ಇ-ಕಂಟೆಂಟ್‌ ಉಚಿತವಾಗಿ ಲಭ್ಯವಿದ್ದರೂ ಪೇಯ್ಡ್‌ ಕಂಟೆಂಟ್‌ ಎಂದು ಬಿಂಬಿಸಿದ್ದ ನಿರ್ದೇಶಕ; ತನಿಖಾ ವರದಿ

ಬೆಂಗಳೂರು;  ಡಿಜಿಟಲ್‌ ಗ್ರಂಥಾಲಯ ಯೋಜನೆಯಲ್ಲಿ ಕ್ಷಿಪ್ರಗತಿಯಲ್ಲಿ ಪ್ರಗತಿ ಸಾಧಿಸಲಾಗಿದೆ ಎಂದು ಸಾರ್ವಜನಿಕ ಗ್ರಂಥಾಲಯ ನಿರ್ದೇಶಕ ಸತೀಶ್‌ಕುಮಾರ್‍‌ ಹೊಸಮನಿ ಅವರು ಭರ್ಜರಿ ಪ್ರಚಾರ ತೆಗೆದುಕೊಂಡಿದ್ದರ ಬೆನ್ನಲ್ಲೇ ಇದೀಗ ಉಚಿತವಾಗಿ ಲಭ್ಯವಿದ್ದ ಇ-ಕಂಟೆಂಟ್‌ಗಳನ್ನೂ  ಪೇಯ್ಡ್‌ ಕಂಟೆಂಟ್‌ ಎಂದು ಬಿಂಬಿಸಲಾಗಿತ್ತು ಎಂಬ ಸಂಗತಿಯು ಬಹಿರಂಗವಾಗಿದೆ.

 

ಪುಸ್ತಕಗಳ ಖರೀದಿ, ಡಿಜಿಟಲ್‌ ಲೈಬ್ರರಿ ಅನುಷ್ಠಾನದಲ್ಲಿನ ಅಕ್ರಮಗಳನ್ನು ಹೊರತೆಗೆದಿರುವ ತನಿಖಾ ಸಮಿತಿಯು ಇದೀಗ ಇ-ಕಂಟೆಂಟ್‌ಗಳ ಹಿಂದಿನ ಮುಖವಾಡವನ್ನೂ ತೆರೆದಿಟ್ಟಿದೆ.

 

‘ಹಲವಾರು ಇ-ಕಂಟೆಂಟ್‌ಗಳು ಪೇಯ್ಡ್‌ ಕಂಟೆಂಟ್‌ಗಳಲ್ಲಿ ಸಲ್ಲಿಸಿರುವ ಮಾಹಿತಿಯನ್ನು ಪರಿಶೀಲಿಸಲಾಗಿತ್ತು. ಉಚಿತವಾಗಿ ಸಿಗುವ ಕಂಟೆಂಟ್‌ಗಳನ್ನೂ ಪೇಯ್ಡ್‌ ಕಂಟೆಂಟ್‌ಗಳೆಂದು ಬಿಂಬಿಸಿರುವುದು ಲೆಕ್ಕ ಪರಿಶೋಧನೆಯಿಂದ ಕಂಡು ಬಂದಿದೆ. ನಿರ್ದೇಶಕರ ಈ ಕ್ರಮ ಕರ್ನಾಟಕ ಆರ್ಥಿಕ ಸಂಹಿತೆ ಸ್ಪಷ್ಟ ಉಲ್ಲಂಘನೆಯಾಗಿದೆ,’ ಎಂದು ತನಿಖಾ ವರದಿಯಲ್ಲಿ ವಿವರಿಸಲಾಗಿದೆ.

