಂಡಿತ್ತು.

 

ಶಕ್ತಿ ಯೋಜನೆ  ಆರಂಭವಾದ ದಿನದಿಂದ ಜುಲೈ 30ರವರೆಗೆ  687,49,57,753 ಕೋಟಿ ರು. ಆರ್ಥಿಕ ವೆಚ್ಚವಾಗಿದ್ದರೂ ಯೋಜನೆಯ ಸಹಾಯಾನುದಾನದ ಪೈಕಿ ಮೊದಲ ಕಂತಿನ ಪೂರ್ಣ ಮೊತ್ತವಾದ  250.96 ಕೋಟಿ ರು.ಗಳನ್ನೂ ಬಿಡುಗಡೆ ಮಾಡಿರಲಿಲ್ಲ. ಇದರಿಂದ  ಸಾರಿಗೆ ನಿಗಮದ ಚಾಲಕ, ನಿರ್ವಾಹಕರು ಸೇರಿದಂತೆ ಇನ್ನಿತರೆ ಸಿಬ್ಬಂದಿಗಳ ವೇತನದಲ್ಲಿ ಅಡಚಣೆಯಾಗಿತ್ತು.

 

ಶಕ್ತಿ ಯೋಜನೆಯಡಿ ರಾಜ್ಯದ ಎಲ್ಲಾ ಮಹಿಳೆಯರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಜೂನ್‌ ನಲ್ಲಿ ಉಚಿತವಾಗಿ ಪ್ರಯಾಣಿಸಿದ್ದರು. ಪ್ರಯಾಣ ವೆಚ್ಚದ ಮರು ಪಾವತಿಗಾಗಿ ನಾಲ್ಕು ಸಾರಿಗೆ ಸಂಸ್ಥೆಗಳಿಗೆ 250.96 ಕೋಟಿ ರು.ಗಳನ್ನು ಬಿಡುಗಡೆಗೊಳಿಸಬೇಕು ಎಂದು ಸಾರಿಗೆ ಇಲಾಖೆಯು ಸಾರಿಗೆ ನಿಗಮಗಳು ಸರ್ಕಾರವನ್ನು ಕೋರಿದ್ದವು.

 

 

 

ಶಕ್ತಿ ಯೋಜನೆ ಸಹಾಯಧನ ಪಾವತಿ; ಕೇಳಿದ್ದು 250 ಕೋಟಿ, ಕೊಟ್ಟಿದ್ದು 125 ಕೋಟಿ, ನೌಕರರ ವೇತನದಲ್ಲಿ ಅಡಚಣೆ?

 

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ 4715.12 ಲಕ್ಷ ರು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ 2185.10 ಲಕ್ಷ ರು., ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ 3257.59 ಲಕ್ಷ ರು., ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗೆ 2390.40 ಲಕ್ಷ ರು. ಸೇರಿ ಒಟ್ಟಾರೆ 12548.21 ಲಕ್ಷ ರು.ಗಳನ್ನು ಬಿಡುಗಡೆ ಮಾಡಿತ್ತು.

 

 

ಕರ್ನಾಟಕ ರಾಜ್ಯ ಸಾರಿಗೆ, ವಾಯುವ್ಯ ಕರ್ನಾಟಕ, ಬಿಎಂಟಿಸಿ, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಗಳಿಗೆ ಮೊದಲ ಕಂತಿನ ರೂಪದಲ್ಲಿ 250.96 ಕೋಟಿ ರು. ಬಿಡುಗಡೆ ಮಾಡಬೇಕು ಎಂದು ಸಾರಿಗೆ ಇಲಾಖೆಯು ವಾರದ ಹಿಂದೆಯೇ ಆರ್ಥಿಕ ಇಲಾಖೆಗೆ  ಕಳಿಸಿದೆ. ಸದ್ಯ ಈ  ಕಡತವು ಸರ್ಕಾರದ ಕಾರ್ಯದರ್ಶಿ ಡಾ ಏಕರೂಪ್‌ ಕೌರ್‍‌ ಅವರ ಬಳಿ ಇದೆ ಎಂದು ಗೊತ್ತಾಗಿದೆ.

 

ಶಕ್ತಿ ಯೋಜನೆಗೆ 687.49 ಕೋಟಿ ಆರ್ಥಿಕ ವೆಚ್ಚ; ಇನ್ನೂ ಬಿಡುಗಡೆಯಾಗದ ಮೊದಲ ಕಂತಿನ 250.96 ಕೋಟಿ ರು.

 

ಜೂನ್‌ 11ರಿಂದ ಜುಲೈ 30ರವರೆಗೆ ಮಹಿಳೆಯರು ಪ್ರಯಾಣಿಸಿರುವ ಸಂಬಂಧ ಟಿಕೆಟ್‌ ಮೌಲ್ಯದ ಮೊತ್ತ  ಒಟ್ಟಾರೆ 687,49,57,753 ರು.ಗಳಾಗಿದೆ. ಇದರಲ್ಲಿ ಕೆಎಸ್‌ಆರ್‍‌ಟಿಸಿಯಲ್ಲಿ 260,26,75,205 ರು.ಗಳಾಗಿದ್ದು, ಒಟ್ಟಾರೆ ಟಿಕೆಟ್‌ ಮೌಲ್ಯದಲ್ಲಿ ಕೆಎಸ್‌ಆರ್‍‌ಟಿಸಿಯದ್ದೇ ಸಿಂಹಪಾಲಿದೆ. ಉಳಿದಂತೆ ಬಿಎಂಟಿಸಿಯಲ್ಲಿ 122,85,47,461 ಕೋಟಿ, ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ 172,98,75,910 ಕೋಟಿ ರು., ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದಲ್ಲಿ 131,38,59,177 ಕೋಟಿ ರು. ಒಳಗೊಂಡಿತ್ತು.

 

ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ‘ಶಕ್ತಿ’ ಯೋಜನೆ ಅನುಷ್ಠಾನಗೊಂಡ ಒಂದು ವಾರದಲ್ಲಿ  ರಾಜ್ಯದ ವಿವಿಧ ಸಾರಿಗೆ ನಿಗಮಗಳ ಮೂಲಕ 3,12,21,241 ಮಹಿಳೆಯರು ಪ್ರಯಾಣಿಸಿದ್ದಾರೆ. 3.12 ಕೋಟಿ ಮಹಿಳೆಯರು ಪ್ರಯಾಣಿಸಿರುವ ಪ್ರಯಾಣ ಮೌಲ್ಯ ಒಟ್ಟಾರೆ  70.28 ಕೋಟಿ ರು. ನಷ್ಟು ಎಂದು ಸಾರಿಗೆ ನಿಗಮಗಳು ಲೆಕ್ಕ ಹಾಕಿದ್ದವು.

 

ಯೋಜನೆ ಆರಂಭಗೊಂಡ ದಿನದಂದೇ (ಜೂನ್‌ 11) 5,71,023 ಮಹಿಳಾ ಪ್ರಯಾಣಿಕರು ಉಚಿತ ಯೋಜನೆಯಡಿಯಲ್ಲಿ ಪ್ರಯಾಣಿಸಿದ್ದರು. ಪ್ರಯಾಣ ಮೌಲ್ಯವು 1,40,22,878 ರು. ನಷ್ಟಾಗಿತ್ತು. ಕ್ರಮೇಣ ಮಹಿಳಾ ಪ್ರಯಾಣಿಕರ ಸಂಖ್ಯೆ ದಿನದಿಂದ ಹೆಚ್ಚಳಗೊಳ್ಳುತ್ತಿದೆ. ಜೂನ್‌ 12ರಂದು 41,34,726  ಪ್ರಯಾಣಿಕರ ಪ್ರಯಾಣದ ಮೌಲ್ಯ 8,83,53,434 ರು., ಜೂನ್‌ 13ರಂದು 511,52,769 ಪ್ರಯಾಣಿಕರ ಪ್ರಯಾಣ ಮೌಲ್ಯ 10,82,02,191 ರು., ಜೂನ್‌ 14ರಂದು 50,17,174 ಪ್ರಯಾಣಿಕರ ಪ್ರಯಾಣ ಮೌಲ್ಯ 11,51,08,324 ರು., ಜೂನ್‌ 15ರಂದು 54,05,629 ಪ್ರಯಾಣಿಕರ ಪ್ರಯಾಣ ಮೌಲ್ಯ 12,37,89,585 ರು., ಜೂನ್‌ 16ರಂದು 55,09,770 ಪ್ರಯಾಣಿಕರ ಪ್ರಯಾಣ ಮೌಲ್ಯ 12,45,19,262 ರು., ಜೂನ್‌ 17ರಂದು 54,30,150 ಪ್ರಯಾಣಿಕರ ಪ್ರಯಾಣ ಮೌಲ್ಯ 12,88,81,618 ರು ಎಂದು ಸಾರಿಗೆ ನಿಗಮಗಳು ಲೆಕ್ಕ ಹಾಕಿತ್ತು.