 

ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಡಿಜಿಟಲ್‌ ಗ್ರಂಥಾಲಯ ಕಾರ್ಯಕ್ರಮ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಒಟ್ಟು ಇ-ಕಂಟೆಂಟ್‌ಗಳಲ್ಲಿ ಓದುಗರ, ಬಳಕೆದಾರರ ಆಯ್ಕೆಗೆ, ಬೇಡಿಕೆಗೆ ಅನುಗುಣವಾಗಿ ವಿಷಯವಾರು, ಶೇಕಡವಾರು ಹಾಗೂ ಮಾಧ್ಯಮವಾರು ಶೇಕಡವಾರು ಇತ್ಯಾದಿ ಮಾದರಿಯಲ್ಲಿ ಆಯ್ಕೆ ಮಾಡಿರಲಿಲ್ಲ. ಹೆಚ್ಚಿನ ತೀರ್ಮಾನವನ್ನು ಟೆಂಡರ್‌ ದಾರರ ಸಂಸ್ಥೆಯ ತೀರ್ಮಾನಕ್ಕೆ ಬಿಡಲಾಗಿತ್ತು. ಹೀಗಾಗಿ ಯೋಜನೆಯ ಮೂಲ ಉದ್ಧೇಶವೇ ವಿಫಲವಾಗಿತ್ತು. ಸರ್ಕಾರದ, ತೆರಿಗೆದಾರರ ಹಣ ವಿನಿಯೋಗ ನಿಷ್ಪಲದಾಯಕವಾಗಿದೆ ಎಂದು ವರದಿ ಹೇಳಿದೆ.

 

ಇ-ಗ್ರಂಥಾಲಯ ಯೋಜನೆಯ 1ನೇ ಹಂತದ ಅನುಷ್ಠಾನದಲ್ಲಿ ಆಡಳಿತಾತ್ಮಕ ಹಾಗೂ ತಾಂತ್ರಿಕವಾಗಿ ಹತ್ತು ಹಲವು ನ್ಯೂನತೆಗಳಿದ್ದರೂ ಸಹ ಇವುಗಳನ್ನು ಸರ್ಕಾರದ ಗಮನಕ್ಕೆ ತಂದಿರಲಿಲ್ಲ. 10,000 ಓದುಗರ, ಬಳಕೆದಾರರ ಗುರಿಯಲ್ಲಿ ಕೇವಲ ಸರಾಸರಿ 1500ಕ್ಕಿಂತ ಕಡಿಮೆ ಸಂಖ್ಯೆಯ ಓದುಗರು ಇದ್ದರೂ ನಿರೀಕ್ಷಿತ ಸಂಖ್ಯೆಯಲ್ಲಿ ಓದುಗರು ಇ-ಗ್ರಂಥಾಲಯವನ್ನು ಬಳಕೆ ಮಾಡದಿದ್ದರೂ ಸಹ ಈ ಯೋಜನೆಯ ಅನುಷ್ಠಾನದ ಬಗ್ಗೆ ಪುನರಾವಲೋಕನ ಮಾಡಿರಲಿಲ್ಲ.

 

ಇ-ಗ್ರಂಥಾಲಯ ಯೋಜನೆಯ 2 ಮತ್ತು ಮೂರನೇ ಹಂತದ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಟೆಂಡರ್‌ನ್ನು ಕರೆದಿರುವುದು ಸರ್ಕಾರದ ಹಣ ದುರ್ವಿನಿಯೋಗಕ್ಕೆ ದಾರಿಯಾಗಿರುವುದು ವರದಿಯಿಂದ ಗೊತ್ತಾಗಿದೆ.

 

 

ರಾಜ್ಯದಲ್ಲಿ ಡಿಜಿಟಲ್‌ ಲೈಬ್ರರಿ ಯಶಸ್ವಿಯಾಗಿದೆ ಎಂದು ಗ್ರಂಥಾಲಯ ಇಲಾಖೆ ನಿರ್ದೇಶಕ ಸತೀಶ್‌ ಕುಮಾರ್‍‌ ಹೊಸಮನಿ ಅವರು ಭರ್ಜರಿ ಪ್ರಚಾರ ಪಡೆದುಕೊಂಡಿದ್ದರ ಬೆನ್ನಲ್ಲೇ ಇದೀಗ ಡಿಜಿಟಲ್‌ ಲೈಬ್ರರಿ ಯಶಸ್ವಿಯಾಗಿದೆ ಎಂಬುದಕ್ಕೆ ಯಾವುದೇ ಪ್ರಮಾಣಪತ್ರವನ್ನೂ ನೀಡಿಲ್ಲ ಮತ್ತ ಯಾವ ದಾಖಲೆಗಳನ್ನೂ ತನಿಖಾ ಸಮಿತಿಗೆ ಕೊಟ್ಟಿರಲಿಲ್ಲ.