ಶಕ್ತಿ ಯೋಜನೆ; ವಾರದಲ್ಲಿ 3.12 ಕೋಟಿ ಮಹಿಳೆಯರ ಪ್ರಯಾಣ, ಟಿಕೆಟ್‌ ಮೌಲ್ಯ 70.28 ಕೋಟಿ ರು.

 

ಶಕ್ತಿ ಯೋಜನೆ ಜಾರಿಯಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸಾರಿಗೆ ಬಸ್‌ಗಳಿಗೆ ಆದ್ಯತೆ ನೀಡಲಿದ್ದಾರೆ. ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗುವುದರಿಂದ ಹೆಚ್ಚುವರಿ ಸೇವೆಗಳಲ್ಲಿ ಕಾರ್ಯಾಚರಿಸಬೇಕು. ಅಲ್ಲದೇ ನೆರೆ ರಾಜ್ಯದ ಗಡಿಭಾಗಗಳಲ್ಲಿ ವಾಸವಿದ್ದು ಕರ್ನಾಟಕದಲ್ಲಿ ಹೆಚ್ಚಿನ ಸಮಯ ಪ್ರಯಾಣಿಸುವ ಮಹಿಳೆಯರು ಈ ಯೋಜನೆಯ ಸೌಲಭ್ಯವನ್ನು ವಿಸ್ತರಿಸುವ ಬೇಡಿಕೆ ಇಡುವ ಸಾಧ್ಯತೆಗಳೂ ಇವೆ  ಎಂದೂ ಪ್ರಸ್ತಾವನೆಯಲ್ಲಿ ತಿಳಿಸಿತ್ತು. ಅಲ್ಲದೇ ಸಾರಿಗೆ ವರ್ಗ, ಪ್ರಯಾಣ ದೂರ ಮಿತಿಯನ್ನು ಆರ್ಥಿಕ ಇಲಾಖೆಯು ವಿಧಿಸಿತ್ತಾದರೂ ಅನುಷ್ಠಾನದ ಹಂತದಲ್ಲಿ ಈ ನಿರ್ಬಂಧವನ್ನು ತೆಗೆದು ಹಾಕಿತ್ತು. ಹೀಗಾಗಿ 53.82 ಕೋಟಿ ರು.ನಷ್ಟು ಅಧಿಕ ವೆಚ್ಚವಾಗಿತ್ತು.

 

ಸಾರಿಗೆ ವರ್ಗ, ಪ್ರಯಾಣ ದೂರ ಮಿತಿ; ಇಲಾಖೆ ಎಚ್ಚರಿಕೆ ಗಂಭೀರವಾಗಿ ಪರಿಗಣಿಸಿಲ್ಲ, 53.82 ಕೋಟಿ ಅಧಿಕ ವೆಚ್ಚ

 

ಇದರಿಂದಾಗಿ  ನಗದು ಹರಿವಿನಲ್ಲಿ ಕೋಟ್ಯಂತರ ರುಪಾಯಿ ಕೊರತೆ, ಸಾರಿಗೆ ನಿಗಮಗಳಿಗೆ ಚಾಲ್ತಿಯಲ್ಲಿರುವ ಆದಾಯ ಖೋತಾದಂತಹ ವ್ಯತಿರಿಕ್ತ ಪರಿಣಾಮ ಬೀರುವುದಲ್ಲದೇ ಸಾರಿಗೆ ನಿಗಮಗಳ ಸಿಬ್ಬಂದಿಯ ವೇತನ ಪಾವತಿಗೂ ಅಡಚಣೆಯಾಗಲಿದೆ. ಅದೇ ರೀತಿ ಡೀಸೆಲ್‌ ದರ, ಸಿಬ್ಬಂದಿಗೆ ಪಾವತಿಸುವ ತುಟ್ಟಿಭತ್ಯೆ ಹೆಚ್ಚಳ, ವೇತನ ಪರಿಷ್ಕರಣೆಯಿಂದಾಗಿ ವೆಚ್ಚದಲ್ಲಿ ತೀವ್ರ ಏರಿಕೆಯಾಗುವುದಲ್ಲದೇ ಪ್ರಯಾಣ ದರವನ್ನು ಪರಿಷ್ಕರಣೆ ಮಾಡುವ ಅನಿವಾರ್ಯತೆಗೂ ಸರ್ಕಾರವು ಸಿಲುಕಲಿದೆ  ಎಂದು ಸರ್ಕಾರಕ್ಕೆ ವಿವರಿಸಿತ್ತು.