 

ಡಿಜಿಟಲ್‌ ಲೈಬ್ರರಿ ಯಶಸ್ಸಿಗೆ ದಾಖಲೆಗಳೇ ಇಲ್ಲ; ಅನುಷ್ಠಾನಕ್ಕೂ ಮುನ್ನವೇ 2.59 ಕೋಟಿ ಪಾವತಿ

 

ಸುಮಾರು 20.00 ಕೋಟಿಗೂ ಅಧಿಕ ಮೊತ್ತದಲ್ಲಿ ಖರೀದಿಸಿದ್ದ ಪುಸ್ತಕಗಳು ಜಿಲ್ಲಾ ಕೇಂದ್ರ ಗ್ರಂಥಾಲಯಗಳಿಗೆ ಸರಬರಾಜು ಆಗಿರಲಿಲ್ಲ. ಕೋಟ್ಯಂತರ ರುಪಾಯಿ ತೆತ್ತು ಖರೀದಿಸಿದ್ದ ಪುಸ್ತಕಗಳು ಉಗ್ರಾಣದಲ್ಲೇ ಕೊಳೆತು ಹೋಗಿದ್ದವು ಎಂಬುದನ್ನು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರ ನೇತೃತ್ವದ ತನಿಖಾ ಸಮಿತಿಯು ಬಹಿರಂಗಗೊಳಿಸಿದೆ.

ಉಗ್ರಾಣದಲ್ಲೇ ಕೊಳೆತ 20 ಕೋಟಿ ಮೊತ್ತದ ಪುಸ್ತಕಗಳು; ನಿರ್ದೇಶಕರ ವೈಫಲ್ಯವನ್ನು ಎತ್ತಿಹಿಡಿದ ತನಿಖಾ ಸಮಿತಿ

ಈ ಎಲ್ಲಾ ಪ್ರಕರಣಗಳನ್ನು ಪತ್ತೆ ಹಚ್ಚಿ ಪರಿಶೀಲಿಸಿರುವ ಸಮಿತಿಯು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಸತೀಶ್‌ ಹೊಸಮನಿ ಅವರ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಿದೆ. ತನಿಖಾ ಸಮಿತಿಯು ನೀಡಿದ್ದ ವರದಿಯನ್ನಾಧರಿಸಿ ಸರ್ಕಾರವು 2024ರ ಮಾರ್ಚ್‌ 11ರಂದು ಸತೀಶ್‌ ಹೊಸಮನಿ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಅದೇಶ ಹೊರಡಿಸಿತ್ತು.

ಪುಸ್ತಕ ಖರೀದಿ ಸೇರಿ ಹತ್ತಾರು ಅಕ್ರಮಗಳನ್ನು ಹೊರಗೆಳೆದ ತನಿಖಾ ಸಮಿತಿ; ನಿರ್ದೇಶಕ ಹೊಸಮನಿ ಅಮಾನತು

 

ಪುಸ್ತಕ ಖರೀದಿ, ಡಿಜಿಟಲ್‌ ಗ್ರಂಥಾಲಯ ಯೋಜನೆ ಅನುಷ್ಠಾನ, ಇ-ಕಂಟೆಂಟ್‌ ಅಭಿವೃದ್ಧಿ, ಪುಸ್ತಕಗಳ ಸಾಗಾಣಿಕೆ, ಟೆಂಡರ್‌ ಅಕ್ರಮ, ನಿಯಮಗಳ ಉಲ್ಲಂಘನೆ, ಯೋಜನೆ ಅನುಷ್ಠಾನಗೂ ಮುನ್ನವೇ ಸರಬರಾಜುದಾರರು ಮತ್ತು ಸೇವಾದಾರರಿಗೂ ಮುಂಗಡವಾಗಿ ಹಣ ಪಾವತಿ, ಹಣ ದುರುಪಯೋಗ, ಅಧಿಕಾರ ದುರುಪಯೋಗವನ್ನು ಪತ್ತೆ ಹಚ್ಚಿತ್ತು.

 

ಸತೀಶ್‌ ಕುಮಾರ್‍‌ ಹೊಸಮನಿ ಅವರ ವಿರುದ್ಧ ತನಿಖೆ ನಡೆಸಬೇಕು ಎಂದು ಮೊದಲು ಪತ್ರ ಬರೆದಿದ್ದ ವಿಧಾನ ಪರಿಷತ್ ಸದಸ್ಯ ಎಚ್‌ ವಿಶ್ವನಾಥ್‌ ಅವರು ಆ ನಂತರ ನಡೆದ ಬೆಳವಣಿಗೆಯಲ್ಲಿ ವಿಚಾರಣೆ ಕೈಬಿಡಬೇಕು ಎಂದು ಬರೆದಿದ್ದ ಪತ್ರ ಆಧರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ದೇಶನ ನೀಡಿದ್ದರು. ಆದರೂ ತನಿಖಾ ಸಮಿತಿಯು ವಿಚಾರಣೆ ನಡೆಸಿತ್ತು.

 

ಹೊಸಮನಿ ವಿರುದ್ಧ ವಿಚಾರಣೆ ಕೈಬಿಡಲು ಸಿಎಂ ನಿರ್ದೇಶನ; ಮುನ್ನಲೆಗೆ ಬಂದ ಆಪ್ತ ಕಾರ್ಯದರ್ಶಿ ಟಿಪ್ಪಣಿ

ಹೊಸಮನಿ ಅವರ ವಿರುದ್ಧ ತನಿಖೆ ನಡೆಸಬೇಕು ಎಂದು ಈ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎಚ್‌ ವಿಶ್ವನಾಥ್‌ ಪತ್ರ ಬರೆದಿದ್ದರು. ಆದರೀಗ ತನಿಖೆಯನ್ನೇ ಕೈಬಿಡಬೇಕು ಮತ್ತು ಅದೇ ಹುದ್ದೆಯಲ್ಲಿಯೇ ಮುಂದುವರೆಸಲು ನಿರ್ದೇಶನ ನೀಡಬೇಕು ಎಂದು ಮುಖ್ಯಮಂತ್ರಿಗೆ 2024ರ ಜನವರಿ 10ರಂದು ‌ ಪತ್ರ ಬರೆದಿದ್ದರು. ವಿಶ್ವನಾಥ್‌ ಅವರ ಈ ನಡೆಯು ಹಲವು ಅನುಮಾನಗಳಿಗೆ ಆಸ್ಪದ ಮಾಡಿಕೊಟ್ಟಿತ್ತು.

ಗ್ರಂಥಾಲಯ ಇಲಾಖೆ ಅಕ್ರಮ; ತನಿಖೆಗೆ ಬರೆದ ಪತ್ರವನ್ನೇ ಹಿಂಪಡೆದುಕೊಂಡ ಪರಿಷತ್‌ ಸದಸ್ಯ ವಿಶ್ವನಾಥ್‌

 

ಗ್ರಂಥಾಲಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ನಿರ್ದೇಶಕ  ಸತೀಶ್‌ ಕುಮಾರ್‍‌ ಹೊಸಮನಿ ಅವರು  ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ದೂರು ಸಲ್ಲಿಕೆಯಾಗಿತ್ತು.

 

‘ನಾನು ಹೇಳಿದ ಹಾಗೆ ಕೇಳು, ರಾತ್ರಿ ಊಟಕ್ಕೆ ರೆಡಿ ಮಾಡು’; ನಿರ್ದೇಶಕರ ವಿರುದ್ಧ ಲೈಂಗಿಕ ಕಿರಕುಳ ಆರೋಪ

 

ಇದರ ಬೆನ್ನಲ್ಲೇ ಗ್ರಂಥಾಲಯ ಇಲಾಖೆಯಲ್ಲಿ ಕಂಪ್ಯೂಟರ್‍‌, ಯುಪಿಎಸ್‌, ಝೆರಾಕ್ಸ್‌ ಉಪಕರಣ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಕುರಿತು ಇಲಾಖೆ ಅಧಿಕಾರಿಗಳಿಂದ ತನಿಖೆ ನಡೆದಿತ್ತು.