 

ಇದಕ್ಕಾಗಿ 4,028 ಹೊಸ ವಾಹನಗಳು ಮತ್ತು 13,793 ಸಿಬ್ಬಂದಿಯನ್ನು ಹೊಸದಾಗಿ ನೇಮಕ ಮಾಡಿಕೊಳ್ಳಬೇಕಿದೆ. ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಒದಗಿಸಿದಲ್ಲಿ ಸಾರಿಗೆ ಸೇವಾ ವರ್ಗವಾರು, ನಿಗಮವಾರು ಉಂಟಾಗುವ ಆರ್ಥಿಕ ವೆಚ್ಚವನ್ನು ಪ್ರಸ್ತಕ ಆದಾಯದ ಶೇ.50ರಂತೆ ಅಂದಾಜಿಸಿರುವ (ಏಪ್ರಿಲ್‌ 2023ರಲ್ಲಿದ್ದಂತೆ) ನಿಗಮವು ವಾರ್ಷಿಕವಾಗಿ ಒಟ್ಟಾರೆ 4,220.88 ಕೋಟಿ ರು. ಆರ್ಥಿಕ ವೆಚ್ಚವಾಗಲಿದೆ ಎಂದು ಎಂದು ಸಾರಿಗೆ ಇಲಾಖೆಯು ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ವಿವರಿಸಿತ್ತು.

 

ಪ್ರಸ್ತಾವನೆ ಪ್ರಕಾರ ಕೆಎಸ್‌ಆರ್‍‌ಟಿಸಿಗೆ ವಾರ್ಷಿಕವಾಗಿ 1,608.24 ಕೋಟಿ ರು., ಬಿಎಂಟಿಸಿಗೆ 770.16 ಕೋಟಿ ರು., ವಾಯುವ್ಯ ಕರ್ನಾಟಕಕ್ಕೆ 954.12 ಕೋಟಿ ರು., ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ 888.36 ಕೋಟಿ ರು. ಆರ್ಥಿಕ ವೆಚ್ಚವಾಗಲಿದೆ. ಈ ಕುರಿತು ‘ದಿ ಫೈಲ್‌’ 2023ರ ಮೇ 31ರಂದೇ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.

 

ಉಚಿತ ಪ್ರಯಾಣದ ‘ಶಕ್ತಿ’; ಆದಾಯ ಖೋತಾ, ಸಿಬ್ಬಂದಿ ವೇತನಕ್ಕೆ ಅಡಚಣೆ, ಪ್ರಯಾಣ ದರ ಪರಿಷ್ಕರಣೆ?

 

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ 1,823, ವಾಯುವ್ಯ ಕರ್ನಾಟಕ ಸಾರಿಗೆ ನಿಗಮಕ್ಕೆ 1,445, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ 760 ಸೇರಿದಂತೆ ಒಟ್ಟು 4,028 ಹೊಸ ವಾಹನಗಳನ್ನು ಖರೀದಿಸಬೇಕು. ಅದೇ ರೀತಿ ಕರ್ನಾಟಕ ಸಾರಿಗೆ ನಿಗಮಕ್ಕೆ 5,178, ವಾಯುವ್ಯ ಕರ್ನಾಟಕ ಸಾರಿಗೆ ನಿಗಮಕ್ಕೆ 2,415, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ 2,425, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ 3,775 ಸೇರಿ ಒಟ್ಟಾರೆ 13,793 ಸಿಬ್ಬಂದಿ ನೇಮಕಕ್ಕೆ ಸರ್ಕಾರವು ಸಹಾಯ ಹಸ್ತ ಚಾಚಬೇಕಿದೆ ಎಂಬ ಮಾಹಿತಿಯು ಪ್ರಸ್ತಾವನೆಯಿಂದ ತಿಳಿದು ಬಂದಿದೆ.

 

ಅದೇ ರೀತಿ ವಾಹನಗಳ ಕಾರ್ಯಾಚರಣೆಗೆ ಅಗತ್ಯವಿರುವ ಚಾಲನಾ ಸಿಬ್ಬಂದಿಗಳ ನೇಮಕಾತಿಗೆ ಅನುಮೋದನೆ ಮತ್ತು ಮುಂಬರುವ ದಿನಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ವಿತರಿಸಲಿರುವ ಸ್ಮಾರ್ಟ್‌ ಕಾರ್ಡ್‌ಗಳಿಗೆ ತಗಲುವ ವೆಚ್ಚವನ್ನು ಸರ್ಕಾರವೇ ಒದಗಿಸಬೇಕು ಎಂದು ನಿಗಮಗಳು ಪ್ರಸ್ತಾವನೆಯಲ್ಲಿ ವಿವರಿಸಿತ್ತು.

the fil favicon

SUPPORT THE FILE

Latest News

Related Posts