 

ಗ್ರಂಥಾಲಯ ಇಲಾಖೆಯಲ್ಲಿ ಕಂಪ್ಯೂಟರ್‌, ಯುಪಿಎಸ್‌, ಝೆರಾಕ್ಸ್‌ ಉಪಕರಣ ಖರೀದಿ ಹಗರಣ; ತನಿಖಾ ವರದಿ

 

ವಿಶೇಷವೆಂದರೆ ಈ ಹಗರಣದಲ್ಲಿ ಕರ್ತವ್ಯಲೋಪ ಎಸಗಿದ್ದಾರೆ ಎನ್ನಲಾಗಿದ್ದ ಬಹುತೇಕ ಅಧಿಕಾರಿಗಳು ನಿವೃತ್ತಿಯಾಗಿದ್ದರು.

 

ಕಂಪ್ಯೂಟರ್‍‌ ಖರೀದಿ ಹಗರಣ; ಕರ್ತವ್ಯಲೋಪವೆಸಗಿದ ಅಧಿಕಾರಿಗಳ ಪಟ್ಟಿ ಬಹಿರಂಗ, ಬಹುತೇಕರು ನಿವೃತ್ತಿ

 

ಕಂಪ್ಯೂಟರ್‍‌ ಮತ್ತಿತರೆ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ಕುರಿತು ಕೆಲ ಅಧಿಕಾರಿಗಳಿಗೆ ಆರೋಪ ಪಟ್ಟಿಯೂ ಜಾರಿಯಾಗಿತ್ತು.

 

ಕಂಪ್ಯೂಟರ್‍‌ ಮತ್ತಿತರೆ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ; ಸರ್ಕಾರದಿಂದ ಆರೋಪ ಪಟ್ಟಿ ಜಾರಿ

ಹಿಂದಿನ ಬಿಜೆಪಿ ಸರ್ಕಾರದಲ್ಲಿಯೂ ಡಿಸಿಎಂಗಳ ಹೆಸರಿನಲ್ಲಿ 5 ಕೋಟಿ ಸಂಗ್ರಹಿಸಲು ಕೆಳ ಹಂತದ ಅಧಿಕಾರಿಗಳಿಗೆ ತಾಕೀತು ಮಾಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

 

ಡಿಸಿಎಂಗಳಿಗೆ 5 ಕೋಟಿ ಸಂಗ್ರಹಿಸಲು ತಾಕೀತು; ಗ್ರಂಥಾಲಯ ನಿರ್ದೇಶಕರೇ ವಸೂಲಿಗಿಳಿದರೇ?

 

‘ಹಲವು ಗುರುತರವಾದ ಆರೋಪಗಳಿಗೆ ಗುರಿಯಾಗಿರುವ ಹೊಸಮನಿ ಅವರ ವಿರುದ್ಧ ತನಿಖೆ ನಡೆಯುತ್ತಿದೆಯಾದರೂ ನಿರ್ದೇಶಕರ ಹುದ್ದೆಯಲ್ಲಿಯೇ ಸರ್ಕಾರವು ಮುಂದುವರೆಸಿರುವುದು ಸರಿಯಲ್ಲ. ಆರೋಪಿತ ವ್ಯಕ್ತಿಯು ಅದೇ ಹುದ್ದೆಯಲ್ಲಿ ಮುಂದುವರೆದರೆ ದಾಖಲೆ, ಸಾಕ್ಷ್ಯ ನಾಶವಾಗಲಿದೆ. ಕನಿಷ್ಠ ವಿಚಾರಣೆ ಪೂರ್ಣಗೊಳ್ಳುವವರೆಗಾದರೂ ನಿರ್ದೇಶಕರನ್ನು ರಜೆ ಮೇಲೆ ತೆರಳಲು ನಿರ್ದೇಶಿಸಬೇಕಿತ್ತು, ‘ಎನ್ನುತ್ತಾರೆ ಗ್ರಂಥಾಲಯ ಇಲಾಖೆಯ ಅಧಿಕಾರಿಯೊಬ್ಬರು.

the fil favicon

SUPPORT THE FILE

Latest News

Related Posts